ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ತನಗಾಗಿ...

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ನಮಗೆ ತಿಳಿಸಬೇಕಾದ್ದನ್ನು ತಿಳಿಸದೆಯೇ, ಯಾವುದೂ ಎಂದಿಗೂ ಮರೆಯಾಗದು’
- ಪ್ರೇಮಾ ಚೊಡ್ರಾನ್
ಬದಲಾವಣೆ
ಹಾಗೆಂದರೇನು?
ಮಾರ್ಪಾಡು, ವ್ಯತ್ಯಾಸ, ವಿಭಿನ್ನವಾಗಿರುವುದು.

ಹಾಗಾದರೆ ಸ್ತ್ರೀ ಬದಲಾಗಿದ್ದಾಳೆಯೇ? ಎಲ್ಲರೂ ಹಾಗೆನ್ನುತ್ತಾರೆ. ಉದ್ದಲಂಗ ದಾವಣಿ, ಸೀರೆಗಳಲ್ಲಿ ನೋಡಲು ಸಿಗುತ್ತಿದ್ದವಳು ಈಗ ಆಧುನಿಕ ಉಡುಗೆ–ತೊಡುಗೆ - ಪಲಾಜೊ, ಕುರ್ತಿ, ಲೆಗ್ಗಿಂಗ್ಸ್, ಟಾಪ್‌ಗಳಲ್ಲಿ ಸುಳಿದಾಡುತ್ತಿದ್ದಾಳೆ. ಒಲೆಯ ಮುಂದೆ ಊದುಕೊಳವೆ, ಹಿಟ್ಟು ತರಕಾರಿ ನಡುವೆ ಅಥವಾ ಕೆರೆ ಬಾವಿಗಳ ಬಳಿ ಖಾಲಿ ಕೊಡಗಳೊಂದಿಗೆ ದಿನವಿಡೀ ಕಳೆಯುತ್ತಿದ್ದವಳು ಕಂಪ್ಯೂಟರ್ ಮುಂದೆ ಅಥವಾ ಕರಿ-ಬಿಳಿ ಕೋಟುಗಳಲ್ಲಿ ವ್ಯವಹರಿಸುತ್ತಿದ್ದಾಳೆ. ಪಕ್ಕದ ಮನೆಯ ಗೆಳತಿಯನ್ನು ಭೇಟಿಯಾಗಲು ಅನುಮತಿಗಾಗಿ ಕಾಯುತ್ತಿದ್ದವಳು, ತಂದೆ ತಾಯಿಯ ಆಯ್ಕೆಯ ವರನಿಗೆ ಕೊರಳೊಡ್ಡುತ್ತಿದ್ದವಳು ಸಾಮಾಜಿಕ ಜಾಲತಾಣಗಳ ಸ್ನೇಹಿತರೊಂದಿಗೆ ದಿನವಿಡೀ ಮಗ್ನಳು,  ಮದುವೆಯನ್ನು ಜೀವನದ ‘ಒಂದು’ ಹಂತವಾಗಿ ಕಾಣುತ್ತಿದ್ದಾಳೆ. ಗಂಡನನ್ನು ಹೊರತುಪಡಿಸಿ ಎಲ್ಲ ಪುರುಷರೊಂದಿಗೆ ಒಂದು ಮಟ್ಟಿನ ಅಂತರ ಉದ್ದೇಶಪೂರ್ವಕವಾಗಿ ಕಾಯ್ದಿರಿಸಿಕೊಳ್ಳುತ್ತಿದ್ದವಳು ಅವರೊಂದಿಗೆ ವೃತ್ತಿ, ಮೈತ್ರಿ, ಚರ್ಚೆಯ ಪರಿಧಿಗೆ ಸರಿದಿದ್ದಾಳೆ. ಇದೇನಾ? ಅವಳಲ್ಲಾಗಿರುವ ಬದಲಾವಣೆ?

‘ನಿನ್ನೆ ಚತುರನಾಗಿದ್ದೆ, ಪ್ರಪಂಚವನ್ನು ಮಾರ್ಪಾಟು ಮಾಡಬೇಕೆನಿಸಿತ್ತು, ಇಂದು ವಿವೇಕವಿದೆ, ನನ್ನನ್ನೇ ಬದಲಾಯಿಸಿಕೊಳ್ಳುತ್ತಿರುವೆ’. ಇದು ಸೂಫಿಸಂತ ರೂಮಿಯ ಮಾತು.

ಶಾಲಾಶಿಕ್ಷಕಿಯೊಬ್ಬರು ಕಾರ್ಯಾಗಾರವೊಂದರಲ್ಲಿ ತಮ್ಮ ಅಳಲನ್ನು ಹಂಚಿಕೊಳ್ಳುತ್ತಿದ್ದರು: ‘ಪ್ರತಿದಿನ ಕೆಲಸಕ್ಕೆ ಹೊರಡಬೇಕೆಂದರೆ, ಅಡುಗೆ, ತಿಂಡಿ ಡಬ್ಬಿ ಕಟ್ಟುವುದು, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಕಸಗುಡಿಸು, ಒರೆಸು... ತಡವಾಗಿಬಿಡುತ್ತದೆ, ಮನೆಯವರ್‍ಯಾರೂ ಒಂದು ಕೆಲಸ ಮಾಡೋದಿಲ್ಲ.’ ನೌಕರಿಗೆ ಹೋಗುವ ಪ್ರತಿ ಮನೆಯಲ್ಲೂ ಕಾಣಸಿಗುವ ತೀರಾ ಸಾಮಾನ್ಯವಾದ ಚಿತ್ರಣವಿದು.

‘ಶಿಕ್ಷಕಿಯಾಗಿ ಮಕ್ಕಳಿಗೆ ಪಠ್ಯವಿಷಯಗಳನ್ನು ಆಸಕ್ತಿದಾಯಕವಾಗಿ ಹೇಳಬೇಕೆಂದಾಸೆ, ಹೊಸ ಹೊಸ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸುವಾಸೆ; ಆದರೆ ಮನೆಯ ಸದಸ್ಯರ ಸಹಾಯವಿಲ್ಲ’. ‘ಯಾವ ರೀತಿಯ ಸಹಾಯವನ್ನು ನೀವು ಮನೆಯ ಸದಸ್ಯರಿಂದ ಬಯಸುತ್ತೀರಿ’ ಎಂಬ ಪ್ರಶ್ನೆಗೆ ‘ತಮ್ಮ ಕೆಲಸ ತಾವು ಮಾಡಿಕೊಳ್ಳುವುದಿಲ್ಲ, ಕಾಲುಚೀಲ, ಗಾಡಿಯ ಚಾವಿ, ಬಾಚಣಿಕೆ ಎಲ್ಲ ಕೈಗೇ ಕೊಡಬೇಕು. ಎಷ್ಟು ಹೇಳಿದರೂ ಯಾವುದೇ ಬದಲಾವಣೆ ಸಾಧ್ಯವಾಗಿಲ್ಲ.’

ಅವಳಿಗೆ ತನ್ನದೇ ಆಸೆಗಳಿವೆ, ನಿರೀಕ್ಷೆಗಳಿವೆ, ಕನಸುಗಳಿವೆ. ಆದರೆ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾಳೆ ಮನೆಯವರಿಂದ! ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡು, ಮನೆಯವರೆಲ್ಲರೂ ಸಂತೋಷದಿಂದಿದ್ದರೆ ಸಾಕು ಎಂದು ತನ್ನ ಪ್ರತಿಭೆ, ಅವಕಾಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಅನಾದರ ತೋರುತ್ತಿದ್ದಾಳೆ. ತ್ಯಾಗಮಯಿ, ಉದಾರಿ, ಕರುಣಾಮಯಿ, ಮೃದು, ಗಂಭೀರೆ – ಈ ಬಿರುದುಗಳ ಭಾರದಿಂದ ಹೊರಬಂದು ತನಗಾಗಿ ತನ್ನೊಳಗಿನ ಕನಸಿಗಾಗಿ, ನಿಷ್ಠುರಿ, ಸ್ವಾರ್ಥಿ ಎನಿಸಿಕೊಳ್ಳುವುದು ಸಾಧ್ಯವೆ? ಅವಳ ಸಹಾಯಕ್ಕೆ, ದುಡಿಮೆಗೆ, ಪ್ರತಿಭೆಗೆ, ಅವಕಾಶಕ್ಕೆ ಅವಳಲ್ಲದೆ ಇನ್ನಾರು ಜೊತೆಯಾದಾರು? ಅವಳು ಅಡುಗೆ ಮಾಡದಿದ್ದರೆ ಮನೆಯವರು ಉಪವಾಸವಿರುವರೆ? ಗಾಡಿಯ ಚಾವಿ ಅವಳು ತರದಿದ್ದರೆ ಪತಿ ನೌಕರಿಗೆ ಹೋಗುವುದಿಲ್ಲವೆ?

ಜೆನ್ ಕಥೆಯೊಂದಿದೆ. ಜೆನ್ ಗುರುವೊಬ್ಬನ ಬಳಿ ಚಹಾದ ಕಪ್ಪೊಂದಿತ್ತು, ಬಹಳ ಮುತುವರ್ಜಿಯಿಂದ ಅದನ್ನು ಬಳಸುತ್ತಿದ್ದ. ಗುರುವಿನ ಅನುಪಸ್ಥಿತಿಯಲ್ಲಿ ಅದನ್ನು ಕೈಗೆತ್ತಿಕೊಂಡಿದ್ದ ಶಿಷ್ಯನೊಬ್ಬನ ಕೈಯಿಂದ ಜಾರಿಬಿದ್ದು ಅದು ಒಡೆದುಹೋಯಿತು. ಶಿಷ್ಯ ಗಾಬರಿಯಾದ. ಹೆಜ್ಜೆ ಸಪ್ಪಳ ಕೇಳಿ ಮುರಿದ ತುಂಡುಗಳನ್ನು ಹಿಡಿದಿದ್ದ ಕೈಯನ್ನು ಬೆನ್ನ ಹಿಂದಿರಿಸಿ, ನಿಂತಿದ್ದ ಗುರುವನ್ನು ಕೇಳಿದ ‘ಮನುಷ್ಯರೇಕೆ ಸಾಯಬೇಕು?’ ಗುರು ಹೇಳುತ್ತಾನೆ: ‘ಅದು ಸಹಜ, ಪ್ರತಿಯೊಂದೂ ಕೊನೆಗೊಳ್ಳಲೇಬೇಕು’. ಮುರಿದ ಚಹಾ ಕಪ್ಪಿನ ತುಂಡುಗಳನ್ನು ಮುಂದಿರಿಸಿ ಶಿಷ್ಯ ಹೇಳುತ್ತಾನೆ: ‘ಬಹುಶಃ, ಇದು ನಿಮ್ಮ ಕಪ್ಪಿನ ಅಂತಿಮ ಸಮಯವಾಗಿತ್ತು’.

ಅವಳೆಲ್ಲ ಕಾಳಜಿ, ಸಮಯ, ನಿಷ್ಠೆಯನ್ನು ಪರಿವಾರದ ಒಳಿತಿಗಾಗಿ ವಿನಿಯೋಗಿಸುತ್ತಾ, ಅದೇ ನಿತ್ಯ-ಸತ್ಯ ಎಂದು ಜೋತುಬಿದ್ದರೆ,  ಹೊಸತನದ  ಆಗಮನ ಸಪ್ಪಳ ಮಾಡದೇ ಸರಿದು ಹೋದೀತು.

ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವನೊಣಗುವ ಮರನ
ನೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ?

ನೀರನ್ನು ಕಂಡಲ್ಲಿ ಮುಳುಗುವುದು, ಮರ ಕಂಡಲ್ಲಿ ಸುತ್ತುವುದು, ಮತ್ತೆ ಮತ್ತೆ ಮುಳುಗಿ, ಮತ್ತೆ ಮತ್ತೆ ಸುತ್ತಿ ಅದರಾಚೆಗಿರುವ ಇನ್ನೇನನ್ನೂ ಮೆಚ್ಚದಿರುವ ಜಡತ್ವವನ್ನು ಆವರಿಸಿಕೊಂಡುಬಿಟ್ಟಿದೆ. ಮುಳುಗುವಿಕೆ ಮತ್ತು ಸುತ್ತುವಿಕೆಗಳ ಯಾಂತ್ರಿಕತೆಗಳಿಂದ ದೂರವಾದ ಒಂದು ಸಂವೇದನೆ, ಸೂಕ್ಷ್ಮತೆಗೆ ಮೇಲಿನ ವಚನ ತಂದು ನಿಲ್ಲಿಸುತ್ತದೆ. ಮುಳುಗುವ, ಸುತ್ತುವ ಕ್ರಿಯಯನ್ನು ಗುಂಪಾಗಿ ಆಚರಿಸಲು ಸಾಧ್ಯ, ಆದರೆ ಮೇಲೆತ್ತುವ ಅರಿವು ತನ್ನತನದ ಏಕಾಂತವನ್ನು ಬಯಸುತ್ತದೆ ಎನ್ನುತ್ತಾರೆ, ವಿಮರ್ಶಕ–ಚಿಂತಕ ಡಾ. ಎಚ್.ಎನ್. ಮುರಳೀಧರ.

ಮಕ್ಕಳು ವಿದ್ಯಾಭ್ಯಾಸದ ಪ್ರಮುಖ ಘಟ್ಟಗಳಾದ 10ನೇ ತರಗತಿ, ಎರಡನೇ ಪಿಯುಸಿ, ಪದವಿಯ ಕೊನೆಯ ವರ್ಷದಲ್ಲಿದ್ದಾಗ ತಾಯಂದಿರು ತಾವೇ ಓದಿ ಪರೀಕ್ಷೆ ಬರೆಯುವ ಮಟ್ಟಿನ ಆತಂಕವನ್ನು ಅನುಭವಿಸುತ್ತಾರೆ. ಆ ಘಟ್ಟ ದಾಟಿದ ನಂತರ ಮುಂದೇನು? ಮಕ್ಕಳು ಮುಂದಿನ ಓದಿಗೋ, ನೌಕರಿಗೋ ತಮ್ಮನ್ನು ತಾವು ತೆರೆದುಕೊಂಡು ಮುಂದುವರೆಯುತ್ತಾರೆ. ತಾಯಿ? ಮಕ್ಕಳ ಬಗೆಗಿನ ಕಾಳಜಿಯೊಂದಿಗೆ ಈ ಮುಂದಾಲೋಚನೇಯೂ ಅಗತ್ಯ. ಮಕ್ಕಳ ಬೆಳವಣಿಗೆಯೊಂದಿಗೆ ತನ್ನನ್ನು ಬರಿದಾಗಿಸುವ ಹಂತದ ಮುನ್ಸೂಚನೆಯನ್ನು ಗ್ರಹಿಸಿ ಜಿನುಗುವ ತನ್ನ ಆಸಕ್ತಿಯ ಸೆಲೆಯ ಜೀವಂತಿಕೆಯ ತೇವದಿಂದ ಪ್ರತಿಭೆಯನ್ನು ಚಿಗುರಾಗಿಸಿ, ಗಿಡ, ಮರವಾಗಿಸಿ ಫಲವಾಗಿಸುವುದು ಅವಳ ಕೈಯಲ್ಲೇ ಇದೆ.

ಮಕ್ಕಳೊಂದಿಗೆ ಪರೀಕ್ಷೆಗಳಲ್ಲಿ ಜೊತೆಯಾಗುತ್ತಲೇ ಯೋಗ, ಮಣಿಗಳು-ಟೆರ್ರಾಕೋಟ ಆಭರಣ ತಯಾರಿಕೆ, ಕಸೂತಿ, ಟೈಲರಿಂಗ್ ನಂತಹ ಸಾಂಪ್ರದಾಯಿಕ ತರಬೇತಿಯಿಂದಲೇ ತಮ್ಮನ್ನು ತಾವು ಗುರುತಿಸಿಕೊಂಡ ಅಮ್ಮಂದಿರು ಈ ನಿಟ್ಟಿನಲ್ಲಿ ಮಾದರಿಯಾಗುತ್ತಾರೆ.

ಜಯಂತ ಕಾಯ್ಕಿಣಿಯವರು ತಮ್ಮ ಕವಿತೆಯೊಂದರಲ್ಲಿ ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಹಾಡಿದೆ, ಹೇಳುವುದು ಏನೊ ಉಳಿದು ಹೋಗಿದೆ’. ಎಂದಿದ್ದಾರೆ. ಎಲ್ಲ ಕರ್ತವ್ಯ ಮುಗಿದ ನಂತರವೂ ತನ್ನಲ್ಲೇ ಮಾರ್ಪಾಟು ಕಾಣುವ ಅನಿವಾರ್ಯತೆಗೆ ಮುಕ್ತವಾಗಿ ತೆರೆದುಕೊಂಡು, ಆಶಾಭಾವದ ಮೆಲುದನಿಯನ್ನು  ಹಾಡಾಗಿಸಿ ತನಗಾಗೇ ಬದುಕುವ ಕವಿತೆಯನ್ನು ಸ್ತ್ರೀ ಬರೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT