ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕವನ್ನು ಕಾಣಲು ‘ಬುದ್ಧ ಕಣ್ಣು’

Last Updated 6 ಮೇ 2017, 19:30 IST
ಅಕ್ಷರ ಗಾತ್ರ

ಕ್ವಾಂಟಮ್ ಥಿಯರಿಯನ್ನು ಓದಿದವನಿಗೆ ಶಾಕ್ ಆಗದಿದ್ದರೆ ಅದು ಅವನಿಗೆ ಅರ್ಥವಾಗಿಲ್ಲವೆಂದೇ ಅರ್ಥ ಎನ್ನುತ್ತಾನೆ ‘ಕ್ವಾಂಟಮ್ ಥಿಯರಿ’ಯ ಪ್ರತಿಪಾದಕ ನೀಲ್ಸ್ ಬೋಹ್ರ್. ಬೌದ್ಧ ಧರ್ಮದ ಬಗೆಗೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಬೌದ್ಧ ತಾತ್ವಿಕತೆಯನ್ನು ಅರಿತುಕೊಂಡವನಿಗೆ ಶಾಕ್ ಆಗುವುದು ಬುದ್ಧಗುರು ತಿಳಿಸಿಕೊಟ್ಟ ತಾತ್ವಿಕತೆಯ ಕಾರಣಕ್ಕಲ್ಲ; ಬದಲಿಗೆ ನಾವೀಗ ನಂಬಿ ಬದುಕುತ್ತಿರುವ ಪೊಳ್ಳಿನ ಕಾರಣಕ್ಕೆ! ಸುಳ್ಳನ್ನೇ ನಂಬಿ ಸುಳ್ಳನ್ನೇ ಹೇಳುತ್ತಾ ಸುಳ್ಳನ್ನೇ ಬಾಳುತ್ತಿರುವವರಿಗೆ ಯಾರಾದರೂ ನಿಜವನ್ನು ಹೇಳಿದಾಗ ಏನಾಗುತ್ತದೆಯೋ ಅದೇ ಇಂದು ಬೌದ್ಧ ತಾತ್ವಿಕತೆಯನ್ನು ಇದಿರಾಗುವವರಿಗೆ ಆಗುತ್ತದೆ. ಹಾಗೆ ಆಗದಿದ್ದರೆ ಒಂದೋ ಅವರಿಗೆ ಅದು ಅರ್ಥವಾಗಿಲ್ಲ ಅಥವಾ ನಿಜವಾದ ಬೌದ್ಧ ತಾತ್ವಿಕತೆಯನ್ನು ಅವರು ಇದಿರಾಗಿಲ್ಲ ಎಂದೇ ಅರ್ಥ.

ಬೌದ್ಧ ಧರ್ಮವನ್ನು ಅರಿತುಕೊಳ್ಳಲು ಯಾವ ಪುಸ್ತಕವನ್ನು ಓದಬೇಕು ಮತ್ತು ಬೌದ್ಧ ಧರ್ಮದ ಪಾಲನೆ ಮಾಡುವುದಾದರೆ ಏನೇನನ್ನು ಪಾಲಿಸಬೇಕು? ಇದು ಅದನ್ನು ಅರಿಯಬಯಸುವ ಕುತೂಹಲಿಗಳ ಸಾಮಾನ್ಯ ಪ್ರಶ್ನೆ. ಇದೊಂಥರಾ ಕಟು ವ್ಯಂಗ್ಯ. ಸೊನ್ನೆಯನ್ನು ಪಡೆಯಲು ಏನೇನನ್ನು ಕೂಡಬೇಕು? ಸುಮ್ಮನಿರಲು ಏನೇನು ಮಾಡಬೇಕು? ಎಂದು ಕೇಳಿದಂತೆ. ಈಗಾಗಲೇ ಓದಿ ಓದಿ ಬೇಡವಾದದ್ದನ್ನೆಲ್ಲಾ ಗುಡ್ಡೆ ಹಾಕಿಕೊಂಡದ್ದು ಸಾಲದೆ, ಇನ್ನೂ ಒಂದನ್ನು ಸೇರಿಸಿಕೊಳ್ಳಲು ಬಯಸುತ್ತಿರುತ್ತಾರೆ! ಅದೂ ಅಲ್ಲದೆ, ಆಚರಿಸಬಾರದವುಗಳ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಟ್ಟುಕೊಂಡು ಅದರ ಜೊತೆಗೆ ಇನ್ನೊಂದಷ್ಟನ್ನು ಮಾಡಲು ತಯಾರಾಗಿ ಈ ಪ್ರಶ್ನೆ ಕೇಳುತ್ತಾರೆ. ಬುದ್ಧನ ದಾರಿ ಗುಡ್ಡೆ ಹಾಕಿಕೊಳ್ಳುವ ದಾರಿಯಲ್ಲ; ಅಲ್ಲಿ ಪಡೆದು ಅಲ್ಲೇ ವಿಸರ್ಜಿಸುವ ಯಾನ. ಅದು ಸೇರಿಸಿಕೊಳ್ಳಬೇಕಾದ ಮತ್ತೊಂದಲ್ಲ; ಬದಲಿಗೆ ತಪ್ಪು ತಿಳಿವಳಿಕೆಯನ್ನು ತೊಡೆದು ಹಾಕುವುದರಿಂದ ಉಂಟಾಗುವ ವಿವೇಕ. ಈಗಾಗಲೇ ಇರುವ ಅನೇಕ ಆಚರಣೆಗಳ ಜೊತೆಗೆ ಸೇರಿಸಿಕೊಳ್ಳಬೇಕಾದ ಇನ್ನೊಂದು ಆಚರಣೆಯಲ್ಲ; ಬದಲಿಗೆ ಲೋಕಕ್ಕೆ ಕೇಡುಂಟುಮಾಡುವ ಆಚರಣೆಗಳ ನಿರಾಕರಣೆ ಮಾತ್ರ. ಯಾವಾಗಲೂ ಸೊನ್ನೆಯೇ ಆಗಿರುವ ಅವಸ್ಥೆ. ಸೊನ್ನೆಯಾಗಿದ್ದರೆ ಮಾತ್ರ ಅಗತ್ಯಕ್ಕೆ ತಕ್ಕಂತೆ ಯಾವ ಸಂಖ್ಯೆಯೂ ಆಗಲು ಸಾಧ್ಯ ಮತ್ತು ಏನೂ ಆಗಿಲ್ಲದಿರಲೂ ಸಾಧ್ಯ. ಇದನ್ನು ‘ಶೂನ್ಯತೆ’ ಅಥವಾ ‘ಮಧ್ಯಮಮಾರ್ಗ’ ಎನ್ನುತ್ತಾರೆ. ಬುದ್ಧ ಗುರು ತಿಳಿಸಿಕೊಟ್ಟ ಶೂನ್ಯವೆಂದರೆ ಏನೂ ಇಲ್ಲದಿರುವುದಲ್ಲ. ಎಲ್ಲವೂ ಇದ್ದು, ಏನೂ ಇಲ್ಲದಂತಿರುವುದು. ಕೇವಲ ಸೊನ್ನೆಯಲ್ಲ; ಯಾವಾಗ ಬೇಕೋ ಆಗ ಯಾವ ಸಂಖ್ಯೆಯೂ ಆಗಬಹುದಾದದ್ದು. ತಾಯಿಗರ್ಭದಂತೆ ಖಾಲಿಯೂ ಇರಬಲ್ಲದು ಮತ್ತು ತುಂಬಿ ನೀಡಲೂ ಬಲ್ಲದು.

ಎಲ್ಲರೂ ಬೌದ್ಧರಾಗಿಯೇ ತಮ್ಮ ಯಾನವನ್ನು ಆರಂಭಿಸುತ್ತಾರೆ. ಯಾಕೆಂದರೆ ಎಲ್ಲ ಮಕ್ಕಳೂ ಬೌದ್ಧರೇ! ಆದರೆ ಬೆಳೆದಂತೆ ಬೌದ್ಧತಾತ್ವಿಕತೆಯನ್ನು ಅವರಿಂದ ದೂರ ಮಾಡಲಾಗುತ್ತದೆ. ಅಂದಮಾತ್ರಕ್ಕೆ ಬೌದ್ಧಧರ್ಮವೆಂದರೆ ಬಾಲಮುಗ್ಧತೆಯಲ್ಲ; ಲೋಕವನ್ನು ಅದಿರುವಂತೆಯೇ ನೋಡಲು ಸಾಧ್ಯವಾಗುವ ಮುಕ್ತ ಮನಸ್ಥಿತಿ. ಉದಾಹರಣೆಗೆ ಮಕ್ಕಳಲ್ಲಿ ಜಾತಿಯಿಲ್ಲ, ಲಿಂಗ ತಾರತಮ್ಯವಿಲ್ಲ, ಸುಳ್ಳಿಲ್ಲ, ಯಾವ ಕೇಡುಗಳೂ ಇಲ್ಲ. ಆದರೆ ಲೋಕವನ್ನು ಅರಿತುಕೊಳ್ಳುವ ಮನಸ್ಸಿದೆ, ಪ್ರೀತಿಯಿದೆ, ಮೈತ್ರಿಯಿದೆ. ಅವರ ಮನೋಕೋಶಕ್ಕೆ ಕೇಡುಗಳನ್ನು ಹೊರಗಿನಿಂದ ತುಂಬಲಾಗುತ್ತದೆ. ಇಲ್ಲಿ ಎರಡು ಸವಾಲುಗಳಿವೆ. ಒಂದು ಮನುಷ್ಯನ ಮನೋಕೋಶಕ್ಕೆ ಎಲ್ಲ ರೀತಿಯ ತಾರತಮ್ಯಗಳಿಗೆ ಕಾರಣವಾಗಿರುವ ಕೇಡುಗಳ ಸಂರಚನೆಗಳನ್ನು ಬರದಂತೆ ತಡೆಯುವುದು ಮತ್ತು ಎರಡನೆಯದು, ಲೋಕವನ್ನು ಅದಿರುವಂತೆ ಸರಿಯಾಗಿ ಅರ್ಥಮಾಡಿಕೊಳ್ಳಲು ಬೇಕಾಗಿರುವ ನಿಸರ್ಗವಿವೇಕವನ್ನು ಕಾಪಾಡುವುದು. ‘ಬುದ್ಧಸತ್ವ’ ಎನ್ನುವುದು ಲೋಕದ ಎಲ್ಲರಲ್ಲಿಯೂ ಇದೆ. ಹಾಗಾಗಿ ಬೌದ್ಧತಾತ್ವಿಕತೆಯೆಂಬುದು ಹೊರಗಿನಿಂದ ತಂದು ತುಂಬಿಕೊಳ್ಳುವುದಲ್ಲ; ಬದಲಿಗೆ ತನ್ನಲ್ಲೇ ಇರುವ ನಿಸರ್ಗವಿವೇಕವನ್ನು ಚಾಲ್ತಿಗೆ ತರುವುದು. ಅದು ನಮ್ಮ ನಡುವಿಗೆ ಬರದಂತೆ ತಡೆಯುತ್ತಿರುವವರು ನಾವೇ ಆಗಿದ್ದೇವೆ. ಅದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುವ ಸುಳ್ಳು ಸಂರಚನೆಗಳು. ಈ ಸಂರಚನೆಗಳು ನಮ್ಮ ತಿಳಿವಳಿಕೆಯನ್ನು ಮತ್ತು ನಮ್ಮ ಎಲ್ಲ ನಡೆಗಳನ್ನು ನಿಯಂತ್ರಿಸುತ್ತಿವೆ. ಇವುಗಳಿಂದ ಮುಕ್ತವಾಗಿ ಯೋಚಿಸಿ ನಡೆದರೆ ಮಾತ್ರ ಲೋಕವನ್ನು ಅದಿರುವಂತೆ ನೋಡಲು ಸಾಧ್ಯವಾಗುತ್ತದೆ. ಅಂದರೆ ನಮ್ಮ ಮನೋಕೋಶಕ್ಕೆ ನಿಜವಲ್ಲದ ಸಂಗತಿಗಳನ್ನು ತಂದು ತುಂಬಿ ಅವುಗಳ ಮೂಲಕ ನಮ್ಮನ್ನು ನಿಯಂತ್ರಿಸಲಾಗುತ್ತಿದೆ. ಈ ಅನ್ಯ ನಿಯಂತ್ರಣದಿಂದ ಮುಕ್ತವಾಗಬೇಕು. ಬುದ್ಧಗುರುವಿಗೆ ಇದ್ದ ಸವಾಲುಗಳು ಇವೇ ಅಗಿದ್ದವು.
ಬುದ್ಧನ ಕಾಲಕ್ಕೆ ಇಂತಹ ಸುಳ್ಳು ಸಂರಚನೆಗಳನ್ನು ಮುಂದಿಡುವ ಒಟ್ಟು ಅರುವತ್ತಮೂರು ‘ಚಿಂತನಾಪ್ರಸ್ಥಾನ’ಗಳಿದ್ದವು. (ಈಗಲೂ ಬೇಕಾದಷ್ಟಿವೆ!) ಈ ಚಿಂತನಾಪ್ರಸ್ಥಾನಗಳನ್ನು ಅಧ್ಯಯನ ಮಾಡಿದ ಬುದ್ಧ ಕಂಡುಕೊಂಡ ಸತ್ಯವೆಂದರೆ: ಇವುಗಳೆಲ್ಲ ಸುಳ್ಳು ಹೇಳುತ್ತಿವೆ! ಅವುಗಳು ಹೇಳುತ್ತಿದ್ದ ಸುಳ್ಳಿನ ಸ್ವರೂಪವನ್ನು ಆಧರಿಸಿ ಅವುಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿದ. ಒಂದು ಗುಂಪು, ನಮ್ಮ ಎದುರಿನ ಲೋಕವೆಲ್ಲ ಸುಳ್ಳು. ನಾವಿಲ್ಲಿ ಕಾಣುತ್ತಿರುವುದೆಲ್ಲ ಭ್ರಮೆ, ಇದರ ಹಿಂದಿನ ಸತ್ಯ ಬೇರೆಯೇ ಇದೆ. ಅದು ಇಲ್ಲಿರುವ ಎಲ್ಲವನ್ನೂ ಸೃಷ್ಟಿಸಿ ನಿಯಂತ್ರಿಸುತ್ತಿದೆ. ಅದು ಬಯಸಿದಂತೆಯೇ ಎಲ್ಲವೂ ಆಗುತ್ತದೆ. ಯಾವ್ಯಾವಾಗ ಏನೇನು ಆಗಬೇಕು ಎನ್ನುವುದನ್ನು ಅದು ತೀರ್ಮಾನಿಸಿಟ್ಟಿದೆ. ನೀವೇನಿದ್ದರೂ ಜಟಕಾಬಂಡಿಗೆ ಹೂಡಿದ ಕುದುರೆಗಳಂತೆ. ಯಾವುದೂ ನಿಮ್ಮ  ತೀರ್ಮಾನದಲ್ಲಿಲ್ಲ. ತೀರ್ಮಾನವೆಲ್ಲ ಅವನದ್ದು. ಜಟಕಾ ಎಳೆಯುವುದಷ್ಟೆ ನಿನ್ನ ಪಾಲಿನ ಕರ್ಮ. ಇದು ಒಂದು ನಿಲುವು. ಇವರನ್ನು ಆತ್ಮವಾದಿಗಳು, ನಾಸ್ತಿತ್ವವಾದಿಗಳು, ಎನ್ನಬಹುದು. ಇನ್ನೊಂದು ಗುಂಪು – ಇಲ್ಲಿರುವ ಎಲ್ಲವೂ ಶಾಶ್ವತವಾದವುಗಳು. ಎಲ್ಲವೂ ಸ್ವತಂತ್ರವಾದುವುಗಳು. ಇವುಗಳ ಬದಲಾವಣೆ ಎನ್ನುವುದು ಅಸಾಧ್ಯ. ಇದು ಇನ್ನೊಂದು ಗುಂಪಿನ ನಿಲುವು. ಇವರನ್ನು ಅಸ್ತಿತ್ವವಾದಿಗಳು ಎನ್ನಬಹುದು. ವಿಜ್ಞಾನದ ಎದುರಿಗೆ ಈ ನಿಲುವುಗಳನ್ನು (ಆತ್ಮ, ಪರಬ್ರಹ್ಮ, ವಿಧಿವಾದ, ಶಾಶ್ವತವಾದ, ಸ್ವತಂತ್ರವಾದ ವಸ್ತುಗಳು ಇತ್ಯಾದಿಗಳನ್ನು ) ಈ ಹೊತ್ತು ಇಟ್ಟರೆ ಅದು ಏನೆಂದು ಪ್ರತಿಕ್ರಿಯಿಸುತ್ತದೆಯೋ ಅದೇ ಪ್ರತಿಕ್ರಿಯೆಯನ್ನು ಬುದ್ಧ ಸುಮಾರು ಎರಡೂವರೆ ಸಾವಿರ ವರುಷಗಳ ಹಿಂದೆ ವ್ಯಕ್ತಪಡಿಸಿದ. ಈ ಎರಡೂ ನಿಲುವುಗಳನ್ನು ಸುಳ್ಳೆಂದು ತಿರಸ್ಕರಿಸಿದ ಬುದ್ಧಗುರು ಲೋಕವನ್ನು ಮೂರು ಲಕ್ಷಣಗಳ ಮೂಲಕ ವ್ಯಾಖ್ಯಾನಿಸಬಹುದು ಎಂದು ತೋರಿಸಿಕೊಟ್ಟನು. ಅವುಗಳೆಂದರೆ: 1. ಸಬ್ಬೇ ಸಂಖಾರ ಅನಿಚ್ಛ (ಎಲ್ಲ ಸಂಯೋಜನೆಗಳೂ ಅನಿತ್ಯವಾದವು), 2. ಸಬ್ಬೇ ಸಂಖಾರ ದುಃಖ (ಎಲ್ಲ ಸಂಯೋಜನೆಗಳೂ ದುಃಖ ಅಥವಾ ತಲ್ಲಣದಲ್ಲಿವೆ, 3. ಸಬ್ಬೇ ಧಮ್ಮ ಅನಾತ್ತ (ಎಲ್ಲದರ ಧರ್ಮವೂ ಅನಾತ್ಮವೇ ಆಗಿದೆ).

1. ಸಬ್ಬೇ ಸಂಖಾರ ಅನಿಚ್ಚ: ಈ ಲೋಕದ ಎಲ್ಲವೂ ಸಂಯೋಜನೆಗಳೇ ಆಗಿವೆ. ಈ ಸಂಯೋಜನೆಗಳು ಸದಾ ಬದಲಾಗುತ್ತಿವೆ. ಇಲ್ಲಿ ಶಾಶ್ವತವಾದ ಮತ್ತು ಸ್ವತಂತ್ರವಾದ ವಸ್ತುವೆನ್ನುವುದು ಇಲ್ಲ. ಅನೇಕ ಅಂಶಗಳಿಂದಾದ, ಅಂದರೆ ಪ್ರತ್ಯಯಗಳಿಂದಾದ ಈ ಲೋಕವನ್ನು ‘ಪ್ರತೀತ್ಯ ಸಮುತ್ಪಾದ’ ಎಂದು ಭಾವಿಸಿ ನಡೆದುಕೊಳ್ಳಬೇಕು. ನಾವೆಲ್ಲ ಅನೇಕ ಅಂಶಗಳಿಂದ ಆಗುತ್ತಲೇ ಇರುವ ಸಂಗತಿಗಳೇ ಹೊರತು ಆಗಿ ಇರುವ ಸ್ವತಂತ್ರ ಸಂಗತಿಗಳಲ್ಲ.

2. ಸಬ್ಬೇ ಸಂಖಾರ ದುಃಖ: ಲೋಕದ ಎಲ್ಲ ಸಂಯೋಜನೆಗಳೂ ದುಃಖದಿಂದ ಕೂಡಿವೆ. ಪಾಲಿಯ ‘ದುಃಖ’ ಪದಕ್ಕೆ ಕನ್ನಡದ ದುಃಖ ಪದ ಸಮಾನವಲ್ಲ. ದುಃಖವೆಂಬ ಪದಕ್ಕೆ ಕನ್ನಡದ ‘ತಲ್ಲಣ’ ಪದ ಹತ್ತಿರವಾದುದು. ಲೋಕದಲ್ಲಿ ಯಾವುದೂ ನಿಶ್ಚಲ ಸ್ಥಿತಿಯಲ್ಲಿಲ್ಲ ಎಂಬುದು ಇದರ ಅರ್ಥ. ಎಲ್ಲವೂ ನಿರಂತರ ಚಲಿಸುತ್ತಲೇ ಇವೆ. ಈ ನಿರಂತರ ತಲ್ಲಣದ ಸ್ಥಿತಿಯನ್ನು ಅದಿರುವಂತೆ ನೋಡಲು ಸಾಧ್ಯವಾಗದಿರುವುದು ನಮ್ಮ ಸಂಕಟಕ್ಕೆ ಕಾರಣವಾಗುತ್ತಿದೆ. ಕ್ಷಣಮಾತ್ರವೂ ಯಾವುದೂ ಎಂದೂ ಎಲ್ಲಿಯೂ ಸ್ಥಗಿತವಾಗಿಲ್ಲ. ಈ ಲೋಕವೊಂದು ಪ್ರವಾಹ. ಈ ಪ್ರವಾಹದಲ್ಲಿ ನೀವೂ ನಿರಂತರ ಬದಲಾಗುತ್ತ ಹರಿಯುತ್ತಿದ್ದೀರಿ. ಎದುರಿಗೆ ಇರುವ ಯಾವುದನ್ನೂ ಇಂತಹದ್ದು ಎಂದು ಗುರುತಿಸುವ ಹೊತ್ತಿಗೆ ಅದು ಬದಲಾಗಿ ಹೋಗಿರುತ್ತದೆ. ಆದುದರಿಂದ ಎದುರಿಗೆ ಇರುವ ಲೋಕವನ್ನು ಸದಾ ಬದಲಾಗುತ್ತಲೇ ಇರುವ ಪ್ರವಾಹ ಎಂದು ಇದಿರಾಗಬೇಕು. ಇದು ಲೋಕಾನುಸಂಧಾನದ ಸರಿಯಾದ ಮಾರ್ಗ. ನಮಗೆ ಇಷ್ಟವಾಗುವ ಸಂಗತಿಗಳು ಹಾಗೇ ಇರಲಿ ಎಂದು ಬಯಸುತ್ತೇವೆ. ಆದರೆ ಅವು ಬದಲಾಗುತ್ತವೆ. ಇದು ನಮಗೆ ದುಃಖವನ್ನುಂಟು ಮಾಡುತ್ತದೆ. ನಮಗೆ ಇಷ್ಟವಾಗದಿರುವುದು ನಮಗೆ ಒದಗದಿರಲಿ ಎಂದು ಬಯಸುತ್ತೇವೆ. ಆದರೆ ಹಾಗಾಗುವುದಿಲ್ಲ. ಅದೂ ನಮಗೆ ಸಂಕಟ ತರುತ್ತದೆ. ಉದಾಹರಣೆಗೆ: ಮುಪ್ಪು. ಅದನ್ನೇ ಅಲ್ಲಮಗುರು: ‘ಸುಖವ ಬಲ್ಲವ ಸುಖಿಯಲ್ಲ, ದುಃಖವ ಬಲ್ಲವ ದುಃಖಿಯಲ್ಲ’ ಅಂದದ್ದು.

3. ಸಬ್ಬೇ ಧಮ್ಮ ಅನಾತ್ತ:  ಆತ್ಮ ಎನ್ನುವುದು ಇಲ್ಲದಿರುವುದೇ ಎಲ್ಲದರ ಗುಣವಾಗಿದೆ. ಇಲ್ಲಿನ ಧಮ್ಮ ಪದವನ್ನು ‘ಗುಣ’, ‘ಸ್ವಭಾವ’ ಎಂದು ಓದಬೇಕು. ಆತ್ಮವಾದ ನಮ್ಮನ್ನು ನಿಯಂತ್ರಿಸುತ್ತಿರುವ ಪ್ರಬಲ ಅಸ್ತ್ರ. ಇದೊಂದು ಕಾಲ್ಪನಿಕ ಸಂಗತಿಯಾದರೂ ಭಾರತೀಯರು ಅದನ್ನು ಎಷ್ಟರ ಮಟ್ಟಿಗೆ ನಂಬಿ ಪಾಲಿಸುತ್ತಿದ್ದಾರೆಂದರೆ ಯಾವ ವಿಜ್ಞಾನಿ ಏನೇ ಹೇಳಿದರೂ, ಯಾವ ಡಾಕ್ಟರು ಏನೇ ಹೇಳಿದರೂ ನಾವು ಆ ಸತ್ಯವನ್ನ ಒಪ್ಪಿಕೊಳ್ಳದೆ ಆತ್ಮವೆಂಬ ಉರುಲಿಗೆ ತಲೆಯಿಕ್ಕುತ್ತೇವೆ. ಮನುಷ್ಯನಲ್ಲಿರುವ ಇಂದ್ರಿಯಗಳ ಹೊರತಾಗಿ ಆತ್ಮ ಎನ್ನುವ ಕಾಣದಿರುವ ಸಂಗತಿಯೊಂದಿದೆಯೇ ಎಂದು ಡಾಕ್ಟರನ್ನು ಕೇಳಿದರೆ ಅವರು, ಇಂತಹ ಪೊಳ್ಳು ವಾದಕ್ಕೆ ಏನು ಹೇಳಲು ಸಾಧ್ಯ ಎಂದು ಉತ್ತರ ನೀಡುವುದಿಲ್ಲ. ಆದರೆ ನಾವು ಮಾತ್ರ ಕಾಣದೆ ಇರುವುದನ್ನು ನಂಬುವುದರಲ್ಲಿ ನಿಸ್ಸೀಮರು. ಅನಾತ್ಮ ಪದಕ್ಕೆ ಇನ್ನೂ ಮುಂದುವರಿದ ಅರ್ಥವಿದೆ. ಲೋಕದ ಯಾವ ವಸ್ತುವಿಗೂ (ಜೀವ, ಅಜೀವ) ಅದರದ್ದೇ ಆದ ಸ್ವತಂತ್ರವಾದ ಅಸ್ತಿತ್ವವಿಲ್ಲ. ಎಲ್ಲವೂ ಸಂಬಂಧದಲ್ಲಿ ಉಂಟಾಗಿ ಸಂಬಂಧ ಭಂಗಗೊಂಡಾಗ ವಿಸರ್ಜಿತವಾಗುತ್ತವೆ. ಉದಾಹರಣೆಗೆ ಬೆಂಕಿಯೆಂಬುದು, ಉರುವಲು ಮತ್ತು ಶಾಖದ ಸಂಬಂಧದಲ್ಲಿ ಉಂಟಾಗಿ ಅವುಗಳಲ್ಲಿ ಯಾವುದು ಇಲ್ಲವಾದರೂ ನಿಂತುಹೋಗುತ್ತದೆ. ಅವುಗಳ ಹೊರತಾಗಿ ಬೆಂಕಿ ಎಂಬ ಸ್ವತಂತ್ರವಾದದ್ದು ಇಲ್ಲ. ಇದನ್ನೇ ಸಿದ್ಧರಾಮ ‘ಕುಂಬಾರನ ಆವಿಗೆಯಲ್ಲಿ ಕುಂಬಾರನಿಲ್ಲ, ಕುಂಬಾರನ ಕಲಶಂಗಳಲ್ಲಿ ಕುಂಬಾರನಿಲ್ಲ, ಆವಿಗೆ ಕಲಶಂಗಳಲ್ಲಿ ಅಸ್ತಿತ್ವ ಉಂಟಾಗಿಹ ಕುಂಬಾರ ಕುಂಬಾರನಂತಿಪ್ಪ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ’ ಎನ್ನುತ್ತಾನೆ.

ಈ ಸಂಗತಿಗಳನ್ನು ಗಮನಿಸಿ. ಬುದ್ಧಗುರು ಹೇಳುತ್ತಿರುವ ಸಂಗತಿಗಳಲ್ಲಿ ಗುಟ್ಟು ಎನ್ನುವಂಥದ್ದೇನೂ ಇಲ್ಲ. ಇವೆಲ್ಲ ಸಾಮಾನ್ಯ ಮನುಷ್ಯನ ವಿವೇಕಕ್ಕೇ ನಿಲುಕಬಲ್ಲ ಸಂಗತಿಗಳಾಗಿವೆ. ಆದರೆ ಈ ಸತ್ಯಗಳೆಲ್ಲ ಕಾಣದಂತೆ, ಕಂಡರೂ ನಂಬದಂತೆ ಸುಳ್ಳುಗಳ ರಾಶಿಯನ್ನು ನಮ್ಮೆದುರಿಗೆ ಇಡಲಾಗಿದೆ. ಅಂದು ಅರುವತ್ತಮೂರು ಚಿಂತನಾ ಪ್ರಸ್ಥಾನಗಳು ಈ ಸುಳ್ಳುಗಳನ್ನು ಬುದ್ಧನೆದುರಿಗೆ ಇಟ್ಟರೆ, ಇಂದು ದಿನಬೆಳಗಾದರೆ ನೂರಾರು ಇ–ಚಾನಲ್ಲುಗಳ ಮೂಲಕ ಇಂತಹ ಬೊಗಳೆಯನ್ನೇ ಹರಿಸುವ ಉದ್ಯೋಗ ನಡೆಯುತ್ತಿದೆ!

ಬುದ್ಧನ ತಾತ್ವಿಕತೆಯ ಪ್ರಮುಖ ಲಕ್ಷಣವೆಂದರೆ ನಮ್ಮ ವಿವೇಕವೇ ನಮ್ಮನ್ನು ಮುನ್ನಡೆಸಬೇಕು. ಅದು ಮತ್ತೊಬ್ಬರು ನಮ್ಮನ್ನು ಆಳದೆ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಜಾಪ್ರಭುತ್ವದಂತೆ. ಅರುವತ್ತಮೂರು ನಿಲುವುಗಳನ್ನು ನಿರಾಕರಿಸಿದ ಬುದ್ಧನಿಗೆ ಕೇಳಿದ, ‘ಹಾಗಾದರೆ ನಿನ್ನ ನಿಲುವೇನು?’ ಎಂಬ ಪ್ರಶ್ನೆಗೆ ಅವನು ನೀಡಿದ ಉತ್ತರವೆಂದರೆ: ಏನೂ ಇಲ್ಲ! ಇದು ಆಶ್ಚರ್ಯವೆನ್ನಿಸಬಹುದು. ಯಾಕೆಂದರೆ ಯಾವ ನಿಲುವನ್ನೂ ಶಾಶ್ವತವೆಂದು ಬುದ್ಧಗುರು ಹೇಳಿಲ್ಲ. ವಿಜ್ಞಾನವೂ ಹೇಳುವುದಿಲ್ಲ. ಎಲ್ಲವೂ ಆಯಾ ಸಂದರ್ಭದ ಸತ್ಯವೇ ಹೊರತು ಶಾಶ್ವತ ಸತ್ಯವೆನ್ನುವುದು ಇರಲು ಸಾಧ್ಯವಿಲ್ಲ. ಈ ಲೋಕವೆಲ್ಲ ಯಾವುದರಿಂದ ಆಗಿದೆ? ಕಣವೋ ಅಲೆಯೋ? ಎಂದು ವಿಜ್ಞಾನವನ್ನು ಕೇಳಿದರೆ, ‘ಇನ್ನೂ ತೀರ್ಮಾನವಾಗಿಲ್ಲ ತಡೆಯಿರಿ’ ಎನ್ನುತ್ತದೆಯೇ ಹೊರತು ‘ಪರಬ್ರಹ್ಮನಿಂದ’ ಎಂದು ಉತ್ತರಿಸುವುದಿಲ್ಲ. ಬುದ್ಧಗುರುವಿನ ಉತ್ತರವೂ ಇದೇ ಆಗಿತ್ತು. ಯಾವಾಗಲೂ ಬದಲಾಗುತ್ತಲೇ ಇರುವ ಲೋಕಪ್ರವಾಹದಲ್ಲಿ ಶಾಶ್ವತ ಸತ್ಯವೆನ್ನುವುದು ಇರಲು ಸಾಧ್ಯವೂ ಇಲ್ಲ. ಆದರೆ ಲೋಕ ಸಮಸ್ತದೊಡನೆ ಕರುಣೆ ಮೈತ್ರಿಯಿಂದ ನಡೆದುಕೊಂಡರೆ ಸಾಕು, ಯಾರಿಗೂ ಕೇಡಾಗುವುದಿಲ್ಲ. ಕರುಣಾ ಮೈತ್ರಿ ಮಾರ್ಗವು ಕೇವಲ ಭಾವನಾತ್ಮಕವಾದ ನಿಲುವಲ್ಲ. ಲೋಕವನ್ನು ಸರಿಯಾಗಿ ಅರ್ಥೈಸಿಕೊಂಡಾಗ ತೆರೆಯುವ ಅರಿವಿನ ಕಣ್ಣು.

ಯಾವುದರಲ್ಲಿಯೂ ಆತ್ಮವೆನ್ನುವುದು ಇಲ್ಲ ಎಂದು ಭಾರತೀಯರಿಗೆ ಹೇಳಿದರೆ ದಿಗ್ಭ್ರಮೆ ಆಗುತ್ತದೆ. ಆದರೆ ವಿಜ್ಞಾನಿಗಳು (ತರ್ಕಬದ್ಧವಾಗಿ ಯೋಚಿಸಬಲ್ಲವರು) ಮತ್ತು ಮಕ್ಕಳು ಸರಿ ಎನ್ನುತ್ತಾರೆ! ಇನ್ನುಳಿದವರಂತೂ ಅಲ್ಲೋಲ ಕಲ್ಲೋಲವೇ ಸಂಭವಿಸಿತೇನೋ ಎನ್ನುವಂತೆ ಆಡುತ್ತಾರೆ! ಪೋಷಿತ ಸುಳ್ಳುಗಳನ್ನು ಗುಡಿಸಿಹಾಕಿ ಲೋಕವನ್ನು ಸುಂದರವಾಗಿ ಬಾಳಬಲ್ಲ ಆವರಣವೆಂದು ತೋರಿಸಿಕೊಟ್ಟವನು ಬುದ್ಧಗುರು. ಈ ಲೋಕವಿವರಣೆಯನ್ನು ಅವನು ನೀಡಿದ ಕಾರಣವೆಂದರೆ ನಾವು ಅನುಭವಿಸುತ್ತಿರುವ ಸಂಕಟಕ್ಕೆ ಇಲ್ಲಿ ಪರಿಹಾರ ಸಾಧ್ಯವಿತ್ತು. ಈ ವಿವರಣೆಗೂ ನಮ್ಮ ದುಃಖಕ್ಕೂ ನೇರವಾದ ಸಂಬಂಧವಿದೆ. ಅದಕ್ಕೆ ಪರಿಹಾರ ನೀಡಲು ಬುದ್ಧ ಈ ವಿವರಣೆ ನೀಡಿದ.

‘ಲೋಕ ನಾವು ಬಯಸುವ ಹಾಗೆ ಇಲ್ಲ ಎನ್ನುವುದು ದುಃಖಕ್ಕೆ ಕಾರಣವಾಗಿದೆ. ನಾನು ಯುವಕ/ಯುವತಿಯಾಗೇ ಇರಬೇಕೆಂಬ ಬಯಕೆ. ಆದರೆ ಹಾಗೆ ಆಗುತ್ತಿಲ್ಲ. ನಾನು ಮುದುಕ/ಮುದುಕಿ ಆಗಬಾರದು ಎಂಬ ಬಯಕೆ, ಆದರೆ ಹಾಗೆ ಆಗುತ್ತಿಲ್ಲ. ನಮ್ಮ ಬಯಕೆಯು ನ್ಯಾಯಸಮ್ಮತವಾಗಿದೆ ಎಂದು ನಮ್ಮಷ್ಟಕ್ಕೆ ನಾವು ತೀರ್ಮಾನ ಮಾಡಿಕೊಂಡಿದ್ದೇವೆ! ಅದು ದುಃಖಕ್ಕೆ ಕಾರಣವಾಗುತ್ತಿದೆ ಎಂಬುದನ್ನು ನಮ್ಮ ಮನಸ್ಸು ಒಪ್ಪುತ್ತಿಲ್ಲ.

ಲೋಕದ ಬದಲಾವಣೆ ನಮ್ಮ ಇಚ್ಛೆಗೆ ತಕ್ಕಹಾಗೆ ಸಂಭವಿಸುತ್ತಿಲ್ಲ ಎನ್ನುವುದು ದುಃಖಕ್ಕೆ ಕಾರಣವಾಗಿದೆಯೇ ಹೊರತು ದುಃಖವೆಂಬುದು ಸ್ವತಂತ್ರವಾಗಿ ಲೋಕದಲ್ಲಿ ಇಲ್ಲ. ಇಲ್ಲಿ ಸಂಭವಿಸುತ್ತಿರುವ ಎಲ್ಲದಕ್ಕೂ ನಮ್ಮ ವರ್ತನೆಗಳು ಕಾರಣವಾಗಿವೆ. ಆದರೆ ವಿಧಿವಾದಿಗಳಾದವರಿಗೆ ಈ ಸತ್ಯವನ್ನು ಅರಗಿಸಿಕೊಳ್ಳುವುದು ಬಲು ಕಷ್ಟ. ಆಗುತ್ತಿರುವ ಎಲ್ಲ ಬದಲಾವಣೆಗಳನ್ನು ಅರಿತು ಒಪ್ಪಿಕೊಂಡು ನಿರಂತರ ವರ್ತಮಾನದಲ್ಲಿ ಚಲಿಸುತ್ತ ಲೋಕದ ಎಲ್ಲ ಸಂಗತಿಗಳೊಡನೆ ಕರುಣಾಮೈತ್ರಿಯೊಡನೆ ನಡೆದುಕೊಳ್ಳುವುದೇ ದುಃಖವನ್ನು ನಿರೋಧಿಸುವ ಮಾರ್ಗ’ ಎಂದು ಬುದ್ಧಗುರು ತೋರಿಸಿಕೊಟ್ಟನು. ಈ ಅರಿವನ್ನು ನಮ್ಮದಾಗಿಸಿಕೊಳ್ಳಲು  ಎರಡು ಮಾರ್ಗಗಳಿವೆ. ಒಂದನ್ನು ‘ವಿಹಂಗ ಮಾರ್ಗ’ವೆಂದೂ ಇನ್ನೊಂದನ್ನು ‘ಪಿಪೀಲಿಕ ಮಾರ್ಗ’ವೆಂದೂ ಗುರುತಿಸುತ್ತಾರೆ. ಮರದ ಮೇಲೊಂದು ಹಣ್ಣಿದೆ. ಅದನ್ನು ಪಡೆಯಲು ಎರಡು ದಾರಿಗಳಿವೆ. ಹಕ್ಕಿಯೊಂದು ಆಕಾಶಮಾರ್ಗದಿಂದ ಹಾರಿಬಂದು ಸೀದಾ ಹಣ್ಣನ್ನು ತಿಂದು ಹೋಗಬಲ್ಲದು. ಇದು ವಿಹಂಗಮಾರ್ಗ. ಇನ್ನು ಇರುವೆ ಮುಂತಾದ ಹುಳುಗಳು ನೆಲದಲ್ಲಿ ತೆವಳುತ್ತ ಬಂದು ಮರವನ್ನು ಹತ್ತಿ ಹಣ್ಣಿನ ಹತ್ತಿರಕ್ಕೆ ಸಾಗಿ ಅದನ್ನು ತಿಂದು ಬರುವುದು. ಇದನ್ನು ಪಿಪೀಲಿಕ ಮಾರ್ಗವೆನ್ನುತ್ತಾರೆ. ಯಾರಿಗೆ ಯಾವುದು ಸಾಧ್ಯ ಎನ್ನುವುದು ಅವರವರೇ ಕಂಡುಕೊಳ್ಳಬೇಕಾದ ದಾರಿ.

ಬೌದ್ಧ ತಾತ್ವಿಕತೆಯು ಜಗತ್ತಿನ ಯಾರಿಗಾದರೂ ಸರಳವಾಗಿ ಅರ್ಥವಾಗುವ ಮತ್ತು ಬಾಳಲು ಸಾಧ್ಯವಾಗುವ ಸಂಗತಿಯಾಗಿದೆ. ಬುದ್ಧ ಹೇಳಿದ್ದು: ಲೋಕವನ್ನು ಅದಿರುವಂತೆಯೇ ನೋಡಿ; ಹಾಗೆ ಕಂಡಾಗ ಮಾತ್ರ ನಮ್ಮ ಮತ್ತು ಲೋಕದ ನಡುವಿನ ಸಂಬಂಧ ಸರಿಯಾಗಿರುತ್ತದೆ. ಸಂಬಂಧ ಸರಿಯಾಗಿದ್ದರೆ ಸಂಘರ್ಷವಿರುವುದಿಲ್ಲ. ಸಂಘರ್ಷವಿಲ್ಲದಿದ್ದಾಗ ದುಃಖವಿರುವುದಿಲ್ಲ. ದುಃಖದ ಉರಿಯಲ್ಲಿ ಲೋಕವೇ ಬೇಯುತ್ತಿರುವ ಈ ಹೊತ್ತು  ಬುದ್ಧ ಗುರುವಿನ ಕರುಣಾ ಮೈತ್ರಿಯ ಸಾಮರಸ್ಯ ಇಂದಿನ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT