ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ: ಅಮೆರಿಕನ್ನರಿಗೆ ಉದ್ಯೋಗ ಭರವಸೆ

Last Updated 6 ಮೇ 2017, 19:30 IST
ಅಕ್ಷರ ಗಾತ್ರ
ಡೊನಾಲ್ಡ್‌ ಟ್ರಂಪ್‌ ಆಡಳಿತದ ರಾಜಕೀಯ ಒತ್ತಡ ಮತ್ತು  ಕಾರ್ಪೊರೇಟ್‌ ಜಗತ್ತಿನ ಹೊಸ ಬೇಡಿಕೆ ಎದುರಿಸಲು ವಿಶ್ವದಾದ್ಯಂತ  ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಗಳು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿವೆ. ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ಹೊರಗುತ್ತಿಗೆ ಸಂಸ್ಥೆಯಾಗಿರುವ ಇನ್ಫೊಸಿಸ್‌ ಕೂಡ ಅದೇ ಹಾದಿ ತುಳಿಯುತ್ತಿದೆ. ಅಮೆರಿಕದಲ್ಲಿನ ತನ್ನ ಗ್ರಾಹಕರಿಗೆ ಸೇವೆ ಒದಗಿಸಲು ಸ್ಥಳೀಯವಾಗಿ ಹತ್ತು ಸಾವಿರ ತಂತ್ರಜ್ಞರನ್ನು ನೇಮಿಸಿಕೊಳ್ಳುವುದಾಗಿ ಪ್ರಕಟಿಸಿದೆ.
 
ಅಮೆರಿಕದವರ ಕೆಲಸಗಳನ್ನು ಕಸಿದುಕೊಳ್ಳುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್‌ ಅವರು ಬೆದರಿಕೆ ಒಡ್ಡಿದ್ದಾರೆ. ಈ ಕಾರಣಕ್ಕೆ ಇನ್ಫೊಸಿಸ್‌ನ ಈ ನಿರ್ಧಾರವನ್ನು  ಪರಾಮರ್ಶಿಸಬೇಕಾಗಿದೆ. ಉದ್ಯೋಗ ಸೃಷ್ಟಿಸುವ ಏಷ್ಯಾದ ತಂತ್ರಜ್ಞಾನ ಕಂಪೆನಿಗಳ ಪೈಕಿ  ತಾನು ಮುಂಚೂಣಿಯಲ್ಲಿ ಇರುವುದನ್ನು  ಅಮೆರಿಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಇನ್ಫೊಸಿಸ್‌ ಮುಂದಾಗಿರುವುದನ್ನೂ ಇದು ಸೂಚಿಸುತ್ತದೆ.
 
ಅಮೆರಿಕದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಇನ್ಫೊಸಿಸ್‌ನ ನಿರ್ಧಾರದ ಹಿಂದೆ ಇತರ ಸಂಗತಿಗಳ ಪ್ರಭಾವ ಕೂಡ ಇದೆ. ಭಾರತದಲ್ಲಿನ ವಹಿವಾಟಿನ ಆಕರ್ಷಣೆ ಕ್ರಮೇಣ ಕಡಿಮೆಯಾಗುತ್ತಿದೆ. ಅಲ್ಲಿಯೂ ತಂತ್ರಜ್ಞರ ವೇತನ ಹೆಚ್ಚುತ್ತಿದೆ.  ಕುಶಲ ತಂತ್ರಜ್ಞರು ಸುಲಭವಾಗಿ ಸಿಗುತ್ತಿಲ್ಲ.  ಭಾರತದ 500 ಕಾಲೇಜುಗಳಿಂದ ಹೊರ ಬರುವ 36 ಸಾವಿರದಷ್ಟು ಎಂಜಿಯರಿಂಗ್‌ ವಿದ್ಯಾರ್ಥಿಗಳ ಪೈಕಿ ಶೇ 5ರಷ್ಟು ವಿದ್ಯಾರ್ಥಿಗಳು ಮಾತ್ರ ಸಾಫ್ಟ್‌ವೇರ್‌ ಕೋಡ್ ಅನ್ನು ಸರಿಯಾಗಿ ಬರೆಯುತ್ತಾರೆ ಎನ್ನುವ ಕಟುವಾಸ್ತವ  ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
 
‘ಅಮೆರಿಕದ ಭವಿಷ್ಯ ರೂಪಿಸುವ ಪ್ರತಿಭಾನ್ವಿತರನ್ನು ಒಟ್ಟುಗೂಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಇನ್ಫೊಸಿಸ್‌ನ ಅಧ್ಯಕ್ಷ ರವಿಕುಮಾರ್‌ ಎಸ್‌. ಅವರು  ಇಂಡಿಯಾನಾದಿಂದ ದೂರವಾಣಿಯಲ್ಲಿ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
 
ಅಮೆರಿಕದವರನ್ನು ನೇಮಿಸಿಕೊಳ್ಳುವ ಇನ್ಫೊಸಿಸ್‌ನ ಈ ನಿರ್ಧಾರದಿಂದಾಗಿ, ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರ ತವರು ರಾಜ್ಯ ಇಂಡಿಯಾನಾ ಮೊದಲ ಫಲಾನುಭವಿ ರಾಜ್ಯವಾಗಿದೆ. ಸಂಸ್ಥೆಯು  ಆಗಸ್ಟ್‌ ತಿಂಗಳಲ್ಲಿ ಇಂಡಿಯಾನಾಪೊಲೀಸ್‌ನಲ್ಲಿ ಅಥವಾ ಅದಕ್ಕೆ ಹತ್ತಿರದಲ್ಲಿ ಹೊಸ ತಂತ್ರಜ್ಞಾನ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲಿದೆ. ಈ ವರ್ಷ 100 ಮಂದಿ ಹೊಸ ತಂತ್ರಜ್ಞರನ್ನು ಮತ್ತು ಮುಂದಿನ ವರ್ಷ ಇನ್ನೂ ಕೆಲವರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ.  
 
ಅಮೆರಿಕದಲ್ಲಿನ ವಹಿವಾಟು ವಿಸ್ತರಣೆ ಮತ್ತು ಸ್ಥಳೀಯರ ನೇಮಕಾತಿಗೆ ಸಂಬಂಧಿಸಿದಂತೆ  ಇನ್ನೂ ಮೂರು ಸಂಶೋಧನಾ ಕೇಂದ್ರಗಳನ್ನೂ ಸಂಸ್ಥೆ ಆರಂಭಿಸಲಿದೆ.  ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಗಮನಾರ್ಹವಾದ ಆರ್ಥಿಕ ಉತ್ತೇಜನದೊಂದಿಗೆ ಈ ಕೇಂದ್ರಗಳು ಅಸ್ತಿತ್ವಕ್ಕೆ ಬರಲಿವೆ. 
ಇನ್ಫೊಸಿಸ್‌ನ ಬಹುತೇಕ ವಹಿವಾಟು ಅಮೆರಿಕದಲ್ಲಿ ಇದೆ.
 
ಈ ಕಾರಣಕ್ಕೆ ಸಂಸ್ಥೆಯು ಪ್ರತಿ ವರ್ಷ ಹಲವು ಸಾವಿರ ಸಂಖ್ಯೆಯಲ್ಲಿ ‘ಎಚ್‌–1ಬಿ’ ವೀಸಾ ಪಡೆಯುತ್ತಿದೆ. ಈ ವೀಸಾ ನೆರವಿನಿಂದ ಸಂಸ್ಥೆಯು ಹೊಸ ತಂತ್ರಜ್ಞರನ್ನು  ಅಮೆರಿಕಕ್ಕೆ ಕಳಿಸಿಕೊಡುತ್ತದೆ. ಇವರು ಬ್ಯಾಂಕ್‌, ಔಷಧಿ, ಸರಕು ತಯಾರಿಕೆ ಮತ್ತು ಇಂಧನ ಕ್ಷೇತ್ರಗಳ  ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ.  ಈ  ಎಂಜಿನಿಯರುಗಳು ಸಂಸ್ಥೆಯ ಯೋಜನೆಯೊಂದರಿಂದ ಇನ್ನೊಂದು ಯೋಜನೆಗೆ ಬದಲಾಗುತ್ತಲೇ ಇರುತ್ತಾರೆ.
 
‘ಇತ್ತೀಚಿನ ವರ್ಷಗಳಲ್ಲಿ ಇನ್ಫೊಸಿಸ್‌, ಅಮೆರಿಕದ ಕಾಲೇಜ್‌ ಪದವೀಧರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಅಮೆರಿಕದಲ್ಲಿನ ಗ್ರಾಹಕ ಸಂಸ್ಥೆಗಳು, ತಮ್ಮ ಕಚೇರಿಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಬಯಸುತ್ತಿವೆ.  ಹೀಗಾಗಿ ಅಮೆರಿಕದ ಸಿಬ್ಬಂದಿ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ’ ಎಂದು  ರವಿಕುಮಾರ್‌ ಹೇಳಿದ್ದಾರೆ.
 
‘ನಮ್ಮ ಗ್ರಾಹಕರಿಗೆ ನಾವು ಸ್ಥಳೀಯ ತಂತ್ರಜ್ಞರನ್ನು ಒದಗಿಸಬೇಕಾಗಿದೆ.  ಹೀಗಾಗಿ ಈ ವರ್ಷ ನಾವು ಸ್ಥಳೀಯರ ನೇಮಕಾತಿಯನ್ನು ಹೆಚ್ಚಿಸಲು ಹೊರಟಿದ್ದೇವೆ’ ಎಂದೂ ಅವರು  ಹೇಳುತ್ತಾರೆ.ಎರಡು ವರ್ಷಗಳಲ್ಲಿ ಅಮೆರಿಕದ 10 ಸಾವಿರ ತಂತ್ರಜ್ಞರನ್ನು ನೇಮಿಸಿಕೊಳ್ಳುವ ಸಂಸ್ಥೆಯ ಗುರಿ ತಲುಪಲು ಇನ್ಫೊಸಿಸ್‌ ಮಾಡುವ ಪ್ರಯತ್ನಗಳನ್ನು ಕುತೂಹಲದಿಂದ ಎದುರು ನೋಡಬೇಕಾಗಿದೆ.

ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿರುವ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಹೊಸ ನೇಮಕಾತಿಗಳನ್ನು ಕಡಿಮೆ ಮಾಡಿದೆ. ಇಂಡಿಯಾನಾದಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಗವರ್ನರ್‌ ಎರಿಕ್‌ ಹಾಲ್ಕೊಂಬ್‌ ಅವರು ಇನ್ಫೊಸಿಸ್‌ನ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.  ರಾಜ್ಯದಲ್ಲಿ ಇನ್ಫೊಸಿಸ್‌ನ 140 ಸಿಬ್ಬಂದಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.
 
ಇಂಡಿಯಾನಾ ಮತ್ತು ಭಾರತದ ವಾಣಿಜ್ಯ ಮಂಡಳಿ ಮೂಲಕ, ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಇಂಡಿಯಾನಾದ ಅಧಿಕಾರಿಗಳು ಫೆಬ್ರುವರಿ ತಿಂಗಳಿನಲ್ಲಿಯೇ ಇನ್ಫೊಸಿಸ್‌ ಸಂಸ್ಥೆಯನ್ನು ಸಂಪರ್ಕಿಸಿದ್ದರು ಎಂದು ರಾಜ್ಯದ ವಾಣಿಜ್ಯ ಕಾರ್ಯದರ್ಶಿ ಜಿಮ್‌ ಷೆಲಿಂಗರ್‌ ಹೇಳಿದ್ದಾರೆ.
 
ಷೆಲಿಂಗರ್‌ ಮತ್ತು ಅವರ ತಂಡವು ಮಾರ್ಚ್‌ ತಿಂಗಳಲ್ಲಿ  ಭಾರತಕ್ಕೆ ಭೇಟಿ ನೀಡಿತ್ತು. ಬೆಂಗಳೂರು ಮತ್ತು ಮೈಸೂರಿನಲ್ಲಿನ ಇನ್ಫೊಸಿಸ್‌ನ ಕ್ಯಾಂಪಸ್‌ಗಳಿಗೆ ತೆರಳಿ  ಸಂಸ್ಥೆಯ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿತ್ತು.  ಮಾರ್ಚ್‌ ತಿಂಗಳಾಂತ್ಯಕ್ಕೆ ಸಂಸ್ಥೆಯ ಪ್ರತಿನಿಧಿಗಳು ಹಾಲ್ಕೊಂಬ್‌ ಅವರ ಜತೆ ಚರ್ಚೆ ನಡೆಸಿ, ರಾಜ್ಯದಲ್ಲಿ ವಹಿವಾಟು ವಿಸ್ತರಿಸುವುದಕ್ಕೆ ಸಮ್ಮತಿ  ನೀಡಿದ್ದರು.
 
ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಇನ್ಫೊಸಿಸ್‌ ಪ್ರಕಟಿಸುತ್ತಿದ್ದಂತೆ,  ರಾಜ್ಯದಲ್ಲಿನ ಕುಶಲಕರ್ಮಿಗಳ ಬಗ್ಗೆ ಸಂಸ್ಥೆ ತೋರಿದ ಆತ್ಮವಿಶ್ವಾಸ ಕಂಡು ಹಾಲ್ಕೊಂಬ್‌ ಸಂಭ್ರಮ ಪಟ್ಟಿದ್ದರು. ಇದಕ್ಕಾಗಿ ಇನ್ಫೊಸಿಸ್‌ಗೆ ಧನ್ಯವಾದಗಳನ್ನೂ ಹೇಳಿದ್ದರು. ಈ ಹೊಸ ಯೋಜನೆಗೆ ಇಂಡಿಯಾನಾ ರಾಜ್ಯ ಸರ್ಕಾರವು ಇನ್ಫೊಸಿಸ್‌ಗೆ   ತರಬೇತಿ ನಿಧಿ, ತೆರಿಗೆ ರಿಯಾಯ್ತಿ ಸೇರಿದಂತೆ  ₹ 200 ಕೋಟಿಗಳಷ್ಟು ಮೊತ್ತದ ಉತ್ತೇಜನಾ ಕೊಡುಗೆ ನೀಡಲಿದೆ. 
 
ಇನ್ಫೊಸಿಸ್‌ನಂತಹ ಸಂಸ್ಥೆಗಳು, ‘ಎಚ್‌–1ಬಿ’ ವೀಸಾ ನಿರ್ಬಂಧ ಕಾರ್ಯಕ್ರಮದ ಪ್ರಯೋಜನ ಪಡೆಯಲಿವೆ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಸರ್ಕಾರವು ಪ್ರತಿ ವರ್ಷ 85 ಸಾವಿರದಷ್ಟು ಇಂತಹ ವೀಸಾ ವಿತರಿಸುತ್ತಿದೆ.  ಅಮೆರಿಕದ  ಬೃಹತ್‌ ಸಂಸ್ಥೆಗಳೂ ಅಮೆರಿಕದಲ್ಲಿನ ಕೆಲಸಗಳನ್ನು ಹೊರಗುತ್ತಿಗೆ ನೀಡಿರುವುದರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿಲ್ಲ.  ‘ಎಚ್‌–1ಬಿ’ ವೀಸಾ ನಿರ್ಬಂಧವು ಮಾತ್ರ   ಹೆಚ್ಚು ಗಮನ ಸೆಳೆಯುತ್ತಿದೆ.
 
ಭಾರತೀಯರು ‘ಎಚ್‌–1ಬಿ’  ವೀಸಾಗಳನ್ನು ಗಮನಾರ್ಹವಾಗಿ (ಮೂರರಲ್ಲಿ ಎರಡು ಅಂಶದಷ್ಟು) ಪಡೆಯುತ್ತಿದ್ದಾರೆ.  ಹೀಗಾಗಿ  ಉದ್ದೇಶಿತ ವೀಸಾ ನಿಯಮ ಬದಲಾವಣೆಯು  ಭಾರತದ ಸಾಫ್ಟ್‌ವೇರ್‌ ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ ತಿಂಗಳಿನಲ್ಲಿಯೇ ಈ ವಿಷಯವನ್ನು  ಟ್ರಂಪ್‌ ಅವರ ಜತೆಗೆ ಚರ್ಚಿಸಿದ್ದಾರೆ.  
 
‘ಹೊಸ ವೀಸಾ ನಿಯಮಗಳನ್ನು ತುಂಬ ಎಚ್ಚರಿಕೆಯಿಂದ ಪರಿಶೀಲಿಸಿ ಕಾರ್ಯರೂಪಕ್ಕೆ ತರಬೇಕು ಎನ್ನುವುದು ನಮ್ಮ ಕಾಳಜಿಯಾಗಿದೆ’ ಎಂದು ‘ನಾಸ್ಕಾಂ’ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಹೇಳಿದ್ದಾರೆ. ‘ಅಮೆರಿಕದ ಸಂಸ್ಥೆಗಳಂತೆ, ಭಾರತದ ಹೊರಗುತ್ತಿಗೆ ಸಂಸ್ಥೆಗಳಿಗೂ ಕೂಡ ಕೌಶಲ ವೃತ್ತಿಗಳಿಗೆ ಸ್ಥಳೀಯವಾಗಿ ಅರ್ಹ ಅಮೆರಿಕನ್ನರು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತಿಲ್ಲ’ ಎಂದು ಅವರು ಹೇಳಿದ್ದರು. 
 
‘ಒಂದು ವೇಳೆ, ಅಮೆರಿಕದಲ್ಲಿ ಬೇಕಾದ ಕೌಶಲ ತಂತ್ರಜ್ಞರು ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಭಾರತದ ಸಂಸ್ಥೆಗಳಿಗೆ ದೊರೆಯದಿದ್ದರೆ  ಮತ್ತು ವಿಶ್ವದ ಯಾವುದೇ ಭಾಗದಿಂದ ತಂತ್ರಜ್ಞರನ್ನು ಅಮೆರಿಕದಲ್ಲಿ ಕೆಲಸಕ್ಕೆ ನಿಯೋಜಿಸಲು ಸಾಧ್ಯವಾಗದಿದ್ದರೆ, ಅಮೆರಿಕದಲ್ಲಿನ ಕೆಲಸಗಳನ್ನು ಬೇರೆಡೆ ವರ್ಗಾಯಿಸಲು ಅಥವಾ ಸ್ಥಳೀಯ ಕೆಲಸಗಳನ್ನು ಬಿಟ್ಟುಕೊಡುವುದನ್ನು ಬಿಟ್ಟು ಬೇರೆ ಆಯ್ಕೆಗಳೇ ಇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
 
‘ಅಮೆರಿಕದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಾಗಿರುವ ಫೇಸ್‌ಬುಕ್‌ ಮತ್ತು ಕ್ವಾಲ್‌ಕಾಂ ಕೂಡ ವಿದೇಶಿ ಪ್ರತಿಭೆಗಳನ್ನು ನೇಮಿಸಿಕೊಂಡಿವೆ. ಅಮೆರಿಕದಲ್ಲಿ ತಮಗೆ ಬೇಕಾದಷ್ಟು ಪ್ರಮಾಣದಲ್ಲಿ ಪ್ರತಿಭಾನ್ವಿತ ತಂತ್ರಜ್ಞರು ದೊರೆಯುತ್ತಿಲ್ಲ ಎಂದು ಈ ಸಂಸ್ಥೆಗಳೂ ಪ್ರತಿಪಾದಿಸುತ್ತಿವೆ. ಆದಾಗ್ಯೂ, ಇನ್ಫೊಸಿಸ್‌ನಂತಹ ಹೊರಗುತ್ತಿಗೆ  ಸಂಸ್ಥೆಗಳ ವಹಿವಾಟು ಮಾತ್ರ ವಿವಾದಕ್ಕೆ ಗುರಿಯಾಗಿದೆ.
 
ಸಿಬ್ಬಂದಿಗೆ ಗರಿಷ್ಠ ವೇತನ ನೀಡುವ ಸಂಸ್ಥೆಗಳಿಗೆ ‘ಎಚ್‌–1ಬಿ’ ವೀಸಾ ನೀಡಲು ಯಾವುದೇ ನಿರ್ಬಂಧ ಇಲ್ಲ ಎನ್ನುವ ನಿಯಮವು, ಇನ್ಫೊಸಿಸ್‌ನಂತಹ ಹೊರಗುತ್ತಿಗೆ ಸಂಸ್ಥೆಗಳ ವರಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. 
 
ಉದ್ದಿಮೆ ವಹಿವಾಟಿಗೆ ಸಂಬಂಧಿಸಿದಂತೆ ಟ್ರಂಪ್‌ ಅವರ ಸ್ವಯಂ ರಕ್ಷಣೆಯ ರಾಷ್ಟ್ರೀಯವಾದಿ ನಿಲುವು, ಬಹುರಾಷ್ಟ್ರೀಯ ಸಂಸ್ಥೆಗಳ ಪಾಲಿಗೆ ಸಂಕಷ್ಟಗಳನ್ನು ತಂದೊಡ್ಡಿದೆ.  ಏಷ್ಯಾದ ಬಹುತೇಕ ಸಂಸ್ಥೆಗಳಿಗೆ ಇದೇನೂ ಹೊಸದಲ್ಲ. ಉದ್ದಿಮೆ ವಹಿವಾಟು ರಾಜಕೀಯಕ್ಕೆ ಸಂಬಂಧಿಸಿದಂತೆ ಮರುಳು ಮಾಡುವ ಭಾಷಣವನ್ನು ಅಮೆರಿಕದಲ್ಲಿನ ಹೊಸ ವಿದ್ಯಮಾನಗಳನ್ನು ಅವುಗಳು ಆಸಕ್ತಿಯಿಂದ ಗಮನಿಸುತ್ತಿವೆ.
 
ಇತ್ತೀಚಿನ ದಿನಗಳಲ್ಲಿ ಭಾರತವು ‘ಭಾರತದಲ್ಲಿಯೇ ತಯಾರಿಸಿ’ ನೀತಿ ಅನುಸರಿಸುತ್ತಿದೆ. ಆ್ಯಪಲ್‌ನಂತಹ ಸಂಸ್ಥೆಗಳು ಭಾರತದಲ್ಲಿ ತಯಾರಿಕಾ ಘಟಕ ಆರಂಭಿಸಲು ಸರ್ಕಾರ ಉತ್ತೇಜಿಸುತ್ತಿದೆ.  ಇನ್ನೊಂದೆಡೆ ಜಪಾನ್‌ ಮತ್ತು ಚೀನಾ ದೇಶಗಳು ಆರ್ಥಿಕ ರಾಷ್ಟ್ರೀಯತೆಯ ಧೋರಣೆಯನ್ನು ಆಗೊಮ್ಮೆ – ಈಗೊಮ್ಮೆ ಪ್ರದರ್ಶಿಸುತ್ತಿವೆ.  ಈ ವಿಷಯದಲ್ಲಿ ಟ್ರಂಪ್‌ ಆಡಳಿತ ಮಾತ್ರ ಮುಂಚೂಣಿಯಲ್ಲಿ ಇದೆ. 
 
ಟ್ರಂಪ್‌ ಅವರ ಧೋರಣೆಗೆ ಪೂರಕವಾಗಿ, ಚೀನಾದ ಅಲಿಬಾಬಾ ಸಮೂಹ ಮತ್ತು ಜಪಾನಿನ ಸಾಫ್ಟ್‌ಬ್ಯಾಂಕ್‌, ಹೆಚ್ಚಿನ ಸಂಖ್ಯೆಯ ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿವೆ.  ತನ್ನ ವಹಿವಾಟು 10 ಲಕ್ಷದಷ್ಟು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅಲಿಬಾಬಾ ಹೇಳಿಕೊಂಡಿದೆ.  ಈ ಎಲ್ಲ ಉದ್ಯೋಗ ಅವಕಾಶಗಳು ಕಾರ್ಯರೂಪಕ್ಕೆ ಬರುವ ಬಗ್ಗೆ ಹಲವಾರು ಪರಿಣತರು ಅನುಮಾನ ವ್ಯಕ್ತಪಡಿಸಿದ್ದಾರೆ. 
 
ಇಂತಹ ವಾಗ್ದಾನಗಳು ಇನ್ನೂ ಟ್ರಂಪ್‌ ಅವರ ಅನುಗ್ರಹಕ್ಕೆ ಪಾತ್ರವಾಗಬೇಕಾಗಿವೆ.  ವ್ಯಾಪಾರ ಒಪ್ಪಂದಗಳ ಬಗ್ಗೆಯೇ ಅನುಮಾನ ಹೊಂದಿರುವ ಟ್ರಂಪ್‌ ಅವರಿಗೆ ಸ್ವಯಂ ರಕ್ಷಣೆಯಂತಹ ಕ್ರಮಗಳು ಅಂತಿಮವಾಗಿ ರಾಜಕೀಯ ಲಾಭ ತಂದುಕೊಡಬಲ್ಲವೇ ಎನ್ನುವುದು ಮಾತ್ರ ಸದ್ಯಕ್ಕೆ ಸ್ಪಷ್ಟಗೊಂಡಿಲ್ಲ.
ಲೇಖಕರು: ವಿಂದು ಗೋಯೆಲ್‌  / ಪೌಲ್‌ ಮೊಜುರ್‌  
ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT