ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂತಿಗೆ ಹಾವಳಿ ನಿಯಂತ್ರಣಕ್ಕೆ ಆಗ್ರಹ

ರಾಮನಗರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ
Last Updated 6 ಮೇ 2017, 8:41 IST
ಅಕ್ಷರ ಗಾತ್ರ

ರಾಮನಗರ: ಖಾಸಗಿ ಶಾಲೆಗಳಲ್ಲಿ ವಂತಿಗೆ (ಡೊನೆಷನ್‌) ಹಾವಳಿಯನ್ನು ತಪ್ಪಿಸಲು ಶಾಲೆ ಪ್ರಾರಂಭವಾಗುವುದಕ್ಕೂ ಮುನ್ನ ಶಿಕ್ಷಣ ಇಲಾಖೆಯು ಶುಲ್ಕ ಪ್ರಮಾಣವನ್ನು ನಿಗದಿಪಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಮಿನಿ ವಿಧಾನ ಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಚಾರ ವ್ಯಾಪಕವಾಗಿ ಚರ್ಚೆಯಾದವು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಂತಿಗೆ  ಹಾವಳಿ ತಡೆಗಟ್ಟುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹಲವು ಸದಸ್ಯರು ಆರೋಪಿಸಿದರು.ಪ್ರತಿ ವರ್ಷ ಶಾಲೆಗಳು ಪ್ರಾರಂಭವಾಗುವ ಸಮಯದಲ್ಲಿ ನಾಮಕಾವಾಸ್ತೆ ಸೂಚನೆ   ನೆಪ ಮಾತ್ರಕ್ಕೆ ಹೊರಡಿಸಲಾಗುತ್ತಿದೆ. ಆದರೆ ಇಲ್ಲಿಯವರೆವಿಗೂ ಯಾವುದೇ ರಿತಿಯ ಕಠಿಣ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ್ ಮಾತನಾಡಿ ‘ಪ್ರವೇಶಾತಿ ಸಮಯ ಮುಗಿಯುವ ಸಂದರ್ಭದಲ್ಲಿ ಅನುಮತಿ ಇಲ್ಲದ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸುತ್ತದೆ. ಆ ವೇಳೆಗಾಗಲೆ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ದಾಖಲಿಸಿರುತ್ತಾರೆ. ಆದ್ದರಿಂದ ಪ್ರವೇಶಾತಿ ಪ್ರಾರಂಭಕ್ಕೂ ಮುನ್ನ, ಮೇ ತಿಂಗಳ ಅಂತ್ಯದ ವೇಳೆಗೆ ಅನುಮತಿ ಇಲ್ಲದ ಶಾಲೆಗಳ ವಿವರಗಳನ್ನು ಸಾರ್ವಜನಿಕರಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಸದಸ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ ‘ಯಾವುದೇ ತೊಂದರೆಯಾಗದಂತೆ ಈ ಬಾರಿ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಅನುಮತಿ ಪಡೆಯದೆ ಯಾವುದೇ ಶಾಲೆಗಳು ತಾಲ್ಲೂಕಿನಲ್ಲಿ ನಡೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮೇವು ವಿತರಣೆ ವಿರುದ್ಧ ಆಕ್ರೋಶ: ‘ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇರುವ ಮೇವಿನಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ವಿತರಿಸುತ್ತಿಲ್ಲ’ ಎಂದು ಸದಸ್ಯರು ಆರೋಪಿಸಿದರು.

‘ಸರ್ಕಾರ ಸರಬರಾಜು ಮಾಡುವ ಮೇವನ್ನು ಅರ್ಹ ರೈತರಿಗೆ ವಿತರಿಸುತ್ತಿಲ್ಲ. ದಾಖಲಾತಿಗಳಲ್ಲಿ ಮಾತ್ರ ಮೇವು ವಿತರಣೆ ಬಗ್ಗೆ ರೈತರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ’ ಎಂದು ಸದಸ್ಯ ಗಾಣಕಲ್ ನಟರಾಜ್ ಆರೋಪಿಸಿದರು.

ಸದಸ್ಯರ ಆರೋಪ ನಿರಾಕರಿಸಿದ ಪಶುಸಂಗೋಪನಾ ಇಲಾಖೆ ಅಧಿಕಾರಿ ನಜೀರ್‌ ಅಹಮದ್ ಮಾತನಾಡಿ, ‘ಸರ್ಕಾರದ ಮಾನದಂಡ ಅನುಸರಿಸಿ ಸಾಧ್ಯವಾದಷ್ಟು ಮಟ್ಟಿಗೆ ಮೇವಿನ ಸಮಸ್ಯೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು. 

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಭದ್ರಯ್ಯ ‘ಅರ್ಕಾವತಿ ನದಿ ಆಸುಪಾಸಿನಲ್ಲಿರುವ ಗ್ರಾಮಗಳಿಗೆ ಮೇವು ವಿತರಿಸಲಾಗಿದೆ. ಈ ಭಾಗದ ರೈತರಿಗೆ ಅಷ್ಟಾಗಿ ಮೇವಿನ ಕೊರತೆ ಇಲ್ಲ. ಆದರೆ ತೀವ್ರ ಮೇವಿನ ಅಭಾವ ಇರುವ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ, ಬನ್ನಿಕುಪ್ಪೆ, ವಿಭೂತಿಕೆರೆ, ಅಂಜನಾಪುರ, ಅಂಕನಹಳ್ಳಿಯಂತಹ ದೊಡ್ಡ ಗ್ರಾಮಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ದೂರಿದರು.

‘ಅಲ್ಲದೆ ಸರ್ಕಾರ ಕೊಡುವ ಮೇವಿಗೆ ವಿತರಣೆ ಸಂದರ್ಭದಲ್ಲಿ ತೂಕ ಬರಲೆಂದು ನೀರನ್ನು ಸಿಂಪಡಿಸಿ ಕೊಳೆತ ಮೇವು ಸರಬರಾಜು ಮಾಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹಾದೇವಯ್ಯ, ಉಪಾಧ್ಯಕ್ಷೆ ಲಕ್ಷ್ಮಮ್ಮ ದಾಸಪ್ಪ, ಕಾರ್ಯ ನಿರ್ವಹಣಾಧಿಕಾರಿ ಚಂದ್ರು ಇದ್ದರು.

ಆಧಾರ್‌ ಕಡ್ಡಾಯಕ್ಕೆ ಆಕ್ಷೇಪ
ಜೂನ್ ತಿಂಗಳಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದ್ದು, ರೈತರಿಗೆ ರಾಗಿ ಬಿತ್ತನೆ ಬೀಜ ಪೂರೈಸಲು ಸಿದ್ಧತೆಯನ್ನು ಮಾಡಿಕೊಳ್ಳುವಂತೆ ಕೃಷಿ ಇಲಾಖೆಗೆ ಸದಸ್ಯರು ಸೂಚಿಸಿದರು.

ಮಳಿಗೆಗಳಲ್ಲಿ ರಸಗೊಬ್ಬರವನ್ನು ಖರೀದಿ ಮಾಡುವ ರೈತರು ಕಡ್ಡಾಯವಾಗಿ  ಆಧಾರ್‌ ಕಾರ್ಡ್‌ ಹೊಂದಿರಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಸದಸ್ಯ ಗಾಣಕಲ್ ನಟರಾಜ್ ಆಕ್ಷೇಪ ವ್ಯಕ್ತಪಡಿಸಿದರು. ‘ಕೃಷಿ ಇಲಾಖೆಯಲ್ಲಿನ ಗೊಂದಲಗಳಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ’ ಎಂದು ಅಸಮಾಧಾನ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT