ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ–ಅಲ್ಲಿ

Last Updated 6 ಮೇ 2017, 19:30 IST
ಅಕ್ಷರ ಗಾತ್ರ

ಇಲ್ಲಿ, ಬಹುಮಹಡಿ ಕಟ್ಟಡದ ಎತ್ತರದಲ್ಲೊಂದು
ಸಿಮೆಂಟಿನ ಗಟ್ಟಿಮನೆ. ಸುತ್ತ,
ಗಗನಚುಂಬಿ ತಾರಸಿ ಕಟ್ಟಡಗಳು. ಮೇಲೆ ಆಗಸದಲ್ಲಿ
ಕಣ್ಣರಿಯದೆ ಸುತ್ತಿ ಸುಳಿವ ಗಾಳಿ, ನೀರಹತ್ತಿ.

ಅಲ್ಲಿ, ಹಳ್ಳಿಮನೆಯ ನಾಲ್ಕೂ ಮಣ್ಣಗೋಡೆಗಳು,
ಅಂಗಳಕೆ ಬಳಿದ ಸೆಗಣಿಗೆ ಬೆದರಿ ಬೇಸಗೆಯಂದು
ಮನೆಯೊಳಕ್ಕೆ ಸ್ವೇಚ್ಛೆಯಲಿ
ಹರಿವಿರುವೆಗಳ ಸಮರಪಡೆ. ಅಲ್ಲೇ
ಹಲ್ಲಿಗಾಹಾರವನು ಹಿಡಿದಿಟ್ಟು ಕೊಡಲೆಂದು
ಗೋಡೆಗಾತು ನೇತಾಡುವ ಕುಸುರಿ ಕಲೆಯ ಬಲೆ!

ಅಲ್ಲಿ, ಹೊರಕಿಟಿಕಿಯಿಂದ ಮೇಲಕ್ಕೆದ್ದು ಒಳಗಡೆಗಿಣುಕಿ
ಯಾರಿದ್ದಾರೆ? ಸ್ವಲ್ಪ ಆಕ್ಸಿಜನ್
ಕೊಟ್ಟುಹೋಗೋಣಾಂತ ಬಂದೆ
ಎಂಬಂಥ ಹಸಿರೆಲೆ ಬಳ್ಳಿ.

ಅಲ್ಲಿ, ಅಮ್ಮ, ಬಾಯಾರಿಕೆ! ತಡವಾಯಿತಲ್ಲ,
ನೀರಿಟ್ಟಿಲ್ಲವೇಕೆ? ಎಂದು ನನ್ನಾಕೆಯನ್ನು
ಚಿಂವ್‌ಗುಟ್ಟಿ ಎಚ್ಚರಿಸುವ ಪುಟ್ಟ ಹಕ್ಕಿಗಳು!
ಹಿತ್ತಿಲ ಬಾಗಿಲಲಿ ಪಾತ್ರೆ ತೊಳೆಯುವ ಅಮ್ಮನೊಂದಿಗೆ
ಕಾ ಕಾ ಎಂದು ಕುಶಲೋಪರಿ ನಡೆಸುತ್ತ
ಅಳಿದುಳಿದ ಅನ್ನದಗುಳನ್ನು ಮೆಲ್ಲುತ್ತ
ಸದಾ ಹೊಂಚುವ ಮೊದ್ದು ಕಾಗೆಗಳು.
ಅಂಬಾ ಎನ್ನುತ್ತ
ತಮ್ಮಮ್ಮನ ಕರೆದು ತನಗೂ
ತಮ್ಮೆಜಮಾನಿಗೂ ಹಾಲುಕರೆ
–ಯೆಂದೆನ್ನುವ ಹಟ್ಟಿಯ ಪುಟ್ಟ ಕಂದಮ್ಮಗಳು.

ಇಲ್ಲಿ, ಎಲ್ಲವೂ ಇದೆಯಿಲ್ಲ!
ವರ್ಣರಂಜಿತ ನಗರಿ,
ಗಿಜಿಗುಡುವ ಜನರಾಶಿ, ಲಗುಬಗೆಯ ವಾಹನ,
ಬಗೆಬಗೆಯ ಖಾದ್ಯ ಹಾಗೂ....
ಕರೆಗೆ ಕಾಯುತ್ತ
ಸದಾ ಸಿದ್ಧವಿರುವ ನೂರೆಂಟು ಆಂಬುಲೆನ್ಸು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT