ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಂದೀತೆ ಭರವಸೆಯ ಬೆಳಕು?

ರಿಯಲ್‌ ಎಸ್ಟೇಟ್‌ ಒಳ–ಹೊರಗು
Last Updated 5 ಮೇ 2017, 19:30 IST
ಅಕ್ಷರ ಗಾತ್ರ

ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕು ಎಂಬ ಕನಸಿನ ಕನವರಿಕೆಯಲ್ಲಿ ಉಣ್ಣುವುದಕ್ಕೆ, ಉಡುವುದಕ್ಕೆ ನಿರ್ಬಂಧ ಹಾಕಿಕೊಂಡು, ದೇಹದಲ್ಲಿ ಕಸುವಿದ್ದಾಗ ಜೀವನ ಆನಂದಿಸುವ ಅವಕಾಶವನ್ನೂ ತೊರೆದು ಕಾಸು ಕೂಡಿಟ್ಟವರು ನಿವೇಶನ, ಫ್ಲ್ಯಾಟ್‌, ಮನೆಗಾಗಿ ಮುಂಗಡ ಪಾವತಿಸಿ ಕೈಸುಟ್ಟುಕೊಂಡ ಪ್ರಕರಣಗಳು ದಿನೇ ದಿನೇ ವರದಿಯಾಗುತ್ತಲೇ ಇರುತ್ತವೆ.

ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ಗುಂಪುಗೂಡಿರುವ ವಂಚಕರ ಜಾಲ, ಹೀಗೆ ಕಾಸು ಕೂಡಿಟ್ಟವರ ಗಂಟನ್ನು ಕೊಳ್ಳೆ ಹೊಡೆದ ನಿದರ್ಶನಗಳು ಅನೇಕ. ಈ ಕ್ಷೇತ್ರದಲ್ಲಿ ಸಜ್ಜನರೂ, ಪ್ರಾಮಾಣಿಕರೂ ಇದ್ದಾರೆಂದರೆ ನಂಬಲಿಕ್ಕೂ ಅಸಾಧ್ಯವಾದ ದಿನಮಾನಗಳಲ್ಲಿ ನಾವಿದ್ದೇವೆ. ‘ವ್ಯಾಪಾರಂ  ದ್ರೋಹ ಚಿಂತನಂ’ ಎಂಬ ಮಾತಿನ ಆಚೆಗೂ ಪ್ರಾಮಾಣಿಕವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿರುವವರು ಇವತ್ತಿಗೂ ಇದ್ದಾರೆ.

ರಿಯಲ್ ಎಸ್ಟೇಟ್‌ ಕ್ಷೇತ್ರದ ಮೋಸ, ವಂಚನೆಗಳಿಗೆ ಕೊನೆಹಾಡಿ, ಗ್ರಾಹಕರ ಹಿತರಕ್ಷಿಸುವ ಕಾಯ್ದೆ ಈಗ ಜಾರಿಗೆ ಬಂದಿದೆ. ಗೃಹ ನಿರ್ಮಾಣ ಕ್ಷೇತ್ರದಲ್ಲಿನ ಸದ್ಯದ ಅಹಿತಕರ ವಿದ್ಯಮಾನ ಅವಲೋಕಿಸಿದರೆ ಗ್ರಾಹಕರಂತೂ ನೆಮ್ಮದಿಯಿಂದ ಇಲ್ಲ ಎಂಬುದು ಸುಸ್ಪಷ್ಟ. ಮಾರುಕಟ್ಟೆಯಲ್ಲಿ ಕಂಡ ‘ರಿಯಲ್‌’ ಎಸ್ಟೇಟ್‌ ಮುಖ ಇಲ್ಲಿದೆ.

ಒಂದು ವರ್ಷದ ಹಿಂದೆ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದ್ದ, ಪ್ರಾಪರ್ಟಿ ಎಕ್ಸ್‌ಪೋಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದ  ಡ್ರೀಮ್ಸ್‌ ಜಿಕೆ, ಟಿಜಿಎಸ್‌ ಕನ್‌ಸ್ಟ್ರಕ್ಷನ್‌, ಗೃಹ ಕಲ್ಯಾಣ ಸಂಸ್ಥೆಯಂಥವು ₹4 ಲಕ್ಷಕ್ಕೆ ನಿವೇಶನ, ₹22 ಲಕ್ಷಕ್ಕೆ ಭರ್ಜರಿ ಫ್ಲಾಟು, ₹35 ಲಕ್ಷಕ್ಕೆ ವಿಲ್ಲಾ ಕೊಡುವುದಾಗಿ ಪ್ರಕಟಿಸುತ್ತಿದ್ದವು.

ಜಾಹೀರಾತಿನಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಇದ್ದಲ್ಲಿಗೆ ಕಾರು ಕಳುಹಿಸುತ್ತಿದ್ದ ಸಂಸ್ಥೆಯ ಪ್ರತಿನಿಧಿಗಳು ಬೆಂಗಳೂರಿನ ಹವಾನಿಯಂತ್ರಿತ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು. ವರ್ಣರಂಜಿತ ಬ್ರೋಚರ್‌ ತೋರಿಸಿ, ಆಯ್ದ ಜಾಗಗಳಿಗೆ ಕರೆದೊಯ್ಯುತ್ತಿದ್ದರು.  ಅಲ್ಲಿ ಯಾವುದೋ ಖಾಲಿ ಜಾಗ ತೋರಿಸಿ ಇಲ್ಲಿಯೇ ಬೃಹದಾಕಾರದ ಬಿಲ್ಡಿಂಗ್‌ ತಲೆ ಎತ್ತಲಿದೆ, ಸಾವಿರಾರು ನಿವೇಶನಗಳ ಬಡಾವಣೆ ನಿರ್ಮಾಣವಾಗಲಿದೆ ಎಂದು ವಿವರಿಸುತ್ತಿದ್ದರು. ಸಂಸ್ಥೆಯ ಪ್ರತಿನಿಧಿಗಳ ಉಪಚಾರ, ಮಾತಿನ ವೈಖರಿಗೆ ಬೇಸ್ತು ಬಿದ್ದ ಜನ, ವಾಪಸ್‌ ಬರುವ ಹೊತ್ತಿಗಾಗಲೇ ಫ್ಲ್ಯಾಟ್‌ ಅಥವಾ ನಿವೇಶನಕ್ಕಾಗಿ ₹1.5 ಲಕ್ಷ ಮೊತ್ತದ ಚೆಕ್‌ನ್ನು ಮುಂಗಡ ರೂಪದಲ್ಲಿ ಅನಾಮತ್ತಾಗಿ ಕೊಟ್ಟು ಬರುತ್ತಿದ್ದರು. ಅದಾಗಿ 20 ದಿನಕ್ಕೇ ಮತ್ತೆ ₹10 ಲಕ್ಷ ಪಾವತಿ ಮಾಡುತ್ತಿದ್ದರು. ಎಲ್ಲವೂ ನಂಬಿಕೆ, ಅಪಾರ ವಿಶ್ವಾಸದ ಮೇಲೆ ನಡೆಯುತ್ತಿದ್ದವು.



ಇನ್ನೇನು ವರ್ಷದೊಳಗೆ ಸ್ವಂತ ಸೂರು ಕಟ್ಟಿಕೊಳ್ಳುವ ಕನಸನ್ನೂ ಕಾಣುತ್ತಿದ್ದರು. ಆದರೆ, ಕನಸು ನನಸಾಗಲೇ ಇಲ್ಲ. ಡ್ರೀಮ್ಸ್ ಜಿಕೆ, ಟಿಜಿಎಸ್‌ ಹೆಸರಿನಲ್ಲಿ ನಡೆಯುತ್ತಿದ್ದುದು ಮಹಾವಂಚನೆ ಎಂಬುದು ಬಯಲಾಯಿತು. ಯಾರೊಬ್ಬರಿಗೂ ನಿವೇಶನ, ಫ್ಲ್ಯಾಟು ಕೊಟ್ಟಿಲ್ಲ ಎಂದು ಗೊತ್ತಾಗಿದ್ದೇ ತಡ ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಈ ಸಂಸ್ಥೆಯ ಒಡೆಯ ಸಚಿನ್‌ ನಾಯಕ್‌ ಹಾಗೂ ಆತನ ಪತ್ನಿ ಮಂದೀಪ್‌ ಕೌರ್ ಅವರ ವಿರುದ್ಧ 3 ಸಾವಿರ ದೂರುಗಳು ದಾಖಲಾದವು. ಪೊಲೀಸರು ಸಚಿನ್‌ ನಾಯಕ್‌ನನ್ನು ಹಿಡಿದು ತಂದು, ಕೋರ್ಟ್‌ಗೆ ಒಪ್ಪಿಸಿದರು. ಆತ ಜಾಮೀನಿನ ಮೇಲೆ ಹೊರಬಂದು ಈಗ ತಲೆ ಮರೆಸಿಕೊಂಡಿದ್ದಾನೆ.

₹10 ಲಕ್ಷ, ₹20 ಲಕ್ಷ ಕೊಟ್ಟವರು ಅತ್ತ ಕೊಟ್ಟ ದುಡ್ಡೂ ವಾಪಸ್‌ ಸಿಗದೆ, ಇತ್ತ ಫ್ಲ್ಯಾಟೂ ಸಿಗದೇ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಹಾಗಂತ ಈ ಸಂಸ್ಥೆಯಲ್ಲಿ ಹಣ ಹೂಡಿದವರು ಅನಕ್ಷರಸ್ಥರೇನಲ್ಲ. ನ್ಯಾಯಾಧೀಶರು, ಪೊಲೀಸರು, ಅಧಿಕಾರಿಗಳು, ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಸೊಸೈಟಿ ಹೆಸರನಲ್ಲಿಯೂ ವಂಚನೆ: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ 1,643 ನೋಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳಿವೆ. ಈ ಪೈಕಿ 1,202 ಅಸ್ತಿತ್ವದಲ್ಲಿವೆ. 108 ಸಂಘಗಳು ನಿಷ್ಕ್ರಿಯವಾಗಿವೆ. 133 ಸಂಘಗಳು ದಿವಾಳಿಯಾಗಿವೆ. ಇಂತಹ ಸಂಘಗಳು ಬಡಾವಣೆ ನಿರ್ಮಿಸುವುದಾಗಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುತ್ತವೆ. ಬಡಾವಣೆಗಾಗಿ ಭೂಮಿ ಗುರುತಿಸಲಾಗಿದೆ, ಮೊದಲ ಕಂತಿನ ಠೇವಣಿ ಹಣವನ್ನು ಮೊದಲು ಪಾವತಿಸಿದವರಿಗೆ ಆದ್ಯತೆ ಮೇಲೆ ನಿವೇಶನ ನೀಡುವುದಾಗಿ ಭರವಸೆ ನೀಡುತ್ತವೆ.

ಸದಸ್ಯರಿಂದ ಕಂತಿನ ರೂಪದಲ್ಲಿ ಹಣ ವಸೂಲಿ ಮಾಡಿದ ಮೇಲೆ, ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ನಿರ್ದೇಶಕರ ಸಂಬಂಧಿಗಳನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವ, ಇಲ್ಲವೇ ಸಹ ಸದಸ್ಯರನ್ನಾಗಿ ಮಾಡಿಕೊಳ್ಳುವ ಪರಿಪಾಠವೂ ಇದೆ.


ಬಡಾವಣೆ ನಿರ್ಮಾಣವಾಗುತ್ತಿದ್ದಂತೆ ಮೊದಲಿಗೆ ಠೇವಣಿ ಕಟ್ಟಿ, ಕಾಲಕಾಲಕ್ಕೆ ಹಣ ಪಾವತಿ ಮಾಡಿದವರಿಗೆ ಆದ್ಯತೆ ಮೇರೆಗೆ ನಿವೇಶನ ಮಂಜೂರು ಮಾಡುವ ಬದಲು ಕುಟುಂಬದ ಸದಸ್ಯರಿಗೆ, ಸಹ ಸದಸ್ಯರಿಗೆ ನಿವೇಶನ ಹಂಚಿ ನಿವೇಶನಕ್ಕಾಗಿ ಕಾಯುತ್ತಿದ್ದವರಿಗೆ ಮೋಸ ಮಾಡಿದ ಅನೇಕ ನಿದರ್ಶನಗಳು ಇವೆ. ಇಂತಹ ಸಂಘಗಳ ಬಗ್ಗೆ ತನಿಖೆಯೂ ನಡೆದಿದೆ. ಆದರೆ, ಪ್ರಯೋಜನ ಮಾತ್ರ ಶೂನ್ಯ.

ನ್ಯಾಯಾಂಗ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘ, ವಿಧಾನಮಂಡಲ ಗೃಹ ನಿರ್ಮಾಣ ಸಹಕಾರ ಸಂಘ, ವೈಯಾಲಿಕಾವಲ್‌ ಗೃಹ ನಿರ್ಮಾಣ ಸಹಕಾರ ಸಂಘ, ಟೆಲಿಕಾಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘ, ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಹಗರಣಗಳು ತನ್ನದೇ ಆದ ದಾಖಲೆ ಸೃಷ್ಟಿಸಿವೆ. ಈ ಸಂಘಗಳಲ್ಲಿ ಪ್ರಭಾವಿ ಸಚಿವರು, ಅವರ ಕುಟುಂಬದವರು, ನಿವೃತ್ತ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿವೇಶನ ವಂಚಿತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ.

ನಿಯಮ ಉಲ್ಲಂಘನೆಯ ಪರಾಕಾಷ್ಠೆ: ಬಿಲ್ಡರ್ಸ್‌ ಅಂಡ್‌ ಡೆವಲಪರ್ಸ್‌ ಹೆಸರಿನಲ್ಲಿ ನೋಂದಾಯಿಸಿಕೊಂಡ 2,261 ಕಂಪೆನಿಗಳು ಕರ್ನಾಟಕದಲ್ಲಿವೆ. ನೋಂದಾಯಿಸಿಕೊಂಡ ಬಿಲ್ಡರ್‌ಗಳಿಗಿಂತ ದುಪ್ಟಟ್ಟು ಅಥವಾ ಮೂರು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಡರ್‌ಗಳಿದ್ದಾರೆ ಎಂದು ಹೇಳಲಾಗುತ್ತಿದೆ.
ಅಪಾರ್ಟ್‌ಮೆಂಟ್‌ಗಳನ್ನಷ್ಟೇ ನಿರ್ಮಿಸಿ ಫ್ಲ್ಯಾಟ್‌ಗಳನ್ನು ಮಾರುವ ಬಿಲ್ಡರ್ಸ್‌ಗಳ ಪ್ರಮಾಣ ದೊಡ್ಡದಿದೆ. ಯಾವುದೇ ರೀತಿ ರಿವಾಜುಗಳನ್ನು ಪಾಲಿಸದೇ, ಕಟ್ಟಡ ಬೈ–ಲಾಗಳನ್ನು ಉಲ್ಲಂಘಿಸಿ ನಿರ್ಮಿಸಿದ ಫ್ಲ್ಯಾಟ್‌ ಮಾರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬ ಆಪಾದನೆ ಇದೆ.


ಬೆಂಗಳೂರು ಮಹಾನಗರದ ಪರಿಧಿಯೊಳಗೆ ನಿರ್ಮಿಸಿದ ಶೇ 50ಕ್ಕಿಂತ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ ಜಮೀನಿನ ಮೂಲ ದಾಖಲೆಯಲ್ಲಿಯೇ ಸಮಸ್ಯೆ ಇರುತ್ತದೆ. ಇಲ್ಲದಿದ್ದರೆ ಬಿ ಖಾತಾ ನಿವೇಶನದಲ್ಲಿ ನಿರ್ಮಿಸಲಾಗಿರುತ್ತದೆ. ಇಲ್ಲವೇ, ನಿಯಮದಂತೆ ಸೆಟ್‌ಬ್ಯಾಕ್‌ ಬಿಡದೇ, ಮೂಲಸೌಕರ್ಯ ಕಲ್ಪಿಸದೇ ನಿರ್ಮಾಣ ಕಾಮಗಾರಿ ಮುಗಿಸಲಾಗಿರುತ್ತದೆ. ನೆಲ ಮಹಡಿ ಮತ್ತು 3 ಮಹಡಿಗಳ ಕಟ್ಟಡದ ಪ್ಲಾನ್‌ಗೆ ಒಪ್ಪಿಗೆ ಪಡೆದು, 4 ಅಥವಾ 5 ಮಹಡಿಗಳ ಕಟ್ಟಡ ನಿರ್ಮಿಸಲಾಗಿರುತ್ತದೆ. ಹೀಗಾಗಿ ಬಹುತೇಕ ಕಟ್ಟಡಗಳಿಗೆ ಅನುಭೋಗ ಪ್ರಮಾಣ ಪತ್ರ (ಒ.ಸಿ) ಇರುವುದಿಲ್ಲ. ‘ಎಲ್ಲ ದಾಖಲೆ ಸಮರ್ಪಕವಾಗಿದೆ ಎಂದು ಬಿಲ್ಡರ್‌ ನಂಬಿಸಿದ್ದರು. ಖಾಸಗಿ ಬ್ಯಾಂಕ್‌ನಲಿ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಖರೀದಿ ಮಾಡಿದೆ. ಈಗ ಒ.ಸಿ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಈ ಬಗ್ಗೆ ಯಾರಿಗೆ ದೂರು ಹೇಳುವುದು’ ಎಂದು ಪ್ರಶ್ನಿಸುತ್ತಾರೆ ಬಸವೇಶ್ವರ ನಗರದ ಪ್ರೇಮಕುಮಾರ್‌.

ಅನೇಕ ಸಾರಿ, ರಾಜಕಾಲುವೆ, ಸರ್ಕಾರಿ ಭೂಮಿ, ಕೆರೆ ಅಂಗಳದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಿ ಅಥವಾ ಬಡಾವಣೆ ನಿರ್ಮಿಸಿ ಮಾರಿ ಹೋದ ಘಟನೆಗಳು ಇವೆ. ಕಳೆದ ಆರೇಳು ತಿಂಗಳ ಹಿಂದೆ ರಾಜಕಾಲುವೆ ಒತ್ತುವರಿ ಮಾಡಿ ಮಾರಿದ್ದ ಜಾಗದಲ್ಲಿ ಕಟ್ಟಿಕೊಂಡಿದ್ದ ಮನೆಗಳನ್ನು ಬಿಬಿಎಂಪಿ ಮುಲಾಜಿಲ್ಲದೆ ಒಡೆದು ಹಾಕಿತ್ತು. ಇಂತಹ  ಹತ್ತಾರು ಸಮಸ್ಯೆಗಳನ್ನು ಬೆಂಗಳೂರಿನ ಗ್ರಾಹಕರು ಎದುರಿಸುತ್ತಿದ್ದಾರೆ.

ಇದಕ್ಕೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೂಡ ಅಪವಾದವಲ್ಲ. ಬಿಡಿಎ ನಿರ್ಮಿಸಿದ ಅನೇಕ ಬಡಾವಣೆಗಳು ಕೆರೆ ಅಂಗಳ ಅಥವಾ ರಾಜಕಾಲುವೆ ಒತ್ತುವರಿಯಾದ ಜಾಗದಲ್ಲಿವೆ ಎಂಬ ಕಾರಣಕ್ಕೆ ಮನೆಗಳನ್ನು ತೆರವುಗೊಳಿಸಿದ ಪ್ರಕರಣ ನಡೆದಿತ್ತು.
*
ಹಿತಾಸಕ್ತಿ ಸಂಘರ್ಷದ ಪ್ರಶ್ನೆ!
‘ಗ್ರಾಹಕನೇ ದೊರೆ, ಆತನ ಹಿತರಕ್ಷಣೆಯೇ ಪ್ರಮುಖ ಕರೆ’ ಎಂಬ ಆಶಯದಲ್ಲಿ ರೂಪಿಸಿದ ರಿಯಲ್‌ ಎಸ್ಟೇಟ್‌  ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ವಿಷಯದಲ್ಲಿ ‘ಹಿತಾಸಕ್ತಿ ಸಂಘರ್ಷ’ ಕಾಣಿಸುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಹೊಣೆಗಾರಿಕೆ ಹೊತ್ತಿರುವ ವಸತಿ ಸಚಿವ ಎಂ. ಕೃಷ್ಣಪ್ಪ ಮೂಲತಃ ಬಿಲ್ಡರ್‌ ಆಗಿ ಹೆಸರು ಮಾಡಿದವರು. ಕೃಷ್ಣಪ್ಪ ಮತ್ತು ಅವರ ಮಕ್ಕಳಾದ ಪ್ರಿಯಕೃಷ್ಣ, ಪ್ರದೀಪಕೃಷ್ಣ ಅವರು ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಕಂಪೆನಿಗಳ ಪಾಲುದಾರರಾಗಿದ್ದಾರೆ. ಇಂತಹ ವಸತಿ ಸಚಿವರಿಂದ ಗ್ರಾಹಕರಿಗೆ ಎಷ್ಟರಮಟ್ಟಿಗೆ ರಕ್ಷಣೆ ದೊರೆತೀತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಇದಕ್ಕೆ ಧ್ವನಿಗೂಡಿಸಿದ ಭೂ ಕಬಳಿಕೆ ವಿರೋಧಿ ಸಮಿತಿಯ ಎ.ಟಿ. ರಾಮಸ್ವಾಮಿ, ‘ಕೇಂದ್ರದ ಕಾಯ್ದೆಗೆ ಅನುಗುಣವಾಗಿಯೇ ನಿಯಮ ರೂಪಿಸದೆ ಇದ್ದರೆ ಹಿತಾಸಕ್ತಿ ಸಂಘರ್ಷ ಕೆಲಸ ಮಾಡಿದೆ ಎಂದು ಭಾವಿಸಬೇಕಾಗುತ್ತದೆ. ಅಷ್ಟಕ್ಕೂ ಕೃಷ್ಣಪ್ಪ ಈ ಖಾತೆ ಸಚಿವರಾಗಿ ಶಾಶ್ವತವಾಗಿ ಇರುವುದಿಲ್ಲ. ಕಾನೂನು ಎಲ್ಲರಿಗಿಂತ ದೊಡ್ಡದು. ತಾತ್ಕಾಲಿಕವಾಗಿ ಇದು ಹಿತಾಸಕ್ತಿ ಸಂಘರ್ಷ ಅಂತೂ ನಿಜ’ ಎಂದರು.

*
ಕಾಯ್ದೆ ಅನುಷ್ಠಾನಕ್ಕೆ ಸರ್ಕಾರದ ಉದಾಸೀನ?
ಕೇಂದ್ರದ ಕಾಯ್ದೆ ಆಧರಿಸಿ ನಿಯಮಾವಳಿ ರೂಪಿಸಿ, ಮನೆ, ನಿವೇಶನ ಖರೀದಿಸುವ ಗ್ರಾಹಕರ ಹಿತ ಕಾಯಬೇಕಾದ ಈ ವಿಷಯದಲ್ಲಿ ಸರ್ಕಾರ ಉದಾಸೀನ ಧೋರಣೆ ಅನುಸರಿಸುತ್ತಿದೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ‘ನಿಯಮಾವಳಿ ರೂಪಿಸಲಾಗುತ್ತಿದೆ. ಸಚಿವ ಸಂಪುಟ ಸಭೆಯ ಒಪ್ಪಿಗೆ ಸಿಗುವವರೆಗೆ ಯಾವುದೇ ಮಾಹಿತಿ ನೀಡುವಂತಿಲ್ಲ ಎಂಬ ಆದೇಶ ಇದೆ’ ಎಂದು ವಸತಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ಅನೇಕರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಖಾತೆ ಹೊಂದಿದ್ದಾರೆ. ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅನೇಕ ಪ್ರಭಾವಿ ಶಾಸಕರು ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ನೇರ ಪಾಲುದಾರಿಕೆ ಹೊಂದಿದ್ದಾರೆ. ಪಾಲಿಕೆಯ ಅನೇಕ ಸದಸ್ಯರು, ಎಲ್ಲ ಪಕ್ಷಗಳಲ್ಲಿರುವ ಶಾಸಕರು ಈ ವಹಿವಾಟು ನಡೆಸುತ್ತಿದ್ದಾರೆ.  ಅಸ್ತಿತ್ವದಲ್ಲಿರುವ ಅಥವಾ ಅರ್ಧಂಬರ್ಧ  ಆಗಿರುವ ಯೋಜನೆಗಳನ್ನು ಕಾಯ್ದೆ ವ್ಯಾಪ್ತಿಗೆ ತರುವುದು ಬೇಡ ಎಂದು ಈ ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ನಿಯಮಾವಳಿ ರೂಪಿಸುವುದು ವಿಳಂಬವಾಗಿದೆ’ ಎಂದು ವಸತಿ ಇಲಾಖೆಯ  ಮೂಲಗಳು ತಿಳಿಸಿವೆ.
* * *
ಬ್ರೋಕರ್‌ಗಳ ಹೊಣೆ ಹೆಚ್ಚಳ
‘ಖರೀದಿದಾರ ಮತ್ತು ಮಾರಾಟಗಾರರ ಮಧ್ಯೆ ಅಸಂಘಟಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರೋಕರ್‌ಗಳೂ ಈ ಕಾಯ್ದೆ ವ್ಯಾಪ್ತಿಗೆ ಬರಲಿದ್ದಾರೆ. ಇನ್ನು ಮುಂದೆ ಅವರೂ ಹೆಚ್ಚು ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಉದ್ಯಮದ ಎಲ್ಲ  ಪಾಲುದಾರರ ಜತೆ ವ್ಯವಹರಿಸುವಲ್ಲಿ ಬ್ರೋಕಿಂಗ್‌ ಸಂಸ್ಥೆಗಳು ಕಾರ್ಪೊರೇಟ್‌ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ.
-ಶಿಶಿರ್‌ ಬೈಜಲ್‌,
ನೈಟ್‌ ಫ್ರ್ಯಾಂಕ್‌ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ನ ಅಧ್ಯಕ್ಷ
*

ಖರೀದಿದಾರರ ಹಣ ಸುರಕ್ಷಿತ
‘ಕಾಯ್ದೆ ಜಾರಿಯಿಂದ ಮನೆ ಖರೀದಿಸುವವರ ಹಣ ಸುರಕ್ಷಿತವಾಗಿರುತ್ತದೆ. ಹೂಡಿಕೆ ಮಾಡಿದ ಹಣವನ್ನು ಬಿಲ್ಡರ್‌ಗಳು ಬೇರೆ ವಸತಿ ಯೋಜನೆಗಳಿಗೆ ಬಳಕೆ ಮಾಡುವುದಕ್ಕೆ ಕೊನೆ ಬೀಳಲಿದೆ. ‘ಕಾರ್ಪೆಟ್‌ ಏರಿಯಾ’ ಆಧರಿಸಿಯೇ ವಸತಿ ಯೋಜನೆಗಳನ್ನು ಮಾರಾಟ ಮಾಡಬೇಕು ಎನ್ನುವ ನಿಬಂಧನೆಯು ಖರೀದಿದಾರರಿಗೆ ಗಮನಾರ್ಹ ಅನುಕೂಲತೆ ಒದಗಿಸಲಿದೆ. ಮನೆ , ಫ್ಲ್ಯಾಟ್‌ನಲ್ಲಿ ತಮಗೆ ಅಂತಿಮವಾಗಿ ಎಷ್ಟು ಪ್ರಮಾಣದಲ್ಲಿ  ಸ್ಥಳಾವಕಾಶ ಸಿಗಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ಸಿಗಲಿದೆ.

‘ಸೂಪರ್‌ ಬಿಲ್ಟ್‌ ಅಪ್‌ ಏರಿಯಾ ಹೆಸರಿನಲ್ಲಿ ಹಣ ಪಡೆದುಕೊಂಡ ಬಿಲ್ಡರ್‌ಗಳು ಅಂತಿಮವಾಗಿ ಮನೆ ಹಸ್ತಾಂತರಿಸುವಾಗ ಕಾರ್ಪೆಟ್‌ ಏರಿಯಾ ಗಮನಾರ್ಹವಾಗಿ ಕುಗ್ಗಿರುತ್ತದೆ. ಇದರಿಂದಾಗಿ,  ಖರೀದಿದಾರರ ವಶಕ್ಕೆ ಮನೆ–ಫ್ಲ್ಯಾಟ್‌ ಒಪ್ಪಿಸಿದಾಗ ಬಹುತೇಕ ಸಂದರ್ಭಗಳಲ್ಲಿ ಮಾಲೀಕರಿಗೆ ಭ್ರಮನಿರಸನ ಆಗುತ್ತದೆ. ಅವರು ಕಂಡ ಕನಸಿನ ಮನೆಯ ಕಲ್ಪನೆ ನುಚ್ಚು ನೂರಾಗಿರುತ್ತದೆ.  ಇನ್ನು ಮುಂದೆ ಮನೆಯ ಒಳ ಆವರಣ, ಬಳಕೆಗೆ ಲಭ್ಯ ಇರುವ ಸ್ಥಳದ ಕುರಿತ  ಅಸ್ಪಷ್ಟತೆ ದೂರವಾಗಲಿದೆ.

‘ರಾಜ್ಯ ಸರ್ಕಾರವು ಈ ವಹಿವಾಟನ್ನು ಸರಳಗೊಳಿಸಿ, ಉದ್ಯಮದ ದಕ್ಷತೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಚುನಾವಣಾ ವರ್ಷದಲ್ಲಿ ಸರ್ಕಾರದ ವರ್ಚಸ್ಸಿನ ಬಗ್ಗೆ ಮತದಾರರಲ್ಲಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಸರ್ಕಾರವು    ಪ್ರಾಮಾಣಿಕವಾಗಿ ಕಾಯ್ದೆ ಜಾರಿಗೆ ಮನಸ್ಸು ಮಾಡಬೇಕಾಗಿದೆ.
-ಸತೀಶ್‌ ಬಿ.ಎನ್‌.,
ರಿಯಲ್‌ ಎಸ್ಟೇಟ್‌ ಉದ್ಯಮದ ಪರಿಣತ
*

ನಿಯಂತ್ರಣ ವ್ಯವಸ್ಥೆ ಅಪೇಕ್ಷಣೀಯ
‘ಷೇರುಪೇಟೆ ನಿಯಂತ್ರಣಕ್ಕೆ ‘ಸೆಬಿ’ ಇರುವಂತೆ,  ನಿರ್ಮಾಣ ರಂಗಕ್ಕೂ ಮೂಗುದಾರ ಹಾಕಲು ನಿಯಂತ್ರಣ ವ್ಯವಸ್ಥೆ  ಇರುವುದು ಅಪೇಕ್ಷಣೀಯ. ಕೊನೆಗೂ ಅಂತಹ ಬೇಡಿಕೆ ಕಾರ್ಯಗತಗೊಳ್ಳುತ್ತಿರುವುದು ಸ್ವಾಗತಾರ್ಹ ವಿದ್ಯಮಾನ. ‘ಕಾಯ್ದೆಯ ಮೂಲ ಸ್ವರೂಪವೇ ಪಾರದರ್ಶಕವಾಗಿದೆ. ಅದರ   ಅರ್ಥ ತಿರುಚಲು ರಾಜ್ಯ ಸರ್ಕಾರಗಳಿಗೆ ಅವಕಾಶವೇ ಇಲ್ಲ. ಮೂಲ ಕಾಯ್ದೆಯ ಚೌಕಟ್ಟಿನ ಒಳಗೆಯೇ ರಾಜ್ಯಗಳು ನಿಯಮಗಳ ಅಧಿಸೂಚನೆ ಹೊರಡಿಸಬೇಕಾಗಿದೆ. ಕಾಯ್ದೆಯನ್ನು ಯಾವುದೇ ರಾಜ್ಯವು ದುರ್ಬಲಗೊಳಿಸಲೂ ಸಾಧ್ಯವಿಲ್ಲ.

‘ಕನಿಷ್ಠ ಎಂಟು ಮನೆ ಅಥವಾ 500 ಚದರ ಮೀಟರ್‌ಗಳಷ್ಟು ಪ್ರದೇಶದ ನಿರ್ಮಾಣ ಯೋಜನೆಗಳನ್ನು ನೋಂದಾಯಿಸುವುದು ಕಡ್ಡಾಯ ಮಾಡಲಾಗಿದೆ. ಇದಕ್ಕಿಂತ ಕಡಿಮೆ ಪ್ರಮಾಣದ ಯೋಜನೆಗಳನ್ನೂ ಕಾಯ್ದೆ ವ್ಯಾಪ್ತಿಗೆ ತರಬೇಕು. ಯಾವುದೇ ಬಗೆಯ ವಾಣಿಜ್ಯ ಸ್ವರೂಪದ ಕಟ್ಟಡ ನಿರ್ಮಾಣ ಯೋಜನೆಗಳನ್ನೂ ನೋಂದಣಿ ವ್ಯಾಪ್ತಿಗೆ ತರಬೇಕು. ನೋಂದಣಿ ವಿಷಯದಲ್ಲಿ ಯಾರೊಬ್ಬರಿಗೂ ರಿಯಾಯಿತಿ ನೀಡಬಾರದು. ರಾಜಿಗೂ ಅವಕಾಶ ಇರಬಾರದು’.
-ಸುರೇಶ್‌ ಹರಿ,
ಕ್ರೆಡಾಯ್‌ ಕರ್ನಾಟಕ ಘಟಕದ ಗೌರವ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT