ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಕೊಂದು, ಕಪಾಟಿನಲ್ಲಿಟ್ಟರು!

Last Updated 7 ಮೇ 2017, 19:42 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯನ್ನು ಹತ್ಯೆಗೈದ ದುಷ್ಕರ್ಮಿಗಳು, ಶವವನ್ನು ಕೋಣೆಯ ಕಪಾಟಿನಲ್ಲಿಟ್ಟು ವಾಸನೆ ಬಾರದಂತೆ ಕೆಮ್ಮಣ್ಣಿನಿಂದ ಮುಚ್ಚಿದ್ದರು. ಅಲ್ಲದೆ, ಕಪಾಟಿನ ಬಾಗಿಲು ತೆಗೆಯದಂತೆ ಸುತ್ತಲೂ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿದ್ದರು. ಮೂರು ತಿಂಗಳಿನಿಂದ ಬಾಡಿಗೆದಾರರು ಕಾಣಿಸದ ಕಾರಣ ಅನುಮಾನಗೊಂಡ ಮನೆ ಮಾಲೀಕ, ಭಾನುವಾರ ಒಳಗೆ ಹೋದಾಗ ಆ ನಿಗೂಢ ಕೊಲೆಯು ಬೆಳಕಿಗೆ ಬಂದಿದೆ.

ಕೆಂಗೇರಿ ಉಪನಗರ ಸಮೀಪದ ಗಾಂಧಿನಗರದ ಮನೆಯೊಂದರಲ್ಲಿ ಇಂಥ ಘಟನೆ ನಡೆದಿದೆ. ಒಂದು ವರ್ಷದಿಂದ ಈ ಮನೆಯಲ್ಲಿ ನೆಲೆಸಿದ್ದ ಶಿವಮೊಗ್ಗದ ಸಂಜಯ್, ಅವರ ತಾಯಿ ಶಶಿಕಲಾ ಹಾಗೂ ಅಜ್ಜಿ ಶಾಂತಕುಮಾರಿ ಫೆ.2ರಿಂದ ನಾಪತ್ತೆಯಾಗಿದ್ದಾರೆ.

ಕಪಾಟಿನಲ್ಲಿ ಪತ್ತೆಯಾದ ಶವ ಸಂಪೂರ್ಣ ಕೊಳೆತು, ಅಸ್ಥಿಪಂಜರ ಮಾತ್ರ ಉಳಿದಿದೆ. ಬಟ್ಟೆ ಹಾಗೂ ಕೂದಲಿನ ಆಧಾರದ ಮೇಲೆ ಮಹಿಳೆಯ ಶವ ಎಂದು ಗುರುತಿಸಲಾಗಿದೆ. ಬಹುಶಃ ಅದು ಶಶಿಕಲಾ ಅಥವಾ ಶಾಂತಕುಮಾರಿ ಅವರ ದೇಹವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

₹50,000 ಪಡೆದು ಪರಾರಿ: ಅದು ಅನಿಲ್ ಎಂಬುವರಿಗೆ ಸೇರಿದ ಮನೆ. 2016ರ ಫೆಬ್ರುವರಿಯಲ್ಲಿ ಈ ಮೂವರು ಬಾಡಿಗೆಗೆ ಬಂದಿದ್ದರು. ಸಂಜಯ್ ಅವರು ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ವಿದ್ಯಾಭ್ಯಾಸದ ಜತೆಗೆ ಇಂದಿರಾನಗರದ ರಿಯಲ್‌ ಎಸ್ಟೇಟ್ ಕಚೇರಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.
‘ಇದೇ ಫೆ.2ರಂದು ಮನೆ ಮಾಲೀಕರನ್ನು ಭೇಟಿಯಾಗಿದ್ದ ಸಂಜಯ್, ‘ನಮ್ಮ ಸಂಬಂಧಿಯೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲು ಹಣ ಬೇಕು’ ಎಂದಿದ್ದರು. ಅದರಂತೆ ಅನಿಲ್, ಆರ್‌ಟಿಜಿಎಸ್ ಮೂಲಕ ₹ 50,000 ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಆ ನಂತರ ಸಂಜಯ್, ಶಶಿಕಲಾ ಹಾಗೂ ಶಾಂತಕುಮಾರಿ ಮನೆಯಿಂದ ಹೊರ ಬಂದಿಲ್ಲ. ಸಂಬಂಧಿಯೊಬ್ಬರಿಗೆ ಅಪಘಾತವಾಗಿದೆ ಎಂದು ಹೇಳಿದ್ದರಿಂದ ಅಲ್ಲಿಗೇ ಹೋಗಿರಬಹುದೆಂದು ಮಾಲೀಕರು ಸುಮ್ಮನಿದ್ದರು. ಮೂರು ತಿಂಗಳಾದರೂ ಬಾಡಿಗೆದಾರರ ಸುಳಿವಿಲ್ಲದ ಕಾರಣ ಅವರು ಮನೆ ಸ್ವಚ್ಛಗೊಳಿಸಿ ಬೇರೆಯವರಿಗೆ ಬಾಡಿಗೆ ಕೊಡಲು ನಿರ್ಧರಿಸಿದ್ದರು.

‘ತಮ್ಮ ಬಳಿ ಇದ್ದ ಇನ್ನೊಂದು ಕೀಲಿ ಬಳಸಿ ಬೆಳಿಗ್ಗೆ 10 ಗಂಟೆಗೆ ಮನೆಯೊಳಗೆ ಹೋಗಿದ್ದರು. ಒಂದು ಕೋಣೆಗೆ ಬೀಗ  ಹಾಕಲಾಗಿತ್ತು. ಕಿಟಕಿ ಮೂಲಕ ಆ ಕೋಣೆಯೊಳಗೆ ನೋಡಿದಾಗ ತುಂಬಾ ಗಲೀಜು ಬಿದ್ದಿತ್ತು. ಅಲ್ಲದೆ, ಕೆಟ್ಟ ವಾಸನೆ ಬರುತ್ತಿತ್ತು. ಅನುಮಾನಗೊಂಡ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದರು.’
‘ಸ್ಥಳಕ್ಕೆ ದೌಡಾಯಿಸಿದ ಕೆಂಗೇರಿ ಠಾಣೆಯ ಸಿಬ್ಬಂದಿ, ಬಾಗಿಲು ಮುರಿದು ಒಳಹೋದಾಗ ನೀರಿನ ಡ್ರಮ್‌ಗಳಲ್ಲಿ ರಕ್ತಸಿಕ್ತ ಸೀರೆ ಹಾಗೂ ಸಿಮೆಂಟ್‌ ಇದ್ದ ಚೀಲ ಸಿಕ್ಕಿತು. ಇದರಿಂದಾಗಿ ಕೋಣೆಯೊಳಗೆ ಯಾವುದೋ ಅಪರಾಧ ಕೃತ್ಯ ನಡೆದಿದೆ ಎಂಬುದು ಖಚಿತವಾಯಿತು.’

‘ಎಲ್ಲ ಕಪಾಟುಗಳನ್ನು ಶೋಧಿಸಿದೆವು. ಒಂದು ಕಪಾಟಿನ ಬಾಗಿಲಿಗೆ ಪ್ಲಾಸ್ಟಿಂಗ್ ಮಾಡಲಾಗಿತ್ತು. ಡ್ರಮ್‌ನಲ್ಲಿ ಸಿಮೆಂಟ್ ಚೀಲ ಪತ್ತೆಯಾಗಿದ್ದ ಕಾರಣ ಹಾರೆಯಿಂದ ಆ ಬಾಗಿಲನ್ನು ಒಡೆದೆವು. ಆಗ ಕೆಮ್ಮಣ್ಣು ಹೊರಗೆ ಚೆಲ್ಲಿತು. ಮಣ್ಣನ್ನು ಸರಿಸಿ ನೋಡಿದಾಗ ಅಸ್ಥಿಪಂಜರವಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT