ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬೇಲಿ ದಾಟಿಸಿದ ಬೇಲ!

Last Updated 8 ಮೇ 2017, 19:30 IST
ಅಕ್ಷರ ಗಾತ್ರ

‘ಮರ ಹಾಕಿದ್ರೆ ಮರ ಆಗ್ತೀರಿ, ಗಿಡ ಹಾಕಿದ್ರೆ ಗಿಡ ಆಗ್ತೀರಿ. ಬರೀ ಕೃಷಿಯಲ್ಲಿ ತೊಡಗಿದರೆ ಜೀವನ ಮಾಡೋದು ಕಷ್ಟ. ಒಂದು ಎಕರೆಯಲ್ಲಾದರೂ ತೋಟ ಮಾಡಬೇಕು. ತೋಟ ಹಾಕಿ ಪಾಪ ಕಳಿ ಅಂತಾರೆ ಹಿರಿಯರು. ಆದರೆ ಅದು ಯಾರಿಗೂ ಈಗ ನೆನಪಿಲ್ಲ. ..’

ಹಸನ್ಮುಖಿ ಹುಲಿಕೆರೆ ವಿಶ್ವೇಶ್ವರ ಸಜ್ಜನ ತಮ್ಮ ತೋಟವನ್ನು ನೋಡಲು ಬರುವ ರೈತರಿಗೆ, ರೈತರಲ್ಲದವರಿಗೆ ನಿರಂತರವಾಗಿ ಹೇಳುತ್ತಿರುವ ಮಾತುಗಳಿವು. ಅದು ಕೇವಲ ಸಲಹೆ ಅಲ್ಲ. ಅನುಭವದಿಂದ ತಿಳಿದುಕೊಂಡ ಸತ್ಯ.

‘ಮರ ಹಾಕಿದರೆ ಸಬಲರಾಗ್ತೀವಿ. ಅವು ನಮ್ಮನ್ನ ಗೊಬ್ರ, ಔಷಧಿ ಕೇಳಲ್ಲ. ನೀರು ಬಹಳ ಬೇಕಾಗಿಲ್ಲ. ತಮಗೇನು ಬೇಕೋ ಅದನ್ನು ತಾವೇ ಪ್ರಕೃತಿಯಿಂದ ಸೃಷ್ಟಿಸಿಕೊಳ್ಳುತ್ತವೆ. ಸುತ್ತಮುತ್ತಲಿನ ವಾತಾವರಣವೂ ತಂಪಿನಿಂದ ಕೂಡಿರುತ್ತದೆ. ರೈತರಿಗೆ ಇನ್ನೇನು ಬೇಕು’ ಎನ್ನುವುದು ಅವರ ಪ್ರಶ್ನೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಹುಲಿಕೆರೆ ಎಂಬ ಪುಟ್ಟಹಳ್ಳಿಯಲ್ಲಿರುವ ಅವರ ಆರು ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಸೀಳಿಕೊಂಡು ಹೋಗಿದೆ. ರಸ್ತೆಯ ಒಂದು ಪಕ್ಕದಲ್ಲಿ ಬೇಲ, ನೇರಳೆ, ತೆಂಗಿನ ತೋಟವಿದ್ದು, ಅದರ ಅಂಚಿಗೆ ಬೇಲದ ಜ್ಯೂಸ್‌ ಅಂಗಡಿಯಿದೆ. ಮತ್ತೊಂದು ಪಕ್ಕದಲ್ಲಿ ಅವರೇ ನಿರ್ಮಿಸಿರುವ ನರ್ಸರಿ ಇದೆ. ಅಲ್ಲಿ ಮರವಾಗುವ ಸಸಿಗಳೇ ಹೆಚ್ಚಿವೆ.

ಇದರಲ್ಲೇನು ವಿಶೇಷ ಎಂದಿರಾ? ಅವರದು ನೀರು ಇಂಗದ, ಬೇರು ಬಲವಾಗಿ ಇಳಿಯಲು ಆಗದ ಸವಳು ಮತ್ತು ಕರ್ಲು ಭೂಮಿ. ಅಂಥದ್ದರಲ್ಲೇ ಅವರು ಮರ ಕೃಷಿ ನಡೆಸಿ ಮೂವರು ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಅವರಿಗೆ ಈಗ ಆದಾಯ ತಂದುಕೊಡುತ್ತಿರುವ ಬೇಲದ ಮರಗಳ ಹಿಂದೆಯೂ ಒಂದು ಕಹಿ ಸತ್ಯವಿದೆ.

‘ನನ್ನ ಅಪ್ಪ ಷಡಕ್ಷರಿ 80 ತೆಂಗಿನ ಮರಗಳನ್ನು ಬೆಳೆಸಿದ್ದರು. ಈಗ ಇರುವಂಥದ್ದೇ ಒಂದು ಬರಗಾಲ ಬಂದು ಒಣಗಿಬಿಟ್ಟವು. 20–30 ಮರಗಳನ್ನು ಉಳಿಸಿಕೊಳ್ಳಲೆಂದೇ ಕೊಳವೆಬಾವಿ ಕೊರೆಸಿ ಬಹಳ ಪಡಿಪಾಟಲು ಪಟ್ಟೆ. ಒಣಗುವ ಮರಗಳನ್ನು ಕಡಿಯೋದು, ಮಾರೋದು, ಮತ್ತೆ ಬೋರ್‌ ಹಾಕಿಸೋದೇ ನಡೆಯುತ್ತಿತ್ತು. ಅದೇ ವೇಳೆ ಪಕ್ಕದಲ್ಲಿದ್ದ ಬೇಲದ ಮರಗಳು ನಗುತ್ತಿದ್ದವು. ಹೀಗಾಗಿ ಬೇಲದ ತೋಟವನ್ನೇ ಮಾಡಲು ನಿರ್ಧರಿಸಿದೆ’ ಎಂದು ಅವರು ಮೆಲುಕು ಹಾಕುತ್ತಾರೆ.

ಈಗ ಅಲ್ಲಿ ಇನ್ನೂರು ಬೆಟ್ಟದ ನೆಲ್ಲಿ, ನಲವತ್ತು ನೇರಳೆ, ಐವತ್ತು ತೆಂಗು, ನೂರೈವತ್ತು ಹೆಬ್ಬೇವು, ಹತ್ತು ಹುಣಸೆ ಮತ್ತು ಎಂಬತ್ತು ನುಗ್ಗೆ ಮರಗಳಿವೆ.   
ಬೇಲದ ಕತೆ

ಸಜ್ಜನ ಅವರು ಮೊದಲು ಮಲ್ಲಿಗೆ ಮತ್ತು ಕನಕಾಂಬರ ಕೃಷಿಕ. ನಷ್ಟದಿಂದ ಬದಲಾದ ಸನ್ನಿವೇಶ ಮತ್ತು ತಿಳವಳಿಕೆಯಿಂದ, ‘ಎಳೆಗರುಂ ಎತ್ತಾಗದೆ, ಲೋಕದಲ್ ಮಿಡಿ ಪೊಣ್ಣಾಗದೆ, ಬಡವಂ ತಾನ್‌ ಬಲ್ಲಿದನಾಗನೆ’ ಎಂಬ ಕಾವ್ಯದ ಸಾಲಿನಂತೆ ಅವರು ಗಿಡದ ಕೃಷಿಯಿಂದ ಮರ ಕೃಷಿಗೆ ನೆಗೆದರು. ಮೊದಲು ನೆಟ್ಟಿದ್ದು ನೇರಳೆ. ನಂತರ ಸೀತಾಫಲ. ಅವು ಕೈಗೆ ದಕ್ಕಲಿಲ್ಲ.

‘ಹದಿಮೂರು ವರ್ಷದ ಹಿಂದೆ ಚಳ್ಳಕೆರೆಯ ಅರಣ್ಯ ಸಂಶೋಧನಾ ಕೇಂದ್ರದಲ್ಲಿ ಬೇಲದ ಸಸಿಗಳು ಸಿಕ್ಕವು. ಹಾಕಿದ್ದು ನೂರು, ಉಳಿದುಕೊಂಡಿದ್ದು ಮೂವತ್ತು, ಜಸ್ಟ್‌ ಪಾಸ್‌ ಆದಂಗೆ’ ಎಂದು ನಕ್ಕರು 58ರ ಇಳಿವಯಸ್ಸಿನಲ್ಲೂ ಯುವಕರನ್ನು ನಾಚಿಸುವಂತೆ ಬೆವರಿಳಿಸಿ ದುಡಿಯುವ ಸಜ್ಜನ. ಈಗ ಎರಡು ವರ್ಷದಿಂದ ಅವರು ಫಸಲು ಕಾಣುತ್ತಿದ್ದಾರೆ. ಹದಿನೈದು ಗಿಡಗಳಲ್ಲಿ ಹಣ್ಣುಗಳಿವೆ.



ಅವಿಶ್ರಾಂತ ದುಡಿಮೆ ಮತ್ತು ಹಾಸ್ಯಪ್ರಜ್ಞೆ ಅವರ ಟ್ರೇಡ್‌ಮಾರ್ಕ್. ಎಂ.ಎ ಕನ್ನಡ ಓದಿ, ಫೇಲಾಗಿರುವ ಅವರು, ಈಗ ಜಿಲ್ಲೆಯಲ್ಲಿ ಬಸವಳಿದ ರೈತರ ನಡುವೆ ಭಿನ್ನವಾಗಿ ಕಾಣುವುದೂ ಇದೇ ಕಾರಣಕ್ಕೆ.

ಮನೆಯ ಐವರು ಸದಸ್ಯರು ಮತ್ತು ಇಬ್ಬರು ಕೂಲಿಗಳ ನೆರವಿನಿಂದ ಅವರು ಬೇಲದ ತಿರುಳನ್ನು ತೆಗೆದು ಮೌಲ್ಯವರ್ಧನ ಮಾಡಿ ಮಾರಾಟ ಮಾಡುತ್ತಿದ್ದಾರೆ. ಬೇಲದ ಹಣ್ಣನ್ನು ಕೈಯಲ್ಲಿ ಒಡೆದು, ಚಮಚದಲ್ಲಿ ತಿರುಳನ್ನು ತೆಗೆದು, ಬೀಜಗಳ ಸಮೇತ ಮಿಕ್ಸಿಗೆ ಹಾಕಿ ರುಬ್ಬುತ್ತಾರೆ. ನಂತರ ಬೆಲ್ಲ, ಜಾಕಾಯಿ, ಶುಂಠಿ, ಏಲಕ್ಕಿಯನ್ನು ಸ್ವಾದಕ್ಕೆ ಹಾಕುತ್ತಾರೆ. ಯಾವುದೇ ರಕ್ಷಕಗಳನ್ನು ಬಳಸುವುದಿಲ್ಲ. ಇದೇ ಮೌಲ್ಯವರ್ಧನ ಪ್ರಕ್ರಿಯೆ.

ಮೊದಲು ಮೇಳಗಳಿಗೆ, ಕೃಷಿ, ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳಿಗೆ, ಮರ ಕೃಷಿ ಕುರಿತ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುವಾಗ ಹಣ್ಣುಗಳನ್ನು ಕೊಂಡೊಯ್ದು ಮಾರಿಕೊಂಡು ಬರುತ್ತಿದ್ದರು. ಈಗ ಚೀಲ ಬಿಟ್ಟಿದ್ದಾರೆ. ‘ಗ್ರಾಹಕ ರೈತರ ಮಿಲನ’ ವೇದಿಕೆ ಅಡಿ ಬೆಂಗಳೂರಿನ ಎರಡು ಕಡೆ ಅವರ ಬೇಲಕ್ಕೆ ಉತ್ತಮ ಬೇಡಿಕೆ ಇದೆ. ತೀರ್ಥಹಳ್ಳಿಯ ಸಾವಯವ ಮಹಾಮಂಡಳ ಅವರಿಗೆ ನೆರವಾಗಿದೆ.

‘ಸವುಳು ಮತ್ತು ಕರ್ಲು ಭೂಮಿ ನನ್ನ ಮುಂದಿರುವ ಏಕೈಕ ಆಯ್ಕೆ. ಅದರಲ್ಲೇ ನಾನು ಜೀವನ ಕಟ್ಟಿಕೊಂಡಿದ್ದೀನಿ. ಜಿಲ್ಲೆಯಲ್ಲಿ ಈ ವರ್ಷ ತೊಂಬತ್ತು ಪರ್ಸೆಂಟ್‌ ಬರಗಾಲ. ನನಗೆ ಬರಗಾಲವೇ ಇಲ್ಲ. ಈ ವರ್ಷ ಬೇಲದ ಹಣ್ಣು ಮಾರಿದ್ದರಿಂದಲೇ ಒಂದೂವರೆ ಲಕ್ಷ ರೂಪಾಯಿ ಆದಾಯ ಬಂದಿದೆ’ ಎಂಬುದು ಅವರ ಆತ್ಮವಿಶ್ವಾಸದ ನುಡಿ.

‘ಬೆಟ್ಟದಾ ಮೇಲೆ ಹುಟ್ಟಿದ ವೃಕ್ಷಕ್ಕೆ ಕಟ್ಟೆಯ ಕಟ್ಟಿ ನೀರೆರೆದವರಾರು? ತೋಟ ಎಂದರೆ ನೀರು ಬೇಕೇ ಬೇಕು ಅಂತೇನಿದೆ? ಅರಣ್ಯ ಇಲಾಖೆಯವರು ಗಿಡ ಸಿದ್ಧಪಡಿಸಿಟ್ಟುಕೊಂಡಿರುತ್ತಾರೆ. ಮಳೆ ಬರುತ್ತಲೇ ಗುಣಿಗಳಲ್ಲಿ ನೆಟ್ಟುಬಿಡುತ್ತಾರೆ. ಅವು ಹೇಗೆ ಬೆಳೆಯುತ್ತವೆ? ಈ ತಂತ್ರ ರೈತರಿಗೆ ಯಾಕೆ ಬರುವಲ್ದು? ಈಗ ಹೊಸ ತೋಟವನ್ನು ನನ್ನ ತಮ್ಮನ ಹೊಲದಲ್ಲಿ ಮಾಡ್ತಿದ್ದೀನಿ. ‘ಜೀವನ ವನ’ ಅದರ ಹೆಸರು. ಹೊಲದಿಂದ ರೈತ ಹೇಗೆ ಉಳಿಯಬಹುದು ಎಂದು ತೋರಿಸಲೆಂದೇ ಮಾಡ್ತಿದ್ದೀನಿ’ ಎಂದು ನಕ್ಕರು.

1 ಮರದಿಂದ 10 ಸಾವಿರ ರೂಪಾಯಿ ಲಾಭ!
ಸಜ್ಜನ ಅವರ ತೋಟದ ಪ್ರತಿ ಬೇಲದ ಮರವೂ ಒಮ್ಮೆ ಉದುರಿಸುವ ಹಣ್ಣುಗಳಿಂದ (ಅವರು ಮರದಿಂದ ಬಿದ್ದ ಹಣ್ಣನ್ನಷ್ಟೇ ಬಳಸುತ್ತಾರೆ) ಕನಿಷ್ಠ 10 ಸಾವಿರ ರೂಪಾಯಿ ಲಾಭವಿದೆ. ಪ್ರತಿ ಮರದಿಂದ ಎರಡು ಕ್ವಿಂಟಲ್‌ ಹಣ್ಣು ಸಿಗುತ್ತದೆ. ಅದರಿಂದ ಒಂದು ಕ್ವಿಂಟಲ್‌ ತಿರುಳು. ಅದಕ್ಕೆ ಒಂದೂ ಕಾಲು ಕ್ವಿಂಟಲ್‌ ಬೆಲ್ಲ ಸೇರ್ಪಡೆಯಾಗುತ್ತದೆ. 300 ಗ್ರಾಂ ತಿರುಳಿನ ಬಾಟಲಿಗೆ ಅವರು ಇಟ್ಟಿರುವ ದರ 100 ರೂಪಾಯಿ. ಬೆಂಗಳೂರಿನಿಂದ ತರುವ ಖಾಲಿ ಬಾಟಲಿ ಬೆಲೆ 16 ರೂಪಾಯಿ.

‘ಶಿವರಾತ್ರಿಯಿಂದ ಹಿಡಿದು ಶ್ರಾವಣದವರೆಗೆ ಹಣ್ಣು ಬಿಡುತ್ತವೆ. ತಿರುಳನ್ನು ತೆಗೆದು ಒಣಗಿಸಿಟ್ಟುಕೊಳ್ಳುತ್ತೇವೆ. ಬೇಕೆಂದಾಗ ಅದನ್ನು ತೆಗೆದು ಜ್ಯೂಸ್‌ ಮಾಡಿ ಮಾರುತ್ತೇವೆ. ಹೀಗಾಗಿ ಎಲ್ಲ ಕಾಲದಲ್ಲೂ ಬೇಲ ನಮಗೆ ಆದಾಯದ ಮೂಲವಾಗಿದೆ’ ಎನ್ನುತ್ತಾರೆ ಸಜ್ಜನ. ಅವರ ಜ್ಯೂಸ್‌ ಅಂಗಡಿಯಲ್ಲಿ ಸಿರಿಧಾನ್ಯಗಳೂ ದೊರಕುತ್ತವೆ. ಮುಂದೆ, ಸಾವಯವ ಹೋಟೆಲ್‌ ಮಾಡಲು ನಿರ್ಧರಿಸಿದ್ದಾರೆ.

ಕ್ಯೂಬಾದ ಮಾದರಿ ಬೇಕು...
‘ಶೂನ್ಯ ಕೃಷಿ ಬಂಡವಾಳದ ಸೂತ್ರವನ್ನು ರೈತರು ಅನುಸರಿಸಬೇಕು. ಕ್ಯೂಬಾ ದೇಶ ಇದನ್ನೆಲ್ಲ ಮಾಡಿತು. ನಮಗೆ ಮಾತ್ರ ಹಸಿರು ಕ್ರಾಂತಿ ಬೇಕಾಯಿತು. ಆದರೆ ಅದರಿಂದಲೂ ತೊಂದರೆ ಆಯಿತು. ಫಿಡೆಲ್‌ ಕ್ಯಾಸ್ಟ್ರೋ ಅಜ್ಜಂದಿರನ್ನು, ತಂತ್ರಜ್ಞರನ್ನು ಕರೆದು ಅವರ ಸಲಹೆ ಪಡೆದು ಸಾವಯವ ರಾಷ್ಟ್ರವನ್ನು ನಿರ್ಮಿಸಿದ. ಆದರೆ ಇಲ್ಲಿ ನಮ್ಮ ರೈತರು ನಮ್ಮ ಭಾಷೆಯಲ್ಲಿ ಪ್ರಕಟವಾಗುವ ಕೃಷಿ ಸಂಬಂಧಿತ ಪತ್ರಿಕೆಗಳನ್ನು ತರಿಸುವುದೂ ಇಲ್ಲ. ಓದುವುದೂ ಇಲ್ಲ. ಕೃಷಿ ಮೇಳಗಳಿಗೆ ಬರುವುದೇ ಇಲ್ಲ. ಇನ್ನು ಯಶೋಗಾಥೆಗಳ ಪರಿಚಯ ಹೇಗಾದೀತು’ ಎದು ಕೇಳುತ್ತಾರೆ ಸಜ್ಜನ.

‘ಇರುವ ನೀರನ್ನೇ ಸದ್ಬಳಕೆ ಮಾಡಿಕೊಳ್ಳಬೇಕು. ಬರುವ ಮಳೆಯಷ್ಟನ್ನೇ ಬಳಸಿ ಬದುಕು ನಡೆಸುವುದನ್ನು ಕಲಿಯಬೇಕು. ಪೇಟೆಗೆ ಹೋಗಿ ದುಡಿಯುವವರಿಗಿಂತಲೂ ಹೆಚ್ಚು ಸಂಬಳ ಹೊಲದಲ್ಲಿದೆ ಎಂದು ತೋರಿಸಿಕೊಡಬೇಕು. ಲಾಭ ಮಾಡಿದರೆ ರೈತರ ಮಕ್ಕಳೇಕೆ ಪೇಟೆಗೆ ಹೋಗುತ್ತಾರೆ’ ಎಂಬುದು ಅವರ ಪ್ರಶ್ನೆ.

ಆನಂದ ನರ್ಸರಿ
ಸಜ್ಜನ ಅವರ ನರ್ಸರಿಯ ಹೆಸರು ಆನಂದ. ಅವರ ಮೂವರು ಮಕ್ಕಳ ಹೆಸರು ವಿವೇಕಾನಂದ, ದಯಾನಂದ ಮತ್ತು ಅರವಿಂದ. ಎರಡು ಕೊಳವೆಬಾವಿ ನೀರಿನಿಂದ ತೋಟ ಮತ್ತು ನರ್ಸರಿಯನ್ನು ನಿರ್ವಹಿಸುತ್ತಿರುವ ಅವರು ನರ್ಸರಿಯಲ್ಲಿ ಒಂದು ಇಂಗುಗುಂಡಿಯನ್ನೂ ನಿರ್ಮಿಸಿದ್ದಾರೆ.

ಹೀಗಾಗಿ ಅಲ್ಲಿನ ಕೊಳವೆ ಬಾವಿಯಲ್ಲಿ ನೀರು ಬತ್ತಿಲ್ಲ. ನರ್ಸರಿಯಲ್ಲಿ ಮರಗಳನ್ನು ಬೆಳೆಸುವ ಕುರಿತ ಸಂದೇಶ ಫಲಕಗಳೂ ವಿಶೇಷ. ಅಲ್ಲಿ ಚೌಕಾಸಿಗೂ ಅವಕಾಶವಿಲ್ಲ.

ಮನೆಯಲ್ಲಿ ಗಿರ್‌ ತಳಿಯ ಹಸುಗಳಿವೆ. ಅವುಗಳಿಗೆ ‘ಅಡವಿ ಹುಲ್ಲು, ಮಡಗಿದ್‌ ನೀರಷ್ಟೇ’ ಆಹಾರ. ಗೋಮೂತ್ರದಿಂದ ಅವರು ಅರ್ಕ ಎಂಬ ಔಷಧಿ ತಯಾರಿಸುತ್ತಿದ್ದಾರೆ. ಅವರ ತಿಪ್ಪೆಗೆ ಇಟ್ಟ ಹೆಸರು ‘ಅಕ್ಷಯ ಸಸ್ಯಕಾಶಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT