ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃಪತುಂಗ ರಸ್ತೆ ಕಾಮಗಾರಿ ವಾರ ತಡ

ವಾಹನಗಳ ಸಂಚಾರದಿಂದ ಕಬ್ಬನ್‌ ಉದ್ಯಾನಕ್ಕೆ ಹಾನಿ l ರಸ್ತೆ ಪಕ್ಕದಲ್ಲಿ ಗಿಡಗಳ ನೆಡುವ ಕೆಲಸ ಬಾಕಿ
Last Updated 4 ಮೇ 2017, 19:46 IST
ಅಕ್ಷರ ಗಾತ್ರ
ಬೆಂಗಳೂರು: ನೃಪತುಂಗ ರಸ್ತೆಯಲ್ಲಿ ಕಾಂಕ್ರೀಟ್‌ ಹಾಕುವ ಕೆಲಸ ಬಹುತೇಕ ಮುಕ್ತಾಯವಾಗಿದ್ದು, ಗೆರೆ ಎಳೆಯುವ ಹಾಗೂ ಗಿಡ ನೆಡುವ ಕೆಲಸ ಬಾಕಿ ಉಳಿದಿದೆ. ಇದೆಲ್ಲ ಮುಗಿಯಲು ವಾರ ಬೇಕಿದ್ದು, ಅದಾದ  ಬಳಿಕವೇ ರಸ್ತೆಯು ಸಂಚಾರಕ್ಕೆ ಮುಕ್ತವಾಗಲಿದೆ.
 
ಟೆಂಡರ್‌ ಶ್ಯೂರ್‌ ಯೋಜನೆ ಅಡಿ ರಸ್ತೆ ಅಭಿವೃದ್ಧಿಗಾಗಿ ಫೆ. 27ರಿಂದ ಕಾಮಗಾರಿ ಆರಂಭಿಸಲಾಗಿತ್ತು. ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆರು ವಾರಗಳ ಗಡುವು ನೀಡಲಾಗಿತ್ತು. ಆದರೆ, ಕೆಲಸ ಆರಂಭವಾಗಿ 9 ವಾರ ಗತಿಸಿದ್ದು, ಗುತ್ತಿಗೆದಾರರು ಇನ್ನೂ ಮತ್ತೊಂದು ವಾರದ ಗಡುವು ಪಡೆದುಕೊಂಡಿದ್ದಾರೆ.
 
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆಗಳು) ಕೆ.ಟಿ.ನಾಗರಾಜ್‌, ‘ವೈಟ್‌ ಟಾಪಿಂಗ್‌ ಕೆಲಸ ಮುಗಿದಿದೆ. ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್‌, ಪಥಶಿಸ್ತು ಸೇರಿ ಸಂಚಾರ ನಿಯಮಗಳ ಹಲವು ಗೆರೆಗಳನ್ನು ಎಳೆಯಬೇಕಿದೆ. ಆ ಕೆಲಸ  ಸದ್ಯದಲ್ಲೇ ಆರಂಭವಾಗಲಿದೆ’ ಎಂದು ಹೇಳಿದರು.
 
‘ರಸ್ತೆಯ ಅಕ್ಕ–ಪಕ್ಕದಲ್ಲಿ ಗಿಡಗಳನ್ನು ನೆಡುವ ಕೆಲಸವೂ ಬಾಕಿ ಇದೆ. ರೆಸಿಡೆನ್ಸಿ ರಸ್ತೆಯಲ್ಲಿರುವ ಸಸಿಗಳ ಸಾಲಿನಂತೆ ನೃಪತುಂಗ ರಸ್ತೆಯಲ್ಲೂ ಅಂಥ ಸಸಿಗಳನ್ನು ನೆಡಲು ತೀರ್ಮಾನಿಸಿದ್ದೇವೆ. ಇದರಿಂದ ಮುಂಬರುವ ದಿನಗಳಲ್ಲಿ ರಸ್ತೆಯು ಅಂದವಾಗಿ ಕಾಣಲಿದೆ. ಸಸಿಗಳ  ನಿರ್ವಹಣೆಗೂ ಒತ್ತು ನೀಡುತ್ತೇವೆ’ ಎಂದರು.
 
‘ಈ ರಸ್ತೆಯಲ್ಲಿ ಮೂರು ಪಾದಚಾರಿಗಳ ಅಂಡರ್‌ಪಾಸ್‌ಗಳಿದ್ದು, ಅವುಗಳ ಮೆಟ್ಟಿಲು ಹಾಗೂ ರೋಪ್‌ಗಳು  ಹಾಳಾಗಿವೆ. ಅವುಗಳ ದುರಸ್ತಿ ಕೆಲಸ ಪ್ರಗತಿಯಲ್ಲಿದೆ. ಜತೆಗೆ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ನಿರ್ಮಾಣ ಕಾಮಗಾರಿಯು ಅರ್ಧ ಮುಗಿದಿದೆ. ಈ ಎಲ್ಲ ಕೆಲಸ ಪೂರ್ಣಗೊಳ್ಳಲು ಇನ್ನೊಂದು ವಾರ ಬೇಕಾಗಬಹುದು’ ಎಂದು ಹೇಳಿದರು.
 
‘ರಸ್ತೆಯ ಅಗಲ ಕೆಲವೆಡೆ 13 ಮೀಟರ್‌ ಹಾಗೂ ಇನ್ನೂ ಕೆಲವೆಡೆ 14 ಮೀಟರ್ ಇದೆ. ಈ ರಸ್ತೆಯಲ್ಲಿ ಹಾಕಿರುವ ಕಾಂಕ್ರೀಟ್‌ ಮೇಲುಹೊದಿಕೆಯು 
30ಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ’ ಎಂದು ಅವರು ವಿವರಿಸಿದರು.
 
ಸಂಚಾರ ಕಿರಿಕಿರಿ; ಉದ್ಯಾನಕ್ಕೆ ಹಾನಿ: ನಗರದಲ್ಲಿ ಹೆಚ್ಚು ವಾಹನ ಸಂದಣಿ ಹೊಂದಿರುವ ನೃಪತುಂಗ ರಸ್ತೆಯ ಕಾಮಗಾರಿಯಿಂದಾಗಿ ಈ ಭಾಗದ ಪ್ರಯಾಣಿಕರು ಸಂಚಾರದ ವೇಳೆ ಕಿರಿಕಿರಿ  ಅನುಭವಿಸುತ್ತಿದ್ದಾರೆ. ಮೆಜೆಸ್ಟಿಕ್‌ನಿಂದ ಶೇಷಾದ್ರಿ ರಸ್ತೆ ಮೂಲಕ ಬರುವ ವಾಹನಗಳನ್ನು ಕೆ.ಆರ್‌.ವೃತ್ತದಿಂದ ಕಬ್ಬನ್‌ ಉದ್ಯಾನದ ಒಳರಸ್ತೆ ಮೂಲಕ ಕಾರ್ಪೊರೇಷನ್‌ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
 
 
ಇದರಿಂದ ಉದ್ಯಾನದಲ್ಲೂ ದಟ್ಟಣೆ ಹೆಚ್ಚಾಗಿದ್ದು, ವಿಪರೀತ ಹೊಗೆಯಿಂದ ಗಿಡಗಳು ಕಪ್ಪು ಬಣ್ಣಕ್ಕೆ ತಿರುಗಿವೆ.ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ‘ನಿಗದಿತ ವಾರಗಳಲ್ಲಿ ಕಾಮಗಾರಿ ಮುಗಿಸಿಲ್ಲ.   ವಾಹನಗಳ ಓಡಾಟ ಹೆಚ್ಚಾಗಿ, ಉದ್ಯಾನಕ್ಕೂ ಧಕ್ಕೆಯಾಗುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.  
 
ಪ್ರಯೋಗಾಲಯ ವರದಿ ಅನ್ವಯ ಕಾಮಗಾರಿ: ‘ಸಂಚಾರ ಸಮಸ್ಯೆ ಹೆಚ್ಚಿದ್ದರಿಂದ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ತಿಳಿಸಿದರು.
 
‘ಕಾಂಕ್ರೀಟ್‌ ಕ್ಯೂರಿಂಗ್‌ ಆದ ಬಳಿಕ ಅದರ ಮಾದರಿಯನ್ನು ಗುತ್ತಿಗೆದಾರರು ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದರು. ಅಲ್ಲಿಂದ ವರದಿ ಬಂದ ನಂತರ ಕ್ಯೂರಿಂಗ್‌ ಸರಿ ಇದ್ದರೆ ಮಾತ್ರ ಅಂಥ ಕಾಂಕ್ರೀಟ್‌ನ್ನು ರಸ್ತೆ ನಿರ್ಮಾಣಕ್ಕೆ ಬಳಸಿದ್ದಾರೆ. ಕೆಲವು ಬಾರಿ ವರದಿ ನಕಾರಾತ್ಮಕವಾಗಿ ಬಂದಿದ್ದು, ಆಗ  ಮತ್ತಷ್ಟು ಕ್ಯೂರಿಂಗ್‌ ಮಾಡಿದ್ದಾರೆ. ಇದರಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT