ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ವರದಾನ ‘ಎಗ್‌ ಫ್ರೀಜಿಂಗ್’

Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಮಾಜಿ ವಿಶ್ವಸುಂದರಿ ಡಯಾನಾ ಹೇಡನ್ ಇತ್ತೀಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದು ಬಾರಿ ಸುದ್ದಿಯಾಗಿತ್ತು. ಅದು ಸುದ್ದಿಯಾಗಲು ಮುಖ್ಯ ಕಾರಣ, ಎಂಟು ವರ್ಷದ ಹಿಂದೆ ‘ಎಗ್ ಫ್ರೀಜಿಂಗ್’  ಮೂಲಕ ಸಂಗ್ರಹಿಸಿಟ್ಟಿದ್ದ ಅಂಡಾಣು ವಿನಿಂದ ಡಯಾನಾ ತಾಯಿಯಾಗಿದ್ದು. ಇದರೊಂದಿಗೆ ಇತ್ತೀಚೆಗೆ ಆ್ಯಪಲ್ ಕಂಪೆನಿ, ಎಗ್‌ಫ್ರೀಜಿಂಗ್‌ಗೆ ಒಳಗಾಗುವ ಮಹಿಳಾ ನೌಕರರಿಗೆ ತಾವೇ ವೆಚ್ಚ ಭರಿಸುವುದಾಗಿಯೂ ಘೋಷಿಸಿತ್ತು.

ಈಗ ಸದ್ಯ ಪ್ರಚಲಿತದಲ್ಲಿರುವ ಸುದ್ದಿ ‘ಎಗ್‌ ಫ್ರೀಜಿಂಗ್’. ಅಂದರೆ ಅಂಡಾಣು ಸಂರಕ್ಷಣೆ. ಊಸೈಟ್ ಕ್ರಿಯೊಪ್ರಿಸರ್ವೇಶನ್ ಎಂದು ಇದನ್ನು ಕರೆಯುತ್ತಾರೆ. ಅಂಡಾಣುವನ್ನು ಹೊರತೆಗೆದು, ಶೈತ್ಯೀಕರಿಸಿ ವೈದ್ಯಕೀಯ ಲ್ಯಾಬ್‌ನಲ್ಲಿ ಸಂಗ್ರಹಿಸುವ ಪ್ರಕ್ರಿಯೆಯೇ ‘ಎಗ್ ಫ್ರೀಜಿಂಗ್’.
ಈ ಅಂಡಾಣುಗಳನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಪಿಡಬಹುದು. ಅಗತ್ಯ ಬಂದಾಗ ಅದನ್ನು ಬಳಸಿಕೊಂಡು ಗರ್ಭ ಧರಿಸಬಹುದು. ಈ ಅಂಡಾಣುವನ್ನು  ಗರ್ಭಕೋಶಕ್ಕೆ ಸೇರಿಸುವ ಮೂಲಕ  ಗರ್ಭಧಾರಣೆ ಸಾಧ್ಯವಾಗಿಸಬಹುದು.

ಅಂಡಾಣು ಸಂರಕ್ಷಣೆ ಹೊಸ ಪರಿಕಲ್ಪನೆಯೇನಲ್ಲ. 1950ರಲ್ಲೇ ವೀರ್ಯ ಶೇಖರಣೆ ವಿಧಾನ ಪ್ರಯೋಗಕ್ಕೆ ಬಂದಿತ್ತು. ಅದಾದ ಮೂವತ್ತು ವರ್ಷಗಳ ನಂತರ, ಅಂದರೆ 1980ರ ಅವಧಿಯಲ್ಲಿ ಅಂಡಾಣು ಕಾಪಿಡುವ ಹೊಸ ಸಾಧ್ಯತೆಗಳು ತಿಳಿದುಬಂದವು. ವಿಶ್ವದ ಹಲವು ಫರ್ಟಿಲಿಟಿ ಕೇಂದ್ರಗಳಲ್ಲಿ ವೀರ್ಯ ಮತ್ತು ಅಂಡಾಣು ಶೈತ್ಯಲೀಕರಣ ಯಶಸ್ವಿಗೊಂಡ ಉದಾಹರಣೆಗಳು ದೊರೆಯುತ್ತವೆ. 

ಅಂಡಾಣು ಸಂರಕ್ಷಣೆ ಕುರಿತು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ...

* ‘ಅಂಡಾಣು ಸಂಗ್ರಹಣೆ’ ಯಾರಿಗೆ ಸೂಕ್ತ?
ಹಲವು ಕಾರಣಗಳಿಗೆ ಎಗ್‌ ಫ್ರೀಜಿಂಗ್ ಬಹೂಪಯೋಗಿ ಆಗುತ್ತದೆ. ಭವಿಷ್ಯದಲ್ಲಿ  ಮಗುವನ್ನು ಪಡೆಯಲು ತಮ್ಮ ಅಂಡಾಣುವನ್ನು ಕಾಪಿಡಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಆಯ್ಕೆಯಾಗಬಲ್ಲದು. ಮಗು ಪಡೆಯುವ ನಿರ್ಧಾರವನ್ನು ಶಿಕ್ಷಣ, ವೃತ್ತಿ ಅಥವಾ ಕೆಲವು ವೈಯಕ್ತಿಕ ಉದ್ದೇಶಗಳ ಕಾರಣದಿಂದಾಗಿ ಮುಂದೂಡಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ವಯಸ್ಸಾಗುತ್ತಿದ್ದಂತೆ ಗುಣಮಟ್ಟದ ಅಂಡಾಣುಗಳ ಉತ್ಪತ್ತಿ ಹಾಗೂ ಪ್ರಮಾಣ ಕ್ಷೀಣಿಸುತ್ತಾ ಹೋಗುವುದರಿಂದ  ಮುನ್ನವೇ ಅಂಡಾಣುವನ್ನು ಶೇಖರಿಸಿ, ಸಂರಕ್ಷಿಸಿಟ್ಟು, ಸಮಯ ಬಂದಾಗ ಗರ್ಭಧಾರಣೆಗೆ ಒಳಗಾಗಬಹುದು. ವಯಸ್ಸಾಗುತ್ತಿದ್ದಂತೆ ಅಂಡಾಣುವಿನ ಗುಣಮಟ್ಟ ಕ್ಷೀಣಿಸಿದರೂ 40–50 ವಯಸ್ಸಿನಲ್ಲಿನೂ ಗರ್ಭಕೋಶ ಗರ್ಭ ಧಾರಣೆಗೆ ಸಮರ್ಥವಾಗಿರುತ್ತದೆ. ಆದ್ದರಿಂದ ಅಂಡಾಣುವನ್ನು ಬಳಸಿ ಗರ್ಭಧಾರಣೆ ಸಾಧ್ಯವಾಗಿಸಬಹುದು. ಕಾಲದೊಂದಿಗೆ ಅಂಡಾಣುವಿನ ಗುಣಮಟ್ಟವೂ ನಶಿಸುವುದನ್ನು ತಡೆಯಬಹುದು.

ಕ್ಯಾನ್ಸರ್‌ಗೆ ಒಳಗಾದ ಮಹಿಳೆಗೂ ಇದು ಅನುಕೂಲ. ಕೀಮೋಥೆರಪಿ, ಶಸ್ತ್ರಚಿಕಿತ್ಸೆ ಹಾಗೂ ರೇಡಿಯೇಷನ್‌ಗೆ ಒಳಗಾಗುವ ಮುನ್ನ ತನ್ನ ಅಂಡಾಣುವನ್ನು  ಕಾಪಿಟ್ಟು  ಮುಂದೆ ತಾಯಿ ಯಾಗಬಹುದು. ಕ್ಯಾನ್ಸರ್ ಚಿಕಿತ್ಸೆ ನಂತರವೂ ಬಲಿಷ್ಠ ಅಂಡಾಣುಗಳು ದೊರೆತ ಸಾಕಷ್ಟು ಪ್ರಕರಣಗಳೂ ಇವೆ.

ತುಂಬ ಬೇಗನೆ ಮೆನೋಪಾಸ್‌ಗೆ ಒಳಗಾಗುವ ಮಹಿಳೆಯರೂ ಈ ವಿಧಾನದಿಂದ ಪ್ರಯೋಜನ ಪಡೆಯಬಹುದು.

* ಅಂಡಾಣು ಶೇಖರಣೆ ಯಾವಾಗ ಸಾಧ್ಯ?
ಎಗ್‌ಫ್ರೀಜಿಂಗ್ ಪ್ರಕ್ರಿಯೆಗೆ ಒಳಗಾಗಲು ಬಯಸುವ ಮಹಿಳೆಯು, 35 ವರ್ಷ ಆಗುವ ಒಳಗೆ ಸಂರಕ್ಷಿಸಿಟ್ಟುಕೊಂಡರೆ ಉತ್ತಮ. 30 ವಯಸ್ಸು ಮತ್ತೂ ಸೂಕ್ತ. ಕಾಲ ಕಳೆದಂತೆ, ಅಂಡಾಣುವಿನ ಸಂಖ್ಯೆಯಲ್ಲಿ ಇಳಿಮುಖ ಗೊಳ್ಳುತ್ತದೆ. ಈ ಇಳಿಕೆಯೇ ವಯಸ್ಸಾಗುತ್ತಿದ್ದಂತೆ ತಾಯಿ ಆಗುವ ಸಾಧ್ಯತೆ ಕ್ಷೀಣಿಸಲೂ ಕಾರಣ. ಆದ್ದರಿಂದ ವಯಸ್ಸಾಗುವ ಮುನ್ನವೇ ಈ ರೀತಿ ಅಂಡಾಣು ಕಾಪಿಟ್ಟುಕೊಳ್ಳುವ ಪ್ರಕ್ರಿಯೆ ಬಹು ಪ್ರಯೋಜನಕಾರಿ.

* ಯಾವಾಗ ಎಗ್‌ಫ್ರೀಜಿಂಗ್ ಸಹಕಾರಿ?
ಜೀವನದ ಕೆಲವು ಪರಿಸ್ಥಿತಿಗಳು ಎಗ್‌ಫ್ರೀಜಿಂಗ್‌ ಆಯ್ಕೆಯನ್ನು ಮುಂದಿಡ ಬಹುದು. ಕೆಲವು ಮಹಿಳೆಯರಿಗೆ,  ಈ ರೀತಿ ಅಂಡಾಣು ಶೇಖರಣೆ ಮಾಡಿಟ್ಟಿದ್ದೇವೆ ಎಂಬ ವಿಷಯ ನೆಮ್ಮದಿಯ ಜೀವನವನ್ನು ನೀಡುತ್ತದೆ. ಮುಂದೆ ಉತ್ತಮ ಜೀವನಸಂಗಾತಿ ಸಿಗುವವರೆಗೂ ಯಾವುದೇ ಚಿಂತೆ ಇರದೇ ಶಾಂತ ವಾಗಿರಲು ಸಹಕಾರಿ. ಜೊತೆಗೆ ನೆಮ್ಮದಿಯಾಗಿ ತಮ್ಮ ಗುರಿಯನ್ನು ಸಾಧಿಸಬಹುದು.

ಮುಂದೆ ಮಗು ಬೇಕೆಂದು ಅನ್ನಿಸಿಯೂ ದೇಹ ಅದಕ್ಕೆ ಸ್ಪಂದಿಸದೇ ಇದ್ದಾಗ ಕೊರಗುವ ಬದಲು ಇದು ಉತ್ತಮ ದಾರಿ ಎನ್ನಿಸಿದೆ.

* ಎಗ್ ಫ್ರೀಜಿಂಗ್ ಸಾಧ್ಯವಾಗುವುದು ಹೇಗೆ?
ವೆಟ್ರಿಫಿಕೇಶನ್ ತಂತ್ರದಿಂದ  ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ಅಂಡಾಣುವನ್ನು ಕಾಪಿಡುವ ಸಾಮರ್ಥ್ಯವನ್ನು ಗಟ್ಟಿಗೊಳಿಸುವುದು ಇದೇ. ಅಂಡಾಣುವನ್ನು ಶೈತ್ಯೀಕರಿಸಿದಾಗ, ಅದರ ನೀರಿನ ಕಣಗಳು ಹಿಮದ ಹರಳುಗಳಾಗುತ್ತವೆ. ಅಂಡಾಣುವಿನ ಗುಣಲಕ್ಷಣಕ್ಕೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ. ಬೇಕೆಂದಾಗ ಗರ್ಭ ಧರಿಸಲು ಮುಂದಾದಾಗ ಅವೇ ಗುಣಲಕ್ಷಣಗಳೊಂದಿಗೆ ಗರ್ಭ ಧಾರಣೆಗೆ ನೆರವಾಗುತ್ತವೆ. ಸ್ಲೋಫ್ರೀಜಿಂಗ್ ಹಾಗೂ ವೆಟ್ರಿಫಿಕೇಷನ್ ಎಂಬ ಎರಡು ವಿಧಾನಗಳನ್ನು ಅನುಸರಿಸಲಾಗುತ್ತದೆ.

* ಎಗ್ ಫ್ರೀಜಿಂಗ್ ಪ್ರಕ್ರಿಯೆ ಬಗ್ಗೆ...
ಅಂಡಾಣುವನ್ನು ಶೈತ್ಯಲೀಕರಣಕ್ಕೆ ಒಳಪಡಿಸಲು ಮಹಿಳೆಯು ಹಾರ್ಮೋನು ಇಂಜೆಕ್ಷನ್ ಅನ್ನು ತೆಗೆದುಕೊಳ್ಳಬೇಕು. ಅಂಡಾಣು ಶೇಖರಣೆ ನಂತರ, ಮಹಿಳೆ  ಬಯಸುವವರೆಗೂ ಅದನ್ನು ಶೈತ್ಯಲೀಕರಣ ಸ್ಥಿತಿಯಲ್ಲೇ ಕಾಪಿಡಲಾಗುತ್ತದೆ.

* ಎಷ್ಟು ಅವಧಿ ಕರಗದೇ ಉಳಿಯಬಲ್ಲದು?
ಇದುವರೆಗೂ ಶೈತ್ಯಲೀಕರಣಗೊಂಡ ಅಂಡಾಣು ಎಂದು ದಾಖಲಾಗಿರುವುದು 13 ವರ್ಷಗಳ ಅವಧಿ. ಹೆಚ್ಚು ವರ್ಷ ಇಟ್ಟರೆ ಗುಣಮಟ್ಟ ಕಳೆದುಕೊಳ್ಳುತ್ತದೆ ಎನ್ನುವಂತೇನೂ ಇಲ್ಲ.

* ಭವಿಷ್ಯದಲ್ಲಿ ಗರ್ಭ ಧರಿಸಲು ಎಷ್ಟು ಪ್ರಮಾಣದ ಅಂಡಾಣು ಶೇಖರಿಸಬೇಕು?  38 ವಯಸ್ಸಾದರೆ ಏನು ಮಾಡಬಹುದು?
6–8 ಅಂಡಾಣು ಗರ್ಭಧಾರಣೆಗೆ ಅವಶ್ಯ. 38 ವಯಸ್ಸಿನ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರು ಒಂದು ಆವೃತ್ತಿಗೆ 10–15 ಅಂಡಾಣುವನ್ನು ಕಾಪಿಟ್ಟುಕೊಳ್ಳಲು ಸಲಹೆ ನೀಡಲಾಗುತ್ತದೆ. 

ಮಹಿಳೆಯು ಯಾವಾಗ ತನ್ನ ಅಂಡಾಣುವನ್ನು ಶೈತ್ಯೀಕರಿಸಲು ಬಯಸು ತ್ತಾಳೋ, ಆಗಿನಿಂದ ಗರ್ಭಧಾರಣೆಯ ಸಾಧ್ಯತೆ ಕುರಿತು ತಿಳಿದುಕೊಳ್ಳಬಹುದು. ಆದರೆ ಅದನ್ನು ಬಳಸುವ ಸಂದರ್ಭದಲ್ಲಿ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ.

* ಎಗ್‌ ಫ್ರೀಜಿಂಗ್ ಸುರಕ್ಷಿತವೇ?
ಇದುವರೆಗೂ ಸುಮಾರು 5000 ಮಕ್ಕಳು ಈ ಎಗ್ ಫ್ರೀಜಿಂಗ್ ಪ್ರಕ್ರಿಯೆಯಿಂದ ಜನಿಸಿದ್ದಾರೆ. ಹೀಗೆ ಜನಿಸಿದ 900 ಮಕ್ಕಳ ಕುರಿತು ಅಧ್ಯಯನ ನಡೆದಿದ್ದು, ಸಾಮಾನ್ಯ ಮಕ್ಕಳಿಗೂ ಈ ಮಕ್ಕಳಿಗೂ ಯಾವುದೇ ವ್ಯತ್ಯಾಸವಿಲ್ಲ,  ಯಾವುದೇ ನ್ಯೂನತೆಯೂ ಕಂಡುಬಂದಿಲ್ಲ. 2014ರಲ್ಲಿನ ಅಧ್ಯಯನವೊಂದು, ಈ ಎಗ್‌ಫ್ರೀಜಿಂಗ್ ನಂತರ ಗರ್ಭಧಾರಣೆಯ ಹಲವು ತೊಡಕು, ಗೊಂದಲಗಳು ಕಡಿಮೆಯಾಗಿರುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT