ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ‘ನೀಟ್‌’ ಪರೀಕ್ಷೆ ಸುಲಲಿತ

Last Updated 7 ಮೇ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್-ಯುಜಿ) ಭಾನುವಾರ ನಗರದಲ್ಲಿ ಸುಗಮವಾಗಿ ನಡೆಯಿತು.

ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ಪರೀಕ್ಷೆಗಳು ನಡೆದವು. 

ಸರ್ಕಾರಿ ಕೋಟಾದ ಸೀಟುಗಳಿಗೂ  ಸಿಇಟಿ ಜತೆಗೆ ನೀಟ್ ಪರೀಕ್ಷೆ ಬರೆಯಬೇಕೆಂಬ ನಿಯಮ ರೂಪಿಸಲಾಗಿದೆ. ಹೀಗಾಗಿ ಈ ವರ್ಷ  ಶೇ 41.42 ಅರ್ಜಿಗಳು ಹೆಚ್ಚಾಗಿದ್ದವು.

ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ‘ಬಂಗಾಳಿ ಭಾಷೆಯಲ್ಲಿ ಇದ್ದ ಪ್ರಶ್ನೆಗಳು ಗೊಂದಲದಿಂದ ಕೂಡಿದ್ದು, ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು.

ಪ್ರಶ್ನೆ ಪತ್ರಿಕೆ ಕಷ್ಟ: ‘ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆಗಳು ತುಂಬಾ ಕಷ್ಟವಾಗಿದ್ದವು. ಎನ್‌ಸಿಇಆರ್‌ಟಿ ಪಠ್ಯಕ್ರಮದ ಪ್ರಕಾರವೇ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ, ಪ್ರಶ್ನೆಗಳು ತುಂಬಾ ಕ್ಲಿಷ್ಟವಾಗಿದ್ದವು’ ಎಂದು ಬೇಸ್ ಪ್ರಾಧ್ಯಾಪಕ ವಿನ್ಸೆಂಟ್ ಜಾನ್ ತಿಳಿಸಿದರು.

ನೂತನ ಭದ್ರತಾ ವೈಶಿಷ್ಟ್ಯ:  ವಿದ್ಯಾರ್ಥಿಗಳು ಒಎಂಆರ್ ಪ್ರಶ್ನೆ ಪತ್ರಿಕೆಯಲ್ಲಿ ‘ಮೇಲಿನ ಎಲ್ಲ ಪ್ರಶ್ನೆಗಳಿಗೆ ನಾನೇ ಉತ್ತರಿಸಿದ್ದೇನೆ. ಇದು ನನ್ನ ಕೈಬರಹ’ ಎಂದು ದೃಢೀಕರಿಸಿ, ಸಹಿ ಮಾಡಬೇಕಾದ ಹೊಸ ಭದ್ರತಾ ಅಂಶವನ್ನು ಈ ಬಾರಿಯಿಂದ ಸೇರಿಸಲಾಗಿದೆ.

ಶರ್ಟ್‌ ತೋಳು ಕತ್ತರಿಸಿ ಪರೀಕ್ಷೆಗೆ ಅನುಮತಿ: ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ವಿದ್ಯಾರ್ಥಿಗಳ ವಾಚ್‌, ಕಿವಿಯೋಲೆ, ಮೂಗುತಿ, ಕ್ಲಿಪ್, ಕಾಲ್ಗೆಜ್ಜೆಗಳನ್ನು ತೆಗೆಸಲಾಯಿತು. ವಸ್ತ್ರಸಂಹಿತೆಯನ್ನು ಪಾಲಿಸದೆ ತುಂಬುತೋಳಿನ ಶರ್ಟ್‌ ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಶರ್ಟ್‌ ತೋಳುಗಳನ್ನು ಕತ್ತರಿಸಿದ ಪ್ರಸಂಗ ಮೂರ್ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ನಡೆದವು. ಆರ್ಮಿ ಪಬ್ಲಿಕ್‌ ಶಾಲೆಯಲ್ಲಿ 15 ನಿಮಿಷ ತಡವಾಗಿ ಬಂದ ಆರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಇದೇ ರೀತಿ ನಗರದ ಹೊರಭಾಗದಿಂದ ಬಂದಿದ್ದ ಅನೇಕರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಹುಡುಕಲು ಸಾಧ್ಯವಾಗದೆ ಅವಕಾಶ ವಂಚಿತರಾದರು.

ಪರೀಕ್ಷೆಗಾಗಿ ಕಿವಿಯೋಲೆಗೆ ಕತ್ತರಿ: ಆರ್ಮಿ ಪಬ್ಲಿಕ್‌ ಶಾಲೆಯಲ್ಲಿ ಪರೀಕ್ಷೆಗಾಗಿ ಬಂದಿದ್ದ  ಯುವತಿಯೊಬ್ಬಳು ಬಂಗಾರದ ಕಿವಿಯೋಲೆ ತೆಗೆಸಲು ಅಕ್ಕಸಾಲಿಗರ ಅಂಗಡಿ ಅರಸಿ ಹೋಗಬೇಕಾಯಿತು.

‘ನನ್ನ ಕಿವಿಯೋಲೆ ತೆಗೆಯಲು ಆಗುವುದಿಲ್ಲ. ಹಾಗಾಗಿ ಹಾಕಿಕೊಂಡು ಬಂದಿದ್ದೆ. ಇಲ್ಲಿ ಕಿವಿಯೋಲೆ ತೆಗೆಯಲೇಬೇಕು ಎಂದಿದ್ದರಿಂದ ಓಲೆ ಕತ್ತರಿಸುವುದು ಅನಿವಾರ್ಯವಾಯಿತು. ಪರೀಕ್ಷಾ ಕೇಂದ್ರಕ್ಕೆ ಮುಂಚಿತವಾಗಿ ಬಂದಿದ್ದರಿಂದ ಅದನ್ನು ತೆಗೆಸಲು ಸಾಧ್ಯವಾಯಿತು’ ಎಂದು ವಿದ್ಯಾರ್ಥಿನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT