ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆಗೆ ಒತ್ತಾಯ

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಕ್ರಿಯೆ ಆರಂಭ
Last Updated 5 ಮೇ 2017, 9:07 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದಲ್ಲಿ ರೇಷ್ಮೆನೂಲು ಬಿಚ್ಚಾಣಿಕೆದಾರರು ಹಾಗೂ ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ರಕ್ಷಣೆಯ ದೃಷ್ಟಿಯಿಂದ ನೂಲು ಬಿಚ್ಚಾಣಿಕೆ ಘಟಕ ಸ್ಥಾಪನೆ ಮಾಡಿ, ಎಲ್ಲಾ ಕಾರ್ಮಿಕರು ಉತ್ತಮ ವಾತಾವರಣದಲ್ಲಿ ಕೆಲಸ ಮಾಡಲು ಅನುಕೂಲ ಕಲ್ಪಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.

ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗುರುವಾರ ಆರಂಭವಾದ ಇ–ಹರಾಜು ಪ್ರಕ್ರಿಯೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಬಯಲುಸೀಮೆ ಭಾಗದಲ್ಲಿನ ಬಹಳಷ್ಟು ರೈತರು ರೇಷ್ಮೆ ಉದ್ಯಮವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ರೈತರು ರೇಷ್ಮೆಯಿಂದ ವಿಮುಖರಾಗುತ್ತಿದ್ದು, ರೈತರ ನೆರವಿಗೆ ಧಾವಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.

ಮಾರುಕಟ್ಟೆಯ ಉಪನಿರ್ದೇಶಕ ಬೈರಾರೆಡ್ಡಿ ಅವರು, ಮಾರುಕಟ್ಟೆಗೆ ಬಂದಿರುವ ಗೂಡಿಗೆ ಲಾಟ್ ನಂಬರ್ ನೀಡಿ, ಬಿನ್ ನಂಬರ್ ನೀಡಿ ರೈತರು ಎಷ್ಟು ಲಾಟುಗಳು ತಂದರೂ ಒಂದೇ ಕಡೆಯಲ್ಲಿ ಗೂಡು ಹಾಕಲು ಅವಕಾಶ ಕಲ್ಪಿಸಲಾಗಿದೆ.

ಇದರಿಂದ ಹರಾಜಿನಲ್ಲಿ ರೈತರಿಗೆ ಗೊಂದಲವಾಗುವುದಿಲ್ಲ, ಇ–ಹರಾಜಿಗೆ ಉತ್ತಮ ಗುಣಮಟ್ಟದ ವೈಫೈ ವ್ಯವಸ್ಥೆ ಮಾಡಲಾಗಿದೆ.  ಮೊಬೈಲ್ ಮೂಲಕ ಹರಾಜಿನಲ್ಲಿ ಭಾಗವಹಿಸಲು ಬಾರದ ರೀಲರುಗಳಿಗೆ ಸಹಾಯವಾಗಲು ಇಲಾಖೆಯ ಸಿಬ್ಬಂದಿ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಹರಾಜಿನಲ್ಲಿ ಭಾಗವಹಿಸುವ ರೀಲರುಗಳು, ಮೊದಲು ಹಣ ಠೇವಣಿ ಇಟ್ಟ ನಂತರವೇ ಅವಕಾಶ ನೀಡಲಾಗಿದೆ. ವಿದ್ಯುತ್ ಸಮಸ್ಯೆಯುಂಟಾಗದಂತೆ ನೋಡಿಕೊಳ್ಳಲು ಯು.ಪಿ.ಎಸ್.ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಗೋದಾಮುಗಳಲ್ಲಿ ಎಲ್.ಇ.ಡಿ ಪರದೆ ಅಳವಡಿಸಲಾಗಿದೆ. ಅದರಲ್ಲಿ ಲಾಟ್ ನಂಬರ್, ರೀಲರುಗಳು ಕೊಡುತ್ತಿರುವ ಬೀಡ್ ದರ ನಮೂದಾಗುತ್ತಿವೆ ಎಂದು ಮಾಹಿತಿ ನೀಡಿದರು. ಜಂಟಿ ನಿರ್ದೇಶಕ ಪ್ರಭಾಕರ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ರೈತ ಮುಖಂಡರಾದ ಮಳ್ಳೂರು ಶಿವಣ್ಣ, ಕಲ್ಯಾಣ್ ಕುಮಾರ್ ಬಾಬು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬೋಜಣ್ಣ,  ಗಾಯಿತ್ರಿ, ಕೃಷಿ ವಿಸ್ತರಣಾಧಿಕಾರಿ ನರೇಂದ್ರಬಾಬು,  ಪುರಸಭಾ ಸದಸ್ಯ ಎಸ್.ಭಾಸ್ಕರ್, ಎಸ್.ಆರ್.ಎಸ್.ಬಸವರಾಜ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸೀಪ್, ರೀಲರ್ ಓಬಳೇಶ್, ಸಾಧಿಕ್ ಪಾಷ, ಎಚ್.ಎಂ.ಕೃಷ್ಣಪ್ಪ, ವೇಣು ಇತರರಿದ್ದರು.

ಮಧ್ಯವರ್ತಿಗಳ ಹಾವಳಿ ಇಲ್ಲ
ಇ–ಹರಾಜು ಪ್ರಕ್ರಿಯೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಪಾರದರ್ಶಕವಾದ ವ್ಯವಸ್ಥೆಯನ್ನು ಜಾರಿಗೆ ತರಲು ಅನುಕೂಲವಾಗಲಿದೆ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.

ಜೊತೆಗೆ  ರೀಲರುಗಳು ಮತ್ತು ರೈತರ ನಡುವೆ ಉತ್ತಮ ಭಾಂಧವ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಹೆಚ್ಚಿನ ಸಹಕಾರ ನೀಡಬೇಕು. ಸಣ್ಣಪುಟ್ಟ ಲೋಪದೋಷಗಳಾದರೆ ಸರಿ ಪಡಿಸಿಕೊಂಡು ಮಾರುಕಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT