ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಫಿ ಬೆಳೆಗಾರರು– ಗ್ರಾಹಕರ ರಕ್ಷಣೆ ಗುರಿ’

ಅಕ್ಷರ ಗಾತ್ರ
ಕಾಫಿ ಮಂಡಳಿ ನೂತನ ಅಧ್ಯಕ್ಷ ಎಂ.ಎಸ್.ಬೋಜೇಗೌಡ ಅವರು ಕಳೆದ ಮೂರು ತಲೆಮಾರುಗಳಿಂದ ಕಾಫಿ ಬೆಳೆಯನ್ನೇ ಪ್ರಧಾನ ಕೃಷಿ ಮಾಡಿಕೊಂಡಿರುವ ಕೂಡುಕುಟುಂಬಕ್ಕೆ ಸೇರಿದವರು. ಚಿಕ್ಕಮಗಳೂರು ಜಿಲ್ಲೆಯ ಮೂಗುತಿಹಳ್ಳಿ ಗ್ರಾಮದವರಾದ ಇವರು  ಬಿ.ಎ. ಪದವೀಧರರು.
 
ಜೆ.ಪಿ ಚಳವಳಿ ಮೂಲಕ ಸಾರ್ವಜನಿಕ ಬದುಕಿಗೆ ಪರಿಚಿತರಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ   ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಗಾಯತ್ರಿ ಶಾಂತೇಗೌಡರ ಎದುರು ಪರಾಭವಗೊಂಡಿದ್ದರು. ಸದ್ಯ,  ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಬೋಜೇಗೌಡರು  ಯುರೋಪ್‌ ಒಕ್ಕೂಟ ರಾಷ್ಟ್ರಗಳ ಪ್ರತಿಷ್ಠಿತ ಕಂಪೆನಿಗಳಿಗೆ ಹಲವು ವರ್ಷಗಳಿಂದ ಗುಣಮಟ್ಟದ ‘ಸ್ಪೆಷಾಲಿಟಿ ಕಾಫಿ’ ರಫ್ತು ಮಾಡುತ್ತಿದ್ದಾರೆ. 

ಕಾಫಿ ಮಂಡಳಿ ಇತಿಹಾಸದಲ್ಲೇ  ಮೊದಲ ಬಾರಿಗೆ ‘ವೃತ್ತಿಯಲ್ಲಿ ಕಾಫಿ ಬೆಳೆಗಾರ, ಪ್ರವೃತ್ತಿಯಲ್ಲಿ ರಾಜಕಾರಣಿ’ ಆದವರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸುವ ಅವಕಾಶ ಲಭಿಸಿದೆ. ಕಾಫಿ ಬೆಳೆಯ ಲಾಭ, ನಷ್ಟ ಹತ್ತಿರದಿಂದ ನೋಡಿ, ಅನುಭವಿಸಿರುವ ಬೋಜೇಗೌಡರು ತಮ್ಮ ಮುಂದಿರುವ ಯೋಜನೆ, ಹೊಸ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.
 

 
* ಮೊದಲ ಸಲ ಬೆಳೆಗಾರರಿಗೆ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ದೊರೆತಿದೆ. ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನಿರೀಕ್ಷಿಸಬಹುದೇ?
ಕಾಫಿ ಮಂಡಳಿ ಬೆಳೆಗಾರರ ನಿಯಂತ್ರಣದಲ್ಲಿರಬೇಕೆನ್ನುವುದು ಬೆಳೆಗಾರರು ಮತ್ತು ಕಾಫಿ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳ ಹಲವು ದಶಕಗಳ ತುಡಿತವಾಗಿತ್ತು. ಕೆಜಿಎಫ್, ಕೆಪಿಎ, ಉಪಾಸಿ ಸಂಘಟನೆಗಳ ಬೇಡಿಕೆ ಕೂಡ ಇದೇ ಆಗಿತ್ತು.
 
ಪ್ರಧಾನಿ ನರೇಂದ್ರ ಮೋದಿ ಅವರು ಕಾಫಿ ಬೆಳೆಗಾರರ  ಬೇಡಿಕೆಗೆ ಮನ್ನಣೆ ಕೊಟ್ಟಿದ್ದಾರೆ. ಇದು ಹಲವು ದಶಕಗಳ ಹೋರಾಟಕ್ಕೆ ಸಿಕ್ಕಿದ ಫಲ. ಬೆಳೆಗಾರರಿಗೆ ಅಧ್ಯಕ್ಷ ಹುದ್ದೆ ಸಿಕ್ಕಿದ ತಕ್ಷಣ ಎಲ್ಲ ಸಮಸ್ಯೆಗಳು ಒಮ್ಮೆಲೇ ಬಗೆಹರಿಯುತ್ತವೆ ಎನ್ನಲಾಗದು. ಬೆಳೆಗಾರರ ನಿರೀಕ್ಷೆಗಳಿಗೆ  ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ.
 
* ಅಧ್ಯಕ್ಷ ಹುದ್ದೆ ಎರಡು ವರ್ಷಗಳಿಂದ ಖಾಲಿ ಇದ್ದು, ಮಂಡಳಿ ನಿಷ್ಕ್ರಿಯಗೊಂಡಿರುವ ಭಾವನೆ ಬೆಳೆಗಾರರಲ್ಲಿದೆ. ಮಂಡಳಿಯನ್ನು ಯಾವ ರೀತಿ ಚುರುಕುಗೊಳಿಸುತ್ತೀರಿ?
ಕಾಫಿ ಮಂಡಳಿಯು ನಿಜ ಅರ್ಥದಲ್ಲಿ ಬೆಳೆಗಾರರು ಮತ್ತು ಸರ್ಕಾರದ ನಡುವಿನ ಸೇತುವೆ ಇದ್ದಂತೆ. ಕಾಫಿ ಕೃಷಿ ಅಥವಾ ಉದ್ಯಮ ಸದಾ ಸವಾಲುಗಳನ್ನೇ ಎದುರಿಸಿಕೊಂಡು ಬಂದಿದೆ. ಬರಗಾಲ, ಅತಿವೃಷ್ಟಿ ಹಾಗೂ ಕಾಫಿ ಗಿಡಗಳಿಗೆ ರೋಗರುಜಿನ ಯಾವಾಗ ಬರುತ್ತದೆ ಎಂದು ಹೇಳಲಾಗದು;  ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಬೆಳೆಗಾರರಿಗೆ ಸ್ಪಂದಿಸಬೇಕಾದುದು ಕಾಫಿ ಮಂಡಳಿಯ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯನ್ನು ಕಾರ್ಯ ಪ್ರವೃತ್ತಗೊಳಿಸುವ ಉದ್ದೇಶವಿದೆ.
 
* ಬೆಳೆಗಾರರಿಗೆ ಸುಮಾರು ₹ 80 ಕೋಟಿ ಸಹಾಯಧನ ಬಾಕಿ ಇದೆ. ಸಹಾಯಧನ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ಆರೋಪವೂ ಇದೆಯಲ್ಲ?
ಕಾಫಿ ಮಂಡಳಿಗೆ ಇತ್ತೀಚೆಗಷ್ಟೆ ಸ್ಪಲ್ಪ ಪ್ರಮಾಣದ ಸಹಾಯಧನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅರ್ಜಿಗಳ ಜ್ಯೇಷ್ಠತೆ ಆಧರಿಸಿ ಅರ್ಹ ಬೆಳೆಗಾರರಿಗೆ ಸಹಾಯಧನ ವಿತರಿಸಲಾಗುತ್ತಿದೆ. ವ್ಯತ್ಯಾಸಗಳಿದ್ದರೆ ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸುತ್ತೇವೆ. ದೇಶದಾದ್ಯಂತ ಇರುವ ಅರ್ಹ ಕಾಫಿ ಬೆಳೆಗಾರರಿಗೆ ಸಹಾಯಧನ, ಸವಲತ್ತುಗಳನ್ನು ಒದಗಿಸಲು ಶ್ರಮಿಸುತ್ತೇವೆ. ಬಾಕಿ ಇರುವ ಸಹಾಯಧನ ಬಿಡುಗಡೆಗೆ ಸರ್ಕಾರದ ಗಮನ ಸೆಳೆಯುತ್ತೇವೆ.
 
* ಕಾಫಿಗೆ ನ್ಯಾಯಯುತ ಬೆಲೆ ಸಿಗದೆ ಬೆಳೆಗಾರರು ನಷ್ಟದಲ್ಲಿದ್ದಾರೆ. ತೋಟ ಉಳಿಸುವುದು ಸವಾಲಾಗಿದೆ. ಬೆಳೆಗಾರರಿಗೆ ನೆರವಾಗಲು ಮಂಡಳಿ ಮುಂದಾಗಲಿದೆಯೇ? 
ನಾನೊಬ್ಬ ಬೆಳೆಗಾರನಾಗಿ ಬೆಳೆಗಾರರು ಸಂಕಷ್ಟದಲ್ಲಿರುವುದನ್ನು ಒಪ್ಪುತ್ತೇನೆ. ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಕಾಫಿ ಬೆಳೆಯಲ್ಲಿ ಸಿಗುತ್ತಿರುವ ಆದಾಯ ತೋಟದ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹಾಕಿದ ಬಂಡವಾಳವೂ  ಸಿಗುತ್ತಿಲ್ಲ. ಪೂರಕ ಬೆಳೆಯಾಗಿ ಕಾಳುಮೆಣಸು ಬೆಳೆದಿರುವವರು ಮಾತ್ರ ಚೇತರಿಕೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಬೆಳೆಗಾರರ ರಕ್ಷಣೆಗೆ ಮುಂದಾಗಲು ಕೇಂದ್ರ ಸರ್ಕಾರದ ಜತೆಗೆ ಸಮಾಲೋಚಿಸುತ್ತೇವೆ. ಸರ್ಕಾರ ಯಾವ ರೀತಿ ನೆರವು ನೀಡಬೇಕೆನ್ನುವುದರ ಬಗ್ಗೆಯೂ ಮಂಡಳಿಯ ನಿರ್ದೇಶಕರ ಜತೆಗೆ ಚರ್ಚಿಸಿ, ಒತ್ತಾಯ ಹೇರುತ್ತೇವೆ.
 
* ಕಾಫಿ ಬೆಲೆ ಏರಿಳಿತ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದ್ದರೂ, ದೇಶಿಯವಾಗಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ಬಲಾಢ್ಯ ಕಂಪೆನಿಗಳು ಮತ್ತು ಮಧ್ಯವರ್ತಿಗಳ ಹಿಡಿತದಲ್ಲಿದೆ. ಬೆಳೆಗಾರರನ್ನು ಹೇಗೆ ಪಾರು ಮಾಡುತ್ತೀರಿ? 
ಕಾಫಿ ವ್ಯಾಪಾರ ಮುಕ್ತ ಮಾರುಕಟ್ಟೆ ಅವಲಂಬಿಸಿದೆ. ಬೆಲೆ ನಿಗದಿ ಅಂತರರಾಷ್ಟ್ರೀಯ ಮಟ್ಟದ ಖರೀದಿದಾರರ ಕೈಯಲ್ಲಿದೆ. ಪ್ರತಿಷ್ಠಿತ ಕಂಪೆನಿಗಳು, ಮಧ್ಯವರ್ತಿಗಳು ಬೆಲೆ ನಿಯಂತ್ರಿಸುತ್ತಿದ್ದಾರೆ.
 
ನ್ಯಾಯಯುತ ಬೆಲೆ ದಕ್ಕಿಸಿಕೊಳ್ಳುವುದು ಸಣ್ಣ, ಮಧ್ಯಮ ಬೆಳೆಗಾರರಿಗೆ ಕಷ್ಟ. 50 ಕೆ.ಜಿ. ಕಾಫಿ ಚೀಲಕ್ಕೆ ವಾಸ್ತವ ಬೆಲೆಗಿಂತ ₹100ರಿಂದ ₹200ರವರೆಗೆ ಕಡಿಮೆ ನಿಗದಿಪಡಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕಾಫಿ ಬಳಕೆ ಮಾಡದಿರುವ ದೇಶಗಳಿಗೆ ಗುಣಮಟ್ಟದ ಕಾಫಿ ರಫ್ತು ಮಾಡಿ, ಜನರು ಕಾಫಿ ಕುಡಿಯುವಂತೆ ಮಾಡಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶದ ಕಾಫಿಗೆ ಬೇಡಿಕೆ ಹೆಚ್ಚುವಂತೆ ಮಾಡುವುದೊಂದೇ ಇದಕ್ಕೆ ಪರಿಹಾರ. 
 
* ಹವಾಮಾನ ವೈಪರೀತ್ಯ, ಕೀಟ ಬಾಧೆ, ನಿರ್ವಹಣಾ ವೆಚ್ಚ ಏರಿಕೆಯಿಂದ ಅರೆಬಿಕಾ ಕಾಫಿ ವಿನಾಶದ ಅಂಚಿನಲ್ಲಿದೆ. ಅರೆಬಿಕಾ ಕಾಫಿ ಉಳಿಸಲು ಪ್ರಯತ್ನವೇನು?
ಹವಾಮಾನ ನಿಯಂತ್ರಣ ಮನುಷ್ಯನ ಕೈಯಲ್ಲಿಲ್ಲ. ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ಚಂದ್ರಲೋಕಕ್ಕೂ ನಮ್ಮ ವಿಜ್ಞಾನಿಗಳು ಹೋಗಿ ಬರುತ್ತಿದ್ದಾರೆ. ಆದರೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಕೆಲವು ಸಮಸ್ಯೆಗಳಿಗೆ ನಮ್ಮ ಕೃಷಿ ವಿಜ್ಞಾನಿಗಳ ಬಳಿ ಉತ್ತರವಿಲ್ಲ. ನಮ್ಮ ವಿಜ್ಞಾನಿಗಳೇ   ಅರೆಬಿಕಾ ಕಾಫಿಗೆ ಮಾರಕವಾಗಿರುವ ಕಾಂಡಕೊರಕ ಬಾಧೆಗೆ  ಪರಿಹಾರ ಕಂಡುಹಿಡಿಯಬೇಕು.

ಕಾಂಡಕೊರಕ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದವರಿಗೆ ₹5 ಕೋಟಿ ಬಹುಮಾನವನ್ನು ಈ ಹಿಂದೆಯೇ ಕಾಫಿ ಮಂಡಳಿ ಘೋಷಿಸಿದೆ. ಇದುವರೆಗೂ ಕಾಂಡಕೊರಕ ಕೀಟ ನಿಯಂತ್ರಣಕ್ಕೆ ಪರಿಣಾಮಕಾರಿ ಕೀಟನಾಶಕ ಕಂಡುಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಸ್ಟೆಮ್‌ ಬೋರರ್‌, ಬೆರ್ರಿ ಬೋರರ್‌, ಫ್ರೂಟ್‌ ಬೋರರ್‌ ನಿಯಂತ್ರಣಕ್ಕೆ ಸಂಶೋಧನೆಯಲ್ಲಿ ತೊಡಗುವಂತೆ ಮಂಡಳಿಯ ಕಾಫಿ ಸಂಶೋಧನಾ ವಿಭಾಗ ಮತ್ತು ವಿಜ್ಞಾನಿಗಳೊಂದಿಗೆ ಚರ್ಚಿಸುತ್ತೇವೆ. ಅರೆಬಿಕಾ ಕಾಫಿ ಉಳಿಸಲು ಕೇಂದ್ರ ಸರ್ಕಾರ ಕೂಡ ಮಧ್ಯ ಪ್ರವೇಶಿಸಬೇಕದ ತುರ್ತು ಅಗತ್ಯವಿದೆ.
 
* ಮಲೆನಾಡಿನಲ್ಲಿ ಗಿಡಮರ ಕಡಿದು ‘ಬ್ರೆಜಿಲ್‌ ಮಾದರಿ’ಯಲ್ಲಿ ಬಯಲಲ್ಲಿ ಕಾಫಿ ಬೆಳೆಯುವ ಪ್ರಯೋಗ ಆರಂಭವಾಗಿದೆ. ಇದನ್ನು ಮಂಡಳಿ ಬೆಂಬಲಿಸುತ್ತದೆಯೇ?
ಖಂಡಿತಾ ಇಲ್ಲ; ನೆರಳಿನ ಆಶ್ರಯ ಮತ್ತು ಪರಿಸರ ಸ್ನೇಹಿ ಕಾಫಿಗೆ ನಮ್ಮ ರಾಜ್ಯ ಪ್ರಸಿದ್ಧಿ. ನಮ್ಮದು ಪರಿಸರಸ್ನೇಹಿ ಕಾಫಿ ಕೃಷಿ. ವಿಶ್ವಮಟ್ಟದಲ್ಲೂ ಹಾಗೆಯೇ ಗುರುತಿಸಿಕೊಂಡಿದ್ದೇವೆ. ಅರೆಬಿಕಾ ಕಾಫಿಯನ್ನು ಹದವಾದ ನೆರಳಿನಲ್ಲಿ ಬೆಳೆಯಬೇಕು. ನಮ್ಮ ಕಾಫಿ ಉದ್ಯಮವು ಪರಿಸರವನ್ನು  ಉಳಿಸಿ, ಬೆಳೆಸುವಂತಿರಬೇಕು. ಜೀವವೈವಿಧ್ಯಗಳನ್ನು ಪೋಷಿಸಿ, ಜಲಮೂಲ ರಕ್ಷಿಸಬೇಕು.
 
ಗಿಡಮರ ನಾಶಪಡಿಸಿ, ಕಾಫಿ ಬೆಳೆಯುವ ಹೊಸ ಪ್ರಯತ್ನಗಳು ಕಾಫಿ ಕೃಷಿ ಮತ್ತು ಕಾಫಿ ಸಂಸ್ಕೃತಿಯನ್ನೇ ನಾಶಪಡಿಸುತ್ತವೆ. ಇಂತಹ ಪ್ರಯೋಗಗಳಿಂದ ಗುಣಮಟ್ಟದ ಕಾಫಿ ಉತ್ಪಾದನೆ ಸಾಧ್ಯವಿಲ್ಲ. ಇದು ಯಶಸ್ವಿಯಾಗುವುದೂ ಇಲ್ಲ. ಇದನ್ನು ಯಾರೂ ಕೂಡ ಉತ್ತೇಜಿಸಬಾರದು. ಕಾಫಿ ಮಂಡಳಿ ಕೂಡ ಬೆಂಬಲಿಸುವುದಿಲ್ಲ.
 
* ಕಾಫಿ ತೋಟದ ಕಾರ್ಮಿಕರ ಹಿತ ಕಾಯಲು ಕಾಫಿ ಮಂಡಳಿ ವಿಫಲವಾಗಿದೆ ಎನಿಸುವುದಿಲ್ಲವೇ. ಇಂತಹ ಆರೋಪದಿಂದ ಮಂಡಳಿಯನ್ನು ಮುಕ್ತಗೊಳಿಸಲು ಏನು ಕ್ರಮ ತೆಗೆದುಕೊಳ್ಳಲಿದ್ದೀರಿ? 
ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಇದೆ. ಕಾರ್ಮಿಕ ಕಾನೂನುಗಳು ಜಾರಿಗೆ ಬರುವ ಮೊದಲಿನಿಂದಲೂ ಬೆಳೆಗಾರರು ಕಾರ್ಮಿಕರನ್ನು ಮಾನವೀಯತೆಯಿಂದಲೇ ನಡೆಸಿಕೊಂಡು ಬಂದಿದ್ದಾರೆ.
 
ರಾಜ್ಯದ ಬೇರೆ ಜಿಲ್ಲೆಗಳು, ಅಷ್ಟೇ ಏಕೆ ಹೊರ ರಾಜ್ಯಗಳಲ್ಲೂ ಬರ ಕಾಣಿಸಿಕೊಂಡಾಗ ಅಲ್ಲಿನ ಕಾರ್ಮಿಕರು ರಾಜ್ಯದಲ್ಲಿ ಕಾಫಿ ಬೆಳೆಯುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ವಲಸೆ ಬಂದು, ಜೀವನ ನಡೆಸಿದ್ದಾರೆ. ಈಗಲೂ ಅದು ಮುಂದುವರಿದಿದೆ. ಕಾರ್ಮಿಕರಿಗೆ ಬೇಕಾದ ಸವಲತ್ತು, ರಕ್ಷಣೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸೌಲಭ್ಯವನ್ನು ಮಂಡಳಿ ಹಿಂದಿನಿಂದಲೂ ಒದಗಿಸಿಕೊಂಡು ಬಂದಿದೆ.  
 
* ‘2016ರ ಹೊಸ ಕಾಫಿ ಕಾಯ್ದೆ’ ಕಾಫಿ ಬೆಳೆಗಾರರಿಗೆ ಕಂಟಕ ಎನ್ನುವ ಆತಂಕ ಬೆಳೆಗಾರರಲ್ಲಿದೆ. ನಿಮ್ಮ ಅನಿಸಿಕೆ ಏನು?
ಹೊಸ ಕಾಯ್ದೆ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಅದರಲ್ಲಿ ಏನೇನು ಅಂಶಗಳಿವೆ ಎನ್ನುವುದನ್ನು ಇನ್ನಷ್ಟೆ ನೋಡಬೇಕು. ಬೆಳೆಗಾರರಿಗೆ ಮಾರಕವಾಗುವ ಅಂಶಗಳು ಇರಲಾರವು ಎನ್ನುವುದು ನನ್ನ ಬಲವಾದ ನಂಬಿಕೆ. ಈ ಹಿಂದೆಯೆ ಸಿಆರ್‌ಸಿ ಕಡ್ಡಾಯವಾಗಿದ್ದನ್ನು ಸರ್ಕಾರ ಕೈಬಿಟ್ಟಿದೆ. ವರ್ಷದ 365 ದಿನಗಳು ಕೆಲಸ ಕೊಡುವ ಕಾಫಿ ಬೆಳೆ ಒಂದು ಕಡೆ ಕೃಷಿಯಾಗಿಯೂ, ಇನ್ನೊಂದೆಡೆ ಉದ್ಯಮವಾಗಿಯೂ ಗುರುತಿಸಿಕೊಂಡಿದೆ. ಕೇಂದ್ರ ಸರ್ಕಾರ ಕೂಡ ಕೃಷಿ ಮತ್ತು ಉದ್ಯಮವಾಗಿಯೇ ಈ ಕ್ಷೇತ್ರವನ್ನು ಪರಿಗಣಿಸಲಿದೆ.
 
* ಕಾಫಿ ಪುಡಿ ಗುಣಮಟ್ಟ ಹಾಳುಗೆಡವುತ್ತಿರುವ ಚಿಕೋರಿ ನಿಯಂತ್ರಿಸಲು ಮಂಡಳಿ ಏನು ಕ್ರಮ ತೆಗೆದುಕೊಳ್ಳಲಿದೆ?
ಚಿಕೋರಿಗೆ ನಿಯಂತ್ರಣ ಹೇರಬೇಕಿದೆ. ಚಿಕೋರಿ ದಂಧೆಗೆ ಕಡಿವಾಣ ಹಾಕದಿದ್ದರೆ ಕಾಫಿ ಬೆಳೆಯುವವರಿಗೂ, ಕಾಫಿ ಬಳಸುವವರಿಗೂ ತೊಂದರೆ ಕಟ್ಟಿಟ್ಟ ಬುತ್ತಿ. ದೇಶದಲ್ಲಿ ಕಾಫಿ ಪುಡಿ ಉತ್ಪಾದನೆಗಿಂತ ಚಿಕೋರಿ ಉತ್ಪಾದನೆಯೇ ಹೆಚ್ಚಿದೆ ಎನ್ನುವ ಗಂಭೀರ ಆಪಾದನೆ ಇದೆ. ಕಾಫಿಗೆ ಹಿತಮಿತವಾಗಿ ಚಿಕೋರಿ ಬೆರೆಸಬೇಕು. ಚಿಕೋರಿ ಮಿಶ್ರಣದಲ್ಲಿ ನಿಗದಿತ ಮಾನದಂಡ ಮೀರದಂತೆ ಕಟ್ಟುನಿಟ್ಟಿನ ಆದೇಶ ಪಾಲನೆಯಾಗಬೇಕು. ಇದರ ಬಗ್ಗೆ ಮಂಡಳಿಯಲ್ಲಿ ಚರ್ಚಿಸಿ, ಕೇಂದ್ರದ ಮೇಲೆ ಒತ್ತಡ ಹೇರುವ ಉದ್ದೇಶವಿದೆ.
 
* ಕಾಫಿ ಆಂತರಿಕ ಬಳಕೆ ಹೆಚ್ಚಿಸುವ ಉದ್ದೇಶವಿದೆಯೇ?
ನಮ್ಮ ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕಾಫಿ, ವಿದೇಶಗಳಿಗೆ ರಫ್ತಾಗುತ್ತದೆ. ಕಾಫಿ ಒಟ್ಟು ಉತ್ಪಾದನೆ ಮತ್ತು ದೇಶದ ಜನಸಂಖ್ಯೆ ಎರಡನ್ನು ಹೋಲಿಸಿ ನೋಡಿದಾಗ ಕಾಫಿ ಆಂತರಿಕ ಬಳಕೆ ಅತ್ಯಂತ ಕಡಿಮೆ ಇದೆ. ದೇಶದೊಳಗೆ ಕಾಫಿ ಬಳಕೆ ಹೆಚ್ಚಿಸುವ ಗುರಿ ಮತ್ತು ಸವಾಲು ನಮ್ಮ ಮುಂದಿದೆ. ಬೆಳೆಗಾರರನ್ನು ರಕ್ಷಿಸಲು ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಿಸಲು ಗುಣಮಟ್ಟದ ಕಾಫಿ ಉತ್ಪಾದನೆಗೆ ಇನ್ನಷ್ಟು ಉತ್ತೇಜನ ನೀಡುತ್ತೇವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT