ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರು ಸ್ವಚ್ಛತೆ ಕಾಪಾಡಲು ಮನವಿ

Last Updated 6 ಮೇ 2017, 8:31 IST
ಅಕ್ಷರ ಗಾತ್ರ

ವಿಜಯಪುರ: ಕಾರ್ಮಿಕರು ಕೇವಲ ದುಡಿಮೆಗೆ ಮಾತ್ರವೇ ಪ್ರಾಧಾನ್ಯತೆ ನೀಡದೆ, ಸ್ವಚ್ಛತೆಯನ್ನು ಕಾಪಾಡುವುದು, ತಮ್ಮ ಆರೋಗ್ಯ ರಕ್ಷಣೆಯ ಕಡೆಗೂ ಗಮನ ಹರಿಸಬೇಕು ಎಂದು ರೇಷ್ಮೆ ಹಿತರಕ್ಷಣಾ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ ಹೇಳಿದರು.

ವಿಜಯಪುರದ ಕೇಂದ್ರೀಯ ರೇಷ್ಮೆ ಬೀಜೋತ್ಪಾದನಾ ಕೇಂದ್ರದಲ್ಲಿ ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಮಿಕರು ಕೇವಲ ದುಡಿಮೆಗಷ್ಟೆ ಸೀಮಿತವಾಗದೆ, ಆರೋಗ್ಯ ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು. ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ರೈತರು ಅಸಂಘಟಿತ ವಲಯದ ಕಾರ್ಮಿಕರಾಗಿ ಬದುಕು ಸಾಗಿಸುತ್ತಿದ್ದಾರೆ.

ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಬಹಳಷ್ಟು ಕಾರ್ಮಿಕರು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳಾಗಲಿ, ಅವರ ಹಕ್ಕುಗಳ ಬಗ್ಗೆಯಾಗಲಿ ಮಾಹಿತಿಯಿಲ್ಲ ಎಂದರು.

ರೈತರು, ಕಾರ್ಮಿಕರಲ್ಲಿನ ನೈಪುಣ್ಯತೆಗೆ ಅನುಗುಣವಾಗಿ ಅವರಿಗೆ ಸೌಲಭ್ಯಗಳು ಸಿಗುವಂತಾಗಬೇಕು. ಸಮಾನ ವೇತನಕ್ಕೆ ಸಮಾನ ಕೂಲಿ ಸಿಗಬೇಕು ಎಂದು ತಿಳಿಸಿದರು.

ವಿಜಯಪುರದ ಬೀಜೋತ್ಪಾದನಾ ಕೇಂದ್ರದ ವಿಜ್ಞಾನಿ ಡಾ.ಪಿ. ಮುನಿಶಾಮಿರೆಡ್ಡಿ ಮಾತನಾಡಿ, ಕಾರ್ಮಿಕರನ್ನು ಕೀಳಾಗಿ ನೋಡುವ ಜನರೇ ಹೆಚ್ಚಾಗಿದ್ದಾರೆ. ಆದರೆ ಕಾರ್ಮಿಕರೂ ಈ ದೇಶದ ಬೆನ್ನೆಲುಬು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಕಾರ್ಮಿಕರು ತಾವು ಕೆಲಸ ಮಾಡುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಕೇಂದ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸ್ವಚ್ಛತೆಯನ್ನು ಕಾಪಾಡುತ್ತೇವೆಂದು ಪ್ರಮಾಣವಚನ ಸ್ವೀಕಾರ ಮಾಡಿದರು. ಸಿಬ್ಬಂದಿ ಸುಜಾತ, ನಾಗರತ್ಮ, ಬಿ.ಜೆ.ಡಾರ್ಲಿ, ಲೀಲಾವತಿ, ಜಲಜಾ, ಮುನಿಶಾಮಪ್ಪ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT