ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ನೀಗಿಸಿದ ಅನ್ನಭಾಗ್ಯ ಯೋಜನೆ

ಬೀರೇಶ್ವರ ಚನ್ನಕೇಶವ ದೇವಾಲಯ ಉದ್ಘಾಟಿಸಿದ ಸಿದ್ದರಾಮಯ್ಯ; ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ
Last Updated 9 ಮೇ 2017, 7:42 IST
ಅಕ್ಷರ ಗಾತ್ರ
ಮಂಡ್ಯ: ‘ಮೊದಲು ಬರಗಾಲ ಬಂದಾಗ ಜನರು ಗುಳೇ ಹೋಗುತ್ತಿದ್ದರು. ತುತ್ತು ಅನ್ನಕ್ಕಾಗಿ ಊರು ತೊರೆಯುತ್ತಿದ್ದರು. ಈಗಲೂ ಬರಗಾಲವಿದೆ, ಆದರೆ ಅನ್ನಭಾಗ್ಯ ಯೋಜನೆಯಿಂದಾಗಿ ಜನರು ಎರಡು ಹೊತ್ತು ಉಂಡು ನೆಮ್ಮದಿ ಯಿಂದ ಇದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ತಾಲ್ಲೂಕಿನ ಬಸರಾಳು ಹೋಬಳಿಯ ಕೋಡಿಕೊಪ್ಪಲು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಬೀರೇಶ್ವರ ಚನ್ನಕೇಶ್ವರ (ವರಕೊಡಪ್ಪ) ದೇವಾಲಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
‘ರಾಜ್ಯದ 170 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಇದೆ. ಬರ ಎಂದಾಗ ಜನರು ತುತ್ತು ಅನ್ನಕ್ಕಾಗಿ ಊರು ಬಿಟ್ಟು ನಗರಗಳಿಗೆ ಗುಳೇ ಹೋಗುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ.
 
ಕಾಂಗ್ರೆಸ್‌ ಸರ್ಕಾರದ  ಯೋಜನೆಗಳಿಂದ ಬಡವರ ಹಸಿವು ನೀಗಿದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಬರಗಾಲದಲ್ಲಿ ಗುಳೇ ಹೋಗುತ್ತಿದ್ದರು. ಆದರೆ ಈ ವರ್ಷ ಗುಳೇ ಪ್ರಮಾಣ ಬಹಳ ಕಡಿಮೆಯಾಗಿದೆ. ಅದಕ್ಕೆ ಅನ್ನಭಾಗ್ಯ ಯೋಜನೆಯೇ ಕಾರಣ’ ಎಂದು ಹೇಳಿದರು.
 
‘ಬರ ನಿರ್ವಹಣೆ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಾನು ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುವುದಿಲ್ಲ. ನಿನ್ನೊಳಗೇ ದೇವರಿದ್ದಾನೆ ಎಂದು ಬಸವಣ್ಣ ಹೇಳಿದ್ದಾನೆ.
 
ಶುದ್ಧ ಮನಸ್ಸಿಗೆ ಸದಾ ದೇವರು ಒಲಿಯುತ್ತಾನೆ. ದೇವರು ನಮ್ಮೊಳಗಿದ್ದಾನೆ ಎಂದುಕೊಂಡರೆ ನಾವು ತಪ್ಪು ಮಾಡಲು ಸಾಧ್ಯವಿಲ್ಲ. ಸತ್ಯವೇ ಸ್ವರ್ಗ ಮಿಥ್ಯವೇ ನರಕ’ ಎಂದು ಹೇಳಿದರು.
 
ಮೈಷುಗರ್‌ ಜುಲೈನಲ್ಲಿ ಕಾರ್ಯಾರಂಭ: ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಮಾತನಾಡಿ ‘ಸ್ಥಗಿತಗೊಂಡಿರುವ ಮೈಷುಗರ್‌ ಜುಲೈ ತಿಂಗಳಲ್ಲಿ ಕಾರ್ಯಾ ರಂಭ ಮಾಡಲಿದೆ. ಈ ಬಾರಿಯ ಅಂಬೇಡ್ಕರ್‌ ಜಯಂತಿಯಂದು ಬಾಯ್ಲರ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಶೇ 75ರಷ್ಟು ಕಬ್ಬಿನ ಹಣವನ್ನು ಶೀಘ್ರ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮೂರು ಲಕ್ಷ ಟನ್‌ ಕಬ್ಬು ಪೂರೈಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
 
ನಮ್ಮ ನಡುವೆ ಏನಿಲ್ಲ...: ಶಾಸಕ ಅಂಬರೀಷ್‌ ಮಾತನಾಡಿ ‘ನಾನು ಸಿದ್ದರಾಮಯ್ಯರಂತೆ ಲಾಯರ್‌ ಅಲ್ಲ. ಖಳನಾಯಕನಾಗಿ ಚಿತ್ರರಂಗಕ್ಕೆ ಬಂದೆ, ಪೋಷಕ ನಟನಾದೆ, ನಂತರ ನಾಯಕನಾಗಿ ಜನರ ಮನಸ್ಸು ಗೆದ್ದೆ. ರಾಜಕೀಯದ ಹಾದಿಯಲ್ಲಿ ಸಂಸದನಾದೆ, ಕೇಂದ್ರದ ಮಂತ್ರಿಯೂ ಆದೆ.
 
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮೂರುವರೆ ವರ್ಷ ಮಂತ್ರಿಯಾಗಿ ಕೆಲಸ ಮಾಡಿದೆ. ಅರ್ಹ ಶಾಸಕರಿಗೆ ಅವಕಾಶ ಸಿಗಲಿ ಎಂಬ ಕಾರಣದಿಂದ ಮಂತ್ರಿ ಸ್ಥಾನ ತೊರೆದೆ. ಮಾಧ್ಯಮದವರು ಮುಖ್ಯಮಂತ್ರಿ ಹಾಗೂ ನನ್ನ ನಡುವೆ ಏನೋ ಇದೆ ಎಂದು ಬರೆಯುತ್ತಾರೆ. ನಮ್ಮ ನಡುವೆ ಅಂಥದ್ದೇನೂ ಇಲ್ಲ’ ಎಂದು ಹೇಳಿದರು.
 
‘ಮುಖ್ಯಮಂತ್ರಿ ಸಿದ್ದರಾಮಯ್ಯ  ಜಿಲ್ಲೆಗೆ ₹ 5,400 ಕೋಟಿ ಅನುದಾನ ನೀಡಿದ್ದಾರೆ. ಇದರಿಂದಾಗಿ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು,  ಒಳಚರಂಡಿ, ಉದ್ಯಾನ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ’ ಎಂದು ಹೇಳಿದರು.
 
ನಾಗಮಂಗಲ ಕ್ಷೇತ್ರದ ಶಾಸಕ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು. ವಿಧಾನಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ, ಬಿಬಿಎಂಪಿ ಮಾಜಿ ಮೇಯರ್‌ ಹುಚ್ಚಪ್ಪ, ಮಾಜಿ ಕಾರ್ಪೊರೇಟರ್‌ ಸೋಮಶೇಖರ್‌, ಶಿವಣ್ಣ, ಸಿ.ನಾಗೇಶ್‌ ಉಪಸ್ಥಿತರಿದ್ದರು.
 
ಭದ್ರತೆ, ಬಂಧನ: ಈಚೆಗೆ ಮಳವಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಿದ್ದ ಘಟನೆಯನ್ನು ಗಮನದಲ್ಲಿಟ್ಟುಕೊಂಡಿದ್ದ ಪೊಲೀಸರು ಈ ಬಾರಿ ಹೆಚ್ಚು ಭದ್ರತೆ ಒದಗಿಸಿದ್ದರು.
 
ಕಾರ್ಯಕ್ರಮಕ್ಕೂ ಮೊದಲು ಪ್ರತಿಭಟನೆಗೆ ಮುಂದಾಗಿದ್ದ ಕೆಲವು ಬಿಜೆಪಿ ಹಾಗೂ ದಸಂಸ ಮುಖಂಡರನ್ನು ಬಂಧಿಸಿದ್ದರು. ಬಿಜೆಪಿ ಮುಖಂಡ ಶಿವಕುಮಾರ ಆರಾಧ್ಯ, ದಸಂಸ ಮುಖಂಡರಾದ ವೆಂಟಕಗಿರಿಯಯ್ಯ, ಅನ್ನದಾನಿ, ರಾಜಣ್ಣ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
****
ಅಂಬರೀಷ್‌ ನೇತೃತ್ವದಲ್ಲಿ ಹಾರ, ಶಾಲು...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಹಾರ ಹಾಕಲು ಸಾಲುಗಟ್ಟಿ ನಿಂತಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನು ನಿರ್ವಹಣೆ ಮಾಡಿದ ಶಾಸಕ ಅಂಬರೀಷ್‌, ಒಬ್ಬೊಬ್ಬರಾಗಿ ಬಂದು ಹಾರ ಹಾಕುವಂತೆ ನೋಡಿಕೊಂಡರು. ಮಹಿಳಾ ಅಭಿಮಾನಿಯೊಬ್ಬರು ಹಾರ ಹಾಕಲು ಬಂದಾಗ ‘ಏ ಕನಕಾ ಹಣ ಕೊಟ್ಟು ಹಾರ ತಂದೆಯೊ, ಇಲ್ಲ ಕದ್ದು ತಂದೆಯೋ’ ಎಂದು ಅಂಬರೀಷ್‌ ಕೇಳಿದಾಗ ನಗೆಯ ಅಲೆ ಉಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT