ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಭಿಚಾರ’ದಲ್ಲಿ ಹೆಣ್ಣು ಆರೋಪಿಯಾದಾಗ… !

Last Updated 6 ಮೇ 2017, 19:30 IST
ಅಕ್ಷರ ಗಾತ್ರ
ಅನೈತಿಕ ಸಂಬಂಧ ಹೊಂದಿದ್ದರೆಂಬ ಕಾರಣಕ್ಕಾಗಿ ಗಂಡ ಹೆಂಡತಿಯನ್ನೋ, ಹೆಂಡತಿ ಗಂಡನನ್ನೋ ಕೊಲೆ ಮಾಡುವ ಸುದ್ದಿಗಳು ದಿನ ಬೆಳಗಾದರೆ ಕೇಳಿ
ಬರುವುದು ಸಾಮಾನ್ಯ. ಇಲ್ಲಿ ಕೊಲೆಗೆ ವ್ಯಭಿಚಾರ ಒಂದು ಕಾರಣವಾಗಿರುತ್ತದೆಯೇ ವಿನಾ ವ್ಯಭಿಚಾರವನ್ನೇ ಒಂದು ಅಪರಾಧವಾಗಿ ಪರಿಗಣಿಸುವುದಿಲ್ಲ.

ಆದರೆ ಭಾರತೀಯ ದಂಡ ಸಂಹಿತೆ (ಐಪಿಸಿ)ಯ 497ನೇ ಕಲಮು ವ್ಯಭಿಚಾರವನ್ನು ಒಂದು ಅಪರಾಧ ಎಂದು ವ್ಯಾಖ್ಯಾನಿಸುತ್ತದೆ. ಇದರಲ್ಲಿ ವಿವಾಹಕ್ಕೆ ಸಂಬಂಧಿಸಿದ ಅಪರಾಧಗಳನ್ನು 493 ರಿಂದ 498ರ ವರೆಗಿನ ಕಲಮುಗಳಲ್ಲಿ ವಿವರಿಸಲಾಗಿದೆ. ಈ ಆರೂ ಕಲಮುಗಳ ಉದ್ದೇಶ ಮತ್ತು ವ್ಯಾಪ್ತಿ ಇಡೀ ಸಂಹಿತೆಯಲ್ಲೇ ವಿಶಿಷ್ಟ ಲಕ್ಷಣಗಳುಳ್ಳದ್ದು.
 
ಪ್ರಸಿದ್ಧ ಸ್ತ್ರೀವಾದಿ, ಚಿಂತಕಿ ಸಿಮೋನ್ ದಿಬುವಾ ಅವರು ‘ದಿ ಸೆಕೆಂಡ್ ಸೆಕ್ಸ್’ (ಎರಡನೇ ದರ್ಜೆ: ಹೆಣ್ಣು)  ಪುಸ್ತಕ ಬರೆದಾಗ ಉಲ್ಲೇಖಿತ ಸ್ತ್ರೀಪರ ಕಲಮುಗಳು ಅವರ ಗಮನಕ್ಕೆ ಬಂದಿದ್ದರೆ ನಮ್ಮ ನೆಲದ ಕಾನೂನಿನ ನಿಲುವನ್ನು ಅದೆಷ್ಟು ಕೊಂಡಾಡುತ್ತಿದ್ದರೋ! ಆದರೆ ವಿಷಾದವೆಂದರೆ ನಮ್ಮ ಸ್ತ್ರೀವಾದಿಗಳ ಮತ್ತು ಸ್ತ್ರೀವಾದಿ ಚಿಂತಕರ ಗಮನಕ್ಕೆ ಅವಿನ್ನೂ ಬಂದಿಲ್ಲ.
 
1950ರಿಂದ ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ವ್ಯಭಿಚಾರದ ಪ್ರಕರಣಗಳು ಬೆರಳೆಣಿಕೆಯಷ್ಟಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಕರ್ನಾಟಕದಲ್ಲೂ ಇವುಗಳ ಸಂಖ್ಯೆ ತೀರಾ ಕಮ್ಮಿ. ಅಂಥ ಒಂದು ಪ್ರಕರಣವನ್ನು ನಡೆಸುವ ಅನುಭವ, ಆ ಮೂಲಕ 497ನೇ ಕಲಮಿನ (ವ್ಯಭಿಚಾರ) ಸುದೀರ್ಘ ವಿವರಗಳನ್ನು ಮುನ್ನೆಲೆಗೆ ತರುವ ಒಂದು ಅವಕಾಶ ನನ್ನದಾಯಿತು. 
* * *
 
ಮೂವರು ಸಹೋದರರು, ಅವರ ಪತ್ನಿಯಂದಿರು ಮತ್ತು ಮಕ್ಕಳನ್ನು ಒಳಗೊಂಡ ಒಂದು ಪ್ರತಿಷ್ಠಿತ ಅವಿಭಕ್ತ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಇಟ್ಟಿಗೆ ತಯಾರಿಸುವ ಕುಲಕಸುಬು ಮುಂದುವರೆಸಿದ್ದ ಸಹೋದರರು ಗುಣಮಟ್ಟದ ಉತ್ಪಾದನೆಗೆ ಹೆಸರಾಗಿದ್ದು, ಕೋಟ್ಯಂತರ ರೂಪಾಯಿಗಳ ವಹಿವಾಟು ಹೊಂದಿದ್ದರು. 
 
ಈ ಸಹೋದರರಲ್ಲಿ ಕೊನೆಯವ ಗೋಸ್ವಾಮಿ. ಅವನ ಹೆಂಡತಿ ಜಾಂಬವತಿ. ಗೋಸ್ವಾಮಿ ದೌರ್ಬಲ್ಯಗಳ ಕಣಜ. ಅವನ ದೌರ್ಬಲ್ಯಗಳಲ್ಲಿ ಅತಿ ದೊಡ್ಡದೆಂದರೆ ಕಾರ್ಖಾನೆಯ ಮ್ಯಾನೇಜರ್‌ ಭೂಪೇಶನ ಹೆಂಡತಿ ಮನೋಹರಿಯ ಜೊತೆಗೆ ಅಂಗಸಂಗ ಬೆಳೆಸಿಕೊಂಡಿದ್ದು.
 
ಗೋಸ್ವಾಮಿಯ ‘ತುಂಟಾಟ’ವನ್ನೆಲ್ಲ ತಿಳಿದಿದ್ದ ಅಣ್ಣಂದಿರು ಏನೂ ಹೇಳದೆ ಸುಮ್ಮನೆ ಇದ್ದುದ್ದು ಅವನಿಗೆ  ಇನ್ನಷ್ಟು ಉತ್ತೇಜನ ನೀಡಿತ್ತು. ಆದರೆ ಗಂಡನ ವ್ಯಭಿಚಾರದಿಂದ ಕುಗ್ಗಿಹೋದವಳು ಮಾತ್ರ ಜಾಂಬವತಿ. 
 
ತನ್ನ ಗಂಡನನ್ನು ಅವನ ಅಣ್ಣಂದಿರು ಸರಿದಾರಿಗೆ ತರುವರೆಂದು ನಂಬಿದ್ದ ಜಾಂಬವತಿಗೆ ಹತಾಶೆಯಾಯಿತು. ಜಾಂಬವತಿಯ ಸಂಕಟ ತಿಳಿದ ಅವಳ ಅಣ್ಣ ತಾರಾಪತಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೆ ಗೋಸ್ವಾಮಿಯನ್ನು ಅನೇಕ ಬಾರಿ ಖುದ್ದಾಗಿ ಸಂಪರ್ಕಿಸಿದ್ದರು. ಈ ರೀತಿಯ ಅಡ್ಡಹಾದಿಯಿಂದ ಯಾವ ಮಟ್ಟಿನ  ತೊಂದರೆ ಆಗುತ್ತದೆ ಎಂಬುದನ್ನು ತಿಳಿಹೇಳಿದ್ದರು. ಆದರೆ ಅವರು ಹೇಳಿದ್ದ ಬುದ್ಧಿಮಾತುಗಳೆಲ್ಲಾ ನೀರಿನಲ್ಲಿ ಹೋಮ ಮಾಡಿದ ಹಾಗಾಯಿತು. ಯಾವ ಪ್ರಯತ್ನವೂ ಫಲನೀಡಲಿಲ್ಲ. 
 
ಅವನ ತಾತ್ಸಾರ ಮತ್ತು ಉಡಾಫೆಯ ಪ್ರತಿಕ್ರಿಯೆ ತಾರಾಪತಿಯಲ್ಲಿ ಜುಗುಪ್ಸೆ ಹುಟ್ಟಿಸಿದವು. ಪಂಚಾಯಿತಿ ಮಾಡಿಸಿದರೆ ತನ್ನ ತಂಗಿಯಲ್ಲೇ ಏನೋ ದೋಷವಿರಬಹುದು ಎಂದು ಆಡಿ ಕೊಳ್ಳುವ ಅವಿವೇಕಿಗಳ ಬಾಯಿಗೆ ಆಹಾರವಾಗಿ ಬಿಡುವ ಅಂಜಿಕೆ ಅವರಿಗಿತ್ತು. ಏನೂ ತೋಚದವನಾಗಿ ತಂಗಿಯನ್ನು ತನ್ನ ಮನೆಯಲ್ಲಿರಿಸಿಕೊಂಡರು.
 
ತನ್ನ ತಂಗಿಯ ಭವಿಷ್ಯದ ಬಗ್ಗೆ ಚಿಂತಿಸಿದ ತಾರಾಪತಿ, ಗೋಸ್ವಾಮಿ ಮತ್ತು ಆತನ ಸ್ನೇಹಿತೆ ಮನೋಹರಿ ವಿರುದ್ಧ ದೂರು ದಾಖಲು ಮಾಡುವ ತೀರ್ಮಾನಕ್ಕೆ ಬಂದರು. ವಕೀಲರೊಬ್ಬರನ್ನು ನೇಮಕ ಮಾಡಿಕೊಂಡು ನ್ಯಾಯಾಲಯದ ಪೂರ್ವಾನುಮತಿ ಪಡೆದು ತಂಗಿಯ ಪರವಾಗಿ ತಾನೇ ಇವರಿಬ್ಬರ ವಿರುದ್ಧ ದೂರು ಸಲ್ಲಿಸಿದರು. 
 
ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕು. ಅದೇನೆಂದರೆ ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದರೆ ಆ ಸಂಬಂಧ ಪೊಲೀಸರು ಕ್ರಮ ಜರುಗಿಸುವಂತಿಲ್ಲ. ಈ ಪ್ರಕರಣದಲ್ಲಿ ಪೊಲೀಸರ ಮಧ್ಯಪ್ರವೇಶವನ್ನು ಕಾನೂನು ಇಷ್ಟಪಡುವುದಿಲ್ಲ. 
***
ತಾರಾಪತಿಯ ದೂರನ್ನು ಸ್ವೀಕರಿಸಿದ ಮ್ಯಾಜಿಸ್ಟ್ರೇಟ್ ಇದಕ್ಕೆ ಸಂಬಂಧಿಸಿದಂತೆ ತಾರಾಪತಿ, ಅವರ ತಂಗಿ ಮತ್ತು ಇನ್ನಿಬ್ಬರು ಸಾಕ್ಷಿದಾರರ ಹೇಳಿಕೆ
ಗಳನ್ನು ದಾಖಲಿಸಿಕೊಂಡರು. ಆರೋಪಿಗಳಾದ ಗೋಸ್ವಾಮಿ ಮತ್ತು ಮನೋಹರಿ ಅವರಿಗೆ ಸಮನ್ಸ್‌ ಜಾರಿ ಮಾಡಿ ಕೋರ್ಟ್‌ಗೆ ಬರಲು ತಿಳಿಸಲಾಯಿತು.
ತನಗೆ ಬಂದ ಕೋರ್ಟ್‌ ನೋಟಿಸ್‌ ನೋಡಿ ಹೆದರಿದ ಮನೋಹರಿ ಆ ಸಮನ್ಸ್ ಮತ್ತು ಕೆಲವು ದಾಖಲೆಗಳೊಂದಿಗೆ ತಂದೆಯ ಜೊತೆ ನನ್ನ ಕಚೇರಿಗೆ ಬಂದಳು.
 
ದಾಖಲೆಗಳನ್ನು ಪಡೆದುಕೊಂಡ ನಾನು ಇನ್ನೊಂದು ದಿನ ಬರುವಂತೆ ಅವರಿಗೆ ಹೇಳಿಕಳಿಸಿದೆ. ಅವರು ಕೊಟ್ಟ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.  ಮ್ಯಾಜಿಸ್ಟ್ರೇಟ್‌ ಅವರ ಮುಂದೆ ನಡೆದಿದ್ದ ಕಾನೂನು ನಡಾವಳಿಯಲ್ಲಿ ನನಗೆ ಬೇಕಾದ ಪ್ರಮಾದವೊಂದು ಕಂಡೇ ಬಿಟ್ಟಿತು. ಆ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಿದೆ. ನನ್ನ ಕಕ್ಷಿದಾರಳ ಪರವಾಗಿ ವಾದ ಮಂಡಿಸಲು ಏನು ಬೇಕೋ ಅದು ನನಗೆ ಸಿಕ್ಕಿತು.  
 
ಮನೋಹರಿ ಹಾಗೂ ಆಕೆಯ ತಂದೆಗೆ ಎಲ್ಲಾ ವಿಷಯಗಳನ್ನು ತಿಳಿಸಿ ಅವರ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ. ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನೀಡಿದ್ದ ಸಮನ್ಸ್‌ ಮತ್ತು ಅದಕ್ಕೆ ಸಂಬಂಧಿಸಿದಂತೆ ಮುಂದೆ ನಡೆಯುವ  ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಈ ಅರ್ಜಿ
ಯಲ್ಲಿ ಕೋರಿಕೊಳ್ಳಲಾಯಿತು.
 
ಇವರ ವಿರುದ್ಧ ದೂರು ನೀಡಿದ್ದ ತಾರಾಪತಿಯನ್ನು ಈ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಯಿತು.  ಪ್ರಕರಣ ವಿಚಾರಣೆಗೆ ಬಂದಾಗ, ಹೈಕೋರ್ಟ್ ಪ್ರತಿವಾದಿ ತಾರಾಪತಿಗೆ ನೋಟಿಸ್ ನೀಡಿತು. ಅವರು ಕೋರ್ಟ್‌ಗೆ ವಕೀಲನೊಂದಿಗೆ ಹಾಜರಾದರು. 
 
ಅರ್ಜಿದಾರರ ಪರ ವಕೀಲನಾದ್ದರಿಂದ ವಾದ ಮಂಡಿಸುವ ಮೊದಲ ಅವಕಾಶ ನನ್ನದಾಯಿತು. 497ನೇ ಕಲಮಿನ ವಿವರಗಳಿಂದ ನನ್ನ ವಾದವನ್ನು ಆರಂಭಿಸಿದೆ. ‘ಯಾವ ವ್ಯಕ್ತಿಯೇ ಆಗಲಿ, ಇನ್ನೊಂದು ಹೆಣ್ಣಿನೊಂದಿಗೆ ಆಕೆಯ ಗಂಡನಿಂದ ಪ್ರತ್ಯಕ್ಷ ಅಥವಾ ಪರೋಕ್ಷ ಸಮ್ಮತಿ ಪಡೆಯದೇ ಲೈಂಗಿಕ ಸಂಬಂಧ ಇಟ್ಟುಕೊಂಡರೆ, ಆ ಸಂಬಂಧವು ಬಲಾತ್ಕಾರದ ಸಂಭೋಗ ಆಗದಿದ್ದರೂ ವ್ಯಭಿಚಾರ ಮಾಡಿದ ಅಪರಾಧವಾಗುತ್ತದೆ’ ಎಂದೆ.
 
‘ಈ ಅಪರಾಧಕ್ಕೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಇದೆ. ಆದರೆ ಈ ಕೃತ್ಯದಲ್ಲಿ ಭಾಗಿಯಾದ ಹೆಣ್ಣು  ದಂಡನೀಯಳಾಗುವುದಿಲ್ಲ’ ಎಂದು ಮುಂದುವರಿಸಿದೆ. ಈ ವ್ಯಾಖ್ಯಾನವನ್ನು ಸವಿಸ್ತಾರವಾಗಿ ವಿವರಿಸುವಂತೆ ನ್ಯಾಯಮೂರ್ತಿ ಪಿ.ಎ. ಕುಲಕರ್ಣಿ ಹೇಳಿದರು.  ಅದಕ್ಕೆ ನಾನು,  ‘ಐಪಿಸಿಯ 497ನೇ ಕಲಮಿನ ಪ್ರಕಾರ ಇಬ್ಬರು ವಯಸ್ಕರು ಸಮ್ಮತಿಯಿಂದ ಲೈಂಗಿಕ ಸಂಪರ್ಕ ನಡೆಸಿದರೆ ಅದು ಅಪರಾಧವಾಗುವುದಿಲ್ಲ.

ಒಂದು ಹೆಣ್ಣಿನ ಗಂಡನ ಅನುಮತಿ ಪಡೆದು ಆಕೆಯ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡರೆ ಅದು ವ್ಯಭಿಚಾರ ಆಗುವುದಿಲ್ಲ. ಆದರೆ ಗಂಡನ ಸಮ್ಮತಿ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಅದು ವ್ಯಭಿಚಾರವಾಗುತ್ತದೆ’ ಎಂದು ಹೇಳಿ ಮುಗಿಸುತ್ತಿದ್ದಂತೆಯೇ, ನ್ಯಾಯಮೂರ್ತಿಗಳು, ‘ನಿಮ್ಮ ಕಕ್ಷಿದಾರಳಾದ ಮನೋಹರಿಯ ಗಂಡ ಗೋಸ್ವಾಮಿ, ತನ್ನ ಹೆಂಡತಿಗೆ ಹೀಗೆ ಮಾಡಲು ಅನುಮತಿ ಕೊಟ್ಟಿದ್ದನೇನು?’ ಎಂದು ಚೋದ್ಯವಾಗಿ ಪ್ರಶ್ನಿಸಿದರು. 
 
ಈ ಪ್ರಶ್ನೆ ನಿರೀಕ್ಷಿತವೇ ಆಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಉತ್ತರವೂ ಇತ್ತು. ಜಾಂಬವತಿಯ ಅಣ್ಣ ತಾರಾಪತಿ ನ್ಯಾಯಾಲಯದ ಮೊರೆಹೋಗುವ ಮುನ್ನ ಮ್ಯಾನೇಜರ್‌ ಭೂಪೇಶನನ್ನು ಕಂಡು ಮನೋಹರಿ ಮತ್ತು ಗೋಸ್ವಾಮಿ ನಡುವಿನ ವ್ಯಭಿಚಾರದ ಸಂಬಂಧದ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದ. ಆದರೆ ಭೂಪೇಶ ಯಾವ ಆಸಕ್ತಿಯನ್ನೂ ತೋರಿಸಿರಲಿಲ್ಲ. ಇದನ್ನೇ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿಯೂ ಹೇಳಿಕೆ ಸಮಯದಲ್ಲಿ ವಿವರಿಸಿದ್ದರು. ಆ ವಾಕ್ಯಗಳ ಬಗ್ಗೆ ನಾನು ಸಾಕಷ್ಟು ಗಮನ ಹರಿಸಿದ್ದೆ.
 
‘ಹಾಗಾದರೆ ನಿಮ್ಮ ಕಕ್ಷಿದಾರಳು ಅಕ್ರಮಕ್ಕೆ ಸಮ್ಮತಿ ನೀಡಿದವಳಾಗಿ ಕಾಣುತ್ತಿಲ್ಲವೇ?’ ಎಂಬ ಇನ್ನೊಂದು ಪ್ರಶ್ನೆ ಎಸೆದರು ನ್ಯಾಯಮೂರ್ತಿಗಳು. 
ಅದಕ್ಕೆ ನಾನು, ‘ಮೇಲ್ನೋಟಕ್ಕೆ ಹಾಗೆ ಕಾಣುತ್ತಿರುವುದು ಸಹಜ. ಆದರೆ 497ನೇ ಕಲಮಿನ ‘ಎ’ ವಿಭಾಗವನ್ನು ನಾವು ಓದಲೇಬೇಕು. ಇಲ್ಲೊಂದು ವಿಶೇಷತೆ ಇದೆ’ ಎಂದೆ. ಅದನ್ನು ವಿವರಿಸುತ್ತಾ, ‘ಇಂಥ ಪ್ರಕರಣಗಳಲ್ಲಿ ಹೆಣ್ಣು ವ್ಯಭಿಚಾರಿಣಿಯಾಗಿ ಕಂಡರೂ ಕಾನೂನಿನ ದೃಷ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಗೊಂಡಿರುವುದು ಏನೆಂದರೆ, ‘ಇಂಥ ಸಂದರ್ಭಗಳಲ್ಲಿ ಹೆಣ್ಣನ್ನು ಅಕ್ರಮಕ್ಕೆ ಪ್ರೇರಣೆ ಕೊಟ್ಟವಳೆಂದು ಪರಿಗಣಿಸಬಾರದು’ ಎಂದು. ‘ಅದನ್ನು ಗಮನಿಸಿ
ಕೊಂಡರೆ ನನ್ನ ಕಕ್ಷಿದಾರಳು ವ್ಯಭಿಚಾರಕ್ಕೆ ಪ್ರೇರಣೆ ಕೊಟ್ಟವಳು ಆಗುವುದಿಲ್ಲ’ ಎಂದೆ.
 
ಈ ಬಗ್ಗೆ ಇನ್ನಷ್ಟು ವಿವರಿಸುತ್ತಾ, ‘497ನೇ ಕಲಮು ಮಹಿಳಾ ಪಕ್ಷಪಾತಿ ಕಾನೂನಿನಂತೆ ಕಾಣುತ್ತದೆ ನಿಜ. ಆದರೆ ಹೆಣ್ಣನ್ನು ‘ವ್ಯಭಿಚಾರಿಣಿ’ ಎಂಬ ಹಣೆಪಟ್ಟಿಯಿಂದ ದೂರ ಇಡುವ ಸಂಬಂಧ ಇಂಥದ್ದೊಂದು ಕಾನೂನನ್ನು ರೂಪಿಸಲಾಗಿದೆ ಎನ್ನುವುದನ್ನೂ ನಾವು ಮರೆಯಬಾರದು. ಆಗಿನ ಕಾನೂನು ರಚನಾ ಸಮಿತಿಯಲ್ಲಿದ್ದ ಪ್ರಾಜ್ಞರು ಲಿಂಗ ತಾರತಮ್ಯದಿಂದ ಮಹಿಳೆಗೆ ಉಂಟಾಗುವ ಶೋಷಣೆಯ ಬಗ್ಗೆ ಸಂಪೂರ್ಣ ತಿಳಿವಳಿಕೆಯಿಂದ ಕೂಡಿದವರಾಗಿದ್ದರು. ಅವರ ದೂರದೃಷ್ಟಿಯ ಪರಿಣಾಮವಾಗಿ  ಹೆಣ್ಣಿಗೆ ಈ ಕಲಮಿನ ಅಡಿ ರಕ್ಷಣೆ ಸಿಕ್ಕಿದೆ’ ಎಂದೆ. 
 
ನನ್ನ ವಾದವನ್ನು ತದೇಕ ಚಿತ್ತದಿಂದ ನ್ಯಾಯಮೂರ್ತಿಗಳು ಆಲಿಸಿದರು. ನಂತರ ಪ್ರತಿವಾದಿ ವಕೀಲರ ಕಡೆ ತಿರುಗಿದ ಅವರು, ‘ಅರ್ಜಿದಾರರ ವಾದವನ್ನು ಗಮನದಲ್ಲಿರಿಸಿಕೊಂಡು ನಾನೂ ಸಾಕಷ್ಟು ಹೋಮ್‌ವರ್ಕ್‌ ಮಾಡಿದೆ. ನನಗೂ ಕಂಡುಬಂದಂತೆ ಕಾನೂನಿನ ಅಡಿ  ಆರೋಪಿ ಗಂಡಸನ್ನು ಮಾತ್ರ ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬಹುದೇ ವಿನಾ ಹೆಣ್ಣನ್ನಲ್ಲ’ ಎಂದರು. 
 
ಹೀಗೆ ಹೇಳಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಮನೋಹರಿ ವಿರುದ್ಧ ಇದ್ದ ಆರೋಪಗಳನ್ನು ರದ್ದುಮಾಡಿದರು. ಆದರೆ ಗೋಸ್ವಾಮಿಯ ವಿರುದ್ಧ ಪ್ರಕರಣ ಮುಂದುವರಿಸಲು ಆದೇಶಿಸಿದರು.
***
ಈ ಪ್ರಕರಣದ ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿಗಳು ಎತ್ತಿದ ಪ್ರಶ್ನೆಗಳು ಕಾನೂನು ಸಮಿತಿಯ ಸದಸ್ಯರನ್ನೂ ಬಾಧಿಸಿದಂತಿವೆ. ಅವು
ಗಳಲ್ಲಿ ಬಹುಮುಖ್ಯವಾದ ಪ್ರಶ್ನೆ ಅಂದರೆ ‘ಮಹಿಳೆಯನ್ನು ಅಕ್ರಮಕ್ಕೆ ಕುಮ್ಮಕ್ಕು ನೀಡಿದವಳು ಅಲ್ಲ ಎಂದು ಪರಿಗಣಿಸುವುದಾದರೆ ಅದು ಎಲ್ಲಿಯವರೆಗೆ...?’ 
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿಯೇ ಹಲವು ಪ್ರಶ್ನೆಗಳಿದ್ದವು. ‘ಗಂಡಸು ಯಾಕೆ ವಿವಾಹ ಬಾಹಿರ ಸಂಬಂಧ ಬೆಳೆಸುತ್ತಾನೆ? ಹೆಂಡತಿಗೆ ಮೋಸ ಮಾಡುವ ಗಂಡಸರಲ್ಲಿ ಬಹು ಮಂದಿ ತಮ್ಮ ದಾಂಪತ್ಯದಲ್ಲಿ ಚೆನ್ನಾಗಿಯೇ ಇರು ತ್ತಾರೆ. ಆದರೆ ಅವರು ಬೇರೆ ಸ್ತ್ರೀಯರ ಕಡೆ ವಾಲು
ವುದಕ್ಕೆ ಬಹುಮುಖ್ಯ ಕಾರಣ ಅವರು ಬಯಸುವ ವೈವಿಧ್ಯ. 
 
ಇವೆಲ್ಲ ಕುತೂಹಲಕರ ಸಂಗತಿಗಳು. ಯಾಕೆಂದರೆ ಮೂಲದಲ್ಲಿ ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದ ವಿಚಾರಗಳೆಲ್ಲವೂ ಕುತೂಹಲಕರವೇ. ಪತ್ನಿ ಮೋಸ ಮಾಡಲು ಮುಖ್ಯ ಕಾರಣ – ಗಂಡನಾದವ ತನ್ನ ಮೇಲೆ ಇಟ್ಟ ಪ್ರೀತಿ ದಿನಗಳೆದಂತೆ ಕರಗಿಹೋಗುವುದು. ನಿತ್ಯದ ಬದುಕಿನಲ್ಲಿ ಕಳೆದುಕೊಂಡದ್ದನ್ನು ಹೊರಗಡೆ ತುಂಬಿಕೊಳ್ಳಲು ಉಂಟಾಗುವ ಬಯಕೆ ಆಕೆಯನ್ನು ಕಾಡಲು ಶುರುಮಾಡುತ್ತದೆ.
 
ಆದರೆ ಗಂಡಸಿಗಾದರೋ ಅದು ವೈವಿಧ್ಯವನ್ನು ಪಡೆಯುವ ಒಂದು ಅವಕಾಶ ವಲಯ. ಬೇರೆ ಶರೀರ, ಬೇರೆ ವಯಸ್ಸು, ಬೇರೆ ಬಣ್ಣ... ಹೀಗೆ ಭಿನ್ನತೆಯೆಂಬುದು ಆತನ ಬಯಕೆಯ ಕಿಡಿ ಉರಿಸುವ ತುಪ್ಪ. ಇದರಿಂದಾಗಿಯೇ ವ್ಯಭಿಚಾರಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಹೆಣ್ಣಿಗೆ ರಕ್ಷಣೆ ನೀಡಲಾಗಿದೆ. 
 
ಸಮಸ್ಯೆಯ ಬಗೆಗೆ ಸಮಿತಿಗಿದ್ದ ಪ್ರೌಢ ದೃಷ್ಟಿ ಇಂದಿಗೂ ನಮ್ಮನ್ನು ಗೆಲ್ಲುವಂತಿದೆ. ಆದರೂ ಎಲ್ಲಿಯವರೆಗೆ ಈ ಕಾನೂನು ಮಹಿಳೆಯ ಬೆಂಬಲಕ್ಕೆ ನಿಲ್ಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಜೀವ ವಿಕಾಸದಲ್ಲೇ ಗಂಡು ಹೆಣ್ಣಿನ ನಡುವೆ ತಾರತಮ್ಯ ಇದೆ ಎನ್ನುವುದು ಎಂದು ಎಲ್ಲರಿಗೂ ತಿಳಿಯುವವರೆಗೆ; ಹೆಣ್ಣನ್ನು ಸಾವಿರಾರು ವರ್ಷಗಳಿಂದ ಸೆರೆಯಾಳಾಗಿಸಿರುವ ಸಂಚು ಎಲ್ಲರಿಗೂ ಮನವರಿಕೆಯಾಗುವವರೆಗೆ; ಗಂಡಿನ ಪೂರ್ವಗ್ರಹ ಬಯಲಾಗುವವರೆಗೆ; ಪುರುಷಪ್ರಧಾನ ಸಮಾಜದ ಮೌಲ್ಯಗಳಿಂದ ಮಹಿಳೆ ಹೊರಬರುವವರೆಗೆ...
 
ಯಾವಾಗ ಮಹಿಳೆ ಕೂಡ ಪುರುಷನಿಗೆ ಎಲ್ಲ ನೆಲೆಗಳಲ್ಲೂ ಸರಿಸಮಾನಳು ಎಂದು ಸಮಾಜ ಭಾವಿಸುತ್ತದೋ ಆಗ ಹೆಣ್ಣನ್ನು ಕೂಡ ‘ವ್ಯಭಿಚಾರಕ್ಕೆ ಕುಮ್ಮಕ್ಕು ನೀಡಿದವಳು’ ಎಂಬ ಕಾರಣ ನೀಡಿ ಆಕೆಯನ್ನು ಆರೋಪಿಯನ್ನಾಗಿ ಮಾಡಿ ವಿಚಾರಣೆಗೆ ಒಳಪಡಿಸಬಹುದು.
(ಹೆಸರುಗಳನ್ನು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT