ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರಕ್ಕೂ ಹೆಚ್ಚು ಮನೆ ಮಂಜೂರು

ವಸತಿರಹಿತರಿಗೆ 2018ರ ವೇಳೆಗೆ 35 ಸಾವಿರ ಸೂರು ಕಲ್ಪಿಸುವ ಗುರಿ
Last Updated 5 ಮೇ 2017, 9:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳಿಂದ ವಸತಿರಹಿತರಿಗೆ 10 ಸಾವಿರಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದು, ಎಲ್ಲರಿಗೂ ಸೂರು ನೀಡುವ ನಿಟ್ಟಿನಲ್ಲಿ 2018ರ ವೇಳೆಗೆ 35 ಸಾವಿರ ವಸತಿ ಗುರಿ ಹೊಂದಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಮಜರಾಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಇಂಡೋ ಮಿಮ್ ಟೆಕ್ ಕಂಪನಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಸಿಲ್ವರ್ ಪಾರ್ಕ್ ಅಪೇರಲ್ ವತಿಯಿಂದ ನೀಡಲಾದ ಸಮವಸ್ತ್ರ ಮಕ್ಕಳಿಗೆ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ನೀರಾವರಿ ಯೋಜನೆ ಸೇರಿದಂತೆ ಬಹುತೇಕ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ತಾಲ್ಲೂಕಿನಲ್ಲಿ ಅರ್ಹರಿಗೆಲ್ಲಾ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಆದರೆ ಈ ಹಿಂದೆ ಇದ್ದ ಸರ್ಕಾರದಲ್ಲಿ ಪಡಿತರ ಚೀಟಿ ವಿತರಣೆ ಸಮರ್ಪಕವಾಗಿರಲಿಲ್ಲ. ಪಡಿತರ ವಿತರಣೆಯಲ್ಲಿಯೂ ಗೊಂದಲವಿತ್ತು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದೊಡನೆಯೇ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು.

ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ, ಹಾಲು ಉತ್ಪಾದನೆ ಹೆಚ್ಚಾಗಿ ದಿಕ್ಕು ತೋಚದೇ ಹಾಲು ತರುವ ರೈತರನ್ನು ವಾಪಸ್‌ ಕಳುಹಿಸಲಾಗುತ್ತಿತ್ತು. ಆದರೆ ಈಗ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ₹4 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಕ್ಷೀರ ಭಾಗ್ಯ ಯೋಜನೆಯಿಂದಾಗಿ ದಿನಕ್ಕೆ 75 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾದರೂ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ರೂಪಿಸಿರುವ ಸರ್ಕಾರ ಇದಾಗಿದೆ. ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ಯಾವ ರಸ್ತೆಗಳ ಕಾಮಗಾರಿಗಳೂ ಬಾಕಿ ಇಲ್ಲದಂತೆ ಕಾಮಗಾರಿಗಳು ಭರದಿಂದ ಸಾಗಿವೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ, ಶಾಸಕರು ಕೈಗೊಂಡಿರುವ ಅಭಿವೃದ್ಧಿ  ಕಾಮಗಾರಿಗಳ ಕುರಿತು ಕರಪತ್ರವನ್ನು ಹೊರಡಿಸಲಾಗಿದ್ದು, ₹1,500 ಕೋಟಿಗೂ ಹೆಚ್ಚಿನ ಕೆಲಸಗಳಾಗಿವೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 182 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿಯಲ್ಲಿ ಶಾಸಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಇಂಡೋ ಮಿಮ್ ಟೆಕ್ ಕಂಪನಿಯ ನಿರ್ದೇಶಕ ಸೂರಜ್ ಕುಮಾರ್,ಹಿಲ್ಸನ್, ವೆಂಕಟರಮಣಪ್ಪ, ಶಾಲಾ ಮುಖ್ಯ ಶಿಕ್ಷಕ ಮೇಘದಾಸ್, ಎಸ್‌ಡಿಎಂಸಿ ಅಧ್ಯಕ್ಷ ಅಂಬರೀಷ್, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಕೆಂಪಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರತ್ನಮ್ಮ, ರೇಣುಕಾ ರಾಜಣ್ಣ, ಕಾಂಗ್ರೆಸ್ ತಾಲ್ಲೂಕು ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಲಿ ಸದಸ್ಯ ಆದಿತ್ಯ ನಾಗೇಶ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT