ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗಿಲ್ಲ ಸ್ವಚ್ಛನಗರ ಗರಿ

ಇಂದೋರ್‌ ಪ್ರಥಮ, ಬೆಂಗಳೂರಿನ ಸ್ಥಾನ ಪಾತಾಳಕ್ಕೆ
Last Updated 5 ಮೇ 2017, 16:40 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಸತತ ಎರಡು ವರ್ಷಗಳಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಮುಡಿಯೇರಿದ್ದ ದೇಶದ ‘ಸ್ವಚ್ಛ ನಗರ’ ಎಂಬ ಗರಿ ಈ ವರ್ಷ ಕಳಚಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಗುರುವಾರ ಪ್ರಕಟಿಸಿದ ಸ್ವಚ್ಛ ನಗರಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೈಸೂರು 5ನೇ ಸ್ಥಾನಕ್ಕೆ ಕುಸಿದಿದೆ.
ರಾಜಧಾನಿ ಬೆಂಗಳೂರಿನ ಸಾಧನೆಯೂ ಕಳಪೆಯಾಗಿದೆ. 2014ರಲ್ಲಿ 7ನೇ ಮತ್ತು ಕಳೆದ ವರ್ಷ 38ನೇ ರ‍್ಯಾಂಕ್‌ ಗಳಿಸಿದ್ದ ಐಟಿ ನಗರ, ಈ ಬಾರಿ 210ನೇ ಸ್ಥಾನಗಳಿಸಿ ಪಾತಾಳಕ್ಕೆ ಕುಸಿದಿದೆ.



ಮಧ್ಯಪ್ರದೇಶದ ಇಂದೋರ್‌ ಮೊದಲ ರ‍್ಯಾಂಕ್‌ ಗಳಿಸಿದೆ. ಕಳೆದ ವರ್ಷ ಅದು 25ನೇ ಸ್ಥಾನದಲ್ಲಿತ್ತು. ಅದೇ ರಾಜ್ಯದ ಭೋಪಾಲ್‌ ಎರಡನೇ ಸ್ವಚ್ಛ ನಗರ ಎಂಬ ಕೀರ್ತಿ ಸಂಪಾದಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಮತ್ತು ಗುಜರಾತ್‌ನ ಸೂರತ್‌ ನಾಲ್ಕನೇ ರ‍್ಯಾಂಕ್‌ಗಳಿಸಿವೆ.

ತಮಿಳುನಾಡಿನ ತಿರುಚಿನಾಪಳ್ಳಿಗೆ ಆರನೇ ಸ್ಥಾನ ಸಿಕ್ಕಿದ್ದರೆ, ದೇಶದ ರಾಜಧಾನಿ ನವದೆಹಲಿ ಏಳನೇ ರ‍್ಯಾಂಕ್‌ ಗಳಿಸಲು ಯಶಸ್ವಿಯಾಗಿದೆ.

ಉತ್ತರ ಪ್ರದೇಶದ ಗೋಡಾ ನಗರ, ಅತ್ಯಂತ ಕೊಳಕು ನಗರ ಎಂಬ ಕುಖ್ಯಾತಿ ಗಳಿಸಿದೆ. ಮಹಾರಾಷ್ಟ್ರದ ಭುಸಾವಲ್‌ ಎರಡನೇ ಕೊಳಕು ನಗರ ಎಂದು ಗುರುತಿಸಿಕೊಂಡಿದೆ.

ಭಾರತೀಯ ಗುಣಮಟ್ಟ ಮಂಡಳಿಯು (ಕ್ಯುಸಿಐ) ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ‘ಸ್ವಚ್ಛ ಸರ್ವೇಕ್ಷಣೆ–2017’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ 434 ನಗರ ಮತ್ತು ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಿತ್ತು.



ಮೊದಲ 50 ಸ್ವಚ್ಛನಗರಗಳ ಪಟ್ಟಿಯಲ್ಲಿ ಗುಜರಾತ್‌ನ 12 ನಗರಗಳು ಸ್ಥಾನ ಪಡೆದಿವೆ. ಮಧ್ಯಪ್ರದೇಶದ 11, ಆಂಧ್ರಪ್ರದೇಶದ 8 ನಗರಗಳು 50ರೊಳಗೆ ಸ್ಥಾನ ಗಿಟ್ಟಿಸಿವೆ. 50 ಅತ್ಯಂತ ಕೊಳಕು ನಗರಗಳ ಪೈಕಿ, 25 ನಗರಗಳು ಉತ್ತರ ಪ್ರದೇಶಕ್ಕೆ ಸೇರಿವೆ.

ಸುಧಾರಣೆ ಕಂಡ ವಾರಾಣಸಿ: ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವ ವಾರಾಣಸಿ ಈ ಬಾರಿ ಸ್ವಚ್ಛತೆಯಲ್ಲಿ ಉತ್ತಮ ಸ್ಥಾನ ತೋರಿದೆ. ಅದಕ್ಕೆ 32ನೇ ರ‍್ಯಾಂಕ್‌ ಸಿಕ್ಕಿದೆ. ಅದು, ಕಳೆದ ವರ್ಷ 65ನೇ, 2014ರಲ್ಲಿ 418ನೇ ಸ್ಥಾನದಲ್ಲಿತ್ತು.


*
ಮಂಗಳೂರಿಗೆ 2ನೇ ಸ್ಥಾನ
ಕರ್ನಾಟಕದ 27 ನಗರಗಳು ಮತ್ತು ಪಟ್ಟಣಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.  ರಾಜ್ಯದ ಸ್ವಚ್ಛ ನಗರಗಳ ಪೈಕಿ ಮಂಗಳೂರು (ಪಟ್ಟಿಯಲ್ಲಿ 63ನೇ ರ‍್ಯಾಂಕ್‌) 2ನೇ ಸ್ಥಾನದಲ್ಲಿದೆ. 143ನೇ ರ‍್ಯಾಂಕ್‌ಗಳಿಸಿರುವ ಉಡುಪಿ 3ನೇ ಸ್ಥಾನ ಸಂಪಾದಿಸಿದೆ. 388ನೇ ರ‍್ಯಾಂಕ್‌ ಪಡೆದಿರುವ ಬದಾಮಿ ಕೊನೆಯ ಸ್ಥಾನದಲ್ಲಿದೆ.
*
425 ಮನೆಗಳಿಗೆ ಶೌಚಾಲಯ ಕಟ್ಟಿಸಲು ವಿಫಲವಾಗಿದ್ದರಿಂದ ನಗರವು ಐದನೇ ಸ್ಥಾನಕ್ಕೆ ಕುಸಿಯಿತು. ಎಲ್ಲ ಪ್ರಯತ್ನ ನಡೆಸಿದ್ದರೂ, ಗುರಿ ತಲುಪುವಲ್ಲಿ ನಾವು ವಿಫಲರಾದೆವು.
ಎಂ.ಜೆ. ರವಿಕುಮಾರ್‌
ಮೈಸೂರು ಮೇಯರ್‌
*
5ನೇ ಸ್ಥಾನಕ್ಕೆ ಕುಸಿದಿದೆ ಎಂದರೆ, ಮೈಸೂರಿನಲ್ಲಿ ಸ್ವಚ್ಛತೆ ಕುಂಠಿತಗೊಂಡಿದೆ ಎಂದರ್ಥವಲ್ಲ. ಇತರ ನಗರಗಳು ಅದಕ್ಕಿಂತ ಹೆಚ್ಚು ಅಂಕ ಗಳಿಸಿವೆ.
ವೆಂಕಯ್ಯ ನಾಯ್ಡು,
ಕೇಂದ್ರ ನಗರಾಭಿವೃದ್ಧಿ ಸಚಿವ
*
ಸ್ವಚ್ಛ ನಗರಿ; ಈಡೇರದ ಹ್ಯಾಟ್ರಿಕ್‌ ಕನಸು
ಮೈಸೂರು:
ಸತತ ಮೂರನೇ ಬಾರಿಗೆ ದೇಶದಲ್ಲಿಯೇ ‘ನಂ. 1 ಸ್ವಚ್ಛ ನಗರಿ’ ಎಂಬ ಶ್ರೇಯಕ್ಕೆ ಮೈಸೂರು ಮಹಾನಗರ ಪಾಲಿಕೆ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.

ಮನೆಗಳಿಂದ ಕಸ ಸಂಗ್ರಹಣೆಯಲ್ಲಿ ಮೈಸೂರು ನಗರ ಈ ಬಾರಿ ಹಿಂದೆ ಬಿದ್ದಿದೆ. ಇಂದೋರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆ ಇದ್ದರೆ, ಮೈಸೂರಿನಲ್ಲಿ ಕೇವಲ ಶೇ 75ರಷ್ಟು ಬಡಾವಣೆಗಳಲ್ಲಿ ಮಾತ್ರ ಕಸ ಸಂಗ್ರಹಣಾ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಜತೆಗೆ, ಸಾರ್ವಜನಿಕರ ಶೌಚಾಲಯಗಳ ಕೊರತೆ, ಸ್ವಚ್ಛತೆ ಕುರಿತು ನಾಗರಿಕರಲ್ಲಿ ಅರಿವಿನ ಕೊರತೆ ವಿಷಯಗಳೂ ಢಾಳಾಗಿ ಗೋಚರಿಸಿವೆ ಎಂದೂ ವರದಿಯಲ್ಲಿ ಹೇಳಲಾಗಿದೆ.
*
ಸಮೀಕ್ಷೆಯ ಹೂರಣ
* 2014ಕ್ಕೆ ಹೋಲಿಸಿದರೆ, ಮಧ್ಯಪ್ರದೇಶ, ಗುಜರಾತ್‌, ಜಾರ್ಖಂಡ್, ಛತ್ತೀಸಗಡ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಗರಗಳು ರ‍್ಯಾಂಕಿಂಗ್‌ನಲ್ಲಿ ಗಣನೀಯ ಸುಧಾರಣೆ ಕಂಡಿವೆ
* ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ, ಪಂಜಾಬ್‌ ಮತ್ತು ಕೇರಳ ರಾಜ್ಯಗಳು ನಗರ ಪ್ರದೇಶಗಳ ಸ್ವಚ್ಛತೆಯ ಗುಣಮಟ್ಟ ಹೆಚ್ಚಿಸಲು ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯವಿದೆ.
* 118 ನಗರಗಳು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT