ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಟರ್ಸ್ ಆಫ್ ಸಂಕಣ್ಣೆ

Last Updated 6 ಮೇ 2017, 19:30 IST
ಅಕ್ಷರ ಗಾತ್ರ

-ನಾಗಮಂಗಲ ಕೃಷ್ಣಮೂರ್ತಿ

*

ಮಹಾನಗರದ ಮೂರು ಅಂತಸ್ತು ಬಿಲ್ಡಿಂಗಿನ 18ನೇ ನಂಬರಿನ ಮನೆಯ ನೆತ್ತಿಯ ಮೇಲೆ ಖುಷಿಯ ಹೂವೊಂದು ಅರಳುತ್ತಿತ್ತು! ಮಗ್ಗುಲಲ್ಲೇ ಇದ್ದ ಮುಳ್ಳು ಬಿರಿದ ಹೂವ ಕಣ್ಣಕಾವಲಿನಲ್ಲಿ ಕಾಯುತ್ತಿತ್ತು!

‘ಅವ್ವಾ... ಇವತ್ಯಾಕೋ ಭಾಳಾ ಖುಷಿಯಾಗೈತೆ ಮನಸ್ಸು. ಆಕಾಶ ಎಷ್ಟೊಂದು ಚಂದ ಅಲ್ವವ್ವಾ...’ – ಅವ್ವನ ತೊಡೆಯ ಮೇಲೆ ಮಲಗಿ ಆಕಾಶ ದಿಟ್ಟಿಸುತ್ತಾ ನುಡಿದಳು ಸಂಪಿಗೆ. ‘ನಿನಗೆ ನೆನ್ನಗ ಹದಿನೈದು ತುಂಬಿ ಹದಿನಾರಕ್ಕೆ ಬೀಳ್ತು ಕನವ್ವಾ’. ಅವ್ವ ಮಗಳ ಕೆನ್ನೆ ಸವರಿ ನೆಟಿಗೆ ಮುರಿದಳು. ಅವ್ವನ ಕಣ್ಣಿಂದ ಹನಿಯೊಂದು ಜಾರಿ ಸಂಪಿಗೆಯ ಕೆನ್ನೆಯ ಮೇಲೆ ಬಿತ್ತು. ಅದೇನು ಆನಂದಕ್ಕೋ ನೋವಿಗೋ ತಿಳಿಯದೆ ಮಗಳು ಕಸಿವಿಸಿಗೊಂಡಳು.

‘ಆಕಾಶ ಅಂದ್ರೆ ಆ ಮಾದಪ್ಪ ಕವುಚಿದ ಗುಡಾರ ಕನವ್ವಾ. ಮ್ಯಾಲೆ ಕಾಣೋ ಚುಕ್ಕಿಗಳು ಆ ಗುಡಾರದ ತತಾನು ತೂತುಗಳು ಮಗಳೇ’.

‘ಗುಡಾರದ ಛಾವಣಿಯೆಲ್ಲಾ ತತಾನು ತೂತಂಗೆ ಕಂಡ್ರುವೆ ಆ ತೂತುಗಳಲ್ಲೆಲ್ಲಾ ಬೆಳಕು ನುಗ್ಗಿದಂಗೆ ಅದಲ್ಲವ್ವಾ..’ ಸಂಪಿಗೆ ನುಡಿದಳು.

‘ಮ್ಯಾಲಿರೋ ಸ್ವಾಮಿ ಬೆಳಕ ಬೀರ್ತಾವ್ನೆ ಅಂದ್ರುವೆ; ಬುಟ್ಟ ಬೆಳಕು ಬುಟ್ಟಂಗೇ ತೂರ್ತಾಯಿಲ್ಲ ಮಗಳೇ, ಒಡೆದ ಕನ್ನಡಿ ಚೂರ್ನಂಗೆ ಮಿಂಚ್ತಾವ. ನಿನ್ನಂಥಾ ಹರೇದೈಕ್ಳು ಎದೆವಳಗೆ ಭ್ರಮೆಯಾದ ಭ್ರಮೆನಾ ತುಂಬ್ತಾವ. ಯಾಕ ಗೊತ್ತಾ ಕೂಸೆ..?’

‘ಯಾಕವ್ವಾ..?’

‘ನೀನೀಗ ಹೆಣ್ಣಾಗಿದ್ದೀಯೆ. ಪಡ್ಡೆ ಹೈಕ್ಳ ಕಣ್ಣೊಳಗೆ ಕಳಿತ ಹಣ್ಣಾಗಿದ್ದಿಯೇ. ಜ್ವಾಕೆ ಮಗಳೇ’.

ಕಣ್ಣೆದುರು ಆಡ ಆಡುತ್ತಲೇ ಬೆಳೆಯುತ್ತಿರುವ ಮಗಳನ್ನು ನೋಡ್ತಾ ಇದ್ರೆ ಒಂಥರಾ ಖುಷಿ, ಒಂಥರಾ ಸಂಕಟ. ಅಪ್ಪನ ಮಾತು ಬಂದಾಗಲೆಲ್ಲಾ ಮಾತು ಮರೆಸಿ ಮುಖ ತಿರುಗಿಸಿ ಹನಿಗಣ್ಣಾಗುತ್ತಿದ್ದಳು ಸಂಕಣ್ಣೆ. ಇಂದ್ಯಾಕೋ ಮಗಳ ಮುಖ ನೋಡುತ್ತಲೇ ಬಿಚ್ಚಿಕೊಂಡ ಶತಮಾನಗಳ ಕಥೆಯ ಸುರುಳಿಯೊಂದು ಅವಳ ಸ್ಮೃತಿಪರದೆಯ ಮೇಲೆ ಬಿಚ್ಚಿಕೊಂಡು ಉರುಳತೊಡಗಿತು. ತಂತಾನೇ ನೆನಪಿನ ದೋಣಿಯ ಉಟ್ಟು ಹಾಕತೊಡಗಿದಳು.

ಎಲಾ ಮಡದಿ ಸಂಕಣ್ಣೆ, ಸಂಕಣ್ಣೆ
ಕುಲದೋರೆಲ್ಲಾ ಹೆಜ್ಜೇನು ಮಲೆಗೆ 
ಹೆಜ್ಜೇನು ಬ್ಯಾಟೆಗಾಗಿ ಹೋಯ್ತಾ ಅವ್ರಲ್ಲಾ... ಮಡದಿ
ನಿನ್ನೊಬ್ಬಳನ್ನೇ ಬುಟ್ಟೋಗೋದಿಕ್ಕೆ
ಅನುಮಾನ ಮಡದಿ...
ನಿನ್ನ ಬಗೈಯ ಮುಟ್ಟಿ
ಭಾಷೆಯ ಕೊಟ್ಟು ನನ್ನ ನೀನು ಕಳುಹೆಣ್ಣೇ..

ನಡುಮನೆಯ ಅಡ್ಡಗೋಡೆಗೆ ಒರಗಿ ನಿಂತಿದ್ದ ಸಂಕಣ್ಣೆಯ ದುಃಖದಕಟ್ಟೆಯು ಒಡೆದಿತ್ತು ಮತ್ತು ಸಹನೆಯ ಒಡ್ಡನ್ನು ಕಿತ್ತು ಒದರಿತ್ತು.
ಅಯ್ಯೊಯ್ಯೋ... ಯಜಮಾನ ಯಜಮಾನ
ಎಂದೂ ಆಡದ ಮಾತ ಈ ದಿವಸ
ಆಡ್ತಾ ಇದ್ದೀಯಲ್ಲಾ ಯಜಮಾನ
ನಿನ್ನ ಬಲಗೈಯ ಮುಟ್ಟಿ ಭಾಷೆ ಕೊಡೋಂತ
ತಪ್ಪು ನೆಪ್ಪ ಏನಯ್ಯಾ ಮಾಡಿದ್ದೀನಿ ಯಜಮಾನ...
ಎಂದು ಜಗ್ಗಿ ಕೇಳಿದರೂ ಗಂಡ ನೀಲಯ್ಯನ ಅಂತರಂಗ ಅಲ್ಲಾಡಲಿಲ್ಲ.

ನಾನಿಲ್ಲದಂತಾ ಸಮಯದಲ್ಲಿ 
ಈ ಒಂಟಿಕೊಪ್ಪಲ ಕಾಡಿನಲ್ಲಿ
ಯಾರು ಬತ್ತಾರೋ, ಯಾರು ಹೋಯ್ತಾರೋ
ಗೊತ್ತಾಗೋದಿಲ್ಲ...

ಎಂದ ನೀಲಯ್ಯನ ಮಾತಿನಿಂದ ಘಾಸಿಗೊಂಡಿತು ಜೀವ. ಹೃದಯ ಭಾರವಾಗಿ ನೋವಿನ ರಾಗವ ಮಿಡಿಯುತ್ತಲಿತ್ತು. ತನ್ನೆದುರು ಮೈಚಾಚಿ ಮಲಗಿದ ಉದ್ದಾನುದ್ದದ ಬದ್ಕು ಬಾಳಾಟಕ್ಕೆಲ್ಲಾ ಮಂಕು ಬಡಿದು ಮಗುಚಿಕೊಂಡಂಗಾಯ್ತು!

ತನ್ನ ಮಡದಿಯಿಂದ ಭಾಷೆ ಪಡೆದು ಆಣೆಪ್ರಮಾಣ ಮಾಡಿಸಿಕೊಂಡ ಗಂಡ ನೀಲಯ್ಯನು ಹೆಜ್ಜೇನು ಮಲೆಗೆ ಹಜ್ಜೇನು ಬ್ಯಾಟೆಗಾಗಿ ಕುಲದೋರೊಂದಿಗೆ ಹೊರಟು ಹೋದನು ಎಂಬಲ್ಲಿಗೆ....

***
ಮೂರು ಮಳೆಗಾಲ, ಚಳಿಗಾಲ, ಬೇಸಿಗೆಗಳು ಕಳೆದರೂ ಗಂಡನ ಸುದ್ದಿಯಿಲ್ಲ. ಆದರೆ ತವರಿಂದೊಂದು ಸಿಹಿಸುದ್ದಿಯಿತ್ತು. ಅಣ್ಣನ ಮಡದಿಗೆ ಮಗುವಾದ ಸುದ್ದಿಯದು! ತವರಿನ ಸೊಡರು ಪುಟ್ಟಕಂದನನ್ನು ನೋಡಿಬರುವ ಆಸೆಯಾಯ್ತು. ‘ಈಗ ಬ್ಯಾಡ ನಾಳೆ ಹೊತ್ತರಂಟೆ ಹೋಗಿವಂತೆ’ ಎಂಬ ಅತ್ತೆಮಾವರ ಮಾತ ಲೆಕ್ಕಿಸದೆ ಹೊರಟುನಿಂತಳು ಸಂಕಣ್ಣೆ.

ತವರಿನ ಹಾದಿ ಕಾಡುದಾರಿ. ನಡೆದೂ ನಡೆದೂ ಸಾಕಾಯಿತು. ಇಂದ್ಯಾಕೋ ತವರಿನ ದಾರಿ ತನ್ನ ಬದುಕಿನ ಹಾದಿಯಂತೆ ದೂರ ಮತ್ತು ದುರ್ಗಮವಾಗುತ್ತಿದೆಯಲ್ಲಾ..! ಎಂದೆನಿಸಿತು. ಸುತ್ತಲು ಕತ್ತಲು ಕವುಚುತ್ತಿತ್ತು. ಆತಂಕದ ಮೋಡ ಕವಿಯುತ್ತಿತ್ತು! ದೂರದಲ್ಲಿ ಸೂಜಿಗಾತ್ರದ ಹೊಗೆ ಕಾಣಿಸಿತು. ಉತ್ಸಾಹ ಮೂಡಿ ಕಾಲಿಗೆ ಶಕ್ತಿ ತುಂಬಿ ಮುನ್ನಡೆದಳು. ಗುಡಿಸಲೂ ಅಲ್ಲದ ಮನೆಯೂ ಅಲ್ಲದ ಒಂದು ಗುಡಿಸಲುಮನೆ ಸಿಕ್ಕಿತು. ಮನೆಯೊಳಗೆ ಸಾವಿರಾರು ವರ್ಷ ವಯಸ್ಸಾದವಳಂತಿದ್ದ ಅಜ್ಜಿ ರಾತ್ರಿಯ ಅಡುಗೆಗೆ ಒಲೆ ಹಚ್ಚಿದ್ದಳು. ಸಂಕಣ್ಣೆ ಬಾಗಿಲು ಬಡಿದಳು. ಬಲ್ಲೆ ನಿನ್ನ ಬಡಿವಾರ ಎಂಬಂತೆ ಒಳಕರೆದಳು ಅಜ್ಜಿ. ಉಭಯಕುಶಲೋಪರಿಯೊಂದಿಗೆ ಊಟ ಮುಗಿಸಿ ಇಬ್ಬರೂ ಮಲಗಿದರು. ಹೊರಗೆ ಕತ್ತಲು ಕರಿಜೇನಾಗಿತ್ತು!

***
ಸರಿರಾತ್ರಿ. ಆಗಸದಲ್ಲಿ ಒಂದೂ ಚುಕ್ಕೆಗಳಿಲ್ಲ. ಮಳೆಮೋಡ. ಸಣ್ಣಗೆ ಶುರುವಾದ ಮಳೆ ಜಡಿಯತೊಡಗಿತು. ಗುಡುಗು ಮಿಂಚುಗಳು ಕಾಡಿನ ಚಿತ್ರಗಳನ್ನು ರುದ್ರರಮಣೀಯವಾಗಿ ತೋರುತ್ತಿವೆ! ಆ ಅವೇಳೆಯಲ್ಲಿ ಅಜ್ಜಿಮನೆಯ ಕದ ಬಡಿಯುತ್ತಿದೆ ಒಂದು ಕಾಣದ ಹಸ್ತ! ಮಳೆಯ ಹೊಡೆತಕ್ಕಿಂತ ಕದಬಡಿತವೇ ಜೋರಾಗಿತ್ತು. ಧೈರ್ಯಗಾತಿ ಅಜ್ಜಿ ಅಪರಾತ್ರಿಯನ್ನೂ ಲೆಕ್ಕಿಸದೇ ಕದ ತೆರೆದಳು. ಬಿರುಮಳೆಗೆ ತತ್ತರಿಸಿದ ಪುರುಷಾಕಾರ ಬಾಗಿಲಲ್ಲಿ ನಿಂತಿತ್ತು. ಅವನ ದಿಕ್ಕೆಟ್ಟ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಹಿರಿಯ ಹೃದಯವು ಆ ಪ್ರಾಣಿಗೂ ಒಂದು ಆಶ್ರಯ ಒದಗಿಸಿತು!

ದಣಿದಿದ್ದ ಸಂಕಣ್ಣೆಯು ಗಾಢನಿದ್ದೆಗೆ ಜಾರಿದ್ದಳು. ಉಟ್ಟಬಟ್ಟೆ ಅಸ್ತವ್ಯಸ್ತವಾಗಿ ಮುಚ್ಚಿಟ್ಟುಕೊಂಡ ಯೌವನ ಬಚ್ಚಿಟ್ಟುಕೊಂಡ ಅವಯವಗಳು ಮಳೆಮಿಂಚಿನ ಕಣ್ಣಿಗೆ ಮೆಲ್ಲಲಾಗದ ರಸಗವಳವಾಗಿ ತೋರುತ್ತಿದ್ದವು. ಚೆಲ್ಲಿಕೊಂಡ ಚೆಲುವು ಆವಿಯಾಗಿ ಹೋಗುತ್ತಿದೆಯೇನೋ ಎಂಬ ಯಾವುದೋ ಸಂಕಟಭಾವವು ಆಶ್ರಯ ಅರಸಿ ಬಂದು ಮಲಗಿದ್ದ ಪುರುಷಾಕಾರನ ಎದೆಯೊಳಗೆ ನುಗ್ಗಿ ಅವನ ಕಣ್ಣುಗಳ ಕೀಲಿಸಿತ್ತು! ಮಿಂಚು; ಕಳ್ಳಬೆಕ್ಕಿನಂತೆ ಕಣ್ಣ ಮಿಟುಕಿ ಅವಳ ಅಂಗಾಂಗಗಳ ಅವನ ಕಣ್ಣೊಳಗೆ ಛಾಪಿಸಿ ಮಾಯವಾಗಿತ್ತು! ಆಹಾ! ಪುರುಷಾಕಾರಂ! ಜಾಗೃತಗೊಂಡಿತು. ಈಗ್ಯೆ ಅಲ್ಪಕಾಲದ ಮುನ್ನ ಆಶ್ರಯ ಬೇಡಿಬಂದ ಜೀವ ತನ್ನ ಅವಶ್ಯಕತೆ ಪೂರ್ಣಗೊಂಡ ಮರುಗಳಿಗೆಯೇ ತನ್ನ ಸ್ಥಿತಿ–ಗತಿ, ಕಾಲ, ದೇಶ, ಮಾನ–ಸ್ವಾಭಿಮಾನಗಳಾಚೆಗೆ ಸಟೆದು ನಿಲ್ಲುತ್ತದೆಂದರೆ: ಅದು ಮನುಷ್ಯಪ್ರಾಣಿಗೆ ಮಾತ್ರ ಸಾಧ್ಯವಾಗುವ ಸಂಗತಿಯೇನೋ!

ಕತ್ತಲಲ್ಲಿ ಹೊಂಚುವ ಬೇಟೆಗಾರ ಮಿಕವ ಕಂಡೊಡನೆ ಮೇಲೆರಗುವಂತೆ ಆ ಪುರುಷ ಪ್ರಾಣಿಯು ಸಂಕಣ್ಣೆಯೆಂಬ ಹುಲ್ಲೇಕರುವಿನ ಮೇಲೆ ಎರಗಲಾಗಿ ಕಾಡೆಂಬ ಕಾಡೇ ಭೋರೆಂದು ಅತ್ತಿತೋ ಎಂಬಂತೆ ಮಳೆಯ ರಭಸ ಜೋರಾಯಿತು! ಮಾಯದ ಲೋಕದಲ್ಲೆಲ್ಲೋ ವಿಹರಿಸುತ್ತಿದ್ದ ಸಂಕಣ್ಣೆಯ ಮೈ ಮನಸ್ಸು ಥಟ್ಟನೆ ಎಚ್ಚರಾಯಿತು. ಗಲಿಬಿಲಿಗೊಂಡಳು! ಇದೇನಾಯಿತು..? ಎನ್ನುವಷ್ಟರಲ್ಲೇ ಅವಳ ದೇಹವು ಆಕ್ರಮಣಕಾರನ ವಶದಲ್ಲಿತ್ತು. ಅವಳಾಗ ಅಂಗಾತ ಬಿದ್ದ ಜಿರಲೆ. ತಳ್ಳಲು ಕೈಯಿಲ್ಲದ ಒದೆಯಲು ಕಾಲುಗಳಿಲ್ಲದ ವಿಕಲಾಂಗಿಣಿ! ಕತ್ತಲಲ್ಲೇ ಆಡುವ ಕಾಲುಗಳು, ಆ ತಾಡನ, ಅಂಗಾಂಗಗಳನ್ನು ತಡಕುವ ಕೈಗಳು, ಆ ಮೈಗಂಧ... ಎಲ್ಲೋ ಪರಿಚಿತ ಅನ್ನಿಸುತ್ತಿತ್ತು! ವರಸೆಗಳೂ ಕೂಡ ಅದೇ! ಆದರೆ ಅಂಥಾ ಹಸಿವು, ಆ ಬಗೆಯ ಮೃಗೀಯತೆ ಅಪರಿಚಿತ ಅನ್ನಿಸುತ್ತಿತ್ತು. ರಭಸ ಕಡಮೆಯಾಗಿ ಮಳೆ ನಿಂತಿತು. ಮಳೆ ನಿಂತರೂ ಮರದ ಹನಿಗಳು ತೊಟ್ಟಿಕ್ಕುತ್ತಲೇ ಇದ್ದವು. ಕಾದ ನೆಲಕ್ಕೆ ಮಳೆಬಿದ್ದು ತಂಪಾಯಿತು. ನೆಲ ಹದಗೊಂಡಿತು. ಕಳೆ, ಬೆಳೆ, ಮುಳ್ಳುಕಂಟಿಯ ಬೀಜಗಳೆಲ್ಲಾ ಚಿಗುರುವಂಥಾ ಹದ ಅದು!

ಸಂಕಣ್ಣೆಯು ತಿಳಿವುಗೊಂಡಳು. ಅರಿವು ಸ್ಫೋಟಿಸಿತು! ‘ಅಯ್ಯೋ, ಗಂಡನ ಶಂಕೆಯೇ ನಿಜವಾಯ್ತೇ...’ ಎಂದು ಚೀರಿದಳು. ಗಂಟಲಿನಿಂದ ಧ್ವನಿ ಮಾತ್ರ ಹೊರಡಲಿಲ್ಲ. ದೇಹದ ಮೇಲಾದ ದಾಳಿಗಿಂತ ಆತ್ಮಾಭಿಮಾನದ ಮೇಲಾದ ಅತ್ಯಾಚಾರವೇ ಹೆಚ್ಚು ನೋವು ಕೊಟ್ಟಿತು. ಅವಳೆದೆಯ ಅಗ್ನಿತಾಪಕ್ಕೆ ಅವನು ಬೆಚ್ಚಿಬೆವರಿದ. ಭಯವಿಹ್ವಲನಾಗಿ ಕಳ್ಳನಂತೆ ಎದ್ದುಹೋದ. ಮಳೆ ನಿಂತಿತ್ತು. ಲೋಕದ ಕೊಳೆಯೆಲ್ಲಾ ಒತ್ತರಿಸಿ ಒತ್ತಟ್ಟಿಗೆ ಬಂದು ನಿಂತಂತಾಗಿ ಎದೆ ಭಾರವಾವಾಯಿತು. ಬಾವಿಗೆ ಹಾರಲೇ? ಕೆರೆಗೆ ಹಾರವಾಗಲೇ? ಇಲ್ಲಾ ಕಾಡುಪ್ರಾಣಿಗಳಿಗೆ ಆಹಾರವಾಗಲೇ? ಎಂದು ಬಿಕ್ಕುತ್ತಾ ನಿಡುಸುಯ್ಯುತ್ತಿದ್ದಳು ಸಂಕಣ್ಣೆ.

***
ಅದು ಕಗ್ಗಾಡ ಸೆರಗು. ವಿಶಾಲವಾಗಿ ಹರಡಿಕೊಂಡ ಗಿಡ, ಮರ, ಬಳ್ಳಿಗಳು ಬಗೆಬಗೆಯ ಕ್ರಿಮಿಕೀಟಾದಿ ಹಕ್ಕಿಪಕ್ಷಿಗಳೊಂದಿಗೆ ಒಂದಾಗಿ ಬಾಳುತ್ತಿದ್ದವು. ಅಂಥದ್ದೊಂದು ಮರದಲ್ಲಿ ಹಕ್ಕಿಗೂಡೊಂದು ಸರಿರಾತ್ರಿಯಿಂದ ಪತರಗುಟ್ಟುತ್ತಿತ್ತು! ಬೆಳಗಾಗುತ್ತಲೇ ಕೊಕ್ಕಲ್ಲಿ ಮಾವಿನ ಮಿಡಿ, ಕಾಲಿನ ಪಂಜಗಳಲ್ಲಿ ಹೂಗೊಂಚಲನ್ನು ಹಿಡಿದು ಹಾರಿಬಂದ ಗಂಡುಗಿಳಿಯೊಂದು ಗೂಡಿನ ಕದ ತಟ್ಟಿತು. ಗಂಡಿನ ಮುಖ ಕಂಡ ಹೆಣ್ಣುಗಿಳಿಯು ತಕ್ಷಣವೇ ಅದರ ಮೇಲೆರಗಿತು. ಗಂಡುಗಿಳಿಗೆ ಅಚ್ಚರಿ! ‘ಹೇಯ್ ಹೇಯ್... ಯಾಕೆ, ಏನಾಯ್ತು ನಿಂಗೆ? ದೆವ್ವ ಹಿಡಿದೈತಾ ಹೆಂಗೆ..?’
‘ಹೂಂ..ನಂಗೆ ದೆವ್ವ ಹಿಡಿದೈತೆ. ನಿನ್ನ ಯಾವ ಮೋಹಿನಿ ಹಿಡ್ಕೊಂಡಿದ್ಲು?’ ಎಂದಿತು ಹೆಣ್ಣುಗಿಳಿ. ‘ಏನ್ ಮಾತಾಡ್ತಾ ಇದ್ದೀಯೇ? ನಿನಗೋಸ್ಕರ ಹೊಸ ಮಾವಿನಮಿಡಿ, ಹೂವು–ಹಣ್ಣು ತರುಮಾ ಅಂತಾ ಹೋದೆ ಕನಮೀ... ಹಾರ್ಕೊಂಡ್ ಹೋಯ್ತಾ ಹೋಯ್ತಾ ಕಣಿವೆಕಾಡಿಗೆ ಹೊಂಟೋದೆ. ಮಳೆಗಾಳಿ ಬ್ಯಾರೆ. ಬರೋದು ಮೂರ್ದಿನ ತಡಾ ಆಯ್ತಪ್ಪಾ... ಅಷ್ಟುಕ್ಕೆ ಇಷ್ಟು ರಂಪಾಟ್ವೇ?’ ಅಂದಿತು ಗಂಡುಗಿಳಿ. ‘ಬತ್ತಾ ಬತ್ತಾ ಸುಳ್ಳು–ತಟವಟ ಬಲೇ ಕಲ್ತುಬುಟ್ಟೆ ನೀನು ಮನುಷ್ಯರಂಗೆ. ಥೂ ನಿನ್ ಮೊಕ್ಕೊಸಿ ನನ್ನ ಹಾಟುಯ್ಯಾ...’ ಎಂದು ಹೆಣ್ಣುಗಿಳಿಯು ಕಡ್ಡಿ–ಕಸ, ಸತ್ತೆ ಸದೆಗಳನ್ನೆಲ್ಲಾ ಕಿತ್ತು ಒಗೆಯತೊಡಗಿತು. ‘ಚಿನ್ನಾ–ರನ್ನ’ ಎಂದು ರಮಿಸಲು ಹೋಗಿ ಕುಕ್ಕಿಸಿಕೊಂಡು ಸೋತಿತು ಗಂಡುಗಿಳಿ. ಗಂಡು ಸೋತಿದ್ದನ್ನು ಕಂಡು ಹೆಣ್ಣು ತಾನೂ ಸೋತಿತು! ಕೊಕ್ಕಿನಿಂದ ಗಂಡಿನ ಮೂತಿ ತಿವಿದು –‘ಹೆಂಡ್ತಿಮಕ್ಕಳು ನೆಪ್ಪಿದ್ದಾ ನಿಂಗೆ..? ಇದ್ದಿದ್ರೆ ಹಾರಾರಿ ಬತ್ತಿದ್ದೆ. ನಿನ್ನ ನಾನು ಬೋ ಹಚ್ಕಂಬುಟ್ಟಿವ್ನಿ. ಬುಟ್ಟಿರಕಾಗುದಿಲ್ಲ ಕನಾ ಮುಕ್ಕಾ..’ ಎಂದು ಗಂಡಿನ ಹೊಟ್ಟೆಗೆ ಹಿತವಾಗಿ ಕುಕ್ಕಿತು ಹೆಣ್ಣುಗಿಳಿಯು. ‘ಮೂರ್ದಿನುಕ್ಕೇ ಹಿಂಗಂತಿಯಲ್ಲಾ... ಮೂರ್ ವರ್ಷದಿಂದ ಗಂಡನ ಹಾದಿಯ ಕಾದು ಕಾದು ಹಣ್ಣಾಗವ್ಳಲ್ಲಾ ಸಂಕಣ್ಣೆ. ಹಂಗಾಗಿದ್ರೆ ಏನ್ ಮಾಡುವೆ?’ ಅಂದಿತು ಗಂಡು. ‘ಹಾಂ... ಅವಳ್ಯಾವಳು ನನ್ ಸವತಿ? ಹಂಗಾದ್ರೆ ಅವಳ ಮನಿಗೇ ಹೋಗಿದ್ದಾ?’ ಎಂದು ಅಳತೊಡಗಿತು ಹೆಣ್ಣು. ಕೊಕ್ಕು ಅಗಲಿಸಿ ನಕ್ಕ ಗಂಡುಗಿಳಿಯು – ‘ಅಯ್ಯೋ ಅವಳು ಪಕ್ಷಿ ಅಲ್ಲಾ ಕಣೇ, ನರಮನುಷ್ಯೆ. ಮಹಾಸಾಧ್ವಿ ಹೆಂಗಸು’ ಎಂದು ಹೇಳಿ, ಸಂಕಣ್ಣೆಯ ಈವರೆಗಿನ ಕಥೆಯನ್ನೆಲ್ಲಾ ಮರು ನಿರೂಪಿಸತೊಡಗಿತು. ಕಥೆಯ ನಡುವೆಯೇ ತನ್ನ ಗಂಡನ ಬಗ್ಗೆ ಹೆಮ್ಮೆ ಮೂಡಿ ಪ್ರೀತಿಯಿಂದ ಮುದ್ದುಗರೆಯಿತು ಹೆಣ್ಣುಗಿಳಿ.

ಮರದ ಕೆಳಗೆ ಮಲಗಿದ್ದ ಆಗಂತುಕನಿಗೆ ಅಪ್ರಯತ್ನಪೂರ್ವಕವಾಗಿ ಗಿಳಿಗಳ ಸಂಭಾಷಣೆ ಕಿವಿಗೆ ಬೀಳುತ್ತಿತ್ತು. ಮರದ ಮೇಲಿನ ಈ ವಿಸ್ಮಯವನ್ನು ಆತ ವೀಕ್ಷಿಸುತ್ತಿರಲಾಗಿ... ಮೂರು ದಿನದ ವಿರಹವನ್ನು ಮೂರು ಗಳಿಗೆಯೊಳಗೆ ಭರಿಸಿಕೊಳ್ಳುವ ಆತುರದಲ್ಲಿದ್ದ ಗಿಳಿಗಳು ಕೂಡಿಕೆಯ ತುಟಾಗ್ರವ ತಲುಪಿ; ಗಂಡುಗಿಳಿಯು ಪುಕ್ಕ ಉದುರಿಸಿತು. ಅದು ಗಾಳಿಯಲ್ಲಿ ತೇಲುತ್ತಾ ಮರದ ಕೆಳಗಿದ್ದ ಆಸಾಮಿಯ ತುಟಿಯ ಮೇಲೆ ಬಂದು ಕೂತಿತು. ಥೂ... ಥೂ... ಎಂದು ಉಗಿದು ಆಸಾಮಿ ನೀಲಯ್ಯ ಎದ್ದುಕೂತನು. ಅವನೊಳಗೆ ವಿರಹದ ಬೀಜಾಂಕುರವಾಯಿತು! ಹೆಂಡತಿ ಸಂಕಣ್ಣೆಯ ನೆನಪಾಗಿ ತನ್ನ ಹಟ್ಟಿ–ಹಾಡಿಯ ಕಡೆಗೆ ಬಿರಬಿರನೆ ಹೆಜ್ಜೆ ಹಾಕತೊಡಗಿದನು.

***
ಗಾಳಿಯಲ್ಲಿ ಬೀಸಿಬಂದ ಯಾವುದೋ ಹಕ್ಕಿಯ ತುಪ್ಪಳದ ತುಂಡೊಂದು ಮಗಳೊಂದಿಗೆ ಮಹಡಿಯಲ್ಲಿ ಅಡ್ಡಾಗಿದ್ದ ಸಂಕಣ್ಣೆಯ ಮುಂಗುರುಳಲ್ಲಿ ಬಂದು ಕೂರಲಾಗಿ... ತನ್ನ ನೆನಪಿನ ಗಣಿಯಾಳದಿಂದ ವಾಸ್ತವಕ್ಕೆ ಬಂದಳು ಸಂಕಣ್ಣೆ. ಕಣ್ಣಿಗಡ್ಡವಾದ ಪುಕ್ಕ ಕಿತ್ತು ಪಕ್ಕಕ್ಕೆಸೆದು ‘ಥಂಡೀ.. ನೆಗಡಿಯಾಯ್ತದೆ. ಹಸಿಮೈಯ್ಯಿ, ಒಳಕ್ ನಡೀ ಕೂಸು’ ಎಂದು ಎದ್ದಳು.

ಆದರೂ ಆವತ್ತು ಅಜ್ಜಿಯ ಮನೆಯಲ್ಲಿ ನಡೆದ ಆ ನಂಬಲಾಗದ ಘಟನೆ ಅವಳ ಸ್ಮೃತಿಯಲ್ಲಿ ಉಳಿದುಹೋಗಿತ್ತು. ಪದೇ ಪದೇ ಹಸಿಗಾಯದಂತೆ ನೋವು ನೆಕ್ಕುತ್ತಲೇ ಇತ್ತು! ಅಲ್ಲಾ... ಅಷ್ಟೆಲ್ಲಾ ನಡೆವಾಗ ನಡುಮನೆಯಲ್ಲಿ ಮಲಗಿದ್ದ ಅಜ್ಜಿಗೆ ಯಾಕೆ ಎಚ್ಚರಾಗಲಿಲ್ಲ ಎಂಬುದೇ ಅವಳಿಗೆ ಸೋಜಿಗವಾಗಿತ್ತು! ಮಳೆ, ಗಾಳಿ ಸಿಡಿಲು–ಗುಡುಗುಗಳ ಅಬ್ಬರದಲ್ಲಿ ಎಲ್ಲ ಸದ್ದುಗಳೂ ಹೂತುಹೋದವೆ..? ಅದೇನು ಮಾಯೆಯೋ... ಅಮಾನವೀಯವೋ... ನನ್ನ ಹಣೆಬರಹವೋ ಎಂದು ಹಳಿದುಕೊಂಡಳು.

***
ಅದಾಗಿ... ಗಂಡ ನೀಲಯ್ಯನು ಧುತ್ತನೆ ಜ್ಞಾನೋದಯ ಹೊಂದಿದವನಾಗಿ ಹಾಡಿಯ ಕಡೆ ಧಾವಿಸಿಬಂದನು! ಹೆಂಡತಿ ತವರಿಗೆ ಹೋಗಿದ್ದಾಳೆ ಎಂಬ ಸುದ್ದಿ ಸಿಕ್ಕಿತು. ಹತಾಶೆಯಿಂದ ಹೆಂಡತಿಯ ತವರಿನತ್ತ ಹೆಜ್ಜೆ ಹಾಕಿದನು. ಬಹಳ ದಿನಗಳ ನಂತರ ಅಳಿಯ ಬಂದನೆಂಬ ಯಾವ ಸಂಭ್ರಮವೂ ಮಾವನ ಮನೆಯಲ್ಲಿ ಕಾಣಲಿಲ್ಲ. ಅಸಲಿಗೆ ಸಂಕಣ್ಣೆ ತವರಿಗೆ ಬಂದೇ ಇಲ್ಲವೆಂಬ ಸುದ್ದಿಯಿಂದ ವಿಚಲಿತನಾಗಿ ಹಿಂದಿರುಗಿದನು. ಎದೆಯಲ್ಲಿ ಬೇಸರ, ಕಣ್ಣಲ್ಲಿ ಕಾತರ. ನಡುಮಧ್ಯಾಹ್ನದ ಬಳಲಿಕೆ. ಬಾಯಾರಿಕೆ ಉಂಟಾಯಿತು. ಹಾದಿಯಲ್ಲಿ ಸಿಕ್ಕ ಗುಡಿಸಲಲ್ಲಿ ನೀರುಕೇಳಿದ. ನೀರು ಕೊಟ್ಟ ಮುದುಕಿ ‘ಎಲ್ಲೋ ನೋಡ್ದಂಗದಲ್ಲಪ್ಪಾ ನಿನ್ನಾ..?’ ಅಂತು.

‘ಅದೇ ಕನವ್ವಾ ಮನ್ನೆ ಜಿನ ಮಾಮೇರಿ ಮಳೇಲಿ ಬಂದಿದ್ನಲ್ಲವ್ವಾ...’ ಅಂದುಬಿಟ್ಟ. ಅಜ್ಜಿಗೆ ಗುರುತು ಹತ್ತಿತು. ಅವನು ಬಂದುಹೋದ ಮೇಲೆ ನಡೆದುದ್ದನ್ನೆಲ್ಲಾ ತಿಳಿಸಿ ಕೆರೆ–ಬಾವಿಗೆ ಹಾರುತ್ತೇನೆಂದು ಹೊರಟಿದ್ದ ಸಂಕಣ್ಣೆಯನ್ನು ಅಜ್ಜಿ ತಡೆದು ನಿಲ್ಲಿಸಿಕೊಂಡಿದ್ದಳು. ತಟಕ್ಕನೆ ಗುಡಿಸಲ ಒಳಗೆ ಹೋಗಿ ಸೆಣಬಿನ ಹುರಿ ತಂದು ಮನೆಮುಂದಿನ ಮರಕ್ಕೆ ಅವನನ್ನು ಬಿಗಿದು ಕಟ್ಟಿದಳು ಮುದುಕಿ. ಇವಳೇನು ಮಾಡುತ್ತಿದ್ದಾಳೆ ಎಂಬ ಸೋಜಿಗ ನೀಲಯ್ಯನಿಗೆ! ಇದೇನೋ ಆಟ ಎಂಬಂತೆ ಯಾವ ಪ್ರತಿರೋಧವೂ ಇಲ್ಲದೆ ಕಟ್ಟಿಸಿಕೊಂಡಿದ್ದ. ಅಜ್ಜಿ ಹಾಡಿಯ ಜನರನ್ನು ಕರೆಯಲು ಹೋದಳು. ಮರುಕ್ಷಣವೇ ತನ್ನ ಭಾನಾಗಡಿಯನ್ನು ನೆನೆದು ಬೆಚ್ಚಿದ. ತಪ್ಪಿಸಿಕೊಳ್ಳಲು ಹವಣಿಸಿದ. ಮನೆಯ ಮಗಳೇ ಆಗಿಹೋಗಿದ್ದ ಸಂಕಣ್ಣೆ ಕಾಡಿನಿಂದ ಸೌದೆ ಹೊರೆಹೊತ್ತು ಬಂದಳು. ಮನೆಮುಂದಿನ ಮರಕ್ಕೆ ಒರಗಿಸಲು ನಿಲಾಕಿದಳು. ಅರೆ...ಯಾರೀತ...!? ಯಾರಿವನನ್ನು ಮರಕ್ಕೆ ಕಟ್ಟಿದ್ದಾರೆ..? ಎಂಬಿತ್ಯಾದಿ ಪ್ರಶ್ನೆಗಳ ಮಾಲೆಯೇ ಕೊರಳಿಗೆ ಸುತ್ತಿಕೊಂಡಿತು. ಬೆಳೆದು ನಿಂತ ಗಡ್ಡ, ಅಲ್ಲಲ್ಲಿ ಕಿತ್ತುಹೋದ ಬಟ್ಟೆ, ಸ್ನಾನ ಕಾಣದ ಮೈಯಿ, ಸೀಗೆಮಳೆಯಂಥಾ ತಲೆಗೂದಲ ಮನುಷ್ಯ.

ಸಂಕಣ್ಣೆಯನ್ನು ಕಂಡೊಡನೆ ನೀಲಯ್ಯ ಖುಷಿಯಿಂದ ಚೀರಿದನು. ‘ಸಂಕಣ್ಣೇ...’ ಇವಳಿಗೆ ಗಾಬರಿ! ‘ನಾನು ಕನಾ ನಿನ್ನ ಗಂಡ ನೀಲಯ್ಯ...’ ಅಂದನು. ನಾಡು ಬಿಟ್ಟು ಕಾಡು ಸೇರಿದ್ದ ನೀಲಯ್ಯನ ಚಹರೆ ತನ್ನ ಹೆಂಡತಿಗೂ ತಿಳಿಯಲಾರದಷ್ಟೂ ಬದಲಾಗಿತ್ತು! ಹತ್ತಿರ ಹೋಗಿ ಪರೀಕ್ಷಿಸಿದಳು. ಖಾತ್ರಿಯಾಯಿತು. ಉದ್ವೇಗ, ಆನಂದ, ಪರಿತಾಪಗಳು ಒಟ್ಟಿಗೇ ಉಂಟಾದವು! ಅವನ ಹಗ್ಗ ಬಿಚ್ಚಿದಳು. ಒಬ್ಬರಿಗೊಬ್ಬರು ತಬ್ಬಿ ಅತ್ತರು. ಜನ್ಮಾಂತರದ ನಿಧಿಯೊಂದು ಸಿಕ್ಕ ಸಂಭ್ರಮವನ್ನು ಇಬ್ಬರೂ ಅನುಭವಿಸಿದರು.

ಅಜ್ಜಿ ಹತ್ತಾರು ಜನರೊಂದಿಗೆ ಬಂದಳು. ‘ಸಂಕಣ್ಣೆ ಈ ಪಾಪಿ ಕಟ್ಟು ಯಾಕೆ ಬಿಚ್ಚಿದೆ? ಆವತ್ತು ಮಳೆ ಅಂತ ವಳಕ್ ಕರದ್ರೆ ನಿನ್ನ ಮಾನಭಂಗ ಮಾಡಿ ಹೋದೋನು ಇವ್ನು...’ ಎಂದು ಕಾಡು–ನಾಡುಗಳ ಸಂಗಮವಾರಿ ಬೈಗುಳದ ಮಳೆಯನ್ನೇ ಸುರಿಸತೊಡಗಿದಳು. ಅಜ್ಜಿ ಪ್ರವೇಶದಿಂದ ವಾತಾವರಣದ ಭಾವವೇ ಬದಲಾಗಿಹೋಯಿತು. ಸಂಕಣ್ಣೆ ಅಪ್ರತಿಭಳಾದಳು! ಇದೇನು ಭ್ರಮೆಯೋ ಸತ್ಯವೋ ಎಂಬ ತಮಂಧಲೋಕವ ಹೊಕ್ಕಂತೆ ಕಣ್ಣು ಕಪ್ಪಿಟ್ಟು ಸುಸ್ತಾಗಿ ಕುಸಿದಳು. ಹಾಡಿಯ ನ್ಯಾಯ ತೀರ್ಮಾನಗಳು ಬಿರುಸಿನಿಂದ ನಡೆಯುತ್ತಿದ್ದರೂ ಸಂಕಣ್ಣೆ ಆಳದ ಮೌನಕಣಿವೆಯಲ್ಲಿ ಕಳೆದುಹೋಗಿದ್ದಳು. ನೀಲಯ್ಯ ಅವಮಾನದ ಬೆಂಕಿಯಲ್ಲಿ ಬೇಯುತ್ತಿದ್ದ.

ಕೊನೆಗೂ ಕಾಡಿನ ನ್ಯಾಯ ತೀರ್ಮಾನ ಪ್ರಕಟವಾಯಿತು. ನೀಲಯ್ಯನ ಮನೋತ್ಕರ್ಷವು ತುಟಾಗ್ರವ ಮುಟ್ಟಿ ಜಿಗಿದೇಬಿಟ್ಟಿತು ಆ ಮಾತು – ‘ಅವಳು ನನ್ನ ಹೆಂಡತಿ. ನಾನವಳ ಗಂಡ. ಇಬ್ಬರೂ ಕೂಡಿದರೆ ತಪ್ಪು ಯಂಗಾದ್ದು ಯೋಳಿ?’. ಅವನಾಡಿದ ಮಾತು ಹಾಡಿಯ ನ್ಯಾಯದ ಪರಿಕಲ್ಪನೆಯನ್ನೇ ಅಲ್ಲಾಡಿಸಿತು! ಸನ್ನಿವೇಶವಿಡೀ ಸ್ತಬ್ಧವಾಯಿತು. ಎಲ್ಲರೂ ಸಂಕಣ್ಣೆಯ ಮುಖ ನೋಡಿದರು. ಅವಳಿಗೆ ಹೂಂ ಅನ್ನಲೂ ಹೇಸಿಗೆಯಾಯಿತು. ‘ಲೇಯ್ ಬೋಸುಡಿ ಮಗನೇ ಸುಳ್ಳು ಬೊಗುಳ್ತಿಯೇನೋ’ ಎಂದು ಅಲ್ಲಿ ಬಿದ್ದಿದ್ದ ಮರದ ತುಂಡೊಂದನ್ನು ಬೀಸಿ ಒಗೆದಳು ಮುದುಕಿ. ‘ಅವ್ವಾ...’ ನೋವಿನಿಂದ ಚೀರಿದನು ನೀಲಯ್ಯ. ಸಂಕಣ್ಣೆಯ ಕರುಳು ಚುರುಕ್ ಅಂತು. ‘ಇವನು ನನ್ನ ಗಂಡ, ಬುಟ್ಟುಬುಡಿ ಇವನ್ನಾ...’ ಎಂದು ಅಳಲು ಶುರುಮಾಡಿದಳು. ನೀಲಯ್ಯನ ಕಣ್ಣಲ್ಲೂ ನೀರು ಜಿನುಗಿತು. ಎಲ್ಲರೂ ಅವಕ್ಕಾದರು!

***
‘ನಿನ್ನ ಕಷ್ಟ ಇಲ್ಲಿಗೇ ತೀರಲಿ ಮಗಳೇ, ಸುಖವಾಗಿ ಬಾಳವ್ವ’ ಎಂದು ಅಜ್ಜಿ ಸಂಕಣ್ಣೆಯನ್ನು ಹರಸಿ ಬೀಳ್ಗೊಡುವ ಮಾತಾಡಿದಳು.

‘ನಾನು ಹೋಗೂದಿಲ್ಲ ಅಜ್ಜಿ’ – ತಣ್ಣಗೆ ನುಡಿದಳು ಸಂಕಣ್ಣೆ.

‘ಯಾಕೆ ಮಗಳೇ?’ ಅಜ್ಜಿಗೆ ಅಚ್ಚರಿ!

‘ಅವರಿಗೆ ಮಾತುಕೊಟ್ಟಿದ್ದೆ. ಬ್ಯಾಟೆಯಿಂದ ಹಿಂತಿರುಗೋವರ್ಗೆ ಸೀತಾಮಾತೆಯಂಗೆ ಪತಿವ್ರತೆಯಂಗೆ ಬಾಳ್ತೀನಿ ಅಂತಾ. ಆದ್ರೆ ನಾನು ಸೋತೆ. ಕುಲಟೆಯಾದೆ’.

‘ಸಂಕಣ್ಣೆ, ಮಾತು ತಕ್ಕೋಂಡೋನ್ಗೆ ಮೈ ಒಪ್ಪಿಸಿದ ಮ್ಯಾಲೆ ನೀನೆಂಗೆ ತಪ್ಪಿತಸ್ಥೆ ಆದಿಯೇಳು?’ ಅಂದ ನೀಲಯ್ಯ. ‘ಹಂಗಾದ್ರೆ ತಪ್ಪು ಯಾರದು ಯಜಮಾನ..?’ – ಸಂಕಣ್ಣೆಯ ಪ್ರಶ್ನೆಗೆ ನೀಲಯ್ಯ ನಿರುತ್ತರನಾದ. ‘ತಪ್ಪು ಗಂಡು ಮಾಡಲಿ, ಹೆಣ್ಣು ಮಾಡಲಿ, ದೋಷ ಮಾತ್ರ ಹೆಣ್ಣಿನದೇ ಅಲ್ವೇ ಯಜಮಾನ. ಯಾಕಂದ್ರೆ ನಿಮ್ಮ ಲೋಕದ ರೂಢಿನೇ ಹಂಗೈತಲ್ಲಾ..!’

‘ಸಂಕಣ್ಣೆ ಸಲ್ಲದ್ದೆಲ್ಲಾ ಯೇಚ್ನೆ ಮಾಡಿ ತಲೆಕೆಡಿಸ್ಕಬ್ಯಾಡ. ಸುಮ್ನೆ ನಡೀ ಊರಿಗೆ. ನಾನೆಲ್ಲೂ ಹೋಗುದಿಲ್ಲ, ಚೆನ್ನಾಗ್ ನೋಡ್ಕತೀನಿ. ಅಚ್ಕಟ್ಟಾಗಿ ಸಂಸಾರ ಮಾಡುವ ಬಾ...’ ಎಂದು ಸಂಕಣ್ಣೆಯ ರಟ್ಟೆಹಿಡಿದು ಕರೆದ.

‘ಕೈಬುಡು ಯಜಮಾನ. ನನ್ನ ಮುಟ್ಟೋ ಅಧಿಕಾರನ ಆ ಕಾಳರಾತ್ರಿಯಲ್ಲೇ ಕಳಕೊಂಡೆ ನೀನು. ಸಂಸಾರ ನಾಯಿ ತಲೆಮ್ಯಾಲಿನ ಬುತ್ತಿ ಅಂತಾರೆ ತಿಳ್ದೋರು. ಸಂಸಾರದ ಆಸೆನಾ ಮರ್ತುಬುಡು ಯಜಮಾನ’. ಸಂಕಣ್ಣೆ ಕೈ ಕೊಸರಿಕೊಂಡಳು. ಇವಳ ಮಾತು ವಿಚಿತ್ರ ಎನಿಸಿತು ಅವನಿಗೆ. ‘ಒಬ್ಬ ಗಂಡ ಹೆಂಡತಿಗೆ ಏನ್ ಮಾಡಬೋದಿತ್ತೋ ಅದ್ನೇ ಮಾಡ್ದೆ ನಾನು. ಅದರಲ್ಲೇನು ತಪ್ಪು?’ ಅಂದ ನೀಲಯ್ಯ. ಅವನ ಮಾತಿನಲ್ಲಿ ಪಶ್ಚಾತ್ತಾಪದ ಒಂದು ಹನಿಯೂ ಕಾಣಲಿಲ್ಲ. ಸಂಕಣ್ಣೆಗೆ ಅಸಹ್ಯ ಎನಿಸಿತು. ಕ್ರೋಧದಿಂದ ಸಿಡಿದಳು – ‘ಹೆಂಡತಿ ಅಂತಾ ನೀನು ಕೂಡಲಿಲ್ಲ, ಗಂಡ ಅಂತ ನಾನು ಕರಕೊಳ್ಳಲಿಲ್ಲ. ಅಂದಮೇಲೆ ನೀನು ಮಾಡಿದ್ದು ಅತ್ಯಚಾರ ತಾನೇ?’

‘ಆದರೂ... ನಾನು ನಿನ್ನ ಗಂಡ ಅನ್ನುದು ಸುಳ್ಳೇ?’ ಭಂಡತನ ತೋರಿದ.

‘ನಾನು ಸಂಭೋಗಿಸಿದ್ದು ನನ್ನ ಹೆಂಡತಿಯನ್ನೇ ಅಂತಾ ನಿನಗಾಗ ಗೊತ್ತಿತ್ತೇನು? ಒಂದು ಪಕ್ಷ ಅಲ್ಲಿ ನಾನಲ್ಲದೆ ಯಾವುದೇ ಹೆಣ್ಣಿದ್ದರೂ ನೀನು ಅದೇ ಕೆಲಸ ಮಾಡ್ತಿದ್ದೆ. ಅಂದ್ಮೇಲೆ ನೀನು ಅತ್ಯಾಚಾರಿ ಅಲ್ವೇನು?’ – ಅವಳ ಧ್ವನಿಯ ದೃಢತೆಗೆ ನೀಲಯ್ಯ ಬೆಚ್ಚಿದ.

‘ಭಲೇ ಮಗಳೇ...’ ಅಜ್ಜಿ ಸಂಕಣ್ಣೆಯ ಕೆನ್ನೆಗೆ ಮುತ್ತಿಟ್ಟು ನೆಟಿಗೆ ಮುರಿದಳು. ನ್ಯಾಯ ಅಂದ್ರೆ ಇದಲ್ವೇ ಅಂದುಕೊಂಡರು ನ್ಯಾಯಸ್ಥರು.

‘ಅಲ್ಲಾ ಕಣಯ್ಯಾ ಯಜಮಾನ, ಕೂಡಿದ ಹೆಂಡತಿಯ ನಂಬದೆ ಆಣೆಪ್ರಮಾಣ ಮಾಡಿಸಿ ಭಾಷೆ ತಕ್ಕೊಂಡು ಶೀಲಕ್ಕೆ ಬೇಲಿ ಹಾಕಿ ಹೋದಲ್ಲಾ ಗ್ರಾಸ್ಥಾ...! ನೀನೂ ಹಂಗೇ ನಡ್ಕಬೇಕು ತಾನೆ..?’ – ಗಂಡನ ಕರಳಪಟ್ಟಿ ಹಿಡಿದು ಜಗ್ಗಿ ಕೇಳುವಾಗ ಸಂಕಣ್ಣೆಯ ಕಣ್ಣುಗಳು ಬೆಂಕಿಯುಂಡೆಯಾಗಿ ತುಟಿಗಳು ಅದುರುತ್ತಿದ್ದವು. ನೀಲಯ್ಯ ಅವಳ ಕಣ್ಣನೋಟವನ್ನು ಎದುರಿಸಲಾರದೆ ತಲೆತಗ್ಗಿಸಿ ನಿಂತನು. ಅವನ ಆಣೆಪ್ರಮಾಣದ ವಿಷಯ ಕೇಳಿ ಅಜ್ಜಿಗೆ ಕ್ಯಾಣ ನೆತ್ತಿಗೇರಿತು.

‘ಕ್ವಸಿಯೋ ಕ್ವಾಣಕ್ಕೇ ಇಲ್ಲದಿರೋ ಶೀಲ ಹೆರೋ ಹೆಣ್ಣಿಗೆಂಥದೋ ಮುರ್ದಾರ...’ ಎಂದು ತರಾಟೆಗೆ ತೆಗೆದುಕೊಂಡಳು.

‘ಅಜ್ಜೀ... ಆಡುಕುರಿ ಕೂಡಿ ರೊಪ್ಪಕ್ಕೆ ಬೇಲಿ ಹಾಕಿ, ತಿನ್ನೋ ತೋಳನಾ ಬಯಲಿಗೆ ಬುಟ್ಟು ಕಾವಲು ಕಾಯೋ ಜನ ಇವರು! ಥೂ... ಮೂರ್ಖರ ಸಂತೆ ಇದು..!’ ಎಂದು ಉಗಿದು ಉಪ್ಪಾಕಿ ಕೊರಕೊರನೆ ನಡೆದುಬಿಟ್ಟಳು ಸಂಕಣ್ಣೆ. 

ಅದಾಗಿ... ಯಾರು ಏನೇ ಹೇಳಿದರೂ ಕೇಳದೆ ಗಂಡನ ಮನೆಯೆಂಬ ಮುಳ್ಳುಬೇಲಿಯ ದಾಟಿ ಕಾಡುಹಾಡಿಯ ತೊರೆದು ಕೆಟ್ಟು ಪಟ್ಟಣವ ಸೇರಿದಳು ಸಂಕಣ್ಣೆ.ಲಗ್ನವಾಗಿ ಐದು ವರ್ಷ ಕಳೆದಿದ್ದರೂ ಕಟ್ಟದ ಗರ್ಭ; ಒದೇ ರಾ

ತ್ರಿಯಲ್ಲಿ ಬಿದ್ದ ಜೋರುಮಳೆಯ ವೇಳೆಯಲ್ಲಿ ಚಿಗುರಿಬಿಡಬೇಕೆ! ಅಳಬೇಕೋ ಆನಂದಿಸಬೇಕೋ ಗೊತ್ತಿಲ್ಲದ ಸ್ಥಿತಿ. ಹೆಗಲ ಮೇಲೆ ಬದುಕು, ಹೊಟ್ಟೆಯಲ್ಲಿ ಗರ್ಭಹೊತ್ತು ಈಸಿ ಜೈಸಿದ್ದೇ ಒಂದು ವಿಸ್ಮಯದ ಹೋರಾಟವಾಗಿತ್ತು! ಪಟ್ಟಣಕ್ಕೆ ಸೇರಿ ಹೂ ಮಾರಿ ಜೀವನ ಸಾಕುತ್ತಿದ್ದಾಳೆ ಸಂಕಣ್ಣೆ. ಹುಟ್ಟಿದ ಕೂಸಿಗೆ ಸಂಪಿಗೆ ಎಂಬ ಹೂವಿನ ಹೆಸರೇ ಇಟ್ಟಿದ್ದಾಳೆ. ಅವಳಿಗೀಗ ಹದಿನೆಂಟು ತುಂಬಿದೆ. ಕಾಲೇಜು ಕಲಿಯುತ್ತಿದ್ದಾಳೆ.

***

ಯಥಾಪ್ರಕಾರ ಮೂರು ಅಂತಸ್ತಿನ ಬಿಲ್ಡಿಂಗಿನ ನೆತ್ತಿಯ ಮೇಲೆ ಅವ್ವನ ಮಡಿಲಲ್ಲಿ ಅಂಗಾತ ಮಲಗಿದ್ದಾಳೆ ಸಂಪಿಗೆ. ಸಣ್ಣಗೆ ಸುಳಿವ ಗಾಳಿ ವಾತಾವರಣಕ್ಕೆ ತಂಪು ತುಂಬಿದೆ. ಅಪ್ಪನ ಕುರಿತು ಕೇಳಿದಾಗೆಲ್ಲಾ ಹಿಂಜರಿಯುವ ಅವ್ವ ಇಂದು  ತಾನೇತಾನಾಗಿ ಹೇಳುವ ಉಮೇದಿನಲ್ಲಿದ್ದಾಳೆ.
ಈಗ್ಗೆ ನೂರಾರು ವರ್ಷಗಳ ಹಿಂದೆ ಹಾಡಿಯಲ್ಲಿ ನಿಮ್ಮಪ್ಪನ ಕೂಡೆ ಚಂದದ ಸಂಸಾರ ನಡೆದಿತ್ತು ಮಗಳೇ.. ಎಂದು ಶುರುವಾದ ಅವ್ವನ ಮಾತಿಗೆ ಸಂಪಿಗೆಗೆ ನಗು ಬಂತು. ‘ಅವ್ವಾ... ನಿನಗೇನು ಹುಚ್ಚೋ ಬೆಪ್ಪೋ?’ ಅಂದಳು. ‘ಎರಡೂ ಅಲ್ಲ ಶೀವಲೀಲೆ ಅಂತೀನಿ ಮಗಳೆ... ನೂರಾರು ಅಂದ್ರೆ ಎಷ್ಟಾದರೂ ಆದೀತು! ನಾನೂರು ಐನೂರು ಆರುನೂರು ವರ್ಷಗಳೇ ಅಂದ್ರೂ ತಪ್ಪಿಲ್ಲ, ನಂಗೂ ನೆಪ್ಪಿಲ್ಲ. ಇದು ಕಾಲಾಂತರದಿಂದಲೂ ಹಿಂಗೇ ನಡ್ಕಂಡ್ ಬಂದದೆ ಅಂದ್ಕೋ ಮಗಳೇ...’ ಎಂದು ಹನಿಗಣ್ಣಾಗಿ ತನ್ನ ಬದುಕಿನ ಕಥೆಯ ಮರು ನಿರೂಪಿಸತೊಡಗಿದಳು ಸಂಕಣ್ಣೆ. ಕಾಲ–ದೇಶ ಸನ್ನಿವೇಶಗಳು ಬದಲಾದಂತೆ ಕಂಡರೂ ಹತ್ತು ಹಲವು ಬಗೆಗಳಲ್ಲಿ ಸಂಕಣ್ಣೆಯ ಕಥನ ಪ್ರಸಂಗವು ಪುನರಪಿ ಘಟಿಸುತ್ತಾ ಸಂಕಟ ಸಂಕೀರ್ತನೆಯು ಮರು ನಿರೂಪಿತಗೊಳ್ಳುತ್ತಲೇ ಇರುವಾಗ್ಯೆ...

***
ಈಗ್ಗೆ ಅದಾಗಿ ನೂರಾರು ವರುಷಗಳ ಬಳಿಕ...

ಸಂಕಣ್ಣೆಯ ಮಗಳು ಸಂಪಿಗೆ. ಅವಳ ಮಗಳು ಮಲ್ಲಿಗೆ. ಮಲ್ಲಿಗೆಯ ಮಗಳು ಜಾಜಿ. ಜಾಜಿಯ ಕೂಸು ಮುತ್ತಮ್ಮ. ಅವಳ ಕಂದ ಕಮಲ, ಕಮಲಳ ಮಗಳು ಕನಕ. ಕನಕಳ ಮುದ್ದಿನ ಮಗಳು ಬಂಗಾರಿ. ಬಂಗಾರಿಯ ಮಗಳು... ಛೇ! ಹೆಸರೇ ಮರೆತುಹೋಯ್ತುಲ್ಲಾ..! ಒಟ್ಟಲ್ಲಿ ಹೆಣ್ಣು ಕೂಸು ಅದು. ಊರು ಬೆಂಗಳೂರು. ಮನಸು ಸಾಫ್ಟ್‌ವೇರು. ಹುದ್ದೆ ಇಂಜಿನಿಯರು.

ಅಹೋರಾತ್ರಿ ದುಡಿಮೆ. ಕೈತುಂಬಾ ಪಗಾರ. ಖರ್ಚು ಮಾಡಲೂ ಪುರುಸೊತ್ತಿಲ್ಲದ ಹುಡುಗಿ. ಕೆಲಸ ಮುಗಿಸಿ ಅವೇಳೆಯಲ್ಲಿ ಮನೆಗೆ ಮರಳುವಾಗ ಅವಳಿದ್ದ ರಥದ ಸಾರಥಿಯೇ ಅವಳ ಬಾಯ ಮುಚ್ಚಿ, ಕೈಯ ಕಟ್ಟಿ ತೊಡೆಸಂದಿಯ ಹಿಗ್ಗಲಿಸಿ – ಛೀ..ಛೀ.. ನೋಡಬಾರದ್ದ ಮಾಡುವಾಗ ಜಗತ್ತು ಕಣ್ಮುಚ್ಚಿತ್ತು!
ತಲ್ಲಣಿಸದಿರು ಕಂಡ್ಯ ತಾಳು ಮನವೆ, ಇದು ಸ್ಯಾಂಪಲ್ಲು... ಇದು ಸ್ಯಾಂಪಲ್ಲು... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT