ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣು ಛಾಯೆ, ಕಥೆ ಮಾಯೆ

Last Updated 5 ಮೇ 2017, 11:10 IST
ಅಕ್ಷರ ಗಾತ್ರ

ಚಿತ್ರ: ಸಿಂಹ ಹಾಕಿದ ಹೆಜ್ಜೆ
ನಿರ್ಮಾಣ: ಪಾರ್ಥಸಾರಥಿ, ಗೌತಮ್ ಸೇಠ್
ನಿರ್ದೇಶಕ: ವಿಕ್ರಮ್
ತಾರಾಗಣ: ಪ್ರೀತಮ್, ಅಮೃತಾ, ಶರತ್ ಲೋಹಿತಾಶ್ವ

ಒಂದು ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹಿಡಿದು ಕೂರಿಸಬೇಕು ಎಂದರೆ ಒಳ್ಳೆಯ ಕಥೆ ಇರಬೇಕು. ಅದನ್ನು ಅಚ್ಚುಕಟ್ಟಾಗಿ ತೆರೆಯಮೇಲೆ ತರುವ ಚಿತ್ರಕಥೆ ಬೇಕು. ಇವೆರಡೂ ಸರಿಯಾಗಿ ಇಲ್ಲದಿದ್ದರೆ ಆ ಚಿತ್ರ ರಂಜಿಸಲು ಸಹಜವಾಗಿಯೇ ಸೋಲುತ್ತದೆ. ನೋಡುಗನಿಗೆ ಕೂತಲ್ಲೇ ಚಡಪಡಿಕೆ ಶುರುವಾಗುತ್ತದೆ. ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದ್ದೂ ಇದೇ ಪರಿಸ್ಥಿತಿ.

ಸಿನಿಮಾ ಆರಂಭವಾಗಿ ಎಷ್ಟು ಹೊತ್ತಾದರೂ ಕಥೆಯ ಸುಳಿವೇ ಇಲ್ಲ. ನಾಯಕನ ಇಂಟ್ರೊಡಕ್ಷನ್, ಗುಣಗಾನ, ನಾಯಕ ನಾಯಕಿಯ ಭೇಟಿ–ಮರು ಭೇಟಿ, ಪ್ರೀತಿಯ ಪ್ರಹಸನ, ಅಪಹಾಸ್ಯ, ನಾಯಕಿಯ ಎಲ್ಲ ಕಷ್ಟಗಳಿಗೂ ನಾಯಕ ಒದಗುವುದು, ಹಾಡುಗಳ ಪ್ಯಾಕೇಜ್, ಸಾಹಸ ದೃಶ್ಯಗಳು – ಇವು ಮೊದಲರ್ಧವನ್ನು ಆವರಿಸಿಕೊಂಡಿವೆ. ಇವೆಲ್ಲ ಕಮರ್ಷಿಯಲ್ ಸಿನಿಮಾದ ಅಗತ್ಯ ಎಂಬುದು ನಿಜ. ಆದರೆ ಇವಿಷ್ಟೇ ಸಿನಿಮಾ ಆಗುವುದಿಲ್ಲವಷ್ಟೆ?

ಪತ್ರಕರ್ತೆ ಸೋನುಳನ್ನು (ಅಮೃತಾ) ಕರ್ಣ (ಪ್ರೀತಮ್) ಕೇಡಿಗಳಿಂದ ರಕ್ಷಿಸುತ್ತಾನೆ. ಈ ಭೇಟಿಯಿಂದ ಸೋನು ಮನಸು ಕರ್ಣನತ್ತ ವಾಲುತ್ತದೆ (ಪ್ರೀತಿಯ ಭಾವವನ್ನೇ ಉಕ್ಕಿಸದ ಪ್ರೀತಿ ಇದು). ಆದರೆ ಕರ್ಣ ಪ್ರೀತಿಯಿಂದ ದೂರ. ‘ಪ್ರೀತಿ ಪ್ರೇಮ ಎಲ್ಲ ಹೊಟ್ಟೆ ತುಂಬಿದ ನಂತರ ಬರುವ ಮನರಂಜನೆ’ ಎಂಬ ಡೈಲಾಗ್ ಅವನದು. ತಾನಿರುವುದೇ ಉಪದೇಶ ಮಾಡುವುದಕ್ಕೆ ಎಂಬಷ್ಟು ಉಪದೇಶ ಮಾಡುತ್ತದೆ ನಾಯಕನ ಪಾತ್ರ. ತನ್ನ ತಂದೆಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಅವನ ಗುರಿ.

ದ್ವಿತೀಯಾರ್ಧದಲ್ಲಿ ವಿಷ್ಣುವರ್ಧನ್ ಅವರನ್ನೇ ಹೋಲುವ ಜ್ಯೂನಿಯರ್ ವಿಷ್ಣುವರ್ಧನ್ ಜೈರಾಜ್ ಪ್ರವೇಶವಾಗುತ್ತದೆ. ಸಿನಿಮಾದಲ್ಲಿ ಏನಾದರೂ ಇದೆ ಎಂದುಕೊಳ್ಳುವುದಾದರೆ ಈ ಭಾಗದಲ್ಲೇ. ವೇಷಭೂಷಣ, ಹಾವ ಭಾವ, ಸಂಭಾಷಣೆ ಎಲ್ಲದರಲ್ಲೂ ಜೈರಾಜ್ ವಿಷ್ಣುವರ್ಧನ್ ಅವರನ್ನು ನೆನಪಿಸುತ್ತಾರೆ. ಇದು ವಿಷ್ಣುವರ್ಧನ್ ಛಾಯೆಯನ್ನು ಬಳಸಿಕೊಂಡು, ಅವರ ಅಭಿಮಾನಿಗಳನ್ನು ಸೆಳೆಯುವ ತಂತ್ರ.

ನಟನೆಯ ವಿಚಾರದಲ್ಲಿ ಅಮೃತಾ, ಪ್ರೀತಮ್‌ಗೆ ಇದು ಮೊದಲ ಸಿನಿಮಾ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ. ‘ಮಜಾಟಾಕೀಸ್’ ಪವನ್ ಹಾಸ್ಯದಲ್ಲಿ ನವಿರುತನವೇ ಇಲ್ಲ.  ಆರ್. ಹರಿಬಾಬು ಸಂಗೀತ ಸಂಯೋಜನೆಯಲ್ಲಿ ನೆನಪಿನಲ್ಲಿ ಉಳಿಯುವಂಥ ಹಾಡುಗಳಿಲ್ಲ. ಆರ್.ಕೆ. ಶಿವಕುಮಾರ್ ಛಾಯಾಗ್ರಹಣದಲ್ಲಿ ಎರಡು ಹಾಡುಗಳು ಸುಂದರವಾಗಿ ಮೂಡಿಬಂದಿವೆ.

ನಾಯಕಿಗೆ ಕಷ್ಟ ಬಂದಾಗಲೆಲ್ಲ ನಾಯಕ ಪ್ರತ್ಯಕ್ಷನಾಗಿ, ಆಕೆಗೆ ನೆರವಾಗುತ್ತಾನೆ. ಪ್ರೇಕ್ಷಕ ಮಾತ್ರ ಸಿನಿಮಾದುದ್ದಕ್ಕೂ ಕಷ್ಟವನ್ನೇ ಮುಖಾಮುಖಿಯಾಗುತ್ತಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT