ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರದ ಪುಣ್ಯ ಪುಸ್ತಕರೂಪದಲಿ...

Last Updated 6 ಮೇ 2017, 19:30 IST
ಅಕ್ಷರ ಗಾತ್ರ

‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ – ವಿಶ್ವಾಮಿತ್ರನ ಮಾತಿನಂತೆ ತನ್ನ ಸಾಮ್ಯಾಜ್ಯವನ್ನು ತ್ಯಜಿಸಿ ಹೊರನಡೆಯುತ್ತಿರುವ ಹರಿಶ್ಚಂದ್ರನನ್ನು ಕಂಡು ಅಯೋಧ್ಯೆಯ ಪ್ರಜೆಗಳು ಉದ್ಗರಿಸುವುದು ಹೀಗೆ. ನಗರದ (ಸಾಮ್ರಾಜ್ಯದ) ಪುಣ್ಯ ಪುರುಷರೂಪದಲ್ಲಿ ಹೋಗುತ್ತಿದೆ ಎನ್ನುವ ವಿಷಾದವದು. ಈ ಪುಣ್ಯರೂಪಿ ನಾಯಕನ ಕಥೆಯ ಪುಸ್ತಕ ಕೂಡ ಒಂದು ಪುರದ, ನಾಡಿನ ಪುಣ್ಯವಿಶೇಷವೇ! ರಾಘವಾಂಕನ ‘ಹರಿಶ್ಚಂದ್ರಕಾವ್ಯ’ಕ್ಕಂತೂ ಈ ವಿಶೇಷಣ ಹೇಳಿಮಾಡಿಸಿದಂತಹುದು. ಇದೀಗ, ಈ ಅಪೂರ್ವ ಕೃತಿ ಇಂಗ್ಲಿಷ್‌ಗೆ ರೂಪಾಂತರಗೊಳ್ಳುವ ಮೂಲಕ ವಿಶ್ವಮಟ್ಟದಲ್ಲಿ ‘ಕನ್ನಡದ ಪುಣ್ಯ’ ತಲುಪಿದಂತಾಗಿದೆ.

ಕನ್ನಡದ ಲೇಖಕಿ, ಇಂಗ್ಲಿಷ್ ಅಧ್ಯಾಪಕಿ ವನಮಾಲಾ ವಿಶ್ವನಾಥ್‌ ‘ಹರಿಶ್ಚಂದ್ರ ಕಾವ್ಯ’ವನ್ನು ‘ದಿ ಲೈಫ್‌ ಆಫ್‌ ಹರಿಶ್ಚಂದ್ರ’ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ (ಎಂಸಿಎಲ್‌ಐ) ಸರಣಿಗಾಗಿ ಅನುವಾದಿಸಿರುವ ಈ ಪುಸ್ತಕವನ್ನು ‘ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌’ ಪುಸ್ತಕವನ್ನು ಪ್ರಕಟಿಸಿದೆ.

ಭಾರತೀಯ ಭಾಷೆಗಳ ಪ್ರಾಚೀನ ಕೃತಿಗಳನ್ನು ಇಂಗ್ಲಿಷ್‌ ಮೂಲಕ ವಿಶ್ವಕ್ಕೆ ತಲುಪಿಸುವ ಉದ್ದೇಶದಿಂದ ‘ಎಂಸಿಎಲ್‌ಐ’ ಪ್ರಕಟಿಸುತ್ತಿರುವ ಕೃತಿಶ್ರೇಣಿಯಲ್ಲಿ ‘ಹರಿಶ್ಚಂದ್ರಕಾವ್ಯ’ ಕನ್ನಡದ ಚೊಚ್ಚಿಲ ಕೃತಿ. ವನಮಾಲಾ ಅವರು ಈ ಕೃತಿಯನ್ನು ಅನುವಾದಕ್ಕಾಗಿ ಆರಿಸಿಕೊಳ್ಳಲು ಕಾರಣಗಳಿವೆ. ‘‘ಕನ್ನಡದ ಬಹುತೇಕ ಪ್ರಾಚೀನ ಕಾವ್ಯಗಳು ರಾಜತ್ವದ ಮೆರೆದಾಟದಲ್ಲಿ, ಯುದ್ಧಪರಂಪರೆ–ಶೌರ್ಯದ ಬಣ್ಣನೆಯಲ್ಲಿ ತೊಡಗಿದ್ದರೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ ನಮ್ಮ ಬದುಕಿಗೆ ಹೆಚ್ಚು ಹತ್ತಿರವಾದುದು ಹಾಗೂ ಒಂದು ರೀತಿಯಲ್ಲಿ ‘ಸೆಕ್ಯುಲರ್’ ಎನ್ನಬಹುದಾದ ಕೃತಿ’’ ಎಂದು ಅವರಿಗನ್ನಿಸಿದೆ. ‘‘ಅತಿಹುಸಿವ ಯತಿ ಹೊಲೆಯ ಹುಸಿಯದಿಹ ಹೊಲೆಯನುನ್ನತಯತಿವರನು’ ಎನ್ನುವ ಕವಿಯ ಧೋರಣೆ ನಮ್ಮ ಜಾತ್ಯತೀತ ಪರಿಕಲ್ಪನೆಗೆ ಹತ್ತಿರವಾದುದು. ‘ಇಕ್ಷ್ವಾಕುವಂಶದ ಮದ’ವನ್ನು ಬಿಡುವವರೆಗೂ ಹರಿಶ್ಚಂದ್ರನಿಗೆ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ ಎನ್ನುವುದನ್ನೂ ಗಮನಿಸಬೇಕು’’ ಎಂದು ವನಮಾಲಾ ಹೇಳುತ್ತಾರೆ.

‘‘ಹರಿಶ್ಚಂದ್ರಕಾವ್ಯ ಕನ್ನಡದ ಮುಖ್ಯವಾದ ಕೃತಿ. ಭಾರತೀಯ ಸಂದರ್ಭದಲ್ಲಿ ಕೂಡ ಇದು ಮುಖ್ಯವಾದ ಕೃತಿ. ‘ರಾಮಾಯಣ’, ‘ಮಹಾಭಾರತ’ಕ್ಕಿಂತಲೂ ಪ್ರಾಚೀನವಾದ ಕಥೆಯಿದು. ಇದರ ವಿವರಗಳು ‘ದೇವಿಪುರಾಣ’ ಹಾಗೂ ‘ಮಾರ್ಕಂಡೇಯ ಪುರಾಣ’ಗಳಲ್ಲಿ ದೊರೆಯುತ್ತವೆ. ಆದರೆ, ಹರಿಶ್ಚಂದ್ರ ಕಥನ ಕಾವ್ಯವಾಗಿ ಅರಳಿದ್ದು ಕನ್ನಡದಲ್ಲೇ ಮೊದಲು. ಇದು ರಾಘವಾಂಕನ ಹಾಗೂ ಆತನ ಕೃತಿಯ ಅಗ್ಗಳಿಕೆ. ನಮಗೆಲ್ಲ ಹರಿಶ್ಚಂದ್ರನ ಕಥೆ ಗೊತ್ತು. ಆದರೆ, ದರ್ಶನರೂಪದಲ್ಲಿ – ಕಥನದ ಆಳ, ಕಾವ್ಯದ ವಿಸ್ತಾರ ಅಷ್ಟೇನೂ ಲೋಕಪ್ರಿಯವಲ್ಲ’’ ಎನ್ನುವ ವನಮಾಲಾ ಅವರಿಗೆ – ರಾಘವಾಂಕ ತನ್ನ ಕಾವ್ಯದ ಸೆಲೆಗಳನ್ನು ಮಾರ್ಗ ಮತ್ತು ವೈದಿಕೇತರ ನೆಲೆಗಳಿಂದ ಪಡೆದಿರುವುದು ಗಮನಾರ್ಹ ಎನ್ನಿಸಿದೆ. ವಚನಕಾರರ ಮೌಲ್ಯಗಳ ಮುಂದುವರಿಕೆಯ ರೂಪದಲ್ಲಿ ಅವರು ‘ಹರಿಶ್ಚಂದ್ರಕಾವ್ಯ’ವನ್ನು ಕಂಡಿದ್ದಾರೆ.

ವನಮಾಲಾ ಬಾಲ್ಯದಲ್ಲಿ ಗಮಕಶಾಲೆಗೆ ಹೋದವರು ಹಾಗೂ ಆ ಗುಂಗನ್ನು ಈಗಲೂ ಉಳಿಸಿಕೊಂಡವರು. ಗಮಕದ ಆ ಘಮಲು ಕೂಡ ಅವರಿಗೆ ‘ಹರಿಶ್ಚಂದ್ರಕಾವ್ಯ’ವನ್ನು ಹತ್ತಿರವಾಗಿಸಿದೆ.

ಅಂದಹಾಗೆ, ಲೋಕವಿಖ್ಯಾತವಾದ ಹರಿಶ್ಚಂದ್ರನ ಕಥೆಯಲ್ಲಿ ‘ಕನ್ನಡತನ’ ಎನ್ನುವುದೇನಾದರೂ ಇದೆಯೇ? ‘‘ರಾಘವಾಂಕನ ಕಾವ್ಯದಲ್ಲಿ ಕನ್ನಡದ ಪರಿಸರ ದಟ್ಟವಾಗಿದೆ. ಅಯೋಧ್ಯೆಯಿಂದ ವಾರಾಣಸಿಗೆ ಹರಿಶ್ಚಂದ್ರ ಪಯಣಿಸುವಾಗ, ಮೊದಲು ಹಂಪಿಗೆ ಬಂದು ತನ್ನ ಇಷ್ಟದೈವಕ್ಕೆ ವಂದಿಸುತ್ತಾನೆ. ಪಂಪಾಪತಿ ವಿರುಪಾಕ್ಷ, ಹಂಪಿಯ ಮಣ್ಣು ಹಾಗೂ ಗುರುಪರಂಪರೆಯನ್ನು ನೆನಪಿಸಿಕೊಂಡಿದ್ದಾನೆ’’ ಎಂದು ವನಮಾಲಾ ಹೇಳುತ್ತಾರೆ.

‘ಹರಿಶ್ಚಂದ್ರಕಾವ್ಯ’ದ ಅನುವಾದದ ಪ್ರಯತ್ನ ಶುರುವಾದುದು 2010ರಲ್ಲಿ. ಅನುವಾದಕ್ಕಾಗಿ ಅನುಮತಿ ಕೋರಿ ಸಲ್ಲಿಸುವ ಪ್ರಸ್ತಾವನೆ ಬರೆಯಲಿಕ್ಕಾಗಿಯೇ ಅವರು ಆರು ತಿಂಗಳು ತೆಗೆದುಕೊಂಡರು. ‘ಎಂಸಿಎಲ್ಐ’ನಿಂದ ಹಸಿರುನಿಶಾನೆ ದೊರೆತ ನಂತರ, ಅನುವಾದದ ಕೆಲಸಕ್ಕಾಗಿ ಭರ್ತಿ ಎರಡು ವರ್ಷ ಹಿಡಿಯಿತು. ಅದಾದ ನಂತರ ಸಂಪಾದಕೀಯ ಕೆಲಸಗಳಿಗೆ ಮತ್ತೊಂದು ವರ್ಷ. ಹೀಗೆ ಸರಿಸುಮಾರು ನಾಲ್ಕು ವರ್ಷಗಳ ಕಾಲ ವನಮಾಲಾ ‘ಹರಿಶ್ಚಂದ್ರಕಾವ್ಯ’ವನ್ನು ಹಗಲಿರುಳು ಜೀವಿಸಿದ್ದಾರೆ.

ಅನುವಾದದ ಸಂದರ್ಭದಲ್ಲಿ ವನಮಾಲಾ ಎದುರಿಸಿದ ಸವಾಲುಗಳು ಒಂದೆರಡಲ್ಲ. ಅವುಗಳಲ್ಲಿ ಮುಖ್ಯವಾದುದು, ಅನುವಾದಕ್ಕೆಂದು ಯಾವ ಆವೃತ್ತಿಯನ್ನು ಆರಿಸಿಕೊಳ್ಳುವುದೆನ್ನುವ ಗೊಂದಲ. ಟಿ.ಎಸ್. ವೆಂಕಣ್ಣಯ್ಯ ಹಾಗೂ ಎ.ಆರ್. ಕೃಷ್ಣಶಾಸ್ತ್ರಿಗಳು ಸಂಪಾದಿಸಿದ ಕೃತಿಗಳು ಜನಪ್ರಿಯತೆ ಗಳಿಸಿವೆ. ಆದರೆ, ಇವು ಸಂಕ್ಷೇಪ ಕೃತಿಗಳು. ವಿದ್ಯಾರ್ಥಿ ಆವೃತ್ತಿಗಳು. ‘ಸಂಕ್ಷೇಪ ಕೃತಿಗಳೇ ಮುಖ್ಯ ಕೃತಿಗಳಾಗಿ ಓದುಗರ ನಡುವೆ ಉಳಿದರೆ ನಾವು ಸಾಕಷ್ಟು ಕಳೆದುಕೊಳ್ಳುತ್ತೇವೆ. ಸಮಗ್ರ ಕೃತಿಯ ಮೂಲಕ ಕಾವ್ಯದ ನೈಜ ಆಸ್ವಾದ ಹಾಗೂ ರಸಾನುಭವ ಸಾಧ್ಯ’ ಎನ್ನುವುದು ವನಮಾಲಾ ಅವರ ನಂಬಿಕೆ. ಹಾಗಾಗಿ, ಅವರು ‘ಹರಿಶ್ಚಂದ್ರಕಾವ್ಯ’ವನ್ನು ಪೂರ್ಣರೂಪದಲ್ಲಿ ಇಂಗ್ಲಿಷ್‌ಗೆ ರೂಪಾಂತರಿಸಲು ನಿಶ್ಚಯಿಸಿದರು. ಆಗ, ಅವರು ಆರಿಸಿಕೊಂಡಿದ್ದು ಎನ್. ಬಸವರಾಧ್ಯ ಮತ್ತು ಎಸ್. ಬಸಪ್ಪ ಅವರು ಸಂಪಾದಿಸಿದ ಕೃತಿಯನ್ನು.

‘ಹರಿಶ್ಚಂದ್ರಕಾವ್ಯ’ದ ರಸಘಟ್ಟ ಯಾವುದು? ಕೆಲವರಿಗೆ ‘ಚಂದ್ರಮತಿಯ ಪ್ರಲಾಪ’ ಕಾವ್ಯದ ಪ್ರಮುಖ ಭಾಗ. ಹಲವರಿಗೆ ‘ಹರಿಶ್ಚಂದ್ರ–ಹೊಲತಿಯರ ನಡುವಣ ಸಂವಾದ’ ಪ್ರಿಯವಾದುದು. ಆದರೆ, ವನಮಾಲಾ ಅವರಿಗೆ ‘ಬೇಟೆಯ ವರ್ಣನೆ’ ಅಚ್ಚುಮೆಚ್ಚು.

ರಾಘವಾಂಕ ಪಟ್ಟಿಮಾಡುವ ಬಲೆಗಳ ವೈವಿಧ್ಯ ನೋಡಿ: ‘ತಡಿಕೆವಲೆ ತಟ್ಟಿವಲೆ ಹಾಸುವಲೆ ಬೀಸುವಲೆ / ಕೊಡತಿವಲೆ ಕೋಲುವಲೆ ತಳ್ಳಿವಲೆ ಬಳ್ಳಿವಲೆ’ – ಹೀಗೆ ಒಟ್ಟು 24 ಬಗೆಯ ಬಲೆಗಳನ್ನು ಹೆಸರಿಸುತ್ತಾನೆ. ಎಲ್ಲವೂ ಅಚ್ಚಕನ್ನಡ ಶಬ್ದಗಳು. ‘ಕನ್ನಡದಲ್ಲಿ ತಾಂತ್ರಿಕ ಪದಗಳಿಗಾಗಿ ತಡಕಾಡುವವರು ರಾಘವಾಂಕ ಸೇರಿದಂತೆ ನಮ್ಮ ಪೂರ್ವಸೂರಿಗಳ ಕಾವ್ಯವನ್ನು ಓದಬೇಕು. ಕಾವ್ಯವನ್ನು ಕೇವಲ ಕಥಾಸಾರಕ್ಕಾಗಿ ಓದಬಾರದು’ ಎನ್ನುವುದು ಅವರ ಅನಿಸಿಕೆ.

ಮರಗಳ ಪಟ್ಟಿಯನ್ನು ನೋಡಿ. ‘ಜಾಲವಾಲಂ ನೆಲ್ಲಿ ಕನ್ನೆಲ್ಲಿ ಕಡವಡವ / ಹಾಲೆಯಂಕೋಲೆ ದಿಂಡಂ ತಂಡಸೆರನರಳಿ / ಬೇಲ ವರುಟಾಳ ಹಲಸೆಲವ ಕಿರು ನಂದಿ ಚಂದನ ಕಕ್ಕೆಬಿಕ್ಕೆ ತಳಿಯ’ – ಹೀಗೆ ಸೊಬಗಿನಿಂದ ಕೂಡಿದ್ದ ಕಾನನದ ಸಂಕೀರ್ಣತೆಯನ್ನು – ‘ಸಲೆ ಶಿವಮಯಂ ಶಿವಮಯಂ ಶಿವಮಯಂ ಸಮು / ಜ್ವಲ ಶಿಖಿಮಯಂ ಶಿಖಿಮಯಂ ಶಿಖಿಮಯಂ ನಿರಾ / ಕುಲ ಶುಕಮಯಂ ಶುಕಮಯಂ ಶುಕಮಯಂ ಗಿರಿಯ ಸಾನುವಿಂದೊಸರ್ದು ಪರಿವ’ ಕಾನನಂ ಕಣ್ಗೆಸೆದುದು ಎಂದು ಕವಿ ಬಣ್ಣಿಸುತ್ತಾನೆ.

ಕವಿಯದೇನೋ ಹೃದಯದ ಭಾಷೆ, ಮನತಣಿಯೆ ಬಣ್ಣಿಸಿಯಾನು; ಅನುವಾದಕರ ಪಾಡೇನು? ಇಂಥ ಸಂದರ್ಭದಲ್ಲಿ ವನಮಾಲಾ ಅವರು ಬಳಸಿರುವ ತಂತ್ರ ಕುತೂಹಲಕರವಾಗಿದೆ. ಇಂಗ್ಲಿಷ್‌ನಲ್ಲಿ ಸಮಾನಾರ್ಥಕ ಪದಗಳು ದೊರೆಯದೇ ಹೋದಾಗ, ಮೂಲ ಕನ್ನಡ ಶಬ್ದಗಳನ್ನೇ ಅನುವಾದದಲ್ಲಿ ಉಳಿಸಿಕೊಂಡಿದ್ದಾರೆ. ಹಾಗಾಗಿ, ‘ಅರಗಿಳಿ’,‘ಇಮ್ಮಾವು’ ರೀತಿಯ ಶಬ್ದಗಳು ಅನುವಾದದಲ್ಲೂ ಉಳಿದುಕೊಂಡಿವೆ. ಕೆಲವೊಮ್ಮೆ, ನಿರೂಪಕಿಯ ಪಾತ್ರವನ್ನು ನಿರ್ವಹಿಸಿರುವ ಅನುವಾದಕಿ, ಕಾವ್ಯಸಂದರ್ಭವನ್ನು ವಿವರಿಸಿ – ಪದ್ಯದ ಭಾಗಗಳನ್ನೇ ಉಳಿಸಿಕೊಂಡಿದ್ದಾರೆ. ಅನುವಾದದಲ್ಲಿ ಮೂಲಶಬ್ದಗಳ ಬಳಕೆಯನ್ನು ಅವರು ಬಣ್ಣಿಸುವುದು – ‘ಇದು ಇಂಗ್ಲಿಷ್‌ಗೆ ರಾಘವಾಂಕನ ಕೊಡುಗೆ’.

ರಾಘವಾಂಕನ ಕೃತಿಯ ವಿಶೇಷಗಳಲ್ಲಿ ಅದರ ನಾದಲೀಲೆಯೂ ನಾಟಕೀಯತೆಯೂ ಸೇರಿದೆ. ಆದರೆ ಮೂಲದ ಪದ್ಯವಿಶೇಷವನ್ನು, ಭಾವೋತ್ಕರ್ಷವನ್ನು ಇಂಗ್ಲಿಷ್‌ನಲ್ಲಿ  ತರುವುದು ಹೇಗೆ? ‘ಕಾವ್ಯವನ್ನು ಗದ್ಯದರೂಪದಲ್ಲಿ ನೀಡಿದರೆ ಸಾಕು’ ಎಂದು ‘ಎಂಸಿಎಲ್ಐ’ ಸಂಪಾದಕೀಯ ಮಂಡಳಿ ಸ್ಪಷ್ಟವಾಗಿ ಹೇಳಿತ್ತು. ಆದರೆ, ವನಮಾಲಾ ಅವರಿಗೆ ಸಾಧ್ಯವಾದಷ್ಟೂ ಕಾವ್ಯಧ್ವನಿಯನ್ನು ಉಳಿಸಿಕೊಳ್ಳುವ ಹಟ. ಹಾಗಾಗಿ ಕೆಲವು ಕಾವ್ಯಭಾಗಗಳ ಗದ್ಯ ಹಾಗೂ ಪದ್ಯ – ಎರಡೂ ಬಗೆಯ ಅನುವಾದಗಳನ್ನು ಕಳುಹಿಸಿಕೊಟ್ಟರು. ಸಂಪಾದಕೀಯ ಸಮಿತಿಗೆ ವನಮಾಲಾ ಅವರ ಕಾವ್ಯದ ಉತ್ಕಟತೆ ಅರ್ಥವಾಯಿತು. ಹಾಗಾಗಿ, ಮೂಲದ 200 ಷಟ್ಪದಿಗಳನ್ನು ಅವರು ಇಂಗ್ಲಿಷ್‌ನಲ್ಲಿ ಕೂಡ ಪದ್ಯರೂಪದಲ್ಲೇ ಅನುವಾದಿಸಿದ್ದಾರೆ. ಗದ್ಯ, ಪದ್ಯ, ನಾಟಕ – ಈ ಮೂರು ಪ್ರಕಾರಗಳನ್ನೂ ಅನುವಾದಕ್ಕಾಗಿ ಬಳಸಿಕೊಂಡಿದ್ದಾರೆ.

ಕೆಲವಂ ಬಲ್ಲವರಿಂದ ತಿಳಿಯುವ ಕೆಲಸವನ್ನು ವನಮಾಲಾ ಅನುವಾದಕ್ಕಾಗಿ ಮಾಡಿದ್ದಾರೆ. ನೃತ್ಯ, ಸಂಗೀತದ ಸಂಗತಿಗಳು ಎದುರಾದಾಗ, ಆಯಾಕ್ಷೇತ್ರದ ಪರಿಣತರ ಬಳಿ ಸಂದೇಹಗಳನ್ನು ಕೇಳಿ ಪರಿಹರಿಸಿಕೊಂಡಿದ್ದಾರೆ. ನಿಘಂಟಗಳು ಹಾಗೂ ವಿಷಯವಾರು ವಿಶ್ವಕೋಶಗಳ ನೆರವು ಪಡೆದಿದ್ದಾರೆ. ‘ಅನುವಾದ ಎನ್ನುವುದೊಂದು ಲೀಲೆ. ಅದೊಂದು ಆಟ. ಪದಗಳ ಜೊತೆ, ಕಾವ್ಯದ ಜೊತೆ, ಭಾವದ ಜೊತೆ ಆಡುವ ಆಟ’ ಎನ್ನುವ ವನಮಾಲಾ ಅವರಿಗೆ – ‘ಅರ್ಥದ ಎಲ್ಲ ಸಾಧ್ಯತೆಗಳನ್ನು ಟೆಕ್ಸ್ಟ್ ಹೊರಲು ಸಾಧ್ಯವಿಲ್ಲ. ಓದುಗರ ಸಹಭಾಗಿತ್ವವೂ ಅಗತ್ಯ’ ಎಂದು ಕಾವ್ಯದ ಅರ್ಥಸಾಧ್ಯತೆ ಕುರಿತು ಸೂಚ್ಯವಾಗಿ ಹೇಳುತ್ತಾರೆ.

ಅನುವಾದವನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ‘ಎಂಸಿಎಲ್ಐ’ ಸಂಪಾದಕೀಯ ಮಂಡಳಿ ಜೊತೆಗಿನ ಪ್ರಕ್ರಿಯೆ ವನಮಾಲಾ ಅವರಿಗೆ ಅಪೂರ್ವ ಅನುಭವ ನೀಡಿದೆ. ಒಮ್ಮೆ ಅನುವಾದ ಸಿದ್ಧವಾದ ನಂತರ, ದಿನಕ್ಕೊಂದು ಪುಟದಂತೆ ಇ–ಮೇಲ್‌ ಮಾಡುವುದು ಹಾಗೂ ಅದಕ್ಕೆ ಷೆಲ್ಡಾನ್‌ ಪೊಲ್ಲಾಕ್‌ ಅವರು ಪ್ರತಿಕ್ರಿಯಿಸಿದ್ದು ಒಂದು ರಸಾನುಭವವಾಗಿಯೇ ಅವರಿಗೆ ಕಂಡಿದೆ. ನಾಲ್ಕು ವರ್ಷಗಳ ಈ ಅನುವಾದದ ಕೆಲಸದ ನಂತರ ನಿಮಗೆ ಅನ್ನಿಸಿದ್ದೇನು? ಎನ್ನುವ ಪ್ರಶ್ನೆಗೆ ವನಮಾಲಾ ಅವರ ಉತ್ತರ: ‘‘ಸುಖ ಅಂದರೇನು? ಯಾವುದು ಸುಖ? – ಈ ಪ್ರಶ್ನೆಗಳಿಗೆ ನಾನೀಗ ಉತ್ತರಿಸಬಲ್ಲೆ. ಇದು ಅನುವಾದಕಿಯ ಸುಖದ ಮಾತಾಯಿತು; ಪುಸ್ತಕದ ಭಾಗ್ಯ ಯಾವ ಬಗೆಯದು? ಬಹುಶಃ, ಇಂದಿನ ತಲೆಮಾರಿಗೆ – ಕನ್ನಡದ ತರುಣ ತರುಣಿಯರಿಗೆ ವನಮಾಲಾ ಅವರ ಇಂಗ್ಲಿಷ್‌ ಅನುವಾದದ ಮೂಲಕ  ‘ಹರಿಶ್ಚಂದ್ರಕಾವ್ಯ’ ದಕ್ಕಬಹುದೇನೊ?

**

ಬಹುಶ್ರುತ ವಿದ್ವಾಂಸ ಷೆಲ್ಡನ್‌ ಪೊಲ್ಲಾಕ್‌ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ ಮಾಲಿಕೆಯ ಪ್ರಧಾನ ಸಂಪಾದಕ. ‘ಎಂಸಿಎಲ್ಐ’ ಯೋಜನೆ ಕುರಿತಂತೆ ಪೊಲ್ಲಾಕ್‌ ಅವರೊಂದಿಗೆ ‘ಮುಕ್ತಛಂದ’ ನಡೆಸಿದ ಇ–ಮೇಲ್‌ ಕಿರುಸಂದರ್ಶನ ಇಲ್ಲಿದೆ.

* ‘ಎಂಸಿಎಲ್ಐ’ ಸರಣಿಯಲ್ಲಿ ರಾಘವಾಂಕನ ‘ಹರಿಶ್ಚಂದ್ರಕಾವ್ಯ’ವನ್ನು ಕನ್ನಡದ ಮೊದಲ ಕೃತಿಯಾಗಿ ಆರಿಸಿಕೊಳ್ಳಲು ಕಾರಣವೇನು? ಅನುವಾದಕ್ಕೆ ಕೃತಿಗಳನ್ನು ಆರಿಸಿಕೊಳ್ಳಲು ಅನುಸರಿಸುವ ಮಾನದಂಡಗಳೇನು?
ಸಮರ್ಥ ಅನುವಾದಕರು ಪ್ರಸ್ತಾವನೆ ಸಲ್ಲಿಸುವ ಶ್ರೇಷ್ಠ ಕೃತಿಗಳನ್ನು ಅನುವಾದಕ್ಕಾಗಿ ನಾವು ಪರಿಗಣಿಸುತ್ತೇವೆ. ‘ಹರಿಶ್ಚಂದ್ರಕಾವ್ಯ’ ನಮ್ಮ ಉದ್ದೇಶಕ್ಕೆ ತೃಪ್ತಿಕರವಾಗಿ ಹೊಂದಿಕೊಳ್ಳುತ್ತದೆ.

* ‘ಎಂಸಿಎಲ್ಐ’ನ ಈವರೆಗಿನ ಅನುವಾದಗಳಿಗೆ ಓದುಗರ ಪ್ರತಿಕ್ರಿಯೆ ಹೇಗಿದೆ?
‘ಎಂಸಿಎಲ್ಐ’ ಕೃತಿಗಳಿಗೆ ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿದೆ. ಅನುವಾದದ ಗುಣಮಟ್ಟ, ಅನುವಾದ ಪ್ರಕ್ರಿಯೆಯಲ್ಲಿ ವಿದ್ವತ್ತಿನ ಒಳಗೊಳ್ಳುವಿಕೆ ಹಾಗೂ ‘ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್’ನ ಮುದ್ರಣ ಗುಣಮಟ್ಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.

* ಅನುವಾದದ ಮೂಲಕ ಮೂಲಕಾವ್ಯದ ಸೊಗಡನ್ನು ಇನ್ನೊಂದು ಭಾಷೆಗೆ ತಲುಪಿಸುವುದು ಸಾಧ್ಯವೇ? ಓರ್ವ ಅನುವಾದಕರಾಗಿ ಹಾಗೂ ‘ಎಂಸಿಎಲ್ಐ’ ಕೃತಿಶ್ರೇಣಿಯ ಸಂಪಾದಕರಾಗಿ ನಿಮ್ಮ ಅನುಭವ–ಅನಿಸಿಕೆ ಏನು?
ಮೂಲ ಕಾವ್ಯಕ್ಕೆ ನಿರ್ದಿಷ್ಟವಾದ ಸೊಗಡೇನೂ ಇರುವುದಿಲ್ಲ. ಬೇರೆ ಬೇರೆ ಓದುಗ ಸಮುದಾಯಗಳಲ್ಲಿ ಅದು ವಿವಿಧ ಬಗೆಯ ಸೊಬಗನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ಹಾಗೂ ‘ಎಂಸಿಎಲ್ಐ’ ತನ್ನ ಮೊದಲ ನಾಲ್ಕು ವರ್ಷಗಳಲ್ಲಿ ಹೊರತಂದ ಪ್ರಕಟಣೆಗಳ ಹಿನ್ನೆಲೆಯಲ್ಲಿ ಹೇಳುವುದಾದರೆ – ಹೌದು, ಅನುವಾದ ಸಮರ್ಥವಾಗಿ ರೂಪುಗೊಂಡಿದೆ.

* ‘ಕ್ಲೇ ಸಂಸ್ಕೃತ ಲೈಬ್ರರಿ’ (Clay Sanskrit Library) ಯೋಜನೆಯಡಿ ಅನುವಾದವಾಗದೆ ಉಳಿದಿರುವ ಕೃತಿಗಳನ್ನು ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ’ ಯೋಜನೆಯಡಿಯಲ್ಲಿ ಅನುವಾದಿಸುವ ಯೋಚನೆ ಇದೆಯೇ?
ಖಂಡಿತ. ನಾವು ಈಗಾಗಲೇ ‘ಕಿರಾತಾರ್ಜುನೀಯ’ ಮತ್ತು ‘ಶಿಶುಪಾಲವಧ’ ಕೃತಿಗಳನ್ನು ಪ್ರಕಟಿಸಿದ್ದೇವೆ. ಮುಂದೆ ಇನ್ನಷ್ಟು ಕೃತಿಗಳನ್ನು ಪ್ರಕಟಿಸಲಿದ್ದೇವೆ.

* ಅನುವಾದಕರನ್ನು ಹೇಗೆ ಆಯ್ದುಕೊಳ್ಳುತ್ತೀರಿ? ಕನ್ನಡ–ಇಂಗ್ಲಿಷ್‌ ಬಗ್ಗೆ ಹಿಡಿತವುಳ್ಳ ಆಸಕ್ತರು ನೇರವಾಗಿ ‘ಎಂಸಿಎಲ್ಐ’ ಅನ್ನು ಸಂಪರ್ಕಿಸಬಹುದಾ?
ಸಾಮರ್ಥ್ಯವುಳ್ಳ ಅನುವಾದಕರು ‘ಎಂಸಿಎಲ್ಐ’ ಜಾಲತಾಣದಲ್ಲಿ (murtylibrary.com/contact.php) ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

* ‘ದಿ ಲೈಫ್‌ ಆಫ್‌ ಹರಿಶ್ಚಂದ್ರ’ದ ನಂತರ ‘ಎಂಸಿಎಲ್ಐ’ನಿಂದ ಪ್ರಕಟಗೊಳ್ಳುವ ಕನ್ನಡ ಕೃತಿಗಳು ಯಾವುವು?
ಅಮೆರಿಕದ ‘ಸ್ಟೋನಿ ಬ್ರೂಕ್ ಯೂನಿವರ್ಸಿಟಿ’ಯ ಶಿಕಾರಿಪುರ ಶ್ರೀಧರ್ ನೇತೃತ್ವದ ತಂಡ ‘ಕುಮಾರವ್ಯಾಸಭಾರತ’ವನ್ನು ಈಗ ಅನುವಾದಿಸುತ್ತಿದೆ.

**

ರೋಹನ್‌ ಮಹತ್ವಾಕಾಂಕ್ಷೆಯ ‘ಎಂಸಿಎಲ್‌ಐ’
ರೋಹನ್‌ ನಾರಾಯಣ ಮೂರ್ತಿ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ದ ರೂವಾರಿ. ‘ಹಾರ್ವರ್ಡ್‌ ವಿಶ್ವವಿದ್ಯಾಲಯ’ದಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪಿಎಚ್‌.ಡಿ ಮಾಡಿದ ಅವರು, ತಾವು ಕಲಿಕ ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡುವ ರೂಪದಲ್ಲಿ, 2010ರಲ್ಲಿ ‘ಎಂಸಿಎಲ್‌ಐ’ ಆರಂಭಿಸಿದರು.

ಭಾರತೀಯ ಭಾಷೆಗಳ ಪ್ರಾಚೀನ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಉದ್ದೇಶವನ್ನು ‘ಎಂಸಿಎಲ್‌ಐ’ ಹೊಂದಿದೆ. ಈ ಮಾಲಿಕೆಯಲ್ಲಿ ‘ಲೈಫ್‌ ಆಫ್‌ ಹರಿಶ್ಚಂದ್ರ’ ಹದಿಮೂರನೇ ಕೃತಿ. ರೋಹನ್‌ ಅವರು ಬೆಂಗಳೂರಿನ ‘ಇನ್ಫೋಸಿಸ್‌’ ರೂವಾರಿಗಳಾದ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT