ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಗೆಲುವಿಗೆ ಕಾರಣಗಳೇನು?

Last Updated 6 ಮೇ 2017, 19:30 IST
ಅಕ್ಷರ ಗಾತ್ರ

‘ಈದ್‌ ಇಲ್ಲ, ದೀಪಾವಳಿ ಇಲ್ಲ. ಸಲ್ಮಾನ್‌, ಅಮೀರ್‌, ಶಾರೂಖ್‌ ಯಾರೂ ಇಲ್ಲ. ಹಾಗಿದ್ದೂ ಹಿಂದಿ ಭಾಷೆಗೆ ಡಬ್‌ ಆಗಿರುವ ಸಿನಿಮಾವೊಂದು ಐತಿಹಾಸಿಕ ಓಪನಿಂಗ್‌ ಪಡೆದುಕೊಂಡಿದೆ. ಎಸ್‌.ಎಸ್‌. ರಾಜಮೌಳಿ ಬಾಲಿವುಡ್‌ನ ಕೆನ್ನೆಗೇ ಬಾರಿಸಿದ್ದಾರೆ.’

ಜನಪ್ರಿಯ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಏಪ್ರಿಲ್‌ 29ರಂದು ತಮ್ಮ ‘ಟ್ವಿಟರ್‌’ ಗೋಡೆಯ ಮೇಲೆ ಬರೆದುಕೊಂಡಿದ್ದ ಸಾಲುಗಳಿವು. ಅವರು ಉಲ್ಲೇಕಿಸಿರುವ ಐತಿಹಾಸಿಕ ಓಪೆನಿಂಗ್‌ ಪಡೆದುಕೊಂಡ ಸಿನಿಮಾ ‘ಬಾಹುಬಲಿ 2’.

ವರ್ಮ ಅವರ ಮಾತಿನಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಹಾಗೆಯೇ ಇದು ಅವರೊಬ್ಬರ ಮಾತೂ ಅಲ್ಲ. ಏಪ್ರಿಲ್‌ 28ರಂದು ಬಿಡುಗಡೆಯಾಗಿರುವ ಈ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ದೇಶವೇ ನಿಬ್ಬೆರಗಾಗಿದೆ. ಹಾಲಿವುಡ್‌ ಜಗತ್ತೂ ಬೆರಗುಗಣ್ಣಿನಿಂದ ‘ಬಾಹುಬಲಿ’ಯ ಅಬ್ಬರವನ್ನು ನೋಡುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಎಂದರೆ ಅಸಡ್ಡೆಯಿಂದ ನೋಡುತ್ತಿದ್ದ, ತಮ್ಮ ಸಿನಿಮಾಗಳಲ್ಲಿಯೂ ದಕ್ಷಿಣ ಭಾರತದ ಜನ–ಭಾಷೆಗಳನ್ನು ಗೇಲಿಗಾಗಿ ಬಳಸಿಕೊಳ್ಳುತ್ತಿದ್ದ ಬಾಲಿವುಡ್‌ ಪರಿಣತರು ಕತ್ತು ನೋಯಿಸಿಕೊಳ್ಳುವಷ್ಟು ತಲೆಯೆತ್ತಿಯೇ ನೋಡಬೇಕಾದ ಎತ್ತರಕ್ಕೆ ‘ಬಾಹುಬಲಿ’ ಬೆಳೆದು ನಿಂತಿದ್ದಾನೆ.

(ಪವನ್ ಕುಮಾರ್)

ವೈರಾಗ್ಯಮೂರ್ತಿ ಬಾಹುಬಲಿಗೂ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ನಾಯಕನಿಗೂ ಯಾವುದೇ ಸಾಮ್ಯತೆ ಇಲ್ಲ. ಆದರೆ ಈ ಸಿನಿಮಾದ ಯಶಸ್ಸನ್ನು ತಲೆಯೆತ್ತಿಯೇ ನೋಡಬೇಕಾಗಿರುವುದರಿಂದ, ಬಾಹುಬಲಿ ಮೂರ್ತಿಯ ಎತ್ತರಕ್ಕೆ ಆ ಯಶಸ್ಸನ್ನು ಹೋಲಿಸಬಹುದೇನೋ!
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ವೆಚ್ಚದ ಚಿತ್ರ ಎಂಬ ಅಗ್ಗಳಿಕೆಯನ್ನು ಪಡೆದುಕೊಂಡಿರುವ ಈ ಸಿನಿಮಾ, ಅತ್ಯಂತ ಹೆಚ್ಚು ಗಳಿಕೆಯ ಸಿನಿಮಾ ಎಂಬ ಕಿರೀಟವನ್ನೂ ತನ್ನದಾಗಿಸಿಕೊಂಡಿದೆ. ‘ಬಾಹುಬಲಿ 2’ ಸಿನಿಮಾಗೆ ವೆಚ್ಚವಾದ ಹಣ ₹250 ಕೋಟಿ.

ಬಿಡುಗಡೆಯಾದ ಮೊದಲ ದಿನವೇ  ₹ 120 ಗಳಿಕೆ ಕಂಡಿರುವ ಈ ಸಿನಿಮಾ, ಈಗ ₹ಏಳುನೂರು ಕೋಟಿಯ ಗಡಿಯನ್ನೂ ದಾಟಿ ಮುನ್ನುಗ್ಗುತ್ತಲೇ ಇದೆ. ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಸೇರಿದಂತೆ ಬಾಹುಬಲಿಯ ವಿದೇಶದ ಗಳಿಕೆಯೇ ನೂರೈವತ್ತು ಕೋಟಿ ರೂಪಾಯಿ ದಾಟಿದೆ. ಸಾವಿರ ಕೋಟಿಯ ರೂಪಾಯಿಗಳ ರಿಬ್ಬನ್‌ ಹರಿದ ಮೇಲೆಯೂ ‘ಬಾಹುಬಲಿ 2’ ಗಳಿಕೆಯ ಓಟ ನಿಲ್ಲುವುದಿಲ್ಲ ಎಂದು ಸಿನಿಮಾ ಪಂಡಿತರು ದೃಢವಾಗಿ ಹೇಳುತ್ತಿದ್ದಾರೆ. ಈ ಸಿನಿಮಾ ಸೃಷ್ಟಿಸುತ್ತಿರುವ ಸಾಲು ಸಾಲು ದಾಖಲೆಗಳನ್ನು ತುಂಬಿಸಿಕೊಳ್ಳುತ್ತಾ ಗಲ್ಲಾಪೆಟ್ಟಿಗೆಯೇ ಅಲ್ಲಾಡಿಹೋಗಿದೆ!

ಗಳಿಕೆ–ವೆಚ್ಚಗಳ ಲೆಕ್ಕಾಚಾರದಲ್ಲಿ ಭಾರತದ ಎಲ್ಲ ಚಿತ್ರರಂಗಗಳ ಹಿರಿಯಣ್ಣನಂತಿರುವ ಹಿಂದಿ ಚಿತ್ರರಂಗದಲ್ಲಿ ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾಗಳೆಂದರೆ – ‘ಪೀಕೆ’ (₹790 ಕೋಟಿ) ಮತ್ತು ‘ದಂಗಲ್‌’ (₹730 ಕೋಟಿ). ಇವೆರಡರ ದಾಖಲೆಯನ್ನೂ ‘ಬಾಹುಬಲಿ’ ಪಕ್ಕಕ್ಕೊತ್ತಿ ಮುಂದೆ ಧಾವಿಸುತ್ತಿದ್ದಾನೆ.

ನಮ್ಮ ನೆರೆಯ ಭಾಷೆಯಲ್ಲಿಯೇ ರೂಪುಗೊಂಡ ಸಿನಿಮಾವೊಂದು ಇಷ್ಟು ದೊಡ್ಡ ಯಶಸ್ಸನ್ನು ಕಾಣುತ್ತಿರುವಾಗ ಅದರ ಪ್ರಭಾವಳಿಯನ್ನು ಅಚ್ಚರಿಯಿಂದ ಮೈಮರೆತು ನೋಡುವುದ ಜೊತೆಗೇ ಆ ಬೆಳಕಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬೇಕಾದ ಎಚ್ಚರವೂ ಬೇಕಾಗಿದೆ. ಇದು ಹೋಲಿಕೆಯ ಮಾತಲ್ಲ. ಬದಲಾಗಿ ಈ ಯಶಸ್ಸನ್ನು ಮತ್ತು ಅದು ಹೇಳುತ್ತಿರುವ ಸಂಗತಿಗಳನ್ನು ಅರ್ಥಮಾಡಿಕೊಂಡರೆ ಅದರಲ್ಲಿ ನಮಗೆ ಪಾಠವಾಗಬೇಕಾದ ಹಲವು ಸಂಗತಿಗಳು ಗೋಚರಿಸಬಹುದು.

ಹಾಗೆ ನೋಡಿದರೆ ಇಷ್ಟು ದೊಡ್ಡ ಯಶಸ್ಸನ್ನು ವ್ಯಾಖ್ಯಾನಿಸಲು ಸಿನಿಮಾ ವಿಶ್ಲೇಷಕರೇ ಇನ್ನೂ ಮಾನಸಿಕವಾಗಿ ಸಿದ್ಧರಾಗಿರುವಂತೆ ತೋರುತ್ತಿಲ್ಲ.

ಸಾಮರ್ಥ್ಯ ಮತ್ತು ಶ್ರಮದ ಫಲ
ಈಗ ಒಮ್ಮಿಂದೊಮ್ಮೆಲೇ ದಾಖಲೆಗಳ ಸುರಿಮಳೆ ಗೈಯುತ್ತಿರುವ ‘ಬಾಹುಬಲಿ 2’ ಸಿನಿಮಾ ನಿರ್ಮಾಣದ ಯಶಸ್ಸಿನಲ್ಲಿ ಹಲವು ಸಂಗತಿಗಳು ಏಕತ್ರ ಸಂಭವಿಸಿವೆ.

‘ಬಾಹುಬಲಿ 2’ ಗೆಲುವನ್ನು ಕನ್ನಡದ ನಟ ರಮೇಶ್‌ ಅವರಿಂದ್‌ ಅವರು ವ್ಯಾಖ್ಯಾನಿಸುವುದು – ‘ಪವರ್‌ ಮತ್ತು ಪರಿಶ್ರಮದ ಫಲ’ ಎಂದು.

‘ಯಾವುದೇ ಕ್ಷೇತ್ರದಲ್ಲಿ ಪ್ರಯತ್ನ ಮತ್ತು ಪರಿಶ್ರಮ ಸರಿಯಾಗಿದ್ದರೆ ದೊಡ್ಡ ಯಶಸ್ಸು ಸಾಧ್ಯ ಎಂದು ಮತ್ತೆ ಸಾಬೀತು ಮಾಡಿದ ಸಿನಿಮಾ ಬಾಹುಬಲಿ 2’ ಎನ್ನುತ್ತಾರೆ ಅವರು. ‘ಇಂಥದ್ದೊಂದು ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುವುದು ತಂಡದ ನಾಯಕ’ ಎನ್ನುತ್ತಾ ನಿರ್ದೇಶಕ ರಾಜಮೌಳಿ ಅವರ ಪ್ರತಿಭೆಯನ್ನು ಶ್ಲಾಘಿಸಲು ಮರೆಯುವುದಿಲ್ಲ.

‘ಹಣ–ಗಿಣ ಎಲ್ಲವನ್ನೂ ಮೀರಿ, ರಾಜಮೌಳಿ ಅವರ ವಿಷನ್‌ನಲ್ಲಿ ಹುಟ್ಟಿದ ಸಿನಿಮಾ ಇದು. ಐಡಿಯಾಗೆ ಇರುವ ಪವರ್‌ ಬೇರಾವುದಕ್ಕೂ ಇರುವುದಿಲ್ಲ. ದುಡ್ಡು, ಮೂಲಸೌಕರ್ಯ ಎಲ್ಲವೂ ಅದಕ್ಕೆ ಪೂರಕವಾಗಿರುತ್ತವೆಯೇ ಹೊರತು ಅದೇ ಎಲ್ಲವೂ ಅಲ್ಲವೇ ಅಲ್ಲ. ಸಿನಿಮಾ ಮಾಧ್ಯಮದಲ್ಲಿ ಇಷ್ಟನ್ನು ಮಾಡಬಹುದು ಎಂಬ ಗೆರೆಯೊಳಗೇ ನಾವು ಯೋಚಿಸುತ್ತಿರುತ್ತೇವೆ. ಆದರೆ ರಾಜಮೌಳಿ ಆ ಗೆರೆಯನ್ನೂ ಮೀರಿ ಏನೆಲ್ಲವನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ನಾವು ಅವರಿಗೆ ಸೆಲ್ಯೂಟ್‌ ಹೊಡೆಯಬೇಕು’ ಎನ್ನುವ ರಮೇಶ್‌, ಐಡಿಯಾದ ಜೊತೆಗೆ ಅದನ್ನು ಕಾರ್ಯರೂಪಕ್ಕೆ ತರುವ ಸವಾಲಿನ ಕುರಿತೂ ಮಾತನಾಡುತ್ತಾರೆ.

‘ಒಂದು ಪರಿಕಲ್ಪನೆಯನ್ನು ಸಾರ್ಥಕವಾಗಿ ಸಾಕಾರಗೊಳಿಸುವುದು ಸುಲಭವಲ್ಲ. ಅದಕ್ಕೆ ಅಪಾರ ಪರಿಶ್ರಮ ಮತ್ತು ಬದ್ಧತೆ ಎರಡೂ ಬೇಕು’ ಎನ್ನುವುದು ಅವರ ಅಭಿಮತ.

‘ಭಾಷೆಯ ಗಡಿಗಳನ್ನು ದಾಟಿ, ಸಿನಿಮಾ ಮಾಧ್ಯಮಕ್ಕೆ ಇಂಥದ್ದೊಂದು ಶಕ್ತಿ ಇದೆ ಎನ್ನುವುದನ್ನು ಆಗಾಗ ಯಾರಾದರೂ ಸಾಬೀತು ಮಾಡಬೇಕಾಗುತ್ತದೆ. ಇದರಿಂದ ಇನ್ನೂ ಹಲವರಿಗೆ ಪ್ರೇರಣೆಯೂ ಸಿಗುತ್ತದೆ’ ಎನ್ನುತ್ತಾರೆ ರಮೇಶ್‌.

(ಅರವಿಂದ ಶಾಸ್ತ್ರಿ)

ಐದು ವರ್ಷದ ಶ್ರಮ
‘ಬಾಹುಬಲಿ’ ಯಶಸ್ಸಿನ ಹಿಂದೆ ರಾಜಮೌಳಿ ಅವರ ಐದು ವರ್ಷಗಳ ಶ್ರಮವಿದೆ. ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್‌ ಅವರ ಫ್ಯಾಂಟಸಿ ಕಥೆಯ ಶಕ್ತಿ ಇದೆ. ಪ್ರಭಾಸ್‌, ರಾನಾ ದಗ್ಗುಬಾಟಿ, ತಮನ್ನಾ,  ಅನುಷ್ಕಾ ಶೆಟ್ಟಿ, ನಾಸಿರ್‌, ರಮ್ಯಾಕೃಷ್ಣ, ಸತ್ಯರಾಜ್‌ ಮುಂತಾದ ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ಮೈಮರೆಸುವ ದೃಶ್ಯವೈಭವ, ಕಂಪ್ಯೂಟರ್‌ ಗ್ರಾಫಿಕ್ಸ್‌ಗಳ ಸಮ್ಮೋಹಕ ಮೇಳ, ಬಾಲ್ಯದಲ್ಲಿ ಕೇಳಿದ ಅಮರಚಿತ್ರಕಥಾ, ‘ಚಂದಮಾಮ’ದಲ್ಲಿನ ಶೌರ್ಯ–ಚಮತ್ಕಾರಗಳ ರಮ್ಯಲೋಕಕ್ಕೆ ಸೆಳೆದೊಯ್ಯುವ ಕಲ್ಪನಾವಿಲಾಸವಿದೆ.

‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಒಟ್ಟಾಗಿ ನೋಡಿದರೆ ನಿರ್ದೇಶಕರ ಕೆಲವು ಸೂಕ್ಷ್ಮ ಲೆಕ್ಕಾಚಾರಗಳೂ ಗೋಚರವಾಗುತ್ತವೆ. ‘ಬಾಹುಬಲಿ 2’ ಸಿನಿಮಾದ ಯಶಸ್ಸಿನ ಬೀಜಗಳು ಮೊದಲ ಭಾಗ ನೋಡಲು ಬಂದ ಪ್ರೇಕ್ಷಕರ ಮನಸ್ಸಿನಲ್ಲಿಯೇ ಬಿತ್ತಿರುವುದು ಗೊತ್ತಾಗುತ್ತದೆ. ವ್ಯವಸ್ಥಿತ ಪ್ರಚಾರ ತಂತ್ರ, ಕೆಲವು ವಿವಾದಗಳು, ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಜನರಿಗೆ ಪಸರಿಸಿದ ರೀತಿ ಈ ಎಲ್ಲವೂ ‘ಬಾಹುಬಲಿ 2’ ಇಷ್ಟು ಮೇಲಕ್ಕೆ ಜಿಗಿಯಲು ಚಿಮ್ಮುಹಲಗೆಯಾಗಿ ಕೆಲಸ ಮಾಡಿವೆ. ‘ಕನ್ನಡ ವಿರೋಧಿ’ ಎಂಬ ಹಣೆಪಟ್ಟೆಯನ್ನು ಕಟ್ಟಿಕೊಂಡೇ ಕರ್ನಾಟಕದಲ್ಲಿ ಬಿಡುಗಡೆಗೊಂಡ ಈ ಸಿನಿಮಾ, ಮೊದಲ ದಿನವೇ ಹನ್ನೆರಡು ಕೋಟಿ ಗಳಿಕೆ ಮಾಡಿದ್ದು ಇದಕ್ಕೊಂದು ಚಿಕ್ಕ ನಿದರ್ಶನ ಅಷ್ಟೆ.

ಮೊದಲ ಭಾಗದಲ್ಲಿಯೇ ಕುತೂಹಲದ ಬೀಜ
ಕಥೆಯ ನಿರೂಪಣೆಯನ್ನು ಗಮನಿಸಿದರೂ ಮೊದಲ ಭಾಗದಲ್ಲಿ ದೃಶ್ಯ ವೈಭವ, ಚಮತ್ಕಾರಿ ಯುದ್ಧತಂತ್ರಗಳು ನಾಯಕನ ಅತಿಮಾನುಷ ಶಕ್ತಿಗಳ ಪ್ರದರ್ಶನವನ್ನೇ ಪ್ರಧಾನವಾಗಿಟ್ಟುಕೊಂಡಿದ್ದರು. ಅಲ್ಲಿ ಅದ್ದೂರಿತನಕ್ಕಿರುವ ಬೆಲೆ, ಕಥೆಗಾಗಲೀ ನಟನೆಗಾಗಲೀ ಇರಲಿಲ್ಲ. ಅದರ ಅಂತ್ಯದಲ್ಲಿ ಪ್ರೇಕ್ಷಕನ ಮನಸ್ಸಿನಲ್ಲಿ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಬಿತ್ತಿದ್ದೂ ಸಾಕಷ್ಟು ಸಹಾಯಕಾರಿ ಆಗಿರುವುದು ಸತ್ಯ.

‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?’ ಎಂಬುದು ಬಾಹುಬಲಿ ಮೊದಲ ಭಾಗವನ್ನು ನೋಡಿದವರ ಪ್ರಶ್ನೆಯಷ್ಟೇ ಆಗಿ ಉಳಿದಿರಲಿಲ್ಲ. ಅದು ಸಾಂಕ್ರಾಮಿಕವಾಗಿ ಎಲ್ಲೆಡೆಯೂ ಹರಡಿತ್ತು.

‘ಒಂದನೇ ಭಾಗವನ್ನು ಚಿತ್ರಮಂದಿರದಲ್ಲಿ ನೋಡದೇ ಹೋದರೂ ಟೀವಿಯಲ್ಲಿ, ಪೈರಸಿ ಸೀಡಿ ತೆಗೆದುಕೊಂಡು ನೋಡಿರುತ್ತಾರೆ. ಅವರೆಲ್ಲರೂ ಎರಡನೇ ಭಾಗ ನೋಡಲೇಬೇಕು ಎಂದು ಕಾದಿದ್ದರು’ ಎಂದು ‘ಯು ಟರ್ನ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ಗುರ್ತಿಸುತ್ತಾರೆ.
ಆದರೆ ಎರಡನೇ ಭಾಗದಲ್ಲಿ ತಮ್ಮ ಪಥವನ್ನು ಕೊಂಚ ಬದಲಿಸಿದ ರಾಜಮೌಳಿ, ಕಥೆಯನ್ನು ಮುನ್ನೆಲೆಗೆ ತಂದಿದ್ದಾರೆ. ಮೊದಲ ಭಾಗದಲ್ಲಿ ಉಳಿಸಿರುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವುದರ ಸುತ್ತಲೇ ಕಥೆಯನ್ನು ಹೆಣೆದಿರುವುದು ಸ್ಪಷ್ಟವಾಗುತ್ತದೆ. ಎರಡೂ ಭಾಗವನ್ನು ಅಕ್ಕಪಕ್ಕ ಇಟ್ಟು ನೋಡಿದರೆ ಮೊದಲ ಭಾಗದ ಮುಕ್ತಾಯ ಇಡೀ ಸಿನಿಮಾದ ಮಧ್ಯಂತರದಂತೆಯೇ ಕಾಣುತ್ತದೆ.

ದಕ್ಷಿಣ ಭಾರತದ ಪ್ರಸಿದ್ಧ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಹೇಳುವಂತೆ, ಹೆಚ್ಚಿಗೆ ಪ್ರಚಾರವನ್ನೇ ಮಾಡದೆ ಗೆದ್ದ ಸಿನಿಮಾ ‘ಬಾಹುಬಲಿ 2’. ‘ಈ ಸಿನಿಮಾದ ಪ್ರಚಾರ ಮಾಡಿದ್ದು ಜನರು. ಸಾಮಾಜಿಕ ಜಾಲತಾಣಗಳಲ್ಲಿ, ಮಾತುಕತೆಯಲ್ಲಿ ಸಾಕಷ್ಟು ಚರ್ಚಿತವಾಗಿ ಅನಾಯಾಸವಾಗಿ ಪ್ರಚಾರ ದೊರೆಯಿತು. ಇದಕ್ಕೆ ಪೂರಕವಾಗಿ ಮಾಧ್ಯಮಗಳೂ ಸಾಕಷ್ಟು ಪ್ರಚಾರ ನೀಡಿದವು’ ಎಂದು ವೆಂಕಟೇಶ್‌ ಹೇಳುತ್ತಾರೆ.

‘ಈ ಯಶಸ್ಸು ನಾವೆಲ್ಲರೂ ಹೆಮ್ಮೆಪಡಬೇಕಾದದ್ದು. ಭಾರತದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಈ ಯಶಸ್ಸು ಹಲವರಿಗೆ ಶಾಕ್‌ ನೀಡಿದೆ’ ಎನ್ನುತ್ತಾರೆ ಅವರು.

(ರಮೇಶ್‌ ಅರವಿಂದ್‌)

ಸೂಪರ್‌ ಹೀರೊ ಯಶಸ್ಸಿನ ಸೂತ್ರ:
ರಾಜಮೌಳಿ ಸಿನಿಮಾದ ಯಶಸ್ಸಿನ ಹಿಂದೆ ಕೆಲಸ ಮಾಡಿರುವ ಕೆಲವು ಅಂಶಗಳತ್ತ ಪವನ್‌ ಕುಮಾರ್ ಗಮನ ಸೆಳೆಯುತ್ತಾರೆ. ‘‘ಜಾಗತಿಕ ಸಿನಿಮಾ ಮಾರುಕಟ್ಟೆ ಗಮನಿಸಿದರೂ ‘ಸೂಪರ್‌ ಹೀರೊ’ ಕಥೆಯ ಸಿನಿಮಾಗಳನ್ನು ಜನರು ಇಷ್ಟಪಡುತ್ತಿರುವುದು ತಿಳಿಯುತ್ತದೆ’’ ಎನ್ನುತ್ತಾರೆ.

‘ಸೂಪರ್‌ ಮ್ಯಾನ್‌, ಸ್ಪೈಡರ್‌ ಮ್ಯಾನ್‌ನಂಥ ಸಿನಿಮಾಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಬಾಹುಬಲಿಯೂ ಅಂಥದ್ದೊಂದು ಸೂಪರ್‌ ಹೀರೊ ಕಲ್ಪನೆಯ ಮೇಲೆಯೇ ರೂಪುಗೊಂಡಿದೆ. ಈ ಸಿನಿಮಾವನ್ನು ಯಾರೂ ದಕ್ಷಿಣ ಭಾರತದ ಸಿನಿಮಾ ಎಂದು ನೋಡುತ್ತಿಲ್ಲ. ಬದಲಾಗಿ ಭಾರತದ ಸಿನಿಮಾ ಎಂದೇ ನೋಡುತ್ತಿದ್ದಾರೆ’ ಎನ್ನುವ ಅನಿಸಿಕೆ ಅವರದು. ಬರೀ ರೋಚಕ ಕಲ್ಪನೆಗಳಿಂದಷ್ಟೇ ಸಿನಿಮಾ ಗೆಲ್ಲಲು ಸಾಧ್ಯವಿಲ್ಲ ಎಂಬ ಅರಿವೂ ಅವರಿಗಿದೆ.

‘ಇಂಥದ್ದೇ ಸೂಪರ್‌ಹೀರೊ ಕಲ್ಪನೆ ಇಟ್ಟುಕೊಂಡು ಬಂದ ಎಷ್ಟೋ ಸಿನಿಮಾಗಳು ಒಳ್ಳೆಯ ಕಥೆ ಇಲ್ಲದೇ ಸೋತುಹೋಗಿವೆ. ಆದರೆ ಇದರಲ್ಲಿ ದೃಶ್ಯಶ್ರೀಮಂತಿಕೆಯ ಜೊತೆಗೆ ಒಳ್ಳೆಯ ಕಥೆಯೂ ಇದೆ. ಭಾರತೀಯ ವೀಕ್ಷಕನಿಗೆ ಯಾವ ರೀತಿಯಲ್ಲಿ ಕಥೆ ಹೇಳಬೇಕು ಎಂಬ ಕಲೆ ರಾಜಮೌಳಿಗೆ ಗೊತ್ತಿದೆ’ ಎನ್ನುತ್ತಾರೆ ಅವರು.

‘ಕನ್ನಡಕ್ಕೇನಾದರೂ ಬಾಹುಬಲಿ 2 ಡಬ್‌ ಆಗಿದ್ದರೆ ಇನ್ನಷ್ಟು ಗಳಿಕೆ ಮಾಡುತ್ತಿತ್ತು’ ಎನ್ನುವುದು ಪವನ್ ಅವರ ಊಹೆ.

‘ಬಾಹುಬಲಿ ಎಲ್ಲ ಭಾರತದ ಪ್ರಮುಖ ಭಾಷೆಗಳಲ್ಲಿಯೂ ಡಬ್‌ ಆಗಿದೆ, ಕನ್ನಡವೊಂದನ್ನು ಬಿಟ್ಟು. ಹಿಂದಿಯ ಡಬ್‌ ಆವೃತ್ತಿ ದೊಡ್ಡ ಯಶಸ್ಸು ಗಳಿಸಿದೆ. ಇದರಿಂದ ನಾವು ಕಲಿಯಬೇಕಾದ ಪಾಠ ಏನೆಂದರೆ, ಇಂಥ ಸಿನಿಮಾಗಳನ್ನು ಕನ್ನಡದಲ್ಲಿಯೂ ಡಬ್‌ ಮಾಡಬೇಕು’ ಎನ್ನುತ್ತಾರೆ.

(ಬಾಹುಬಲಿ–2 ಸಿನಿಮಾದಲ್ಲಿ ಪ್ರಭಾಸ್)

ಬಜೆಟ್‌ ಮೂಲಕ ಯಶಸ್ಸು ಅಳೆಯುವುದೇ ಸರಿಯಲ್ಲ:
‘ಕಹಿ’ ಚಿತ್ರದ ನಿರ್ದೇಶಕ ಅರವಿಂದ ಶಾಸ್ತ್ರಿ ಅವರ ಪ್ರಕಾರ, ‘ಬಾಹುಬಲಿ’ ಸಿನಿಮಾದ ಯಶಸ್ಸನ್ನು ಅದರ ಬಜೆಟ್‌ ಮೂಲಕ ಅಳೆಯುವುದೇ ಸರಿಯಲ್ಲ. ಅವರ ಪ್ರಕಾರ ‘ಹಣ ಹೂಡುವುದಷ್ಟೇ ಮುಖ್ಯವಲ್ಲ. ಆ ಹಣ ಪೋಲಾಗದೆ ತೆರೆಯ ಮೇಲೆ ದೃಶ್ಯವಾಗಿ ರೂಪುಗೊಂಡಿದೆಯೇ ಎಂಬುದು ಮುಖ್ಯ’.

‘ಈಗ ನಾವು ಜಾಗತಿಕ ಸಿನಿಮಾಲೋಕಕ್ಕೆ ತೆರೆದುಕೊಂಡಿದ್ದೇವೆ. ಮಲ್ಟಿಪ್ಲೆಕ್ಸ್‌ನಲ್ಲಿ ನಾವು ಕಡಿಮೆ ಬಜೆಟ್‌ನ ಸಿನಿಮಾವನ್ನು ನೋಡಿದ ಪರದೆಯ ಮೇಲೆಯೇ ಜಗತ್ತಿವನ ಅತ್ಯಂತ ದುಬಾರಿ ಸಿನಿಮಾವನ್ನೂ ನೋಡುತ್ತೇವೆ. ಹಾಗಿರುವಾಗ ಕಥೆಗೆ ತಕ್ಕಹಾಗೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡಿ, ವ್ಯವಸ್ಥಿತವಾಗಿ ಸಿನಿಮಾ ಮಾಡಿದರೆ ಅದು ಯಶಸ್ಸಿನ ಗೆರೆಯನ್ನು ದಾಟಿಯೇ ದಾಟುತ್ತದೆ’ ಎನ್ನುವ ಅರವಿಂದ್‌, ಬಾಹುಬಲಿಯ ಯಶಸ್ಸನ್ನು  ನೋಡುವ ಬಗೆ ಹೀಗೆ:

‘‘ಬಾಹುಬಲಿ ಸಿನಿಮಾದಲ್ಲಿ ಭಾರತೀಯ ಚಿತ್ರರಂಗ ಇದುವರೆಗೆ ದಾಟದೇ ಇರುವ ಕೆಲವು ಗಡಿಗಳನ್ನು ದಾಟಲಾಗಿದೆ. ಆ ಮೂಲಕ, ರಾಜಮೌಳಿ ಬಳಗ ಇಡೀ ಚಿತ್ರೋದ್ಯಮವನ್ನೇ ತಮ್ಮ ಮೂಲಕ ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಿರುವಾಗ ದೊಡ್ಡ ಮಟ್ಟದ ಯಶಸ್ಸು ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಬರೀ ಹಣ ಖರ್ಚು ಮಾಡುವುದಲ್ಲದೇ ಅದು ತೆರೆಯ ಮೇಲೆ ಕಾಣುವ ರೀತಿ ಮಾಡಿದ್ದಾರೆ. ಆ ವಿಷನ್‌ ಮುಖ್ಯ. ದೊಡ್ಡ ಬಜೆಟ್‌ ಸಿನಿಮಾ ಆಗಿರುವುದರಿಂದ ಮಾತ್ರ ಯಶಸ್ಸು ದೊರೆಯುವುದಿಲ್ಲ. ಅನೇಕ ದೊಡ್ಡ ಬಜೆಟ್‌ ಸಿನಿಮಾಗಳು ಸೋತಿವೆ. ಬಾಹುಬಲಿಯಲ್ಲಿ ಆ ಪ್ರಕಾರಕ್ಕೆ ಏನೇನನ್ನು ಬಳಸಬೇಕೋ ಅದನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ದೊಡ್ಡ ಬಜೆಟ್‌ ಸಿನಿಮಾ ಹೇಗೆ ಮಾಡಬೇಕೋ ಹಾಗೆ ಮಾಡಿದ್ದಾರೆ. ಕಥೆಯನ್ನೂ ತುಂಬ ಚೆನ್ನಾಗಿ ಹೇಳಿದ್ದಾರೆ. ಸರಿಯಾದ ವಿಷನ್‌ ಜೊತೆಗೆ ಅದಕ್ಕೆ ತಕ್ಕ ಹಣವೂ ಸಿಕ್ಕರೆ ಜಾದೂ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿರುವ ಬಾಹುಬಲಿ ಗೆದ್ದಿರುವುದು ಒಳ್ಳೆಯ ಬೆಳವಣಿಗೆ’’.

ಚಿತ್ರದ ಯಶಸ್ಸನ್ನು ಬರೀ ಹಣದಿಂದ ಮಾತ್ರ ಅಳೆಯುವುದರ ಅಪಾಯಗಳ ಬಗ್ಗೆಯೂ ಅರವಿಂದ್ ಗಮನ ಸೆಳೆಯುತ್ತಾರೆ.

(‘ಬಾಹುಬಲಿ–2’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ)

‘ಯಶಸ್ಸನ್ನು ಹೂಡಿಕೆ ಮತ್ತು ಗಳಿಕೆಯ ಮೇಲೇ ಅಳೆಯುವುದು ಇಂದಿನ ಟ್ರೆಂಡ್‌ ಆಗಿಬಿಟ್ಟಿದೆ. ಆದರೆ ಬಾಹುಬಲಿ ಸಿನಮಾ ಮಾಡಲು ಎಷ್ಟು ಕಷ್ಟಪಡಬೇಕಾಗುತ್ತದೋ ಒಂದು ಲೋ ಬಜೆಟ್‌ ಸಿನಿಮಾ ಮಾಡಲೂ ಮಾನಸಿಕವಾಗಿ ಅಷ್ಟೇ ಕಷ್ಟಪಡಬೇಕಾಗುತ್ತದೆ. ವಸ್ತು ದೊಡ್ಡದಿರಬಹುದು ಮೇನೇಜ್‌ಮೆಂಟ್‌ ಸ್ಕಿಲ್ಸ್‌ ದೊಡ್ಡದಾಗುತ್ತಾ ಹೋಗಬಹುದು. ಆದರೆ ಮಾನಸಿಕವಾಗಿ ಕಥೆ ಕಟ್ಟುವ ಕಷ್ಟಗಳು ಒಂದೇ ಆಗಿರುತ್ತವೆ. ಹಣ ಖರ್ಚು ಮಾಡುವುದು ಕಥೆಯ ಅವಶ್ಯಕತೆಗಾಗಿ. ಬಾಹುಬಲಿಯಲ್ಲಿಯೂ ಕಥೆಗೆ ಅವಶ್ಯವಿದ್ದಷ್ಟು ಖರ್ಚು ಮಾಡಿದ್ದಾರೆ. ಶೋಕಿಗಾಗಿ ಎಲ್ಲೂ ಖರ್ಚು ಮಾಡಿಲ್ಲ. ಆದ್ದರಿಂದ ಹಣವನ್ನು ನೋಡಲೇಬಾರದು. ಆ ಹಣ ತೆರೆಯ ಮೇಲೆಯೇ ಇದೆ. ಎಲ್ಲೂ ಕಳೆದುಹೋಗಿಲ್ಲ. ಅಷ್ಟು ದೊಡ್ಡ ಕಲ್ಪನೆಯನ್ನು ಸಾಕಾರಗೊಳಿಸಲು ಹಣ ತುಂಬ ಮುಖ್ಯ. ಆದರೆ ಈ ಯಶಸ್ಸಿಗೆ ಹಣವೊಂದೇ ಕಾರಣ ಖಂಡಿತ ಅಲ್ಲ’ ಎನ್ನುತ್ತಾರೆ ಅರವಿಂದ್‌.

ಒಂದಂತೂ ನಿಜ. ಒಂದು ಸಾವಿರ ಕೋಟಿ ರೂಪಾಯಿ ಗಳಿಕೆಯ ಚಿತ್ರ ಎನ್ನುವುದೊಂದೇ ‘ಬಾಹುಬಲಿ’ಯ ಅಗ್ಗಳಿಕೆಯಲ್ಲ. ಭಾರತೀಯ ಸಿನಿಮಾ ಎಂದರೆ ಬಾಲಿವುಡ್‌ ಎನ್ನುವ ಭ್ರಮೆಯ ಬಲೂನಿಗೆ ಚುಚ್ಚಿದ ನಿಜದ ಸೂಜಿಮೊನೆಯಿದು. ನಿರ್ದೇಶಕನೊಬ್ಬನ ಕಾಲ್ಪನಿಕಶಕ್ತಿಗೆ ನಿದರ್ಶನವಾಗಿ, ‘ಚಂದಮಾಮ’ ಕಥೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎನ್ನುವುದರ ಉದಾಹರಣೆಯಾಗಿ, ಸಿನಿಮಾ ವ್ಯಾಕರಣದ ಪರಿಣಾಮಕಾರಿ ಬಳಕೆಯ ಸಾಧ್ಯತೆಯಾಗಿ ‘ಬಾಹುಬಲಿ’ ಮುಖ್ಯವೆನ್ನಿಸುತ್ತದೆ. ಇದೆಲ್ಲದರ ಜೊತೆಗೆ ಹೊಸ ಬಗೆ ‘ಸಿನಿಮಾ ಗಣಿತ’ಕ್ಕೆ ‘ಬಾಹುಬಲಿ’ ನಾಂದಿ ಹಾಡಿದೆ.

**

ಹೊಸದೇನಲ್ಲ
‘‘ಬಾಹುಬಲಿ’ ಯಶಸ್ಸಿನ ಪಥ ಹೊಸದೇನೂ ಅಲ್ಲ. ಆದರೆ, ಹೊಸದು ಎಂಬಂತೆ ಪ್ರತಿಬಿಂಬಿಸಲಾಗುತ್ತಿದೆ’’ ಎನ್ನುತ್ತಾರೆ ತೆಲುಗು, ಮತ್ತು ಹಿಂದಿ ಮತ್ತು ಕನ್ನಡ ಚಿತ್ರರಂಗವನ್ನು ಹತ್ತಿರದಿಂದ ಬಲ್ಲ ಸಿ.ಎಂ. ಸೀತಾರಾಮ್‌.

‘ಹಿಂದಿ ಚಿತ್ರರಂಗದ ಮೇಲೆ ತೆಲುಗು ಸಿನಿಮಾಗಳು ಮೊದಲಿನಿಂದಲೂ ಸಾಕಷ್ಟು ಪ್ರಭಾವವನ್ನು ಬೀರಿಕೊಂಡೇ ಬಂದಿದೆ’ ಎನ್ನುತ್ತಾರೆ ಅವರು. ‘ತೆಲುಗಿನಿಂದ ಹಿಂದಿ ಭಾಷೆಗೆ ತುಂಬ ಹಿಂದಿನಿಂದಲೂ ಸಿನಿಮಾಗಳು ರಿಮೇಕ್‌ ಆಗುತ್ತಿವೆ. ಜಿತೇಂದ್ರ ಮತ್ತು ಶ್ರೀದೇವಿ ಅವರ ಜೋಡಿಯಲ್ಲಿ ಬಂದ ಬಹುತೇಕ ಸೂಪರ್‌ಹಿಟ್‌ ಸಿನಿಮಾಗಳು ತೆಲುಗಿನಿಂದಲೇ ಬಂದಿರುವವು’ ಎನ್ನುತ್ತಾರೆ.

‘ತೆಲುಗು ಸಿನಿಮಾರಂಗದಲ್ಲಿ ಒಂದು ಪ್ರಕಾರದ ಸಿನಿಮಾಗಳು ಮೊದಲಿನಿಂದಲೂ ದೃಶ್ಯವೈಭವಕ್ಕೆ ಬಲಿಯಾಗಿದ್ದವು. ನೂರಾರು ಚೆಂಡುಗಳನ್ನು ಬೆಟ್ಟದ ಮೇಲಿಂದ ಚೆಲ್ಲಿ ಹಾಡುಗಳನ್ನು ಚಿತ್ರಿಸುವ ಕಸರತ್ತನ್ನು ಕೆ. ರಾಘವೇಂದ್ರರಾವ್‌ ಮಾಡುತ್ತಿದ್ದರು. ಅವರ ಸಿನಿಮಾಗಳಲ್ಲಿ ಹಾಡುಗಳನ್ನು ನೋಡಲಿಕ್ಕಾಗಿಯೇ ಹೋಗುವವರಿದ್ದರು. ಇನ್ನೊಂದು ಪ್ರಕಾರದ ಸಿನಿಮಾಗಳು, ನಿರ್ದೇಶಕ ಪ್ರಧಾನ ಸಿನಿಮಾಗಳು. ನಾಯಕಪ್ರಧಾನ ಸಿನಿಮಾಗಳು ಮತ್ತೊಂದು ಬಗೆಯವು. ಅಲ್ಲಿ ಸಂದರ್ಭಕ್ಕನುಗುಣವಾಗಿ ಸಿನಿಮಾ ಬೆಳೆಯುತ್ತಾ ಹೋಗುವುದಿಲ್ಲ. ಬದಲಾಗಿ ನಾಯಕನಿಗೆ ಅನುಕೂಲಕರವಾಗಿ ಸಿನಿಮಾವನ್ನು ಕಟ್ಟಲಾಗುತ್ತದೆ. ಬೇರೆ ಭಾಷೆಯಲ್ಲಿ ಹೇಗಿತ್ತೋ ಗೊತ್ತಿಲ್ಲ, ತೆಲುಗಿನಲ್ಲಿ ಈ ಮೂರು ಪ್ರಕಾರದ ಸಿನಿಮಾಗಳು ಮೊದಲಿನಿಂದಲೂ ಇದ್ದವು. ಬಾಹುಬಲಿ ಆ ಪ್ರಕಾರದ ವಿಸ್ತರಣೆ ಅಷ್ಟೇ.

ನಿರ್ದೇಶಕಪ್ರಧಾನ ಸಿನಿಮಾದಲ್ಲಿ ಕಥೆಯ ಸಲುವಾಗಿ ಜನರು ನೋಡುತ್ತಾರೆ. ಅಲ್ಲಿ ನಾಯಕ ಒಂದು ಪಾತ್ರ ಅಷ್ಟೇ. ಬಾಹುಬಲಿ ಸಿನಿಮಾದಲ್ಲಿಯೂ ಯಾರೂ ಪ್ರಭಾಸ್‌ ನೋಡಲೆಂದೋ, ರಾಣಾ ದಗ್ಗುಬಾಟಿ ನೋಡಲೆಂದೋ, ಸತ್ಯರಾಜ್‌ ಅವರನ್ನು ನೋಡಲೆಂದೋ ಚಿತ್ರಮಂದಿರಕ್ಕೆ ಹೋಗುತ್ತಿಲ್ಲ. ಬಾಹುಬಲಿ ಸಿನಿಮಾದಲ್ಲಿ ಇದ್ದದ್ದಕ್ಕಾಗಿ ಅವರೆಲ್ಲ ಅಷ್ಟೊಂದು ಜನಪ್ರಿಯಗೊಳ್ಳುತ್ತಿದ್ದಾರೆ. ಈ ಎಲ್ಲವೂ ತೆಲುಗು ಚಿತ್ರರಂಗದ ಹಳೆಯ ದಾರಿಯ ವಿಸ್ತರಣೆಯಷ್ಟೆ’ ಎಂದು ಅವರು ವಿವರಿಸುತ್ತಾರೆ.

**

ಮಹಾಭಾರತವೇ ಪ್ರೇರಣೆ

‘ಬಾಹುಬಲಿ 2’ ಸಿನಿಮಾದ ಇಷ್ಟು ದೊಡ್ಡ ಯಶಸ್ಸಿನ ಹಿಂದೆ ಇರುವುದು ಟೀಂ ಎಫರ್ಟ್‌. ಈ ಸಿನಿಮಾಕ್ಕೆ ಕಥೆ ಬರೆಯುವಲ್ಲಿ ನನಗೆ ಪ್ರೇರಣೆಯಾಗಿದ್ದು ಮಹಾಭಾರತ. ಅದರ ಕಥೆಗಳಿಂದಲೇ ಸ್ಫೂರ್ತಿ ಪಡೆದುಕೊಂಡು ನಾನು ಬಾಹುಬಲಿಯ ಕಥೆ ಮತ್ತು ಪಾತ್ರಗಳನ್ನು ರೂಪಿಸಿದ್ದು. ಈ ಕಥೆಯನ್ನು ಬರೆಯಲು ನಾಲ್ಕು ತಿಂಗಳು ತೆಗೆದುಕೊಂಡಿದ್ದೇನೆ.

ದಕ್ಷಿಣ ಭಾರತದ ಸಿನಿಮಾವೊಂದು ಇಷ್ಟು ದೊಡ್ಡ ಯಶಸ್ಸು ಕಂಡಿರುವುದು ತುಂಬ ಸಂತೋಷವನ್ನುಂಟು ಮಾಡಿದೆ. ಆದರೆ ಇದು ಆಕಸ್ಮಿಕ ಅಲ್ಲವೇ ಅಲ್ಲ. ಈ ಯಶಸ್ಸಿನ ಹಿಂದೆ ಹಲವರ ಅಗಾಧ ಪರಿಶ್ರಮ ಇದೆ.
–ವಿ.ವಿಜಯೇಂದ್ರ ಪ್ರಸಾದ್‌, ಬಾಹುಬಲಿ ಕಥೆಗಾರ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT