ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಟಿ ವಿದ್ಯಾರ್ಥಿಗಳ ಹಣದ ಬಳಕೆಯಲ್ಲೂ ಹಿಂದೆ

ಕೊಟ್ಟಿದ್ದು ₹ 6 ಕೋಟಿ, ಖರ್ಚು ಮಾಡಿದ್ದು ₹ 4.80 ಕೋಟಿ: ಅಭಿವೃದ್ಧಿ ವಿ.ವಿಗೆ ಬೇಕಾಗಿಲ್ಲ, ಆಕ್ರೋಶ  
Last Updated 8 ಮೇ 2017, 6:47 IST
ಅಕ್ಷರ ಗಾತ್ರ
ತುಮಕೂರು: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ನೀಡಿರುವ ಹಣ ಮಾತ್ರವಲ್ಲ; ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಿರುವ ಹಣವನ್ನೂ ಬಳಸಿಕೊಳ್ಳಲು ತುಮಕೂರು ವಿಶ್ವವಿದ್ಯಾಲಯ ನಿರಾಸಕ್ತಿ ವಹಿಸಿದೆ.
 
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ನೀಡಿದ್ದ ₹13 ಕೋಟಿ ಅನುದಾನದಲ್ಲಿ ಕೇವಲ ₹ 4.75 ಕೋಟಿ ಖರ್ಚು ಮಾಡಲಾಗಿದೆ. ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ವಿಚಾರದಲ್ಲಿ ಒಂದಿಷ್ಟು ಔದಾರ್ಯ ತೋರಿರುವ ವಿ.ವಿ ಯು 2009ನೇ ಇಸವಿಯಿಂದ ಈವರೆಗೆ ಬಂದ ₹ 6 ಕೋಟಿ ಅನುದಾನದಲ್ಲಿ ₹ 4.80 ಕೋಟಿ ಖರ್ಚು ಮಾಡಿದೆ.
 
ವಿದ್ಯಾರ್ಥಿಗಳಿಗೆ ಡಿಜಿಟಲ್‌ ಗ್ರಂಥಾಲಯ, ಸ್ಪರ್ಧಾತ್ಮಕ  ಪರೀಕ್ಷಾ ಕೇಂದ್ರ ಸ್ಥಾಪನೆ, ಸಂಶೋಧನೆಗೆ ಫೆಲೋಶಿಪ್, ದಿನಭತ್ಯೆ, ಪ್ರಯಾಣ ವೆಚ್ಚ, ಹಾಸ್ಟೆಲ್‌ ಸೌಲಭ್ಯಗಳಿಗಾಗಿ ₹ 1 ಕೋಟಿ ಹಣ ನೀಡಿದ್ದರೂ ಕೇವಲ ₹4.5 ಲಕ್ಷ ವೆಚ್ಚ ಮಾಡಲಾಗಿದೆ.

2013–14ನೇ ಸಾಲಿನಲ್ಲಿ ವಿದ್ಯಾರ್ಥಿಗಳಲ್ಲಿ ಕೌಶಲ ಸಾಮರ್ಥ್ಯ ವೃದ್ಧಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೌಲಭ್ಯ, ವಿಶೇಷ ಗ್ರಂಥಾಲಯ ವ್ಯವಸ್ಥೆ, ಕ್ರೀಡೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಧನ ನೀಡಲು ನೀಡಿರುವ ಅನುದಾನದಲ್ಲಿ ನಯಾಪೈಸೆ ವೆಚ್ಚ ಮಾಡಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 
 
‘2016ರವರೆಗೂ ಪ್ರತಿ ವರ್ಷವೂ ಇದೇ ರೀತಿ ಅನುದಾನವನ್ನು ಉಳಿಸಿಕೊಂಡಿರುವುದು ಕಂಡುಬರುತ್ತದೆ. ಬೇರೆ ಬೇರೆ ಚಟುವಟಿಕೆಗಳನ್ನು ನಡೆಸಲು ಲಕ್ಷಾಂತರ ರೂಪಾಯಿ ಹಣ ನೀಡಲಾಗಿದೆ. ಆದರೂ ಖರ್ಚು ಮಾಡಿಲ್ಲ. ವಿದ್ಯಾರ್ಥಿಗಳ ಅಭಿವೃದ್ಧಿ ವಿ.ವಿಗೆ ಬೇಕಾಗಿಲ್ಲ’ ಎನ್ನುತ್ತಾರೆ ಉಪನ್ಯಾಸಕ ಜೆ.ಸಿ.ರಂಗಧಾಮಯ್ಯ.
****
ನಿರ್ಲಕ್ಷ್ಯವೇ ಕಾರಣ
‘ಹಣ ಬಳಸದೆ ಇದ್ದರೆ ಉದ್ದೇಶ ಸಫಲವಾಗುವುದಿಲ್ಲ. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಹಣ ನೀಡಲಾಗಿದೆ. ಹಣ ಖರ್ಚಾಗದ ಹೊಣೆಯನ್ನು ವಿ.ವಿ ಹೊರಬೇಕು’ ಎಂದು ಶಿಕ್ಷಣ ತಜ್ಞ ಕೆ.ದೊರೈರಾಜ್ ಅಭಿಪ್ರಾಯಪಟ್ಟರು. ವಿ.ವಿ ನಡೆಯಿಂದ ಮಕ್ಕಳ ಭವಿಷ್ಯಕ್ಕೆ ತೊಡಕು ಆಗಲಿದೆ. ಇದು ನೋವಿನ ಸಂಗತಿ ಎಂದರು.
****
ಎಲ್ಲ ಖರ್ಚು ಮಾಡುತ್ತೇವೆ
‘2012ರಲ್ಲಿ ಕಡಿಮೆ ಖರ್ಚು ಮಾಡಲಾಗಿತ್ತು. ಇಲ್ಲಿವರೆಗೆ ಏನು ಹಣ ಉಳಿದಿದೆಯೋ ಆ ಹಣವನ್ನು ಖರ್ಚು ಮಾಡಬಹುದು ಎಂದು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಎಲ್ಲ ಹಣವನ್ನು ಖರ್ಚು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಕುಲಸಚಿವ ಪ್ರೊ. ವೆಂಕಟೇಶ್ವರಲು ತಿಳಿಸಿದರು.

‘ಪುಸ್ತಕಗಳನ್ನು ಕೊಳ್ಳಲು  ₹ 60ರಿಂದ 70 ಲಕ್ಷ  ಹಂಚಿಕೆ ಮಾಡಲಾಗಿದೆ. ವಿಭಾಗಳಿಂದ ಪುಸ್ತಕದ ಪಟ್ಟಿ ಬಂದ ನಂತರ ಅದು ಖರ್ಚು ಆಗಲಿದೆ. ಉಳಿಕೆ ಹಣ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ (ಅಂಬೇಡ್ಕರ್‌ ಭವನ) ಕಟ್ಟಡ ನಿರ್ಮಾಣಕ್ಕೆ ಬಳಸಲು ಸಿಂಡಿಕೇಟ್‌ ಅನುಮೋದನೆ ಪಡೆಯಲಾಗಿದೆ’ ಎಂದರು.
****
ಸೊಳ್ಳೆ ಪರದೆ ವೈಶಿಷ್ಟ್ಯವೇನು?
‘ಹಾಸ್ಟೆಲ್‌ನಲ್ಲಿ ಸೊಳ್ಳೆಗಳ ಕಾಟ ಹೆಚ್ಚಿರುವುದರಿಂದ ಸೊಳ್ಳೆ ಪರದೆ ಕೊಳ್ಳಲು ಅವಕಾಶ ನೀಡುವಂತೆ ಕಳೆದ ವರ್ಷ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ವಿ.ವಿ ಹಣಕಾಸು ವಿಭಾಗದಿಂದ ಸೊಳ್ಳೆ ಪರದೆಯ ವೈಶಿಷ್ಟ್ಯವೇನು? ಎಂದು ಕೇಳಿ ವಾಪಸ್‌ ಪತ್ರ ಬರೆಯಲಾಯಿತು. ಪರಿಸ್ಥಿತಿ ಹೀಗಿರುವಾಗ ಹಣ ವೆಚ್ಚ ಮಾಡುವುದು ಹೇಗೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT