ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಠಾಣೆಗಳಲ್ಲೂ ಸುಧಾರಿತ ಗಸ್ತು ವ್ಯವಸ್ಥೆ ಜಾರಿ

ನಗರದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ಹೇಳಿಕೆ
Last Updated 8 ಮೇ 2017, 3:53 IST
ಅಕ್ಷರ ಗಾತ್ರ
ಕಲಬುರ್ಗಿ: ‘ರಾಜ್ಯದ 987 ಪೊಲೀಸ್ ಠಾಣೆಗಳಲ್ಲಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸುಧಾರಿತ ಗಸ್ತು ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ರೂಪಕ್ ಕುಮಾರ್ ದತ್ತಾ ಹೇಳಿದರು.
 
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಈಶಾನ್ಯ ವಲಯ ಪೊಲೀಸ್ ಇಲಾಖೆಯಿಂದ ಭಾನುವಾರ ಏರ್ಪಡಿಸಿದ್ದ ‘ಸುಧಾರಿತ ಗಸ್ತು ವ್ಯವಸ್ಥೆ ಸಿಬ್ಬಂದಿ ಸಮಾವೇಶ’ ಹಾಗೂ ‘ಆರೋಗ್ಯ ತಪಾಸಣಾ ಚೀಟಿ ವ್ಯವಸ್ಥೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ಈ ಮೊದಲು 2–3 ಕಾನ್‌ಸ್ಟೆಬಲ್‌ ಗಳು ಮಾತ್ರ ಗಸ್ತು ವ್ಯವಸ್ಥೆಯಲ್ಲಿ ಇರುತ್ತಿದ್ದರು. ಈಗ ಪ್ರತಿ ಠಾಣೆಯ ಕಾನ್‌ಸ್ಟೆಬಲ್, ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಎಎಸ್‌ಐಗಳನ್ನು ಸೇರ್ಪಡೆಗೊಳಿಸಲಾಗಿದೆ.

ಗಸ್ತು ಕಾನ್‌ಸ್ಟೆಬಲ್‌ಗಳಿಗೆ ಸಮುದಾಯ ಗಸ್ತು ಅಧಿಕಾರಿ ಎಂದು ನಾಮಕರಣ ಮಾಡಲಾಗಿದ್ದು, ಎಎಸ್‌ಐ ಗಳಿಗೆ ಉಸ್ತುವಾರಿ ವಹಿಸುವಂತೆ ಸೂಚಿಸಲಾಗಿದೆ. ನೂತನ ವ್ಯವಸ್ಥೆ ಪರಿಣಾಮಕಾರಿಯಾಗಿ ಅನುಷ್ಠಾನ ಗೊಂಡಲ್ಲಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದರು.
 
‘ಬೀದರ್‌ ಜಿಲ್ಲೆಗೆ ಈ ಹಿಂದೆ ಭಯೋತ್ಪಾದಕರು ಮತ್ತು ಯಾದಗಿರಿ ಜಿಲ್ಲೆಗೆ ನಕ್ಸಲರು ಬಂದಿದ್ದರು. ಈ ವಿಷಯ ಪೊಲೀಸರಿಗೆ ಗೊತ್ತಾಗಲೇ ಇಲ್ಲ. ಈ ಕಾರಣಕ್ಕಾಗಿ ಗಸ್ತು ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಪ್ರತಿಯೊಂದು ಓಣಿ, ಬಡಾವಣೆ ಮತ್ತು ಹಳ್ಳಿಗಳ 50ಕ್ಕೂ ಹೆಚ್ಚು ಸಾರ್ವಜನಿಕರನ್ನು ಗಸ್ತು ವ್ಯವಸ್ಥೆಯ ಸದಸ್ಯರನ್ನಾಗಿ ನೋಂದಾಯಿಸಿಕೊಳ್ಳಲಾಗಿದೆ.
 
ಅವರು ತಮ್ಮ ಗಮನಕ್ಕೆ ಬರುವ ಅಪರಾಧ ಚಟುವಟಿಕೆ, ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಗಸ್ತು ಕಾನ್‌ಸ್ಟೆಬಲ್‌ಗಳಿಗೆ ಮಾಹಿತಿ ನೀಡಿದಲ್ಲಿ ಅಪರಾಧ ತಡೆಗಟ್ಟುವಲ್ಲಿ ಸಹಾಯಕವಾಗಲಿದೆ’ ಎಂದರು.
 
‘ಪ್ರತಿಯೊಂದು ಠಾಣೆಯ ಶೇ 90ರಷ್ಟು ಸಿಬ್ಬಂದಿಯನ್ನು ಈ ವ್ಯವಸ್ಥೆಯಲ್ಲಿ ತೊಡಗಿಸಲಾಗಿದೆ. ಗಸ್ತು ಕಾನ್‌ ಸ್ಟೆಬಲ್, ಹೆಡ್‌ ಕಾನ್‌ಸ್ಟೆಬಲ್ ಮತ್ತು ಸಾರ್ವಜನಿಕ ಸದಸ್ಯರನ್ನು ಒಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ಕೂಡ ರಚಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಫೋಟೊ, ವಿಡಿಯೋ ಮತ್ತು ಮಾಹಿತಿ ಕಳುಹಿಸಿ ದಲ್ಲಿ ಸಂಬಂಧಿಸಿದ ಕಾನ್‌ಸ್ಟೆಬಲ್‌ಗಳು ನೆರವಿಗೆ ಧಾವಿಸುತ್ತಾರೆ’ ಎಂದರು.
 
‘ಪ್ರತಿಯೊಬ್ಬ ಸಿಬ್ಬಂದಿಗೂ ಆರೋಗ್ಯ ಚೀಟಿ ವಿತರಿಸಲಾಗುತ್ತಿದೆ. ಇದರಲ್ಲಿ ಅವರ ಹೆಸರು, ರಕ್ತದ ಗುಂಪು, ರಕ್ತದೊತ್ತಡ ಮತ್ತು ಮಧುಮೇಹದ ಮಾಹಿತಿ, ಎತ್ತರ, ತೂಕವನ್ನು ನಮೂದಿಸಲಾಗುತ್ತದೆ. ಗಂಭೀರ ಕಾಯಿಲೆಗಳಿದ್ದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ’ ಎಂದು ತಿಳಿಸಿದರು.
 
ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಿರುವ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ‘ಉತ್ತಮ ಗಸ್ತು ವ್ಯವಸ್ಥೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
 
ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರು, ತೂಕ ಇಳಿಸಿಕೊಂಡ ಕಾನ್‌ಸ್ಟೆಬಲ್‌ಗಳು, ಅತ್ಯುತ್ತಮ ಠಾಣೆ, ಅತ್ಯುತ್ತಮ ಉಪ ವಿಭಾಗ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಈಶಾನ್ಯ ವಲಯ ಐಜಿಪಿ ಅಲೋಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗುಲಬರ್ಗಾ ವಿ.ವಿ ಕುಲಸಚಿವ ಪ್ರೊ.ದಯಾನಂದ ಅಗಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ನಿಕಮ್ ಪ್ರಕಾಶ ಅಮೃತ ಇದ್ದರು. ಇನ್‌ಸ್ಪೆಕ್ಟರ್ ಪಿ.ವಿ.ಸಾಲಿಮಠ ಮತ್ತು ಶಶಿಕಲಾ ಜಡೆ ಕಾರ್ಯಕ್ರಮ ನಿರ್ವಹಿಸಿದರು.
****
ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಾರಿಗೆ ತಂದಿರುವ ಆರೋಗ್ಯ ಚೀಟಿ ವಿತರಣೆ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲಾಗುವುದು.
ರೂಪಕ್ ಕುಮಾರ್ ದತ್ತಾ, ಡಿಜಿ ಮತ್ತು ಐಜಿಪಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT