ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿಯಾಲಿಟಿ ಷೋ’ ಎಂಬ ಅನುಕರಣೆಯಾಟ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಕನ್ನಡದ ಚಿತ್ರಗೀತೆಗಳು ‘ಮಧುರ’ವೂ ‘ಮಂಜುಳ’ವೂ ಆಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇಂಥ ಸುಶ್ರಾವ್ಯ ಕನ್ನಡ ಚಿತ್ರಗೀತೆಗಳನ್ನು ಇಡೀ ನಾಡಿಗೆ ತಲುಪಿಸುವಲ್ಲಿ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಮಾಡಿದ ಮತ್ತು ಮಾಡುತ್ತಿರುವ ಕೆಲಸ ನಿಜಕ್ಕೂ ಅವಿಸ್ಮರಣೀಯ. ದೃಶ್ಯಮಾಧ್ಯಮದ ಭರಾಟೆ ಆರಂಭವಾದ ನಂತರ ಈ ಚಿತ್ರಗೀತೆಗಳನ್ನು  ‘ರಿಯಾಲಿಟಿ ಷೋ’ಗಳ ಮೂಲಕ ಯಥಾವತ್ತಾಗಿ ಅನುಕರಿಸಿ ಹಾಡಿಸುವ ಮತ್ತು ಕುಣಿಸುವ ‘ಅನುಕರಣಾಸ್ಪರ್ಧೆ’ಯ ಪರಂಪರೆ ಹುಟ್ಟಿಕೊಂಡಿತು. ಈ ಅನುಕರಣೆಯ ಅವಾಂತರದಿಂದಾದ ಅನಾಹುತಗಳನ್ನು ಗಮನಿಸದೆ, ಹಾಡಿದ್ದನ್ನೇ ಹಾಡಿಸುವ ಕಾಪಿಕಲೆ ಭರಾಟೆಯಿಂದಲೇ ಮುಂದುವರೆಯುತ್ತ ಬಂತು. ಹೆಚ್ಚು ಸುಶ್ರಾವ್ಯವಾಗಿ ಕಾಪಿ ಮಾಡಿದವರಿಗೆ ಮೊದಲ ಬಹುಮಾನ, ಒಂದಿಷ್ಟು ಕಳಪೆ ಕಾಪಿ ಮಾಡುವವರಿಗೆ ಎರಡನೆಯ ಬಹುಮಾನ... ಹೀಗೆ ಒಟ್ಟಾರೆ ಕಾಪಿ ಕಲೆಯೇ ಪ್ರಧಾನವಾಗಿ, ನಮ್ಮ ತರುಣ ಪೀಳಿಗೆಯ ಮೂಲ ಸಂಗೀತ ಪ್ರತಿಭೆ ಪ್ರಮುಖ ನೆಲೆಗೆ ಬರದೇ ಹೋಯ್ತು.

ರಿಯಾಲಿಟಿ ಷೋಗಳ ತಜ್ಞರು ಕೂಡ ಸ್ಪರ್ಧಾಳುಗಳು ಮೂಲದ ಹಾಡನ್ನು ಎಷ್ಟರಮಟ್ಟಿಗೆ ಯಥಾವತ್ತಾಗಿ ಅನುಕರಿಸಿದರು, ನಕಲಿಸುವುದರಲ್ಲಿ ಎಲ್ಲಿ ತಪ್ಪಿದರು, ಅನುಕರಣೆಯಲ್ಲಿ ಇನ್ನೂ ಏನೇನು ಸುಧಾರಿಸಬೇಕಿತ್ತು- ಎಂದೇ ತೀರ್ಮಾನ ಕೊಡುತ್ತ ಬಂದರು. ಇಂಥ ವಾತಾವರಣದಲ್ಲಿ ಸಾಹಿತ್ಯ, ಸಂಗೀತ, ಸಂಯೋಜನೆ, ಹಾಡುವಿಕೆ ಈ ಯಾವುದರಲ್ಲೂ ಹೊಸತನ ಕಾಣುವುದು ಸಾಧ್ಯವಿಲ್ಲ. ಹಾಡಿದ್ದನ್ನೇ ಹಾಡಿಸುವ ಇಂಥ ಅನ್‌ರಿಯಾಲಿಟಿ ಷೋಗಳು ಎಲ್ಲಿಯವರೆಗೆ ನಡೆಯುವುದು? ಹಾಗೆಯೇ ಯುವಕರ ‘ಮೂಲ’ ಹಾಗೂ ‘ವೈಯಕ್ತಿಕ’ ಪ್ರತಿಭೆ ಪ್ರಕರ್ಷಕ್ಕೆ ಬರುವುದು ಯಾವಾಗ? 

ಚಿತ್ರಗೀತೆಗಳನ್ನಾಧರಿಸಿದ ರಿಯಾಲಿಟಿ ಷೋಗಳು ಆರಂಭವಾಗುವ ಮುನ್ನ ಎಂ.ಎಸ್.ಐ.ಎಲ್. ಮತ್ತು ಕೆಲವು ಖಾಸಗಿ ದೃಶ್ಯಮಾಧ್ಯಮಗಳು ಕನ್ನಡದ ಅತ್ಯಂತ ಜನಪ್ರಿಯ ಭಾವಗೀತೆಗಳನ್ನು ಹೀಗೆಯೇ ಕಾಪಿ ಮಾಡಿಸುವ ಅಥವಾ ಯಥಾವತ್ತಾಗಿ ಅನುಕರಿಸುವ ಪ್ರತಿಭೆಗಳಿಗೆ ದೊಡ್ಡ ಮೊತ್ತದ ಬಹುಮಾನಗಳನ್ನು ಕೊಡುವ ಪ್ರಯತ್ನಗಳನ್ನು ಜೋರಾಗಿಯೇ ಮಾಡಿದವು. ಇಲ್ಲೂ ಭಾವಗೀತೆ, ಸಂಗೀತ ಸಂಯೋಜನೆ, ವಾದ್ಯಸಾಂಗತ್ಯ, ಹಾಡುವಿಕೆಯಂಥ ಆಂಶಗಳಲ್ಲಿ ‘ಒರಿಜಿನಲ್’ ಎಂಬುದು ಯಾವುದೂ ಇರಲಿಲ್ಲ. ಅಂದರೆ ಈ ಎರಡೂ ಮಾದರಿಗಳು ಅನುಕರಣಾ ವಿದ್ಯೆಯನ್ನೇ ಆಧರಿಸಿ ‘ಸಂತೆಯ ಹೊತ್ತಿನಲ್ಲಿ ಮೂರು ಮೊಳ ನೆಯ್ಯುವ’ ಕ್ಷಣಪ್ರತಿಭೆಗಳನ್ನು ನಿರ್ಮಿಸಿದವು. ಈಗಲೂ ಚಿಕ್ಕಮಕ್ಕಳಿಗೆ ಸಂಗೀತವೆಂದರೆ ಇದೇ ಎಂಬಂತೆ ಕಲಿಸಲಾಗುತ್ತಿದೆ ಕೂಡ. ಅನುಕರಣಾಕಲೆಯಲ್ಲಿ ಅದ್ಭುತವನ್ನು ಸಾಧಿಸಿದ ಎಲ್ಲೋ ಒಂದೋ ಎರಡೋ ಪ್ರತಿಭೆಗಳಿಗೆ ಮುಂದೆ ಸ್ವತಂತ್ರವಾಗಿ ಚಲನಚಿತ್ರಗಳಲ್ಲಿ ಹಾಡುವ ಅವಕಾಶ ಸಿಕ್ಕಿರಬಹುದಾದರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಹುತೇಕ ತರುಣರು ಒರಿಜಿನಲ್ ವಿದ್ಯೆಯನ್ನು ಸಾಧನೆ ಮಾಡಿಕೊಳ್ಳಲಿಲ್ಲ; ಅಷ್ಟೇ ಅಲ್ಲ, ಅನುಕರಣಾ ಕಲೆಯನ್ನೂ ಆಯಾ ಸ್ಪರ್ಧೆಗಳು ಮುಗಿದ ನಂತರ ಅನಿವಾರ್ಯವಾಗಿ ಮರೆತರು.

ನಮ್ಮ ವಾಹಿನಿಗಳಿಂದ ನಿಜವಾದ ಅರ್ಥದ ರಿಯಾಲಿಟಿ ಷೋಗಳು ನಡೆಯಬೇಕಾದರೆ ಮೊದಲು ಅರ್ಥಪೂರ್ಣವಾದ ಭಾವಗೀತೆಗಳನ್ನು ರಚಿಸುವ ಸ್ಪರ್ಧೆ ನಡೆಯಲಿ. ಇಂಥ ಸ್ಪರ್ಧೆಯಲ್ಲಿ ಯಾರಾದರೂ ಭಾಗವಹಿಸುವ ಮುಕ್ತ ಅವಕಾಶವಿರಲಿ. ನಾಡಿನಾದ್ಯಂತದ ಕವಿಗಳು ರಚಿಸಿ ಕಳಿಸುವ ಇಂಥ ಭಾವಗೀತೆಗಳನ್ನು ಅವುಗಳ ಭಾವಗೀತಾತ್ಮಕತೆಯ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಪರಿಣತರು ಸೇರಿ ಯೋಗ್ಯವಾದವುಗಳನ್ನು ಆರಿಸಲಿ. ಆಯ್ಕೆಯಾದ ಭಾವಗೀತೆಗಳನ್ನು ಸಂಗೀತದೊಂದಿಗೆ ಸಂಯೋಜಿಸುವ ಸ್ಪರ್ಧೆಯೂ ನಡೆಯಲಿ. ಕನ್ನಡದಲ್ಲಿ ಇತರ ಯಾವ ಭಾಷೆಯಲ್ಲೂ ಇರಲಾರದ ವಚನಸಾಹಿತ್ಯವಿದೆ, ದಾಸಸಾಹಿತ್ಯವಿದೆ. ಹೊಸಗನ್ನಡದ ಅಸಂಖ್ಯ ಕವಿಗಳು ರಚಿಸಿದ ಸಾವಿರಾರು ಭಾವಗೀತೆಗಳಿವೆ. ಈ ಎಲ್ಲ ಮೂಲಸಾಹಿತ್ಯವನ್ನು ಆಧರಿಸಿದ ನಿಜವಾದ ಅರ್ಥದ ರಿಯಾಲಿಟಿ ಷೋಗಳು ನಡೆದರೆ ಹೊಸ ಸಾಹಿತ್ಯ ಸ್ವರತರಂಗಗಳು ಎಲ್ಲೆಡೆ ಉಲಿಯಲು ಸಾಧ್ಯವಿದೆ. ಇಲ್ಲಿ ಸಂಗೀತ ಸಂಯೋಜಕರಿಗೂ ಅವಕಾಶ ಸಿಗುತ್ತದೆ. ಸಂಗೀತದೊಂದಿಗೆ ಸಂಯೋಜಿತವಾದ ಗೀತೆಗಳನ್ನು ಪ್ರತಿಭಾವಂತ ಗಾಯಕರು ಹಾಡುವ ಸ್ಪರ್ಧೆ ಏರ್ಪಡಲಿ. ಹೀಗೆ ನಡೆಯುವ ಪ್ರಕ್ರಿಯೆಯಲ್ಲಿ ಹೊಸತನ ಸಹಜವಾಗಿಯೇ ಬರುವುದಲ್ಲದೆ, ಮೂಲ ಪ್ರತಿಭೆಗಳ ಅನಾವರಣವೂ ಆಗುತ್ತದೆ. ಈ ಸ್ಪರ್ಧೆ ಮುಕ್ತ ವಾತಾವರಣದಲ್ಲಿ ನಡೆಯುವ ಕಾರಣ ಆಸಕ್ತರು ಮತು ನಿಜವಾದ ಪ್ರತಿಭಾವಂತರು ಭಾಗವಹಿಸುವ ಅವಕಾಶ ಸಿಕ್ಕಿ ಒಂದು ಹೊಸ ಸಾಹಿತ್ಯ ಮತ್ತು ಸಂಗೀತದ ಅಲೆಯೇ ಹರಡಲಾರಂಭಿಸುತ್ತದೆ. ಈ ಬಗೆಯ ಹೊಸ ಪ್ರಯತ್ನವನ್ನು  ಚಿತ್ರಗೀತೆಗಳ ರಚನೆ, ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲೂ ನಡೆಸಬಹುದಾಗಿದೆ. ಹಾಗೆ ಮಾಡಿದರೆ ಅಲ್ಲೂ ಹೊಸ ನೀರು ಹರಿಯಲು ಸಾಧ್ಯ; ಏಕತಾನತೆ ಮುರಿಯಲೂ ಸಾಧ್ಯ.

ವಚನ ಮತ್ತು ಕೀರ್ತನಗಳ ರಿಯಾಲಿಟಿ ಷೋಗಳು ಕೂಡಾ ಇದೇ ಕ್ರಮದಲ್ಲಿ ನಡೆದರೆ ಅಲ್ಲೂ ಹೊಸತನ ತರಲು ಸಾಧ್ಯ. ಕನ್ನಡದಲ್ಲಿ ಹೊಸ ಭಾವಗೀತೆಗಳೇ ಇಲ್ಲವೆನ್ನುವ ಕೆಲವೇ ಭಾವಗೀತ ರಚನೆಕಾರರ ಮತ್ತು ಗಾಯಕರ ಅಳಲು ನೀಗಬೇಕಾದರೆ, ಈ ರೀತಿಯ ಹೊಸ ಬಗೆಯ ರಿಯಾಲಿಟಿ ಷೋಗಳು ಆರಂಭವಾಗಬೇಕಾದ ಅಗತ್ಯವಿದೆ. ಸ್ಪರ್ಧೆ ಮುಕ್ತವಾಗಿ ಮತ್ತು ಅರ್ಥಪೂರ್ಣವಾಗಿ ನಡೆದರೆ ಖಂಡಿತ ಹೊಸ ಹಾಗೂ ಮೌಲಿಕ ಭಾವಗೀತೆಗಳೂ ರಚನೆಯಾಗುತ್ತವೆ; ಸಂಗೀತ ಸಂಯೋಜಕರಿಗೂ ತಮ್ಮ ಮೂಲ ಸಂಯೋಜನಾ ಪ್ರತಿಭೆಯನ್ನು ಪ್ರಕಾಶಿಸಲು ಅವಕಾಶ ಸಿಗುತ್ತದೆ. ಹಾಗೆಯೇ ಹಾಡುಗಾರರಾಗಿ ಪ್ರವರ್ಧಮಾನಕ್ಕೆ ಬರುವ ತರುಣ ಪ್ರತಿಭೆಗಳಿಗೂ ವಿನೂತನ ರೀತಿಯ ಗೀತೆಗಳನ್ನು ಹಾಡಿ ತಮ್ಮ ಮೂಲ ಪ್ರತಿಭೆಯನ್ನು ಪ್ರಕರ್ಷಿಸಿ ತೋರಿಸುವ ಅವಕಾಶವೂ ದೊರೆಯುತ್ತದೆ.

‘ಮಧುರ’ವೂ  ‘ಮಂಜುಳ’ವೂ ಆಗಿದೆಯೆಂದು ಎಷ್ಟು ಕಾಲ ಹಾಡಿದ್ದನ್ನೇ ಹಾಡಿಸುವುದು? ಕುಣಿದವರೇ ಕುಣಿಯುವುದು? ಪ್ರಸಾರ ಮಾಡಿದ್ದನ್ನೇ ಮತ್ತೆ ಮತ್ತೆ ಪ್ರಸಾರ ಮಾಡುವುದು? ಅನುಕರಣಾ ಸ್ಪರ್ಧೆಯಲ್ಲಿ ಏಕತಾನತೆಯನ್ನು ನಿರ್ಮಿಸಿರುವ ವಿವಿಧ ದೃಶ್ಯವಾಹಿನಿಗಳು ಕವಿಗಳಿಂದ ಹಿಡಿದು, ಸಂಗೀತ ಸಂಯೋಜಕರು ಹಾಗೂ ವಾದ್ಯಗಾರರನ್ನೂ ಒಳಗೊಂಡ ಹಾಗೆ ಹೊಸ ಹಾಡುಗಾರರ ಮೂಲ ಪ್ರತಿಭೆಗಳನ್ನು ಶೋಧಿಸುವ ‘ರಿಯಲ್ ರಿಯಾಲಿಟಿ ಷೋ’ಗಳನ್ನು ಪ್ರದರ್ಶಿಸುವ ಪ್ರಯತ್ನವನ್ನೇಕೆ ಮಾಡಬಾರದು? ವಾಣಿಜ್ಯಾತ್ಮಕವಾಗಿಯೂ ಈ ಬಗೆಯ ಷೋಗಳು ಹೆಚ್ಚು ಆದಾಯ ತರುವಲ್ಲಿ ಸಂದೇಹವೇ ಇಲ್ಲ. ಈ ದಿಕ್ಕಿನಲ್ಲಿ ನಮ್ಮ ದೃಶ್ಯ- ಶ್ರವ್ಯವಾಹಿನಿಗಳು ಯೋಚಿಸಬಲ್ಲವೇ?

ಲೇಖಕ: ಆಕಾಶವಾಣಿ ಬೆಂಗಳೂರು ಕೇಂದ್ರದ ನಿವೃತ್ತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT