ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಿ ಪದಗಳ ಒಡತಿ ಪುಟ್ಟನಂಜಮ್ಮ

ಸಂಧ್ಯಾ ಕಾಲದಲ್ಲೂ ಗ್ರಾಮೀಣ ಜನಪದ ಪಸರಿಸುವ ತವಕ
Last Updated 5 ಮೇ 2017, 8:38 IST
ಅಕ್ಷರ ಗಾತ್ರ

ಯಳಂದೂರು: ಊರ ಮಾರಮ್ಮನ ಉತ್ಸವಕ್ಕೆ ಈಕೆಯ ಧನಿ ಕೇಳಬೇಕು. ಮಾರಿಯ ಗುಣಗಾನ ಗ್ರಾಮೀಣರ ಮನ ಮುಟ್ಟಬೇಕು. ಹರಕೆ ಹೊತ್ತವರು ಧೂಪ ದೀಪ ಉರಿಸಿ ದೇವಿಯನ್ನು ಧ್ಯಾನಿಸು ವಾಗ ಅಜ್ಜಿಯ ಆಲಾಪನೆಯ ಪದಗಳು ಸಾಂತ್ವನದ ಪದಗಳಾಗಿ ಕಾಡಬೇಕು. ತಮ್ಮಡಪ್ಪ, ಅಮ್ಮನ ಗುಡಿಯಲ್ಲಿ ಬೇವಿನ ಸೊಪ್ಪು ನೀಡಿ, ಎಳೆ ನೀರನ್ನು ಮುಖಕ್ಕೆ ಚಿಮುಕಿಸಿದಾಗ ಭಕ್ತರಿಗೆ ಅಜ್ಜಿಯ ನೆನಪು. ಅವರ ಬಾಯ್ದೆರೆಯಿಂದ ಹೊರಟ ಪದಪುಂಜಕ್ಕೆ ಅರ್ಥಗಳ ಹುಡುಕಾಡುವ ತವಕ.

ಹೌದು. ಇವರು ಪುಟ್ಟನಂಜಮ್ಮ. ವಯಸ್ಸು 85. ಆಲ್ಕೆರೆ ಅಗ್ರಹಾರದವರು. ತುಂಬು ಸಂಸಾರದ ಸುಖದಲ್ಲೂ ಗ್ರಾಮ ಪರಂಪರೆಯ ಸಂಸ್ಕೃತಿಯನ್ನು ಮರೆ ಯದ ಹಿರಿಜೀವ. ಇನ್ನೂರಕ್ಕೂ ಹೆಚ್ಚು ಹಾಡು –ಹಸೆ ಇವರ ಬದುಕಿನ ಭಾಗವಾಗಿವೆ.

ಪ್ರತಿ ಗ್ರಾಮ ದೇವತೆ ಆಯಾ ಜನಪದರ ಶಕ್ತಿ ಮಾತೆ ಹಾಗೂ ಮಕ್ಕಳ ಕಾಡುವ – ಕಾಪಾಡುವ ಉರಿಮಾರಿ. ಈಕೆಯ ಬಗ್ಗೆ ಇವರಿಗೆ ವಿಶೇಷ ಆಸ್ಥೆ. ಒಲುಮೆಗೆ ಹಾಡುಗಳ ತೋರಣ. ಹಾಗಾಗಿ, ಇಂದಿಗೂ ಇವರು ಭಕ್ತಿಯ ಒರತೆಯಲ್ಲಿ ಕಟ್ಟಿದ ಮೂಕು ಮಾರಮ್ಮ ಜನಪದ ಹಾಡು ಜನ ಸಮೂಹದಲ್ಲಿ ಮನ್ನಣೆ ಗಳಿಸಿವೆ.

ಚಿಲ್ಕದ ಕಿಂಡಿಯಲ್ಲಿ
ಇಣಿಕಿ ನೋಡವರು ಯಾರು?
ಚಿಲ್ಕದ ಚಿಂತಾಮಣಿಯವಳೇ
ಮೂಗವ್ವನ ಮನೆಯವಳೆ?
ಇಣಿಕಿ ನೋಡವಳೆ ಹಿರೀಮಕ್ಳ..,

ಎನ್ನುವಾಗ ಮಾರಿ ದುಷ್ಟಿ, ಚಂಡಿ, ಆಕೆಯ ಗುಡಿ ಯಲ್ಲಿ ಚಿಲ್ಕ (ಬೀಗ) ಹಾಕಿ ದರೂ ಕಿಂಡಿಯಲ್ಲಿ ಇಣುಕಿ ನೋಡಿ ಆಕೆಯ ಕೋಪಕ್ಕೆ ಗುರಿಯಾಗಬೇಡ  ಎನ್ನುತ್ತಲೇ ಮಾರಮ್ಮನ ಮಹಿಮೆ ಯನ್ನು ಮನಮುಟ್ಟುವ ಶೈಲಿಯಲ್ಲಿ ಪುಟ್ಟ ನಂಜಮ್ಮ ಕಟ್ಟಿಕೊಡುತ್ತಾರೆ.

ಭಕ್ತರು ಮಾರಿಯನ್ನು ಒಲಿಸಿ ಕೊಳ್ಳಲು ಏನೇನು ಮಾಡುತ್ತಿದ್ದರು ಎಂಬುದನ್ನು ಇವರು ಸಾಹಿತ್ಯದ ಸ್ಪರ್ಷದ ಹೊರತಾಗಿಯೂ ಕೇಳಿಸಬಲ್ಲರು.
ಕರಿಕಡ್ಡಿ ಬಣ್ಣ ಕಣ್ಣಾಕೆಳಗೆ ಅರಿಶಿನ

ಕೆಣಕದಿರುವಳೇ ಕಿಡಿಗಣ್ಣ
ಬೈನಾಪುರದ ಮಾರಮ್ಮನ
ಮರೆತವರ ಮನೆಯ
ಮುರಿಯುವವಳೇ..,


ನಾಮಕರಣ, ನೀರೆರೆಯುವ ಶಾಸ್ತ್ರ ಗಳಿಗೆ ಈಗಲೂ ಇವರನ್ನು ಅರಸಿ ಕೊಂಡು ಬರುತ್ತಾರೆ. ಮದುವೆ ಮನೆ ಯಲ್ಲಿ ಇವರು ಸೋಭಾನೆ ಪದ ಸುರು ವಿಟ್ಟುಕೊಂಡರೆ ಎರಡು ಗಂಟೆ ತನಕ ಕೊರಳ ನಾದ ಹರಡುತ್ತದೆ.

ಇಬ್ಬರು ಜೊತೆಗಾರ್ತಿಯರು ಸೊಲ್ಲಿ ಕ್ಕುತ್ತಾರೆ. ಇಂದಿನ ಮಕ್ಕಳು ಮತ್ತು ಯುವ ಜನತೆಗೆ ಇವರು ಕಲಿಸಲು ಪ್ರಯತ್ನ ಪಟ್ಟರು ಆಸಕ್ತಿ ತೋರುತ್ತಿಲ್ಲಾ ಎಂಬ ನೋವಿನ ನುಡಿ ಗ್ರಾಮದ ಗುರು ಪಾದ ಮತ್ತು ನಾಗರಾಜು ಅವ ರದು. ಇವರು ನಿಂತಲ್ಲಿ ಕುಂತಲ್ಲಿ ಒಗಟು, ನಾಮಕರಣ, ನಾಟಿ ಪದಗಳನೇ ಧ್ಯಾನಿ ಸುತ್ತಾರೆ. ಅಂತಹ ಸಮಯ ರೆಕಾರ್ಡಿಂಗ್‌ ಮಾಡಲು ಪ್ರಯತ್ನ ಪಡುತ್ತೇನೆ.

ಆದರೆ, ನಮ್ಮ ಮನೆಯಲ್ಲಿಯೇ ಇಂತಹ ಪದ ಸಂಪತ್ತಿನ ಅಜ್ಜಿ ಇದ್ದರೂ ಇವರ ಜನಪದ ಮಹತ್ವ ಅರಿಯದೇ ಕಲಿಯಲಾಗಿಲ್ಲಾ ಎಂಬ ಅಳಲು ಮೊಮ್ಮಗಳಾದ ನಂದಿನಿ ಅವರದು.

ದೂರಿ ದೂರಿ ಹಾಕು
ದೂರಿ ಮಾರಿ ಕೇಳುವೆ
ದೂರಕ್ಕೆ ದೊಡ್ಡವಳೇ
ನನಗೆ ಚಿಕ್ಕವಳೇ
ದೂರು ಕೇಳವ್ಳ
ನಿನ್ನ ಕಣ್ಣಿಗೆ ಕಣ್ಕಪ್ಪು..,

ಎನ್ನುತ್ತಾ ದೈವಕ್ಕೆ ಅರಕೆ ಒಪ್ಪಿಸುವ ಮಾಹಿತಿಯನ್ನು ಮೇಲಿನಂತೆ ಉಸುರು ತ್ತಾರೆ ನಂಜಮ್ಮ. ‘ಊರು–ಕೇರಿಗಳಲ್ಲಿ ಈಗಲೂ ಜಾತಿ, ಮತ, ಭೇದವಿಲ್ಲದೆ ಮಾತಿನ ಲಹರಿಯ ಓಘಕ್ಕೆ ಮಹತ್ವ ಕೊಡುತ್ತಾರೆ.

ಗ್ರಾಮ ಪರಿಸರದಲ್ಲಿ ಆತ್ಮೀಯತೆ, ಅನುಕಂಪ, ಕೊಡುಕೊಳ್ಳು ಸಂಸ್ಕೃತಿ ಇದರಿಂದ ಜೀವಂತವಾಗಿವೆ. ಸ್ತ್ರೀಯರು ಜನಪದವನ್ನು ಒಲಿಸಿ ಕೊ ಳ್ಳಲು ಮುಂದಾಗಬೇಕು’ ಎನ್ನುವ ಹಳ ಹಳಿಕೆ ಪುಟ್ಟನಂಜಮ್ಮ ಅವರದಾಗಿದೆ.
–ನಾ. ಮಂಜುನಾಥಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT