ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಟಲ್‌ ಆ್ಯಪ್‌ ಸ್ಟಾರ್ಟ್‌ಅಪ್‌

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಮೊಬೈಲ್‌ನಲ್ಲಿನ ಕಿರು ತಂತ್ರಾಂಶಗಳು ಇತ್ತೀಚೆಗೆ ಬಳಕೆದಾರರ ದಿನಚರಿಯನ್ನೇ ಬದಲಿಸಿವೆ. ಜನರ ಆಲೋಚನಾ ವಿಧಾನವೂ ಬದಲಾಗಿದೆ. ಮಾಹಿತಿ, ಕೊಡುಗೆಗಳ ಮಹಾಪೂರವೇ ಈ ಆ್ಯಪ್‌ಗಳಿಂದ ಹರಿದು ಬರುತ್ತಿದೆ.

ಈ ಹಿಂದೆ ಸರ್ವ ಸರಕು ಮಾರಾಟ ಮಳಿಗೆಗಳು, ಸಿದ್ಧ ಉಡುಪು ಮಾರಾಟಗಾರರು  ಹಬ್ಬ ಹರಿದಿನ ಮತ್ತು ರಜಾ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಶೇಷ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸುತ್ತಿದ್ದರು.

ದಿನಪತ್ರಿಕೆಗಳ ಜಾಹೀರಾತುಗಳಲ್ಲಿ ಪ್ರಕಟಗೊಳ್ಳುತ್ತಿದ್ದ, ನಂತರ ಎಫ್‌ಎಂ ರೇಡಿಯೊಗಳಲ್ಲಿ ಕೇಳಿ ಬರುತ್ತಿದ್ದ ಕೊಡುಗೆಗಳು ಗ್ರಾಹಕರ ಗಮನ ಸೆಳೆಯುತ್ತಿದ್ದವು. ಈಗ ಮೊಬೈಲ್‌ ಕಾಲ.

ದಿನದ ಯಾವುದೇ ಸಂದರ್ಭದಲ್ಲಾದರೂ ರೆಸ್ಟೊರಂಟ್‌, ಪಬ್‌, ಸ್ಪಾ, ಸಲೂನ್‌ಗಳೂ ವಿಶೇಷ ರಿಯಾಯ್ತಿ ಮತ್ತು ದರ ಕಡಿತದ ಮೂಲಕ  ಬಳಕೆದಾರರನ್ನು ಸೆಳೆಯಲಾಗುತ್ತಿದೆ.

ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವ ಕಿರು ತಂತ್ರಾಂಶ ಲಿಟಲ್‌ ಆ್ಯಪ್‌ (LittleApp) ವರ್ತಕರು  ಪ್ರಕಟಿಸುವ  ಕೊಡುಗೆಗಳು  ಮತ್ತು ಅವುಗಳನ್ನು ಬಳಸಿಕೊಳ್ಳುವುದಕ್ಕೆ ವರ್ತಕರು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ.

ರಿಯಾಯ್ತಿ  ಮತ್ತು ವಿಶೇಷ ಕೊಡುಗೆಗಳು  ಗ್ರಾಹಕರ ಪಾಲಿಗೆ ಯಾವತ್ತೂ ತುಂಬ ಆಕರ್ಷಕವಾಗಿರುತ್ತವೆ. ಅದನ್ನೇ ಬಂಡವಾಳ ಮಾಡಿಕೊಳ್ಳಲು ಈ ಸ್ಟಾರ್ಟ್‌ಅಪ್‌ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

2015ರ ಜುಲೈನಲ್ಲಿ ಆರಂಭಗೊಂಡ ಈ ಸ್ಟಾರ್ಟ್‌ಅಪ್‌ 18 ತಿಂಗಳಲ್ಲಿ ತನ್ನ ವಹಿವಾಟನ್ನು ದೇಶದ 14 ನಗರಗಳಿಗೆ ವಿಸ್ತರಿಸುವಲ್ಲಿ ಸಫಲವಾಗಿದೆ. ಇದು ಈ ಸ್ಟಾರ್ಟ್‌ಅಪ್‌ನ ಯಶಸ್ಸಿಗೆ ನಿದರ್ಶನವಾಗಿದೆ.

ಪೇಟಿಎಂ, ಎಸ್‌ಎಐಎಫ್‌ ಪಾರ್ಟ್ನರ್ಸ್, ಟೈಗರ್‌ ಗ್ಲೋಬಲ್‌ ಮತ್ತು   ಜಿಐಸಿ ಸಿಂಗಪುರ ಸಂಸ್ಥೆಗಳು ₹ 325 ಕೋಟಿಗಳಷ್ಟು ಬಂಡವಾಳ ತೊಡಗಿಸಿರುವುದು ಈ ನವೋದ್ಯಮದ ಬಗ್ಗೆ ಹೂಡಿಕೆದಾರರು ಹೊಂದಿರುವ ಭರವಸೆಗೆ ಸಾಕ್ಷಿಯಾಗಿದೆ.

ದೇಶದಾದ್ಯಂತ ವಹಿವಾಟು ವಿಸ್ತರಣೆ,    ಪ್ರತಿಭಾನ್ವಿತರ ನೇಮಕ ಮತ್ತು ತಂತ್ರಜ್ಞಾನ ಸುಧಾರಣೆಗೆ ಈ ಬಂಡವಾಳ ವೆಚ್ಚ ಮಾಡಲಾಗುತ್ತಿದೆ. 18 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಈ ಆ್ಯಪ್‌, ಈಗ ದೇಶದ 14 ನಗರಗಳಲ್ಲಿ ತನ್ನ ವಹಿವಾಟು ವಿಸ್ತರಿಸಿದೆ.

ಕೆಲಸ ಮಾಡುವ ಪರಿ
ಉದಾಹರಣೆಗೆ ಹೇಳುವುದಾದರೆ ಗ್ರಾಹಕನೊಬ್ಬ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಇರುವಾಗ ಈ ಆ್ಯಪ್‌ ತೆರೆದರೆ, ಸುತ್ತಮುತ್ತಲಿನ ಚರ್ಚ್‌ಸ್ಟ್ರೀಟ್‌,  ಬ್ರಿಗೇಡ್‌ ರಸ್ತೆಗಳಲ್ಲಿನ ರೆಸ್ಟೊರಂಟ್ಸ್‌, ಕೆಫೆ ಕಾಫಿ ಡೇ, ಪಿಜ್ಜಾ ಹಟ್ಸ್‌, ಪಬ್‌ಗಳಲ್ಲಿ ಆ ಸಮಯದಲ್ಲಿ ಲಭ್ಯ ಇರುವ ಬೆಲೆ ಕಡಿತ,  ಗ್ರಾಹಕ ಇರುವ ಸ್ಥಳದಿಂದ ಮಳಿಗೆ ಇರುವ ಅಂತರ  ವಿವರಗಳೆಲ್ಲ   ಬೆರಳ ತುದಿಯಲ್ಲಿ ದೊರೆಯುತ್ತವೆ.

ಒಂದೊಂದು ಮಳಿಗೆಯು ತನ್ನಲ್ಲಿ ಲಭ್ಯ ಇರುವ  ವಿವಿಧ ಉತ್ಪನ್ನ, ಸೇವೆಗಳ  ಪ್ರತ್ಯೇಕ ಕೊಡುಗೆಗಳ ಮಾಹಿತಿಯೂ ಅಲ್ಲಿ ಇರುತ್ತದೆ. ಗ್ರಾಹಕರು ತಮಗಿಷ್ಟದ ತಾಣಕ್ಕೆ ತೆರಳಿ ವರ್ತಕರು ಕೊಡಮಾಡಿರುವ  ಕೊಡುಗೆಗಳನ್ನು ಬಳಸಿಕೊಳ್ಳಬಹುದು.

ವರ್ತಕರ ಸೇವಾ ಲೋಪದ ಬಗ್ಗೆ ಗ್ರಾಹಕರು ದೂರು ನೀಡಿದ್ದರೆ, ಆ ಬಗ್ಗೆ ಲಿಟಲ್‌ ಆ್ಯಪ್‌ ತಂಡ ತಕ್ಷಣ ಗಮನ ಹರಿಸಲಿದೆ. ಪಿವಿಆರ್‌ ಸಿನಿಮಾ, ಹಾರ್ಡ್‌ ರಾಕ್‌ ಕೆಫೆ, ರಾಜಧಾನಿ, ಸಬ್‌ವೇ ಗಳೂ ‘ಲಿಟಲ್‌ ಆ್ಯಪ್‌’ ಜತೆಗೆ ಒಪ್ಪಂದ ಮಾಡಿಕೊಂಡಿವೆ.

ಸರಕು ಮತ್ತು ಸೇವೆಗಳ ಕೆಲ ಮಾರಾಟ ಸಂಸ್ಥೆಗಳು ಶೇ 30 ರಿಂದ ಶೇ 90 ರಷ್ಟು ಬೆಲೆ ಕಡಿತ ಮಾಡಿ ಗ್ರಾಹಕರನ್ನು ಕೈಬೀಸಿ ಕರೆಯುತ್ತವೆ. ಗ್ರಾಹಕರು ಆ್ಯಪ್‌ನಲ್ಲಿ ಇರುವ ಪೇಟಿಎಂ ಮೂಲಕವೇ ಹಣ ಪಾವತಿಸಬಹುದು. ಪೇಟಿಎಂ ವಾಲೆಟ್‌ ಇಲ್ಲದಿದ್ದರೆ, ಇತರ ಪಾವತಿ ಮಾರ್ಗಗಳಾದ ನೆಟ್‌ಬ್ಯಾಕಿಂಗ್‌,  ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್ ಮೂಲಕವೂ ಹಣ ಪಾವತಿಸಬಹುದಾಗಿದೆ.

ಲಿಟಲ್‌ ಇಂಟರ್‌ನೆಟ್‌ ಪ್ರೈವೇಟ್‌ ಲಿಮಿಟೆಡ್‌, ರೆಸ್ಟೊರಂಟ್ಸ್‌, ಸ್ಪಾ, ಸಲೂನ್‌, ಮನರಂಜನಾ ಪಾರ್ಕ್‌ಗಳ ಮಾಲೀಕರು ಮತ್ತು ಬಳಕೆದಾರರ ಮಧ್ಯೆ ಸಂಪರ್ಕ ಬೆಸೆಯುತ್ತಿದೆ.
ತಮ್ಮ ಅಚ್ಚುಮೆಚ್ಚಿನ ತಿಂಡಿ ತಿನಿಸುಗಳ ಮಳಿಗೆ, ರೆಸ್ಟೊರಂಟ್ಸ್‌ಗಳಲ್ಲಿ ಲಭ್ಯ ಇರುವ ವಿಶೇಷ ಕೊಡುಗೆ, ರಿಯಾಯ್ತಿಗಳ ಮಾಹಿತಿ ಪಡೆಯಲು ಗ್ರಾಹಕರಿಗೆ ಮತ್ತು  ಮಾರಾಟ   ಹೆಚ್ಚಿಸಿಕೊಳ್ಳಲು ವರ್ತಕರಿಗೆ ನೆರವಾಗುತ್ತಿದೆ.

ಸತೀಶ್‌ ಮಣಿ ಮತ್ತು ಮನೀಷ್‌ ಚೋಪ್ರಾ ಅವರು ಜತೆಯಾಗಿ ಈ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ.  ದೇಶದ ಜನಪ್ರಿಯ ಫ್ಯಾಷನ್‌ ಬ್ರ್ಯಾಂಡ್‌ ಝೋವಿ (Zovi) ಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದ ಈ ಜೋಡಿ ಆನಂತರ ಈ ಸ್ಟಾರ್ಟ್‌ಅಪ್‌ ಆರಂಭಿಸಿದ್ದರು.

ಆಹಾರ, ಪಾನೀಯ, ಮನರಂಜನಾ ಕ್ಷೇತ್ರದ ಸಂಸ್ಥೆಗಳು  ತಮ್ಮ ಉತ್ಪನ್ನ ಮತ್ತು ಸೇವೆಗಳ ಮಾರಾಟ ವಿಷಯದಲ್ಲಿ ಗ್ರಾಹಕರರಿಗೆ ವಿಶೇಷ ಕೊಡುಗೆಗಳನ್ನು ತಲುಪಿಸಲು ಮತ್ತು ಈ ಮೂಲಕ ವರ್ತಕರ ವಹಿವಾಟನ್ನು ಹೆಚ್ಚಿಸಿಕೊಳ್ಳಲು ಈ ನವೋದ್ಯಮ ನೆರವಿನ ಹಸ್ತ ಚಾಚಿದೆ.

ರಿಯಾಯ್ತಿಗಳ ಪ್ರಕಟಣೆ ಮತ್ತು ಬಳಕೆಗೆ ಸಂಬಂಧಿಸಿದ ಸಂಘಟಿತ   ವ್ಯವಸ್ಥೆಯ ಕೊರತೆಯನ್ನು ಈ ಆ್ಯಪ್‌ ದೂರ ಮಾಡಿದೆ. ಗ್ರಾಹಕರು ದಿನದ ನಿರ್ದಿಷ್ಟ ಸಮಯದಲ್ಲಿ ಮತ್ತು ವಾರದ ದಿನಗಳಲ್ಲಿ  ತಮಗೆ ಹೆಚ್ಚು ಉಪಯುಕ್ತವಾಗುವ ಕೊಡುಗೆಗಳ ವಿವರಗಳನ್ನು ಈ ಆ್ಯಪ್‌ನಲ್ಲಿ  ಪಡೆಯಬಹುದು.

ಕೊಡುಗೆಗಳಲ್ಲಿನ ಪಾಲು:

65% ರೆಸ್ಟೊರೆಂಟ್‌  ಮತ್ತು  ಬಾರ್‌

18ರಿಂದ 20% ಸ್ಪಾ ಮತ್ತು ಸಲೂನ್‌

15% ಮನರಂಜನಾ ಪಾರ್ಕ್‌ ಮತ್ತು ಇತರ ಸೇವೆಗಳು


ಸೇರ್ಪಡೆ ಉಚಿತ
‘ವರ್ತಕರು ಈ ಆ್ಯಪ್‌ಗೆ   ಸೇರ್ಪಡೆಗೊಳ್ಳಲು ಯಾವುದೇ ಬಗೆಯ ಶುಲ್ಕ ಪಾವತಿಸಬೇಕಾಗಿಲ್ಲ. ವಾರ್ಷಿಕ ಬಾಡಿಗೆಯೂ ಇರುವುದಿಲ್ಲ. ಇಲ್ಲಿ ಗ್ರಾಹಕರಿಗೂ ಯಾವುದೇ ಹೊರೆ ಇರುವುದಿಲ್ಲ.  ಗ್ರಾಹಕರಿಗೆ  ಕೊಡುಗೆಗಳನ್ನು ತಲುಪಿಸಿದ್ದಕ್ಕೆ ಪ್ರತಿಯಾಗಿ  ಲಿಟಲ್  ಆ್ಯಪ್‌, ವರ್ತಕರಿಂದ ಸೇವಾ ಶುಲ್ಕ ಪಡೆಯುತ್ತದೆ.

ವರ್ತಕರಿಗೆ ವಸೂಲಿ ಮಾಡುವ ಕಮಿಷನ್‌ ದರ ಶೇ 6 ರಿಂದ 9ರ ಮಧ್ಯೆ ಕಮಿಷನ್‌ ಇರಲಿದೆ. 18 ತಿಂಗಳಲ್ಲಿ ಸಂಸ್ಥೆಯ ವಹಿವಾಟು ತಿಂಗಳಿನಿಂದ ತಿಂಗಳಿಗೆ ಶೇ 25ರಷ್ಟು ಏರಿಕೆ ಕಂಡಿದೆ’ ಎಂದು ಸಂಸ್ಥೆಯ ಉಪಾಧ್ಯಕ್ಷ  ಸಮೀರ್‌ ಶರ್ಮಾ ಹೇಳುತ್ತಾರೆ.

‘ಸರಕು ಮತ್ತು ಸೇವೆಗಳ ಕೆಲ ತಾಣಗಳಲ್ಲಿ ದಿನದ ಕೆಲ ಸಮಯದ ಗ್ರಾಹಕರ ಸಂಖ್ಯೆ ಕಡಿಮೆ ಇರುತ್ತದೆ.  ಅನೇಕ ರೆಸ್ಟೊರಂಟ್‌, ಪಬ್‌ಗಳು  ಎಲ್ಲ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿ ಆಗಿರುವುದಿಲ್ಲ. ಕೆಲವೊಮ್ಮೆ ಶೇ 30ಕ್ಕಿಂತ ಹೆಚ್ಚು ಗ್ರಾಹಕರೂ ಇರುವುದಿಲ್ಲ.

ಈ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ರೆಸ್ಟೊರಂಟ್‌ ಮಾಲೀಕರು ಗರಿಷ್ಠ ಪ್ರಮಾಣದಲ್ಲಿ ಇರುವ ರಿಯಾಯ್ತಿಗಳ ಆಕರ್ಷಕ ಕೊಡುಗೆ ಪ್ರಕಟಿಸಿದರೆ ಅದರ ಪ್ರಯೋಜನ ಪಡೆದುಕೊಳ್ಳಲು ಗ್ರಾಹಕರು ಸಹಜವಾಗಿಯೇ ರೆಸ್ಟೊರಂಟ್‌ಗಳತ್ತ ಹೆಜ್ಜೆ ಹಾಕುತ್ತಾರೆ’ ಎಂದು ಸಮೀರ್‌ ಶರ್ಮಾ ಹೇಳುತ್ತಾರೆ.

ಕೊಡುಗೆಗಳು ವಾರದ ಎಲ್ಲ ದಿನಗಳಲ್ಲೂ ಬೇರೆ, ಬೇರೆ ಸಮಯಗಳಲ್ಲಿ ಅನ್ವಯಗೊಳ್ಳುತ್ತವೆ. ವಾರಾಂತ್ಯದಲ್ಲಿ ಉತ್ತಮ ವಹಿವಾಟು ನಡೆಯುವಾಗ  ಬಹುತೇಕ ಕೊಡುಗೆಗಳು ಇರುವುದಿಲ್ಲ. ಆದರೂ ಕೆಲ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ನಿರಂತರವಾಗಿ ಕೊಡುಗೆಗಳನ್ನು ನೀಡುತ್ತಲೇ ಇರುತ್ತವೆ. ಮೈಸೂರು,  ಹೈದರಾಬಾದ್‌ ನಗರಗಳಿಗೆ ಶೀಘ್ರದಲ್ಲಿಯೇ ಈ ಸೇವೆ ವಿಸ್ತರಿಸಲು ಸ್ಟಾರ್ಟ್‌ಅಪ್‌ ಉದ್ದೇಶಿಸಿದೆ.

‘ಈ ನವೋದ್ಯಮಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಹಿವಾಟು ವಿಸ್ತರಿಸಲು ಮತ್ತು ಸ್ಥಿರಗೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಈ ವಹಿವಾಟಿನ ಮಾರುಕಟ್ಟೆಯಲ್ಲಿ ಸಂಸ್ಥೆಯು ಈ ವರ್ಷಾಂತ್ಯದ ಹೊತ್ತಿಗೆ ಶೀಘ್ರದಲ್ಲಿಯೇ ಮುಂಚೂಣಿಗೆ ಬರಲಿದೆ’ ಎಂದು ಸಮೀರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT