ತಾಳ್ಮೆಯೆಂಬ ಖುಷಿಯ ಅಸ್ತ್ರ

ನಾವು ಜೀವನವನ್ನು ವೈಭವದಿಂದ ನಡೆಸಬೇಕು; ಜ್ಞಾನ ಸಂಪಾದನೆಯಿಂ ನಡೆಸಬೇಕು; ದೊಡ್ಡ ಕಾರು, ಬಂಗಲೆ ಎಲ್ಲವೂ ನಮ್ಮ ಬಳಿ ಇರಬೇಕೆಂದು ಆಶಿಸುತ್ತೇವೆ. ಆದರೆ ಪ್ರತಿನಿತ್ಯದ ಜೀವನವನ್ನು  ಸಂತೋಷದಿಂದ ಬದುಕಬೇಕು ಎಂದು ಯಾರೂ ಇಚ್ಛಿಸುವುದಿಲ್ಲ.

ತಾಳ್ಮೆಯೆಂಬ ಖುಷಿಯ ಅಸ್ತ್ರ

ಬೆಳಗ್ಗೆ ಎದ್ದು, ವಾಯುವಿಹಾರ ಮುಗಿಸಿ, ಹಾಲು ಮತ್ತು ದಿನಪತ್ರಿಕೆಗಳನ್ನು ಮನೆಗೆ ತರುವುದು ಹಲವರ ವಾಡಿಕೆ. ಹೀಗೆ ಹಾಲು ತರಲು ಹೋದಾಗ ಅಂಗಡಿಯವ ‘ಚಿಲ್ಲರೆ ಕೊಡಿ ಸ್ವಾಮೀ’ ಎಂದೊಡನೆ ಹಲವರು, ‘ಅಂಗಡಿ ನಡೆಸುವವನು ಚಿಲ್ಲರೆ ಇಟ್ಟುಕೊಳ್ಳಬೇಕು. ಗಿರಾಕಿಗಳ ಹತ್ತಿರ ಕೇಳಬಾರದು. ಇದು ವ್ಯಾಪಾರ ಮಾಡುವ ರೀತೀನಾ...’ ಎಂದು ಅವನ ಮೇಲೆ ಹರಿಹಾಯಲು ಪ್ರಾರಂಭಿಸುತ್ತಾರೆ. ಅಂಗಡಿಯವನೂ ಸುಮ್ಮನಾಗುವುದಿಲ್ಲ. ಅದಕ್ಕೆ ಅವನೂ ಸರಿಯಾದ ಉತ್ತರವನ್ನೇ ಕೊಡುತ್ತಾನೆ.

ಹೀಗೆ ಬೆಳ್ಳಂಬೆಳಗ್ಗೆ ಜಗಳ ಪ್ರಾರಂಭವಾಗಿ ಅಂದಿನ ದಿನ ಕಿರಿಕಿರಿಯಿಂದಲೇ ಆರಂಭವಾಗುತ್ತದೆ. ಆದರೆ ಇಲ್ಲಿ ಜಗಳ ಮಾಡಲು ಅಂಗಡಿಯವನಿಗಾಗಲಿ ಅಥವಾ ಗಿರಾಕಿಗಾಗಲಿ ಏನಾದರೂ ಕಾರಣವಿತ್ತೇ? ಸಿಡುಕುವುದು, ರೇಗುವುದು, ನಮ್ಮ ನಿತ್ಯಜೀವನದ ಭಾಗವಾಗಿ, ನಾವು  ಖುಷಿಯಾಗಿ ಬದುಕುವುದರಿಂದಲೇ ಅವು ಸ್ವಲ್ಪ ಸ್ವಲ್ಪವೇ ದೂರವಾಗಿಸಿವೆ. ಆದರೆ ‘ನಾವು ಖುಷಿಯಾಗಿರುವುದರಿಂದ ನಮ್ಮ ಸುತ್ತಲಿನವರೂ ಖುಷಿಯಾಗಿರುತ್ತಾರೆ’ ಎಂಬ ಸತ್ಯವನ್ನು ನಾವು ಅರಿಯುವುದಿಲ್ಲ. ಖುಷಿ ಎನ್ನುವುದು ಅಕ್ಷಯವಾದ ಸಂಪತ್ತು. ಎಲ್ಲರಲ್ಲೂ ಸಾಕಷ್ಟು ಇರುವುದು ಎಂಬ ತಿಳಿವಳಿಕೆ ನಮಗೆ ಮೂಡುವುದೇ ಇಲ್ಲ.

ಹಿಂದೆ ಒಂದು ಊರಿನಲ್ಲಿ ಒಬ್ಬ ಸಂನ್ಯಾಸಿ ವಾಸವಾಗಿದ್ದ. ಸಹಜವಾಗಿ ಅವನಿಗೆ ನೆಂಟರೂ, ಬಂಧುಗಳೂ ಯಾರೂ ಇರಲಿಲ್ಲ. ಹೀಗಾಗಿ ಊರಿನವರೆಲ್ಲರು ತನ್ನವರೇ ಆಗಿದ್ದರು. ಆ ಸಂನ್ಯಾಸಿ ಇದ್ದ ಸ್ಥಳದಲ್ಲಿ ಯಾವಾಗಲೂ ಖುಷಿ, ನಗು ಹರಡಿರುತ್ತಿತ್ತು. ಮಕ್ಕಳೊಡನೆ ಮಕ್ಕಳಾಗಿ, ಹಿರಿಯರಿಗೆ ಮಾರ್ಗದರ್ಶಕನಾಗಿ ಸಂತೋಷವನ್ನು ಹಂಚುತ್ತಿದ್ದ.

ಯಾವಾಗಲೂ ಅವನ ಜೇಬುಗಳು ತುಂಬಿ  ಇರುತ್ತಿತ್ತು. ಯಾರಾದರೂ ‘ಇದೇನು ಸ್ವಾಮೀ ಜೇಬಿನಲ್ಲಿ’ ಎಂದರೆ, ‘ನನ್ನ ಆಸ್ತಿ’ ಎಂದು ನಕ್ಕು ಸುಮ್ಮನಾಗುತ್ತಿದ್ದ. ಅವನಿಂದ ಇಡೀ ಊರಿಗೆ ಒಂದು ಜೀವಂತ ಕಳೆ ಇತ್ತು.  ಊರಿನಲ್ಲಿ ಯಾರಾದರೂ ಜಗಳ ಮಾಡಿದರೆ, ಅಲ್ಲಿಗೆ ಈ ಸಂನ್ಯಾಸಿ ಹಾಜರಾಗಿ, ಯಾವುದಾದರೂ ಒಂದು ಹಾಸ್ಯಚಟಾಕಿಯನ್ನು ಹಾರಿಸಿ, ಇಬ್ಬರನ್ನೂ ಸಮಾಧಾನಪಡಿಸಿ ಕಳುಹಿಸುತ್ತಿದ್ದ.

ಆದರೆ ಅವನು ವೈಯಕ್ತಿಕ ಕಷ್ಟ-ನಷ್ಟಗಳು ಯಾರಿಗೂ ಹೇಳುತ್ತಿರಲಿಲ್ಲ. ಅವನಿಗೆ ಕಾಯಿಲೆಯಾಗಿದೆ ಎಂದು ತಿಳಿದು ಯಾರಾದರೂ ಹೋಗಿ ವಿಚಾರಿಸಿದರೆ, ಸಾಲ ಕೊಟ್ಟವನು ಅವನು, ಬಡ್ಡಿ ಸಮೇತ ತಗೋತಾನೆ ಬಿಡು, ಅದಕ್ಕೆ ನಾವ್ಯಾಕೆ ಅಳಬೇಕು – ಎಂದು ಹೇಳಿ ಸಮಾಧಾನ ಮಾಡಲು ಬಂದವರಿಗೇ ಧೈರ್ಯ ತುಂಬಿ ಕಳುಹಿಸುತ್ತಿದ್ದ. ಹೀಗಿದ್ದ ಸಂನ್ಯಾಸಿ ಒಮ್ಮೆ ಇದ್ದಕ್ಕಿದ್ದಂತೆ ಆ  ಊರಿನಿಂದ ಕಾಣೆಯಾದ.

ಊರಿನ ಜನ ಆ ಸಂನ್ಯಾಸಿ ವಾಸವಿದ್ದ ಊರಿನಾಚೆಯ ಪಾಳುಮಂಟಪಕ್ಕೆ ಬಂದು ನೋಡಿದರೆ,  ಸಂನ್ಯಾಸಿ ಅಲ್ಲಿ ಸತ್ತುಬಿದ್ದದ್ದು ಕಂಡಿತು. ಈಗ ಅವನ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂದು ಚರ್ಚೆ ಪ್ರಾರಂಭವಾಯಿತು. ಜನರೆಲ್ಲಾ ಅವನ ಜೋಳಿಗೆಯನ್ನು ತಡಕಾಡಿದರು. ಅಲ್ಲಿ ಒಂದು ಚೀಟಿ ಸಿಕ್ಕಿತು. ಅದನ್ನು ಓದಿದಾಗ ಸಂನ್ಯಾಸಿಯು, ತಾನು ಸತ್ತಮೇಲೆ ಈ ದೇಹವನ್ನು ಹೇಗಿತ್ತೊ ಹಾಗೆಯೇ ಸುಡಬೇಕು, ನನ್ನ ವಸ್ತ್ರವನ್ನೂ ಸಹ ಕಳಚಬಾರದೆಂದು ಬರೆದಿದ್ದ. ಜನರಿಗೆ ಒಂದು ರೀತಿಯ ಸಮಾಧಾನ ಮತ್ತು ದುಃಖ.

ಅವನ ಇಚ್ಛೆಯಂತೆಯೇ ಸಂನ್ಯಾಸಿ ದೇಹವನ್ನು ಚಿತೆಯ ಮೇಲಿಟ್ಟು, ಬೆಂಕಿ ಹಚ್ಚಿದರು. ಎರಡು, ಮೂರು ನಿಮಿಷ ಕಳೆದಿರಲಿಲ್ಲ, ಚಿತೆಯಿಂದ ಪಟಾಕಿ ಸಿಡಿಯುವ ಸದ್ದು ಪ್ರಾರಂಭವಾಯಿತು. ಅಲ್ಲಿ ಸೇರಿದ್ದ  ಕೆಲವರಿಗೆ ಆಶ್ಚರ್ಯ, ಇನ್ನು ಹಲವರು ಗಾಬರಿಗೊಂಡು ಓಡಿದರು. ನಂತರ ತಿಳಿಯಿತು, ಸಂನ್ಯಾಸಿ ತನ್ನ ಜೇಬಿನಲ್ಲಿ ಯಾವಾಗಲೂ ತುಂಬಿಕೊಂಡು ತಿರುಗುತ್ತಿದ್ದದ್ದು ಪಟಾಕಿಯನ್ನು; ಅವನ ದೇಹಕ್ಕೆ ಬೆಂಕಿ ಕೊಟ್ಟಾಗ, ಅದು ಸಿಡಿಯಿತು ಎಂದು. ಪರಿಸ್ಥಿತಿ ಎಲ್ಲರ ಅರಿವಿಗೆ ಬಂದ ನಂತರ, ಓರ್ವ ಹೇಳಿದ, ‘ಬಾರಿ ಐನಾತಿ ಸಂನ್ಯಾಸಿ. ಇದ್ದಾಗಲೂ ಖುಷಿ ಖುಷಿಯಾಗಿ ಇದ್ದ, ಸತ್ತಮೇಲೂ ಒಳ್ಳೆ ತಮಾಷೆ ಮಾಡಿ ನಮ್ಮನ್ನು ನಗಿಸಿದ’ ಎಂದು. 

ಈಗ ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ, ಸಂತೋಷದಿಂದ ಬದುಕುವುದು ಅಷ್ಟು ಕಷ್ಟವೇ? ಅದಕ್ಕೆ ಉತ್ತರ ‘ಅಲ್ಲ’ ಎಂಬುದನ್ನು ಎಲ್ಲರೂ ಹೇಳುತ್ತಾರೆ. ಆದರೆ ಸಂತೋಷದಿಂದ ಬದುಕುವುದು ಹೇಗೆ ಎಂಬುದಕ್ಕೆ ಮಾತ್ರ ಉತ್ತರ ಬಹಳ ಕ್ಲಿಷ್ಟವಾಗಿರುತ್ತದೆ.  ನಾವು ಜೀವನವನ್ನು ವೈಭವದಿಂದ ನಡೆಸಬೇಕು; ಜ್ಞಾನ ಸಂಪಾದನೆಯಿಂ ನಡೆಸಬೇಕು; ದೊಡ್ಡ ಕಾರು, ಬಂಗಲೆ ಎಲ್ಲವೂ ನಮ್ಮ ಬಳಿ ಇರಬೇಕೆಂದು ಆಶಿಸುತ್ತೇವೆ. ಆದರೆ ಪ್ರತಿನಿತ್ಯದ ಜೀವನವನ್ನು  ಸಂತೋಷದಿಂದ ಬದುಕಬೇಕು ಎಂದು ಯಾರೂ ಇಚ್ಛಿಸುವುದಿಲ್ಲ.

ಏಕೆಂದರೆ ಸಂತೋಷದಿಂದ, ಖುಷಿಯನ್ನು ಹಂಚುತ್ತಾ, ನಗು ನಗುತಾ ಬಾಳುವುದರ ಗಮ್ಯ ‘ಸಮೃದ್ಧ ಜೀವನ’ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ. ದಿನದ ಹತ್ತು ಗಂಟೆ ಕೆಲಸ, ಕೆಲಸಕ್ಕಾಗಿ ಪ್ರಯಾಣ, ಮನೆಯ ನಿತ್ಯದ ಜವಾಬ್ದಾರಿಗಳಲ್ಲಿ ಸಮಯ ವೇಗವಾಗಿ ಓಡುತ್ತಿರುತ್ತದೆ. ಅದರ ಜೊತೆಗೆ ನಾವೂ ಓಡುತ್ತಿರುತ್ತೇವೆ. ಆದರೆ ಓಡುವಾಗಲೇ ಸಂತೋಷವನ್ನೂ ಪಡೆಯಬೇಕೆಂಬ ಯೋಚನೆ ನಮ್ಮಲ್ಲಿ  ಮೂಡುವುದಿಲ್ಲ.

ನಮ್ಮ ಜವಾಬ್ದಾರಿಗಳೆಲ್ಲಾ ನಾವು ಅನಿವಾರ್ಯವಾಗಿ ಮುಗಿಸಬೇಕಾದ ಕರ್ಮಗಳಾಗಿ ತೋರುತ್ತವೆ. ಅದನ್ನು ಮುಗಿಸುವುದರ ಜೊತೆಗೆ ನಾವು ಅದರಲ್ಲಿ ಒಂದು ಅಂಶದಷ್ಟಾದರೂ ಆನಂದವನ್ನು ಪಟ್ಟರೆ, ಆಗ ಕೆಲಸದ ಭಾರ ನಮಗೆ ತಿಳಿಯುವುದಿಲ್ಲ; ನಾವು ಪಟ್ಟ ಸಂತಸ ಇತರರಿಗೂ ತಲುಪುತ್ತದೆ.ಹಾಗಾದರೆ ಖುಷಿಯಾಗಿ ಜೀವನವನ್ನು ನಡೆಸುವುದು ಅಷ್ಟು ಸುಲಭವಾದರೆ, ಅದು ಎಲ್ಲರಿಗೂ ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ನಾವು ಖುಷಿಪಡಲು ಮುಖ್ಯವಾಗಿ ಇರಬೇಕಾದುದು ಪ್ರಾಂಜಲವಾದ ಮನಸ್ಸು, ಹೃದಯವೈಶಾಲ್ಯ ಮತ್ತು  ಪರಿಸ್ಥಿತಿಯಿಂದ ಹೊರಗೆ ನಿಂತು ನೋಡುವ ಪ್ರಜ್ಞೆ.

ನಮ್ಮ ಅನುದಿನದ ಜಂಜಾಟದಲ್ಲಿ, ಪ್ರತಿ ಚಿಕ್ಕ ಪುಟ್ಟ ಕೆಲಸದಲ್ಲೂ, ನಾವು ಈ ನಿಯಮಗಳನ್ನು ಪಾಲಿಸಿದರೆ, ನಾವು ಸಂತೋಷದಿಂದಿರುವುದು ಸುಲಭ. ಉದಾಹರಣೆಗೆ ಮೊದಲೇ ನೋಡಿದಂತೆ, ನಾವು ಹಾಲನ್ನೋ, ಸುದ್ದಿಪತ್ರಿಕೆಯನ್ನೋ, ಖರೀದಿಸುವಾಗ ಅಂಗಡಿಯವನು ಚಿಲ್ಲರೆ ಕೇಳಿದಾಗ, ‘ನನ್ನ ಬಳಿಯೂ ಇಲ್ಲ, ನಾಳೆ ಸಿಕ್ಕಾಗ ಕೊಡುತ್ತೇನೆ’ ಎಂದರೆ ಆಗ ಜಗಳ ಉದ್ಭವವಾಗುವುದೇ ಇಲ್ಲ.

ನಾವು ಕೆಲಸ ಮಾಡುವ ಕಚೇರಿಯಲ್ಲಿ, ನಾವು ದಿನದ ಅತಿ ಹೆಚ್ಚು ಸಮಯವನ್ನು ಕಳೆದಿರುತ್ತೇವೆ. ಆದರೂ ವಿಪರ್ಯಾಸವೆಂದರೆ, ನಮ್ಮ ಪಕ್ಕದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಯ ಮಕ್ಕಳ ಹೆಸರೂ ನಮಗೆ ತಿಳಿದಿರುವುದಿಲ್ಲ. ಅವನ ಹುಟ್ಟೂರು ಯಾವುದೆಂದು ನಾವು ಕೇಳುವ ಪ್ರಯತ್ನ ಮಾಡಿರುವುದಿಲ್ಲ. ಅಷ್ಟೇ ಏಕೆ, ದಿನಾ ನಮ್ಮ ಮೇಜನ್ನು ಶುಚಿಗೊಳಿಸಿ, ನೀರು ತಂದು ಇಟ್ಟು, ನಮ್ಮ ರುಚಿಗನುಗುಣವಾಗಿ ಕಾಫಿ ಮಾಡಿಕೊಡುವ ಆಫೀಸ್ ಬಾಯ್ ಅಥವಾ ನಮಗೆ ಹಲವು ಸಹಾಯ ಮಾಡುವ ಸೆಕ್ಯೂರಿಟಿಯ ಹೆಸರು, ಅವನ ಮನೆ, ಊರು ಯಾವುದೂ ನಮಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಅನ್ನಿಸುವುದಿಲ್ಲ.

ನಮ್ಮ ಮನೆಗೆ ದಿನ ಹಾಲು ತಂದು ಕೊಡುವವನು, ನಮ್ಮ ಇಸ್ತ್ರಿಯ ವ್ಯಕ್ತಿ, ಇವರಾರನ್ನು ನಾವು ಆತ್ಮೀಯತೆಯಿಂದ ಮಾತನಾಡಿಸುವುದೇ ಇಲ್ಲ. ಇವರೆಲ್ಲರೊಂದಿಗೆ ಅಪರೂಪಕ್ಕಾದರೂ ಮನಸ್ಸು ಬಿಚ್ಚಿ ಮಾತನಾಡಿ, ಅವರು ಮಾಡಿದ ಕೆಲಸವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ, ತಮ್ಮ ಕೆಲಸವನ್ನು ಗುರುತಿಸಿದ್ದಕ್ಕೆ ಅವರಿಗೂ ಸಂತೋಷವಾಗುತ್ತದೆ.  ಅದರಿಂದ ಅವರ ಮುಖದಲ್ಲಿ ಮೂಡುವ ನಗು ನಮಗೂ ಖುಷಿ ನೀಡುತ್ತದೆ.  ಬದುಕನ್ನು ಸಂತಸದಿಂದ ಕಳೆಯಲು ಈ ಚಿಕ್ಕ ಪುಟ್ಟ ಖುಷಿಗಳು ಸಹಾಯಮಾಡುತ್ತವೆ.

ದುಃಖಕ್ಕಿಲ್ಲ ಮಾರುಕಟ್ಟೆ
ಹಲವರಿಗೆ ಒಂದು ಅಭ್ಯಾಸವಿರುತ್ತದೆ. ಪರಿಚಯದವರು ‘ಯಾರಾದರೂ  ಹೇಗಿದ್ದೀರಾ?’ ಎಂದು ಕೇಳಿದರೆ ಸಾಕು, ತಮ್ಮ ಸಮಸ್ಯೆಗಳ ಪಟ್ಟಿಯನ್ನು ಹೇಳಲು ಆರಂಭಿಸುತ್ತಾರೆ. ತಮಗೆ ಆದ ಶಸ್ತ್ರಚಿಕಿತ್ಸೆ, ಮಂಡಿನೋವು, ಅವರ ಮಾತ್ರೆಯ ಪಟ್ಟಿ, ಅದರ ಖರ್ಚು – ಹೀಗೆ ಪ್ರಪಂಚದಲ್ಲಿ ಯಾರಿಗೂ ಇರದ ಕಷ್ಟ ತಮಗೊಬ್ಬರಿಗೆ ಇದೆ ಎಂಬಂತೆ ಮಾತನ್ನು ಮುಂದುವರಿಸುತ್ತಾರೆ.

ಇನ್ನೂ ಕೆಲವರಿರುತ್ತಾರೆ. ಅವರು ಇನ್ನೂ ವಿಚಿತ್ರ. ಯಾರು ಅವರ ಬಳಿ ಪ್ರಶ್ನೆ ಕೇಳದಿದ್ದರೂ ತಮ್ಮ ಕಷ್ಟಗಳನ್ನು ತಾವೇ  ಹೇಳಿಕೊಳ್ಳುತ್ತಾರೆ. ಇವರಲ್ಲಿ ಅನೇಕರಿಗೆ ತಮ್ಮ ನೋವನ್ನು ವಿವರಿಸಿ, ಅನುಕಂಪ ಗಿಟ್ಟಿಸಿಕೊಳ್ಳುವ ಹಂಬಲವಿರುತ್ತದೆ. ಆದರೆ ಕೆಲವು ಮಂದಿ ತಮ್ಮ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.  ಅವರು ಈ ನೋವನ್ನು ನುಂಗಿಕೊಂಡು, ಹೊರ ಜಗತ್ತಿಗೆ ತುಂಬಾ ಖುಷಿಯಾಗಿರುವವರಂತೆ ಕಾಣಿಸಿಕೊಳ್ಳುತ್ತಾರೆ.

ತಾನು ಮರಣಶೆಯ್ಯೆಯಲ್ಲಿ ಇದ್ದು ಅಸಾಧ್ಯ ನೋವು ಅನುಭವಿಸುತ್ತಿದ್ದ ಬುದ್ಧ, ‘ಯಾರಿಗಾದರೂ ಏನಾದರೂ ಅನುಮಾನಗಳು ಇವೆಯೇ, ಇದ್ದರೆ ಕೇಳಿಕೊಳ್ಳಿ’ ಎಂದು  ಹೇಳಿದ್ದ. ವೈಯಕ್ತಿಕವಾಗಿ ಹಲವು ನೋವನ್ನು ಕಂಡ ಚಾರ್ಲಿ ಚಾಪ್ಲಿನ್ ಜಗತ್ತಿಗೆ ಉಣಬಡಿಸಿದ್ದು ಯಥೇಚ್ಛವಾದ ಹಾಸ್ಯರಸವನ್ನೇ. ತನ್ನ ನೋವು ಸಮಾಜಕ್ಕೆ ಅರಿವಾಗುವುದು ಅವನಿಗೆ ಇಷ್ಟವಿರಲಿಲ್ಲ ಹೀಗಾಗಿ ಆತ, ‘ನನ್ನ ಕಣ್ಣಿರನ್ನು ಯಾರೂ ನೋಡುವುದು ನನಗೆ ಇಷ್ಟವಿಲ್ಲ, ಅದಕ್ಕೇ ನಾನು ಮಳೆಯಲ್ಲಿ ನಡೆಯುವುದನ್ನು ಇಷ್ಟಪಡುತ್ತೇನೆ’ ಎಂದ  (I like to walk in rain, so that nobody can see my tears). ದುಃಖ ತೀರಾ ವೈಯಕ್ತಿಕವಾದುದು.

ಅದನ್ನು ನಮ್ಮ ಆತ್ಮೀಯರು ಎಂದು ನಂಬಿರುವವರ ಬಳಿ ಮಾತ್ರ ಹಂಚಿಕೊಂಡರೆ, ಅದರ ಘನತೆ ಉಳಿಯುತ್ತದೆ. ಅದನ್ನು ಎಲ್ಲರ ಮುಂದೆ ಬಿಕರಿಗೆ ಇಟ್ಟರೆ, ನಾವೇ ಹಾಸ್ಯದ ವಸ್ತುವಾಗುತ್ತೇವೆ. ನಮ್ಮ ದುಃಖವನ್ನು ನುಂಗಿಕೊಂಡು, ಇತರರೊಂದಿಗೆ ನಮ್ಮ ಖುಷಿಯನ್ನು ಹಂಚಿಕೊಳ್ಳುವುದನ್ನೇ ಸಮಾಜ ಬಯಸುವುದು. ಅದರಿಂದಲೇ ನಮ್ಮ ಆತ್ಮೋನ್ನತಿಯೂ ಸಾಧ್ಯ. 

ಒಟ್ಟಿನಲ್ಲಿ, ಸಂನ್ಯಾಸಿಯಂತೆ ನಾವೂ ನಮ್ಮ ಕಿಸೆಯಲ್ಲಿ ಯಾವಾಗಲೂ ಮುಗುಳುನಗೆ, ಹಾಸ್ಯಚಟಾಕಿಯಂತಹ ಸಹಾನುಭೂಯುತಿಯನ್ನು ತುಂಬಿಕೊಂಡಿರಬೇಕು. ಅವನ್ನು ನಮ್ಮ ಆಸ್ತಿಯನ್ನಾಗಿ ಮಾಡಿಕೊಂಡರೆ ನಾವು ಇದ್ದಾಗಲೂ, ಇಲ್ಲದಿದ್ದಾಗಲೂ ಅವು ಸಮಾಜದಲ್ಲಿ ಸಂತಸವನ್ನು ವಿಸ್ತರಿಸುತ್ತಿರುತ್ತವೆ. 

Comments
ಈ ವಿಭಾಗದಿಂದ ಇನ್ನಷ್ಟು
ಬೇಸಿಗೆಯಲ್ಲಿ ಬೆವರಿಳಿಸಿ  ಬೆಂಡಾಗಿಸುವ ನಿರ್ಜಲೀಕರಣ

ಕರಾವಳಿ
ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

25 Apr, 2018
ನಗು ನಗುತಾ ನಲಿ ನಲಿ…

ಸೆಲೆಬ್ರಿಟಿ ಅ–ಟೆನ್ಶನ್‌
ನಗು ನಗುತಾ ನಲಿ ನಲಿ…

25 Apr, 2018
ಅಪೂರ್ವ ದಿನವೇ  ನಿನಗೆ ನಮಸ್ಕಾರ

ಸ್ವಸ್ಥ ಬದುಕು
ಅಪೂರ್ವ ದಿನವೇ ನಿನಗೆ ನಮಸ್ಕಾರ

25 Apr, 2018
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

ಅಂಕುರ
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

21 Apr, 2018
ಮಜ್ಜಿಗೆ ಎಂಬ ಅಮೃತಪೇಯ

ಬಾಯಾರಿಕೆ ತಣಿವು
ಮಜ್ಜಿಗೆ ಎಂಬ ಅಮೃತಪೇಯ

21 Apr, 2018