ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ಸುಲ್ತಾನನ ಚದುರಂಗದಾಟ

Last Updated 6 ಮೇ 2017, 19:30 IST
ಅಕ್ಷರ ಗಾತ್ರ
‘ಮಸೀದಿಗಳೇ ನಮ್ಮ ಬ್ಯಾರಕ್‌ಗಳು, ಗುಮ್ಮಟಗಳೇ ಹೆಲ್ಮೆಟ್‌ಗಳು, ಮಿನಾರುಗಳೇ ನಮ್ಮ ಖಡ್ಗಗಳು ಮತ್ತು ಧರ್ಮ ನಿಷ್ಠರೇ ನಮ್ಮ ಯೋಧರು’- ಈ ಕವಿತೆಯನ್ನು ಜಾತ್ಯತೀತ ಟರ್ಕಿಯಲ್ಲಿ ಸಾರ್ವಜನಿಕವಾಗಿ ವಾಚಿಸಿದ್ದಕ್ಕಾಗಿ 1999ರಲ್ಲಿ ರಿಸೆಪ್ ತಯ್ಯಪ್ ಎರ್ಡೋಗನ್ ಎಂಬ ರಾಜಕಾರಣಿಯನ್ನು ನಾಲ್ಕು ತಿಂಗಳು ಜೈಲಿಗೆ ತಳ್ಳಲಾಗುತ್ತದೆ. ಅದಕ್ಕೂ ಹಿಂದೆ 1994ರಿಂದ 1998ರ ವರೆಗೆ ಈ ವ್ಯಕ್ತಿ ಇಸ್ತಾಂಬುಲ್‌ನ ಮೇಯರ್ ಆಗಿದ್ದರು.

1970–80ರ ದಶಕಗಳಲ್ಲಿ ನೆಸೆಮೆಟಿನ್ ಎರ್ಬಾಕನ್ ಅವರ ಪಕ್ಷದ ಸದಸ್ಯರಾಗಿದ್ದರು. ಜತೆಗೆ ಇಸ್ತಾಂಬುಲ್‌ನ ಧಾರ್ಮಿಕ ವಲಯದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. 2001ರಲ್ಲಿ ಇಸ್ಲಾಂ ಪರ ಎಕೆಪಿ ಎಂಬ ಹೆಸರಿನ ಪಕ್ಷ ಸ್ಥಾಪಿಸಿದ ಎರ್ಡೋಗನ್, 2002–03ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಹುಮತ ಪಡೆದು ಟರ್ಕಿಯ ಪ್ರಧಾನಿಯಾಗುತ್ತಾರೆ. 
 
2014ರಲ್ಲಿ ಮೊತ್ತ ಮೊದಲ ಬಾರಿ ನಡೆದ ನೇರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 2017ರ ಏಪ್ರಿಲ್‌ನಲ್ಲಿ ಸಂವಿಧಾನ ತಿದ್ದುಪಡಿಗೆ ಜನಮತಗಣನೆ ನಡೆಸಿ ಅದರ ಮೂಲಕ ಅಪರಿಮಿತ ಅಧಿಕಾರ ಇರುವ ಅಧ್ಯಕ್ಷರಾಗಿ ಬದಲಾಗುತ್ತಾರೆ.
 
ಧರ್ಮದ ಶ್ರೇಷ್ಠತೆ ಮತ್ತು ಪ್ರಬಲ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಬೆರೆಸಿ ರಾಜಕೀಯ ಅಧಿಕಾರವನ್ನು ಪಡೆಯಬಹುದು ಮತ್ತು ಅದನ್ನು ಉಳಿಸಿಕೊಳ್ಳಬಹುದು ಎಂದು ಎರ್ಡೋಗನ್ ನಂಬಿದ್ದಾರೆ. ಅದನ್ನು ತಮ್ಮ ಕಣ್ಣ ಮುಂದೆ ಇರಿಸಿಕೊಂಡೇ ಎರ್ಡೋಗನ್ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುತ್ತಾರೆ.
 
ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳೆಯರು ತಲೆವಸ್ತ್ರ ಧರಿಸುವುದಕ್ಕೆ ಇದ್ದ ನಿಷೇಧವನ್ನು 2013ರಲ್ಲಿ ಎರ್ಡೋಗನ್ ತೆರವುಗೊಳಿಸುತ್ತಾರೆ. ನ್ಯಾಯಾಂಗ, ಸೇನೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಇರುವ ಮಹಿಳೆಯರೂ ಈಗ ತಲೆವಸ್ತ್ರ ಧರಿಸಬಹುದು. ದಶಕಗಳಿಂದ ಇದ್ದ ನಿಷೇಧ ಈಗ ಇಲ್ಲ. ಎರ್ಡೋಗನ್ ಅವರ ಹೆಂಡತಿ ಎಮಿನ್ ಅವರು ಕೂಡ ಸಾರ್ವಜನಿಕವಾಗಿ ತಲೆವಸ್ತ್ರ ಧರಿಸಿಯೇ ಕಾಣಿಸಿಕೊಳ್ಳುತ್ತಾರೆ. 
 
ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಜಾರಿಗೆ ತರಲು ಎರ್ಡೋಗನ್ ಪ್ರಯತ್ನಿಸಿದ್ದಾರೆ. ಹಾಗೆಯೇ ಮದ್ಯಪಾನ ನಿಷೇಧ ವಲಯಗಳನ್ನು ಸ್ಥಾಪಿಸುವ ಉತ್ಸಾಹವೂ ಅವರಲ್ಲಿತ್ತು. ಇದರಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ. ಜನನ ನಿಯಂತ್ರಣದ ಬಗ್ಗೆ ಯಾವ ಮುಸ್ಲಿಂ ಕುಟುಂಬವೂ ಯೋಚಿಸಬಾರದು.
 
ನಮ್ಮ ಜನರು ದ್ವಿಗುಣಗೊಳ್ಳಬೇಕು ಎಂದು ಹಲವು ಬಾರಿ ಅವರು ಕರೆ ನೀಡಿದ್ದಾರೆ. ತಾಯ್ತನವನ್ನು ಸದಾ ಹೊಗಳುವ ಎರ್ಡೋಗನ್‌ಗೆ ಸ್ತ್ರೀವಾದಿಗಳನ್ನು ಕಂಡರೆ ಆಗುವುದಿಲ್ಲ. ಗಂಡು ಮತ್ತು ಹೆಣ್ಣನ್ನು ಸಮಾನವಾಗಿ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ, ಇಸ್ಲಾಂ ಮೌಲ್ಯಗಳನ್ನು ದೇಶದ ಮೇಲೆ ಹೇರಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳನ್ನು ಎರ್ಡೋಗನ್ ಒಪ್ಪುವುದಿಲ್ಲ. ತಾವು ಜಾತ್ಯತೀತ ಎಂದು ಹೇಳುತ್ತಾರೆ. 
 
ಕಳೆದ ವರ್ಷ ಎರ್ಡೋಗನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ‘ಗಡಿ ನಿಯಂತ್ರಣ ರೇಖೆಯಲ್ಲಿನ ಪ್ರಕ್ಷುಬ್ಧ ಸ್ಥಿತಿ, ಕಾಶ್ಮೀರದಲ್ಲಿರುವ ನಮ್ಮ ಸಹೋದರ ಸಹೋದರಿಯರ ಜೀವನವನ್ನು ಅಸಹನೀಯವಾಗಿಸಿದೆ. ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಅಲ್ಲಿ ಅವರು ಹೇಳಿದ್ದರು. ಈ ತಿಂಗಳ ಆರಂಭದಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ರಾಜತಾಂತ್ರಿಕ ಭೇಟಿಯ ಹಿಂದಿನ ದಿನ ಅವರು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮೂರನೆಯವರ ಮಧ್ಯಸ್ಥಿಕೆ ಬೇಕು. ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧ’ ಎಂದು ಹೇಳಿ ವಿವಾದ ಸೃಷ್ಟಿಸಲು ಯತ್ನಿಸಿದ್ದಾರೆ. 
 
ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವು ಏನು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಭಾರತ ಮತ್ತು ಪಾಕಿಸ್ತಾನಗಳೆರಡರ ಜತೆಗೂ ಸ್ನೇಹದಿಂದ ಇರುವ ದೇಶ ಟರ್ಕಿ. ಆದರೆ ಈಗ ಭಾರತದ ಜತೆಗೆ ಇರುವುದು ಟರ್ಕಿಗೆ ಹೆಚ್ಚು ಮುಖ್ಯ. ಯಾಕೆಂದರೆ, ಟರ್ಕಿಯ ಅರ್ಥ ವ್ಯವಸ್ಥೆ ಕುಸಿದು ಬಿದ್ದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕುರ್ದ್ ಸಮುದಾಯದ ಗುಂಪುಗಳು ನಡೆಸುತ್ತಿರುವ ದಾಳಿಗಳಿಂದಾಗಿ ಪ್ರವಾಸೋದ್ಯಮ ನೆಲಕಚ್ಚಿದೆ.
 
2003ರಲ್ಲಿ ಎರ್ಡೋಗನ್ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಹಣದುಬ್ಬರ ಶೇ 100ಕ್ಕೂ ಹೆಚ್ಚು ಇತ್ತು. ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಹಣದುಬ್ಬರವನ್ನು ಶೇ 10ರೊಳಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದರು.

ಆರ್ಥಿಕ ಪ್ರಗತಿಯ ದರ ಶೇ 5ರ ಆಸುಪಾಸಿನಲ್ಲಿ ಇರುವಂತೆ ನೋಡಿಕೊಂಡಿದ್ದರು. ಆದರೆ ಅದು ಈಗ ಇಲ್ಲ. ಹಣದುಬ್ಬರ ಹೆಚ್ಚುತ್ತಿದೆ. ಆರ್ಥಿಕ ಪ್ರಗತಿಯ ದರ ಶೇ 2ಕ್ಕೆ ಕುಸಿದಿದೆ. ನಿರುದ್ಯೋಗ ಶೇ 10ರಷ್ಟನ್ನು ಮೀರಿ ನಿಂತಿದೆ. ಇದೆಲ್ಲವನ್ನೂ ಮತ್ತೆ ಸರಿಪಡಿಸಬೇಕಿದೆ. ಇದು ಆಡಳಿತಕ್ಕೆ ಸಂಬಂಧಪಟ್ಟ ವಿಚಾರ. ಎರ್ಡೋಗನ್ ಅವರ ಅಧಿಕಾರವೂ ಅಷ್ಟೇ ಅಸ್ಥಿರವಾಗಿದೆ. ಜತೆಗೆ ಟರ್ಕಿಯ ಪ್ರಜಾಪ್ರಭುತ್ವವೂ ಅವರ ಕೈಯಲ್ಲಿ ಅಸ್ಥಿರ. ಜನಬೆಂಬಲ ಇಲ್ಲ ಎಂದಾದರೆ ಅವರು ನಿರಂಕುಶಾಧಿಕಾರಿಯೇ ಆಗಬಹುದು. 
 
ಹಾಗಾಗಿಯೇ ಹೆಚ್ಚುಕಡಿಮೆ ಸರ್ವಾಧಿಕಾರಿಯ ರೀತಿಯ ಟರ್ಕಿ ಅಧ್ಯಕ್ಷತೆಯನ್ನು ಪಡೆದಕೊಂಡ ಬಳಿಕ ಎರ್ಡೋಗನ್ ಮೊದಲು ಭಾರತಕ್ಕೆ ಬಂದಿದ್ದಾರೆ. ಆರ್ಥಿಕ ಅಸ್ಥಿರತೆಯಿಂದ ಕಂಗೆಟ್ಟಿರುವ ಟರ್ಕಿಗೆ ಈಗ ಪುನಶ್ಚೇತನ ಅತ್ಯಗತ್ಯ. ಅದಕ್ಕಾಗಿ 150ಕ್ಕೂ ಹೆಚ್ಚು ಉದ್ಯಮಿಗಳನ್ನು ಜತೆಗೆ ಕರೆದುಕೊಂಡು ಭಾರತದ ಜತೆಗಿನ ವ್ಯಾಪಾರ ಸಂಬಂಧ ವೃದ್ಧಿಸಲು ಎರ್ಡೋಗನ್ ಇಲ್ಲಿಗೆ ಬಂದಿದ್ದರು. 
 
ಅವರು ಕಾಶ್ಮೀರ ವಿಚಾರವನ್ನು ಕೆದಕಿದ್ದಕ್ಕೆ ಅವರದ್ದೇ ಆದ ಕಾರಣಗಳಿವೆ. ಟರ್ಕಿಯ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳ ಜನರು ಎರ್ಡೋಗನ್ ಅವರನ್ನು  ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ ಎಂದು ಹೆಮ್ಮೆಯಿಂದ ಕರೆಯುತ್ತಾರೆ. ಇಸ್ಲಾಂನ ರಕ್ಷಕ ತಾನು ಎಂಬ ಭಾವನೆಯನ್ನು ಟರ್ಕಿಯ ಜನರಲ್ಲಿ ಬಿತ್ತುವಲ್ಲಿ ಎರ್ಡೋಗನ್ ಯಶಸ್ವಿಯಾಗಿದ್ದಾರೆ.
 
ಹಾಗಿದ್ದರೂ ಮೊನ್ನೆ ಮೊನ್ನೆ ನಡೆದ ಜನಮತಗಣನೆಯಲ್ಲಿ ಎರ್ಡೋಗನ್‌ಗೆ ಪಡೆಯಲು ಸಾಧ್ಯವಾದದ್ದು ಶೇ 51ರಷ್ಟು ಮತಗಳನ್ನು ಮಾತ್ರ. ಭಾರಿ ಬಹುಮತ ಪಡೆಯಬೇಕು ಎಂದು ಅವರು ಎಷ್ಟು ಸಾಧ್ಯವೋ ಅಷ್ಟು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿವೆ. ಜನರಿಂದ ಆಯ್ಕೆಯಾದ ವಿರೋಧ ಪಕ್ಷಗಳಿಗೆ ಸೇರಿದ ಮುಖಂಡರನ್ನೆಲ್ಲ ಜೈಲಿಗೆ ತಳ್ಳಿ ಎರ್ಡೋಗನ್ ಜನಮತಗಣನೆ ನಡೆಸಿದ್ದರು ಎಂಬುದು ಈ ಆರೋಪಗಳನ್ನು ಪುಷ್ಟೀಕರಿಸುತ್ತದೆ. 
 
2019ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅವರು ಸಿದ್ಧರಾಗಬೇಕು. ಅದರಲ್ಲಿ ಗೆಲ್ಲದಿದ್ದರೆ ಈಗ ಸಂವಿಧಾನ ತಿದ್ದುಪಡಿ ಮೂಲಕ ಪಡೆದುಕೊಂಡ ಅಪರಿಮಿತ ಅಧಿಕಾರವನ್ನು ಅನುಭವಿಸುವ ಯೋಗ ಅವರಿಗೆ ದಕ್ಕುವುದಿಲ್ಲ. ಇಸ್ತಾಂಬುಲ್‌ನಲ್ಲಿ ಕೈಖರ್ಚಿಗಾಗಿ ನಿಂಬೆ ಷರಬತ್ತು ಮಾರುತ್ತಿದ್ದ ಹುಡುಗನಿಗೆ ಸಾವಿರ ಕೋಣೆಗಳ ಟರ್ಕಿ ಅಧ್ಯಕ್ಷರ ಅರಮನೆ ಬಿಟ್ಟು ಹೋಗಲು ಮನಸಿಲ್ಲ. ಶ್ವೇತ ಅರಮನೆ ಎಂಬ ಹೆಸರಿನ ಈ ಮಹಲ್ ಅಮೆರಿಕದ ಶ್ವೇತಭವನಕ್ಕಿಂತಲೂ ದೊಡ್ಡದು.
 
ಅಧಿಕಾರ ಗಟ್ಟಿಗೊಳಿಸಲು ಮುಸ್ಲಿಂ ದೇಶಗಳ ಅನಭಿಷಕ್ತ ದೊರೆ ತಾನು ಎಂಬುದನ್ನು ಟರ್ಕಿ ಜನರ ಮುಂದೆ ಸಾಬೀತುಪಡಿಸಬೇಕಿದೆ. ಅದಲ್ಲದೆ, ಹಾಸಲು, ಹೊದೆಯಲು ಬೇಕಾದಷ್ಟು ಸಮಸ್ಯೆಗಳನ್ನು ದೇಶದೊಳಗೇ ಇರಿಸಿಕೊಂಡಿರುವ ಟರ್ಕಿಯ ಸುಲ್ತಾನನಿಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವ ಉಮೇದು ಎಳ್ಳಷ್ಟೂ ಇಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT