ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಮಗುವೋ? ಮನೆಯೋ?

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಇನ್ನು ಹದಿನೈದು ಇಪ್ಪತ್ತು ದಿನಗಳಲ್ಲಿ ಮತ್ತೆ ಶಾಲೆ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮಗುವಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕಾದ ಶಿಕ್ಷಣವ್ಯವಸ್ಥೆ ಮತ್ತೊಂದು ಮಹತ್ವದ ಅಂಶವನ್ನು ಪರಿಗಣಿಸಬೇಕಾಗಿದೆ; ಅದೇ ಮನೆಯ ವಾತಾವರಣ!

ಕೆಲವು ವರ್ಷಗಳ ಹಿಂದಿನ ಮಾತು. ಒಬ್ಬರು ತಮ್ಮ ಮಗನನ್ನು ‘ಓದುವುದಿಲ್ಲ’ ಎಂಬ ಬಹುಸಾಮಾನ್ಯ ಸಮಸ್ಯೆಯೊಂದಿಗೆ ಕರೆತಂದರು. ‘ಹೊಟ್ಟೆಬಟ್ಟೆ ಕಟ್ಟಿ ಇವರಿಗೆ ಅಂತ ಮಾಡ್ತೀವಿ, ಸಾರ್, ಇವನನ್ನೊಡಿ…’ ಎಂದು ಅವನನ್ನು ಹೊಡೆಯಲು ಮುಂದಾದರು. ಅವರನ್ನು ಸಮಾಧಾನಪಡಿಸಿ ಕಳಿಸಿ ವಿದ್ಯಾರ್ಥಿಯೊಂದಿಗೆ ಮಾತಾಡಿದ್ದಾಯಿತು. ಅಂತಹ ಪ್ರಯೋಜನವಾಗಲಿಲ್ಲ.

ಪದೇ ಪದೇ ಬೇರೆಯಾಗಿ ಕರೆದು ಮಾತಾಡಿಸಿದಾಗ ಸುಮಾರು ಒಂದು ವಾರದ ಬಳಿಕ ವಿಷಯ ಹೊರಬಿತ್ತು. ‘ಮನೆಯಲ್ಲಿ ಸದಾ ಜಗಳ’. ಇಂತಹ ಪ್ರಕರಣಗಳು ಒಂದೆರೆಡಲ್ಲ. ಇದಕ್ಕಿಂತಲೂ ತೀವ್ರವಾದವು, ಸಣ್ಣ ಪ್ರಮಾಣದವನ್ನು ಸಹ ನೋಡಿದ್ದೇನೆ. ಇವುಗಳ ವಿಶ್ಲೇಷಣೆಗೆ ಮತ್ತೆ ಬರೋಣ.

ವಿದ್ಯಾರ್ಥಿಗಳಲ್ಲಿ ಮೂರು ಬಗೆಯವರಿರುತ್ತಾರೆ. ಅವರನ್ನು ಎ, ಬಿ ಮತ್ತು ಸಿ ಎನ್ನೋಣ. ‘ಎ’ ವಿಭಾಗದ ವಿದ್ಯಾರ್ಥಿಗಳು ಅವರಿಗೇ ಏನೇ ಸಮಸ್ಯೆ ಬರಲಿ, ಶಾಲೆಯ ಒಳಗೆ-ಹೊರಗೆ ಏನೇ ಸಮಸ್ಯೆಯಾಗಲಿ, ಅವರು ಚೆನ್ನಾಗಿ ಓದಿಯೇ ಓದುತ್ತಾರೆ. ಕಲಿತೇ ಕಲಿಯುತ್ತಾರೆ. ಹೊರಪ್ರಭಾವಗಳಿಗೆ ಅವರು ಸಿಲುಕುವುದಿಲ್ಲ. ಶಿಕ್ಷಕರಲ್ಲಿನ ಕೊರತೆಗಳು ಸಹ ಇವರನ್ನು ಬಾಧಿಸುವುದಿಲ್ಲ.

ಇನ್ನು ‘ಬಿ’ ಗುಂಪಿನವರು, ಇವರಿಗೆ ಪ್ರೋತ್ಸಾಹದ ಅವಶ್ಯಕತೆ ತುಂಬ ಇರುತ್ತದೆ. ಪಾಠವನ್ನು ಸಹ ಒಂದಲ್ಲ ಎರಡು ಬಾರಿ ಹೇಳಿಕೊಡಬೇಕಾಗುತ್ತದೆ. ಇವರಲ್ಲಿ ಕೆಲವರು ‘ಎ’ ವಿಭಾಗದವರಿಗಿಂತ ಪ್ರತಿಭಾಶಾಲಿಗಳು. ಆದರೆ, ರಾಮಾಯಣದ ಹನುಮನಂತೆ ಅವರಿಗೆ ಅವರ ಸಾಮರ್ಥ್ಯದ ಅರಿವನ್ನು ಉಂಟುಮಾಡಿಸುವ ಅವಶ್ಯಕತೆ ಇರುತ್ತದೆ. ಯಾರಾದರು ಕೆಲಕಾಲವಾದರೂ ಅವರ ಜೊತೆಗಿದ್ದು ಪ್ರೋತ್ಸಾಹದ ನುಡಿಗಳನ್ನಾಡಿ ಮಾರ್ಗದರ್ಶನ ಮಾಡಿದರೆ ಮುಂದೆ ನಾಡಿಗೇ ಮಾರ್ಗದರ್ಶಿಗಳಾಗಬಲ್ಲವರು.

ಇವರಿಗೆ ಮನೆಯಲ್ಲಿನ ಸಮಸ್ಯೆಗಳು ಮಂಕು ಕವಿಸುತ್ತವೆ. ಇನ್ನು ‘ಸಿ’ ವಿಭಾಗದ ವಿದ್ಯಾರ್ಥಿಗಳಲ್ಲಿ ಅನೇಕ ಸಮಸ್ಯೆಗಳ ಜೊತೆಗೆ ಕೀಳಿರಿಮೆ ಸಹ ಇರುತ್ತದೆ. ಸಾಕಷ್ಟು ಭಯವೂ ಇರುತ್ತದೆ. ಇವರಿಗೆ ನಿರಂತರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಮನೆಯವರ ಒತ್ತಾಸೆ ಬೇಕಾಗುತ್ತದೆ. ಹಾಗಾದಾಗ ಮಾತ್ರ ಇವರು ಏನಾದರು ಮಾಡಬಲ್ಲರು.

ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಎ, ಬಿ ಮತ್ತು ಸಿ – ಈ ಮೂರು ವಿಭಾಗದ ಮಕ್ಕಳಲ್ಲಿ ಸಾಮರ್ಥ್ಯದ ಕೊರತೆಯಿರುವುದಿಲ್ಲ! ಹಾಗೆಯೇ, ಒಬ್ಬ ಶ್ರೀಮಂತ ಹಾಗೂ ಬುದ್ಧಿವಂತರ ಮನೆಯಲ್ಲಿ ಹುಟ್ಟಿದ ಮಗುವಿಗೂ, ದಟ್ಟಡವಿಯ ಆದಿವಾಸಿ ಮಗುವಿಗೂ ಸಾಮರ್ಥ್ಯದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ!

ಅವರವರಿಗೆ ಸಿಗುವ ಅವಕಾಶ ಹಾಗೂ ಮಾರ್ಗದರ್ಶನಗಳಿಂದ ಅವರ ಹಾದಿಗಳು ಬೇರೆ ಬೇರೆಯಾಗುತ್ತವೆ, ಅಷ್ಟೆ! ಅಂದರೆ, ನಮ್ಮ ಶಿಕ್ಷಣವ್ಯವಸ್ಥೆ ಎಲ್ಲರಿಗೂ ಸಮಾನವಾದ ಅವಕಾಶ, ಅಗತ್ಯ ಪ್ರೋತ್ಸಾಹ, ಬೆಂಬಲದ ವಾತಾವರಣವನ್ನು ನಿರ್ಮಿಸಿಕೊಟ್ಟರೆ ಎಲ್ಲರೂ ರಾಮನ್, ಚಂದ್ರಶೇಖರ್ ಮಟ್ಟಕ್ಕೆ ಬರುತ್ತಾರೆ. (ಇಲ್ಲಿನ ಉದಾಹರಣೆ ಉಪಮೆಯಾಗಿ ಮಾತ್ರ). ಸಮಾಜ ಏಕೆ ಇದನ್ನು ಮಾಡಿಕೊಡಬಾರದು, ಅದು ನಮ್ಮವೇ ಮಕ್ಕಳ ಒಳಿತಿಗಾಗಿ?!

ಈಗ ಹಿಂದಿನ ಸಮಸ್ಯೆಯ ವಿಶ್ಲೇಷಣೆಗೆ ಬರೋಣ. ಮನೆಯ ವಾತಾವರಣ ಮಕ್ಕಳಿಗೆ ಹೇಗೆಂದರೆ, ಗಿಡ–ಮರಗಳಿಗೆ ಮಣ್ಣಿದ್ದಂತೆ. ಇದರ ಪಕ್ವತೆ ಬಹಳ ಮುಖ್ಯ. ಮಕ್ಕಳು ಮೂಲತಃ ಭಾವಜೀವಿಗಳೂ ಆಗಿರುತ್ತಾರೆ. ಈಗ ಮನೆಯಲ್ಲಿ ತಂದೆ ಕುಡಿದು ಬಂದು ತಾಯಿಗೆ ಹೊಡೆಯುವುದು, ಗಲಾಟೆ ಮಾಡುವುದು, ಜಗಳ – ಇಂತಹ ವಾತಾವರಣವಿದ್ದಲ್ಲಿ, ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಲ್ಲಿಯೂ ಸಹ ಆ ಮಗು ‘ಎ’ ವಿಭಾಗದ್ದಾದರೆ ನಿಭಾಯಿಸಿಬಿಡುತ್ತದೆ.

ಮುಂದೆ ‘ಜೀವನದಲ್ಲಿ ಇಷ್ಟೆಲ್ಲ ಕಷ್ಟ, ಸಮಸ್ಯೆಗಳಿದ್ದರೂ’ ದೊಡ್ಡ ಸ್ಥಾನಕ್ಕೆ ಬಂದವನೆಂದು ಸಮಾಜ ಗುರುತಿಸುತ್ತದೆ. ಆದರೆ, ಪರಿಸ್ಥಿತಿಯನ್ನು ಎದುರಿಸಲಾಗದೇ ಹಾಗೆಯೇ ಕಮರಿ ಹೋಗುವವರ ಸಂಖ್ಯೆ ಬಹಳ ದೊಡ್ಡದಿದೆ. ಈ ಮಕ್ಕಳು ದೊಡ್ಡವರಾದ ಮೇಲಿನ (ಗಂಡನಾಗಿ, ಹೆಂಡಿತಿಯಾಗಿ, ತಂದೆ-ತಾಯಿಯಾಗಿ) ನಡೆವಳಿಕೆಯ ಮೇಲೆ ಬಾಲ್ಯದ ಅನುಭವಗಳು ಗಾಢವಾದ ಪರಿಣಾಮ ಬೀರುತ್ತವೆ.

ಇಂತಹ ಕಲುಷಿತ ವಾತಾವರಣವನ್ನು ಬದಲಾಯಿಸುವ ಅವಶ್ಯಕತೆ ತುಂಬಾ ಇದೆ.  ಇದರಲ್ಲಿ ಶಿಕ್ಷಣವ್ಯವಸ್ಥೆಗಿಂತ ಸಮಾಜದ ಪಾತ್ರ ದೊಡ್ಡದು. ಆದರೆ ಆ ಪರಿಹಾರ ಅಷ್ಟು ಸುಲಭವಲ್ಲ.

ಇನ್ನು ಕೆಲವು ಮನೆಗಳಿವೆ. ಊಟ, ಬಟ್ಟೆ, ಶಾಲೆಯ ಶುಲ್ಕದಂಥವುಗಳಿಗೆ ತೊಂದರೆಯಿರದ ಮಧ್ಯಮ ವರ್ಗದ ತುಸು ಶಕ್ತ ಕುಟುಂಬಗಳೆಂದೇ ಹೇಳಬಹುದು. ನೆಮ್ಮದಿಯ ಜೀವನಕ್ಕೆ ಬೇಕಾದ ಎಲ್ಲವೂ ಇರುತ್ತದೆ. ಆದರೂ, ಮನೆಯಲ್ಲಿ ಮೂರು ಹೊತ್ತೂ ಜಗಳ! ಇದು ಗಂಡ, ಹೆಂಡತಿ ನಡುವಿನದ್ದಿರಬಹುದು. ಅದಕ್ಕೆ ಮತ್ತೊಬ್ಬರ ತಬಲದ ಸಾಥಿಯೂ ಇರಬಹುದು!

ಎಲ್ಲರಿಗೂ ‘ಮನೆಯಲ್ಲಿ ನಾನೆಷ್ಟು ಮುಖ್ಯ, ಈ ಮನೆಗಾಗಿ ನಾನೆಷ್ಟು ಕಷ್ಟಪಡುತ್ತಿದ್ದೇನೆ’ – ಎಂದು ತೋರಿಸುವುದರಲ್ಲೇ ಆಸಕ್ತಿ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಅವಸ್ಥೆ ಏನಾಗಬೇಕು? ಅವರ ಶಿಕ್ಷಣ ಏನಾಗಬೇಕು? ಈ ಪರಿಸರದಲ್ಲಿ ಕೌಟುಂಬಿಕವಾಗಿ ತಂತಾನೆ ಸೃಷ್ಟಿಯಾಗುವ ಇನ್ನೊಂದು ಅಪಾಯವೇ ಸರೀಕರೊಂದಿಗಿನ ಅಸಮಾನತೆ. ಬರುವ ಆದಾಯವನ್ನು ಸೂಕ್ತವಾಗಿ ನಿರ್ವಹಿಸಿ ಸರೀಕರೊಂದಿಗೆ ಸಮಾನವಾಗಿ ನಿಲ್ಲುವ ಸಂದರ್ಭವೇ ಬರುವುದಿಲ್ಲ.

ಇರುವ ಸಮಯವೆಲ್ಲ ಜಗಳದಲ್ಲೇ ಮುಗಿದುಹೋಗಿರುತ್ತದೆ. ಇದರಿಂದ ಮತ್ತಷ್ಟು ತಳಮಳ, ಮನಸ್ತಾಪ. ಇನ್ನು  ಮಕ್ಕಳ ಭವಿಷ್ಯವನ್ನು ಕುರಿತು ಚೆನ್ನಾಗಿ ಯೋಚಿಸಿ ಅವರ ಸಾಮರ್ಥ್ಯಕ್ಕನುಗುಣವಾದ ತೀರ್ಮಾನಗಳನ್ನು ಯಾರು ತೆಗೆದುಕೊಳ್ಳುತ್ತಾರೆ? ಮಗುವಿಗೆ ಬೇಕಾಗಿರುವುದನ್ನು - ಅದು ಒಂದು ಅಪ್ಪುಗೆಯೇ ಆಗಿರಬಹುದು, ಒಂದು ಪ್ರೋತ್ಸಾಹದ ನುಡಿಯೇ ಆಗಿರಬಹುದು - ಯಾರು ಕೊಡುತ್ತಾರೆ? ಇಲ್ಲಿಯೂ ಮಕ್ಕಳ ಜೀವನ ಕಮರಿ ಹೋಗುತ್ತದೆ! ಒಣಪ್ರತಿಷ್ಠೆಗೆ ಕುಟುಂಬ, ಕೊನೆಗೆ ಸಮಾಜ ತೆರುವ ದಂಡ ಬಹುದೊಡ್ಡದು!

ಇಂತಹ ಪರಿಸರದಲ್ಲಿ ಬೆಳೆಯುವ ಮಕ್ಕಳಿಗೆ ಆತ್ಮವಿಶ್ವಾಸದ ಕೊರತೆಯಿರುತ್ತದೆ. ತಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸೋಲುತ್ತಾರೆ. ಇದು ಮೊದಲ ಹಂತದ ತೊಂದರೆಯಾದರೆ, ಎರಡನೆಯದು ಇನ್ನೂ ತೀವ್ರವಾದದ್ದು. ನಾವು ದೊಡ್ಡವರಾದರೆ ಮನೆಯಲ್ಲಿ ಇಂಥದೇ ವಾತಾವರಣವಿರುತ್ತದೆ. ಇಂಥ ಜೀವನ ಏಕಾಗಿ ನಡೆಸಬೇಕು ಎಂಬ ಪ್ರಶ್ನೆ ಮೂಡಿ ಬದುಕಿನ ಸಾಧ್ಯತೆಗಳ ಬಗ್ಗೆಯೇ ಗೊಂದಲಗಳನ್ನು, ಅಪನಂಬಿಕೆಗಳನ್ನು ಬೆಳೆಸಿಕೊಂಡುಬಿಡುತ್ತಾರೆ.

ಮತ್ತೆ ಕೆಲವು ಮಕ್ಕಳು - ನಾನು ಕಂಡಂತೆ - ಮನೆಯಲ್ಲಿನ ಜಗಳವನ್ನು ನಿಲ್ಲಿಸುವುದು ಹೇಗೆ ಎಂದು ಸಾಕಷ್ಟು ಯೋಚಿಸುತ್ತಾರೆ. ಆದರೆ, ಅದು ಅವರ ಸಾಮರ್ಥ್ಯವನ್ನು ಮೀರಿದ್ದಾಗಿರುತ್ತದೆ.  ಇವರು ಒಂದೋ ಮೌನಿಗಳಾಗಿ ಬಿಡುತ್ತಾರೆ, ಇಲ್ಲವೇ ಚೇಷ್ಟೆ-ಗಲಾಟೆಯ ವಿದ್ಯಾರ್ಥಿಗಳಾಗುತ್ತಾರೆ. ಆತ್ಮಹತ್ಯೆ ಕುರಿತಾಗಿ ಯೋಚಿಸುವವರೂ ಉಂಟು. ಇವನ್ನು ಸರಿಪಡಿಸಲು ಇವರಿಗೆ ಆಪ್ತಸಮಾಲೋಚನೆಯ ಅವಶ್ಯಕತೆಯೂ ಬೇಕಾಗುತ್ತದೆ.

ಬೆಳಕು ಎಲ್ಲಿಂದಲಾದರು ದೊರಕಿದಲ್ಲಿ ಇವರು ಈ ಗೋಜಲುಗಳಿಂದ ಹೊರಬರುತ್ತಾರೆಯಾದರೂ ಅನೇಕರು ಈ ಕತ್ತಲಿನಲ್ಲಿ ಕರಗಿ ಹೋಗುತ್ತಾರೆ. ದೊಡ್ಡವರಾಗಿ ಮತ್ತೆ ಇಂಥದೇ ವಾತಾವರಣವನ್ನು ತಮ್ಮ ಸುತ್ತ ನಿರ್ಮಿಸುತ್ತಾರೆ. ಈ ವಿಷಚಕ್ರ ಮುಂದುವರೆಯುತ್ತದೆ. ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳನ್ನು ಬೇರೆಯಾಗಿಯೇ ಬರೆಯಬೇಕು.

ಹೊರಗಿನ ಸ್ಪರ್ಧಾಪ್ರಪಂಚ ಇವನ್ನೆಲ್ಲಾ ಲೆಕ್ಕಕಿಡುವುದೇ? ಪೋಷಕರು ಯೋಚಿಸಬೇಕು. ನಿಜ, ಇಂದು ಅವಕಾಶಗಳ ಮಹಾಪೂರವೇ ಹರಿದಿದೆ. ಒಂದೆಡೆ ಸೋಲಾದಲ್ಲಿ ಅದೇ ಅಂತಿಮವಾಗಬೇಕಾಗಿಲ್ಲ. ಆದರೆ, ಈ ಮಕ್ಕಳಿಗೆ ತಿಳಿಹೇಳಿ, ಹರಿದುಂಬಿಸಿ ಮತ್ತೆ ಬದುಕಿಗೆ ಕರೆತರುವವರಾರು? ಹೇಗೆ? ಇನ್ನು ತಂದೆಯೋ ತಾಯಿಯೋ (ಅಥವಾ ಇಬ್ಬರೂ) ಇಲ್ಲದೆ, ಸಂಬಂಧಿಕರ ಮನೆಗಳಲ್ಲಿ ಬೆಳೆವ ಮಕ್ಕಳ ಕಥೆ  ಇನ್ನೂ ಭಿನ್ನವಾಗಿರುತ್ತದೆ, ದಾರುಣವೂ ಆಗಿರಬಹುದು.

ಅಂಥ ಮಕ್ಕಳ ಪೋಷಕರು, ‘ಇದೊಂದು ಪುಣ್ಯಕಾರ್ಯ. ಅಲ್ಲಿ ಕಡೆಯ ಪಕ್ಷ ವಾತಾವರಣದ ಸಮಸ್ಯೆಯಿರುವುದಿಲ್ಲ. ಮತ್ತೆ ಕೆಲವು ಕುಟುಂಬಗಳಲ್ಲಿ ಎಲ್ಲದಕ್ಕೂ ಇತರ ಸಂಬಂಧಿಕರ ಮಾತುಗಳನ್ನು, ಸಲಹೆಗಳನ್ನು ಕೇಳಿ ತಮ್ಮ ಮನೆಗೆ ಅದನ್ನು ವಿವೇಚನೆಯಿಲ್ಲದೆ ಅನ್ವಯಿಸಹೋಗಿ ಅದು ಯಶಸ್ವಿಯಾಗದೆ ಗೊಂದಲದ ಗೂಡನ್ನಾಗಿ ಮಾಡಿಕೊಂಡಿರುತ್ತಾರೆ. ಇಲ್ಲಿಯೂ ಸಹ ಬಲಿಪಶುಗಳು ಮಕ್ಕಳೇ!

ಪರಿಹಾರ: ಒಂದೇ ಶಾಲೆ, ಒಂದೇ ಶಿಕ್ಷಕರು, ಒಂದೇ ಪುಸ್ತಕ, ಪೂರಕವ್ಯವಸ್ಥೆಗಳಿದ್ದರೂ ಫಲಿತಾಂಶಗಳು ಬೇರೆ ಬೇರೆಯಾಗಿರಲು ಬಹುದೊಡ್ಡ ಕಾರಣವೇ ಮನೆಯಲ್ಲಿನ ವಾತಾವರಣ! ಪರಿಹಾರ ಬಹಳ ಕ್ಲಿಷ್ಟವಾದದ್ದು. ಏಕೆಂದರೆ ಸಮಸ್ಯೆಯಿದೆ ಎಂದೇ ತಿಳಿದಿರುವುದಿಲ್ಲ ಮತ್ತು ಮನೆಯಲ್ಲಿ ಸಮಸ್ಯೆ ಎಂಬುದನ್ನು ಒಪ್ಪಿಕೊಳ್ಳಲು ಅವರು ತಯಾರಿರುವುದಿಲ್ಲ! ‘ನಾವು ಹಿರಿಯರು ಏನಾದರು ಮಾಡಿಕೊಳ್ಳುತ್ತೇವೆ.

ಇವನಿಗ್ಯಾಕೆ ಮೂಳಚಾಷ್ಟೆ! ಸುಮ್ಮನೆ ಓದುವುದನ್ನು ನೋಡಲಿ’ ಎಂದು ವಿಶ್ವೇಶ್ವರಯ್ಯ ಬೀದಿ ದೀಪದ ಕೆಳಗೆ ಓದಿ ಎಂಜಿನಿಯರಾದರು ಎನ್ನುವವರೇ ಹೆಚ್ಚು! (ಬೀದಿ ದೀಪದಲ್ಲಿ ಓದಿದವರಿಗೆ ಮನೆಯ ಜಗಳದ ಸಮಸ್ಯೆಯಿರುವುದಿಲ್ಲ ಎಂಬುದು ಇವರಿಗೆ ಹೊಳೆಯದು!) ಶಾಲೆಯ ಪೋಷಕ-ಶಿಕ್ಷಕ ಸಭೆಗಳಲ್ಲಿ ಮನೆಯ ವಾತಾವರಣ ಪೂರಕವಾಗಿರಬೇಕಾದ ಅವಶ್ಯಕತೆಯನ್ನು ಅರೆದು ಹುಯ್ಯಬೇಕಾಗುತ್ತದೆ. ಇದನ್ನು ಅರಿತು ಪೋಷಕರು ನಿಧಾನವಾಗಿ ಬದಲಾಗಬೇಕು.

ಈ ಪ್ರಕ್ರಿಯೆ ಬಹಳ ನಿಧಾನವಾದದ್ದು. ಆದರು ಆಗಲೇಬೇಕಾದ್ದು.  ಮಗುವಿನ ಹಿಂದುಳಿಯುವಿಕೆಗೆ ಮನೆಯೂ ಕಾರಣವಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಲುದೊಡ್ಡ ಹಂತ. ಆನಂತರ, ಮನೆಯಲ್ಲಿ ಜಗಳದ ವಾತಾವರಣವಿದ್ದಲ್ಲಿ ಮಕ್ಕಳು ಓದಲಾಗುವುದಿಲ್ಲ. ಬದಲಾಗಿ, ಮಕ್ಕಳು ಭಯಗೊಂಡು ಮಾನಸಿಕವಾಗಿ ಹಿಂಜರಿಯುತ್ತಾರೆ ಎಂಬುದನ್ನು ಅರಿಯಬೇಕು.

ಮಕ್ಕಳಿಗಾಗಿಯಾದರೂ ತಮ್ಮ ಒಣಜಂಭ, ಪ್ರತಿಷ್ಠೆಗಳನ್ನು ಬದಿಗಿಟ್ಟು ಮನೆಯ ವಾತಾವರಣವನ್ನು ತಿಳಿಗೊಳಿಸಬೇಕು, ಪ್ರೀತಿಯ ಬಹುದೊಡ್ಡ ಸೆಲೆಯನ್ನಾಗಿಸಬೇಕು. ಇದಕ್ಕಾಗಿ ಮನೆಯ ಯಾರಾದರು ಕೆಲವು ತ್ಯಾಗಗಳನ್ನು ಮಾಡಬೇಕಾಗಿ ಬಂದರೂ ಸರಿಯೇ. ಪರಸ್ಪರ ಪ್ರೀತಿ, ಆಸರೆ, ಬೆಂಬಲ ಮತ್ತು ಪ್ರೋತ್ಸಾಹಗಳನ್ನು ಕೊಡುವ ಮೂಲ ಸೆಲೆ ‘ನಮ್ಮ ಮನೆ’ಯಾಗಬೇಕು. ಆಗ ನಮ್ಮ ಮಕ್ಕಳು ಮನೆಯೊಳಗೆ ಬೇರು ಬಿಟ್ಟು ಜಗದಗಲ ಕೊಂಬೆರೆಂಬೆಗಳನ್ನು ಚಾಚುತ್ತಾರೆ, ದಿಙ್ಮಂಡಲಗಳ ಅಂಚನ್ನು ಮುಟ್ಟುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT