ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೋಮ’, ಯಾರು ಹಿತವರು ನಿನಗೆ?

Last Updated 6 ಮೇ 2017, 4:53 IST
ಅಕ್ಷರ ಗಾತ್ರ

ಒಂದು ಉದ್ದೇಶವನ್ನು ಸಾಧಿಸಹೊರಟ ಒಂದು ಕಾನೂನು ಹೇಗೆ ತನ್ನ ಉದ್ದೇಶಕ್ಕೆ ತದ್ವಿರುದ್ಧವಾದುದನ್ನು ಮಾಡಿ  ಪರ್ಯವಸಾನ ಹೊಂದಬಹುದು ಎನ್ನುವುದಕ್ಕೆ ಅರ್ಥಶಾಸ್ತ್ರಜ್ಞ ನರೇಂದ್ರ ಪಾಣಿ ಅವರು 1971ರ ಕರ್ನಾಟಕ ಭೂ ಸುಧಾರಣಾ ಕಾನೂನನ್ನೇ ಉದಾಹರಣೆಯಾಗಿ ನೀಡುತ್ತಾರೆ. ಜಮೀನುದಾರಿ ಪದ್ಧತಿಯನ್ನು ಕೊನೆಗೊಳಿಸಿ, ‘ಉಳುವವನಿಗೇ ಭೂಮಿ’ ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಹೊರಟ ಈ ಕಾನೂನು ಹೇಗೆ ದಕ್ಷಿಣ ಕರ್ನಾಟಕದಲ್ಲಿ ಜಮೀನುದಾರಿ ಪದ್ಧತಿಯನ್ನೇ ಬಲಪಡಿಸಿತು ಎಂಬುದನ್ನು ಅವರು ಸಾಕ್ಷ್ಯಾಧಾರಗಳ ಸಮೇತ ರುಜುವಾತುಪಡಿಸುತ್ತಾರೆ.

ಬಡ ದಲಿತನೊಬ್ಬ ತಾನೊಬ್ಬ ಸಣ್ಣ ರೈತನಾಗಿದ್ದನೆಂದೂ, ಆದರೆ ವ್ಯವಸಾಯ ಲಾಭದಾಯಕವಾಗಿಲ್ಲದಿದ್ದರಿಂದ ತನ್ನ ಭೂಮಿಯನ್ನು ಶ್ರೀಮಂತ ರೈತನೊಬ್ಬನಿಗೆ ಗೇಣಿಗೆ ಕೊಟ್ಟಿದ್ದನೆಂದೂ,  ಆದರೆ ಈ ಕಾನೂನಿನ ಅಡಿಯಲ್ಲಿ ಆತ ತನಗಿದ್ದ ಸ್ವಲ್ಪ ಭೂಮಿಯನ್ನೂ ಕಳೆದುಕೊಂಡನೆಂಬುದು ಅವರ ಗಮನಕ್ಕೆ ಬಂದುದು,  ಈ ಕಾನೂನಿನ ಬಗೆಗಿನ ಅವರ ಪುಸ್ತಕ ‘Reforms to Pre-Empt Change: Land Legislation in Karnataka’ ರಚಿಸಲು ಪ್ರೇರಣೆಯಾಗಿತ್ತು.

ಹಾಗೆಯೇ ಉಳುವವನಿಗೆ ಭೂಮಿಯ ಒಡೆತನ ಕೊಡಬೇಕಾಗಿದ್ದ ಅಧಿನಿಯಮ ಹೇಗೆ ಗೇಣಿದಾರರಿಗೆ ಭೂಮಿಯ ಒಡೆತನವನ್ನು ಕೊಡುವಲ್ಲಿ ಪರ್ಯವಸಾನ ಹೊಂದಿತು ಎಂದು ಸಮಾಜವಾದಿ ಜೆ.ಎಚ್.ಪಟೇಲರೂ ಒಂದು ಬಾರಿ ವಿಧಾನಸಭೆಯಲ್ಲಿ ವಿಶ್ಲೇಷಣೆ ಮಾಡಿದ್ದರು.

ಇಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿ ಹಕ್ಕನ್ನು ರಕ್ಷಿಸಹೊರಟಿರುವ 1978ರ ಕರ್ನಾಟಕ ಪರಿಶಿಷ್ಟ ಜಾತಿ  ಹಾಗೂ ಪರಿಶಿಷ್ಟ ಪಂಗಡ  (ಕೆಲವು ಭೂಮಿಗಳ ಪರಭಾರೆ ನಿಷೇಧ) ಕಾಯಿದೆ  (Karnataka Scheduled Castes and Scheduled Tribes (Prohibition of Transfer of Certain Lands) Act, 1978) ಇಂದು ಅವರಿಗೇ ಮುಳುವಾಗಿ ಇತರರಿಗೆ ಅನುಕೂಲ ಮಾಡಿಕೊಟ್ಟಿದೆ.

ಭೂಮಿ ಇಲ್ಲದ ಬಡವರಿಗೆ ವ್ಯವಸಾಯ ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ಭೂಮಿಯನ್ನು ಸರ್ಕಾರ ಮಂಜೂರು ಮಾಡುತ್ತದೆ. ಆದರೆ ವ್ಯವಸಾಯ ಮಾಡಲು ಸರ್ಕಾರದ ಒಡೆತನದಲ್ಲಿರುವ ಭೂಮಿಯನ್ನು ಬಯಸುವವರು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಗೆ ಅರ್ಜಿ ಕೊಡಬೇಕಾಗುತ್ತದೆ. ಯಾಕೆಂದರೆ   ಸಂಬಂಧಪಟ್ಟ ತಹಶೀಲ್ದಾರರ ಲಿಖಿತ ಅನುಮತಿ ಇಲ್ಲದೆ ಯಾರೂ ಸರ್ಕಾರಿ ಜಮೀನಿನಲ್ಲಿ ಪ್ರವೇಶ ಮಾಡುವಹಾಗಿಲ್ಲ ಎಂದು ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕರಣ 93 (1) ಘೋಷಿಸುತ್ತದೆ.



ಅದೇ ಅಧಿನಿಯಮದ ಪ್ರಕರಣ 94,  ಅಂತಹ ಅತಿಕ್ರಮಣಕಾರರ ಮೇಲೆ ದಂಡ ವಿಧಿಸಬಹುದು ಮತ್ತು ಜಿಲ್ಲಾಧಿಕಾರಿಯು ಅಂತಹ ಅತಿಕ್ರಮಣಕಾರರನ್ನು ಜಮೀನಿನಿಂದ ಹೊರದೂಡಬಹುದೆಂದೂ ಹೇಳುತ್ತದೆ. ಆದರೆ ಈ ರೀತಿ ತಹಶೀಲ್ದಾರರಿಗೆ ಅರ್ಜಿ ನೀಡಿ ಭೂಮಿ ಪಡೆದವರು ವಿರಳ ಎಂದೇ ಹೇಳಬೇಕು.
ಹೆಚ್ಚಿನ ಸಂದರ್ಭಗಳಲ್ಲಿ ಜನರು ಅನುಮತಿ ಇಲ್ಲದೇ ತಮ್ಮ ಜಮೀನಿನ ಸುತ್ತಮುತ್ತ ಇರುವ ಅಥವಾ ಬೇರೆ ಕಡೆಗೆ ಇರುವ ಸರ್ಕಾರಿ ಭೂಮಿಯನ್ನು ಅದರಲ್ಲೂ ವಿಶೇಷವಾಗಿ ಗೋಮಾಳಗಳನ್ನು ಕಾನೂನಿಗೆ  ವಿರುದ್ಧವಾಗಿ ಒತ್ತುವರಿ ಮಾಡುತ್ತಾರೆ. ಗೋಮಾಳವನ್ನು ಮಂಜೂರು ಮಾಡಲು ಬರುವುದಿಲ್ಲ ಎಂದೂ, ಆದರೆ ಹಲವಾರು ಷರತ್ತುಗಳಿಗನುಗುಣವಾಗಿ ಗೋಮಾಳಗಳ ಜಮೀನುಗಳನ್ನೂ ಮಂಜೂರು ಮಾಡಬಹುದೆಂದೂ 1970ರ ಕರ್ನಾಟಕ ಭೂ ಕಂದಾಯ (ಭೂಮಿಯ ಅಕ್ರಮ ಒತ್ತುವರಿಯನ್ನು ಸಕ್ರಮಗೊಳಿಸುವ) ನಿಯಮ  5 (1) ಹೇಳುತ್ತದೆ.

ಇದರಿಂದಾಗಿ ರಾಜ್ಯದಾದ್ಯಂತ ಲಕ್ಷಾಂತರ ಜನರು ಲಕ್ಷಾಂತರ ಎಕರೆ ಭೂಮಿಯನ್ನು ಒತ್ತುವರಿ ಮಾಡಿ ತಮ್ಮ ಅಕ್ರಮ ಒತ್ತುವರಿಯನ್ನು ಸಕ್ರಮಗೊಳಿಸಲು ಒತ್ತಾಯ ಮಾಡುತ್ತಿದ್ದಾರೆ. ಅಂತಹ ಅತಿಕ್ರಮಣಕಾರರ ಸ್ವಾಧೀನದಲ್ಲಿರುವ ಸರ್ಕಾರಿ ಜಮೀನನ್ನು ಅವರಿಗೇ ಮಂಜೂರು ಮಾಡುವುದಾಗಿ ರಾಜ್ಯದ ಕಂದಾಯ ಮಂತ್ರಿಗಳೂ ಹೇಳಿಕೆ ಕೊಟ್ಟಿದ್ದಾರೆ. ಆದರೆ ಹಲವು ಜನರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಈ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.

ಭೂಮಿ ಇಲ್ಲದ ಬಡ ರೈತರಿಗೆ ವ್ಯವಸಾಯ ಮಾಡಿ ಬದುಕಲು ಭೂಮಿಯನ್ನು ನಿಯಮಾನುಸಾರ ಹಂಚುವುದು ಸರ್ಕಾರದ ಒಂದು ಕಲ್ಯಾಣಕಾರಿ ಕಾರ್ಯಕ್ರಮ ಹಾಗೂ ಕರ್ತವ್ಯವೇನೋ ಸರಿ. ಆದರೆ, ನಿಯಮ ಉಲ್ಲಂಘಿಸಿ ಭೂಮಿ ಒತ್ತುವರಿ ಮಾಡಿರುವುದನ್ನು ಸಕ್ರಮಗೊಳಿಸುವುದು ಆರ್ಥಿಕ ನೀತಿಹೀನತೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಹಲವರು ಅಭಿಪ್ರಾಯಪಡುತ್ತಾರೆ.  ಇತ್ತೀಚೆಗೆ ಉತ್ತರಪ್ರದೇಶ ಸರ್ಕಾರ, ರೈತರ ಸಾಲ ಮನ್ನಾ ಮಾಡಿದುದನ್ನು ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ಇದೇ ಕಾರಣದಿಂದ ಟೀಕಿಸಿದ್ದರು.  

ತಹಶೀಲ್್ದಾರರಿಗೆ ಅರ್ಜಿ ನೀಡಿ ಭೂಮಿಯನ್ನು ಪಡೆದರೂ ಅಥವಾ ಒತ್ತುವರಿಯನ್ನು ಸಕ್ರಮಗೊಳಿಸಿದರೂ ಅದನ್ನು 15  ವರ್ಷಗಳವರೆಗೆ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಪರಭಾರೆ ಮಾಡಬಾರದು ಎಂದೂ ಈ ನಿಯಮಗಳು ಪ್ರತಿಬಂಧಿಸುತ್ತವೆ. ಹಾಗೆ ಪರಭಾರೆ ಮಾಡಿದರೆ ಸರ್ಕಾರ ಅಂತಹ ಮಂಜೂರಾತಿಯನ್ನು ರದ್ದುಪಡಿಸಿ ಆ ಭೂಮಿಯನ್ನು ವಶಪಡಿಸಿಕೊಳ್ಳಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ‘ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಲ್ಲಿನ ಮೌಢ್ಯ ಹಾಗೂ ಬಡತನದಿಂದಾಗಿ ಶ್ರೀಮಂತ ಹಾಗೂ ಬಲಾಢ್ಯ ವರ್ಗಗಳು, ಈ ಮಂಜೂರಾದ ಭೂಮಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡುಕೊಂಡು ಅವರನ್ನು ಶೋಷಿಸುವುದನ್ನು ತಪ್ಪಿಸುವಲ್ಲಿ ಈ ನಿಯಮ ಪರಿಣಾಮಕಾರಿ ಆಗಿಲ್ಲ. ಆದುದರಿಂದ ಕಾನೂನಿನ ಹಿಂದಿರುವ ಉದ್ದೇಶವನ್ನು ಸಫಲಗೊಳಿಸುವುದಕ್ಕಾಗಿ, ಆ ಭೂಮಿಯನ್ನು ಖರೀದಿದಾರರಿಂದ ಮರಳಿ ಕಿತ್ತುಕೊಂಡು ಮೂಲ ಮಂಜೂರಿದಾರನಿಗೆ ಅಥವಾ ಅವನ ವಾರಸುದಾರರಿಗೆ ಹಿಂತಿರುಗಿಸಬೇಕು ಅಥವಾ ಪುನಃ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಮಂಜೂರು ಮಾಡಬೇಕು’ ಎಂದು  1978ರ ಈ ಕಾನೂನು ಹೇಳುತ್ತದೆ. ಈ ಬಗ್ಗೆ ಒಂದು ಮಾದರಿ ಕಾನೂನು ರಚಿಸಿ  ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿತ್ತು.

ಹೀಗೆ ಮಂಜೂರಾಗುವ ಭೂಮಿಯ ಹೆಚ್ಚಿನ ಪಾಲು ಖುಷ್ಕಿ. ಅಲ್ಲದೇ ವ್ಯಕ್ತಿಯೊಬ್ಬನಿಗೆ ಎರಡು ಎಕರೆಗಳಿಗಿಂತ ಹೆಚ್ಚು ಭೂಮಿ ಮಂಜೂರು ಮಾಡುವಂತಿಲ್ಲ. ಸರ್ಕಾರಿ ಸೂತ್ರಗಳ ಪ್ರಕಾರವೇ ನೋಡುವುದಾದರೆ,  ವ್ಯವಸಾಯ ಸ್ವಲ್ಪವಾದರೂ ಲಾಭದಾಯಕವಾಗಬೇಕಾದರೆ ಹಿಡುವಳಿ ಕನಿಷ್ಠ  ಆರು ಎಕರೆ ಇರಬೇಕು. ಇದರ ಅರ್ಥ ಮಂಜೂರಾದ ಯಾವ ಹಿಡುವಳಿಯೂ ತನ್ನಷ್ಟಕ್ಕೆ ತಾನೇ ಆರ್ಥಿಕವಾಗಿ ಲಾಭದಾಯಕವಾಗಿರುವುದಿಲ್ಲ.  ಆದುದರಿಂದ ಬರೀ ಮಂಜೂರಾದ ಭೂಮಿಯನ್ನು ಮಾತ್ರ ಹೊಂದಿದವರು ಲಾಭದಾಯಕವಾಗಿ ವ್ಯವಸಾಯ ಮಾಡುವುದು ಸಾಧ್ಯವೇ ಆಗುವುದಿಲ್ಲ. 

ಆದರೆ ಔದ್ಯೋಗೀಕರಣದ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿ ಈ ಭೂಮಿಗೆ ಅತ್ಯಂತ ಹೆಚ್ಚಿನ ಬೆಲೆ ದೊರಕುತ್ತದೆ. ಇಂತಹ  ಪ್ರದೇಶದಲ್ಲಿ ಎಕರೆಗೆ ಎರಡು ಕೋಟಿಯಿಂದ ಮೂರು ಕೋಟಿ ರೂಪಾಯಿ ಮೌಲ್ಯ ಇರುತ್ತದೆ. ಭೂಮಿಯನ್ನು ಮಂಜೂರು ಮಾಡಿಸಿಕೊಂಡಿರುವ ವ್ಯಕ್ತಿ ವ್ಯವಸಾಯದ ಮೂಲಕ ಇಷ್ಟು ಹಣವನ್ನು ಒಂದು ಶತಮಾನವಾದರೂ ಗಳಿಸಲಾರ. ಆದುದರಿಂದ ಭೂಮಿಯನ್ನು ಮಂಜೂರು ಮಾಡಿಕೊಂಡಿರುವವರಲ್ಲಿ ಎಲ್ಲರೂ ಅದನ್ನು ಮಾರಬಯಸುತ್ತಾರೆ.

15 ವರ್ಷಗಳ ಪ್ರತಿಬಂಧದ ಅವಧಿ ಮುಗಿಯುವುದಕ್ಕಿಂತ ಮೊದಲೇ ಭೂಮಿ ಪಡೆದ ವ್ಯಕ್ತಿ ಜಿಲ್ಲಾಧಿಕಾರಿ ಅನುಮತಿ ಪಡೆದು ಪರಭಾರೆ ಮಾಡಲು ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರ ಲಾಭ ಪಡೆದು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿರುವ ಹೆಚ್ಚಿನ ಜನರು ತಮಗೆ ಮಂಜೂರಾಗಿರುವ ಭೂಮಿಯನ್ನು ಕೋಟ್ಯಂತರ ರೂಪಾಯಿಗಳಿಗೆ ಮಾರುತ್ತಿದ್ದಾರೆ.

15 ವರ್ಷಗಳ ಪ್ರತಿಬಂಧದ ಅವಧಿ ಮುಗಿದ ನಂತರವಂತೂ ಮಂಜೂರಾದ ಭೂಮಿಯನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿ ಅನುಮತಿಯ ಆವಶ್ಯಕತೆಯೂ ಇಲ್ಲ. ಆದರೆ 15 ವರ್ಷಗಳ ಪ್ರತಿಬಂಧದ ಅವಧಿ ಮುಗಿದ ನಂತರವೂ ದಲಿತರು ತಮ್ಮ ಭೂಮಿಯನ್ನು ಸರ್ಕಾರದ ಅನುಮತಿ  ಇಲ್ಲದೇ ಮಾರಾಟ ಮಾಡಲಾಗದು ಎಂದು  1978ರ ಕಾನೂನು ಹೇಳುತ್ತದೆ. ಹಾಗೆಯೇ, ದಲಿತರಿಗೆ ಮಂಜೂರಾಗಿದ್ದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೇ ಯಾರಾದರೂ ಕೊಂಡುಕೊಂಡರೆ ಅದನ್ನು ಅವರಿಂದ ಮರಳಿ ಕಿತ್ತುಕೊಂಡು ಮಂಜೂರಾದ ಮೂಲ ದಲಿತ ವ್ಯಕ್ತಿಗೆ ಅಥವಾ ಅವನ ವಾರಸುದಾರರಿಗೆ ಹಿಂತಿರುಗಿಸಬೇಕು ಅಥವಾ ಪುನಃ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ  ಜನರಿಗೆ ಮಂಜೂರು ಮಾಡಬೇಕು ಎಂದು ಈ ಕಾನೂನು ಹೇಳುತ್ತದೆ. ಇದರಿಂದಾಗಿ ಪರಿಶಿಷ್ಟೇತರ ಜಾತಿಗಳ ಜನರು ತಮಗೆ  ಮಂಜೂರಾದ ಭೂಮಿಯನ್ನು 15  ವರ್ಷಗಳ ಅವಧಿ ಮುಗಿಯುವುದಕ್ಕಿಂತ ಮೊದಲು ಜಿಲ್ಲಾಧಿಕಾರಿ ಅನುಮತಿ ಪಡೆದು ಅಥವಾ 15 ವರ್ಷಗಳ ಅವಧಿ ಮುಗಿದಿದ್ದರೆ ಜಿಲ್ಲಾಧಿಕಾರಿಯ ಅನುಮತಿಯೂ ಇಲ್ಲದೇ  ಕೋಟ್ಯಂತರ ರೂಪಾಯಿಗಳಿಗೆ  ಮಾರಾಟ ಮಾಡುತ್ತಿದ್ದಾರೆ.

ಆದರೆ ದಲಿತರು ಮಾತ್ರ 15 ವರ್ಷಗಳ ಅವಧಿ ಮುಗಿದಿದ್ದರೂ ಮಂಜೂರಾದ ಭೂಮಿಯನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ.  ಭೂಮಿ ಮಾರಲು  ಅವರು ಸರ್ಕಾರದಿಂದ ಅನುಮತಿ ಪಡೆಯಬಹುದಾದರೂ ಇಂತಹ ಉದಾಹರಣೆಗಳು ವಿರಳವಷ್ಟೇ ಅಲ್ಲ, ಅನುಮತಿ ಪಡೆಯಲು ಬಹಳ ಸಮಯವೂ ಹಿಡಿಯುತ್ತದೆ. ದಲಿತರಿಗೆ ಮಂಜೂರಾದ ಭೂಮಿಯನ್ನು ಸರ್ಕಾರದ ಅನುಮತಿ ಇಲ್ಲದೇ ಕೊಂಡುಕೊಂಡರೆ ಸರ್ಕಾರ ಅದನ್ನು ಕಿತ್ತುಕೊಳ್ಳುವುದರಿಂದ ಅದನ್ನು ಖರೀದಿಸಿದವರಿಗೆ ಭೂಮಿಯೂ ಸಿಗುವುದಿಲ್ಲ. ಅಲ್ಲದೆ ಅವರು ತಮ್ಮ ಹಣವನ್ನೂ  ಕಳೆದುಕೊಳ್ಳುತ್ತಾರೆ. ಈ ಕಾರಣಗಳಿಂದಾಗಿ ಪರಿಶಿಷ್ಟೇತರ ಜಾತಿಗಳ ಜನರಿಂದ ಮಂಜೂರಾತಿ ಭೂಮಿಯನ್ನು ಕೊಂಡುಕೊಳ್ಳಲು  ಪೈಪೋಟಿ ಮಾಡುವ ಉದ್ದಿಮೆದಾರರು ಅಥವಾ ಬೇರೆ ರೀತಿ ಅಭಿವೃದ್ಧಿ ಪಡಿಸಲಿಚ್ಛಿಸುವವರು ದಲಿತರ ಭೂಮಿಯನ್ನು ಕೊಂಡುಕೊಳ್ಳಲು ಭಯಪಡುತ್ತಿದ್ದಾರೆ.
ಹೀಗೆ ದಲಿತರ ಆಸ್ತಿಯ ಹಕ್ಕನ್ನು ರಕ್ಷಿಸಲು ಹೊರಟ ಕಾನೂನು ಇಂದು ಅವರ ಅಭಿವೃದ್ಧಿಗೇ ಮಾರಕವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT