ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊಡ್ಮನೆ’ಗೆ ಸಂತ್ರಸ್ತ ಬಾಲಕಿಯರು

Last Updated 8 ಮೇ 2017, 19:30 IST
ಅಕ್ಷರ ಗಾತ್ರ

‘ನಾವೀಗ ಅರಮನೆಯನ್ನೇ ಪ್ರವೇಶಿಸಿದ ಹಾಗಾಯಿತು’ ಎಂದು ಸಂತ್ರಸ್ತ ಬಾಲಕಿ ಸುಮಾ ಹೇಳುವಾಗ ಅವಳಿಗೆ ಏನೋ ಹೊಸದನ್ನು ಪಡೆದ ಅನುಭವ. ಕಿಷ್ಕಿಂಧೆಯಂತಿದ್ದ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಸಂತ್ರಸ್ತ ಹೆಣ್ಣು ಮಕ್ಕಳಿಗೀಗ ವ್ಯವಸ್ಥಿತ ಸೂರು ದೊರಕಿದೆ.

ಸಮಾಜದಲ್ಲಿ ಮೂಲೆಗುಂಪಾಗಿರುವ, ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವ ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿ ಮಾಡುವ ನಿಟ್ಟಿನಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ಬಾಲಕಿಯರಿಗೆ ಬೆಚ್ಚಗಿನ ಆಶ್ರಯದಾಣ ರೂಪಿಸಿದೆ.

ಸಾಮಾಜಿಕ ಕಾರ್ಯಕರ್ತೆ ಪ್ರೊ.ಹಿಲ್ಡಾ ರಾಯಪ್ಪನ್ ಅವರ ಪ್ರಯತ್ನದ ಫಲವಾಗಿ 1987 ಏಪ್ರಿಲ್ 16ರಂದು ಜನ್ಮಪಡೆದ ಈ ಕೇಂದ್ರ ಇಂದು ಆಲದ ಮರದಂತೆ ಬೆಳೆದು, ಅದೆಷ್ಟೋ ನೊಂದ ಜೀವಗಳಿಗೆ ಆಸರೆಯಾಗಿದೆ. ಕೇಂದ್ರವು ಮೂರು ದಶಕ ಪೂರೈಸಿದ ಸಂದರ್ಭದಲ್ಲಿ ಮೂಡುಬಿದಿರೆಯ ಮುರ್ಕದಪಲ್ಕೆಯಲ್ಲಿ ಬಾಲಕಿಯರಿಗೆ ‘ದೊಡ್ಮನೆ’ಯನ್ನು ನಿರ್ಮಿಸಲಾಗಿದೆ. ಕಳೆದ ವಾರವಷ್ಟೇ ಈ ಮನೆಗೆ ಹೆಣ್ಣು ಮಕ್ಕಳು ಸಂಭ್ರಮದಿಂದ ಪ್ರವೇಶ ಮಾಡಿದ್ದಾರೆ.

ರಾಜ್ಯ ಸರ್ಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೆರವಿನೊಂದಿಗೆ 2001ರಲ್ಲಿ ‘ಪ್ರಜ್ಞಾ’ದಲ್ಲಿ ಬಾಲಕಿಯರ ಅರ್ಹ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ನಿರ್ಲಕ್ಷಿತ, ನಿರ್ಗತಿಕ, ಪರಿತ್ಯಕ್ತ, ಶೋಷಣೆಗೊಳಗಾದ, ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೆ ಇದು ಆಶ್ರಯ ತಾಣವಾಗಿದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ನೀಡಲಾಗುತ್ತದೆ.

ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಇಲ್ಲಿ ಈತನಕ ಒಟ್ಟು 245 ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ ಕೌಟುಂಬಿಕ ಹಾಗೂ ಸಾಮಾಜಿಕ ಪುನರ್ವಸತಿ ಕಲ್ಪಿಸಲಾಗಿದೆ. ಪ್ರಸ್ತುತ 36 ಬಾಲಕಿಯರು ರಕ್ಷಣೆ ಪಡೆಯುತ್ತಿದ್ದಾರೆ. 18 ವರ್ಷ ತುಂಬಿದ ಬಹುತೇಕ ಮಂದಿ ಮತ್ತೆ ತಮ್ಮ ಕುಟುಂಬವನ್ನು ಸೇರಿದ್ದಾರೆ. ಇನ್ನು ಕೆಲವರು ಉದ್ಯೋಗ ಅರಸಿ ಹೋಗಿದ್ದಾರೆ. 11 ಮಂದಿಗೆ ಮದುವೆಯನ್ನೂ ಮಾಡಿಸಲಾಗಿದೆ.

ಈ ಸಂಸ್ಥೆಗೆ ಸ್ವಂತ ಕಟ್ಟಡ ಕಲ್ಪಿಸುವುದು ಹಿಲ್ಡಾ ಅವರ ಬಹುವರ್ಷಗಳ ಕನಸಾಗಿತ್ತು. ದಾನಿಗಳ ಸಹಕಾರದಿಂದ ಅದು ಈ ಬಾರಿ ಸಾಕಾರಗೊಂಡಿದೆ. ಬೆಳುವಾಯಿಯ ಎರಿಕ್‌ ಕೊರೆಯಾ ಅವರು ಎರಡು ಎಕರೆ ಜಾಗವನ್ನು ಕೊಡುಗೆಯಾಗಿ ನೀಡಿದ್ದರು. ಜರ್ಮನಿ ಸರ್ಕಾರದ ಧನಸಹಾಯ ಸಹ ಸಿಕ್ಕಿತು. ಸುಮಾರು ₹1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ಕಟ್ಟಲಾಗಿದೆ. 

ದೊಡ್ಮನೆಯಲ್ಲಿ ಏನೇನಿದೆ: ಸುಮಾರು 4000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ ಎರಡು ಮಹಡಿ ಇದೆ. ನೆಲ ಅಂತಸ್ತಿನಲ್ಲಿ ಸಂದರ್ಶಕರ ಕೊಠಡಿ, ವಿಶ್ರಾಂತಿ ಕೊಠಡಿ, ಕಲಿಕಾ ಕೊಠಡಿ, ಗ್ರಂಥಾಲಯ, ಕಚೇರಿ, ಕೌನ್ಸೆಲಿಂಗ್‌ ಕೊಠಡಿ, ರೋಗಿಗಳ ಕೊಠಡಿ, ಅಡುಗೆ ಮನೆ, ಭೋಜನಾಲಯ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ನಾಲ್ಕು ಕೊಠಡಿಗಳಿದ್ದು, ಒಂದೊಂದರಲ್ಲಿ 15 ಮಂದಿ ಮಲಗುವ ವ್ಯವಸ್ಥೆ ಕಲ್ಪಿಸಲಾಗಿದೆ.

‘ನಾಲ್ಕು ವರ್ಷಗಳಿಂದ ನಾನು ಪ್ರಜ್ಞಾ ಸಂಸ್ಥೆಯಲ್ಲಿ ಇದ್ದೇನೆ. ಹಿಂದೆ ಬಾಡಿಗೆ ಮನೆಯಲ್ಲಿ ಸ್ವಲ್ಪ ಇಕ್ಕಟ್ಟಿತ್ತು. ಇದೀಗ ದೊಡ್ಡ ಮನೆಗೆ ಬಂದಿರುವುದು ಖುಷಿಯಾಗಿದೆ. ನಮಗೆ ‘ದೊಡ್ಮನೆ’ ಕಟ್ಟಿಕೊಟ್ಟ ದಾನಿಗಳಿಗೆ ಕೃತಜ್ಞತೆಗಳು’ ಎನ್ನುತ್ತಾಳೆ ಏಳನೇ ತರಗತಿ ಓದುತ್ತಿರುವ ಸರಸ್ವತಿ.

‘ಆರು ವರ್ಷಗಳಿಂದ ನನಗೆ ಈ ಸಂಸ್ಥೆಯೇ ಎಲ್ಲ. ಇಲ್ಲಿಗೆ ಬಂದ ಬಳಿಕ ಕಷ್ಟವನ್ನು ಸವಾಲಾಗಿ ಎದುರಿಸುವುದನ್ನು ಕಲಿತಿದ್ದೇನೆ. ಉನ್ನತ ಶಿಕ್ಷಣದ ಕನಸನ್ನು ಹೊಂದಿದ್ದೇನೆ’ ಎನ್ನುತ್ತಾಳೆ ರಾಧಾ.

ಬಹುತೇಕ ಬಾಲಕಿಯರು ಮಂಗಳೂರು ನಗರದ ವಿವಿಧ ಶಾಲಾ– ಕಾಲೇಜುಗಳಲ್ಲಿ ಕಲಿಯುತ್ತಿದ್ದರು. ಅವರೆಲ್ಲ ಮೂಡುಬಿದಿರೆಗೆ ಸ್ಥಳಾಂತರ ಆಗಿರುವುದರಿಂದ ಶಿಕ್ಷಣ ಸಂಸ್ಥೆಗಳನ್ನೂ ಬದಲಿಸಬೇಕಿದೆ.

ಈ ಬಗ್ಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಜತೆ ಚರ್ಚಿಸಲಾಗಿದ್ದು, ಅವರ ಸಂಸ್ಥೆಯಲ್ಲಿ ಉಚಿತ ಪ್ರವೇಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದರಿಂದ ಸ್ವಲ್ಪ ನಿರಾಳವಾಗಿದ್ದೇನೆ’ ಎಂದು ಹೇಳುತ್ತಾರೆ ಹಿಲ್ಡಾ.
ದೊಡ್ಮನೆ ಪ್ರವೇಶಿಸಿದ ಮಕ್ಕಳಲ್ಲೀಗ ಸಂಭ್ರಮ ಮನೆಮಾಡಿದೆ.
(ಅಭಿಪ್ರಾಯ ಹಂಚಿಕೊಂಡ ಎಲ್ಲ ಬಾಲಕಿಯರ ಹೆಸರು ಬದಲಾಯಿಸಲಾಗಿದೆ)

‘ಪ್ರಜ್ಞಾ’ಗೆ ಜೀವನ ಮುಡಿಪು
ಸಮಾಜ ಸೇವೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ನಾನು ಎಂಎಸ್‌ಡಬ್ಲ್ಯೂ (ಸ್ನಾತಕೋತ್ತರ ಸಮಾಜ ಕಾರ್ಯ) ಪದವಿ ಪಡೆದಿದ್ದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವಿದ್ಯಾರ್ಥಿ ವೇತನಕ್ಕೂ ಆಯ್ಕೆಯಾಗಿದ್ದೆ. ಬಳಿಕ, ಏಷ್ಯಾ ಖಂಡದ ಹತ್ತಾರು ದೇಶಗಳ ವಿಶ್ವವಿದ್ಯಾಲಯಗಳಿಗೆ ತೆರಳಿ ಅಲ್ಲಿನ ಪಠ್ಯಕ್ರಮದಲ್ಲಿ ‘ಸೈಕೊ ಥಿಯರಿ’ ಮತ್ತು ‘ಮಹಿಳಾ ಸಬಲೀಕರಣ’ ವಿಷಯ ಸೇರ್ಪಡೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ, ತವರಿನಲ್ಲೇ ಜನರ ಸೇವೆ ಮಾಡುವ ಇರಾದೆಯಿಂದ ನಾನು ಕಲಿತ ಕಾಲೇಜಿನಲ್ಲೇ ಪ್ರಾಧ್ಯಾಪಕಿಯಾಗಿ ಸೇರಿಕೊಂಡೆ. ಈ ಮಧ್ಯೆ ಕೌನ್ಸೆಲಿಂಗ್ ನೀಡಲು ಪ್ರತ್ಯೇಕ ಕೇಂದ್ರ ತೆರೆದೆ. ಅದೇ ಮುಂದೆ ‘ಪ್ರಜ್ಞಾ’ ಸಲಹಾ ಕೇಂದ್ರವಾಗಿ ಹೆಮ್ಮರವಾಗಿ ಬೆಳೆಯಿತು’ ಎಂದು ವಿವರಿಸುತ್ತಾರೆ ಹಿಲ್ಡಾ ರಾಯಪ್ಪನ್‌.

‘ಕೇಂದ್ರವನ್ನು ತೆರೆಯಲು ಸೆಲಿನ್ ಪಿರೇರಾ ಮತ್ತು ಫೆಲಿಸ್ ಡಿಕೋಸ್ತಾ ಸಾಥ್ ನೀಡಿದರು. ನಾವು 1987ರಲ್ಲಿ ಕಂಕನಾಡಿಯ ಫಲ್ನೀರ್‌ ರಸ್ತೆಯಲ್ಲಿ ಖಾಲಿಯಿದ್ದ ಮನೆಯೊಂದನ್ನು ಬಾಡಿಗೆಗೆ ಪಡೆದೆವು. ಬಳಿಕ ಸ್ವಿಡ್ಜರ್ಲೆಂಡ್‌ನ ಸಾಮಾಜಿಕ ಕಾರ್ಯಕರ್ತೆ ಎಲಿನ್ ಟ್ರಬ್ ಅವರ ಆರ್ಥಿಕ ನೆರವಿನಿಂದ ಆ ಕಟ್ಟಡ ನಮ್ಮದಾಯಿತು.

ಆಲ್‌ಕಾರ್ಗೊ ಲಾಜಿಸ್ಟಿಕ್ಸ್‌ನ ಶಶಿಕಿರಣ್‌ ಶೆಟ್ಟಿ ಅವರು ₹ 25 ಲಕ್ಷ ನೆರವು ನೀಡಿ ಪ್ರೋತ್ಸಾಹಿಸಿದರು. ಅಲ್ಲದೆ, ಇನ್ಫೊಸಿಸ್‌ ಸಂಸ್ಥೆಯು ಮುಡಿಪುನಲ್ಲಿ ನಮ್ಮ ಕೇಂದ್ರಕ್ಕೆ 1.23 ಸೆಂಟ್ಸ್‌ ಜಾಗ ನೀಡಿತು. ಮಹಿಳೆಯರ ಸ್ವಧಾರ ಕೇಂದ್ರವನ್ನು ಅಲ್ಲಿಗೆ ಸ್ಥಳಾಂತರ ಮಾಡುವ ಯೋಚನೆಯಿದ್ದು, ಅದಕ್ಕೆ ಬೇಕಾದ ಕಟ್ಟಡವನ್ನು ನಿರ್ಮಿಸಿಕೊಡುವ ಭರವಸೆಯೂ ಸಿಕ್ಕಿದೆ. ಮುಂದಿನ ವರ್ಷದಲ್ಲಿ ಅದು ಸಾಕಾರಗೊಳ್ಳುವ ನಿರೀಕ್ಷೆಯಿದೆ’ ಎನ್ನುತ್ತಾರೆ.

ನೊಂದವರ ಬಾಳಲ್ಲಿ ಮಂದಹಾಸ
ಪ್ರಜ್ಞಾ ಸಲಹಾ ಕೇಂದ್ರವು ಸಂತ್ರಸ್ತ ಬಾಲಕಿಯರಿಗೆ ರಕ್ಷಣೆ ನೀಡುವುದು ಮಾತ್ರವಲ್ಲದೆ, ಬಡವರು, ದುರ್ಬಲರು, ಮಾದಕ ವ್ಯಸನಿಗಳು, ಅಂಗವಿಕಲರು ಹಾಗೂ ಎಚ್‍ಐವಿ/ ಏಡ್ಸ್ ಬಾಧಿತ ವ್ಯಕ್ತಿಗಳ ಕ್ಷೇಮಾಭಿವೃದ್ಧಿಗಾಗಿ ಸಮುದಾಯ ಆಧಾರಿತ ಯೋಜನೆಗಳನ್ನು ಹಮ್ಮಿಕೊಂಡು ಅವರ ಬಾಳಿನಲ್ಲೂ ಮಂದಹಾಸ ಮೂಡಿಸುತ್ತಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT