ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ತನವೇ ಒಂದು ಧರ್ಮ

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಅದು 2010, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಾಗ ಮೂರು ಭಿನ್ನ ಪಕ್ಷಗಳ ಪ್ರತಿನಿಧಿಗಳಾದ ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಹಾಗೂ ಬೃಂದಾ ಕಾರಟ್ ಪರಸ್ಪರರ ಕೈ ಹಿಡಿದುಕೊಂಡು ಸಂತೋಷದಿಂದ ಸಂಭ್ರಮಿಸಿದ್ದರು. ಆ ಕ್ಷಣದಲ್ಲಿ ಮೂವರೂ ಒಂದೇ ಗೂಡಿನ ಹಕ್ಕಿಗಳಂತೆ ಕಂಡಿದ್ದರು. ನಂತರ ಮಹಿಳಾ ಮೀಸಲಾತಿ ಮಸೂದೆ ಪುರುಷಸದಸ್ಯರ ಪ್ರಬಲ ವಿರೋಧದಿಂದ ಮುಗ್ಗರಿಸಿದರೂ ಆ ಕ್ಷಣದಲ್ಲಿ ಆ ಮೂರು ಮಹಿಳೆಯರು ಪ್ರಪಂಚ ಗೆದ್ದಷ್ಟೇ ಸಂಭ್ರಮಿಸಿದ್ದರು. ಅವರ ಸಂಭ್ರಮಕ್ಕೆ ಕಾರಣವಾಗಿದ್ದು ಒಂದೇ ಸಮಾನ ಅಂಶ, ಅವರೆಲ್ಲರೂ ಹೆಣ್ಣುಕುಲಕ್ಕೆ ಸೇರಿದವರು ಎಂಬುದು. ಪ್ರಾಯಶಃ ಎಲ್ಲ ಓರೆಕೋರೆಗಳ ನಡುವೆ ಇಂದಿಗೂ ಜಗತ್ತಿನ ಎಲ್ಲ ಮಹಿಳೆಯರನ್ನು ಒಂದು ಮಾಡುವ ಸಾಮರ್ಥ್ಯವಿರುವ ಅಂಶವೇ ಹೆಣ್ತನ.

ದೂರದ ಆಸ್ಟ್ರೇಲಿಯಾದಿಂದ ಭರತನಾಟ್ಯ ಅಭ್ಯಸಿಸಲು ಎರಡು ಮೂರು ವರ್ಷಕ್ಕೊಮ್ಮೆ ಮೈಸೂರಿಗೆ ಬರುವ ನಿಕಿ, ಇಲ್ಲಿ ಬಂದಾಗ ಮೈಸೂರಿನ ಹೆಣ್ಣಾಗುತ್ತಾಳೆ. ಬಂದ ಮರುದಿನದಿಂದಲೇ ಇಲ್ಲಿನ ಹೆಣ್ಣುಮಕ್ಕಳಂತೆ ನೃತ್ಯದ ಉಡುಗೆ–ತೊಡುಗೆಯಲ್ಲಿ ಕಾಣಿಸಿಕೊಳ್ಳುವ ನಿಕಿ, ಹೋಗುವಷ್ಟರಲ್ಲಿ ಎಲ್ಲರ ಸ್ನೇಹಿತೆಯಾಗಿರುತ್ತಾಳೆ. ಕ್ಲಾಸಿನಲ್ಲಿ ತಿಂಗಳ ತೊಂದರೆಯಿಂದ ಬಸವಳಿದು ಕೂರುವ ಹುಡುಗಿಯರಿಗೆ ಯೋಗದ ಕೆಲವು ಆಸನಗಳನ್ನು ಹೇಳಿಕೊಟ್ಟು ಅಕ್ಕನಾಗುತ್ತಾಳೆ. ಒಂದೆರಡು ತಿಂಗಳ ಅವಧಿಗಾಗಿ ಅಷ್ಟು ದೂರದಿಂದ ಬರುವ ನಿಕಿ ವಾಪಾಸು ಹೋಗುವಷ್ಟರಲ್ಲಿ ಗುರುವಿಗೇ ಅಚ್ಚರಿಯಾಗುವಷ್ಟು ವೇಗದಲ್ಲಿ ನೃತ್ಯ ಕಲಿತು, ಅವಳ ಶ್ರದ್ಧೆಯನ್ನು ಉದಾಹರಣೆಯಾಗಿ ಕೊಡುವಷ್ಟು ಎಲ್ಲರನ್ನೂ ಪ್ರಭಾವಿಸಿರುತ್ತಾಳೆ.

ಅವಳೊಂದಿಗೆ ಬರುವ ಗಂಡುಹುಡುಗರು ನೃತ್ಯ ಕಲಿತು ಹೊರಡುವಾಗ ಗುರುವಿನ ಹೆಸರು ಹಿಡಿದು ಕರೆದು ‘ಬೈ, ಸೀ ಯೂ’ ಎಂದು ಹೊರಟರೆ, ಮೆಲ್ಲನೆ ನಿಕ್ಕಿ ಬ್ಯಾಗಿನಿಂದ ಒಂದು ಸೀರೆ ತೆಗೆದು, ಗುರುವಿಗೆ ನೀಡುತ್ತಾ ‘ಯು ಲುಕ್ ಬ್ಯೂಟಿಫುಲ್ ಇನ್ ಸಾರಿ, ದಿಸ್ ಇಸ್ ಫಾರ್ ಯೂ’ ಎಂದು ನೀಡಿ ತನ್ನ ಗುರುತು ಬಿಟ್ಟು ಹೋಗುತ್ತಾಳೆ. ಇಲ್ಲಿ ಮನಸ್ಸಿಗೆ ಮುಟ್ಟುವುದು ನಿಕ್ಕಿಯ ಈ ಆಪ್ತತೆಯೇ ಹೊರತು ಕೊಡುವ ಉಡುಗೊರೆಯಲ್ಲ. ವ್ಯಾವಹಾರಿಕ ಸಂಬಂಧಗಳಲ್ಲೂ ಆಪ್ತತೆಯ ನೆರಳು ಕೊಡುವ ಹೆಣ್ಣುಮಕ್ಕಳ ಈ ಗುಣ ಹೆಣ್ತನದ ಪ್ರತೀಕವೇ ಹಾಗಾದರೆ! ಹಾಗಿದ್ದಲ್ಲಿ ಹೆಣ್ತನ ಎಂದರೇನು ಎನ್ನುವುದು ವಿಚಾರಯೋಗ್ಯವಲ್ಲವೇ?

ಹೆಣ್ತನವೆಂದರೆ ಮಾರ್ದವತೆ, ಅರ್ಥೈಸಿಕೊಳ್ಳುವ ಶಕ್ತಿ ಮತ್ತು ಸೂಕ್ಷ್ಮಸಂವೇದನೆಗಳ ಸ್ವರೂಪವೆನ್ನುವ ಅರ್ಥವಿಸ್ತಾರವಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಸಂದರ್ಭಗಳಿಗನುಗುಣವಾಗಿ ಈ ಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬಂದರೂ ಸಾಮಾನ್ಯವಾಗಿ ಈ ಗುಣಗಳಿಂದ ಹೆಣ್ತನವನ್ನು ವ್ಯಾಖ್ಯಾನಿಸಲು ಅಡ್ಡಿಯಿಲ್ಲ. ಹುಟ್ಟಿನಿಂದ ಗಂಡಿಗೆ ಗಂಡಸ್ತನ ಸಹಜ ಪರಿಚಯ ಮಾಡಿ ಕೊಡುವಂತೆ ಹೆಣ್ಣಿಗೆ ಹೆಣ್ತನವನ್ನು ನಾವು ಪರಿಚಯಿಸುವುದಿಲ್ಲ. ಹೆಣ್ಣಿನ ಮಾರ್ದವತೆ, ಮಾತೃತ್ವದ, ಪೋಷಿಸುವ, ಸಹಿಸುವ, ನಾಚಿಕೆ ಒಟ್ಟು ಬಾಹ್ಯಗುಣಗಳನ್ನಷ್ಟೇ ಕುಟುಂಬದ ಸದಸ್ಯರು ಪರಿಚಯಿಸುತ್ತಾರೆ. ಹೆಣ್ಣನ್ನು ಹೆಣ್ಣುಶರೀರದ ಮೂಲಕವಷ್ಟೇ ಪರಿಚಯಿಸುವ ನಾವು ಆಕೆಯಲ್ಲೂ ಸುಪ್ತವಾಗಿರುವ ಸ್ವತಂತ್ರವ್ಯಕ್ತಿಯನ್ನು ಗುರುತಿಸುವುದೇ ಇಲ್ಲ. ಹಾಗಿದ್ದಲ್ಲಿ ಇಷ್ಟೆಯೇ ಹೆಣ್ತನವೆಂದರೆ! ಇಷ್ಟು ಸಣ್ಣ ಪ್ರಪಂಚವೇ ಹೆಣ್ಣುತನವೆನ್ನುವುದು. ಖಂಡಿತ ಅಲ್ಲ. ಹೆಣ್ಣುತನದ ಅರ್ಧವೂ ಅಲ್ಲಿ ಅನಾವರಣವಾಗಿರುವುದಿಲ್ಲ. ಹೆಣ್ತನವೆಂದರೆ ಅದು ಜಗತ್ತು. ಗಂಡನ್ನೂ ಒಳಗೊಂಡ ಜಗತ್ತು.

ಹೆಣ್ತನವೆಂದರೆ ಆಪ್ತತೆ. ಅರ್ಥೈಸುವ, ಸೂಕ್ಷ್ಮ ಸಂವೇದನೆಗಳಿರುವ, ಕರಗುವ ಮನಸ್ಸಿರುವ, ಸ್ಪಂದಿಸುವ ಗುಣವಿರುವ ಜೀವದ ಭಾವ ಅಷ್ಟೇ. ಗಂಡಲ್ಲೂ ಈ ಆಪ್ತಗುಣವಿರುವವರನ್ನು ಹೆಂಗುರುಳಿನವನು ಎನ್ನುವುದಿದೆ. ಆದರೆ ವ್ಯವಹಾರದ ಬದುಕನ್ನು ಗಂಡಸು ಅನಿವಾರ್‍ಯವಾಗಿ ಹೊರಬೇಕಾದಾಗ ಅವನಲ್ಲಿ ನಿಷ್ಠುರತೆ ಹುಟ್ಟಿಕೊಂಡಿತೋ, ಅಥವಾ ತಾನು ಗಂಡು ಎಂದು ಸಾಧಿಸುವ ಅನಿವಾರ್‍ಯ ಎದುರಾಯಿತೋ, ಗಂಡಿನ ಸ್ಪಂದಿಸುವ ಗುಣ ಲೆಕ್ಕಾಚಾರವಾಯಿತು. ಲೆಕ್ಕಾಚಾರ ಆರಂಭವಾದಲ್ಲಿ ಸಂವೇದನೆಗಳಿಗೆ ಜಾಗವಿಲ್ಲವಲ್ಲ. ನಮ್ಮ ಮಹಾಕಾವ್ಯಗಳಲ್ಲಿ ಮಹಾಹೆಣ್ಣುಗಳ ಸಂವೇದನೆಗಳು ಅದೆಷ್ಟು ಸುಂದರವಾಗಿ ಅನಾವರಣವಾಗಿವೆ ಎಂದರೆ ಇಂದಿಗೂ ಹೆಣ್ತನಕ್ಕೆ ಸಾಕ್ಷಿ ಕೊಡುವ ಸಂದರ್ಭ ಬಂದಾಗ ನಾವು ಮೊರೆ ಹೋಗುವುದು ಈ ಮಹಾಕಾವ್ಯಗಳಿಗೆ. ಯುದ್ಧವೆಲ್ಲ ಮುಗಿದು, ಕುಂತಿಪುತ್ರರು ವಿಜಯಿಗಳಾಗಿ ಇನ್ನೇನು ರಾಜಮಾತೆಯಾಗಿ ಕುಂತಿ ವಿರಮಿಸುವ ಆ ಮಹಾಕ್ಷಣ ಬಂದಾಗ, ಕುಂತಿ ನಯವಾಗಿ ಮಕ್ಕಳ ಮನವಿಯನ್ನು ತಿರಸ್ಕರಿಸಿ ಅದುವರೆಗೂ ರಾಜಮಾತೆಯಾಗಿ ವಿರಾಜಿಸಿದ್ದ ಗಾಂಧಾರಿಯ ಜೊತೆಯಲ್ಲಿ  ಕಾಡಿಗೆ ಹೋಗುವ ನಿರ್ಧಾರ ಮಾಡಿದ್ದು ನೋಡಿದಾಗ ಕುಂತಿಯ ಅರ್ಥೈಸುವಿಕೆಯ ಶಕ್ತಿಯ ಅರಿವಾಗುತ್ತದೆ. ಪೂರ್ತಿ ಕುಟುಂಬ ಕಳಕೊಂಡಿದ್ದ ಗಾಂಧಾರಿಗೆ ಕುಂತಿಯ ಅಗತ್ಯ ಎಲ್ಲ ಸಮಯಕ್ಕಿಂತಲೂ ಈ ಹೊತ್ತಿನಲ್ಲೇ ಹೆಚ್ಚಿತ್ತು ಎಂದು ಅರಿತ ಕುಂತಿ, ಗಾಂಧಾರಿಯ ಜೊತೆಗೆ ಹೋಗುತ್ತಾಳೆ. ಹೆಣ್ತನವೆಂದರೆ ಅದೇ ತಾನೇ!

ತನ್ನ ಸುತ್ತಮುತ್ತಲ ಬವಣೆಗೆ ಸ್ಪಂದಿಸುವುದೇ ಹೆಣ್ತನ. ಈ ಹೊತ್ತಿನ ಅನೇಕ ಉದಾಹರಣೆಗಳಲ್ಲಿ ಮಹಾರಾಷ್ಟ್ರದ ಸಿಂಧುತಾಯಿಯೂ ಒಬ್ಬರು. ಮರಾಠಿಯಲ್ಲಿ ತಾಯಿ ಎಂದರೆ ಅಕ್ಕ. ತಾಯಿಗೂ ಅಕ್ಕನಿಗೂ ವ್ಯತ್ಯಾಸ ಬಹಳವೇನೂ ಇಲ್ಲ. ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಈ ಸಿಂಧುತಾಯಿ ಅಮ್ಮ, ಅಕ್ಕ ಎಲ್ಲವೂ. ಉತ್ತರಪ್ರದೇಶದ ಸಂಪತ್ ಪಾಲ್ ಆರಂಭಿಸಿದ ಗುಲಾಬಿ ಗ್ಯಾಂಗ್ ಹೆಣ್ತನದ ವಿಸ್ತಾರಗೊಂಡ ವಿರಾಟ್ ರೂಪವೆನ್ನಲೇಬೇಕು. ಇನ್ನು ನಮ್ಮದೇ ನೆಲದ ಸ್ತ್ರೀಶಕ್ತಿ ಸಂಘಗಳು, ಮದ್ಯಪಾನವಿರೋಧಿ ಆಂದೋಲನಗಳು ಹೆಣ್ಣು, ತನ್ನ ಕುಟುಂಬ ಪೋಷಣೆಗೆ ತನ್ನದೇ ಮನೆಯವರನ್ನೂ ಎದುರಿಸಲೂ ಸಿದ್ಧವಾಗುತ್ತಾಳೆ ಎನ್ನುವುದಕ್ಕೆ ಸಾಕ್ಷಿಯಾಗಿವೆ.

ಹೆಣ್ತನವೆಂದರೆ, ಒದಗುವುದು. ಇನ್ನೊಬ್ಬರ ಭಾವಗಳಿಗೆ ಭಿತ್ತಿಯಾಗುವುದು. ಸರಳಾ, ಸುಕನ್ಯಾ ಸ್ನೇಹಿತೆಯರು. ಅಕ್ಕಪಕ್ಕದ ಮನೆಯವರೂ ಕೂಡ. ಏಕಾಏಕಿ ವ್ಯಾಪಾರದಲ್ಲಾದ ನಷ್ಟದಿಂದ ಪಾರಾಗಲು ಸರಳಾ ತವರಿಂದ ಹಾಕಿದ್ದ ಅಷ್ಟೂ ಚಿನ್ನವನ್ನು ಗಂಡನಿಗಿತ್ತು ಸಹಕರಿಸಿದರೆ, ಮದುವೆ ಮುಂಜಿಗಳಿಗೆ ಬೋಳು ಕುತ್ತಿಗೆಯಲ್ಲಿ ಹೋಗುತ್ತಿದ್ದ ಸರಳಾಳಿಗೆ ಬೇರೆಯವರ ಗಮನಕ್ಕೆ ಬಾರದಂತೆ ತನ್ನ ಒಡವೆಗಳನ್ನು ಹಾಕಿ ತನ್ನ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುತ್ತಿದ್ದಳು ಸುಕನ್ಯಾ. ಅದು ಬರೀ ಒಡವೆ, ಸೀರೆಯ ಮಾತಾಗಿರಲಿಲ್ಲ. ಒಬ್ಬರಿಗೊಬ್ಬರು ಒದಗುವುದಾಗಿತ್ತು. ಒಡವೆ, ಸೀರೆ, ಜಡೆಜಗಳ ಇಂಥದ್ದೇ ಕಥೆಗಳಿಂದ ಹೆಣ್ಣುಮಕ್ಕಳ ನಡೆ–ನುಡಿಗಳನ್ನು ಅಳೆಯುವ ಜಗತ್ತಿಗೇ ಇಂಥ ಕಥೆಗಳ ಪರಿಚಯವೂ ಆಗಬೇಕಾಗಿದೆ! ಶಿವಯೋಗಿ ಸಿದ್ಧರಾಮೇಶ್ವರರ ವಚನವೊಂದು ಹೀಗಿದೆ: ‘ಹೆಣ್ಣು ಹೆಣ್ಣಲ್ಲ, ಆಕೆ ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’. ಈ ವಚನ ಹೆಣ್ಣಿನ ಭಾವಭಿತ್ತಿಯ ಆಳವಿಸ್ತಾರಗಳನ್ನು ಹೇಳುತ್ತದೆ.

ನಗರಕ್ಕಿಂತಲೂ ಹಳ್ಳಿಯ ಬದುಕುಗಳಲ್ಲಿ ಹೆಣ್ತನದ ವಿಶೇಷ ಕಥೆಗಳು ಹಾಸುಹೊಕ್ಕಾಗಿರುತ್ತವೆ. ಜಾತಿ, ಧರ್ಮ ಮೀರಿದ ಭಾವಬಂಧಗಳು ಕೇವಲ ಹೆಣ್ತನದ ಕಾರಣದಿಂದ ಭದ್ರವಾಗಿ ಕೋಟೆ ಕಟ್ಟಿಕೊಂಡು ಬದುಕುತ್ತಿರುತ್ತವೆ. ಸ್ನೇಹಿತರಿಬ್ಬರ ನಡುವೆ ಅದ್ಯಾವುದೋ ಕಾರಣಕ್ಕೆ ಮನಸ್ತಾಪವಾದಾಗ ಅವರಿಬ್ಬರ ಪತ್ನಿಯರೂ ಸ್ವಲ್ಪ ದಿನ ಕಾದು ನೋಡಿ ಆದರೂ ಸರಿಯಾಗದೇ ಇದ್ದಾಗ ಪರಸ್ಪರ ಸಂಪರ್ಕಿಸಿ ಗಂಡಸರ ಮನಸ್ತಾಪ ನಮ್ಮ ಸ್ನೇಹಕ್ಕೆ ಅಡ್ಡಿಯಾಗುವುದು ಬೇಡವೆಂದು ನಿರ್ಧರಿಸಿ ಅವರಿಬ್ಬರೂ ಮೊದಲಿನಂತೆ ವಿಶ್ವಾಸದಿಂದ ನಡೆದುಕೊಂಡಿದ್ದು ಹೆಣ್ತನದ ಔನ್ಯತ್ಯವಾಗಿ ಕಾಣುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಮದುವೆ ಮುಂಜಿಗಳು, ಬಸಿರು ಬಾಣಂತನದ ಹೊತ್ತಲ್ಲಿ ಹಾಲು–ತುಪ್ಪಗಳನ್ನು ತಂದುಕೊಡುವುದಷ್ಟೇ ಅಲ್ಲದೇ ಬಂದು ಸಹಕರಿಸುವ ಗುಣವೂ ಹೆಣ್ತನದ ಲಕ್ಷಣವೇ. ಊರಿಗೆ ಮಗಳು ಬಾಣಂತನಕ್ಕೆಂದು ಬಂದಿದ್ದಾಳೆಂದು ತಿಳಿದೊಡನೇ ತುಪ್ಪ, ಚೂರ್ಣಗಳೊಂದಿಗೆ ಬರುವ ಹೆಂಗಸರ ದೊಡ್ಡ ಗುಣವನ್ನು ಮರೆಯುವುದೆಂತು?

ಕೊಡುಕೊಳ್ಳುವಿಕೆ ಹೆಣ್ತನದ ಇನ್ನೊಂದು ಲಕ್ಷಣ. ಆ ಮೂಲಕ ಮುಕ್ತವಾಗಿ, ಮನಸ್ಸಿನಲ್ಲಿ ಯಾವುದೇ ಗಂಟುಗಳಿಲ್ಲದೇ ಬದುಕುವುದನ್ನು ಆಯ್ಕೆ ಮಾಡಿಕೊಳ್ಳುವುದೂ ಹೆಣ್ಣುಮಕ್ಕಳೇ. ಸಂತಸ ಮತ್ತು ದುಃಖವನ್ನು ಹಂಚಿಕೊಂಡು ಬದುಕುವ ಧೈರ್ಯವೂ ಹೆಣ್ಣುಮಕ್ಕಳಿಗೆ ಹೆಚ್ಚಾಗಿರುವುದನ್ನು ನೋಡಿದರೆ ನದಿಯಂತೆ ಹರಿಯುವುದಷ್ಟೇ ಹೆಣ್ಣಿನ ಸಹಜಗುಣ ಎಂಬುದು ಮನವರಿಕೆಯಾಗುತ್ತದೆ. ಹರಿಯುವುದೆಂದರೆ ಮಂದಕ್ಕೆ ಹೋಗುವುದು. ಸಂಸಾರದ ತಾಪತ್ರಯಗಳನ್ನು ಹೆಣ್ಣು ಸಲೀಸಾಗಿ ಸ್ವೀಕರಿಸಿದಷ್ಟು ಗಂಡು ಸ್ವೀಕರಿಸಲಾರ. ಹಾಗೇ ಮಕ್ಕಳ ಹೊಸ ಬದುಕಿನ ನಿರ್ಧಾರಗಳನ್ನು ತಾಯಿ ಸ್ವೀಕರಿಸಿದಂತೆ ತಂದೆಗೆ ಕಷ್ಟ. ಅಲ್ಲಿ ಅವನನ್ನು ಕಡೆಗಣಿಸಿದ ಭಾವನೆ ಬಂದುಬಿಡುತ್ತದೆ. ಸ್ವೀಕಾರ, ಹೆಣ್ತನದ ದೊಡ್ಡ ಲಕ್ಷಣವೇ ಹೌದು. ಗಂಡನನ್ನು ಬಿಟ್ಟು ಇನ್ನೊಬ್ಬನ ಪ್ರೇಮದಲ್ಲಿ ಸಿಕ್ಕಿ, ಆ ಇನ್ನೊಬ್ಬನೂ ಬಿಟ್ಟು ಹೋದ ಸಂದರ್ಭದಲ್ಲಿ ಊರಿನವರೆಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗಿರಿಜೆಗೆ ಕೆಲಸ ಕೊಟ್ಟು ಊರಿನ ಗೂಳಿಗಳಿಗೆ ಆಹಾರವಾಗದಂತೆ ನೋಡಿಕೊಂಡ ಅಮ್ಮ ಹೆಣ್ತನದ ದೊಡ್ಡ ಪ್ರತೀಕವಾಗಿ ಕಾಣುವುದಿದೆ.

ತಾನೂ ಸಂತಸದಲ್ಲಿ ಬದುಕುತ್ತಾ, ಇನ್ನೊಬ್ಬರ ಬದುಕನ್ನು ಸಾಧ್ಯವಾದಷ್ಟು ಸುಂದರವಾಗಿಸುವ ಗುಣವೇ ಹೆಣ್ತನವಾಗಿ ಕಾಣುತ್ತದೆ. ಹಾಗೆ ನೋಡುವಾಗ ಹೆಣ್ತನ ಎನ್ನುವುದು ಒಂದು ಉಪಕಾರವಾಗಿಯೂ ಕಾಣುತ್ತದೆ.  ಬದುಕಿಗೆ ಬಹಳ ದೊಡ್ಡ ಅರ್ಥಗಳೇ ಬೇಕೆಂದಿಲ್ಲ, ಅರ್ಥಗಳನ್ನು ಹುಡುಕುತ್ತಾ ಹೋಗಬೇಕೆಂದೂ ಇಲ್ಲ. ಇರುವ ಮಿತಿಗಳಲ್ಲಿ ಮಿತಿಮೀರಿ ಬದುಕುವುದೇ ಹೆಣ್ತನ. ಮನುಷ್ಯನ ಇತಿಹಾಸದ ತುಂಬಾ ಹೆಣ್ಣಿಗೆ ಧರ್ಮವನ್ನು ಬೋಧಿಸಿದ ಅಭ್ಯಾಸ ನಮ್ಮದು. ಆದರೆ ಹೆಣ್ತನವೇ ಒಂದು ದೊಡ್ಡ ಧರ್ಮವಾಗಿರುವಾಗ ಧರ್ಮಕ್ಕೆ ಧರ್ಮದ ಬೋಧೆ ಅಗತ್ಯವಿದೆಯೇ? ಯೋಚಿಸಬೇಕಾಗಿದೆ. ಮಡಿಲಲ್ಲಿ ಮಗುವನ್ನು ಲಾಲಿಸುತ್ತಾ ‘ಕೆರೆಯಂ ಕಟ್ಟಿಸು, ಬಾವಿಯಂ ತೋಡಿಸು’ – ಇಂತಹ ಮಾತುಗಳನ್ನೇ ಮಗುವಿನ ಕಿವಿಗೆ ಹಾಕುವ ಹೆಣ್ಣು ಸ್ವಯಂ ತಾನೇ ಒಂದು ಧರ್ಮವೆನಿಸಿದ್ದಾಳೆ.

ಧರ್ಮ, ಈ ಹೊತ್ತಿನಲ್ಲಿ ಕಟಕಟೆಯಲ್ಲಿ ನಿಂತಿರುವ ಶಬ್ದ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿಯೂ ಎಲ್ಲರೂ ಧರ್ಮ ಎನ್ನುವ ಶಬ್ದದ ಅರ್ಥವ್ಯಾಪ್ತಿ ಅರಿಯದೇ ಕುರುಡ ಆನೆ ಮುಟ್ಟಿದಂತೆ ವ್ಯಾಖ್ಯಾನಿಸುತ್ತಿದ್ದಾರೆ. ಧರ್ಮವೆಂದರೆ ಸರಳಾರ್ಥ ಧಾರಣ ಮಾಡುವುದು. ತನ್ನನ್ನು ಒಂದು ಶ್ರದ್ಧೆಗೆ ಒಳಪಡಿಸುವುದು. ಹೆಣ್ತನ ಅಂತಹ ಒಂದು ಶ್ರದ್ಧೆ. ಲಾಲಿಸುವ, ಪೋಷಿಸುವ ಹೆಣ್ತನದಷ್ಟು ದೊಡ್ಡ ಧರ್ಮವೇ ಇಲ್ಲವೆಂದೆನಿಸುತ್ತದೆ. ಜಾತಿಮತ ಭೇದವಿಲ್ಲದ, ಮನುಷ್ಯನ ಅತ್ಯಂತ ಮಾರ್ದವ ಗುಣವಾದ ಹೆಣ್ತನ ಮನುಷ್ಯನನ್ನು ಸಂಘಜೀವಿಯಾಗಿಸುತ್ತದೆ. ಅದು ಬೆಸೆಯುವ ಗುಣವುಳ್ಳದ್ದು. ಹೆಣ್ತನವೆಂದರೆ ಆಲಿಸುವ, ನೋವನ್ನು ಅರಿಯುವ, ನಲಿವನ್ನು ಸಂಭ್ರಮಿಸುವ, ಕಣ್ಣೀರನ್ನು ಒರೆಸುವ, ಉತ್ತಮವಾದುದನ್ನು ಹೇಳುವ ಒಟ್ಟಿನಲ್ಲಿ ಮನುಷ್ಯನನ್ನು ಪಾಲಿಸುವ ಧರ್ಮ. ಮನೆಕೆಲಸದಲ್ಲಿ ಸಹಾಯ ಮಾಡುವ ಲಕ್ಷ್ಮೀಗೆ ಆಕೆ ಕೆಲಸಕ್ಕೆ ಬರುವ ಹೊತ್ತಿನಲ್ಲಿ ಬೇರೆ ಯಾರೂ ಇಲ್ಲದೆ ನಾನೋಬ್ಬಳೇ ಇದ್ದರೆ ಒಂಥರಾ ಖುಷಿ. ಯಾಕೆ ಎಂದು ಕೇಳಿದ್ದಕ್ಕೆ , ‘ನಿನ್ನೊಂದಿಗೆ ಮಾತಾಡುತ್ತಾ, ಎಲ್ಲ ವಿಷಯ ಹೇಳಿಕೊಂಡು ಕೆಲಸ ಮಾಡಬಹುದಲ್ವಾ’ ಎಂದಾಗ ನಮ್ಮಿಬ್ಬರನ್ನೂ ಹೀಗೆ ಬೆಸೆದಿರುವುದೂ ಈ ಹೆಣ್ತನವೇ ಎಂದು ಅರಿವಾದಾಗ ನಿರಾಳವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT