ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ವಿಸ್ಮಯದ ಎರಡು ಪ್ರಶ್ನೆಗಳು

Last Updated 6 ಮೇ 2017, 19:30 IST
ಅಕ್ಷರ ಗಾತ್ರ

1.  ವಿಶ್ವದಲ್ಲಿ ಎಷ್ಟು ಗ್ಯಾಲಕ್ಸಿಗಳಿವೆ ?
ಇದು ತುಂಬ ಕುತೂಹಲದ ಒಂದು ಪ್ರಶ್ನೆ. ವಿಶ್ವದಲ್ಲಿರುವ ಗ್ಯಾಲಕ್ಸಿಗಳ ಒಟ್ಟು ಸಂಖ್ಯೆ ಈವರೆಗೂ ತಿಳಿದಿದ್ದಕ್ಕಿಂತ ವಿಪರೀತ ಹೆಚ್ಚಿನದಾಗಿರುವುದು ಇತ್ತೀಚೆಗೆ ಗೊತ್ತಾಗಿದೆ. ಹಾಗಾಗಿ, ಈ ಪ್ರಶ್ನೆಯ ಕುತೂಹಲವೂ ಹೆಚ್ಚಾಗಿದೆ.

ವಾಸ್ತವ ಏನೆಂದರೆ, ನೆಲದ ಮೇಲಿನ ಮತ್ತು ಬಾಹ್ಯಾಕಾಶದಲ್ಲಿನ ಸರ್ವವಿಧ ಸರ್ವೋತ್ತಮ ದೂರದರ್ಶಕಗಳ ನೆರವಿನಿಂದ ಗಣತಿಗೊಂಡಿದ್ದಂತೆ ನಮ್ಮ ವೀಕ್ಷಣೆಗೆ ನಿಲುಕಿರುವ ವಿಶ್ವದ ವ್ಯಾಪ್ತಿಯಲ್ಲಿರುವ ಗ್ಯಾಲಕ್ಸಿಗಳ ಸಂಖ್ಯೆ 200 ಶತಕೋಟಿ (ಇಪ್ಪತ್ತು ಸಾವಿರ ಕೋಟಿ )! ಎಂತಹ ಕಲ್ಪನಾತೀತ ಸಂಖ್ಯೆ! ಆದರೆ ಇತ್ತೀಚೆಗೆ ಪತ್ತೆಯಾಗಿ ನಿರ್ಧಾರವಾಗಿರುವಂತೆ ವಿಶ್ವದಲ್ಲಿರುವ ಒಟ್ಟು ಗ್ಯಾಲಕ್ಸಿಗಳ ಸಂಖ್ಯೆ ಆ ಹಳೆ ಎಣಿಕೆಯ ಹತ್ತು ಪಟ್ಟು ಹೆಚ್ಚಿದೆ. ಎಂದರೆ ವಿಶ್ವದಲ್ಲಿರುವ ಗ್ಯಾಲಕ್ಸಿಗಳ ಒಟ್ಟು ಸಂಖ್ಯೆ ಎರಡು ಟ್ರಿಲಿಯನ್ ಮುಟ್ಟಿದೆ. ಅಂದರೆ, ಎರಡು ಸಾವಿರ ಶತಕೋಟಿ! (2ರ ಮುಂದೆ ಹನ್ನೆರಡು ಸೊನ್ನೆಗಳನ್ನು ಬರೆದರೆ ಈ ಸಂಖ್ಯೆ ಬರುತ್ತದೆ). ಒಂದು ಟ್ರಿಲಿಯನ್ ಎಷ್ಟು ದೈತ್ಯ ಸಂಖ್ಯೆ ಎಂಬುದಕ್ಕೆ ಎರಡು ಉದಾಹರಣೆಗಳು: ಒಂದು ಟ್ರಿಲಿಯನ್ ಸೆಕೆಂಡ್‌ಗಳ ಮೊತ್ತ 31,000 ವರ್ಷಕ್ಕೆ ಸಮ! ಭಾರತದಲ್ಲಿರುವ 134 ಕೋಟಿ ಜನರಿಗೆ ಒಂದು ಟ್ರಿಲಿಯನ್ ರೂಪಾಯಿಗಳನ್ನು ಸಮನಾಗಿ ಹಂಚಿದರೆ ಪ್ರತಿಯೊಬ್ಬರಿಗೂ 746 ರೂಪಾಯಿ ಸಿಗುತ್ತದೆ!

ನಿಮಗೇ ತಿಳಿದಂತೆ ಗ್ಯಾಲಕ್ಸಿ ಎಂಬುದು ವ್ಯೋಮಕಾಯಗಳ ಒಂದು ಮಹಾನ್ ಸಮೂಹ. ಸುರುಳಿ, ಎಲಿಪ್ಸೀಯ ಮತ್ತು ಅನಿಯತ ಆಕಾರಗಳಲ್ಲಿರುವ ಗ್ಯಾಲಕ್ಸಿಗಳು (ಚಿತ್ರ 1, 2, 3) ನಮ್ಮ ಕ್ಷೀರ ಪಥ ಗ್ಯಾಲಕ್ಸಿಯಂತೆಯೇ ಲಕ್ಷಾಂತರ ಜ್ಯೋತಿರ್ವರ್ಷಗಳಷ್ಟು ಉದ್ದ-ಅಗಲಗಳಿಗೆ ಹರಡಿವೆ. ಪ್ರತಿ ಗ್ಯಾಲಕ್ಸಿಯಲ್ಲೂ ಶತಕೋಟಿಗಳಷ್ಟು ನಕ್ಷತ್ರಗಳು, ಕೋಟ್ಯಂತರ ಸೌರವ್ಯೂಹಗಳು ಮತ್ತು ಅಂಥವೇ ಸಂಖ್ಯೆಗಳಷ್ಟು ನಾನಾ ವಿಧದ ಇತರ ವ್ಯೋಮಕಾಯಗಳು ಹರಡಿ ನಿಂತಿವೆ. ಇಂತಹ ಎರಡು ಟ್ರಿಲಿಯನ್ ಗ್ಯಾಲಕ್ಸಿಗಳು ವಿಶ್ವದಲ್ಲಿವೆ.

ಬಹು ಮುಖ್ಯ ವಿಷಯ: ಗ್ಯಾಲಕ್ಸಿಗಳ ಸಂಖ್ಯೆ ಹಿಂದೆ ಎಣಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಪತ್ತೆಯಾಗಿದೆಯಾದರೂ ವಿಶ್ವದ ವಿಸ್ತಾರವಾಗಲೀ, ಗಾತ್ರವಾಗಲೀ, ದ್ರವ್ಯದ ಮೊತ್ತವಾಗಲೀ, ದ್ರವ್ಯ ಸಾಂದ್ರತೆಯಾಗಲೀ, ನಕ್ಷತ್ರಗಳ ಒಟ್ಟು ಸಂಖ್ಯೆಯೇ ಆಗಲೀ ಯಾವುದೊಂದೂ ಅಧಿಕಗೊಂಡಿಲ್ಲ!
ಹಾಗಾದರೆ, ನಕ್ಷತ್ರಗಳ ಸಂಖ್ಯೆ ಕಿಂಚಿತ್ತೂ ಅಧಿಕಗೊಂಡಿಲ್ಲದೆ, ಗ್ಯಾಲಕ್ಸಿಗಳ ಸಂಖ್ಯೆ ಮಾತ್ರ ಹೆಚ್ಚಾಗಿರುವುದು - ಅದೂ ಹತ್ತು ಪಟ್ಟು ಹೆಚ್ಚಿರುವುದು - ಸಾಧ್ಯ ಹೇಗೆ ? ಈ ಹೊಸ ಗಣತಿಗೆ ಆಧಾರ ಏನು?

ಅದಕ್ಕೆ ಮೂಲತಃ ಅಂತರಿಕ್ಷದ ಒಂದು ನಿರ್ದಿಷ್ಟ ಪ್ರದೇಶವನ್ನು ‘ಹಬಲ್ ಬಾಹ್ಯಾಕಾಶ ದೂರದರ್ಶಕ’ ದ ಮೂಲಕ ವೀಕ್ಷಿಸಿ ಪಡೆದ 342 ಚಿತ್ರಗಳ ‘ಹಬಲ್ ಡೀಪ್ ಫೀಲ್ಡ್’ ಚಿತ್ರ ಸರಣಿಯೇ ಕಾರಣ. ದೃಗ್ಗೋಚರ ಬೆಳಕನ್ನಷ್ಟೇ ಅಲ್ಲದೆ, ಅತಿ ನೇರಳೆ ಮತ್ತು ಅವಗೆಂಪು ವಿಕಿರಣಗಳ ಮೂಲಕವೂ ಪಡೆಯಲಾದ ಆ ದೃಶ್ಯಗಳು ಆ ಪ್ರದೇಶದಲ್ಲಿ ಅಲ್ಲಿಯವರೆಗೆ ಅಗೋಚರವಾಗಿದ್ದ ಹೇರಳ  ಗ್ಯಾಲಕ್ಸಿಗಳನ್ನು ಪ್ರತ್ಯಕ್ಷವಾಗಿಸಿದುವು.  ಖಾಲಿಯೆಂದು ಭಾವಿಸಲಾಗಿದ್ದ ಸ್ಥಳಗಳಲ್ಲೂ, ಪ್ರತಿಯೊಂದು ಗ್ಯಾಲಕ್ಸಿಯ ಆಸುಪಾಸಿನಲ್ಲೂ ಹೇರಳ ಸಂಖ್ಯೆಯ ಕುಬ್ಜ ಗ್ಯಾಲಕ್ಸಿಗಳೂ, ಉಪಗ್ರಹ ಗ್ಯಾಲಕ್ಸಿಗಳೂ ಇರುವುದನ್ನು ನಿಚ್ಚಳಗೊಳಿಸಿದುವು. ಉದಾಹರಣೆಗೆ ನಮ್ಮ ಕ್ಷೀರಪಥ ಗ್ಯಾಲಕ್ಸಿಗೇ ಐವತ್ತು ಉಪಗ್ರಹ ಗ್ಯಾಲಕ್ಸಿಗಳಿವೆ. ಹಾಗೆಯೇ ಅಂತರಿಕ್ಷದ ಇತರ ಪ್ರದೇಶಗಳಿಂದಲೂ ಪಡೆದ ಇಂತಹವೇ ವೀಕ್ಷಣಾ ಫಲಿತಾಂಶಗಳು ಆವರೆಗೂ ತಿಳಿದಿದ್ದ ಪ್ರತಿಯೊಂದು ಗ್ಯಾಲಕ್ಸಿಗೂ ಸರಾಸರಿ ಒಂಬತ್ತರಿಂದ ಹತ್ತು ಹೆಚ್ಚುವರಿ ಗ್ಯಾಲಕ್ಸಿಗಳು ಅಸ್ತಿತ್ವದಲ್ಲಿರುವುದು ಪತ್ತೆಯಾಯಿತು ( ಚಿತ್ರ 4, 5, 6 ನೋಡಿ).

ಹಾಗಾಗಿ, ಇನ್ನೂರು ಶತಕೋಟಿಯೆಂದಿದ್ದ ಗ್ಯಾಲಕ್ಸಿ ಸಂಖ್ಯೆ ಅದರ ಹತ್ತು ಪಟ್ಟು ಹೆಚ್ಚಿದೆ. ಯಾವ ಕಲ್ಪನೆಗೂ ಎಟುಕದ ಎರಡು ಟ್ರಿಲಿಯನ್ ಸಂಖ್ಯೆಯನ್ನು ತಲುಪಿದೆ. ಎಂಥಾ ಸಂಖ್ಯೆ! ಎಂಥಾ ಅದ್ಭುತ ಅಲ್ಲವೇ?

ಇಲ್ಲೊಂದು ತುಂಬ ಮಹತ್ವದ ಅಂಶ ಇದೆ; ವಿಶ್ವದ ಸರ್ವ ದ್ರವ್ಯದ ಒಟ್ಟು ದ್ರವ್ಯರಾಶಿಯೇ ಎಲ್ಲ ಗ್ಯಾಲಕ್ಸಿಗಳ ದ್ರವ್ಯರಾಶಿ ಕೂಡ. ಸಕಲ ನಕ್ಷತ್ರಗಳ ಮತ್ತಿತರ ಎಲ್ಲ ಅಂತರಿಕ್ಷ ಕಾಯಗಳ ದ್ರವ್ಯದ ಮೊತ್ತ ಕೂಡ ಇದೇ. ವಿಶ್ವದ ಒಟ್ಟೂ ದ್ರವ್ಯರಾಶಿಯನ್ನು ಹಿಂದೆ ಎರಡು ನೂರು ಶತಕೋಟಿ ಗ್ಯಾಲಕ್ಸಿಗಳಿಗೇ ಹಂಚಿ ಪ್ರತಿ ಗ್ಯಾಲಕ್ಸಿಯ ಸರಾಸರಿ ನಕ್ಷತ್ರ ಸಂಖ್ಯೆಯನ್ನು ಸ್ಥೂಲವಾಗಿ ನಿರ್ಧರಿಸಲಾಗಿತ್ತು. ಈಗ ಅದೇ ದ್ರವ್ಯರಾಶಿ ಎರಡು ಟ್ರಿಲಿಯನ್ ಗ್ಯಾಲಕ್ಸಿಗಳಲ್ಲಿದೆ. ಹಾಗೆಂದರೆ ವಿಶ್ವದಲ್ಲಿರುವ ನಕ್ಷತ್ರಗಳ ಸಂಖ್ಯೆ ಅಷ್ಟೇ ಇದ್ದು, ಪ್ರತಿ ಗ್ಯಾಲಕ್ಸಿಯ ಸರಾಸರಿ ನಕ್ಷತ್ರ ಸಂಖ್ಯೆ ಕಡಿಮೆಗೊಂಡಿದೆ ಎಂಬುದು ಸ್ಪಷ್ಟವಾಯಿತು.

2.   ಕ್ಷುದ್ರ ಗ್ರಹಗಳಲ್ಲಿ ಇರುವ ನಿಧಿ-ನಿಕ್ಷೇಪವೇನು ?
ನಮ್ಮ ಸೌರವ್ಯೂಹದಲ್ಲಿ ಗ್ರಹಗಳಾಗಲು ಸಾಧ್ಯವಾಗದೆ, ಉಪಗ್ರಹಗಳೂ ಆಗಲಾರದೆ ಉಳಿದ ಘನರೂಪದ ಅವಶೇಷಗಳು ಚಿತ್ರ-ವಿಚಿತ್ರ ಆಕಾರದ ಬಂಡೆಗಳಂತಹ ರೂಪ ತಳೆದು, ಲಕ್ಷಾಂತರ ಸಂಖ್ಯೆಯಲ್ಲಿ ಮಂಗಳ ಮತ್ತು ಗುರು ಗ್ರಹಗಳ ಪಥಗಳ ನಡುವೆ
ಒಂದು ಪಟ್ಟಿಯಂತೆ ಸಂಗ್ರಹಗೊಂಡು ಸೂರ್ಯನನ್ನು ಪರಿಭ್ರಮಿಸುತ್ತಿವೆ (ಚಿತ್ರ 7). ಕೆಲವು ಪ್ರಮುಖ ಕ್ಷುದ್ರ ಗ್ರಹಗಳ ಗಾತ್ರಗಳನ್ನು ನಮ್ಮ ಚಂದ್ರನಿಗೆ ಹೋಲಿಸಿದಂತೆ (ಚಿತ್ರ 11 ರಲ್ಲೂ), ಆಕಾರಗಳನ್ನು (ಚಿತ್ರ 11 ಮತ್ತು ಚಿತ್ರ 8) ಗಮನಿಸಿ. ಇವುಗಳಲ್ಲಿ ಕೆಲ ಕ್ಷುದ್ರ ಗ್ರಹಗಳು ಆಕಸ್ಮಿಕವಾಗಿ, ಆಗೊಮ್ಮೆ ಈಗೊಮ್ಮೆ ತಮ್ಮ ನೆಲೆಯಿಂದ ಹೊರಬಿದ್ದು ಅಲೆಮಾರಿಗಳಾಗುತ್ತವೆ. ಅವುಗಳಲ್ಲಿ ಕೆಲವು ಅತ್ಯಪರೂಪವಾಗಿ ಭೂ ಗುರುತ್ವಕ್ಕೆ ಸಿಲುಕಿ, ಭೂ ವಾಯುಮಂಡಲವನ್ನು ಪ್ರವೇಶಿಸಿ ಉಲ್ಕೆಗಳಾಗಿ ಉರಿದು ಭಸ್ಮವಾಗುತ್ತವೆ (ಚಿತ್ರ 9); ಇಲ್ಲವೇ ಭೂ ನೆಲಕ್ಕೆ ಅಪ್ಪಳಿಸಿ ಮಹಾ ಪ್ರಳಯವನ್ನೇ ಸೃಜಿಸುತ್ತವೆ (ಚಿತ್ರ 9).

ವಿಸ್ಮಯ ಏನೆಂದರೆ, ಹೇರಳ ಕ್ಷುದ್ರಗ್ರಹಗಳ ದ್ರವ್ಯ ಸಂಯೋಜನೆ ನಮ್ಮ ಪೃಥ್ವಿಯಂತೆಯೇ ಆಗಿದೆ. ನಾನಾ ವಿಧ ಅಮೂಲ್ಯ, ಅತ್ಯುಪಯುಕ್ತ ಖನಿಜ-ಅದಿರುಗಳನ್ನು, ಲೋಹ-ಅಲೋಹಗಳನ್ನು, ನಿಧಿ-ನಿಕ್ಷೇಪಗಳನ್ನು (ಚಿತ್ರ 10 ) ಧಾರಾಳ ಪ್ರಮಾಣಗಳಲ್ಲಿ ಧರಿಸಿರುವ ಕ್ಷುದ್ರಗ್ರಹಗಳು ಬಹಳ ಸಂಖ್ಯೆಯಲ್ಲಿ ಪತ್ತೆಯಾಗಿವೆ.

ಕ್ಷುದ್ರಗ್ರಹಗಳಲ್ಲಿರುವ ನಿಧಿ-ನಿಕ್ಷೇಪಗಳು ಮತ್ತು ಅವುಗಳ ಸಮೃದ್ಧಿಯ ಪ್ರಮಾಣಗಳ ಕೆಲ ನಿದರ್ಶನಗಳು :
* ಖಾಂಡ್ರೈಟ್‌ಗಳೆಂದು ವರ್ಗೀಕರಿಸಲಾಗಿರುವ ಕ್ಷುದ್ರ ಗ್ರಹಗಳಲ್ಲಿ ವಿವಿಧ ಲೋಹ  ನಿಕ್ಷೇಪಗಳು ಭಾರೀ ಪ್ರಮಾಣದಲ್ಲಿವೆ. ವಿಶೇಷವಾಗಿ ಪ್ಲಾಟಿನಂ ವರ್ಗದ ಲೋಹಗಳು - ಅಂದರೆ ಪ್ಲಾಟಿನಂ, ಪಲ್ಲಡಿಯಂ, ರೋಡಿಯಂ, ರುಥೇನಿಯಂ, ಆಸ್ಮಿಯಂ ಹಾಗೂ ಇರಿಡಿಯಂ ಇಲ್ಲಿ ಹೇರಳವಾಗಿ ಲಭಿಸುತ್ತವೆ. ರಾಶಿ ರಾಶಿ ಬಂಗಾರ ನಿಕ್ಷೇಪಗಳಿರುವ ಕ್ಷುದ್ರಗ್ರಹಗಳೂ ಗುರುತಿಸಲ್ಪಟ್ಟಿವೆ.  ಕಬ್ಬಿಣ, ಕೋಬಾಲ್ಟ್, ಮೆಗ್ನೀಸಿಯಂ, ಅಲ್ಯೂಮಿನಿಯಂ, ಟೈಟಾನಿಯಂ ಇತ್ಯಾದಿ ಲೋಹ ನಿಕ್ಷೇಪಗಳು ಭೂಮಿಗಿಂತ ಹೆಚ್ಚು ಸಮೃದ್ಧವಾಗಿ ಶೇಖರವಾಗಿರುವ ಕ್ಷುದ್ರಗ್ರಹಗಳೂ ಬೇಕಾದಷ್ಟಿವೆ.

* ಕ್ಷುದ್ರಗ್ರಹಗಳಲ್ಲಿ ನಿಧಿ-ನಿಕ್ಷೇಪಗಳು ಎಷ್ಟು ಸಮೃದ್ಧವಾಗಿವೆಯೆಂದರೆ ಪ್ಲಾಟಿನಂ ಲೋಹದ ಸಮೃದ್ಧಿ ಭೂ ನೆಲದಲ್ಲಿರುವುದಕ್ಕಿಂತ ಇನ್ನೂರು ಪಟ್ಟು ಅಧಿಕ ಇದೆ!  ಹಾಗಾಗಿ ಹತ್ತು ಗ್ರಾಂ ಪ್ಲಾಟಿನಂ ಅನ್ನು ಪಡೆಯಲು ಭೂಮಿಯಲ್ಲಿ ಎರಡು ಸಾವಿರ ಟನ್ ಅದಿರನ್ನು ಸಂಸ್ಕರಿಸಬೇಕಾದರೆ, ಅಷ್ಟೇ ಪ್ಲಾಟಿನಂ ಅನ್ನು ಪಡೆಯಲು ಕ್ಷುದ್ರ ಗ್ರಹಗಳ ಏಳೇ ಟನ್ ಶಿಲೆಗಳೇ ಸಾಕು! ಬಂಗಾರದ ಸಮೃದ್ಧಿ ಭೂ ನೆಲದಲ್ಲಿರುವುದಕ್ಕಿಂತ ಐವತ್ತನಾಲ್ಕು ಪಟ್ಟು ಅಲ್ಲಿ ಹೆಚ್ಚು! ಆದ್ದರಿಂದಲೇ, ಹತ್ತು ಗ್ರಾಂ ಚಿನ್ನವನ್ನು ಗಳಿಸಲು ಭೂಮಿಯ ಎರಡು ಸಾವಿರದ ಐನೂರು ಟನ್ ಶಿಲೆ ತೆಗೆಯಬೇಕು. ಅದೇ ಹತ್ತು ಗ್ರಾಂ ಚಿನ್ನ ತೆಗೆಯಲು ಕ್ಷುದ್ರ ಗ್ರಹಗಳ ನಲವತ್ತಾರು ಟನ್ ಶಿಲೆಗಳು ಸಾಕು! ಇರಿಡಿಯಂ ಏಳುನೂರ ಅರವತ್ತು ಪಟ್ಟು  ಹಾಗೂ ಪಲ್ಲಡಿಯಂ ಐವತ್ತೆಂಟು ಪಟ್ಟು ಹೆಚ್ಚು ಸಮೃದ್ಧವಾಗಿವೆ! ಇವು ಕೆಲವು ಉದಾಹರಣೆಗಳಷ್ಟೆ.

ಹೀಗೆ ಕ್ಷುದ್ರ ಗ್ರಹಗಳಲ್ಲಿ ಲೋಹನಿಕ್ಷೇಪಗಳು ಎಷ್ಟು ಲಾಭದಾಯಕ ಪ್ರಮಾಣಗಳಲ್ಲಿ ಇವೆಯೆಂದರೆ ಒಂದೇ ಒಂದು ಕಿಲೋಮೀಟರ್ ವ್ಯಾಸದ ಒಂದು ಪುಟ್ಟ ಕ್ಷುದ್ರಗ್ರಹದಲ್ಲಿರುವ ಎಲ್ಲ ನಿಧಿ- ನಿಕ್ಷೇಪಗಳ ಒಟ್ಟು ಮೌಲ್ಯ ಇಪ್ಪತ್ತು ಟ್ರಿಲಿಯನ್ ಡಾಲರ್ (ಎಂದರೆ ಸುಮಾರು 1,200 ಲಕ್ಷ ಕೋಟಿ ರೂಪಾಯಿ) ಆಗಬಹುದು ಎಂದು ಅಂದಾಜಿಸಲಾಗಿದೆ. ನೂರಾರು ಕಿಲೋಮೀಟರ್ ವ್ಯಾಸದ ಇಂತಹ ನಿಧಿಭರಿತ ಕ್ಷುದ್ರಗ್ರಹಗಳು ಬೇಕಾದಷ್ಟಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಚ್ಚರಿಯ ಅಂಶ.

* ಭಾರೀ ಪ್ರಮಾಣಗಳಲ್ಲಿ ನೀರು ಸಂಗ್ರಹಗೊಂಡಿರುವ ಕ್ಷುದ್ರ ಗ್ರಹಗಳೂ ಹೇರಳವಾಗಿವೆ. ಅಂತರ್ಜಲ ರೂಪದಲ್ಲಿರುವ ಈ ನೀರು ಅಂತರಿಕ್ಷದಲ್ಲಿ ಎಷ್ಟು ಬೆಲೆ ಬಾಳುತ್ತದೆಂದರೆ, ಕೇವಲ ಅರ್ಧ ಕಿಲೋಮೀಟರ್ ವ್ಯಾಸದ ಇಂತಹ ಒಂದೇ ಒಂದು ಕ್ಷುದ್ರಗ್ರಹದಲ್ಲಿ ಲಭಿಸುವಷ್ಟೂ ನೀರನ್ನು ಭೂಮಿಯಿಂದ ವ್ಯೋಮಕ್ಕೆ ಸಾಗಿಸಲು ಮುನ್ನೂರು ಲಕ್ಷ ಕೋಟಿ ರೂಪಾಯಿ ವ್ಯಯವಾಗುತ್ತದೆ! ಬಾಹ್ಯಾಕಾಶದಲ್ಲಿ, ಅನ್ಯ ಗ್ರಹ ನೆಲೆಗಳಲ್ಲಿ ವ್ಯೋಮಯಾತ್ರಿಗಳಿಗೆ ಕುಡಿಯಲು, ಉಸಿರಾಟಕ್ಕೆ ಆಮ್ಲಜನಕ ಪಡೆಯಲು ಹಾಗೂ ವ್ಯೋಮ ವಾಹನಗಳಲ್ಲಿ ಇಂಧನವಾಗಿ ಬಳಸಲೂ ಕೂಡ ನೀರು ಬೇಕೇ ಬೇಕು. ಈ ಎಲ್ಲ ಅಗತ್ಯಗಳಿಗೂ ಭೂಮಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಬೇಕೆಂದರೆ ಪ್ರತಿ ಲೀಟರ್ ನೀರಿಗೂ ಹನ್ನೆರಡು ಲಕ್ಷ ರೂಪಾಯಿ ಖರ್ಚಾಗುತ್ತದೆ.

ಕ್ಷುದ್ರಗ್ರಹಗಳು ನಿಧಿಭರಿತವಾಗಿವೆ. ಆದರೆ ಅವುಗಳಲ್ಲಿರುವ ನಿಧಿಗಳನ್ನು ಹೊರತೆಗೆದು ಭೂಮಿಗೆ ತರುವುದಾಗಲೀ, ವ್ಯೋಮದಲ್ಲೇ ಬಳಸುವುದಾಗಲೀ ಹೇಗೆ ?

ಅದಕ್ಕಾಗಿಯೇ ‘ಕ್ಷುದ್ರಗ್ರಹ ಗಣಿಗಾರಿಕೆ ’ಯ ಯೋಜನೆಗಳು ( ಚಿತ್ರ 12) ಮತ್ತು ಅವುಗಳನ್ನು ಕಾರ್ಯರೂಪಕ್ಕಿಳಿಸಬಲ್ಲ ವಿಶೇಷ ತಂತ್ರಜ್ಞಾನದ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿವೆ. ಆದರೆ ಅದೆಲ್ಲ ಸಮರ್ಥವಾಗಿ ಕೈಗೂಡಲು ಇನ್ನೂ ಹಲವು ವರ್ಷಗಳೇ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT