ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಡುಗನನ್ನೇ ಕುಣಿಸುವೆ’

ಕಿರುತೆರೆ
Last Updated 7 ಮೇ 2017, 19:30 IST
ಅಕ್ಷರ ಗಾತ್ರ

*ನಿಮ್ಮೂರು, ಶಿಕ್ಷಣ...
ಊರು ಚಿತ್ರದುರ್ಗ. ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಮುಗಿಸಿದ್ದೇನೆ. ಉದಯ ಮ್ಯೂಸಿಕ್‌ನಲ್ಲಿ ನಿರೂಪಕಿ ಆಗಿದ್ದೆ.

*‘ಅರಿಗಿಣಿ’ಯಲ್ಲಿ ಲವಲವಿಕೆಯಿಂದ ಇದ್ರಿ, ಇದರಲ್ಲೂ ಹಾಗೇನಾ?
ಎರಡೂ ಪಾತ್ರಗಳಿಗೂ ತುಂಬಾ ವ್ಯತ್ಯಾಸವಿದೆ. ಹಿಂದೆ ತುಂಟ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಆದರೆ ಇಲ್ಲಿ ಜವಾಬ್ದಾರಿ ಇರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಮನೆಯಲ್ಲಿ ತಂಗಿಯ ಜೊತೆಗಷ್ಟೇ ತಮಾಷೆಯಾಗಿರುತ್ತೇನೆ. ಕೆಲವೊಂದು ಸನ್ನಿವೇಶಗಳಲ್ಲಿ ಮಾತ್ರವೇ ಹಿಂದಿನ ಖುಷಿ ಪಾತ್ರ ನೆನಪಾಗುತ್ತದೆ.

*ಕಷ್ಟಗಳ ಸರಮಾಲೆ ಇರಲಿದೆಯೇ?
ಧಾರಾವಾಹಿ ಎಂದ ಮೇಲೆ  ಗ್ಲಿಸರಿನ್‌ ಬಳಕೆ ಇರಲೇ ಬೇಕಲ್ವಾ. ಜನರನ್ನು ಅಳಿಸಿದಷ್ಟೂ ಅವರು ಮತ್ತೊಮ್ಮೆ– ಮಗದೊಮ್ಮೆ ನಮ್ಮನ್ನು ನೋಡುತ್ತಾರೆ.   ಇಲ್ಲಿಯೂ ಅಷ್ಟೇ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತೇನೆ. ಆದರೂ ಇದು ಪಾಸಿಟಿವ್‌ ಪಾತ್ರ.

*ನಿಮ್ಮ ಗಂಡ ಹೇಗಿರಬೇಕು?
ಸುದೀಪ್‌ ತರಹ ಇರಬೇಕು.

*ಹುಡುಗ ನೋಡಲು ಬಂದಾಗ ಹಾಡು, ಡಾನ್ಸ್‌ ಮಾಡಲು ಹೇಳಿದರೆ ಏನು ಮಾಡುತ್ತೀರಾ? 
ಈಗ ಕಾಲ ಬದಲಾಗಿದೆ. ಅವನನ್ನೇ ಕುಣಿಸಿದರೆ ಆಯಿತು.

*ಕಾಲೇಜಿನಲ್ಲಿ ರೌಡಿಗಳ ಜೊತೆಗೆ ಜಗಳ ಆಡಿದ್ರಂತೆ?
ಅದು ಅವರು ರೌಡಿಗಳು ಅಂತ ಗೊತ್ತಿಲ್ಲದೆ ಮಾಡಿಕೊಂಡ ಎಡವಟ್ಟು. ಯಾವುದೋ ಕಾರಣಕ್ಕೆ ಚೆನ್ನಾಗಿ ಜಗಳವಾಡಿ ಬಂದಿದ್ದೆ. ಅವರು ರೌಡಿಗಳು ಎಂದು ಆಗ ಗೊತ್ತಿರಲಿಲ್ಲ. ಮುಂದೆ ಅವರಿಂದ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸ್ನೇಹಿತರು ಕರೆದುಕೊಂಡು ಹೋಗಿ ಕ್ಷಮೆ ಕೇಳಿಸಿದ್ದರು.

*ರಸ್ತೆಯಲ್ಲಿ ಜಗಳವಾಡಿದ್ದು ಏನಾದರೂ ಇದೆಯಾ?
ನಾನು ಜಗಳವಾಡಿಲ್ಲ. ಒಮ್ಮೆ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ನಿನಗಿಂತ ನಾನು ಚೆನ್ನಾಗಿದ್ದೀನಿ. ನಾನೇ ಖುಷಿ ಪಾತ್ರ ಮಾಡಬೇಕಾಗಿತ್ತು.  ಸಿದ್ದಾರ್ಥನನ್ನು ನನಗೆ ಬಿಟ್ಟು ಕೊಡು ಎಂದು ರಸ್ತೆಯಲ್ಲಿಯೇ ಜಗಳವಾಡಿದ್ದರು. ಆಗ ಸ್ವಲ್ಪ ಭಯವಾಗಿತ್ತು. ಈಗ ನೆನಪಾದರೆ ತಮಾಷೆ ಎನಿಸುತ್ತದೆ. ಅವರು ಸುಂದರವಾಗಿದ್ದಿದ್ದು ನಿಜ.

*ಪಾತ್ರಕ್ಕೆ ಹೇಗೆ ತಯಾರಾಗ್ತೀರಿ?
ಹಿಂದಿನ ಪಾತ್ರಗಳಿಗಿಂತ ಇದು ಭಿನ್ನ. ಪ್ರಬುದ್ಧ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದೇನೆ.  ಅಭಿನಯ ಹೆಚ್ಚು ಮಾಡುವ ಅವಶ್ಯಕತೆಯಿಲ್ಲ.   ಸಹಜವಾಗಿಯೇ ನಟಿಸಬೇಕು. ಇದೇ ಕಾರಣಕ್ಕೆ ಹೆಚ್ಚು ಗ್ಲಿಸರಿನ್‌ ಬಳಸುತ್ತಿಲ್ಲ.

*ಧಾರಾವಾಹಿಯ ಪಾತ್ರಕ್ಕೂ, ನಿಮಗೂ ಹೋಲಿಕೆಯಿದೆಯಾ?
ಕೆಲವು ಸನ್ನಿವೇಶಗಳು ನನ್ನ ಜೀವನಕ್ಕೆ ತುಂಬಾ ಹತ್ತಿರವಾಗುತ್ತವೆ. ಕಾರಣವೇ ಇಲ್ಲದೇ ಬೈಸಿಕೊಳ್ಳುವಾಗ ಹೀಗೆ ನನ್ನ ಜೀವನದಲ್ಲಿಯೂ ಆಗಿದೆ ಅಲ್ವಾ ಅನಿಸುತ್ತಿರುತ್ತದೆ.

*ಯಾವ ರೀತಿಯ ಪಾತ್ರ ಮಾಡುವ ಆಸೆಯಿದೆ?
ಲುಕ್‌ಗಿಂತ ನಟನೆಗೆ ಪ್ರಾಮುಖ್ಯ ನೀಡುತ್ತೇನೆ. ಹಾಗಾಗಿ ಗ್ಲಾಮರಸ್‌ ಆಗಿ ಕಾಣಿಸುವುದಕ್ಕಿಂತ ತೂಕದ ಪಾತ್ರವಿರಬೇಕು. ಪೌರಾಣಿಕ ಪಾತ್ರಗಳಿಗೆ ಬಣ್ಣ ಹಚ್ಚುವ ಆಸೆಯಿದೆ.

*ಇಷ್ಟದ ಸ್ಥಳ ಯಾವುದು?
ಮನಾಲಿ. ಒಮ್ಮೆ ಹೋಗಿದ್ದೇನೆ.  ಮಂಜಿನ ಉಂಡೆ ಮಾಡಿ ಅಮ್ಮನಿಗೆ ಅದರಿಂದ ಹೊಡೆದು ಆಡಬೇಕೆನ್ನುವ ಕನಸಿದೆ.

*ಫಿಟ್‌ನೆಸ್‌ ರಹಸ್ಯವೇನು?
ನೋಡೋಕೆ ತುಂಬಾ ಸಣ್ಣಗಿರುವುದರಿಂದ ಡಯಟ್‌ ಅವಶ್ಯಕತೆ ಇಲ್ಲ. ಊಟ, ತಿಂಡಿ ನೋಡಿದ ತಕ್ಷಣ ತಿನ್ನಬೇಕು ಅನ್ಸುತ್ತೆ ಆದರೆ ಸ್ವಲ್ಪ ಕಂಟ್ರೋಲ್‌ ಮಾಡ್ತೀನಿ. ಸ್ಪ್ಯಾನಿಷ್‌ ಫುಡ್‌, ಅದರಲ್ಲೂ ನಾನ್‌ವೆಜ್‌ ತುಂಬಾನೇ ಇಷ್ಟ. ನೀರು, ಹಣ್ಣನ್ನು ಚೆನ್ನಾಗಿ ಸೇವಿಸುತ್ತೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT