ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಆರ್‌.ಪ್ರಸಾದ್, ಬೆಂಗಳೂರು
*ನಿವೃತ್ತಿಯಿಂದ ₹17 ಲಕ್ಷ ಬಂದಿದೆ. ಯಾವುದೇ ವರಮಾನ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ವಾಸ. ಮನೆ ಬಾಡಿಗೆ ₹8 ಸಾವಿರ. ಒಬ್ಬಳು ಮಗಳು ಹಾಗೂ ಇಬ್ಬರು ಮಗ. ಮಗಳಿಗೆ ಮದುವೆಯಾಗಿ 10 ವರ್ಷದ ಹೆಣ್ಣು ಮಗು, 5 ವರ್ಷದ ಗಂಡು ಮಕ್ಕಳಿದ್ದಾರೆ ಮೊಮ್ಮಕ್ಕಳಿಗೆ ತಲಾ ₹2,500 ನೀಡಲು ನಿಮ್ಮ ಸಲಹೆ ಬೇಕಾಗಿದೆ. ಮಗ ಸಾಫ್ಟ್‌ವೇರ್‌ ಎಂಜಿನಿಯರ್‌. ವಯಸ್ಸು 27. ಅವಿವಾಹಿತ. ನಿಮ್ಮ ಸಲಹೆಯಂತೆ ಸೆಕ್ಷನ್‌ 80ಸಿ ಅಡಿಯಲ್ಲಿ ₹1.50 ಲಕ್ಷ ಉಳಿತಾಯ ಮಾಡುತ್ತಾನೆ. ನನ್ನ ನಿವೃತ್ತ ಜೀವನಕ್ಕೆ ಹೂಡಿಕೆ ಮಾಡಲು ಸಲಹೆ ನೀಡಿ.

ಉತ್ತರ: ನೀವು ನಿಮ್ಮ ಇಬ್ಬರು ಮೊಮ್ಮಕ್ಕಳಿಗೆ ಚೆಕ್‌ ಮೂಖಾಂತರ ತಲಾ ₹2,500 ಕೊಡಿ. ಈ ಚೆಕ್‌ ಆಧಾರದ ಮೇಲೆ ಈ ಮೊತ್ತ ಬ್ಯಾಂಕ್‌ನಲ್ಲಿ 10 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಅಸಲು ಪಡೆಯುವ, ರಿ ಇನ್‌ವೆಸ್ಟ್‌ಮೆಂಟ್‌ ಠೇವಣಿಯಲ್ಲಿ ಇಡಿ. ಠೇವಣಿಗೆ ತಂದೆ, ಗಾರ್ಡಿಯನ್‌ ಆಗಿ ಸಹಿ ಮಾಡಲಿ. ಈ ರೀತಿ ಮಾಡುವುದರಿಂದ ಭದ್ರತೆ ಮತ್ತು ಉತ್ತಮ ವರಮಾನ ಹಾಗೂ ನಿಮ್ಮ ಉತ್ತಮ ಧ್ಯೇಯ ಸಫಲವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ–ಮದುವೆಗೆ ನೆರವಾಗುತ್ತದೆ. ನಿಮಗೆ ಪಿಂಚಣಿ ಬಹಳ ಬಾರದೇ ಇರುವುದರಿಂದ ನೀವು ನಿವೃತ್ತಿಯಿಂದ ಪಡೆದ ಹಣವನ್ನು ನಿಮಗೆ ಸಮೀಪದ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿ. 3 ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ತಿಂಗಳು ತಿಂಗಳು ಬಡ್ಡಿ ಪಡೆಯಲು ಸಾಧ್ಯವಾಗದಿದ್ದರೂ ಇದರಿಂದ ಬಡ್ಡಿ ಬರುವ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ. ನನ್ನ ಸಲಹೆ ಸ್ವೀಕರಿಸಿ ಸೆಕ್ಷನ್ 80ಸಿ ಅಡಿ ಲಾಭ ಪಡೆದ ನಿಮ್ಮ ಮಗನಿಗೆ ಧನ್ಯವಾದ.

ಗೋಪಿನಾಥ, ಬಳ್ಳಾರಿ
*ವಯಸ್ಸು 72. ಸರ್ಕಾರಿ ನಿವೃತ್ತ ಅಧಿಕಾರಿ. ನನ್ನ ವಾರ್ಷಿಕ ಆದಾಯ ₹3.61 ಲಕ್ಷ. ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಮಾರ್ಗದರ್ಶನ ಮಾಡಿ. ನಾನು ವಾರ್ಷಿಕ ₹78,000 ಮನೆ ಬಾಡಿಗೆ ಕೊಡುತ್ತೇನೆ. ಈ ಮೊತ್ತಕ್ಕೆ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದೇ? 15ಎಚ್‌ ಫಾರಂ ತುಂಬಿದರೆ ಕಟ್ಟಿದ ತೆರಿಗೆ ವಾಪಸು ಪಡೆಯಬಹುದೇ ತಿಳಿಸಿ.

ಉತ್ತರ: ನೀವು ಹಿರಿಯ ನಾಗರಿಕ ಆಗಿರುವುದರಿಂದ ₹3 ಲಕ್ಷಗಳ ತನಕ ಆದಾಯದಲ್ಲಿ ವಿನಾಯಿತಿ ಇದ್ದು, ಮಿಕ್ಕಿದ ಆದಾಯ ಅಂದರೆ ₹61 ಸಾವಿರ 5 ವರ್ಷಗಳ ಬ್ಯಾಂಕ್‌ ಠೇವಣಿ ಇರಿಸಿದಲ್ಲಿ, ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ, 31.7.2017ರೊಳಗೆ ತೆರಿಗೆ ರಿಟನ್ಸ್‌ ಸಲ್ಲಿಸಲೇಬೇಕು. ನೀವು ಕೊಡುವ ಮನೆ ಬಾಡಿಗೆಗೆ ತೆರಿಗೆ ವಿನಾಯಿತಿ ಪಡೆಯಲು ಬರುವುದಿಲ್ಲ. 15 ಎಚ್‌ ಫಾರಂ ಬ್ಯಾಂಕ್‌ಗೆ ಸಲ್ಲಿಸಿದರೆ ಟಿ.ಡಿ.ಎಸ್‌ (Tax deducted at source) ಠೇವಣಿಯಿಂದ ಬರುವ ಬಡ್ಡಿಯಲ್ಲಿ ಮಾಡುವುದಿಲ್ಲ. ಒಂದು ವೇಳೆ ಹೆಚ್ಚಿನ ತೆರಿಗೆ ಸಲ್ಲಿಸಿ, ವಾಪಸು ಪಡೆಯಲು ತೆರಿಗೆ ರಿಟರ್ನ್ಸ್‌ ತುಂಬಬೇಕೇ ವಿನಾ 15 ಎಚ್‌ ನಿಂದ ಇದು ಸಾಧ್ಯವಿಲ್ಲ.

ಹೆಸರು ಬೇಡ, ಚನ್ನಗಾನಹಳ್ಳಿ, ಬೆಂಗಳೂರು
*ನಾನು ಸರ್ಕಾರಿ ನಿವೃತ್ತ ನೌಕರ. ವಯಸ್ಸು 63. ನನಗೆ ನಿವೃತ್ತಿಯಿಂದ ಬಂದ 10 ಲಕ್ಷ ಬ್ಯಾಂಕ್ ಠೇವಣಿ ಮಾಡಿದ್ದೇನೆ. ನಮಗೆ ಇಬ್ಬರು ಮಕ್ಕಳು. ಮಗಳಿಗೆ ಮದುವೆಯಾಗಿದೆ, ಮಗನಿಗೆ ಇಬ್ಬರು ಹೆಣ್ಣು ಮಕ್ಕಳು. ಅವನ ತಿಂಗಳ ಸಂಬಳ ₹ 1.50 ಲಕ್ಷ. ನಾನು ನಿವೃತ್ತಿಯ ನಂತರ, ತೆರಿಗೆ ತುಂಬಲಿಲ್ಲ. ಬ್ಯಾಂಕಿನಲ್ಲಿ 15ಎಚ್‌ ಫಾರಂ ಮಾತ್ರ ಸಲ್ಲಿಸುತ್ತಿದ್ದೇನೆ. ನನ್ನ ಆದಾಯ ತೆರಿಗೆ ಉಳಿತಾಯದ ವಿಚಾರದಲ್ಲಿ ತಿಳಿಸಿರಿ. ನನಗೆ ತಿಂಗಳಿಗೆ ₹ 50,000 ಬಾಡಿಗೆ ಬರುತ್ತದೆ.

ಉತ್ತರ: ಮಾಸಿಕ ಪಿಂಚಣಿ ಎಷ್ಟು ಎಂಬುದನ್ನು ತಿಳಿಸಿಲ್ಲ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ, ಬ್ಯಾಂಕ್ ಠೇವಣಿ ಹಾಗೂ ಬಾಡಿಗೆ ಇವೆಲ್ಲವುಗಳು ₹ 3 ಲಕ್ಷ ದಾಟುವುದರಿಂದ ಠೇವಣಿಗೆ 15ಎಚ್ ನಮೂನೆ ಫಾರಂ ಸಲ್ಲಿಸಲು ಬರುವುದಿಲ್ಲ. ನಿಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ತಲಾ ₹ 20,000 ಆರ್.ಡಿ. 5 ವರ್ಷಗಳ ಅವಧಿಗೆ ಮಾಡಿ. ತೆರಿಗೆ ವಿಚಾರದಲ್ಲಿ ನಿಮ್ಮ ಮನೆಗೆ ಸಮೀಪದ ಚಾರ್ಟರ್ಡ್ ಅಕೌಂಟೆಂಟ್ ವಿಚಾರಿಸಿ. ರಿಟರ್ನ್ 31–7–2017ರೊಳಗೆ ಸಲ್ಲಿಸಿರಿ. ಹೀಗೆ ಮಾಡದಿರುವಲ್ಲಿ ಮುಂದೆ ತೊಂದರೆಗೀಡಾಗುತ್ತೀರಿ.

ಮಹಂತೇಶ ಗಡ್ಡಿ, ಸಿಡ್ನಿ
*ನಾನು ಭಾರತದಲ್ಲಿ ಹುಟ್ಟಿದ್ದು ಆಸ್ಟ್ರೇಲಿಯಾ ಪ್ರಜೆ. ಈಗ ಸಿಡ್ನಿಯಲ್ಲಿ ವಾಸವಾಗಿದ್ದೇನೆ.  ನಿಮ್ಮ ಪ್ರಶ್ನೋತ್ತರ ನಿಯಮಿತವಾಗಿ ಓದುತ್ತಿದ್ದೇನೆ. ನನಗೆ ಕೆಲವು ವಿಷಯಗಳಲ್ಲಿ ನಿಮ್ಮ ಸಲಹೆ ಬೇಕಾಗಿದೆ. ನಾನು ತಿಂಗಳಿಗೆ ₹ 50,000 ಉಳಿಸಬಲ್ಲೆ. ರಿಪ್ಯಾಟ್ರಿಯೇಟ್‌ (Repatriate) ಹೂಡಿಕೆಯಲ್ಲಿರುವುದು ಉತ್ತಮ. ನನಗೆ ಯಾವುದೇ ಆದಾಯ ಅಥವಾ ವರಮಾನ ಭಾರತದಲ್ಲಿ ಇರುವುದಿಲ್ಲ. ನಾನು ಟ್ಯಾಕ್ಸ್‌ ರಿಟರ್ನ್‌ ಮಾಡಬೇಕಾ, ತಿಳಿಸಿ.

ಉತ್ತರ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ. (ಎಸ್‌ಬಿಐ) ಭಾರತದ ಅತಿ ದೊಡ್ಡ ಬ್ಯಾಂಕ್‌ ಹಾಗೂ ಪ್ರಪಂಚದ ಎಲ್ಲೆಡೆ ಶಾಖೆಗಳನ್ನು ಹೊಂದಿದೆ. ಜೊತೆಗೆ ಸಿಡ್ನಿಯಲ್ಲಿಯೂ ಶಾಖೆ ಇರಬಹುದು ಅಥವಾ ಈ ಬ್ಯಾಂಕು ಅಲ್ಲಿನ ಬ್ಯಾಂಕುಗಳ ಸಂಪರ್ಕ ಹೊಂದಿರುತ್ತದೆ. ನೀವು ಸಿಡ್ನಿ ಕರೆನ್ಸಿಯನ್ನು ಡಾಲರಿನಲ್ಲಿ ಪರಿವರ್ತಿಸಿ, ಎಸ್‌.ಬಿ.ಐ.ನಲ್ಲಿ ಠೇವಣಿ ಇರಿಸಿ. ನಿಮಗೆ ಬೇಕಾದಾಗ ಡಾಲರಿನಲ್ಲಿಯೇ ವಾಪಸು ಪಡೆಯಲು,  ಎಸ್‌.ಬಿ.ಐ. ಅಥವಾ ಅವರ ಸ್ಥಳೀಯ ಪ್ರಾತಿನಿಧಿಕ  (Correspondent Bank) ಬ್ಯಾಂಕಿನಲ್ಲಿ   ವಿಚಾರಿಸಿರಿ. ಭಾರತದಲ್ಲಿ ಇದುವರೆಗೆ ನಿಮಗೆ ಯಾವುದೇ  ಆದಾಯ ಇಲ್ಲದಿರುವುದರಿಂದ ತೆರಿಗೆ ಕೊಡುವುದಾಗಲೀ, ರಿಟರ್ನ್‌ ಸಲ್ಲಿಸುವ  ಪ್ರಮೇಯವಿಲ್ಲ.

ಸುರೇಶ್‌ ಯರಗೊಪ್ಪ, ವಿಜಯಪುರ
*ನಾನು 17–3–2017 ರಂದು ₹ 1000 ಆರ್‌.ಡಿ. 5 ವರ್ಷಗಳ ಅವಧಿಗೆ ಎಸ್‌.ಬಿ.ಐ.ನಲ್ಲಿ ಮಾಡಿದ್ದೆ. ದಿನಾಂಕ 22–3–2017ರಂದು ಪ್ರಕಟವಾದ    ಪ್ರಶ್ನೆ ಒಂದಕ್ಕೆ ಉತ್ತರಿಸಿ ಆರ್‌.ಡಿ.ಗೆ ಶೇ  7.5 ಬಡ್ಡಿ ಇದೆ ಎಂದು ತಿಳಿಸಿದ್ದೀರಿ. ಅದು ಯಾವ ಬ್ಯಾಂಕ್‌ ತಿಳಿಸಿರಿ. ಬಡ್ಡಿದರ ಎಲ್ಲಾ ಬ್ಯಾಂಕುಗಳಲ್ಲಿ ಒಂದೇ ರೀತಿ ಇರುವುದಿಲ್ಲವೇ?

ಉತ್ತರ: ತಾ. 22–3–2017 ರಲ್ಲಿ ಶ್ರೀ ಜಯರಾಮ್‌ ಅವರ ಪ್ರಶ್ನೆಗೆ ಉತ್ತರಿಸುವಾಗ ‘₹ 1000 ಆರ್‌.ಡಿ. ಶೇ 7.5 ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ ₹ 72880’ ಬಡ್ಡಿ ಸೇರಿಸಿ ಬರುತ್ತದೆ ಎಂಬುದಾಗಿ ಬರೆದದ್ದು ನಿಜ. ಆದರೆ ಇದೊಂದು ಉದಾಹರಣೆ ಮಾತ್ರ. ಕೆಲವು ಖಾಸಗಿ ಹಾಗೂ ಸಹಕಾರಿ ಬ್ಯಾಂಕುಗಳು ಶೇ 7.5 ರಿಂದ ಶೇ 8ರ ಬಡ್ಡಿ ದರವನ್ನು ಠೇವಣಿಗೆ ಈಗಲೂ ನೀಡುತ್ತವೆ. ಅಂಚೆ ಕಚೇರಿಯಲ್ಲಿ ಶೇ 7.4 ಬಡ್ಡಿ ಪ್ರಸ್ತುತ ಜಾರಿಯಲ್ಲಿದ್ದು, ಎಲ್ಲಾ ಆರ್ಥಿಕ ಸಂಸ್ಥೆಗಳೂ,  ಕಾಲ ಕಾಲಕ್ಕೆ ಬಡ್ಡಿ ದರ ಬದಲಾಯಿಸುತ್ತಲೇ ಇರುತ್ತವೆ. ಎಲ್ಲಕ್ಕೂ ಮುಖ್ಯವಾಗಿ ಸಾಲದ ಮೇಲಿನ ಬಡ್ಡಿದರ ಹಾಗೂ ಠೇವಣಿ ಮೇಲಿನ ಬಡ್ಡಿ ದರ ಕಾಲ ಕಾಲಕ್ಕೆ ಬದಲಾಯಿಸುವ ಹಕ್ಕು, ಭಾರತೀಯ ರಿಸರ್ವ್‌್ ಬ್ಯಾಂಕ್‌, ಎಲ್ಲಾ ಹಣಕಾಸು ಸಂಸ್ಥೆಗಳಿಗೆ,  ಕೊಟ್ಟಿದೆ.  ನಿಮ್ಮ ಮನೆಗೆ ಸಮೀಪದ ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕುಗಳನ್ನು ವಿಚಾರಿಸಿರಿ.

ಹೊನ್ನೇಗೌಡ, ಹಾಸನ
*ನನ್ನ ತಂಗಿ ಗಂಡ ಹಾಗೂ ತಂಗಿಗೆ ಸೇರಿದ 3 ಎಕರೆ ಕಾಫಿ ತೋಟ ಮಾರಾಟ ಮಾಡಿ  ₹ 54  ಲಕ್ಷ ಬಂದಿದೆ. ತಂಗಿ ಗಂಡನಿಗೆ ಪೆರಾಲಿಸಿಸ್‌ ಆಗಿ ತಿಂಗಳಿಗೆ  ₹ 30,000 ಖರ್ಚು ಇದೆ. ನಿರ್ವಹಣೆಗೆ  ₹ 10,000 ಬೇಕಾಗುತ್ತದೆ.₹ 54 ಲಕ್ಷ ಯಾವ ಬ್ಯಾಂಕಿನಲ್ಲಿ ಇರಿಸಿದರೆ ಆದಾಯ ತೆರಿಗೆ ವಿನಾಯತಿ ಪಡೆಯಬಹುದು.

ಉತ್ತರ: ನೀವು ತಿಳಿಸಿದಂತೆ ಮಾರಾಟ ಮಾಡಿದ ಕಾಫಿ ತೋಟ ನಿಮ್ಮ ತಂಗಿ ಹಾಗೂ ತಂಗಿ ಗಂಡನಿಗೆ ಸೇರಿರುವುದರಿಂದ, ಬಂದಿರುವ ₹ 54 ಲಕ್ಷ ವಿಂಗಡಿಸಿ, ₹ 27 ಲಕ್ಷದಂತೆ, ಇಬ್ಬರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿರಿ. ಹೀಗೆ ಮಾಡಿದಲ್ಲಿ, ವಾರ್ಷಿಕ ಬರುವ ಬಡ್ಡಿ ₹ 2.50 ಲಕ್ಷ ದೊಳಗೆ ಬರುವುದರಿಂದ, ಇಬ್ಬರೂ ಆದಾಯ ತೆರಿಗೆಯಿಂದ ಮುಕ್ತರಾಗಬಹುದು. ಇದೇವೇಳೆ ನಿಮ್ಮ ತಂಗಿ ಗಂಡನಿಗೆ ಪೆರಾಲಿಸಿಸ್‌ನಿಂದ ಅಂಗವಿಕಲತೆಯಾಗಿರುವುದರಿಂದ ಡಾಕ್ಟರ್‌ ಸರ್ಟಿಫಿಕೇಟು ಇರುವಲ್ಲಿ, ಅವರು ಬರುವ ಒಟ್ಟು ಆದಾಯದಲ್ಲಿ ಸೆಕ್ಷನ್‌ 80ಯು ಆಧಾರದ ಮೇಲೆ ವಾರ್ಷಿಕ ₹ 75,000 ಕಳೆದು ತೆರಿಗೆ ಸಲ್ಲಿಸುವ ಅವಕಾಶವಿದೆ. ₹ 27 ಲಕ್ಷ ವಿಂಗಡಿಸಿ ಠೇವಣಿ ಮಾಡಿದರೆ, ಈ ವಿನಾಯತಿಯ ಅವಶ್ಯವೂ ಇಲ್ಲ.

ರಘುನಾಥರಾವ್‌ ತಾಪ್ಸೆ, ದಾವಣಗೆರೆ
*ನನ್ನ ಎಫ್‌ಡಿಆರ್‌ 23–12–2016ಕ್ಕೆ ಅವಧಿ ಮುಗಿದಿತ್ತು. ತಾ. 26–12–2016ಕ್ಕೆ ಬ್ಯಾಂಕಿಗೆ ಹೋಗಿ, ಬರುವ ಬಡ್ಡಿ ನನ್ನ ಖಾತೆಗೆ ಜಮಾ ಮಾಡಿ, ಅಸಲನ್ನು 23–12–2016 ರಿಂದ ಮುಂದುವರಿಸಿರಿ ಎಂದು ಕೇಳಿದ್ದಕ್ಕೆ, ಅದು ಸಾಧ್ಯವಿಲ್ಲ ಎಂದು ಹೇಳಿದರು. ಇದು ಸರಿಯೇ.

ಉತ್ತರ: ಯಾವುದೇ ಠೇವಣಿ ಅವಧಿ ಮುಗಿದ ನಂತರ, ಹಿಂದಿನ ತಾರೀಕಿನಿಂದಲೇ ಮುಂದುವರಿಸುವ ಸೌಲತ್ತು, ಬ್ಯಾಂಕುಗಳಲ್ಲಿ ಇದೆ. ಎಫ್‌ಡಿಆರ್‌ ಬಡ್ಡಿ ಸಮೇತ ಮುಂದುವರಿಸುವುದಾದಲ್ಲಿ, 23–12–2016ಕ್ಕೆ ಅವಧಿ ಮುಗಿದರೂ, ನೀವು ಕೇಳಿದಂತೆ 26–12–2016 ರಂದು ಕೂಡಾ ಹಿಂದಿನ ತಾರೀಕಿನಿಂದಲೇ ಮುಂದುವರಿಸಲು ಸಾಧ್ಯವಿತ್ತು. ಬಡ್ಡಿ ಬೇರ್ಪಡಿಸಿದಾಗ, ಈ ಸೌಲತ್ತು ಇರುವುದಿಲ್ಲ. ಠೇವಣಿಯಲ್ಲಿ ಗ್ರಾಹಕ ಹಾಗೂ ಬ್ಯಾಂಕಿನ ನಡುವೆ ಒಪ್ಪಂದ (Contract) ವಿರುತ್ತದೆ. ಅವಧಿ ಮುಗಿಯುತ್ತಲೇ ಒಪ್ಪಂದ ಕೂಡಾ ಅಂತ್ಯಗೊಳ್ಳುತ್ತದೆ.

ಭೂಮಿಕಾ. ಎನ್‌.ಯು., ತೀರ್ಥಹಳ್ಳಿ
*ವಯಸ್ಸು 18. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ. ವಿದ್ಯಾಭ್ಯಾಸ ಮುಂದುವರಿಸಲು ನನಗೆ ಹಣದ ಅವಶ್ಯವಿದೆ. ನಾನು ವಿದ್ಯಾಭ್ಯಾಸ ಮಾಡುತ್ತಲೇ ಹಣಗಳಿಸುವುದು ಹೇಗೆ. ಕಾಲೇಜು ಸಮಯ ಬೆಳಿಗ್ಗೆ 10 ರಿಂದ ಸಂಜೆ 3ರವರೆಗೆ

ಉತ್ತರ: ನಿಮಗೆ 18 ವರ್ಷ ಮುಗಿದಿದ್ದರೆ, ಎಲ್‌.ಐ.ಸಿ.ಯವರ ವಿಮಾ ಏಜೆನ್ಸಿ ಪಡೆದು, ಬಂಧು ಮಿತ್ರರಿಂದ, ವಿಮೆ ಪಾಲಿಸಿ ಮಾಡಲು ಪ್ರಾರಂಭಿಸಿರಿ. ಈ ಉದ್ಯೋಗ ಕೈಕೊಳ್ಳಲು, Insurance Institute of India  ಮುಂಬೈಯವರು ನಡೆಸುವ ಆನ್‌ಲೈನ್‌ ಪರೀಕ್ಷೆಗೆ  ಕುಳಿತು ಪಾಸಾಗಬೇಕು. ಈ ಪರೀಕ್ಷೆ ಎಲ್‌ಐಸಿಯವರು ಆಗಾಗ ಶಿವಮೊಗ್ಗದಲ್ಲಿ ಮಾಡುತ್ತಾರೆ. ಈ ಪರೀಕ್ಷೆ ಬಹು ಸುಲಭ. ಹೆಚ್ಚಿನ ಮಾಹಿತಿಗೆ ನಿಮ್ಮ ಊರಿನ ಎಲ್‌ಐಸಿ ಆಫೀಸಿನಲ್ಲಿ ವಿಚಾರಿಸಿರಿ. ಇದೇ ವೇಳೆ ಓದುವಿಕೆಗೆ  ಗಮನ ಕಡಿಮೆ ಮಾಡಬೇಡಿ. ಸಾಧ್ಯವಾದರೆ, ಶಿವಮೊಗ್ಗದಲ್ಲಿ ಮುಂದೆ ಚಾರ್ಟ್‌ರ್‌್ಡ ಅಕೌಂಟೆಂಟ್‌ ಮಾಡಲು ಪ್ರಯತ್ನಿಸಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಅರ್‌.ಜಿ. ಬ್ಯಾಕೋಡ, ವಿಜಯಪುರ
*ನನ್ನ ವಯಸ್ಸು 56. ವಾರ್ಷಿಕ ಆದಾಯ ತೆರಿಗೆ ₹ 90,000 ತುಂಬುತ್ತೇನೆ.  80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸುತ್ತಿದ್ದೇನೆ. ನಾನು ನಿಮ್ಮ ಸಲಹೆಯಂತೆ 80 ಸಿಸಿಡಿ(1ಬಿ) ಆಧಾರದ ಮೇಲೆ ₹ 50,000   ಉಳಿಸಿದರೆ ನಿವೃತ್ತಿಯಾಗುವಾಗ ಎಷ್ಟು, ಮಾಸಿಕ ಅಥವಾ ವಾರ್ಷಿಕ ಹಣ ಬರಬಹುದು.

ಉತ್ತರ: ನ್ಯಾಷನಲ್‌ ಪೆನ್ಶನ್‌ ಸ್ಕೀಮ್‌ (ಎನ್‌ಪಿಎಸ್‌)ನಲ್ಲಿ ತೊಡಗಿಸಿದ ಹಣ, ಷೇರು ಮಾರುಕಟ್ಟೆ, ಖಾಸಗಿ ಕಂಪೆನಿ ಠೇವಣಿ ಹಾಗೂ ಸರ್ಕಾರಿ ಪತ್ರಗಳಲ್ಲಿ ತೊಡಗಿಸುವುದರಿಂದ, ಅಂತಿಮವಾಗಿ ಎಷ್ಟು ಹಣ ಕೂಡಿಬರುತ್ತದೆ ಎನ್ನುವುದನ್ನು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ಹೂಡಿದ ಬಂಡವಾಳಕ್ಕೆ ಶೇ 8–9ರಷ್ಟು ವರಮಾನ ಬರಬಹುದು. ಈ ಯೋಜನೆಯಲ್ಲಿ, ತೆರಿಗೆ ವಿನಾಯತಿಗೆ ಹೆಚ್ಚಿನ ಪ್ರಧಾನ್ಯವಿರುತ್ತದೆ. ನಿಮ್ಮಂತಹ ಹೆಚ್ಚಿನ ಆದಾಯ ತೆರಿಗೆ ಸಲ್ಲಿಸುವ (ಶೇ 30 ತೆರಿಗೆ ಬರುವ ವ್ಯಕ್ತಿಗಳಿಗೆ) ತುಂಬಾ ಅನುಕೂಲ ಆದರೆ ನಿಮ್ಮ ವಯಸ್ಸು 56 ಇದ್ದು ಇನ್ನು ಬರೇ 4 ವರ್ಷ ಸೇವಾವಧಿ ಇರುವುದರಿಂದ ನಿಮಗೆ ಇದು ಅಷ್ಟೊಂದು ಲಾಭದಾಯಕವಲ್ಲ. ಕನಿಷ್ಠ 10 ವರ್ಷ ಸೇವಾವಧಿ ಇರುವ ವ್ಯಕ್ತಿಗಳಿಗೆ ಈ ಯೋಜನೆಯು ಹೇಳಿ ಮಾಡಿಸಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT