ಸಮರವಲ್ಲ ಉತ್ತರ; ಬೇಡ ಅದಕೆ ಆತುರ

ಭಾರತ- – ಪಾಕಿಸ್ತಾನ ನಡುವಿನ ಬಿಕ್ಕಟ್ಟು ಬಗೆಹರಿಸಲು ಯುದ್ಧ ಬಿಟ್ಟು ಅನ್ಯ ಮಾರ್ಗ ಇಲ್ಲವೇ?

ಸಮರವಲ್ಲ ಉತ್ತರ; ಬೇಡ ಅದಕೆ ಆತುರ

ಹಾಗೇ ಸುಮ್ಮನೆ ಯುದ್ಧವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಮನದೊಳಗೆ ಮೂಡುವ ಚಿತ್ರಗಳಾದರೂ ಯಾವುವು? ಎಲ್ಲೆಂದರಲ್ಲಿ ಕಾಲಿಗೆ ಎಡತಾಕುವ ಹೆಣಗಳು, ಗಾಯಗೊಂಡ ರಕ್ತಸಿಕ್ತ ದೇಹಗಳು, ಮಕ್ಕಳನ್ನು ಕಳೆದುಕೊಂಡ ಪೋಷಕರು, ಗಂಡನನ್ನು ಕಳೆದುಕೊಂಡ ವಿಧವೆಯರು, ಅಪ್ಪನನ್ನು ಕಳೆದುಕೊಂಡ ಮಕ್ಕಳ ಆಕ್ರಂದನ, ಸಾಮೂಹಿಕ ಸಂಸ್ಕಾರಕ್ಕೆ ಅಣಿಯಾಗುತ್ತಿರುವ ಜನರು, ಬಾಂಬ್ ದಾಳಿಯಿಂದ ನೆಲಸಮಗೊಂಡ ಮನೆಗಳು. ಎಲ್ಲವೂ ಹೃದಯ ಕಲಕುವಂಥ ಚಿತ್ರಗಳೇ.

ಯುದ್ಧವೆಂದರೆ ಹಾಗೇ. ಮೊದಲೆಲ್ಲ ಸ್ಮಶಾನವೇ ಕಣ್ಮುಂದೆ ಬರುತ್ತಿತ್ತು. ಈಗ ಆಧುನಿಕ ಯುದ್ಧವೆಂದರೆ ಅದು ನೈಸರ್ಗಿಕ ಪರಿಸರ ನಾಶಪಡಿಸಿ ನಿರ್ಜೀವ ಮರಳುಗಾಡನ್ನು ಸೃಷ್ಟಿಸುವ ನಿರ್ದಯೀ ಪ್ರಕ್ರಿಯೆ. ಒಬ್ಬರು ಸೋತು ಇನ್ನೊಬ್ಬರು ಗೆದ್ದು ಸಂಭ್ರಮಿಸುವುದಕ್ಕೆ ಅದೇನೂ ಕ್ರೀಡಾ ಸ್ಪರ್ಧೆಯಲ್ಲ. ಅದು ದೇಶವೊಂದರ ದುರಹಂಕಾರ ಪ್ರದರ್ಶಿಸುವ ಅಮಾನವೀಯ ಕಾನೂನುಬದ್ಧ ಅಪರಾಧ! ಹೆಣಗಳು, ಬೀದಿಗೆ ಬಿದ್ದ ಕುಟುಂಬಗಳ ಎದುರಿನ ವಿಕಟನಗೆ ಸಂಭ್ರಮವೇ? ಭೀಕರ ರಕ್ತದ ಹಸಿವು, ಪ್ರಾಣಗಳನ್ನೇ ಮುಕ್ಕುವ ಕ್ರೌರ್ಯವನ್ನು ಎದೆಯೊಳಗೇ ಇರಿಸಿಕೊಂಡಿರುವ ಯುದ್ಧಕ್ಕೆ ಮನುಕುಲವನ್ನೇ ನಾಶಪಡಿಸುವ ಮಹಾರಕ್ಕಸನ ಶಕ್ತಿ ಇದೆ. ಅದು ಅಭಿವೃದ್ಧಿ ಪಥವನ್ನೇ ತಿರುವುಮುರುವಾಗಿಸುತ್ತದೆ, ಅರ್ಥವ್ಯವಸ್ಥೆಯನ್ನೇ ಬುಡಮೇಲಾಗಿಸುತ್ತದೆ. ಯುದ್ಧದಲ್ಲಿ ಪಾಲ್ಗೊಂಡ ದೇಶಗಳು ಹೊಸತಾಗಿ ಆರ್ಥಿಕ ಪ್ರಗತಿಗೆ ಅಡಿಪಾಯ ಹಾಕುವುದು ಅನಿವಾರ್ಯವಾಗಿ ಬಿಡುತ್ತದೆ. ಶಸ್ತ್ರಾಸ್ತ್ರ ಮಾರಾಟ ಮಾಡಿದ ದೇಶಗಳು ಮಾತ್ರ ಇನ್ನಷ್ಟು ಕೊಬ್ಬಿ ಒಂದೊಂದೇ ದೇಶವನ್ನು ತಿನ್ನುವ ಹೊಸ ವ್ಯಾಪಾರಕ್ಕೆ ಸಜ್ಜಾಗುತ್ತವೆ.

ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ನಡೆಸಿದ ಅಣುಬಾಂಬ್ ದಾಳಿಯೇ ಇರಲಿ, ಮೊದಲ ಗಲ್ಫ್ ಯುದ್ಧದಲ್ಲಿ ಇರಾಕ್ ಮೇಲೆ ನಡೆದ ಬಾಂಬ್ ದಾಳಿಯೇ ಇರಲಿ, ಆಫ್ಘಾನಿಸ್ತಾನದ 30 ವರ್ಷಗಳ ಸಮರವೇ ಇರಲಿ, ರುವಾಂಡಾ ಅಂತಃಯುದ್ಧವೇ ಇರಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅಣು ವಿಕಿರಣದಿಂದಾಗಿ ಅಸಂಖ್ಯಾತ ಮಂದಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ, ಅದೆಷ್ಟೋ ಜನರು ಅಂಧತ್ವದಿಂದ ಬದುಕನ್ನೇ ಕತ್ತಲು ಮಾಡಿಕೊಂಡಿದ್ದಾರೆ, ಯುದ್ಧದ ನಂತರ ಹುಟ್ಟಿದ ಮಕ್ಕಳೂ ಅಣುಬಾಂಬ್‌ನ ಪರಿಣಾಮದಿಂದಾಗಿ ಅಂಗವಿಕಲರಾಗಿದ್ದಾರೆ. ಒಂದೊಂದು ಕಡೆ ಒಂದೊಂದು ರೀತಿಯ ಪರಿಣಾಮ. ಯುದ್ಧ ನಡೆದ ಸ್ಥಳಗಳ ಮಣ್ಣು ಮತ್ತು ನೀರು ವಿಷಮಿಶ್ರಿತವಾಯಿತು. ತೈಲಬಾವಿಗಳಿಗೆ ಬೆಂಕಿ ಬಿದ್ದ ಕಾರಣ ಸ್ವಾಭಾವಿಕ ಪರಿಸರದ ವಿನಾಶವಾಯಿತು. ರುವಾಂಡಾದಲ್ಲಿ ಅಳಿವಿನಂಚಿನಲ್ಲಿರುವ ಗುಡ್ಡಗಾಡು ಗೊರಿಲ್ಲಾ, ಚಿಂಪಾಂಜಿ ಮತ್ತು ಆನೆಗಳ ವಾಸಸ್ಥಾನವಾಗಿದ್ದ ವಿರುಂಗಾ ಅಭಯಾರಣ್ಯದ ಅಂಚಿನಲ್ಲಿ ನಿರಾಶ್ರಿತರ ಶಿಬಿರಗಳನ್ನು ಆರಂಭಿಸುವ ಸಲುವಾಗಿ ಅಸಂಖ್ಯಾತ ಮರಗಳನ್ನು ಕತ್ತರಿಸಲಾಯಿತು. ಬೇಟೆಯ ಪ್ರಮಾಣ ಹೆಚ್ಚಾಗಿ ಅಸಂಖ್ಯಾತ ಪ್ರಾಣಿಗಳು ಕಣ್ಮರೆಯಾಗಿ ಪರಿಸರ ಅಸಮತೋಲನಕ್ಕೆ ಕಾರಣವಾಯಿತು. ಆಫ್ಘಾನಿಸ್ತಾನದ ಮೂಲಕ ಹಾದು ಹೋಗುತ್ತಿದ್ದ ವಲಸೆ ಹಕ್ಕಿಗಳ ಪ್ರಮಾಣ ಶೇಕಡ 85ರಷ್ಟು ಕಡಿಮೆಯಾಯಿತು. ಅಮೂಲ್ಯ ಪಿಸ್ಟೇಷಿಯಾ ಮರಗಳು ಸೇರಿದಂತೆ ಬಹುತೇಕ ಅರಣ್ಯ ಪ್ರದೇಶ ನಾಶವಾಯಿತು. ಇವು ಕೆಲವು ಉದಾಹರಣೆಗಳಷ್ಟೇ.

ಆದರೆ ಇಂಥ ಯುದ್ಧದ ಬಗ್ಗೆ ಕೆಲವು ಸುದ್ದಿ ವಾಹಿನಿಗಳಿಗೆ ಅದೇಕೆ ಅಂಥಾ ಪ್ರೀತಿ? ಇತ್ತೀಚೆಗೆ ಪಾಕಿಸ್ತಾನದ ಯೋಧರು ಭಾರತದ ಗಡಿ ಪ್ರವೇಶಿಸಿ ಜಮ್ಮು-ಕಾಶ್ಮೀರದ ಕೃಷ್ಣ ಘಾಟಿಯಲ್ಲಿ ಇಬ್ಬರು ಭಾರತೀಯ ಯೋಧರನ್ನು ಕೊಂದು ಅವರ ಕಳೇಬರಗಳನ್ನು ವಿರೂಪಗೊಳಿಸಿದ್ದಾರೆ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕೆಲವು ಸುದ್ದಿ ವಾಹಿನಿಗಳು ಜನರಲ್ಲಿ ಯುದ್ಧೋನ್ಮಾದ ತುಂಬುವ ಕೆಲಸವನ್ನು ಪರಮ ಪವಿತ್ರ ಎಂಬಂತೆ ನಿಷ್ಠೆಯಿಂದ ಮಾಡುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಹೋಗಿ ಪ್ರಾರ್ಥನೆ ಮಾಡಿ ಬಂದುದನ್ನೇ ನೆಪ ಮಾಡಿಕೊಂಡ ಒಂದು ವಾಹಿನಿಯಂತೂ ಸ್ವತಃ ಪ್ರಧಾನಿಯೇ ಫೋನ್ ಮಾಡಿ ವಿಷಯ ತಿಳಿಸಿದರೇನೋ ಎಂಬಂತೆ ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಸಲುವಾಗಿ ಆಶೀರ್ವಾದ ಪಡೆಯಲು ಪ್ರಧಾನಿ ಹೋಗಿದ್ದರೆಂದೂ ಸುದ್ದಿ ಬಿತ್ತರಿಸಿತು. ಇದು ಯುದ್ಧದ ಅಮಲು !

ಇದು ಅತ್ಯಾಧುನಿಕ ಯುಗ. ಯಾವ್ಯಾವ ದೇಶದ ಬಳಿ ಎಂಥೆಂಥ ಶಸ್ತ್ರಾಸ್ತ್ರಗಳಿವೆಯೋ, ಅಣುಬಾಂಬ್ ಮೀರಿಸುವ ಹೊಸ ಬಾಂಬ್‌ಗಳಿವೆಯೋ, ಅದರ ಪರಿಣಾಮಗಳೇನೋ ಎನ್ನುವುದನ್ನು ಅರಿಯುವ ಯುದ್ಧಗಳು ಇತ್ತೀಚೆಗೆ ನಡೆದಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ನಾಲ್ಕು ಯುದ್ಧಗಳು ನಡೆದಿದ್ದು ಸಾವುನೋವಿಗೀಡಾದವರ ಸಂಖ್ಯೆ ಕಡಿಮೆ ಎಂದರೂ ಹತ್ತು ಸಾವಿರ ಎಂದು ಅಂದಾಜು ಮಾಡಲಾಗಿದೆ. ಹಾಗೆ ನೋಡಿದರೆ ಭಾರತ ಮತ್ತು ಪಾಕಿಸ್ತಾನ ಬಿಳಿಯರ ಪಿತೂರಿಯ ಫಲವಾಗಿ ಜಗಳ ಮಾಡಿಕೊಂಡು ಆಸ್ತಿ ಪಾಲು ಪಡೆದು ಬೇರೆಯಾದ ಅಣ್ಣ ತಮ್ಮಂದಿರು. ಬಹುತೇಕ ಭಾರತೀಯರಿಗೆ ಅದು ಕೇವಲ ಒಂದು ಪ್ರಾಂತ್ಯವನ್ನಷ್ಟೇ ಕಳೆದುಕೊಂಡ ನೋವಲ್ಲ, ಭಾವನಾತ್ಮಕ ಸಂಬಂಧ ಕಡಿತಗೊಂಡ ನೋವು. ಅದೆಷ್ಟೋ ಮುಸ್ಲಿಂ ಕುಟುಂಬಗಳು ವಿಭಜನೆಯ ನಂತರ ಎರಡೂ ಕಡೆ ಹಂಚಿ ಹೋಗಿರುವುದರಿಂದ ಸಹಜವಾಗಿಯೇ ಇತರ ಸಮುದಾಯಗಳಿಗಿಂತ ಮುಸ್ಲಿಮರಿಗೇ ಹೆಚ್ಚು ನೋವು ಮತ್ತು ಸಮಸ್ಯೆ ಉಂಟುಮಾಡಿದೆ.

ಮುಂದೆ ಹೀಗೆಲ್ಲ ಆಗಬಹುದು ಎಂಬುದನ್ನು ಊಹಿಸಿಯೇ ಭಾರತ ಕಂಡ ಮಹಾನ್ ಸಮಾಜವಾದಿ ರಾಮಮನೋಹರ ಲೋಹಿಯಾ, ಐವತ್ತರ ದಶಕದಲ್ಲಿ ಸಂಸತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನದ ಏಕತೆ ಕುರಿತ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದರು.  ‘ಅಮೆರಿಕ ಮತ್ತು ರಷ್ಯಾ ದೇಶಗಳನ್ನು ಭಾರತ ಮತ್ತು ಪಾಕಿಸ್ತಾನ ಅವಲಂಬಿಸುವುದನ್ನು ಬಿಟ್ಟರೆ ಮಾತ್ರ ಎರಡೂ ರಾಷ್ಟ್ರಗಳಿಗೆ ಮುಕ್ತ ವಿದೇಶಾಂಗ ನೀತಿ ರೂಪಿಸುವುದು ಸಾಧ್ಯ’ ಎಂದು ಅವರು ಬಲವಾಗಿ ನಂಬಿಕೊಂಡಿದ್ದರು. ‘ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಮತ್ತು ಜನರ ನಡುವಿನ ವ್ಯತ್ಯಾಸ ಗುರುತಿಸದಿರುವುದು ನಮ್ಮ ಮೊದಲ ತಪ್ಪು’ ಎನ್ನುತ್ತಿದ್ದರು. ಪಾಕ್ ಸರ್ಕಾರವೂ ಭಾರತ ಸರ್ಕಾರದಷ್ಟೇ ಕುಲಗೆಟ್ಟಿರುವುದರಿಂದ ಭಾರತೀಯರು ಪಾಕಿಸ್ತಾನದ ಜನರ ಬಗ್ಗೆ ಆಳವಾದ ಸ್ನೇಹ ಬೆಳೆಸಿಕೊಳ್ಳಬೇಕೆಂದು ಅವರು ಬಯಸಿದ್ದರು. ‘ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ದೊರೆಯದಿರುವುದೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಕಾರಣ ಎಂದು ಆಗಿಂದಾಗ್ಗೆ ಪ್ರಸ್ತಾಪಿಸಲಾಗುತ್ತದೆ. ಆದರೆ ಇಡೀ ಕಾಶ್ಮೀರವನ್ನೇ ಪಾಕಿಸ್ತಾನಕ್ಕೆ ಒಪ್ಪಿಸಿದರೂ ಸಂಘರ್ಷ ಕೊನೆಗಾಣುವ ಬದಲು ಹೊಸತೊಂದು ಜಗಳ ಹುಟ್ಟಿಕೊಳ್ಳುತ್ತದೆ. ಇಂಥ ವ್ಯರ್ಥ ಪ್ರಯತ್ನಗಳ ಬದಲು ಭಾರತ-ಪಾಕಿಸ್ತಾನ ಒಕ್ಕೂಟ ರಚಿಸುವುದರಿಂದ ಮಾತ್ರ ನಿಜವಾದ ಪರಿಹಾರ ದೊರೆಯುವುದು ಸಾಧ್ಯವಿದೆ. ನಾವು ಭಾರತ ಸ್ವಾತಂತ್ರ್ಯ ಗಳಿಸಬೇಕೆಂದು ಕಂಡಿದ್ದ ಕನಸು ಹೇಗೆ ಸಾಕಾರಗೊಂಡಿತೋ ಹಾಗೆ ಭಾರತ-ಪಾಕಿಸ್ತಾನದ ಏಕತೆ ಬಗ್ಗೆ ಕನಸು ಕಾಣಲಾರಂಭಿಸಿದರೆ ಮುಂದೊಂದು ದಿನ ಇದೂ ಸಾಕಾರಗೊಳ್ಳುವುದು ಸಾಧ್ಯವಿದೆ’. ಲೋಹಿಯಾ ಆರು ದಶಕಗಳ ಹಿಂದೆ ಹೇಳಿದ ಮಾತನ್ನು ಆಗಲೇ ಗಂಭೀರವಾಗಿ ಪರಿಗಣಿಸಿದ್ದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ಈ ಪ್ರಮಾಣದಲ್ಲಿ ಬೆಳೆಯುವುದೂ ಸಾಧ್ಯವಿರಲಿಲ್ಲ, ಪರಿಹಾರ ದೊರೆಯುವ ಸಾಧ್ಯತೆಯೇ ಹೆಚ್ಚಿತ್ತು. ಈಗ ತಡವಾಗಿದ್ದರೂ ಆಳುವ ಪ್ರಭುಗಳು ಈ ಪ್ರಯತ್ನಕ್ಕೆ ಮುಂದಾದರೆ ಇನ್ನಷ್ಟು ಅನಾಹುತಗಳು ತಪ್ಪಬಹುದು.  

ಹಾಗೇ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯಬೇಕೆಂದು ಬಯಸುವವರು ಲಿಯೋ ಟಾಲ್‌ಸ್ಟಾಯ್ 1885ರಲ್ಲಿ ಬರೆದ ‘A spark neglected burns the house’ ಕತೆಯನ್ನು ಓದಬೇಕು. ಕತೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಅದೊಂದು ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಇವಾನ್ ಮತ್ತು ಗೇಬ್ರಿಯಲ್ ಎಂಬುವರ ಎರಡು ಕುಟುಂಬಗಳು ಒಬ್ಬರಿಗೊಬ್ಬರು ಸಹಕರಿಸುತ್ತಾ ಪ್ರೀತಿ, ಸಾಮರಸ್ಯದಿಂದ ನೆಮ್ಮದಿಯಾಗಿದ್ದವು. ಒಂದು ದಿನ ಇವಾನನ ಮನೆಯ ಕೋಳಿಯೊಂದು ಗೇಬ್ರಿಯಲ್‌ನ ಮನೆ  ಹಿತ್ತಲಿಗೆ ಹೋಗಿ ಮೊಟ್ಟೆ ಇಟ್ಟು, ಅದನ್ನು ಹುಡುಕುತ್ತಾ ಬಂದ ಇವಾನನ ಸೊಸೆಗೆ ಅದು ಸಿಕ್ಕದೇ ಮಾತಿಗೆ ಮಾತು ಬೆಳೆಯಿತು. ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಜಗಳವಾಡಿ ಕೈ ಮಿಲಾಯಿಸಿ ಒಬ್ಬರ ವಿರುದ್ಧ ಇನ್ನೊಬ್ಬರು ದೂರು ನೀಡಿ ನ್ಯಾಯಾಲಯಕ್ಕೂ ಹೋಗುವುದಕ್ಕೆ ಆ ಮೊಟ್ಟೆಯೇ ನೆಪವಾಯಿತು. ಒಂದು ದೂರು ಇನ್ನೊಂದು ಜಗಳಕ್ಕೆ ಕಾರಣವಾಗಿ ಪರಸ್ಪರ ದ್ವೇಷದಿಂದ ಒಬ್ಬರು ಇನ್ನೊಬ್ಬರ ವಿನಾಶವನ್ನು ಬಯಸುವಂತಾಯಿತು. ಈ ಮಧ್ಯೆ ಇವಾನನ ವೃದ್ಧ ತಂದೆ ತನ್ನ ಮಗನಿಗೆ,  ‘ದ್ವೇಷದಿಂದ ನೀನು ಕುರುಡನಾಗಿರುವೆ. ಜಗಳ, ವ್ಯಾಜ್ಯ ಎಲ್ಲ ಕೊನೆಗಾಣಿಸು. ಇನ್ನೊಬ್ಬರ ತಪ್ಪನ್ನು ಕ್ಷಮಿಸಿದರೆ ನಿನ್ನ ಹೃದಯವೂ ಬೆಳಗುತ್ತದೆ’ ಎಂದು ಎರಡೂ ಕುಟುಂಬಗಳ ಸಂಬಂಧ ಸಹಜ ಸ್ಥಿತಿಗೆ ತರಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು.  ಕೊನೆಗೆ ಈ ಜಗಳದ ಪರಿಣಾಮವಾಗಿ ಇವಾನನ ಮನೆಗೆ ಗೇಬ್ರಿಯಲ್ ಬೆಂಕಿ ಹಚ್ಚಿ ಅದು ಎರಡೂ ಮನೆಗಳಲ್ಲದೇ ಆ ಗ್ರಾಮದ ಅರ್ಧ ಭಾಗವನ್ನೇ  ಸುಟ್ಟು ನಾಶ ಮಾಡಿತು. ಎರಡೂ ಕುಟುಂಬಗಳು ನೆಲೆಯೂ ಇಲ್ಲದೆ ಊಟಕ್ಕೂ ಇಲ್ಲದೇ ಒದ್ದಾಡುವಂತಾಯಿತು. ಗೇಬ್ರಿಯಲ್ ಬೆಂಕಿ ಹಚ್ಚಿದ್ದನ್ನು ಇವಾನ್ ಕಣ್ಣಾರೆ ಕಂಡಿದ್ದ. ಅಗ್ನಿ ಅನಾಹುತದಿಂದಾಗಿ ಗಂಭೀರವಾಗಿ ಗಾಯಗೊಂಡು ಸಾವಿನ ಕೊನೇ ಗಳಿಗೆಯಲ್ಲಿದ್ದ ಇವಾನನ ತಂದೆ,  ‘ಬೆಂಕಿ ಹಚ್ಚಿದ್ದು ಯಾರೆಂದು ಯಾರಿಗೂ ಹೇಳಬೇಡ. ಇನ್ನೊಬ್ಬರ ಪಾಪವನ್ನು ಬಚ್ಚಿಟ್ಟರೆ ದೇವರು ನಿನ್ನ ಎರಡು ತಪ್ಪುಗಳನ್ನು ಕ್ಷಮಿಸುತ್ತಾನೆ’ ಎಂದು ಹೇಳಿ ಕಣ್ಮುಚ್ಚಿದ. ತಾನು ಬೆಂಕಿ ಹಚ್ಚಿದ ವಿಷಯವನ್ನು ಇವಾನ್ ಎಲ್ಲರಿಗೂ ಹೇಳಬಹುದು ಎಂದು ಆತಂಕದಿಂದ ಇದ್ದ ಗೇಬ್ರಿಯಲ್, ಇವಾನನ ಮೌನದಿಂದ ಅಚ್ಚರಿಗೊಂಡ. ಆನಂತರ ಎರಡೂ ಕುಟುಂಬಗಳು ಸೇರಿ ಒಂದು ಮನೆಯನ್ನು ನಿರ್ಮಿಸಿ ಇನ್ನೊಂದು ಮನೆ ನಿರ್ಮಾಣ ಆಗುವವರೆಗೆ ಅದರಲ್ಲೇ ಒಟ್ಟಿಗೇ ಇದ್ದರಲ್ಲದೇ, ಆ ನಂತರವೂ ನೆರೆಕರೆಯವರು ಹೇಗೆ ಮಾದರಿಯಾಗಿ ಬದುಕಬಹುದೆಂದು ತೋರಿಸಿಕೊಟ್ಟರು. 

ಕ್ರಿಮಿಯಾ ಯುದ್ಧದಲ್ಲಿ ಸ್ವತಃ ಫಿರಂಗಿ ದಳದ ಅಧಿಕಾರಿಯಾಗಿ ಭಾಗಿಯಾಗಿದ್ದ ಟಾಲ್‌ಸ್ಟಾಯ್, ‘ದೇಶಗಳ ನಡುವಿನ ದ್ವೇಷದಿಂದ ಹುಟ್ಟಿದ ಪಾಪ ಕಾರ್ಯಗಳಲ್ಲಿ ನಾನು ಮಾಡಿರುವುದನ್ನು, ಅನುಭವಿಸಿರುವುದನ್ನು, ನೋಡಿರುವುದನ್ನು ನೆನಪಿಸಿಕೊಂಡರೆ ಅದರ ಮೂಲ, ದೇಶಭಕ್ತಿ ಎಂಬ ಹುಲುಸಾಗಿ ಬೆಳೆದ ವಂಚನೆಯಲ್ಲಿ  ಅಡಗಿದೆ ಎನ್ನುವುದು  ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲಿಯವರೆಗೆ ದೇಶಭಕ್ತಿಯನ್ನು ಕೊಂಡಾಡುತ್ತಾ ಅದನ್ನು ಯುವಜನರಲ್ಲಿ ಬೆಳೆಸುತ್ತಾ ಹೋಗುತ್ತೇವೋ ಅಲ್ಲಿವರೆಗೆ ಭೌತಿಕ ಮತ್ತು  ಆಧ್ಯಾತ್ಮಿಕ ಬದುಕನ್ನು ನಾಶಪಡಿಸುವ ಶಸ್ತ್ರಾಸ್ತ್ರಗಳಿರುತ್ತವೆ ಹಾಗೂ ಅತಿರೇಕದ ಯುದ್ಧಗಳಿರುತ್ತವೆ’  ಎಂದು ಹೇಳಿದ್ದಾನೆ. ಯುದ್ಧ ಕೈದಿಗಳನ್ನು ಶಿರಚ್ಛೇದಕ ಯಂತ್ರಗಳಿಂದ ಕೊಲ್ಲುವ ಅದೆಷ್ಟೋ ಘಟನೆಗಳು ಆತನ ಅಂತರಂಗವನ್ನು ತೀವ್ರವಾಗಿ ಕಲಕಿತ್ತು. ಹೀಗಾಗಿಯೇ ರಾಜಕೀಯ ಪ್ರೇರಿತ ಕಾಯಿದೆಗಳು ಅಸಂಬದ್ಧ, ರಾಜಕೀಯ ಕಾಯಿದೆಯೆಂದರೆ ಅದೊಂದು ಭಯಾನಕ ಸುಳ್ಳು, ಮಾನವೀಯ ಧರ್ಮದ ಆತ್ಮವಿಲ್ಲದ ಯಾವುದೇ ಕಾಯಿದೆ ಪ್ರೀತಿ, ಸಹಬಾಳ್ವೆ, ಸಾಮರಸ್ಯವನ್ನು ಪೋಷಿಸುವುದು ಸಾಧ್ಯವೇ ಇಲ್ಲ ಎನ್ನುವುದು ಟಾಲ್‌ಸ್ಟಾಯ್ ಅನುಭವದ ಮಾತಾಗಿತ್ತು. ಈ ಕಾರಣದಿಂದಲೇ ಆತ ಸರ್ಕಾರಿ ಸೇವೆಯಿಂದ ಹೊರಬಂದು ಇನ್ನೆಂದೂ ಸರ್ಕಾರಿ ಸೇವೆ ಸೇರುವುದಿಲ್ಲ ಎಂದು ದೃಢ ನಿಶ್ಚಯ ಮಾಡಿದ್ದ.

ಇದಕ್ಕೇ ಏನೋ ‘ರಣರಂಗದಲ್ಲಿ ಬಳಸುವ ಶಸ್ತ್ರಾಸ್ತ್ರಗಳೆಲ್ಲ ಸಂಗೀತ ಸಾಧನಗಳಾಗಿ ಬಿಟ್ಟರೆ ಇಡೀ ಜಗತ್ತು ಸಂಗೀತಮಯವಾಗಿರುತ್ತದೆ’ ಎಂದು ಗಾಯಕ ಪಿ.ಬಿ.ಶ್ರೀನಿವಾಸ್ ಆಶಿಸಿದ್ದರು. ಹಾಗಾದರೆ ಭಾರತ-ಪಾಕಿಸ್ತಾನ ನಡುವಿನ ಬಿಕ್ಕಟ್ಟು ಬಗೆಹರಿಸಲು ಯುದ್ಧ ಬಿಟ್ಟು ಅನ್ಯ ಮಾರ್ಗ ಇಲ್ಲವೇ? ಬುದ್ಧ, ಬಸವಣ್ಣ, ಮಹಾತ್ಮ ಗಾಂಧಿಯನ್ನು ನೀಡಿದ ಭರತ ಭೂಮಿಗೆ ಪ್ರೀತಿ, ಸಹನೆ, ಅಹಿಂಸೆ, ಸಾಮರಸ್ಯ, ಸಮನ್ವಯದ ಮಾರ್ಗವೂ ತಿಳಿದಿದೆಯಲ್ಲವೇ? ಯುದ್ಧ ತಪ್ಪಿಸಿ ಒತ್ತಡ ಹೇರುವ ಎಷ್ಟೋ ಮಾರ್ಗಗಳಿವೆ. ಅದಕ್ಕೆ ತೆರೆದ ಮನಸ್ಸು ಬೇಕು. ಆಳುವವರಾಗಲೀ, ಸುದ್ದಿ ಮಾಧ್ಯಮಗಳಾಗಲೀ ಸಂಬಂಧಗಳನ್ನು ಬೆಸೆಯುವ ಸೇತುವೆ ನಿರ್ಮಿಸುವ ಕೆಲಸ ಮಾಡಬೇಕೇ ಹೊರತು ಪರಸ್ಪರ ದೂರ ಮಾಡುವ ಗೋಡೆ ಕಟ್ಟುವ ಕೆಲಸವನ್ನಲ್ಲ. ಈ ದಿಕ್ಕಿನಲ್ಲೇ ಚಿಂತಿಸಿದರೆ ನೂರಾರು ಮಾರ್ಗಗಳು ಹೊಳೆಯುತ್ತವೆ. ಪ್ರೀತಿ ಸೌರಭ ನಾಲ್ದೆಸೆಗಳಲ್ಲೂ ಹರಡುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

ಭಾವಭಿತ್ತಿ
ವಿಧಾನಸಭಾ ಚುನಾವಣೆ ಮುನ್ನ ಒಂದೆರಡು ಮಾತು

20 Mar, 2018
ರಾಜ್ಯಸಭೆ: ಆತ್ಮಗೌರವಕ್ಕೆ ಬೇಕು ಕನ್ನಡದ ದನಿ

ಭಾವಭಿತ್ತಿ
ರಾಜ್ಯಸಭೆ: ಆತ್ಮಗೌರವಕ್ಕೆ ಬೇಕು ಕನ್ನಡದ ದನಿ

6 Mar, 2018
ಬಿಜೆಪಿಗೆ ಬೇಕು ಅತಲಕುತಲ ನಾಯಕರು

ಭಾವಭಿತ್ತಿ
ಬಿಜೆಪಿಗೆ ಬೇಕು ಅತಲಕುತಲ ನಾಯಕರು

23 Jan, 2018
‘ಭಾರತಕ್ಕೆ ಬೇಕಿರುವುದು ಹಿಂದುತ್ವವಲ್ಲ, ದಲಿತತ್ವ’

ಭಾವಭಿತ್ತಿ
‘ಭಾರತಕ್ಕೆ ಬೇಕಿರುವುದು ಹಿಂದುತ್ವವಲ್ಲ, ದಲಿತತ್ವ’

29 Aug, 2017
ಸ್ವಾತಂತ್ರ್ಯದ ಅರ್ಥ ಹುಡುಕುತ್ತಾ ಕಂಡಷ್ಟು...

ಭಾವಭಿತ್ತಿ
ಸ್ವಾತಂತ್ರ್ಯದ ಅರ್ಥ ಹುಡುಕುತ್ತಾ ಕಂಡಷ್ಟು...

15 Aug, 2017