ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಯಲ್ಲಿ ನಾವೀಗ 152ನೇ ನಗರ!

ತುಮಕೂರು ಇನ್ನೂ ಸಾಗಬೇಕಾಗಿದೆ ಬಲು ದೂರ: ರಾಜ್ಯದ ನಗರಗಳಿಗೆ ಹೋಲಿಸಿಕೊಂಡರೆ 6ನೇ ಸ್ಥಾನ
Last Updated 6 ಮೇ 2017, 4:53 IST
ಅಕ್ಷರ ಗಾತ್ರ

ತುಮಕೂರು: ದೇಶದ ಸ್ವಚ್ಛ ನಗರದ ಪೈಕಿ ನಗರ 152ನೇ ಸ್ಥಾನ ಪಡೆದಿದೆ. ‘ಸ್ಮಾರ್ಟ್ ಸಿಟಿ’ ಕನಸಿನಲ್ಲಿ ತೇಲುತ್ತಿರುವ ನಗರ ಮೊದಲ 100ರ ಪಟ್ಟಿಯಲ್ಲೂ ಇಲ್ಲದಿರುವುದು ನಾಗರಿಕರಿಗೆ ಬೇಸರ ತರಿಸಿದೆ.

ನಗರದಲ್ಲಿ ಕಸ ವಿಲೇವಾರಿ, ವೈಯಕ್ತಿಕ ಶೌಚಾಲಯಗಳ ಬಳಕೆ, ಸಮುದಾಯ ಶೌಚಾಲಯಗಳ ಲಭ್ಯತೆ, ಪರಿಸರ ಕುರಿತ ಜನರ ನಡವಳಿಕೆ, ಪಾಲಿಕೆಯ ಕಾರ್ಯಕ್ರಮಗಳ ಬಗ್ಗೆ ಜನರ ಅಭಿಪ್ರಾಯ, ಕಸ ಸಂಗ್ರಹಣೆ, ಕಸ ವಿಲೇವಾರಿ, ಕೇಂದ್ರ ಸರ್ಕಾರದ  ಅಧಿಕಾರಿಗಳ ವೀಕ್ಷಣೆ ಮುಂತಾದ ಮಾನದಂಡಗಳನ್ನು ಅನುಸರಿಸಿ ಈ ರ್‌್ಯಾಂಕಿಂಗ್‌  ಪ್ರಕಟಿಸಲಾಗಿದೆ.

ರಾಜ್ಯದ ನಗರಗಳನ್ನು ಗಣನೆಗೆ ತೆಗೆದುಕೊಂಡಾಗ 6ನೇ ಸ್ಥಾನ ಪಡೆದರೂ ಜನರಲ್ಲಿ ಒಡಕಿನ ಅಭಿಪ್ರಾಯ ಕೇಳಿ ಬಂದಿದೆ. ಬಹಳಷ್ಟು ಮಂದಿ ಈ ಆಯ್ಕೆಯ ಬಗ್ಗೆಯೇ ಭಿನ್ನರಾಗ ಹೊರಡಿಸಿದ್ದಾರೆ. ಮತ್ತೊಂದಿಷ್ಟು ಮಂದಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ  ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.  ಪ್ರತಿ ಬಡಾವಣೆಯ ಮೂಲೆ ಮೂಲೆಗಳಲ್ಲಿ ಕಸಕ್ಕೆ ಬೆಂಕಿ ಹಾಕುವ ಕೆಲಸ ನಿರಂತರ ನಡೆಯುತ್ತಿದೆ. ಎಲ್ಲ ರಸ್ತೆಗಳಲ್ಲೂ ಕಸದ ರಾಶಿ ಬಿದ್ದಿರುತ್ತದೆ. ಪಾಲಿಕೆ ಸ್ವಲ್ಪ ಮುತುವರ್ಜಿಯಿಂದ ಕೆಲಸ ಮಾಡಿದ್ದರೆ ಇನ್ನೂ ಒಳ್ಳೆಯ ಸ್ಥಾನ ಪಡೆಯಬಹುದಿತ್ತು’ ಎಂಬ ಮಾತುಗಳು ಕೇಳಿ ಬಂದಿವೆ.

‘ಇದ್ದುದ್ದರಲ್ಲಿ ಸಮಾಧಾನದ ಸ್ಥಾನದ ಗರಿಮೆ ಸಿಕ್ಕರೂ ನಗರದ ಜನರು ಸ್ವಚ್ಛತೆ ಬಗ್ಗೆ, ಸ್ವಚ್ಛ ಪರಿಸರದ ಬಗ್ಗೆ ಎತ್ತಿರುವ ಸಂದೇಹಗಳಿಗೆ, ಅನುಮಾನಗಳಿಗೆ ಪಾಲಿಕೆ ಉತ್ತರ ನೀಡಬೇಕಾಗಿದೆ’ ಎನ್ನುತ್ತಾರೆ ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ರಾಘವೇಂದ್ರ.

ನಗರದಲ್ಲಿ 73 ಸಾವಿರ ಮನೆಗಳಿದ್ದು, 3 ಸಾವಿರ ಮನೆಗಳಿಗೆ ಶೌಚಾಯಲ ಇಲ್ಲ. ನಗರ ಇನ್ನೂ ಬಯಲು ಶೌಚ ಮುಕ್ತ ನಗರವಾಗಲು ಸಾಧ್ಯವಾಗಿಲ್ಲ.  ಪರಿಸರ ಕಾಳಜಿ ಕುರಿತು ಮೂಡಿಸಿರುವ ಜಾಗೃತಿ ಅಭಿಯಾನ, ಕಾರ್ಯಕ್ರಮಗಳು ಜನರ ನಡವಳಿಕೆಯಲ್ಲಿ, ಚಿಂತನೆಯಲ್ಲಿ ಗಮನಾರ್ಹ ಬದಲಾವಣೆ ತಂದಿಲ್ಲ, ಈ ವಿಷಯದಲ್ಲಿ ಮೈಸೂರು ನಮಗಿಂತಲೂ ಮುಂದೆ ಇದೆ. ಈ  ಅಂಶದ ಬಗ್ಗೆಯೂ ಪಾಲಿಕೆ ಹೆಚ್ಚು ಗಮನ ಹರಿಸಬೇಕು ಎನ್ನುತ್ತಾರೆ ಪರಿಸರ ತಜ್ಞರು.

ಕೆಲಸಕ್ಕೆ ಸಿಕ್ಕ ಪ್ರತಿಫಲ
‘ಇದೇ ಮೊದಲ ಸಲ ಸ್ಪರ್ಧೆಯಲ್ಲಿ ಭಾಗವಹಿಸಿ 152ನೇ ಸ್ಥಾನ ಪಡೆದಿದ್ದೇವೆ. ಮುಂದಿನ ಸಲ 50 ನೇ ಸ್ಥಾನ ಪಡೆಯಲು ಪ್ರಯತ್ನಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಅಶದ್ ಷರೀಫ್‌ ತಿಳಿಸಿದರು.

‘ಮುಂದಿನ ಐದಾರು ತಿಂಗಳಲ್ಲಿ ನಗರ ಸಾಕಷ್ಟು ಬದಲಾವಣೆ ಕಾಣಲಿದೆ. ಈ ಬಗ್ಗೆ ಈಗಾಗಲೇ ಕಾರ್ಯಯೋಜನೆ ಹಾಕಿಕೊಂಡಿದ್ದೇವೆ. ಈಗ ನಾವು ಹುಬ್ಬಳ್ಳಿ– ಧಾರವಾಡದಂಥ ದೊಡ್ಡ ಪಾಲಿಕೆಯನ್ನೇ ಹಿಂದಿಕ್ಕಿದ್ದೇವೆ. ಇದು ನಮ್ಮ ಕೆಲಸಕ್ಕೆ ಸಿಕ್ಕ ಪ್ರತಿಫಲ’ ಎಂದು ಸಂಭ್ರಮ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಂದ ಹೇಳಿಸಿದರು...
ನಾಗರಿಕರು ನೀಡಿರುವ ಅಭಿಪ್ರಾಯ ಆಧರಿಸಿ ನೀಡಿರುವ ಅಂಕ ವಿವಾದಕ್ಕೆ ಕಾರಣವಾಗಿದೆ. ಹೆಚ್ಚು ಜನರು ಸ್ವಯಂ ಆಗಿ ಅಭಿಪ್ರಾಯ ಹೇಳಿರಲಿಲ್ಲ ಎನ್ನಲಾಗಿದೆ.

‘ಪಾಲಿಕೆಯ ಸಿಬ್ಬಂದಿ, ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಕರೆ ಮಾಡಿಸಿ ಹೇಳಿಕೊಟ್ಟ ಅಭಿಪ್ರಾಯವಾಗಿತ್ತು.  ಹೀಗಾಗಿ ಈ ಮಾನದಂಡದಲ್ಲಿ ಅತಿ ಹೆಚ್ಚು ಅಂಕ ಬಂದಿವೆ. ಇದರಿಂದಲೂ ನಮ್ಮ ಸ್ಥಾನ ಮೇಲಕ್ಕೇರಲು ಕಾರಣವಾಗಿದೆ’ ಎಂದು ಪಾಲಿಕೆ ಸದಸ್ಯರೊಬ್ಬರು ತಿಳಿಸಿದರು.
ಒಟ್ಟು 5,000 ಮಂದಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

ಮೈಸೂರಿಗೆ ಹೋಲಿಸುವುದು ಬೇಡ
ತುಮಕೂರು ನಗರದ ಸ್ವಚ್ಛತೆಯನ್ನು ಮೈಸೂರಿಗೆ ಹೋಲಿಸಲು ಸಾಧ್ಯವೇ ಇಲ್ಲ. ರಾಷ್ಟ್ರಮಟ್ಟದಲ್ಲಿ ಮೈಸೂರು 5ನೇ ಸ್ಥಾನದಲ್ಲಿದೆ. ರ್‌್ಯಾಂಕಿಂಗ್‌ಗೆ ಹೋಲಿಸಿ ನೋಡಿದರೆ ಮೈಸೂರಿಗೂ ನಮಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಾರೆ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT