ಕಪಿಲ್‌ ಮಿಶ್ರಾ ಆರೋಪ

ಕೇಜ್ರಿವಾಲ್‌ ವಿರುದ್ಧ ಲಂಚದ ಆರೋಪ

ಸಚಿವ ಸ್ಥಾನದಿಂದ ವಜಾಗೊಂಡಿರುವ ಎಎಪಿ ಶಾಸಕ ಕಪಿಲ್‌ ಮಿಶ್ರಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಲಂಚದ ಆರೋಪ

ನವದೆಹಲಿ : ಸಚಿವ ಸ್ಥಾನದಿಂದ ವಜಾಗೊಂಡಿರುವ ಎಎಪಿ ಶಾಸಕ ಕಪಿಲ್‌ ಮಿಶ್ರಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ.

ಆರೋಗ್ಯ, ಲೋಕೋಪಯೋಗಿ ಸಚಿವ ಸತ್ಯೇಂದರ್‌ ಜೈನ್‌ ಅವರು ಕೇಜ್ರಿವಾಲ್‌ ಅವರಿಗೆ ಅವರ ಮನೆಯಲ್ಲಿಯೇ ₹2 ಕೋಟಿ ಹಣ ನೀಡಿದ್ದನ್ನು ತಾವು ನೋಡಿದ್ದಾಗಿ ಮಿಶ್ರಾ ಭಾನುವಾರ ಹೇಳಿದ್ದಾರೆ.

ಆದರೆ, ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಆಮ್‌ ಆದ್ಮಿ ಪಕ್ಷದಲ್ಲಿ (ಎಎಪಿ) ಆಂತರಿಕ ಕಚ್ಚಾಟ ಹೆಚ್ಚುತ್ತಿರು
ವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಪಕ್ಷದ ನಾಯಕತ್ವದ ವಿರುದ್ಧ ಸಮರ ಸಾರಿದ್ದ ಹಿರಿಯ ನಾಯಕ ಕುಮಾರ್‌ ವಿಶ್ವಾಸ್‌ ಅವರಿಗೆ ಬೆಂಬಲ ನೀಡಿದ್ದ ಮಿಶ್ರಾ ಅವರನ್ನು ಶನಿವಾರ ಹಠಾತ್‌ ಆಗಿ ಸಂಪುಟದಿಂದ ವಜಾಗೊಳಿಸಲಾಗಿತ್ತು. ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿದ್ದ ಎರಡು ವರ್ಷಗಳ ಅವಧಿಯಲ್ಲಿ ಗಮನಕ್ಕೆ ಬಂದ ವಿವಿಧ ಅವ್ಯವಹಾರಗಳ ಬಗ್ಗೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರಿಗೆ ಹೇಳಿಕೆ ನೀಡಿರುವುದಾಗಿ ಮಿಶ್ರಾ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಿಶ್ರಾ ಮಾತನಾಡಿದ್ದಾರೆ.
‘₹2 ಕೋಟಿ ಪಡೆದುಕೊಂಡ ಬಗ್ಗೆ ಕೇಜ್ರಿವಾಲ್‌ ಅವರನ್ನು ಕೇಳಿದಾಗ, ರಾಜಕಾರಣದಲ್ಲಿ ಇಂತಹದ್ದೆಲ್ಲ ನಡೆಯುತ್ತದೆ; ನಂತರ ಅದನ್ನು ಬಹಿರಂಗಪಡಿಸುವುದಾಗಿ ಅವರು ಹೇಳಿದ್ದರು’ ಎಂದು ಕಪಿಲ್‌ ಮಿಶ್ರಾ ಹೇಳಿದ್ದಾರೆ.

ಮತ್ತೊಂದು ಆರೋಪ: ಕೇಜ್ರಿವಾಲ್‌ ಸಂಬಂಧಿಯೊಬ್ಬರ ₹ 50 ಕೋಟಿಯ ಭೂ ವ್ಯವಹಾರವನ್ನು ಇತ್ಯರ್ಥ ಪಡಿಸಿದ್ದಾಗಿ ಸತ್ಯೇಂದರ್‌ ಜೈನ್‌ ತಮ್ಮ ಬಳಿ ಹೇಳಿಕೊಂಡಿದ್ದರು ಎಂಬ ಆರೋಪವನ್ನೂ ಮಿಶ್ರಾ ಮಾಡಿದ್ದಾರೆ.

ಕೇಜ್ರಿವಾಲ್‌ ಅವರ ಬಳಿ ಈ ಬಗ್ಗೆ ಕೇಳಿದಾಗ ಅದನ್ನು ಅವರು ನಿರಾಕರಿಸಿದ್ದರು ಎಂದು ಮಿಶ್ರಾ ವಿವರಿಸಿದ್ದಾರೆ.

ಜಲ ಸಚಿವರಾಗಿ ಸರಿಯಾಗಿ ಕೆಲಸ ಮಾಡದೇ ಇರುವುದಕ್ಕೆ ನಿಮ್ಮನ್ನು ವಜಾ ಮಾಡಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ, ಪಕ್ಷದ ಮುಖಂಡರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ವಿಚಾರದಲ್ಲಿ  ನಾಯಕತ್ವದ ಮೇಲೆ ಒತ್ತಡ ಹಾಕಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ.
‘ಒಂದು ವೇಳೆ ನಾನು ಸರಿಯಾಗಿ ಕೆಲಸ ಮಾಡದೇ ಇದ್ದಿದ್ದರೆ, ಕೇಜ್ರಿವಾಲ್‌ ಮತ್ತು ಮನೀಶ್‌ ಅವರು ಮೊದಲೇ ಯಾಕೆ ಹೇಳಲಿಲ್ಲ? ಹಾಗಿದ್ದರೆ, ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆ ಅವರು ಮಾತನಾಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.

ನಿಧಿ ಸಂಗ್ರಹ, ಪಂಜಾಬ್‌ ಚುನಾವಣೆ, ದೆಹಲಿ ಸರ್ಕಾರ ಸೇರಿದಂತೆ ವಿವಿಧ ವಿಚಾರಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೀರ್ಘ ಸಮಯದಿಂದ ಪಕ್ಷದಲ್ಲಿ ಚರ್ಚೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.

‘ಕೆಲವನ್ನು ನಾನು ಸ್ವತಃ ಕಂಡಿದ್ದೇನೆ. ಅಕ್ರಮ ಹಣ ವರ್ಗಾವಣೆ, ಕಪ್ಪು ಹಣ,  ಸಚಿವರೊಬ್ಬರ ಮಗಳ ನೇಮಕಾತಿ, ಐಷಾರಾಮಿ ಬಸ್‌ ಯೋಜನೆ, ಸಿಎನ್‌ಜಿ ಅರ್ಹತಾ ಪರೀಕ್ಷೆ ಹಗರಣ... ಈ ಎಲ್ಲ ವಿಷಯಗಳ ಬಗ್ಗೆ ಕೇಜ್ರಿವಾಲ್‌ ಅವರಿಗೆ ತಿಳಿದಿತ್ತು. ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಭಾವಿಸಿದ್ದೆ’ ಎಂದು ಮಿಶ್ರಾ ಹೇಳಿದ್ದಾರೆ.

ಪಕ್ಷದಲ್ಲೇ ಉಳಿಯುವೆ: ‘ಪಕ್ಷದಲ್ಲೇ ಇದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡುವೆ, ಯಾರೂ ನನ್ನನ್ನು ಎಎಪಿಯಿಂದ ಕಿತ್ತು ಹಾಕಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ಎರಡು ವರ್ಷಗಳ ಅವಧಿಯಲ್ಲಿ ತಾವು ಯಾವುದೇ ಭ್ರಷ್ಟಾಚಾರ ಆರೋಪ ಎದುರಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಅರವಿಂದ, ಜೈನ್‌ ವಜಾ: ಲೆಫ್ಟಿನೆಂಟ್‌ ಗವರ್ನರ್‌ಗೆ ಬಿಜೆಪಿ ಮನವಿ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು  ಆರೋಗ್ಯ ಸಚಿವ ಸತ್ಯೇಂದರ್‌ ಜೈನ್ ಅವರನ್ನು ತಕ್ಷಣವೇ ವಜಾ ಮಾಡುವ ಸಾಧ್ಯತೆ ಬಗ್ಗೆ  ಪರಿಶೀಲನೆ ನಡೆಸಬೇಕು ಎಂದು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರಿಗೆ ಬಿಜೆಪಿ ಮನವಿ ಮಾಡಿದೆ.

ಭಾನುವಾರ ಬೈಜಾಲ್‌ ಅವರನ್ನು ಭೇಟಿ ಮಾಡಿದ ದೆಹಲಿ ಬಿಜೆಪಿ ಘಟಕದ  ಅಧ್ಯಕ್ಷ ಮನೋಜ್‌ ತಿವಾರಿ, ಆರೋಪಗಳ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಸಿಬಿಐ ಇಲ್ಲವೇ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳಿಗೆ ನೀಡುವಂತೆ ಮನವಿ ಮಾಡಿದರು.
‘ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ, ಇಬ್ಬರನ್ನೂ ವಜಾ ಮಾಡಲು ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡುವ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಸಲ್ಲಿಸಿರುವ ಪತ್ರದಲ್ಲಿ ತಿವಾರಿ ಮನವಿ ಮಾಡಿದ್ದಾರೆ.
‘ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಪಕ್ಷ ಒತ್ತಾಯಿಸಿದೆ. ಆದರೆ, ಅವರು ರಾಜೀನಾಮೆ ನೀಡಲಾರರು ಎಂಬುದು ನಮ್ಮ ಭಾವನೆ. ಹಾಗಾಗಿ, ಸಂವಿಧಾನದ ಘನತೆಯನ್ನು ಉಳಿಸುವುದಕ್ಕಾಗಿ ಈ ಗಂಭೀರ ಆರೋಪಗಳ ಬಗ್ಗೆ ನೀವು ಗಮನ ಹರಿಸಬೇಕು’ ಎಂದು ತಿವಾರಿ ಒತ್ತಾಯಿಸಿದ್ದಾರೆ.
ಕೇಜ್ರಿವಾಲ್‌ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ: ಕಪಿಲ್‌ ಮಿಶ್ರಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಕೇಜ್ರಿವಾಲ್‌ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
‘ಈ ಆರೋಪಗಳಿಂದಾಗಿ ಎಎಪಿಗೆ ಇದ್ದ ಭ್ರಷ್ಟಾಚಾರ ವಿರೋಧಿ ಎಂಬ ಹಣೆಪಟ್ಟಿ ಕಳಚಿದೆ’ ಎಂದು ದೆಹಲಿ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಮಾಕನ್‌ ಹೇಳಿದ್ದಾರೆ.
ಮಿಶ್ರಾ ಅವರ ಆರೋಪಗಳು ಗಂಭೀರ ಸ್ವರೂಪದವು ಎಂದು ಹೇಳಿರುವ ಅವರು, ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೇಜ್ರಿವಾಲ್‌ ಸಮರ್ಥಿಸಿದ ವಿಶ್ವಾಸ್‌

ಪಕ್ಷದ ಹಿರಿಯ ಮುಖಂಡ ಕುಮಾರ್‌ ವಿಶ್ವಾಸ್ ಅವರು ಕೇಜ್ರಿವಾಲ್‌ ಬೆಂಬಲಕ್ಕೆ ನಿಂತಿದ್ದಾರೆ.

‘ನಾವು ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಒಪ್ಪದೇ ಇರಬಹುದು, ಪರಸ್ಪರ ಜಗಳವೂ ಆಡಬಹುದು ಅಥವಾ ಅಸಮಾಧಾನ ವ್ಯಕ್ತಪಡಿಸಬಹುದು... ಆದರೆ, 12 ವರ್ಷಗಳಿಂದ ಕೇಜ್ರಿವಾಲ್‌ ಅವರನ್ನು ಬಲ್ಲೆ. ಅವರು ಲಂಚ ಪಡೆಯುವುದು ಅಥವಾ ಭ್ರಷ್ಟರಾಗುವುದನ್ನು ಊಹಿಸಲೂ ಸಾಧ್ಯವಿಲ್ಲ. ಅವರ ವೈರಿಗಳು ಕೂಡ ಇದನ್ನು ಯೋಚಿಸಲು ಸಾಧ್ಯವಿಲ್ಲ’ ಎಂದು ಕುಮಾರ್‌ ವಿಶ್ವಾಸ್‌ ಹೇಳಿದ್ದಾರೆ.
‘ತಾವು ಭ್ರಷ್ಟರಾಗಿದ್ದರೆ, ತಮ್ಮನ್ನು ಹುದ್ದೆಯಿಂದ ತೆಗೆಯಬಹುದು ಎಂದು ಕೇಜ್ರಿವಾಲ್‌ 100ಕ್ಕೂ ಹೆಚ್ಚು ಸಲ ಹೇಳಿದ್ದಾರೆ. ನಾನು ಸತ್ಯೇಂದರ್‌ ಜೈನ್‌ಗೆ ಕರೆ ಮಾಡಿ ಮಾತನಾಡಿದ್ದೇನೆ.
ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ (ಪಿಎಸಿ) ಅವರ ಅಭಿಪ್ರಾಯವನ್ನು ತಿಳಿಸುವಂತೆ ಕೇಳಿಕೊಂಡಿದ್ದೇನೆ. ನಾವು ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ತನಿಖೆಗೂ ಸಿದ್ಧ’ ಎಂದು ಅವರು ಹೇಳಿದ್ದಾರೆ.

ಸಿಸೋಡಿಯಾ ನಿರಾಕರಣೆ
ಕಪಿಲ್‌ ಮಿಶ್ರಾ ಆರೋಪಗಳನ್ನು ತಳ್ಳಿಹಾಕಿರುವ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಇವುಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದ್ದಾರೆ.
‘ಆರೋಪಗಳು ಅಸಂಬದ್ಧ. ಅದರಲ್ಲಿ ನಿಜಾಂಶ ಇಲ್ಲ’ ಎಂದಿರುವ ಅವರು, ‘ಉತ್ತಮವಾಗಿ ಕೆಲಸ ಮಾಡದ ಕಾರಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಜ್ರಿವಾಲ್‌ ಹಣ ಪಡೆದಿದ್ದರೆ ಅದು ದುರದೃಷ್ಟಕರ. ಆರೋಪಗಳು ನಿಜವೇ ಆಗಿದ್ದರೆ, ಅವರು ಭ್ರಷ್ಟಾಚಾರ ವಿರೋಧಿ ಚಳವಳಿಯನ್ನೇ ನುಚ್ಚುನೂರು ಮಾಡಿದಂತಾಗುತ್ತದೆ.
– ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ

ತಮ್ಮದೇ ಮುಖ್ಯಮಂತ್ರಿ ವಿರುದ್ಧ ಸಚಿವರೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿರುವುದನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು
– ಕಿರಣ್‌ ಬೇಡಿ, ಪುದುಚೇರಿ ಲೆಫ್ಟಿನೆಂಟ್ ಗವರ್ನರ್‌

ಕೇಜ್ರಿವಾಲ್‌ ವಿರುದ್ಧದ ಅಧಿಕಾರ ಲಾಲಸೆ, ದುರಹಂಕಾರ, ಸರ್ವಾಧಿಕಾರಿ ವರ್ತನೆಯ ಆರೋಪಗಳನ್ನು ಒಪ್ಪಬಹುದು. ಆದರೆ, ಲಂಚದ ಆರೋಪಕ್ಕೆ ಪ್ರಬಲ ಸಾಕ್ಷ್ಯ ಬೇಕು
ಯೋಗೇಂದ್ರ ಯಾದವ್‌
ಸ್ವರಾಜ್‌ ಇಂಡಿಯಾ ಮುಖ್ಯಸ್ಥ

ಸಂಕಷ್ಟದ ಕಾಲದಲ್ಲಿ ವ್ಯಕ್ತಿತ್ವದ ಪರೀಕ್ಷೆ ನಡೆಯುತ್ತದೆ. ಮುಳುಗುತ್ತಿರುವ   ಹಡಗು ಎಎಪಿನಲ್ಲಿ ಅಳಿದುಳಿದಿರುವವರ ನಿಜವಾದ ಮುಖಗಳು ಈಗ ಕಾಣುತ್ತಿವೆ.  ಎಂತಹ ಅವಕಾಶ ಕಳೆದುಹೋಯಿತು.
ಪ್ರಶಾಂತ್‌ ಭೂಷಣ್‌
ಸ್ವರಾಜ್‌ ಇಂಡಿಯಾ ಮುಖಂಡ

ಎಎಪಿ ಮುಖ್ಯಸ್ಥರ ಭ್ರಷ್ಟ ಮುಖವಾಡ ಈಗ ಬಯಲಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಕೇಜ್ರಿವಾಲ್‌ ರಾಜೀನಾಮೆ ನೀಡಬೇಕು. ದೆಹಲಿ ಸರ್ಕಾರದ ವಿರುದ್ಧ ಲೆಫ್ಟಿನೆಂಟ್ ಗವರ್ನರ್‌ ಕ್ರಮ ಕೈಗೊಳ್ಳಬೇಕು
–ಅಮರಿಂದರ್‌ ಸಿಂಗ್‌, ಪಂಜಾಬ್‌ ಮುಖ್ಯಮಂತ್ರಿ

ಅದು ಯಾರಿಗೆ ಸೇರಿದ ಹಣ? ಜೈನ್‌ ಅವರ ಕೈಗೆ ಅದು ಹೇಗೆ ಬಂತು? ಗೊತ್ತಿಲ್ಲದೇ ತಪ್ಪಾಗಿದ್ದರೆ, ಕೇಜ್ರಿವಾಲ್‌ ಅವರು ಸಾರ್ವಜನಿಕವಾಗಿ ಹೇಳಬೇಕು. ವಿವರಗಳನ್ನು ಬಹಿರಂಗಪಡಿಸಬೇಕು
ಕಪಿಲ್‌ ಮಿಶ್ರಾ, ಎಎಪಿ ಶಾಸಕ

Comments
ಈ ವಿಭಾಗದಿಂದ ಇನ್ನಷ್ಟು
ಸಾಧ್ವಿ ಪ್ರಾಚಿ, ಸಂಜೀವ್‌ ಬಲಿಯಾನ್‌ ವಿರುದ್ಧದ ದ್ವೇಷ ಭಾಷಣ ಪ್ರಕರಣ ಕೈಬಿಡಲಿದೆ ಯೋಗಿ ಸರ್ಕಾರ

ಮುಜಪ್ಫರ್ ನಗರ ಕೋಮು ಗಲಭೆ ಸಂಬಂಧಿತ ಪ್ರಕರಣ
ಸಾಧ್ವಿ ಪ್ರಾಚಿ, ಸಂಜೀವ್‌ ಬಲಿಯಾನ್‌ ವಿರುದ್ಧದ ದ್ವೇಷ ಭಾಷಣ ಪ್ರಕರಣ ಕೈಬಿಡಲಿದೆ ಯೋಗಿ ಸರ್ಕಾರ

26 Apr, 2018
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ‘ಇಂದು ಮಲ್ಹೊತ್ರ’ ನೇಮಕಕ್ಕೆ ಸಮ್ಮತಿ

ನೇರ ನೇಮಕವಾಗಲಿರುವ ಮೊದಲ ಮಹಿಳೆ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ‘ಇಂದು ಮಲ್ಹೊತ್ರ’ ನೇಮಕಕ್ಕೆ ಸಮ್ಮತಿ

26 Apr, 2018

ಸಿಜೆಐಗೆ ಹಿರಿಯ ನ್ಯಾಯಮೂರ್ತಿಗಳ ಪತ್ರ
‘ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯಿರಿ’

ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಚರ್ಚೆಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಬ್ಬರು...

26 Apr, 2018
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

ಸಂಪೂರ್ಣ ದೇಶೀಯವಾದ ಟ್ರೇನ್‌–18
ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ

26 Apr, 2018
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

ನವದೆಹಲಿ
‘ಸುಪ್ರೀಂ’ಗೆ ಇಂದು ಮಲ್ಹೋತ್ರಾ

26 Apr, 2018