ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶಕ್ಕೆ ಇರಲಿ ಸಮಚಿತ್ತದ ಸ್ಪಂದನ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಪರೀಕ್ಷೆಯಲ್ಲಿ ಸೋತ ತಕ್ಷಣ ಜೀವನದಲ್ಲಿ ಸೋತಂತೆಯೂ ಅಲ್ಲ. ಈ ಬಾರಿಯ ಸೋಲು, ಮುಂದಿನ ದೊಡ್ಡ ಗೆಲುವಿಗೆ ಹಾದಿ. ಹಾಗಾಗಿ ಉತ್ತೀರ್ಣರಾಗಿರಲಿ, ಅನುತ್ತೀರ್ಣರಾಗಿರಲಿ ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸಿ.

ಪರೀಕ್ಷೆಗಳು ಮುಗಿದಿವೆ. ಫಲಿತಾಂಶಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೀರಲ್ಲವೆ? ಇಡೀ ವರ್ಷದಲ್ಲಿ ನೀವು ಸಿದ್ಧತೆಗಾಗಿ ಮಾಡಿರುವ ಪ್ರಯತ್ನ, ಪಟ್ಟಿರುವ ಶ್ರಮ, ಎಷ್ಟರ ಮಟ್ಟಿಗೆ ಫಲ ಕೊಟ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ನಿಮಗೆ ಹಾಗೂ ನಿಮ್ಮ ಪೋಷಕರಿಗೆ ಕುತೂಹಲ ಹಾಗೂ ನಿರೀಕ್ಷೆ ಇರುವುದು ಸಹಜವೇ. ಜೊತೆಗೆ, ಫಲಿತಾಂಶದ ಬಗ್ಗೆ ಕೊಂಚ ಆತಂಕವೂ ನಿಮ್ಮಲ್ಲಿ ಕೆಲವರಿಗೆ ಇರಬಹುದು. ಯಾವುದೇ ರೀತಿಯ ಆತಂಕಕ್ಕೆ ಅಥವಾ ಭಯಕ್ಕೆ ಒಳಗಾಗಬೇಡಿ.

ನಿಮ್ಮ ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳಿ. ಪರೀಕ್ಷೆಯ ಫಲಿತಾಂವು ನಿಮ್ಮ ಭವಿಷ್ಯ ಜೀವನದ ಸೂಚಕವಲ್ಲ ಎಂಬುದನ್ನು ನೆನಪಿಡಿ. ನೀವು ಬರೆದ ಹತ್ತನೇ ತರಗತಿಯ ಅಥವಾ ಎರಡನೇ ಪಿ. ಯು. ಪರೀಕ್ಷೆಯ ಫಲಿತಾಂಶ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ.

ಈ ಸಂದರ್ಭದಲ್ಲಿ ನಿಮ್ಮ ಹಾಗೂ ನಿಮ್ಮ ಪೋಷಕರ ಮನಃಸ್ಥಿತಿ ಹೇಗಿರಬೇಕು, ಬಂದಿರುವ ಫಲಿತಾಂಶವನ್ನು ಹೇಗೆ ಸ್ವೀಕರಿಸಬೇಕು – ಎಂಬ ಬಗ್ಗೆ ಕೆಲವು ಅಭಿಪ್ರಾಯಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಫಲಿತಾಂಶ ನೀವು ನಿರೀಕ್ಷಿಸಿದಂತೆಯೇ ಇದೆಯೇ? ಒಂದು ವೇಳೆ, ಫಲಿತಾಂಶವು ನಿಮ್ಮ ನಿರೀಕ್ಷೆಗೆ ಅನುಗುಣವಾಗಿಯೇ ಇದ್ದು, ಉತ್ತಮ ಅಂಕಗಳು ನಿಮಗೆ ದೊರೆತಿದೆ ಎಂದಾದಲ್ಲಿ ನೀವು ನಿಮ್ಮ ಮುಂದಿನ ಅಧ್ಯಯನಕ್ಕೆ ಸಿದ್ಧತೆ ಪ್ರಾರಂಭಿಸಬೇಕು. ಹತ್ತನೆಯ ತರಗತಿ ಪಾಸಾದ ವಿದ್ಯಾರ್ಥಿಗಳು ಪದವಿಪೂರ್ವ ತರಗತಿಗೆ ಪ್ರವೇಶ ಪಡೆಯಬೇಕು.

ಇದಕ್ಕೆ ಪೂರ್ವಭಾವಿಯಾಗಿ, ಪದವಿಪೂರ್ವ ಹಂತದಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾವಿಭಾಗಗಳಲ್ಲಿ ಯಾವುದಕ್ಕೆ ಪ್ರವೇಶ ಪಡೆಯಬೇಕೆಂಬುದನ್ನು ಈಗಲೇ ನಿರ್ಧರಿಸಿಕೊಳ್ಳುವುದು ಒಳ್ಳೆಯದು. ಅಷ್ಟೇ ಅಲ್ಲ, ಯಾವ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನೂ ಸಹ ನೀವು ಈಗಲೇ ನಿರ್ಧರಿಸಿಕೊಳ್ಳುವುದು ಅತ್ಯವಶ್ಯಕ. ನಿಮ್ಮ ಪೋಷಕರೊಂದಿಗೆ, ಹಿರಿಯರೊಂದಿಗೆ ಈ ಬಗ್ಗೆ ಚರ್ಚಿಸಿ.

ಅವಶ್ಯವೆನಿಸಿದಲ್ಲಿ, ನಿಮ್ಮ ಶಿಕ್ಷಕರ ಸಲಹೆ ಪಡೆದುಕೊಳ್ಳಿ. ಅದಕ್ಕೆ ಅನುಗುಣವಾಗಿ, ನಿಮ್ಮ ಮನೆಯ ಸಮೀಪವೇ ಇರುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಿ. ಮುಂದಿನ ಎರಡು ವರ್ಷ ಪಿ.ಯು. ತರಗತಿಯಲ್ಲಿ ನೀವು ಸಾಕಷ್ಟು ಪರಿಶ್ರಮ ಪಡಬೇಕು. ದೂರದ ಯಾವುದೋ ಕಾಲೇಜು ಸೇರಿದರೆ, ಓಡಾಟದಲ್ಲಿಯೇ ನಿಮ್ಮ ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಸಹಪಾಠಿಗಳ ಆಯ್ಕೆಯೇ ನಿಮಗೆ ಆದರ್ಶವಾಗಬೇಕಿಲ್ಲ. ನಿಮ್ಮ ಆಸಕ್ತಿ, ಅಭಿರುಚಿ ಹಾಗೂ ಅನುಕೂಲ ಇಲ್ಲಿ ಮುಖ್ಯವಾಗಬೇಕು.

ಎರಡನೇ ಪಿ. ಯು. ಪರೀಕ್ಷೆ ಬರೆದಿರುವ ವಿಜ್ಞಾನದ ವಿದ್ಯಾರ್ಥಿಗಳು ಈಗಷ್ಟೆ ಸಿ.ಇ.ಟಿ., ನೀಟ್ ಮುಂತಾದ ಪ್ರವೇಶಪರೀಕ್ಷೆಗಳನ್ನು ಮುಗಿಸಿರುವುದರಿಂದ ಆ ಪರೀಕ್ಷೆಗಳ ಫಲಿತಾಂಶ ಬರುವವರೆಗೆ ನಿರಾಳವಾಗಿರಬಹುದು. ಅಲ್ಲಿ ನೀವು ಪಡೆದುಕೊಳ್ಳುವ ರ್‍ಯಾಂಕ್‌ನ ಆಧಾರದ ಮೇಲೆ ನಿಮ್ಮ ಮುಂದಿನ ಅಧ್ಯಯನದ ಹಾದಿ ನಿರ್ಧಾರವಾಗುತ್ತದೆ. ವಾಣಿಜ್ಯ ಹಾಗೂ ಕಲಾವಿಭಾಗದ ವಿದ್ಯಾರ್ಥಿಗಳು ಸಂಬಂಧಿಸಿದ ಪದವಿ ಅಧ್ಯಯನಕ್ಕಾಗಿ ಸೂಕ್ತ ಕಾಲೇಜೊಂದಕ್ಕೆ ಪ್ರವೇಶ ಪಡೆಯಬೇಕಾಗುತ್ತದೆ.

ನೀವು ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲವೇ? ಮೇಲಿನ ಯಾವುದೇ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾಗಿದ್ದು, ನೀವು ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲವೆಂದಾದಲ್ಲಿ, ಅದರಿಂದ ಧೃತಿಗೆಡುವ ಅವಶ್ಯಕತೆ ಇಲ್ಲ. ಕಡಿಮೆ ಅಂಕಗಳು ಬಂದಿವೆ ಎಂದ ಮಾತ್ರಕ್ಕೆ ನಿಮ್ಮ ಭವಿಷ್ಯವೇ ಮಸುಕಾಯಿತು ಎಂದು ಭಾವಿಸಬೇಡಿ. ಅದಕ್ಕೆ ನೆಪವನ್ನಾಗಲೀ, ಕಾರಣವನ್ನಾಗಲೀ ಹುಡುಕದೆ ಆತ್ಮಾವಲೋಕನ ಮಾಡಿಕೊಳ್ಳಿ. ಬೇರೆಯವರಿಗಿಂತ  ಭಿನ್ನವಾಗಿ ಯೋಚಿಸಿ.

ನಿಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಸಾಗಬೇಕಾದ ಹಾದಿಯ ಕಡೆ ಗಮನ ಹರಿಸಿ. ಜೀವನದಲ್ಲಿ ಮುಂದೆ ಬರಲು ಹಲವು ಮಾರ್ಗಗಳಿವೆ. ಹತ್ತನೇ ತರಗತಿ ಅಥವಾ ಎರಡನೇ ಪಿ. ಯು. ತರಗತಿಯ ನಂತರ ಉದ್ಯೋಗಕ್ಕೆ ಪೂರಕವಾದ ಹಲವು ಬಗೆಯ ವೃತ್ತಿಪರ ಕೋರ್ಸ್‌ಗಳಿಗೆ ಸೇರಬಹುದಾದ ಅವಕಾಶಗಳು ನಿಮ್ಮ ಮುಂದಿವೆ.

ಇದೇ ಪುರವಣಿಯಲ್ಲಿ ಈ ಹಿಂದೆ ಪ್ರಕಟವಾದ ಲೇಖನಗಳಲ್ಲಿ ಅಂಥ ಹಲವಾರು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಅವುಗಳ ಉಪಯೋಗ ಪಡೆದುಕೊಂಡು ನೀವೇ ಸೂಕ್ತ ನಿರ್ಧಾರಕ್ಕೆ ಬನ್ನಿ. ಆಪ್ತರೊಂದಿಗೆ ಚರ್ಚಿಸಿ, ಮಾರ್ಗದರ್ಶನ ಪಡೆದುಕೊಳ್ಳಿ.

ಅನುತ್ತೀರ್ಣರಾದ ಮಾತ್ರಕ್ಕೆ ಆಕಾಶ ಕಳಚಿ ಬೀಳುವುದೇ? ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ನಿರಾಶರಾಗಬಾರದು. ದುಡುಕಿನ ನಿರ್ಧಾರಕ್ಕೆ ಬರಬಾರದು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಮಹತ್ಸಾಧನೆಯಲ್ಲ. ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ವ್ಯಕ್ತಿಗಳು ಇಂಥ ಪರಿಸ್ಥಿತಿಯನ್ನು ಎದುರಿಸಿದ್ದರೆಂಬುದನ್ನು ನೆನಪು ಮಾಡಿಕೊಳ್ಳಿ.

ಕನ್ನಡಕ್ಕೆ ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗದಂಥ ಮಹಾನ್ ಕೃತಿಗಳನ್ನು ನೀಡಿದ  ಡಿ. ವಿ. ಗುಂಡಪ್ಪನವರು ಓದಿದ್ದು ಹತ್ತನೆಯ ತರಗತಿಯವರೆಗೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್, ಕ್ರಿಕೆಟ್ ಆಟದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮುಂತಾದ ಅನೇಕ ಖ್ಯಾತನಾಮರು ಓದಿದ್ದು ಮೆಟ್ರಿಕ್ಯುಲೇಷನ್‌ವರೆಗೆ ಮಾತ್ರ !

ನಿಮ್ಮನ್ನು ಗೆಲುವಿನ ಎತ್ತರಕ್ಕೆ ಕೊಂಡೊಯ್ಯಲು ಮೊದಲ ಮೆಟ್ಟಿಲಾಗಲಿ. ಬೇಡದ ಅಲೋಚನೆಗಳ ಕಡೆಗೆ ಮನಸ್ಸು ಹರಿಯದಂತೆ ನೋಡಿಕೊಳ್ಳಿ. ನಿಮ್ಮ ಪೋಷಕರು ನಿಮ್ಮ ಪರೀಕ್ಷಾ ಫಲಿತಾಂಶಕ್ಕಿಂತ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಸೋಲಿಗೆ ನಿಮ್ಮದೇ ಆದ ಕಾರಣಗಳಿದ್ದರೆ ಅದನ್ನು ನಿಮ್ಮ ಪೋಷಕರೊಂದಿಗೆ, ಹಿರಿಯರೊಂದಿಗೆ ಹಾಗೂ ಹಿತೈಷಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಅವರ ಸಲಹೆಗಳನ್ನು ಪಡೆದುಕೊಳ್ಳಿ.

ಅನುತ್ತೀರ್ಣರಾದ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಹಾಳಾಗಬಾರದೆಂಬ ಕಾರಣಕ್ಕಾಗಿಯೇ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈಗ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ನಪಾಸಾದ ವಿಷಯಗಳಲ್ಲಿ ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ಅಧ್ಯಯನ ನಡೆಸಿ ಈ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೇ ವರ್ಷ ವಿದ್ಯಾಭ್ಯಾಸವನ್ನು ಮುಂದುವೆರಸಬಹುದಲ್ಲವೇ?

ಒಂದು ವೇಳೆ ಇದು ಸಾಧ್ಯವಾಗದೇ ಹೋದಲ್ಲಿ, ಪರ್ಯಾಯವಾದ ಕೋರ್ಸ್‌ಗಳಿಗೆ ಸೇರುವ ಬಗ್ಗೆ ಯೋಚಿಸಬಹುದಲ್ಲವೆ? ಕಾರಣಾಂತರಗಳಿಂದ ಶಿಕ್ಷಣ ಮುಂದುವರೆಸಲು ಸಾಧ್ಯವಾಗದಿದ್ದರೆ, ಉದ್ಯೋಗಕ್ಕೆ ಸೇರುವ ಪ್ರಯತ್ನ ಮಾಡಬಹುದಲ್ಲವೆ?

ದೇಶದ ಅಂಚೆ ಹಾಗೂ ರಕ್ಷಣಾ ಇಲಾಖೆಗಳಲ್ಲಿ ಹತ್ತನೇ ತರಗತಿಯ ಕನಿಷ್ಠ ವಿದ್ಯಾರ್ಹತೆ ಇರುವ ಉದ್ಯೋಗಾವಕಾಶಗಳು ವಿಪುಲವಾಗಿದ್ದು, ಅವಶ್ಯಕತೆ ಇರುವವರು ಈ ನಿಟ್ಟಿನಲ್ಲಿ ಯೋಚಿಸಬಹುದು. ಎಂಪ್ಲಾಯ್‌ಮೆಂಟ್ ನ್ಯೂಸ್ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಇಂಥ ಅನೇಕ ಮಾಹಿತಿಗಳು ದೊರಕುತ್ತವೆ.

ಪೋಷಕರ ಕರ್ತವ್ಯವೇನು? ಫಲಿತಾಂಶದ ದಿನ ಹತ್ತಿರ ಬಂದಂತೆ ಅನೇಕ ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳಿಗಿಂತ ಹೆಚ್ಚಿನ ಮಟ್ಟದ ಆತಂಕಕ್ಕೆ ಒಳಗಾಗುತ್ತಾರೆ. ಮಕ್ಕಳು ಉತ್ತಮ ಅಂಕ ಗಳಿಸಿದರೆ ಒಂದು ಯುದ್ಧ ಗೆದ್ದಷ್ಟು ಸಂಭ್ರಮ ಪಡುವ ಪೋಷಕರು ಅದೇ ಅಂಕ ಕಡಿಮೆ ಬಂದರೆ ಅಥವಾ ಮಗು ನಪಾಸಾದರೆ, ತೀಕ್ಷ್ಣವಾಗಿ ಪ್ರತಿಕ್ರಯಿಸುವುದು ಸಹಜ. ಆದರೆ, ಈ ರೀತಿಯ ವರ್ತನೆ ಸರ್ವದಾ ಸಲ್ಲದು. ಇದೊಂದು ತಾತ್ಕಾಲಿಕ ಹಿನ್ನೆಡೆ ಎಂಬ ದೃಷ್ಟಿಯಲ್ಲಿ ಇದನ್ನು ವಿಶ್ಲೇಷಿಸುವುದು ಅತ್ಯಗತ್ಯ. ಹಾಗಾದರೆ, ಪೋಷಕರಾಗಿ ನೀವೇನು ಮಾಡಬಹುದು? 

ನಿಮ್ಮ ಮಗ ಅಥವಾ ಮಗಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಅಥವಾ ಅನುತ್ತೀರ್ಣರಾದರೆ, ಅದಕ್ಕೆ ಅವರನ್ನೇ ಹೊಣೆ ಮಾಡಿ ದೂಷಿಸುವ ಪ್ರಯತ್ನ ಮಾಡಬೇಡಿ. ಕಾರಣಗಳನ್ನು ಕೆದಕುವ ಪ್ರಯತ್ನವೂ ಬೇಡ. ಓರಗೆಯವರ ಜೊತೆಗೆ ಅಥವಾ ಸಹಪಾಠಿಗಳ ಜೊತೆಗೆ ಅವರನ್ನು ಹೋಲಿಸಿ ಹಂಗಿಸುವುದಾಗಲೀ, ಮೂದಲಿಸುವುದಾಗಲೀ ಖಂಡಿತ ಮಾಡಬೇಡಿ. ಇದು ನಿಮ್ಮ ಮಕ್ಕಳ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ.

ಆಗ, ಅವರ ಮನಸ್ಸು ಬೇಡದ ಆಲೋಚನೆಗಳ ಕಡೆಗೆ ಹರಿಯುತ್ತದೆ. ಬದಲಿಗೆ, ಮಕ್ಕಳನ್ನು ನಿಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಧೈರ್ಯವನ್ನು ತುಂಬುವ ಪ್ರಯತ್ನ ಮಾಡಿ. ಅಂಥ ಸಂದರ್ಭಗಳಲ್ಲಿ ಅವರನ್ನು ಒಂಟಿಯಾಗಿರಲು ಬಿಡಬೇಡಿ. ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಾತುಗಳನ್ನಾಡುತ್ತ, ಅವರನ್ನು ಪ್ರೋತ್ಸಾಹಿಸಿ. ಪರ್ಯಾಯ ಮಾರ್ಗಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ಅಗತ್ಯ ಬಿದ್ದರೆ ಶಿಕ್ಷಣ ಸಮಾಲೋಚಕರ (ಕೌನ್ಸೆಲ್ಲರ್) ಬಳಿಗೆ ಅವರನ್ನು ಕರೆದುಕೊಂಡು ಹೋಗಿ, ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ.

ಪೋಷಕರೇ ನೆನಪಿಡಿ. ನಿಮ್ಮ ಮಗು ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕೆಂಬ ಹಠ ಬೇಡ. ಎಲ್ಲರಿಗೂ ಅದನ್ನು ಸಾಧಿಸಲು ಸಾಧ್ಯವಿಲ. ನಿಮ್ಮ ಮಗುವಿನ ಪರೀಕ್ಷಾ ಫಲಿತಾಂಶಕ್ಕಿಂತ ಹೆಚ್ಚಿನ ಆದ್ಯತೆ ನಿಮ್ಮ ಮಗುವಿನ ಅಭ್ಯುದಯದ ಕಡೆಗಿರಲಿ. ನಿಮ್ಮ ಮಗುವಿನಲ್ಲಿರುವ ಆಸಕ್ತಿಯನ್ನು ಗಮನಿಸಿ ಅದಕ್ಕೆ ಪೂರಕವಾದ ವಾತಾವರಣವನ್ನು ಒದಗಿಸಿಕೊಡಿ.

ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯ ಭಿನ್ನವಾಗಿರುತ್ತದೆ. ಅದನ್ನು ಗುರುತಿಸಿ ನೀರೆರೆದು ಪೋಷಿಸುವ ಜವಾಬ್ದಾರಿ ನಿಮ್ಮದು. ಬಲವಂತವಾಗಿ ನಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರಿ, ಅವರಿಂದ ಸಾಧಿಸಲಾಗದ್ದನ್ನು ನಿರೀಕ್ಷಿಸುವುದು ಸರಿಯಲ್ಲ. ಹಾಗಾಗಿ, ಬಂದಿರುವ ಫಲಿತಾಂಶ ಹೇಗೇ ಇರಲಿ, ಅದನ್ನು ಸಮಚಿತ್ತದಿಂದ ಸ್ವೀಕರಿಸಿ.

ವಿಶ್ವವಿಖ್ಯಾತ ಬ್ಯಾಸ್ಕೆಟ್ ಬಾಲ್ ಆಟಗಾರ ಮೈಖೇಲ್ ಜೋರ್ಡಾನ್ ಹೀಗೆ ಹೇಳಿದ್ದಾನೆ: ನಾನು ನನ್ನ ಕ್ರೀಡಾಜೀವನದಲ್ಲಿ  ಒಂಬತ್ತು ಸಾವಿರ ಬಾರಿ ಚೆಂಡನ್ನು ಬುಟ್ಟಿಗೆ ಹಾಕುವುದನ್ನು  ತಪ್ಪಿಸಿಕೊಂಡಿದ್ದೇನೆ. ಮುನ್ನೂರಕ್ಕೂ ಹೆಚ್ಚು ಪಂದ್ಯಗಳನ್ನು ಸೋತಿದ್ದೇನೆ. ಇಪ್ಪತ್ತಾರು ಬಾರಿ ಗೆಲುವಿನ ಅಂಚಿನಲ್ಲಿ ಎಡವಿದ್ದೇನೆ. ಜೀವನದಲ್ಲಿ ಮತ್ತೆ, ಮತ್ತೆ ಸೋತಿದ್ದೇನೆ. ಹಾಗಾಗಿಯೇ ನಾನು ಗೆದ್ದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT