ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹ್ಯಾಕಾಶ ರಾಜತಾಂತ್ರಿಕ’ ನಡೆ ಪ್ರಾದೇಶಿಕ ಸಹಕಾರಕ್ಕೆ ಬಲ

Last Updated 8 ಮೇ 2017, 19:30 IST
ಅಕ್ಷರ ಗಾತ್ರ

ಇಸ್ರೊ ಅಭಿವೃದ್ಧಿಪಡಿಸಿರುವ  2,230 ಕೆ.ಜಿ. ತೂಕದ ಜಿಸ್ಯಾಟ್-9 ಉಪಗ್ರಹವನ್ನು  ಕಳೆದ ವಾರ ಯಶಸ್ವಿಯಾಗಿ ನಭಕ್ಕೆ ಹಾರಿಬಿಡಲಾಗಿದೆ. ಇದನ್ನು ದಕ್ಷಿಣ ಏಷ್ಯಾ ಸಂಪರ್ಕ ಉಪಗ್ರಹ ಎಂದೂ ಕರೆಯಲಾಗುತ್ತದೆ.  ಭಾರತದ ನೆರೆಹೊರೆಯ ದೇಶಗಳಿಗೆ ಮಾಹಿತಿ ಪ್ರಸಾರ, ಅಂತರ್ಜಾಲ ಸೇವೆ, ವಿಕೋಪ ನಿರ್ವಹಣೆ, ಹವಾಮಾನ ಮುನ್ಸೂಚನೆ, ದೂರ ಶಿಕ್ಷಣ, ಇ–ಆಡಳಿತದಂಥ  ಕ್ಷೇತ್ರಗಳಲ್ಲಿ  ಇದು ನೆರವು ಒದಗಿಸಲಿದೆ. ಸಂಪರ್ಕ ಹಾಗೂ ಸಂಕಷ್ಟ ಸಂದರ್ಭಗಳಲ್ಲಿ ನೆರವು ಒದಗಿಸಬಹುದಾದ ಈ ಉಪಗ್ರಹ ನಮ್ಮ ನೆರೆಯ ರಾಷ್ಟ್ರಗಳಿಗೆ ಅಮೂಲ್ಯ ಕೊಡುಗೆ ಎನ್ನಬಹುದು.

ಭಾರತ ಹಾಗೂ ನೆರೆ ರಾಷ್ಟ್ರಗಳ ಹಲವು ಸಮಸ್ಯೆಗಳ ಸ್ವರೂಪ ಒಂದೇ ಆಗಿದೆ. ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಹಕಾರ ತತ್ವದ ಅಡಿ ಒಂದಾಗಿ ಮುಂದಡಿ ಇಟ್ಟರೆ, ದೇಶಗಳ ಮೇಲಿನ ಹೊರೆ ತಗ್ಗುತ್ತದೆ. ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯ ಉದ್ದೇಶ ಕೂಡ ಇದೇ ಆಗಿದೆ. ಈ ಉಪಗ್ರಹ ಯೋಜನೆಯು ಪ್ರಾದೇಶಿಕ ಸಹಕಾರಕ್ಕೆ ಇಂಬು ನೀಡಬೇಕು. ಈ ಉಪಗ್ರಹ ನಿರ್ಮಿಸಿದ್ದು, ಅದಕ್ಕೆ ಸಂಬಂಧಿಸಿದ ಖರ್ಚುಗಳನ್ನು ನಿಭಾಯಿಸಿದ್ದು ಭಾರತವಾದರೂ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್‌, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಇದರ ನೇರ ಪ್ರಯೋಜನ ಪಡೆಯಲಿವೆ. ಮುಂದೆ ಆಫ್ಘಾನಿಸ್ತಾನ ಕೂಡ ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯ ವ್ಯಾಪ್ತಿಗೆ ಬಂದು, ಪ್ರಯೋಜನ ಪಡೆದುಕೊಳ್ಳಲಿದೆ.

ಈ ಯೋಜನೆಯಲ್ಲಿ ಪಾಕಿಸ್ತಾನವನ್ನೂ ಸೇರಿಸಿಕೊಳ್ಳುವ ಆಸೆ ಭಾರತದ್ದಾಗಿತ್ತು. ‘ಬನ್ನಿ, ನಮ್ಮ ಜೊತೆ ಸೇರಿಕೊಳ್ಳಿ’ ಎಂಬ ಆಹ್ವಾನ ನೀಡಿತ್ತು. ಆದರೆ, ‘ನಾವು ನಮ್ಮದೇ ಆದ ಬಾಹ್ಯಾಕಾಶ ಯೋಜನೆ ಹೊಂದಿದ್ದೇವೆ’ ಎಂದು ಹೇಳಿದ ಪಾಕಿಸ್ತಾನ, ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯಿಂದ ಹೊರಗುಳಿಯಿತು. ರಾಜತಾಂತ್ರಿಕ ಸಂಬಂಧಗಳು ಸರಿಯಿಲ್ಲದಿದ್ದರೂ, ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಸಹಕಾರ ಸಾಧ್ಯ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು. ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟ 1970ರ ದಶಕದಲ್ಲಿ ‘ಅಪೋಲೊ–ಸೋಯುಜ್ ಪರೀಕ್ಷಾ ಯೋಜನೆ’ಗಾಗಿ ಜೊತೆಯಾಗಿದ್ದವು. ಅದಾದ ನಂತರ ಅಮೆರಿಕ ಮತ್ತು ರಷ್ಯಾ ನಡುವಣ ಸಂಬಂಧದಲ್ಲಿ ಹಲವು ಏರಿಳಿತಗಳು ಆಗಿಹೋಗಿವೆ. ಹೀಗಿದ್ದರೂ, ಬಾಹ್ಯಾಕಾಶ ಯೋಜನೆಯಲ್ಲಿನ ಸಹಕಾರಕ್ಕೆ ಧಕ್ಕೆ ಆಗಿಲ್ಲ ಎಂಬುದನ್ನು ಗಮನಿಸಬೇಕು. ಪಾಕಿಸ್ತಾನವು ತನ್ನಲ್ಲಿರುವ ಅನುಮಾನದ ಧೋರಣೆ, ಹಿಂಜರಿಕೆಗಳನ್ನು ಬಿಟ್ಟು ದಕ್ಷಿಣ ಏಷ್ಯಾ ಉಪಗ್ರಹದಂತಹ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಬೇಕು.

ನೆರೆಯ ದೇಶಗಳು ಉಪಗ್ರಹವನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಆಧರಿಸಿ ಭಾರತದ ‘ಬಾಹ್ಯಾಕಾಶ ರಾಜತಾಂತ್ರಿಕತೆ’ಯ ಯಶಸ್ಸು ನಿರ್ಧಾರವಾಗುತ್ತದೆ. ನೆರೆಯ ಹಲವು ದೇಶಗಳು ತಮ್ಮದೇ ಆದ ಸಂವಹನ ಉಪಗ್ರಹಗಳನ್ನು ಈಗಾಗಲೇ ಹೊಂದಿವೆ ಅಥವಾ ಅಭಿವೃದ್ಧಿಪಡಿಸುತ್ತಿವೆ. ಉದಾಹರಣೆಗೆ, ಶ್ರೀಲಂಕಾವು ಚೀನಾ ನಿರ್ಮಿತ ಎರಡನೆಯ ಉಪಗ್ರಹವನ್ನು ಮುಂದಿನ ವರ್ಷ ಕಕ್ಷೆಗೆ ಸೇರಿಸಲಿದೆ. ತನ್ನದೇ ಆದ ಉಪಗ್ರಹ ಇರುವಾಗ ಕೆಲವು ಟ್ರಾನ್ಸ್‌ಪಾಂಡರ್‌ಗಳಿಗೆ ಬೇಕಿರುವ ಮೂಲಸೌಕರ್ಯದ ಮೇಲೆ ಬಂಡವಾಳ ಹೂಡಲು ಶ್ರೀಲಂಕಾ ಮುಂದಾಗುತ್ತದೆಯೇ? ದ್ವೀಪರಾಷ್ಟ್ರವು ಚೀನಾ ನಿರ್ಮಿತ ಉಪಗ್ರಹ ಖರೀದಿಸಲು ಈಗಾಗಲೇ ಸಾಕಷ್ಟು ಹಣ ವೆಚ್ಚಮಾಡಿದೆ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಕೊಡುಗೆಯನ್ನು ಚೀನಾ, ದಕ್ಷಿಣ ಏಷ್ಯಾದ ರಾಷ್ಟ್ರಗಳ ಮುಂದೆ ಈಗಾಗಲೇ ಇಟ್ಟಿದೆ. ಇಂಥ ಕೊಡುಗೆ ನೀಡಿದ ಈ ಭಾಗದ ಮೊದಲ ದೇಶ ಚೀನಾ ಆಗಿರುವ ಕಾರಣ ಅದಕ್ಕೆ ಕೆಲವು ಅನುಕೂಲಗಳು ಇವೆ. ಇಂಥ ಸ್ಥಿತಿಯಲ್ಲಿ, ಭಾರತದ ಹೊಸ ಉಪಗ್ರಹವು ಬಿಳಿಯಾನೆಯಾದೀತೇ ಎಂಬ ಕಳವಳ ಕೂಡ ವ್ಯಕ್ತವಾಗಿದೆ. ಆದರೂ, ಇಂಥದ್ದೊಂದು ಯೋಜನೆಯನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ನೆರೆ ದೇಶಗಳ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಸ್ವಾಗತಾರ್ಹ ಹೆಜ್ಜೆ.

ದಕ್ಷಿಣ ಏಷ್ಯಾ ಉಪಗ್ರಹ ಯೋಜನೆಯ ಚಿಂತನೆ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ವರ್ಷಗಳಿಂದ ಇತ್ತು ಎಂಬ ವರದಿಗಳಿವೆ. ಆದರೆ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ವಿಳಂಬ ಆದ ಕಾರಣ, ಚೀನಾಕ್ಕೆ ಈ ಕ್ಷೇತ್ರಕ್ಕೆ ಲಗ್ಗೆ ಇಡಲು ಸಾಧ್ಯವಾಯಿತು. ಒಳ್ಳೆಯ ಯೋಜನೆಗಳನ್ನು ರೂಪಿಸುವ ಜೊತೆಯಲ್ಲೇ, ಅವುಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವುದೂ ಮುಖ್ಯ ಎಂಬ ಪಾಠ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT