ಬಳ್ಳಾರಿ

ಹೆಡ್‌ಕಾನ್‌ಸ್ಟೆಬಲ್‌ ಸೇರಿ ಇಬ್ಬರ ಬಂಧನ

ಹೈದರಾಬಾದ್ ಜಿಲ್ಲೆಯ ನಿಜಾಮಬಾದಿನ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್‌ ಶ್ರೀನಿವಾಸರೆಡ್ಡಿ ಹಾಗೂ ಅನಂತಪುರ ಜಿಲ್ಲೆಯ ತಾಡಪತ್ರಿ ತಾಲ್ಲೂಕಿನ ಪುಟ್ಲುರು ಗ್ರಾಮದ ತಲಾರಿ ಜಯರಾಮ ಬಂಧಿತ ಆರೋಪಿತರು

ಬಳ್ಳಾರಿ: ನಗರದ ಹೊರವಲಯದ ಸಿರುಗುಪ್ಪ ರಸ್ತೆ ಬದಿಯ ಹೊಲದಲ್ಲಿ ಇತ್ತೀಚೆಗಷ್ಟೇ ರೈತರೊಬ್ಬರನ್ನು ಅವರ ಬೈಕ್ ಸಮೇತ ಸುಟ್ಟು ಕೊಲೆ ಮಾಡಿರುವ ಪ್ರಕರಣದ ಅಡಿಯಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಶನಿವಾರ ಆಂಧ್ರಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ಹೈದರಾಬಾದ್ ಜಿಲ್ಲೆಯ ನಿಜಾಮಬಾದಿನ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್‌ ಶ್ರೀನಿವಾಸರೆಡ್ಡಿ ಹಾಗೂ ಅನಂತಪುರ ಜಿಲ್ಲೆಯ ತಾಡಪತ್ರಿ ತಾಲ್ಲೂಕಿನ ಪುಟ್ಲುರು ಗ್ರಾಮದ ತಲಾರಿ ಜಯರಾಮ ಬಂಧಿತ ಆರೋಪಿತರು.

ನಗರದ ಹೊರವಲಯದ ಗೋಪಾಲಪುರಂ ಕ್ಯಾಂಪಿನ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಕೆ.ಪ್ರಸಾದ ಗೋಖಲೆ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಎಂ.ವಸಂತಕುಮಾರ, ಎಂ.ಚಿದಾನಂದ ಗದಗ, ವೈ.ಎಸ್‌. ಹನುಮಂತಪ್ಪ ನೇತೃತ್ವದ ಸಿಬ್ಬಂದಿ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್‌ ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಲೆಯಾದ ಪಿ.ವೆಂಕಟರಾಮಿರೆಡ್ಡಿ ಅವರು ದೂರದ ಸಂಬಂಧಿಯಾಗಿದ್ದ ಶ್ರೀನಿವಾಸರೆಡ್ಡಿ ಅವರ ಪತ್ನಿಯ ಮೊಬೈಲ್‌ಗೆ ಕರೆಮಾಡಿ ಅನಗತ್ಯ ಕಿರುಕುಳ ಹಾಗೂ ಅಶ್ಲೀಲಪದ ಬಳಕೆ ಮಾಡುತ್ತಿದ್ದರು. ಆಕೆಯು ತನಗಾದ ಮಾನಸಿಕ ಕಿರುಕುಳವನ್ನು ಪತಿಯ ಮುಂದೆ ಹೇಳಿದ್ದಾರೆ.

ಈ ವಿಷಯ ತಿಳಿದ ಶ್ರೀನಿವಾಸರೆಡ್ಡಿ ಹೇಗಾದರೂ ಸರಿ, ಆತನನ್ನು ಮುಗಿಸಲು ಒಳಸಂಚು ರೂಪಿಸಿದ್ದಾರೆ. ತಮಗೆ ಪರಿಚಯವಿರುವ ಆಟೋ ಚಾಲಕ ಜಯರಾಮ ಅವರಿಗೆ ಈ ವಿಷಯವನ್ನು ತಿಳಿಸಿದ್ದಾರೆ.

ಈ ಇಬ್ಬರೂ ಬೇರೊಬ್ಬರ ಹೆಸರಿನ ಅಡಿಯಲ್ಲಿ ಎರಡು ಸಿಮ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಏಪ್ರಿಲ್‌ 29ರ ಸಂಜೆಯ ಹೊತ್ತಿಗೆ ಬಳ್ಳಾರಿಗೆ ಬಂದಿದ್ದಾರೆ. ತಲಾರಿ ಜಯರಾಮ ಮೊಬೈಲ್‌ನಿಂದ ಪಿ.ವೆಂಕಟರಾಮಿರೆಡ್ಡಿ ಅವರ ಮೊಬೈಲ್‌ಗೆ ಕರೆಮಾಡಿ, ನಗರ ಹೊರವಲಯದ ಶ್ರೀನಿವಾಸ ನಗರ ಕ್ಯಾಂಪಿನ ಬಳಿಯಿರುವ ಪೈಪ್ ಕಾರ್ಖಾನೆ ಹಿಂದುಗಡೆ ಪಾರ್ಟಿ ಮಾಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ.

ಆತನಿಗೆ ಕಂಠಪೂರ್ತಿ ಕುಡಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮದ್ಯದ ಬಾಟಲ್‌ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಸಾಕ್ಷಿನಾಶ ಪಡಿಸುವ ಉದ್ದೇಶದೊಂದಿಗೆ ಬೈಕ್ ಸಮೇತ ಮೃತ ದೇಹವನ್ನು ಸುಟ್ಟು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

ಪೊಲೀಸರು ಹೊಸ ಸಿಮ್‌ ಕಾರ್ಡಿನ ಮೂಲ ಮಾಲೀಕರ ಪತ್ತೆ ಹಚ್ಚುತ್ತಿರುವ ಮಾಹಿತಿ ಪಡೆದ ಶ್ರೀನಿವಾಸರೆಡ್ಡಿ ಅವರು, ಸಿಮ್‌ ಕಾರ್ಡಿನ ಮಾಲೀಕರನ್ನೂ ಮುಗಿಸುವಂತೆ ಜಯರಾಮಗೆ ಸೂಚಿಸಿದ್ದಾರೆ. ಅದರಂತೆಯೇ, ಆನಂತಪುರ ಜಿಲ್ಲೆಯ ತಾಡಪತ್ರಿ ತಾಲ್ಲೂಕಿನ ಪುಟ್ಲುರು ಗ್ರಾಮದ ಶಾಲೆಯಲ್ಲಿ ಸಿಮ್‌ಕಾರ್ಡಿನ ಮಾಲೀಕ ಪರವಿಲ ಶೇಖರ್ ಅವರನ್ನು ಕರೆದೊಯ್ದು ಕಂಠಪೂರ್ತಿ ಕುಡಿಸಿ, ಮದ್ಯದ ಅಮಲಿನಲ್ಲಿರುವಾಗ ಆತನ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿದ್ದಾರೆ.

ಮೃತದೇಹವನ್ನೂ ಸುಟ್ಟು ಹಾಕಿರುವುದಾಗಿ ವಿಚಾರಣೆ ವೇಳೆ ಜಯರಾಮ ಒಪ್ಪಿಕೊಂಡಿದ್ದಾರೆ. ಈ ಕುರಿತು ಪುಟ್ಲುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಎಲ್‌.ಝೇಂಡಕರ್‌, ಗ್ರಾಮೀಣ ಉಪವಿಭಾಗದ ಡಿವೈಎಸ್‌ಪಿ ಟಿ.ವಿ.ಸುರೇಶ, ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಾದ ವೇಣು ಗೋಪಾಲ, ಎಂ.ಪಂಪಾಪತಿ, ಸಿಬ್ಬಂದಿ ಎಂ.ಶ್ರೀನಿವಾಸಲು, ಮಂಜುನಾಥ, ಶ್ರೀಧರ, ದುರ್ಗಾ ಪ್ರಸಾದ, ಶಿವರಾಜಕುಮಾರ, ಯಲ್ಲೇಶಿ, ರಖೀಬ್, ನಿಂಗಪ್ಪ, ಭೀರಪ್ಪ, ವೇಣುಗೋಪಾಲ, ಮಹಮ್ಮದ ಯುನೂಸ್, ರವಿ, ಸುರೇಶ, ಎಂ.ಬಂಡೇ ಗೌಡ, ತಾಂತ್ರಿಕ ಕೋಶದ ಸಿಬ್ಬಂದಿ ಪ್ರವೀಣ, ಸುರೇಶ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

ಸಿರುಗುಪ್ಪ
ಜಗತ್ತಿನಲ್ಲಿ ಇರುವುದು ಎರಡೇ ಜಾತಿ: ವೀರಭದ್ರ ಶ್ರೀ

19 Jan, 2018

ಬಳ್ಳಾರಿ
‘ಹಳೇ ಪಿಂಚಣಿ ಯೋಜನೆಯೇ ಇರಲಿ’

‘ಹಳೇ ಪಿಂಚಣಿ ಯೋಜನೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಶೇ 50ರಷ್ಟು ನಿಶ್ಚಿತ ಪಿಂಚಣಿ ದೊರಕುತ್ತದೆ. ಆದರೆ ಹೊಸ ಯೋಜನೆಯಲ್ಲಿ ಅದಕ್ಕಿಂತ ಹೆಚ್ಚು ಸೇವೆ...

19 Jan, 2018
ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟೀನ್‌ ಶುರು

ಬಳ್ಳಾರಿ
ಫೆಬ್ರುವರಿಯಲ್ಲಿ ಇಂದಿರಾ ಕ್ಯಾಂಟೀನ್‌ ಶುರು

18 Jan, 2018
ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

ಕುರೆಕುಪ್ಪ
ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ

17 Jan, 2018
ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೇ ಹೆಚ್ಚು!

ಬಳ್ಳಾರಿ
ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳೇ ಹೆಚ್ಚು!

17 Jan, 2018