ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವುಮುಕ್ತ ಕರ್ನಾಟಕ: ಎಲ್ಲಿದೆ ಹೆಜ್ಜೆ?

ಬಹಳಷ್ಟು ಕೃಷಿ ಕೂಲಿಕಾರರಿಗೆ ಇನ್ನೂ ಸಿಕ್ಕಿಲ್ಲ ಉದ್ಯೋಗ ಖಾತರಿ...
Last Updated 4 ಮೇ 2017, 20:01 IST
ಅಕ್ಷರ ಗಾತ್ರ
ಯಾದಗಿರಿ ಜಿಲ್ಲೆಯ ಕುಷ್ಟಗಿಯ ಕೆರೆಯೊಂದರಲ್ಲಿ ನಟ ಯಶ್ ಅವರು ಆರಂಭಿಸಿದ ಕೆರೆ ಹೂಳೆತ್ತುವ ಜಲಾಂದೋಲನ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಶಿರಸಿಯಲ್ಲಿ ನಾಲ್ಕು ನಿಮಿಷದಲ್ಲಿ 4 ಲಕ್ಷ ಕೂಡಿಸಿ ಆನೆಹೊಂಡ ಕೆರೆಯ ಹೂಳೆತ್ತಿ ಮುಗಿಸಿ ಅಲ್ಲಿನ ನಾಗರಿಕರು ಮತ್ತು ಅಧಿಕಾರಿಗಳು ಜೊತೆಗೂಡಿ ಒಂದಾದ ನಂತರ ಒಂದು ಕೆರೆಯನ್ನು ಜಲಪಾತ್ರೆಯಾಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕೆರೆಯೊಳಗೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೂಡ ಮಾಡಿ ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. 
 
ಇತ್ತ ಕಿತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಕಣ್ಮನ ಸೆಳೆಯುವಂತಿದ್ದ ಕೆರೆ ಪೂರ್ತಿ ಬತ್ತಿ ಹೋಗಿದ್ದನ್ನು ನೋಡಲಾರದೆ ಅಲ್ಲಿನ ಯುವಪಡೆ ಹೂಳೆತ್ತಲು ಮುಂದಾಗಿ ಬೆಳಗಾವಿಯ ಜಲಯೋಗಿ ಶಿವಾಜಿ ಕಾಗಣೇಕರ್‌ರ ಕೈಯಿಂದ ಉದ್ಘಾಟಿಸಿ ಇಂದು ಜೆಸಿಬಿ, ಹಿತಾಚಿಗಳು ಸಮರೋಪಾದಿಯಲ್ಲಿ ಹೂಳನ್ನು ಎತ್ತಿ ಹತ್ತಾರು ಟ್ರ್ಯಾಕ್ಟರ್‌ಗಳನ್ನು ತುಂಬಿ ರೈತರ ಹೊಲಕ್ಕೆ ಸಾಗಿಸುತ್ತಿವೆ. ಹಾಸನದಲ್ಲಿ, ಸಾಗರದಲ್ಲಿ, ಸೊರಬದಲ್ಲಿ, ಎಲ್ಲಿ ಕೇಳಿದರಲ್ಲಿ ಜಲಾಂದೋಲನ ಹಬ್ಬುತ್ತಿರುವುದು ನೀರು ಹನಿಸಿದಷ್ಟು ತಂಪು ತಂಪಾದ ಆಶಾದಾಯಕ ಬೆಳವಣಿಗೆ. 
 
ಈ ಸಂತೋಷದಾಯಕ ಬೆಳವಣಿಗೆಯ ಜೊತೆಗೇ ಆತಂಕ ಹುಟ್ಟಿಸುತ್ತಿರುವ ಅಂಶವೂ ಒಂದಿದೆ. ಅದೆಂದರೆ ಎಲ್ಲಾ ಕಡೆ ಹೂಳೆತ್ತಲು ಜೆಸಿಬಿ ಯಂತ್ರಗಳ ಬಳಕೆ ಆಗುತ್ತಿರುವುದು. ಬಹುಶಃ ಜೆಸಿಬಿಗಳೀಗ ಬೇಡಿಕೆಯ ಉತ್ತುಂಗದಲ್ಲಿರಬಹುದು. ಇರಲಿ, ಗಡ್ಡಕ್ಕೆ ಬೆಂಕಿ ಹತ್ತಿಕೊಂಡಿರುವಾಗ ಕೆರೆ ಅಗೆಯುತ್ತಿರುವ ನಾವು ಮಳೆ ಬರುವುದರೊಳಗೆ ಮುಗಿಸುವ ಧಾವಂತದಲ್ಲಿ ಜೆಸಿಬಿ ಯಂತ್ರಗಳಿಗೆ ಮೊರೆ ಹೋಗದೇ ಬೇರೆ ದಾರಿಯಿಲ್ಲ ಎಂದು ಅದಕ್ಕೆ ಜಲಯೋಧರ ಸ್ಪಷ್ಟನೆ ಇದ್ದೇ ಇದೆ.

 
ಆದರೆ ಅದೇ ವೇಳೆಗೆ ನಮ್ಮ ಹಳ್ಳಿಗಳ ಜನರಿಂದ ಕೆಲಸವನ್ನು ಕಿತ್ತುಕೊಂಡ ರಾಕ್ಷಸ ಯಂತ್ರಗಳು ಈ ಜೆಸಿಬಿ ಎಂಬುದನ್ನು ಮರೆಯುವುದು ಬೇಡ. ಸ್ಥಳೀಯ ಕೂಲಿಕಾರರನ್ನು ಶಹರಕ್ಕಟ್ಟಿ ಹಳ್ಳಿಗಳಲ್ಲಿ ಸ್ಥಾಪನೆಗೊಂಡ ಯಂತ್ರಗಳಿವು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಜೆಸಿಬಿ ಯಂತ್ರಗಳು ಜನರ ಕೆಲಸವನ್ನು ಕಸಿದುಕೊಳ್ಳದೆ ಗ್ರಾಮೀಣ ಜನರಿಗೆ ಸರಿಯಾಗಿ, ಪೂರ್ಣ ಪ್ರಮಾಣದಲ್ಲಿ ಉದ್ಯೋಗ ನೀಡಿದ್ದರೆ ಇವೊತ್ತು ಗ್ರಾಮೀಣ ಜಲಪಾತ್ರೆಗಳು ಬರಿದಾಗಿ ಬಾಯ್ದೆರೆದುಕೊಂಡೂ ಇರುತ್ತಿರಲಿಲ್ಲ, ನಮಗೆ ಬರದ ಇಂಥ ಭೀಕರತೆಯೂ ತಟ್ಟುತ್ತಿರಲಿಲ್ಲ, ಇಂಥ ಯಂತ್ರಗಳನ್ನು ಇಂದು ನಮ್ಮ ಕೆರೆಯೊಳಗೆ ಇಳಿಸುವ ಪ್ರಸಂಗವೂ ಬರುತ್ತಿರಲಿಲ್ಲ. 
 
ಉದ್ಯೋಗ ಖಾತರಿಯು ಬಂದು ಆಗಲೇ ಹತ್ತು ವರ್ಷಗಳ ಮೇಲಾಯಿತು. ಆದಾಗ್ಯೂ ಇನ್ನೂ ನೂರಕ್ಕೆ 80 ಭಾಗ ಗ್ರಾಮೀಣ ಕೃಷಿ ಕೂಲಿಕಾರರನ್ನು ತಲುಪಿಯೇ ಇಲ್ಲವೆಂದು ಬೆಂಗಳೂರಿನ ‘ಆ್ಯಕ್ಷನ್ ಏಡ್’ ಸಂಸ್ಥೆ ಮಾಡಿರುವ ಅಧ್ಯಯನವೊಂದು ಎತ್ತಿ ತೋರಿಸಿದೆ. ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆ, ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳ ಹಳ್ಳಿಗಳಲ್ಲಿ ನಡೆದಿರುವ ಅಧ್ಯಯನವು ಕೇವಲ 130 ರೂಪಾಯಿ ದಿನಗೂಲಿಯನ್ನು ಗಳಿಸಲು ಜನರು 50-60 ಕಿ.ಮೀ. ಹೋಗುತ್ತಿರುವುದನ್ನು ದಾಖಲಿಸಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಎಂಬ ತಾಲ್ಲೂಕಿನ ಒಂದು ಹಳ್ಳಿಯಲ್ಲಿ ದಲಿತ ಸಮುದಾಯದ ನೂರಕ್ಕೂ ಹೆಚ್ಚು ಕುಟುಂಬಗಳು ಖಾಸಗಿ ಜಮೀನಿನಲ್ಲಿ ನಾಲ್ಕು ಜನರ ಕೆಲಸವನ್ನು 16 ಜನರು ಮಾಡಿ, ಬರುವ ₹ 20-30 ಕೂಲಿಯನ್ನು ಹಂಚಿಕೊಂಡು ತಿನ್ನುತ್ತಿವೆ. ಅವರಾರಿಗೂ ಉದ್ಯೋಗ ಖಾತರಿ ಎಂಬುದೊಂದಿದೆ, ಅದರಲ್ಲಿ ಕೆಲಸ ಪಡೆದು ದಿನವೊಂದಕ್ಕೆ ₹ 249 ಪಡೆದು ತಾವು ಹೊಟ್ಟೆ ತುಂಬ ಉಣ್ಣಬಹುದು ಎಂಬ ಕಲ್ಪನೆಯೂ ಇಲ್ಲ. 
 
ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರಕಿಸಿಕೊಡುವುದರ ಜೊತೆಗೆ ಬರವನ್ನು ಹೊಡೆದಟ್ಟುವುದು ಕೂಡ ಉದ್ಯೋಗ ಖಾತರಿಯ ಗುರಿಗಳಲ್ಲೊಂದು. ದುರದೃಷ್ಟವೆಂದರೆ ಇಂದಿನವರೆಗೂ ಬಹುತೇಕ ಹಳ್ಳಿಗಳ ಜನರು ಇಂಥದ್ದೊಂದು ಜೀವನಧಾತು ಇದೆಯೆಂಬುದೇ ಗೊತ್ತಿಲ್ಲದೆ ಕೆಲಸ ಅರಸಿ ಪಕ್ಕದ ರಾಜ್ಯಗಳ ಕೊಲ್ಹಾಪುರ, ರತ್ನಾಗಿರಿ, ಸೊಲ್ಲಾಪುರ, ದಕ್ಷಿಣದಲ್ಲಿ  ಕೊಯಮತ್ತೂರು ಜಿಲ್ಲೆಗೆ ವಲಸೆ ಹೋಗುತ್ತಿದ್ದಾರೆ.

ಹೊಟ್ಟೆ ತುಂಬಿಸಿಕೊಳ್ಳಲೆಂದೇ ಮಾಡಿದ ಸಾಲ ತೀರಿಸಲಿಕ್ಕಾಗಿ ಕುಟುಂಬದ ಇಬ್ಬರು–ಮೂವರು ಸದಸ್ಯರು ಆರು ತಿಂಗಳಲ್ಲಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಸಕ್ಕರೆ ಕಾರ್ಖಾನೆ, ಇಟ್ಟಿಗೆ ಗೂಡು, ಕಾಫಿ ತೋಟ, ಸಿದ್ಧ ಉಡುಪಿನ ಕಾರ್ಖಾನೆ ಮತ್ತು ಕಟ್ಟಡ ಕಾರ್ಮಿಕರಾಗಿ ದಿನಕ್ಕೆ 12 ತಾಸು ದುಡಿಯುತ್ತಿದ್ದಾರೆ. ಈ ಕಾರ್ಮಿಕರ ಜೀವನ ಜೀವನವಲ್ಲವೇ? ರಾಯಚೂರು ಜಿಲ್ಲೆಯಲ್ಲಿ ನೀರಾವರಿಯಾಗಿ ಭತ್ತ ಬೆಳೆಯುವುದು ಆರಂಭವಾಗುತ್ತಲೇ ತಮ್ಮ ಗದ್ದೆಗಳನ್ನು ಆಂಧ್ರದ ರೆಡ್ಡಿಗಳಿಗೆ ಕಳೆದುಕೊಂಡು ಭೂಹೀನರಾಗಿದ್ದರೂ  ಸ್ಥಳೀಯ ಜನರಿಗೆ ನಾಟಿ ಹಚ್ಚುವ ವೇಳೆ, ಭತ್ತದ ಕೊಯ್ಲಿನ ವೇಳೆ ಭರ್ಜರಿ ಕೆಲಸ, ಸಾಕಷ್ಟು ಕೂಲಿ ಇತ್ತೀಚಿನವರೆಗೂ ಇತ್ತು.

ಆದರೀಗ ಭತ್ತ ಕೊಯ್ಯುವ ಬೃಹತ್ ಯಂತ್ರಗಳು ಬಂದು ಗದ್ದೆಗಳಲ್ಲಿ ಪವಡಿಸಿವೆ. ಜನರಿಗಿಂತಲೂ ಯಂತ್ರಗಳ ಜೊತೆ ಒಡನಾಡುವುದು ಶ್ರೀಮಂತ ರೈತರಿಗೆ ಸುಲಭವೆನಿಸಿದೆ. ಇಂದು ಮಲೆನಾಡಿನಿಂದ ಬಯಲು ಸೀಮೆಯವರೆಗೆ, ಸಸಿ ಹಚ್ಚಲು ಗುಂಡಿ ತೋಡುವಲ್ಲಿಂದ, ನೀರಾವರಿಯ ಕೃಷಿಯವರೆಗೆ ಗ್ರಾಮೀಣ ಭಾಗದಲ್ಲಿ ರಾಕ್ಷಸ ಯಂತ್ರಗಳದ್ದೇ ರಾಜ್ಯ. 
 
ಕಾರ್ಖಾನೆಗಳಲ್ಲಿ ದುಡಿಯುವ ಜನರು ಒಂದೇ ಕಡೆ ಸಿಗುವುದರಿಂದ ಅವರ ಸಂಘಟನೆ ಆಗಿದೆ. ಎಡ ವಿಚಾರಧಾರೆಯ ಅನೇಕ ಪಕ್ಷಗಳಿಗೆ ಕಾರ್ಮಿಕ ಸಂಘ
ಟನೆಯೇ ದೊಡ್ಡ ಬಲ. ಹಳ್ಳಿಗಳಲ್ಲಿರುವ ಕೂಲಿಕಾರರ ಸಂಖ್ಯೆ ಬಲು ದೊಡ್ಡದಾದರೂ ಹರಿದು ಹಂಚಿ ಹೋಗಿರುವುದರಿಂದ ಅವರ ಸಂಘಟನೆಯ ಪ್ರಯತ್ನವನ್ನು ತೀರಾ ಇತ್ತೀಚಿನವರೆಗೂ ಯಾರೂ ಮಾಡಿರಲಿಲ್ಲ. ಹೆಚ್ಚು ಸವಾಲಿನ ಕೆಲಸವದು. ಆದರೆ ಸಂಘಟನೆ ಆಗದೆ ಕೂಲಿಕಾರರಿಗೆ ಉಳಿಗಾಲವಿಲ್ಲ. ಪಟ್ಟಭದ್ರರ ಎದುರು ತಮ್ಮ ಉದ್ಯೋಗದ ಹಕ್ಕನ್ನು ಸ್ಥಾಪಿಸಲು, ಕೂಲಿಯ ಮೊತ್ತದ ಬಗ್ಗೆ ಮಾತುಕತೆಗಿಳಿಯಲು ಸಂಘಟನೆಯೊಂದೇ ದಾರಿ.
 
ಇನ್ನೂವರೆಗೆ ನೂರಕ್ಕೆ 80ಕ್ಕಿಂತ ಜಾಸ್ತಿ ಅನಕ್ಷರಸ್ಥರೇ ತುಂಬಿರುವ ಈ ಕಾರ್ಮಿಕರು ಬಿಡಿಬಿಡಿಯಾಗಿದ್ದಷ್ಟೂ ಅವರ ಮೇಲೆ ಸವಾರಿ ಮಾಡುವುದು ಸುಲಭ. ದೂರ ದೂರ ಇರುವುದರಿಂದ ಸಂಘಟನೆಯನ್ನು ಒಡೆಯುವುದೂ ಸುಲಭ. ಸಂಘಟನೆಯ ಪ್ರಯತ್ನಕ್ಕೂ ಮೊದಲೇ ಒಡಕಿನ ಬೇರುಗಳು ಎಲ್ಲೆಡೆ ವ್ಯಾಪಿಸಿಬಿಟ್ಟಿವೆ. ಜಾತಿ, ವರ್ಗ, ಮಹಿಳೆ, ಪುರುಷ, ಕಲಿತವ, ಕಲಿಯದವ, ಭೂಮಾಲೀಕ, ಭೂಹೀನ ಎಂದು ಬಿರುಕುಗಳು ನೂರಾರು.

ಕನಿಷ್ಠ ವಿದ್ಯೆ ಇರುವವರು ಅಂಗನವಾಡಿ ಕಾರ್ಯಕರ್ತೆ, ಆಶಾ, ಬಿಸಿಯೂಟದವರು, ಪಂಚಾಯಿತಿಯಲ್ಲಿ ಕಂಪ್ಯೂಟರ್ ವ್ಯಕ್ತಿ ಎಂದು ಸಂಘಟಿತ ಕಾರ್ಮಿಕ ವಲಯವನ್ನು ಸೇರಿಬಿಟ್ಟಿದ್ದಾರೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮೇಲ್ಜಾತಿಯವರೇ ಈ ಪಡೆಯಲ್ಲಿ ತುಂಬಿರುವುದನ್ನೂ ನಾವು ಗಮನಿಸಬಹುದು. ತಂತಮ್ಮ ಸಂಘಟನೆಯೊಳಗೆ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡುವ, ನ್ಯಾಯ ಕೇಳುವ ಇವರೇ, ಕೆಲಸ ಕೇಳಿ– ಕೂಲಿ ಯಾಚಿಸಿ ಅಸಂಘಟಿತ ಕಾರ್ಮಿಕರು ಬಂದರೆ, ಆಗ ಪಟ್ಟಭದ್ರರ ಪರವಾಗುತ್ತಾರೆ.
 
ಕೆಲಸ ಕೊಡಲು, ಕೂಲಿ ಕೊಡಲು ನೂರೊಂದು ಅಡ್ಡಿ ಆತಂಕಗಳನ್ನು ಸೃಷ್ಟಿ ಮಾಡುತ್ತಾರೆ. ಅರ್ಜಿ ಹಿಡಿದು ಬಂದವರನ್ನು ಮನೆಗೆ ಕಳಿಸುವಾಗ ತನ್ನಂತೆಯೇ ಇವಳೂ ದುಡಿದೇ ತಿನ್ನಬೇಕಾದ ಶ್ರಮಿಕ ವರ್ಗದವಳು ಎನ್ನುವುದನ್ನು ಮರೆಯುತ್ತಾರೆ.
 
ಸಂಘಟನೆ ಇದ್ದಾಗಲೂ ಕೆಲಸ ಮತ್ತು ಕೂಲಿ ಸಿಗುವುದು ಸುಲಭವಲ್ಲವಾದರೂ ಸಂಘಟನೆ ಇಲ್ಲದೆ ಉದ್ಯೋಗ ಖಾತರಿಯ ಖಾತರಿಯೇ ಇಲ್ಲ. ಕೆಲಸ ಕೇಳು
ವುದು, ಕೂಲಿ ಪಡೆಯುವಲ್ಲಿಂದಲೇ ಸವಾಲು ಇರುವ ಕಾರಣಕ್ಕೋ ಏನೋ ಮಹಾರಾಷ್ಟದಲ್ಲಾಗಲೀ, ಇತ್ತ ತಮಿಳು ನಾಡಿನಲ್ಲಾಗಲೀ ಸಂಘಟನೆಗಳು ಉದ್ಯೋಗ ಖಾತರಿಯ ಸುತ್ತ ದುಡಿಯುವ ಗ್ರಾಮೀಣ ವರ್ಗದವರನ್ನು ಒಂದು ಮಾಡುತ್ತಿಲ್ಲ. ‘ಅದೇನು ಬಿಡಿ, ಪಂಚಾಯಿತಿಯವರಿಗೆ ತಿನ್ನಲಿಕ್ಕಾಗಿಯೇ ಇರುವ ಮೊತ್ತ’ ಎಂದು ಅದಕ್ಕಾಗಿ ಬಂದಿರುವ ಹಣವನ್ನೂ ಕಡೆಗಣಿಸಿದ್ದಾರೆ.  
 
ಗ್ರಾಮೀಣರು ಕೆಲಸ ಹುಡುಕಿ ಶಹರದತ್ತ, ಹೆಚ್ಚೆಚ್ಚು ಯಂತ್ರಗಳು ಹಳ್ಳಿಯತ್ತ. ಭಾವನೆ ಇಲ್ಲದ ಯಂತ್ರಗಳಿಂದ ಗ್ರಾಮೀಣ ಸಂಪನ್ಮೂಲವನ್ನು ರಕ್ಷಿಸುವವರು ಯಾರೂ ಇಲ್ಲವಾಗಿದ್ದಾರೆ. ದುಡಿಯಲು ಶಕ್ತಿ ಇಲ್ಲದ ವೃದ್ಧರು ಮತ್ತು ಮಕ್ಕಳು ಮಾತ್ರ ಹಳ್ಳಿಗಳಲ್ಲಿ ಉಳಿದಿದ್ದಾರೆ. 
 
ಬರ ಇರುವ ರಾಜ್ಯಗಳಲ್ಲಿ ಸರ್ವರಿಗೂ ಪಡಿತರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಮಾಡಿದ ಆದೇಶ ಮೂಲೆಗುಂಪಾಗಿದೆ. ಸರ್ಕಾರ ಕೊಡುವ ಪಡಿತರ ಎಂಟು ದಿನಗಳಿಗೆ ಕೂಡ ಸಾಲುತ್ತಿಲ್ಲ. ಉಳಿದ ದಿನಗಳಲ್ಲಿ ಶೇ 3ರಿಂದ 5ರ ವರೆಗೆ ಬಡ್ಡಿಗೆ ಹಣ ಸಾಲ ಪಡೆದು ಆಹಾರ ಖರೀದಿಸಬೇಕು.  ಈ ಏಪ್ರಿಲ್‌ನಿಂದ ಒಬ್ಬರಿಗೆ ಏಳು  ಕೆ.ಜಿ. ಧಾನ್ಯ ಕೊಡಬೇಕಾಗಿತ್ತು. ಕೇವಲ ಅಕ್ಕಿಯನ್ನು ಮಾತ್ರ ಕೊಟ್ಟು ಕೈತೊಳೆದುಕೊಂಡಿತು ಸರ್ಕಾರ.
 
ಕಾಳಿಲ್ಲ, ಬೇಳೆಯಿಲ್ಲ, ಸಕ್ಕರೆ ಇಲ್ಲ, ಎಣ್ಣೆಯಿಲ್ಲ. ಅತ್ತ ಮಾತು ಕೊಟ್ಟಂತೆ ಸರ್ಕಾರ ತೊಗರಿ ಖರೀದಿಸುತ್ತಿಲ್ಲವೆಂದು ತೊಗರಿ ಬೆಳೆಗಾರರು ಬೇಳೆಯನ್ನು ಬೀದಿಗೆ ಸುರಿದು ಪ್ರತಿಭಟಿಸುತ್ತಿದ್ದಾರೆ. ಕೃಷಿ ಬೆಲೆ ಆಯೋಗ, ಅದಕ್ಕೆ  ಸಂಬಳ ಪಡೆಯುವ ಅಧ್ಯಕ್ಷರು, ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ದೊಡ್ಡ ಆವರಣದಲ್ಲಿ ಬೃಹತ್ ಕಟ್ಟಡ, ಸಿಬ್ಬಂದಿ, ಕಂಪ್ಯೂಟರುಗಳು ಎಲ್ಲವೂ ಇದ್ದೂ ರೈತರಿಗೊಂದು ಸರಿಯಾದ ಬೆಲೆ ನಿಗದಿ ಮಾಡಿ ಖರೀದಿ ಮಾಡಲು ಸಾಧ್ಯವಿಲ್ಲದೆ ಬೆಳೆದವನೂ, ಹಸಿದವನೂ ಒಟ್ಟಿಗೆ ಬೀದಿಗೆ ಬೀಳುವಂತೆ ಮಾಡುವ ಅಂಥ ಆಯೋಗ ಯಾಕಿರಬೇಕು? ಜವಾಬ್ದಾರಿ ಹೊತ್ತು ಅಧ್ಯಕ್ಷರು ರಾಜೀನಾಮೆ ಕೊಡಬೇಕಲ್ಲವೇ?
 
ಆಹಾರ ಭದ್ರತಾ ಕಾನೂನಿನ ಅಂಶಗಳನ್ನು ಜಾರಿಯಲ್ಲಿ ತರುತ್ತಿಲ್ಲವೆಂದು ಸುಪ್ರೀಂ ಕೋರ್ಟ್‌, ಕರ್ನಾಟಕದ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದು ರಾಜ್ಯಕ್ಕಂತೂ ಶೋಭೆ ತರುವಂಥದ್ದಲ್ಲ. ಕುಂದುಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಬೇಕು, ಆಹಾರ ಆಯೋಗವನ್ನು ರಚಿಸಬೇಕು ಎಂಬುದು ಕಾನೂನಿನಲ್ಲಿರುವ ಅಂಶ. ಪಡಿತರ ಹಂಚಿಕೆ, ಕಾರ್ಡುಗಳ ಹಂಚಿಕೆಗಳ ಬಗ್ಗೆ ಜನರಿಗಾಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು, ಸರ್ಕಾರದ ಗಮನಕ್ಕೆ ತರಲು ವ್ಯವಸ್ಥೆಯೇ ಇಲ್ಲದ ಶೂನ್ಯ ಸ್ಥಿತಿ ಇದು.
 
ರಜಾ ದಿನಗಳಲ್ಲಿಯೂ ಬಿಸಿಯೂಟವನ್ನು ಕೊಡಬೇಕು-ಕೊಡುತ್ತಿಲ್ಲ, ಅತ್ಯಂತ ದುರ್ಬಲರಿಗೆ ಅಂತ್ಯೋದಯ ಕಾರ್ಡುಗಳ ನಿರಾಕರಣೆ ಆಗಿದೆ, ಆಧಾರ್ ಜೋಡಣೆ ಆಗದ ಕಾರಣ ಅರ್ಹರಿಗೆ ತಾಯಂದಿರ ಭತ್ಯೆ, ಪಿಂಚಣಿ, ಅಂಗನವಾಡಿ ಊಟ ಸಿಗುತ್ತಿಲ್ಲವೆಂಬ ವಿಚಾರವನ್ನು ಹೇಳಿಕೊಳ್ಳಬೇಕು ಯಾರಲ್ಲಿ?
 
ಬೆಳೆ ಪರಿಹಾರ, ಬರ ಪರಿಹಾರದ್ದು ದೊಡ್ಡ ಸುದ್ದಿ ಈಗ. ಕೇಂದ್ರ ಕೊಡಲಿಲ್ಲ, ರಾಜ್ಯ ಕೊಡಲಿಲ್ಲ ಎಂದು ಜಗಳವಾಡುತ್ತ ದಿನಗಳನ್ನು ದೂಡಿದ್ದೇ ಬಂತು. ಈಗ ಬಂದಿರುವ ಪರಿಹಾರದಲ್ಲಿ ಸಣ್ಣ ರೈತರಿಗೆ ಸಿಕ್ಕಿದ್ದು ಏನೂ ಇಲ್ಲ. ಮೇವು ಬ್ಯಾಂಕು, ಕುಡಿಯುವ ನೀರಿನ ಘಟಕಗಳು ಪತ್ರಿಕೆಗಳ ಮುಖಪುಟದಿಂದ ಕೆಳಗೆ ಇಳಿದಿಲ್ಲ. ಲಕ್ಷಾಂತರ ಖರ್ಚು ಮಾಡಿ ಊರೂರಲ್ಲಿ ಕಟ್ಟಿಸಿದ ಕುಡಿಯುವ ನೀರಿನ ಘಟಕಗಳು ಫಳ ಫಳ ಹೊಳೆಯುವ ನೀರಿನ ಸ್ಮಾರಕಗಳಾಗಿ ನಿಂತು ಜನರನ್ನು ಅಣಕಿಸುತ್ತಿವೆ.
 
ಮಧ್ಯರಾತ್ರಿ ಕರೆಂಟು ಬಂದಾಗಲೇ ಜಮೀನುಗಳಲ್ಲಿ ಕೊಳವೆ ಬಾವಿ ಇದ್ದಲ್ಲಿಗೆ ನಡೆದು ನೀರು ತುಂಬಿಕೊಂಡು ಬರಬೇಕಾದ ಪರಿಸ್ಥಿತಿ. ಕುಡಿಯುವ ನೀರಿನ ಬರದ ಬಗ್ಗೆ ಹೆಚ್ಚು ಬರೆದರೆ ‘ಪಾತಾಳ ಗಂಗೆ’ಗೆ ಗುರಿ ಇಟ್ಟಿರುವ ಸರ್ಕಾರ ತನ್ನ ಯೋಜನೆಗೆ ಬೇಗನೆ ಚಾಲನೆ ಕೊಟ್ಟೀತು! ಹೆಚ್ಚು ಬರೆಯದಿರುವುದೇ ಒಳಿತು.
 
‘ಆ್ಯಕ್ಷನ್ ಏಡ್’ ಸಂಸ್ಥೆಯ ವರದಿಯ ಪ್ರಕಾರ ಮೇವಿಲ್ಲದೆಯೇ ಹನೂರು ತಾಲ್ಲೂಕಿನ ಶೆಟ್ಟಳ್ಳಿ ಕುರೊಟ್ಟಿ ಹೊಸೂರು ಪಂಚಾಯಿತಿಗಳಲ್ಲಿ ಈಗಾಗಲೇ 2000 ರಾಸುಗಳು ಪ್ರಾಣ ನೀಗಿವೆ. ಗೋರಕ್ಷಕರು ಎಲ್ಲಿದ್ದಾರೋ! ಮೇವಿನ ಬ್ಯಾಂಕ್ ಆರಂಭವಾಗದೆ ರೈತರು ಅತಿ ಕಡಿಮೆ ಬೆಲೆಗೆ ತಮ್ಮ ರಾಸುಗಳನ್ನು ಮಾರಾಟ ಮಾಡಿ ಊರು ಬಿಟ್ಟು ಹೋಗುತ್ತಿದ್ದಾರೆ. 
 
ಇದು ಬರದ ಕತೆ. ಎಚ್ಚೆತ್ತ ನಾಗರಿಕರು ಮುಂಬರುವ ಮಳೆಯಲ್ಲಾದರೂ ನೀರು ಹಿಡಿದಿಟ್ಟುಕೊಳ್ಳುವ ತಯಾರಿ ನಡೆಸಿರುವಾಗ ಸರ್ಕಾರವೂ  ಬರದ ಹೊಡೆತಕ್ಕೆ, ಪ್ರಜೆಗಳ ಬವಣೆಗೆ, ಜನರೊಂದಿಗೆ ನಿಲ್ಲಬೇಕಾದದ್ದು ಅದರ ಜವಾಬ್ದಾರಿಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT