ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಿ ಸಂಗ್ತಿ

Last Updated 8 ಮೇ 2017, 19:30 IST
ಅಕ್ಷರ ಗಾತ್ರ

ಈ ಹುಡುಗಿಯರು ಹುಡುಗರೆಲ್ಲ ಬಿನ್ನಾಣದಿಂದ ಸ್ಟ್ರಿಂಗ್‌ ಬ್ಯಾಗುಗಳನ್ನು ಹೆಗಲಿಗೇರಿಸಿ, ಸೊಂಟದ ಬದಿಯಿಂದ ತಮಗೆ ಬೇಕಿರುವುದನ್ನೆಲ್ಲ ತೆಗೆಯುವುದು ನೋಡುವಾಗಲೆಲ್ಲ, ‘ಸಂತಿಯೊಳಗಿದೆ ಸಂಚಿ ಕಾರಬಾರು, ಸಂಚಿಯೊಳಗಿದೆ ಸಂತಿ ಕಾರಬಾರು’ ಎನ್ನುವ ಮಾತು ಆಗಾಗ ನೆನಪಾಗುತ್ತಲೇ ಇರುತ್ತದೆ. ಹಲವು ಬ್ರ್ಯಾಂಡ್‌ಗಳ ಹತ್ತಾರು ಸ್ಟ್ರಿಂಗ್‌ ನೋಡಿದಾಗಲೆಲ್ಲ –ಅದರವ್ವ, ಅದರಜ್ಜ, ಅದರ ಮುತ್ತಜ್ಜ– ಅದೇ ನಮ್ಮವ್ವ, ನಮ್ಮಜ್ಜಿಯ ಸಂಚಿಗಳು ನೆನಪಾಗದೇ ಇರುವುದಿಲ್ಲ.

ಈ ಸಂಚಿ ಅಂದ್ರೆ ಪುರಾತನ ಕಾಲದ ಸ್ಟ್ರಿಂಗ್‌ ಎಂದೇ ಹೇಳಬಹುದು. ಗಟ್ಟಿ ಬಟ್ಟೆಯಲ್ಲೊಂದು ಅರ್ಧ ಮೊಳ ಉದ್ದದ ಚೀಲ ಹೊಲೆದುಕೊಳ್ಳುತ್ತಿದ್ದರು. ಗಂಡಸರಿಗಾದರೆ ಅದರಲ್ಲಿ ಎರಡೇ ಮಗ್ಗಲು ಒಳಚೀಲವೊಂದು; ಹೊರ ಚೀಲವೊಂದು. ಚೀಲದ ಹೊರಮೈಯಲ್ಲಿ ವೀಳ್ಯದೆಲೆ ಇದ್ದರೆ ಒಳಮೈಯಲ್ಲಿ ಕಾಚು, ಸುಣ್ಣ ಮತ್ತು ನಶ್ಯದ ಡಬ್ಬಿಗಳು.

ಅವರ ಸಮಸ್ತ ಚಟಗಳೂ ಒಗ್ಗೂಡಿ ಬದುಕುತ್ತಿದ್ದವು. ಒಂದೆರಡೇ ಬೀಡಿಗಳೂ ಸಿಗುತ್ತಿದ್ದವು. ಇಡೀ ಕಟ್ಟು ಚೊಣ್ಣದ ಜೇಬಿನಲ್ಲಿದ್ದರೂ ಈ ಬೀಡಿಗಳು ಮಾತ್ರ ಆಪದ್ಬಾಂಧವನಂತೆ ಒಳಗಂಟಿನಲ್ಲಿ ಇರುತ್ತಿದ್ದವು. ಒಂದು ಬೆಳ್ಳನೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿಟ್ಟ ರೂಪಾಯಿಯ ಬೇರೆ. ಇಲ್ಲಿಗೆ ಗಂಡಸರ ಜಗತ್ತೇ ಮುಗಿಯಿತು.

.

ಆದರೆ ಹೆಣ್ಮಕ್ಕಳ ಸಂಚಿಯಲ್ಲಿ ಅದೊಂದು ಶೃಂಗಾರ ಲೋಕವೇ ಅಡಗಿರುತ್ತಿತ್ತು. ಅವರ ಚಟಗಳೂ ಇವರಿಗಿಂತ ಭಿನ್ನವಾಗಿರುತ್ತಿರಲಿಲ್ಲ. ಆದರೆ, ಹೆಚ್ಚುವರಿಯಾಗಿ ಯಾಲಕ್ಕಿ, ಲವಂಗ, ಅಡಿಕೆ ಚೂರು ಇವರ ಸಂಚಿಯಲ್ಲಿ ಇರುತ್ತಿದ್ದವು. ಮುಳ್ಳು ತೆಗೆವ ಚಿಮಟದ ಜೊತೆಗೆ ಗುಗ್ಗೆ ತೆಗೆಯುವ ಸೌಟಿನಂಥ ಪರಿಕರಗಳ ಸೆಟ್‌ ಒಂದು ಸದಾ ಈ ಸಂಚಿಯಲ್ಲಿರುತ್ತಿತ್ತು.

ಹಲ್ಲಿನ ಸಂದಿಯಿಂದ ಎಲೆಯಡಿಕೆಯ ಪಳವಳಿಕೆಗಳನ್ನು ತೆಗೆಯುವ ಈ ಸಾಧನ ಸರಂಜಾಮುಗಳು ಹಲವಾರು ವಿಧದ ಉಪಯೋಗಕ್ಕೆ ಬರುತ್ತಿದ್ದವು. ಜೊತೆಗೊಂದು ಕುಂಕುಮ ಮತ್ತು ಕಾಡಿಗೆಯ ಡಬ್ಬಿ ಇರಲೇಬೇಕಿತ್ತು. ಹೀಗೆಂದೇ ಇವರ ಸಂಚಿಯಲ್ಲಿ ಹಲವಾರು ಭಾಗಗಳು. ಒಂದು ಆಯತಾಕರಾದಲ್ಲಿ ಒಳಭಾಗ ಎಲೆಗಿರುತ್ತಿತ್ತು.

ಹೊರಭಾಗದಲ್ಲಿ ಎರಡು ವಿಭಾಗಗಳು. ಒಂದು ಮುಕ್ಕಾಲು ಪಾಲಿನದ್ದಿದ್ದರೆ ಅದರಲ್ಲಿ ಶೃಂಗಾರದ ಸಮಸ್ತ ಪರಿಕರಗಳೂ ಮನೆ ಮಾಡಿರುತ್ತಿದ್ದವು. ಹೊರ ಭಾಗದಲ್ಲಿ ಒಂದೆಡೆ ಯಾಲಕ್ಕಿ, ಲವಂಗ, ಅಡಿಕೆ ಚೂರುಗಳಿದ್ದರೆ ಇನ್ನೊಂದೆಡೆ ನಾಕಾಣಿ, ಎಂಟಾಣಿಗಳಂಥ ನಾಣ್ಯಗಳಿರುತ್ತಿದ್ದವು. ಜೊತೆಗೊಂದು ಗಜಗವೂ ಇರುತ್ತಿತ್ತು. ಯಾರಿಗಾದರೂ ಚೇಳು, ಕೆಂಜಗ, ಕೆಂಜಿರುವೆ ಕಚ್ಚಿದರೆ ಗಜಗ ತೇಯ್ದು ಶಾಖ ತಟ್ಟಿಸುವ ಶುಶ್ರೂಷಕಿಯರಾಗುತ್ತಿದ್ದರು.

ಪ್ರಥಮ ಚಿಕಿತ್ಸೆಯ ಮಿನಿಯೇಚರ್‌ ಇದಾಗಿತ್ತು. ಇಂಥ ಚಂದದ ಸಂಚಿಗೆ ದೃಷ್ಟಿ ಆಗಬಾರದಲ್ಲ... ಅದರೊಳಗೆ ಕರಿದಾರ, ಉಡುದಾರ, ಶಿವದಾರಗಳೂ ಸುರಳಿ ಹೊಡೆದು, ಸರ್ವದಾರಗಳ ಸೂತ್ರಧಾರಿಣಿಯರಂತೆ ಈ ಹೆಣ್ಣುಮಕ್ಕಳು ತಮ್ಮ ಸೊಂಟದೊಳಗೆ ಈ ಸಂಚಿ ಸಿಗಿಸಿಕೊಳ್ಳುತ್ತಿದ್ದರು. ದೇಸಿ ಸ್ಟ್ರಿಂಗ್‌ನ ವ್ಯಾಪ್ತಿ ಅವರವರ ಅಸ್ಮಿತೆಯನ್ನು ಸಾರುತ್ತಿತ್ತು.

ಹೊಸ ಟ್ರೆಂಡ್‌ನ ಅವತಾರಗಳೇನೇ ಇರಲಿ... ಸಂತಿಯೊಳಗೆ ಸಂಚಿಯ ಕಾರುಬಾರು ಅಂದರೆ ಅದರಲ್ಲಿರುವ ಹಣದಿಂದಲೇ ಅಂದಿನ ಸಂತಿ ಆಗುತ್ತಿತ್ತು. ಸಂಚಿಯೊಳಗೆ ಸಂತಿಯ ಕಾರುಬಾರು ಅಂದ್ರೆ ಅಂದು ಕೊಂಡ ಸಣ್ಣ ಬಾಚಣಿಕೆಯಿಂದ ಮೂಗುತಿ, ಭೋರಮಾಳದಂಥ ಚಿನ್ನದ ಒಡ್ಯಾಣಗಳೂ ಇಲ್ಲಿ ತಾವು ಪಡೆಯುತ್ತಿದ್ದವು.

ಇದೀಗ ಸಂಚಿಯ ಮೊಮ್ಮಗನೋ, ಮರಿಮೊಮ್ಮಗನೋ ಆದ ಸ್ಟ್ರಿಂಗ್‌ ಬಂದಿದೆ. ಅದರಲ್ಲಿಯ ಚಟಗಳೂ ಸ್ಥಾನ ಬದಲಿಸಿವೆ. ಚಾಕಲೇಟು, ಚುಯಿಂಗ್‌ ಗಮ್‌, ವಿವಿಧ ಕಾರ್ಡುಗಳು, ಮೊಬೈಲ್‌ ಫೋನ್‌ಗಳು... ಹೌದು, ಸಂಚಿಯ ರೂಪ ಬದಲಾಗಿದೆ. ಒಳಹೊರಗಣ ಲೋಕವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT