ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿವರ್‌ ಕ್ಯಾನ್ಸರ್‌ಗೆ ‘ಬ್ರ್ಯಾಕಿ ಚಿಕಿತ್ಸೆ’

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಜಾಗತಿಕವಾಗಿ ಲಿವರ್ (ಪಿತ್ತಜನಕಾಂಗ) ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ‘ವಿಶ್ವ ಆರೋಗ್ಯ ಸಂಸ್ಥೆ’ 2016ರ ಆರೋಗ್ಯ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ದೀರ್ಘಕಾಲದ ಪಿತ್ತಜನಕಾಂಗದ ರೋಗ ಇದ್ದರೆ (ಲಿವರ್ ಕ್ಯಾನ್ಸರ್) ಬದಲಿ ಪಿತ್ತಜನಕಾಂಗ ಜೋಡಣೆ ಅತ್ಯುತ್ತಮ ಆಯ್ಕೆಯಾಗಿದೆ.  ಹೀಗೆ ಮಾಡಿದರೆ ಮಾತ್ರ ರೋಗಿಗಳು ಸಕಾಲದಲ್ಲಿ ಬದುಕುಳಿಯುತ್ತಾರೆ. ಆದರೆ ಸಕಾಲದಲ್ಲಿ ಲಿವರ್ ಸಿಗುವುದು ಅಸಾಧ್ಯ! ಸಾವಿರಾರು ರೋಗಿಗಳು ತಕ್ಷಣಕ್ಕೆ ಲಿವರ್ ಸಿಗದೇ ಸಾವನ್ನಪ್ಪುವುದೇ ಹೆಚ್ಚು. ಲಿವರ್ ಕ್ಯಾನ್ಸರ್ ಅನ್ನು ಶಾಶ್ವತವಾಗಿ ಗುಣಪಡಿಸುವಂತಹ ಪರಿಣಾಮಕಾರಿ ಚಿಕಿತ್ಸೆ, ಔಷಧಿ ಇನ್ನು ಲಭ್ಯವಾಗಿಲ್ಲ. ಆದರೆ ಚಾಲ್ತಿಯಲ್ಲಿರುವ ಔಷಧಿ ಅಥವಾ ಚಿಕಿತ್ಸಾ ಪದ್ಧತಿ ಮೂಲಕ ರೋಗಿಗಳನ್ನು ಕೆಲವು ವರ್ಷಗಳ ಮಟ್ಟಿಗೆ ಬದುಕಿಸಿಕೊಳ್ಳಬಹುದು.

ಬೆಂಗಳೂರಿನ ಪ್ರಸಿದ್ಧ ‘ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ಯ ವೈದ್ಯರು ಲಿವರ್ ಕ್ಯಾನ್ಸರ್‌ಗೆ ರೇಡಿಯೊ ಚಿಕಿತ್ಸೆ ಮಾದರಿಯ ‘ಬ್ರ್ಯಾಕಿ ಚಿಕಿತ್ಸೆ’ (Brachytherapy) ವಿಧಾನವನ್ನು ಕಂಡುಹಿಡಿದ್ದಾರೆ. ಇದು ಏಷ್ಯಾದಲ್ಲೇ ಮೊಟ್ಟ ಮೊದಲ ಚಿಕಿತ್ಸಾ ವಿಧಾನವಾಗಿದೆ ಎಂದು ವೈದೇಹಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಭಾಸ್ಕರ್ ವಿಶ್ವನಾಥನ್ ಹೇಳುತ್ತಾರೆ. ಈ ಚಿಕಿತ್ಸೆ ಮೂಲಕ  6 ತಿಂಗಳು ಬದುಕಬಹುದಾದ ರೋಗಿಯನ್ನು 4 ವರ್ಷಗಳವರೆಗೂ ಉಳಿಸಿಕೊಳ್ಳಬಹುದಾಗಿದೆ.

ಏನಿದು ಬ್ರ್ಯಾಕಿ ಚಿಕಿತ್ಸೆ...
ಬ್ರ್ಯಾಕಿ ಚಿಕಿತ್ಸೆಯಲ್ಲಿ ವಿಕಿರಣಗಳ ಮೂಲಕ ಕ್ಯಾನ್ಸರ್ ಗಡ್ಡೆಯನ್ನು ಕರಗಿಸಲಾಗುತ್ತದೆ. ಇದಕ್ಕೆ  ‘ಇರಿಡಿಯಂ–192’ (iridium 192) ಎಂಬ ಸಂಪನ್ಮೂಲ ವಿಕಿರಣವನ್ನು ಬಳಕೆ ಮಾಡಲಾಗುತ್ತದೆ. ಉದಾಹರಣೆಗೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಯ ಲಿವರ್‌ಗೆ ಹಲವಾರು ಟ್ಯೂಬ್‌ಗಳನ್ನು ಹೊಟ್ಟೆಯ ಭಾಗದಲ್ಲಿ ಅಳವಡಿಸಲಾಗುತ್ತದೆ. ನಂತರ ಅವುಗಳ ಮೂಲಕ ನೇರವಾಗಿ ‘ಇರಿಡಿಯಂ–192’ ವಿಕಿರಣವನ್ನು ಹಾಯಿಸಲಾಗುತ್ತದೆ. ಹೀಗೆ ಮಾಡುವುದರಿಂದ ಲಿವರ್‌ನಲ್ಲಿರುವ ಕ್ಯಾನ್ಸರ್ ಗಡ್ಡೆ ಕರಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಲಿವರ್‌ನ ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆ  ಇದೆ  ಎಂಬುದನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಸ್ಕ್ಯಾನ್‌ನಂತಹ ‘ಬಿಟಿ ಇಮೇಜಿಂಗ್’, ಸಿಟಿ ಸ್ಕ್ಯಾನ್, ಎಎಂಆರ್‌ಐಗಳಿಂದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿ, ನಂತರ ‘ಬ್ರ್ಯಾಕಿ ಚಿಕಿತ್ಸೆ’ ನೀಡಬಹುದು ಎಂದು ಡಾ. ಭಾಸ್ಕರ್ ವಿಶ್ವನಾಥನ್ ಹೇಳುತ್ತಾರೆ.

ಈ ಚಿಕಿತ್ಸಾ ವಿಧಾನವನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು ಜರ್ಮನಿಯ ವೈದ್ಯರು. ಈ ವಿಧಾನವನ್ನು ಮತ್ತಷ್ಟು ಸುಧಾರಿಸಿ ಹೊಸ ತಂತ್ರಜ್ಞಾನದೊಂದಿಗೆ  (ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ) ವೈದೇಹಿ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ. ಸುಧಾರಿತ ಬ್ರ್ಯಾಕಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದಲ್ಲಿ  ಡಾ. ಭಾಸ್ಕರ್ ವಿಶ್ವನಾಥನ್‌, ಸಂದೀಪ್ ಮಂಡಲ್‌, ಡಾ. ರಿಷಬ್‌, ಡಾ. ರಾಮ್‌ಪ್ರಕಾಶ್‌, ಡಾ. ಪೂಜಾರಿ ಹಾಗೂ ಡಾ. ಸೌಮ್ಯ ನಾರಾಯಣ್‌ ಇದ್ದಾರೆ.

ಸಾಮಾನ್ಯ ಲಕ್ಷಣಗಳು
ಲಿವರ್ ಕ್ಯಾನ್ಸರ್‌ ಲಕ್ಷಣಗಳು ಆರಂಭದಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಶೇ. 25ರಷ್ಟು ರೋಗ ಉಲ್ಬಣಿಸಿದಾಗ ಈ ಕೆಳಕಂಡ ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ.
* ಹೊಟ್ಟೆಯ ಬಲ ಭಾಗದಲ್ಲಿ ನೋವು ಕಾಣಿಸುವುದು (ಲಿವರ್ ಇರುವ ಜಾಗದಲ್ಲಿ)
* ಆಹಾರ ಸೇರದೆ ಇರುವುದು
* ತೂಕ ಕಡಿಮೆಯಾಗುವುದು
* ದೇಹ ದುರ್ಬಲವಾಗುವುದು
* ಜೀರ್ಣಶಕ್ತಿ ಕುಂದುವುದು
* ತೀವ್ರ ರೀತಿಯ ಜಾಂಡೀಸ್

ಪಿತ್ತಜನಕಾಂಗ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು
ಒಂದು ಲಕ್ಷ ಜನಸಂಖ್ಯೆಯಲ್ಲಿ 20ರಿಂದ 30 ಜನರಿಗೆ ಮಾತ್ರ ಲಿವರ್ ಕಾನ್ಸರ್ ಕಾಣಿಸಿಕೊಳ್ಳುತ್ತದೆ. ಲಿವರ್ ಕ್ಯಾನ್ಸರ್ ಪ್ರಮುಖವಾಗಿ ಎರಡು ಮುಖ್ಯ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ.  ಮದ್ಯಪಾನ ಮಾಡುವುದರಿಂದ ಲಿವರ್‌ಗೆ ಹಾನಿಯಾಗಿ ಕ್ಯಾನ್ಸರ್ ಕಾಣಿಸಿ ಕೊಳ್ಳುವುದು ಒಂದು ಬಗೆ. ಎರಡನೆಯದು, ವೈರಸ್ ಮೂಲಕ ತಗಲುತ್ತದೆ. ‘ಹೆಪಟೈಟಿಸ್ ಬಿ’ ಮತ್ತು ‘ಸಿ’ ವೈರಸ್ ಮೂಲಕ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ ಈ ಸೋಂಕುಗಳಿರುವ ಎಲ್ಲರೂ ಕ್ಯಾನ್ಸರ್‌ಗೆ ಒಳಗಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.  ಕೆಲವೊಮ್ಮೆ ಬೊಜ್ಜು, ಮಧುಮೇಹ ಸಹ ಈ ಅಪಾಯವನ್ನು ಅಧಿಕಗೊಳಿಸುತ್ತದೆ.
ಚಿಕ್ಕ ಮಕ್ಕಳಲ್ಲೂ ಲಿವರ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.  ಅನಿಯಮಿತವಾದ ಕಲುಷಿತ ಆಹಾರ ಸೇವನೆಯೇ ಇದಕ್ಕೆ ಕಾರಣ. ಆದರೆ, ಈ ರೀತಿಯಾಗಿ ಕ್ಯಾನ್ಸರ್ ಹರಡುವುದು ತೀರ ವಿರಳ ಎಂದು ವೈದ್ಯರು ಹೇಳುತ್ತಾರೆ.

ಮಾಹಿತಿಗೆ: 9538305123

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT