ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆಗೆ ಕಂಗೆಟ್ಟ ಅಂಜನಾಪುರ ಜನ

ನೆಲ್ಲೂರು ಬಂಡೆಯಲ್ಲಿ ಸುರಿಯುತ್ತಿರುವ ಕಸ
Last Updated 4 ಮೇ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ನೈಸ್‌ ರಸ್ತೆಯ ಅಂಜನಾಪುರ ಸಮೀಪದ ತುಳಸಿಪುರದ ಬಳಿ ಇರುವ ನೆಲ್ಲೂರು ಬಂಡೆಯಲ್ಲಿ ಅನಧಿಕೃತವಾಗಿ ಕಸವನ್ನು ಸುರಿಯಲಾಗುತ್ತಿದೆ. ಕಸಕ್ಕೆ ಬೆಂಕಿ ಹಾಕುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ಅಂಜನಾಪುರದಲ್ಲಿರುವ ರಿಯಲ್‌ ಹೋಮ್‌ ಸ್ಟೈಲಿಶ್‌ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘದ ಸುಧಾಕರ್‌, ವಿಜಯ್‌ ರಂಗನ್‌, ಅಶೋಕ್‌, ಅರುಣ್ ಹಾಗೂ ಹರೀಶ್‌ ಅವರು ಈ ಬಗ್ಗೆ ಎರಡು ವರ್ಷಗಳಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.

‘ನೈಸ್‌ ರಸ್ತೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ನೆಲ್ಲೂರು ಬಂಡೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗಿತ್ತು. ರಸ್ತೆ ಕಾಮಗಾರಿ ಮುಗಿದ ಬಳಿಕ ಗಣಿಗಾರಿಕೆಯನ್ನು ನಿಲ್ಲಿಸಲಾಗಿತ್ತು. ಇಲ್ಲಿ ದೊಡ್ಡ ಕ್ವಾರಿ ನಿರ್ಮಾಣ ಆಗಿರುವುದರಿಂದ ಕಸವನ್ನು ಸುರಿಯಲಾಗುತ್ತಿದೆ. ಒಣಕಸ, ಪ್ಲಾಸ್ಟಿಕ್‌, ವೈದ್ಯಕೀಯ ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಸುಡಲಾಗುತ್ತಿದೆ’ ಎಂದು ಸುಧಾಕರ್‌ ದೂರಿದರು.

‘ಡಂಪಿಂಗ್‌ ಯಾರ್ಡ್‌ 2–3 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಇಲ್ಲಿ ಒಣತ್ಯಾಜ್ಯ ಸಂಸ್ಕರಣಾ ಘಟಕವೂ ಇದೆ. ಕಸವನ್ನು ಸುಡುವುದರಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ದುರ್ವಾಸನೆ ಬರುತ್ತಿರುವುದರಿಂದ ಈ ಭಾಗದಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ಕಣ್ಣು ಉರಿ, ಕೆಮ್ಮು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳು, ಹಿರಿಯರು ಈ ಕಾಯಿಲೆಗಳಿಗೆ ಬೇಗ ತುತ್ತಾಗುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಹಿಂದೆ ರಾತ್ರಿ ವೇಳೆ ದುರ್ವಾಸನೆ ಬರುತ್ತಿತ್ತು. ಈಗೀಗ ಸಂಜೆ 4 ಗಂಟೆಗೆಲ್ಲಾ ಕೆಟ್ಟ ವಾಸನೆ ಬರುತ್ತಿದೆ. ನೆಲ ಮಟ್ಟದಲ್ಲಿ ವಾಸಿಸುವ ಜನರಿಗೆ ಇದರ ಅನುಭವ ಆಗುತ್ತಿಲ್ಲ. ಆದರೆ, ಎತ್ತರದ ಪ್ರದೇಶದಲ್ಲಿರುವ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ವಾಸಿಸುವ ಜನರಿಗೆ ಇದರ ಅನುಭವ ಆಗುತ್ತಿದೆ’ ಎಂದು ಹೇಳಿದರು.

ಸಂಘದ ಪದಾಧಿಕಾರಿ ವಿಜಯ್‌ ರಂಗನ್‌ ಮಾತನಾಡಿ, ‘ಎರಡು ವರ್ಷಗಳಿಂದ ಈ ಸಮಸ್ಯೆ ಇದೆ. ಈ ಬಗ್ಗೆ ಬಿಬಿಎಂಪಿ ಹಾಗೂ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದೆವು. ಬಿಬಿಎಂಪಿ ಆರೋಗ್ಯಾಧಿಕಾರಿ ಲೋಕೇಶ್‌ ಅವರು ಅಂಜನಾಪುರಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆದರೆ, ಅವರು ಬಂದ ಸಂದರ್ಭದಲ್ಲಿ ವಾಸನೆ ನಿಂತಿತ್ತು. ಇದರಿಂದ ವಾಪಸ್‌ ಹೋಗಿದ್ದರು’ ಎಂದರು.

‘ಸ್ಥಳೀಯ ಪಾಲಿಕೆ ಸದಸ್ಯ ಕೆ. ಸೋಮಶೇಖರ್‌ ಗಮನಕ್ಕೆ ತಂದಿದ್ದೆವು. ಅವರು, ಡಂಪಿಂಗ್‌ ಯಾರ್ಡ್‌ ನಮ್ಮ ವಾರ್ಡ್‌ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಪಕ್ಕದ ವಾರ್ಡ್‌ನ ಸದಸ್ಯರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದರು’ ಎಂದು ಅವರು ವಿವರಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರ ನೀಡಿದರೂ ಸ್ಪಂದನೆ ಇಲ್ಲ
‘ಕಸಕ್ಕೆ ಬೆಂಕಿ ಇಡುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡುವಂತೆ ಬಿಬಿಎಂಪಿ ಜಂಟಿ ಆಯುಕ್ತರು ತಿಳಿಸಿದ್ದರು. ಆದರೆ, ಮಂಡಳಿಯವರು, ಇದು ಕಸಕ್ಕೆ ಸಂಬಂಧಿಸಿದ ವಿಷಯ ಆಗಿರುವುದರಿಂದ ಈ ಬಗ್ಗೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.

ನೀವು ಅವರನ್ನು ಸಂಪರ್ಕಿಸಿ ಎಂದು ಹೇಳಿದ್ದರು’ ಎಂದು ವಿಜಯ್‌ ರಂಗನ್‌ ಅಸಮಾಧಾನ ವ್ಯಕ್ತಪಡಿಸಿದರು.‘ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೂ (ಎನ್‌ಜಿಟಿ) ಮನವಿ ಸಲ್ಲಿಸಿದ್ದೆವು.

ಇದು ಕಸ ವಿಲೇವಾರಿಗೆ ಸಂಬಂಧಿಸಿದ ವಿಷಯ ಆಗಿರುವುದರಿಂದ  ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸುವಂತೆ ಎನ್‌ಜಿಟಿ ತಿಳಿಸಿತ್ತು. ಒಟ್ಟಿನಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಬೊಟ್ಟು ಮಾಡಲಾಗುತ್ತಿದೆ. ಆದರೆ, ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ’ ಎಂದು ದೂರಿದರು.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ: ಪ್ರಧಾನ ಮಂತ್ರಿಗೆ ಪತ್ರ
‘ಕಸ ಸುರಿಯುತ್ತಿರುವುದು ಹಾಗೂ ಬೆಂಕಿ ಹಾಕುತ್ತಿರುವ ಬಗ್ಗೆ ಪ್ರಧಾನ ಮಂತ್ರಿ ಅವರ ಕಚೇರಿಗೆ ಪತ್ರ ಬರೆದಿದ್ದೆವು. ಅಲ್ಲಿನ ಅಧಿಕಾರಿಗಳು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರು ಬಿಬಿಎಂಪಿ ದಕ್ಷಿಣ ವಿಭಾಗದ ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದ್ದರು’ ಎಂದು ಸುಧಾಕರ್‌ ತಿಳಿಸಿದರು.

 *‘ನಾನು ಇತ್ತೀಚೆಗೆ ನಿಯೋಜನೆಗೊಂಡಿದ್ದೇನೆ. ಕಸ ಸುರಿಯುತ್ತಿರುವುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುವಂತೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಅವರಿಗೆ    ಸೂಚಿಸುತ್ತೇನೆ ಎಂದು ಜಂಟಿ ಆಯುಕ್ತರು ತಿಳಿಸಿದ್ದರು. ಆದರೆ, ಎರಡು ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT