ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 8–5–1967

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಪ್ರಧಾನಿ ಅಧ್ಯಕ್ಷತೆಯಲ್ಲೇ ಯೋಜನಾ ಆಯೋಗ ಪುನರ್ರಚನೆ ಸಂಭವ
ನವದೆಹಲಿ, ಮೇ 7– ಆಡಳಿತ ಸುಧಾರಣಾ ಮಂಡಳಿಯ ಶಿಫಾರಸು ವ್ಯತಿರಿಕ್ತವಾಗಿದ್ದರೂ, ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರೇ ಯೋಜನಾ ಆಯೋಗದ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳೇ ಹೆಚ್ಚಾಗಿವೆ.

ಪುನರ್ರಚಿಸುವ ಆಯೋಗದಲ್ಲಿ ಅರ್ಥಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಸದಸ್ಯರಾಗಿರುವುದಕ್ಕೆ ಸರ್ಕಾರಿ ವಲಯಗಳಲ್ಲಿ  ಬೆಂಬಲವಿದೆ. ಆಡಳಿತ ಸುಧಾರಣಾ ಮಂಡಳಿ ನೇಮಿಸಿದ್ದ ಯೋಜನೆಗಳ ಅಧ್ಯಯನಾ ತಂಡವು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿಯೇ ಯೋಜನಾ ಆಯೋಗದ ಪುನರ್ರಚನೆಯಾಗಬೇಕೆಂದು ಶಿಫಾರಸ್ ಮಾಡಿರುವುದು ಇಲ್ಲಿ ಗಮನಾರ್ಹ.

ಎಚ್.ಎಂ.ಟಿ. ಕೈಗಾರಿಕೆಯಲ್ಲಿ ಬಿಕ್ಕಟ್ಟು: ಪರಿಹಾರಕ್ಕೆ ನಾಲ್ಕಂಶಗಳ ಕಾರ್ಯಕ್ರಮ
ಬೆಂಗಳೂರು, ಮೇ 7– ಮೆಷಿನ್ ಟೂಲ್ ಕೈಗಾರಿಕೆಯ ತೀವ್ರ ಬಿಕ್ಕಟ್ಟಿನ ಪರಿಹಾರಕ್ಕೆ ಹಿಂದುಸ್ಥಾನ್ ಮೆಷಿನ್‌ ಟೂಲ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಸ್.ಎಂ. ಪಾಟೀಲ್ ಅವರು ನಾಲ್ಕಂಶಗಳ ಕಾರ್ಯಕ್ರಮವನ್ನು ಸೂಚಿಸಿದ್ದಾರೆ.

ಸದ್ಯದಲ್ಲಿಯೇ ಅಮೆರಿಕಕ್ಕೆ ತೆರಳಲಿರುವ ಶ್ರೀ ಪಾಟೀಲರು ಪತ್ರಿಕಾ ಗೋಷ್ಠಿಯಲ್ಲಿ ಉತ್ಪನ್ನದ ವೈವಿಧ್ಯತೆಯನ್ನು ಹೆಚ್ಚಿಸುವುದು, ಲೋಹ ರೂಪಿಸುವ ಯಂತ್ರಗಳನ್ನು ತಯಾರಿಸುವುದು, ಎಚ್.ಎಂ.ಟಿ.ಯ ಸಂಶೋಧನಾ ವಿಭಾಗವನ್ನು ಬಲಪಡಿಸುವುದು ಮತ್ತು ಅಧಿಕ ಪ್ರಮಾಣದ ರಫ್ತಿಗಾಗಿ ಮಾರುಕಟ್ಟೆ ಸರ್ವೆ ನಡೆಸುವುದು ವಿವರಿಸಿದ ಕಾರ್ಯಕ್ರಮಗಳು.

ಉಪರಾಷ್ಟ್ರಪತಿಯಾಗಿ ಗಿರಿಯವರ ಆಯ್ಕೆ ಬಗ್ಗೆ ಲೋಹಿಯಾರ ಕೋಪ
ನವದೆಹಲಿ, ಮೇ 7– ಶ್ರೀ ವಿ.ವಿ. ಗಿರಿ ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬಗ್ಗೆ ಎಸ್.ಎಸ್.ಪಿ. ನಾಯಕ ಡಾ. ರಾಮಮನೋಹರ ಲೋಹಿಯಾ ಅವರು ತಮ್ಮ ‘ಕೋಪ’ವನ್ನು ವ್ಯಕ್ತಪಡಿಸಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಸುಬ್ಬರಾವ್ ಅವರು ಬಹುಶಃ ‘ಸೋತಿರಬಹುದು’ ಎಂದು ಅವರು ನುಡಿದು, ಕಾಂಗ್ರೆಸ್ಸಿಗೆ ಇಮ್ಮಡಿ ವಿಜಯ ಗಳಿಸಲು ಸಾಧ್ಯವಾಗುವಂತೆ ಮಾಡಿದ ಇತರ ವಿರೋಧ ಪಕ್ಷಗಳಿಗೆ ಛೀಮಾರಿ ಹಾಕಿದರು.

ಭಾರತದಲ್ಲಿ ಬಂಡವಾಳ ಹೂಡಲು 200 ಅಮೆರಿಕ ಸಂಸ್ಥೆಗಳ ಆಸಕ್ತಿ
ಕಲ್ಕತ್ತ, ಮೇ 7– ಭಾರತದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಲು 200ಕ್ಕೂ ಹೆಚ್ಚಿನ ಅಮೆರಿಕ ಸಂಸ್ಥೆಗಳು ಕಾತರವಾಗಿವೆ ಎಂದು ನ್ಯೂಯಾರ್ಕ್‌ನಲ್ಲಿರುವ ಅಮೆರಿಕ ಆಡಳಿತ ಸಂಸ್ಥೆಯ ಪ್ರಕಟಣೆಯೊಂದು ತಿಳಿಸಿದೆ.

ಭಾರತದಲ್ಲಿ ವ್ಯಾಪಾರ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ಈ ಸಂಸ್ಥೆಯು ಮೇ 22 ರಂದು ಮೂರು ದಿನಗಳ ಕಾಲ ನ್ಯೂಯಾರ್ಕ್‌ನಲ್ಲಿ ವಿಚಾರಗೋಷ್ಠಿ ವ್ಯವಸ್ಥೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT