ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಏರಿಳಿತ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಲೋಕದ ‘ಮಿಲಿಯನ್ ಡಾಲರ್ ಬೇಬಿ’ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ತನ್ನ ಗಂಭೀರತೆಯನ್ನು ಕಳೆದು ಕೊಳ್ಳುತ್ತಿದೆಯೇ? ಕ್ರೀಡಾಂಗಣಕ್ಕೆ ಪಂದ್ಯ ನೋಡಲು ಬರುತ್ತಿ ರುವವರಲ್ಲಿ ನಿಜವಾಗಿಯೂ ಕ್ರಿಕೆಟ್‌ ಆಟವನ್ನು ಆಸ್ವಾದಿಸುತ್ತಿರುವರೇ? ಹೊಡಿಬಡಿ ಆಟವೇ ಪ್ರಮುಖವಾಗಿರುವ ಇಲ್ಲಿ ಕ್ರಿಕೆಟ್ ಇದೆಯೇ?

ಹೌದು; ಐಪಿಎಲ್ ಹತ್ತನೇ ಆವಋತ್ತಿಯ ಟೂರ್ನಿಯ ಅಂತಿಮ ಹಂತ ಸಮೀಪಿಸುತ್ತಿದೆ. ದಿಗ್ಗಜ ಆಟಗಾರರು ಇದ್ದ ತಂಡಗಳು ಲೀಗ್ ಹಂತದಲ್ಲಿ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಹೊಸ ಪ್ರತಿಭೆಗಳು ಮಿಂಚುತ್ತಿರುವ ತಂಡಗಳು ನಾಕೌಟ್‌ ಹಂತಕ್ಕೆ ಲಗ್ಗೆ ಹಾಕಿ ಪ್ರಶಸ್ತಿಯತ್ತ ಕೈಚಾಚುವ ಮುನ್ಸೂಚನೆಗಳೂ ಕಾಣುತ್ತಿವೆ. ಆದರೆ ಇದೆಲ್ಲದರ ನಡುವೆ ಅಭಿಮಾನಿಗಳಲ್ಲಿ ಏಕತಾನತೆಯ ಭಾವನೆ ಮೂಡುತ್ತಿರುವುದು ಕಾಣುತ್ತಿದೆ.

ಏಪ್ರಿಲ್ 5ರಂದು ಟೂರ್ನಿ ಆರಂಭವಾದಾಗ ಟಿವಿ ವೀಕ್ಷಕರ ಸಂಖ್ಯೆಯು ಮುಗಿಲತ್ತೆರಕ್ಕೆ ಲಂಘಿಸಿತ್ತು. ಆದರೆ, ಮೂರು ವಾರ ಕಳೆಯುವಷ್ಟರಲ್ಲಿ ಇಳಿಮುಖವಾಗುತ್ತಿರುವುದು ಕಾಣುತ್ತಿದೆ. ಈ ಎರಡೂ ಅಂಶಗಳನ್ನು ಬಿಎಆರ್‌ಸಿ (ಬ್ರಾಡ್‌ಕಾಸ್ಟಿಂಗ್ ಆಡಿಯನ್ಸ್‌ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ)  ಸಮೀಕ್ಷೆಗಳು ಖಚಿತಪಡಿಸಿವೆ.

ಸೋನಿ ನೆಟ್‌ವರ್ಕ್ ವಾಹಿನಿಗಳಲ್ಲಿ ಹೋದ ವರ್ಷದ ಐಪಿಎಲ್ ಟೂರ್ನಿಯನ್ನು ವೀಕ್ಷಿಸಿದ್ದಕ್ಕಿಂತಲೂ ಶೇ 40ರಷ್ಟು ಹೆಚ್ಚು ಜನರು ಈ ಬಾರಿಯ ಟೂರ್ನಿಯ ಆರಂಭದಲ್ಲಿ ನೋಡಿದ್ದರು ಎಂದು ಸಮೀಕ್ಷೆ ಹೇಳಿತ್ತು. ಅಂದರೆ 23ಕೋಟಿಗೂ ಹೆಚ್ಚು ಜನರು ಪಂದ್ಯಗಳನ್ನು ವೀಕ್ಷಿಸಿದ್ದರು. ಆದರೆ ದಿನಗಳೆದಂತೆ ಇದರಲ್ಲಿ ಇಳಿಮುಖವಾಗುತ್ತಿರುವುದನ್ನೂ ಕೂಡ ಬಿಎಆರ್‌ಸಿ ಗುರುತಿಸಿದೆ.

ಮೂರನೇ ವಾರದಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ವೀಕ್ಷಕರ ಸಂಖ್ಯೆಯ ಶೇ 17.5 ರಷ್ಟು ಇಳಿದಿತ್ತು. ಮುಂದಿನ ಹಂತದಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆಯೂ ಇದೆ. ಈ ಬೆಳವಣಿಗೆಗೆ ಹಲವು ಕಾರಣಗಳು ಮೋಲ್ನೋಟಕ್ಕೆ ಕಾಣುತ್ತವೆ.

ಪ್ರಮುಖ ಆಟಗಾರರ ನಿರಾಸಕ್ತಿ
ಐಪಿಎಲ್ ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ. ಕ್ರಿಕೆಟ್ ಲೋಕದ ದಿಗ್ಗಜರೆಲ್ಲರೂ ಒಂದೊಂದು ಬೇರೆ ಬೇರೆ ತಂಡಗಳಲ್ಲಿ ಆಡಿದ್ದರು. ಹೊಸ ಬಣ್ಣದ ಪೋಷಾಕುಗಳು, ಹೊಸ ಶೈಲಿಯ ಆಟದೊಂದಿಗೆ ಅವರು ಅಂಗಳಕ್ಕೆ ಕಾಲಿಟ್ಟ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು.

ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ರಿಕಿ ಪಾಂಟಿಂಗ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ ಅವರಂತಹ ದಿಗ್ಗಜರು ಮುಖಾಮುಖಿಯಾಗುವುದನ್ನು ನೋಡಲು ಅಭಿಮಾನಿಗಳು ಹಾತೊರೆಯುತ್ತಿದ್ದರು. ಅಲ್ಲದೇ ಆ ಆಟಗಾರರಿಗೂ ತಮ್ಮ ತಂಡ ಹಾಗೂ ವೈಯಕ್ತಿಕ ವರ್ಚಸ್ಸು ಉಳಿಸಿಕೊಳ್ಳುವ ಸವಾಲು ಇತ್ತು. ಆದ್ದರಿಂದ ಆ ಪೈಪೋಟಿಯನ್ನು ನೋಡಲು ಕೂಡ ಅವಕಾಶವಾಗುತ್ತಿತ್ತು. ಆದರೆ, ವರ್ಷಗಳು ಉರುಳಿದಂತೆ ಪ್ರಮುಖ ಆಟಗಾರರು ನಿವಋತ್ತಿ ಪಡೆದರು.

ಈಗ ಬೆರಳೆಣಿಕೆಯಷ್ಟು ತಾರಾ ವರ್ಚಸ್ಸಿನ ಆಟಗಾರರು ಇದ್ದಅರೆ.  ದಶಕ ಪೂರೈಸಿರುವ ಟೂರ್ನಿಯಲ್ಲಿ ಆಗಿನ ಬಹುತೇಕ ದಿಗ್ಗಜರು ಇಲ್ಲ. ಮಹೇಂದ್ರಸಿಂಗ್ ದೋನಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್, ರಾಬಿನ್ ಉತ್ತಪ್ಪ, ಲಸಿತ್ ಮಾಲಿಂಗ, ಕ್ರಿಸ್‌ ಗೇಲ್, ಎ.ಬಿ. ಡಿವಿಲಿಯರ್ಸ್, ಶೇನ್ ವಾಟ್ಸನ್ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಉಳಿದಿದ್ದಾರೆ.

ಹೊಸ ಪೀಳಿಗೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬಿಟ್ಟರೆ ಬೇರೆ ಮುಖಗಳು ಕಾಣುತ್ತಿಲ್ಲ. ಯುವ ಆಟಗಾರರಾದ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ ಅವರು ದಿಗ್ಗಜರ ಪಟ್ಟಕ್ಕೆ ಏರಲು  ಇನ್ನೂ ಸಾಕಷ್ಟು ಸಮಯ ಬೇಕು.

ಬಹುತೇಕ ತಾರಾಮಣಿಗಳು ತುಂಬಿರುವ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲೀಗ್ ಹಂತದಿಂದಲೇ ಹೊರಬೀಳುವುದು ಖಚಿತವಾದ ಮೇಲೆ ಬಹಳಷ್ಟು ಅಭಿಮಾನಿ ಗಳು ಟಿವಿ ಚಾನೆಲ್ ಬದಲಾಯಿಸುತ್ತಿರುವುದು ಸುಳ್ಳಲ್ಲ.

ಏಕೆಂದರೆ, ಕ್ರಿಸ್‌ ಗೇಲ್ ಹೊಡೆಯುವ ಸಿಕ್ಸರ್, ವಿರಾಟ್ ಹೊಡೆಯುವ ಶತಕ, ಎ.ಬಿ. ಡಿವಿಲಿಯರ್ಸ್‌ ಅವರ ವಿಭಿನ್ನ ಶೈಲಿಯ ಬ್ಯಾಟಿಂಗ್‌ ಸೊಬಗು ಇರದ ಐಪಿಎಲ್‌ ಅಭಿಮಾನಿಯಲ್ಲಿ ನಿರಾಶೆ ಮೂಡಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು, ಟೂರ್ನಿಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಪ್ರಮುಖ ಕ್ರಿಕೆಟಿಗರು ಐಪಿಎಲ್‌ ನಿಂದ ದೂರವೇ ಉಳಿದಿದ್ದಾರೆ. ಗಾಯದಿಂದ ಬಳಲುತ್ತಿರುವ ಕೆ.ಎಲ್. ರಾಹುಲ್, ಆರ್. ಅಶ್ವಿನ್, ಆಸ್ಟ್ರೇ ಲಿಯಾದ ಮಿಷೆಲ್ ಸ್ಟಾರ್ಕ್ ಅವಂತಹ ಪ್ರಮುಖರು ದೂರ ಉಳಿ ದಿದ್ದಾರೆ. ಟೂರ್ನಿಯ ಆರಂಭದ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿಗೆ ಕೊಹ್ಲಿ, ಎಬಿಡಿ ಅವರ ಸೇವೆ ಲಭಿಸಿರಲಿಲ್ಲ. 

ಅಭಿಮಾನಿಗಳ ಅಭಿರುಚಿಯಲ್ಲಿ ಬದಲು
ಟೆಸ್ಟ್ ಮತ್ತು ಏಕದಿನ ಮಾದರಿಯ ಕ್ರಿಕೆಟ್‌ ಪಂದ್ಯಗಳಿಗೆ ಒಗ್ಗಿಕೊಂಡಿದ್ದ ಭಾರತದ ಅಭಿಮಾನಿಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಐಪಿಎಲ್  ಎರಡು ಗುಂಪುಗಳನ್ನಾಗಿ ವಿಭಜಿಸಿದೆ. ಅದನ್ನು ಕ್ಲಾಸ್ (ವಿಶಿಷ್ಟ ವರ್ಗ) ಮತ್ತು ಮಾಸ್ (ಸಾಮೂಹಿಕ) ಎಂದು ಹೇಳಬಹುದು. ಇವತ್ತು ಐಪಿಎಲ್‌ಗೆ ಅಪಾರ ಜನಪ್ರಿಯತೆ ಇದೆ. ಆದರೆ, ಅದು ಕ್ಲಾಸ್‌ ವೀಕ್ಷಕರ ಮನಗೆದ್ದಿಲ್ಲ.

ಟ್ವೆಂಟಿ–20 ಕ್ರಿಕೆಟ್‌ ಆರಂಭವಾದಾಗಿನಿಂದ ಸಣ್ಣದಾಗಿ ಶುರುವಾಗಿದ್ದ ಈ ವಿಭಜನೆ,  ಐಪಿಎಲ್‌ ಶುರುವಾದಾಗಿನಿಂದ ಢಾಳಾಗಿ ಕಂಡು ಬರುತ್ತಿದೆ. ಟೆಸ್ಟ್ ಕ್ರಿಕೆಟ್‌ ಇಷ್ಟಪಡುವವರು ಐಪಿಎಲ್‌ ಅನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. 

‘ಐಪಿಎಲ್‌ನಲ್ಲಿ ಕ್ರಿಕೆಟ್‌ಗಿಂತ ಹೆಚ್ಚು ವ್ಯಾಪಾರ ವ್ಯವಹಾರ ಇದೆ. ಆಟಕ್ಕಿಂತ ಹೆಚ್ಚು ಕುಣಿತ, ಉನ್ಮಾದ ಇದೆ’ ಎಂದು ಈಗಾಗಲೇ ಹಲವು ಹಿರಿಯರು ಟೀಕಿಸಿದ್ದಾರೆ.

ಇವತ್ತು ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರ ಆದ್ಯತೆ ಬರೀ ಆಟ ನೋಡು ವುದಕ್ಕೆ ಸೀಮಿತವಾಗಿಲ್ಲ. ಯುವ ಪ್ರೇಕ್ಷಕರ ಅಭಿರುಚಿಯೂ ಬದಲಾಗಿದೆ. ಬೇರೆ ಬೇರೆ ಆಕರ್ಷಣೆಗಳು ಇಲ್ಲಿವೆ.

‘ನಲ್ವತ್ತು ಓವರ್ ಮುಗಿಯುವಷ್ಟರಲ್ಲಿ ಒಮ್ಮೆಯಾದರೂ ನಾವು ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಖಚಿತ. ಅಲ್ಲಿಗೆ ನಮ್ಮ ದುಡ್ಡು ವಸೂಲಿಯಾದಂತೆ ಲೆಕ್ಕ. ಒಂದು ಬಾರಿ ಹತ್ತಿರ ದಿಂದ ಕ್ರಿಕೆಟಿಗರನ್ನು ನೋಡಬಹುದು. ಜೊತೆಗೆ ಐಪಿಎಲ್‌ನಲ್ಲಿ  ಡಿಜೆ ಸಂಗೀತ, ಕುಣಿತ, ಬಾಲಿವುಡ್ ತಾರೆಯರ ಓಡಾಟ,   ಚಿಯರ್ಸ್ ಲೀಡರ್ಸ್ ಕುಣಿತಗಳು ಇವೆ’ ಎಂದು ಕಣ್ಣರಳಿಸಿ ಹೇಳುತ್ತಾರೆ ಸಚಿನ್ ಮತ್ತು ಶ್ರದ್ಧಾ. 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಹೋದ ತಿಂಗಳು ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳ ನಡುವಣ ಪಂದ್ಯ ವೀಕ್ಷಿಸಲು ಅವರು ಬಂದಿದ್ದರು.

ಪುಟ್ಟ ಕಂದಮ್ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು ಬಂದ ಅಮ್ಮಂದಿರು, ಮೊಮ್ಮಕ್ಕಳೊಂದಿಗೆ ಬಂದ ಅಜ್ಜ–ಅಜ್ಜಿಯಂದಿರ ಸಂಖ್ಯೆಯೂ ಕಡಿಮೆಯೇನಿರಲಿಲ್ಲ. ಕ್ರೀಡಾಂಗಣದಲ್ಲಿ ನಿಂತು ತಮ್ಮವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುವು ದರಲ್ಲಿಯೇ ಇವರಲ್ಲಿ ಬಹುತೇಕರು ಮಗ್ನರಾಗಿರುತ್ತಾರೆ. ಆದರೆ ಈ ಆಕರ್ಷಣೆ ಎಷ್ಟು ದಿನ ಎಂಬ ಚಿಂತೆಯೂ ಐಪಿಎಲ್ ಮಾರುಕಟ್ಟೆಯಲ್ಲಿ ಇರುವುದು ಸುಳ್ಳಲ್ಲ. ಅದಕ್ಕಾಗಿಯೇ ಹೊಸ ಹೊಸ ಕಾರ್ಯ ಕ್ರಮಗಳನ್ನು ಹಾಕಿಕೊಳ್ಳುವ ಧಾವಂತ ಕಂಡು ಬರುತ್ತಿದೆ.  

‘ಕ್ರಿಕೆಟ್‌ ಎಂಬುದು ಮನರಂಜನೆ ಉತ್ಪಾದಿಸುವ ಕಾರ್ಖಾನೆ’ ಎಂದು ವೀಕ್ಷಕ ವಿವರಣೆಕಾರ ರವಿಶಾಸ್ತ್ರೀ ಹೇಳುವ ಮಾತು ಐಪಿಎಲ್‌ಗೆ ಅಕ್ಷರಶಃ ಸರಿಹೊಂದುತ್ತದೆ. ಆದರೆ, ಇಲ್ಲಿ ಕ್ರಿಕೆಟ್ ನೆಪಮಾತ್ರ. ಅದರೊಂದಿಗೆ ಸಮೀಕರಣಗೊಂಡ ವಿವಿಧ ಚಟುವಟಿಕೆಗಳು, ಅವುಗಳನ್ನು ನಿಯಂತ್ರಿಸುವ ವಾಣಿಜ್ಯ ಮತ್ತು ಟಿವಿ ಜಗತ್ತು ಪ್ರಮುಖವಾಗುತ್ತದೆ. ಒಂದು ದಶಕ ಪೂರೈಸಿರುವ ಐಪಿಎಲ್ ಮುಂದಿನ ಆವೃತ್ತಿಯಲ್ಲಿ ಹೊಸ ತಂಡಗಳು   ಬರಬಹುದು. ಆದರೆ, ಜನಪ್ರಿಯತೆಯನ್ನು ಗಳಿಸಿಕೊಳ್ಳಲು ಏನು ತಂತ್ರ ಹೆಣೆಯಲಿದೆ ಎಂಬ ಕುತೂಹಲ ಈಗ ಕುಡಿಯೊಡೆದಿದೆ.

ಲೋಧಾ ಸಮಿತಿ ಪರಿಣಾಮ?
2014ರ  ಐಪಿಎಲ್‌ನಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನದ ನಂತರ ನಡೆಯುತ್ತಿರುವ ಮೊದಲ ಐಪಿಎಲ್ ಟೂರ್ನಿ ಇದು. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಿಒಎ (ಆಡಳಿತಾಧಿಕಾರಿಗಳ ಸಮಿತಿ) ಕಣ್ಗಾವಲು ಈ ಬಾರಿಯ ಐಪಿಎಲ್‌ಗೆ ಇದೆ.

ಐಪಿಎಲ್‌ಗಿಂತ ಮುನ್ನ ಹಲವು ಗೊಂದಲಗಳು ಸಋಷ್ಟಿಯಾಗಿದ್ದವು. ಟೂರ್ನಿಯನ್ನು ಮುಂದೂಡುವ ಅಥವಾ ಸ್ಥಳಾಂತರಿಸುವ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಅದಾವುದೂ ಆಗಲಿಲ್ಲ. ಸಿಒಎ ಎಲ್ಲ ರೀತಿಯ ಬೆಂಬಲ ವನ್ನೂ ನೀಡಿತು.

ಇದುವರೆಗಿನ ಟೂರ್ನಿಯಲ್ಲಿ ಯಾವುದೇ ಅಶಿಸ್ತು, ಅಪಸ್ವರ ಅಥವಾ ಹಗರಣಗಳು ಬೆಳಕಿಗೆ ಬಂದಿಲ್ಲ.  ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ವಿರೋಧಿಸಿದ್ದ ಬಿಸಿಸಿಐನ ಕೆಲವು ಹಿರಿಯ ಸದಸ್ಯರು ಮತ್ತು ಪದಚ್ಯುತ ಅಧಿಕಾರಿಗಳು ಐಪಿಎಲ್‌ನಲ್ಲಿ ಗೊಂದಲ ಸೃಷ್ಟಿಸುವ ವದಂತಿಗಳೂ ಸುಳ್ಳಾಗಿವೆ.

ಭಾರತದಲ್ಲಿ ಐಪಿಎಲ್ ವೀಕ್ಷಣೆ
ಏ. 5 ರಿಂದ 14: 231.3 ಮಿಲಿಯನ್
ಏ. 15ರಿಂದ 21: 214 ಮಿಲಿಯನ್
ನೇರಪ್ರಸಾರ ಮಾಡುವ ವಾಹಿನಿಗಳು
ಸೋನಿ ಸಿಕ್ಸ್‌, ಸೋನಿ ಮ್ಯಾಕ್ಸ್, ಸೋನಿ ಸಿಕ್ಸ್ ಎಚ್‌ಡಿ, ಸೋನಿ ಇಎಸ್‌ಪಿನ್, ಸೋನಿ ಇಎಸ್‌ಪಿಎನ್ ಎಚ್‌ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT