ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ನಿರ್ಲಕ್ಷ್ಯ: ರೈತರಿಗೆ ಅನ್ಯಾಯ

ಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 8 ಮೇ 2017, 6:48 IST
ಅಕ್ಷರ ಗಾತ್ರ
ಶಿರಾ: ‘ಗ್ರಾಮ ಲೆಕ್ಕಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಬೆಳೆ ಪರಿಹಾರದಿಂದ ವಂಚಿತರಾಗುವಂತಾಗಿದ್ದು, ರೈತರಿಗೆ ಅನ್ಯಾಯವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಆರೋಪಿಸಿದರು. 
 
ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
 
‘ರೈತರು ತೀವ್ರವಾದ ಬರದಿಂದಾಗಿ ತತ್ತರಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿಗಳು ತಹಶೀಲ್ದಾರ್ ಅವರ ಹಿಡಿತದಲ್ಲಿ ಇಲ್ಲ. ಅವರ ನಿರ್ಲಕ್ಷ್ಯದಿಂದಾಗಿ ಶೇ 38ರಷ್ಟು ರೈತರ ಮಾಹಿತಿಯನ್ನು ಇನ್ನೂ ಆನ್‌ಲೈನ್‌ನಲ್ಲಿ ನಮೋದಿಸಿಲ್ಲ. ಇದರಿಂದಾಗಿ ಹೆಚ್ಚಿನ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಲು ತಹಶೀಲ್ದಾರ್ ಅವರು ಸಭೆಗೆ ಬಂದಿಲ್ಲ. ಅವರನ್ನು  ಕರೆಸಿ ಈ ಬಗ್ಗೆ ಚರ್ಚೆ ನಡೆಸುಬೇಕು’ ಎಂದು ತಾಲ್ಲೂಕು ಪಂಚಾಯಿತಿ    ಕಾರ್ಯನಿರ್ವಹಣಾಧಿಕಾರಿಗಳಿಗೆ ಹೇಳಿದರು. 
 
ನೀರಿನ ಸಮಸ್ಯೆ ಬಗೆಹರಿಸಿ: ತಾಲ್ಲೂಕಿನಲ್ಲಿ ಬರಗೂರು, ಕದಿರೇಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ತಕ್ಷಣ ಅದನ್ನು ಬಗೆಹರಿಸಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು. 
 
ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ತಿಮ್ಮರಾಯಪ್ಪ ಮಾತನಾಡಿ, ‘ಕದಿರೇಹಳ್ಳಿ ಗ್ರಾಮದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಗುವುದು ಎಂದಾಗ, ಒಂದು ತಿಂಗಳಿನಿಂದ ಇದೇ ಮಾತು ಹೇಳಲಾಗುತ್ತಿದೆ. ಯಾವಾಗ ಕೊರೆಸುತ್ತೀರಿ ಎಂದು ಅಧ್ಯಕ್ಷರು ಪ್ರಶ್ನಿಸಿದರು. 
 
ತಾಲ್ಲೂಕಿನಲ್ಲಿ ಈಗಾಗಲೇ 109 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಿದ್ದು, ಗುತ್ತಿಗೆದಾರರಿಗೆ ₹ 1.71 ಕೋಟಿ ನೀಡಬೇಕಾಗಿದೆ. ಇದರಿಂದಾಗಿ ವಿಳಂಬವಾಗುತ್ತಿದೆ’ ಎಂದರು. 
 
ಕುಡಿಯುವ ನೀರಿನ ವಿಚಾರದಲ್ಲಿ ಹಣ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ ನೀವು ನೋಡಿದರೆ ಕೊಳವೆ ಬಾವಿ ಕೊರೆದ ಗುತ್ತಿಗೆದಾರರಿಗೆ ಹಣ ನೀಡಬೇಕು ಎಂದು ಹೇಳುತ್ತಿದ್ದೀರಿ ಎಂದು ಉಪಾಧ್ಯಕ್ಷ ರಂಗನಾಥಗೌಡ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಪ್ರಶ್ನಿಸಿದರು. 
ಕ್ರಿಯಾಯೋಜನೆ ಅನುಮೋದನೆ ಪಡೆಯದೆ ಕೊಳವೆಬಾವಿಗಳನ್ನು ಕೊರೆಸುವುದರಿಂದ ಹಣ ವಾಪತಿಗೆ ವಿಳಂಬವಾಗುವುದು ಎಂದು ತಿಮ್ಮರಾಯಪ್ಪ ಹೇಳಿದರು. 
 
ಹೊಸಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ಮೂರು ತಿಂಗಳಾದರೂ ಸಹ ಪಂಪ್‌ ಬಿಟ್ಟಿಲ್ಲ ಎಂದು ತಿಮ್ಮಣ್ಣ ಹೇಳಿದರು. ಆಗ ಗ್ರಾಮ ಪಂಚಾಯಿತಿಯಿಂದ ಮೋಟಾರ್ ಪಂಪ್‌ ಬಿಡಬೇಕು.
 
ನಮ್ಮ ಇಲಾಖೆಯಿಂದ ಕ್ರಿಯಾಯೋಜನೆ ತಯಾರಿಸಿ, ಅನುಮೋದನೆ ಪಡೆದು ಬಿಡಲು ತಡವಾಗುವುದು ಎಂದರು. ಸಿಟ್ಟಾದ ರಂಗನಾಥಗೌಡ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ತಿಮ್ಮಣ್ಣ ಅದುವರೆಗೂ ಜನಗಳ ಗತಿ ಏನಾಗಬೇಕು. ನಿಮ್ಮಿಂದ ವಿಳಂಬವಾಗುವಂತಿದ್ದರೆ ಪಂಚಾಯಿತಿಯಿಂದ ವ್ಯವಸ್ಥೆ ಮಾಡಿ ಎಂದರು. 
 
ಬಿಸಿಯೂಟ: ತಾಲ್ಲೂಕಿನ 402 ಶಾಲೆಗಳಲ್ಲಿ ಬೇಸಿಗೆಯ ಬಿಸಿಯೂಟ ಪ್ರಾರಂಭಿಸಿದ್ದು, 12,207 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಹೇಳಿದರು. 
 
ಬಿಸಿಯೂಟ ಬಹುತೇಕ ಕಡೆ ಮಕ್ಕಳು ಬರುತ್ತಿಲ್ಲ ನೀವು ಕೇವಲ ಅಂಕಿ ಆಂಶ ಮಾತ್ರ ನೀಡುತ್ತಿದ್ದೀರಿ ಎಂದು ತಿಮ್ಮಣ್ಣ ಪ್ರಶ್ನಿಸಿದಾಗ ಮಕ್ಕಳ ಬರದಿದ್ದರೆ ಬಿಸಿಯೂಟ ಸ್ಥಗಿತಗೊಳಿಸಲಾಗುವುದು ಈಗಾಗಲೇ ಇಂತಹ 21 ಶಾಲೆಗಳಲ್ಲಿ ನಿಲ್ಲಿಸಲಾಗಿದೆ. ಶಾಲೆಗಳಿಗೆ ಬೇಟಿ ನೀಡಿ ನಾನೇ ಪರಿಶೀಲನೆ ನಡೆಸುತ್ತಿರುವುದಾಗಿ  ನಾಗೇಂದ್ರಪ್ಪ ಹೇಳಿದರು. 
 
ಸೀರೆ ಹಂಚಿಕೆ: ಅಡುಗೆ ಸಹಾಯಕಿಯರಿಗೆ ಸೀರೆ ವಿತರಣೆ ಮಾಡಲಾಗುತ್ತಿದೆ ಎನ್ನುವ ದೂರು ಬರುತ್ತಿದೆ. ಜನಪ್ರತಿನಿಧಿಗಳ ಗಮನಕ್ಕೆ ತರದೇ ಯಾವ ಅನುದಾನದಲ್ಲಿ ಸೀರೆ ವಿತರಿಸಲಾಗುತ್ತಿದೆ ಎಂದು ಹಂಸವೇಣಿ ಶ್ರೀನಿವಾಸ್ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದರು. 
 
ಅಡುಗೆ ಸಹಾಯಕಿಯರಿಗೆ ಎಲ್ಲಿಯೂ ಸೀರೆ ವಿತರಣೆ ಮಾಡಿಲ್ಲ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಾಜಕುಮಾರ್ ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹಮದ್ ಮುಬೀನ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT