ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಆರೋಪದ ಕಳಂಕ ಎಎಪಿಗೆ ಎಚ್ಚರಿಕೆ ಗಂಟೆ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಬೆಳೆದು ಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ವಿರುದ್ಧವೇ ಲಂಚದ ಆರೋಪ ಬಂದಿರುವುದು ವಿಪರ್ಯಾಸವೇ ಸರಿ. ಸಚಿವ ಸ್ಥಾನದಿಂದ ವಜಾಗೊಂಡಿರುವ ಎಎಪಿ ಶಾಸಕ ಕಪಿಲ್‌ ಮಿಶ್ರಾ ಅವರೇ ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದ್ದಾರೆ. ಇದಕ್ಕೆ ಬಲವಾದ ಸಾಕ್ಷ್ಯಾಧಾರಗಳನ್ನೇನೂ ಅವರು ಕೊಟ್ಟಿಲ್ಲ. ಆದರೂ, ಇದರಿಂದ ಎಎಪಿಗೆ ದೊಡ್ಡ ಕಳಂಕ ತಟ್ಟಿರುವುದು ಸುಳ್ಳಲ್ಲ.  ಕೇಜ್ರಿವಾಲ್‌ ವಿರುದ್ಧ ಅಧಿಕಾರ ಲಾಲಸೆ, ಸರ್ವಾಧಿಕಾರಿ ಧೋರಣೆ ಹಾಗೂ ದುರಹಂಕಾರದ ಆರೋಪಗಳನ್ನು ಒಪ್ಪಬಹುದು.  ಲಂಚದ ಆರೋಪಕ್ಕೆ ಬಲವಾದ ಸಾಕ್ಷ್ಯ ಬೇಕು ಎಂದು ಯೋಗೇಂದ್ರ ಯಾದವ್‌ ಹೇಳಿದ್ದಾರೆ. ಮುಖ್ಯಮಂತ್ರಿ ತಪ್ಪು ಮಾಡಿದ್ದಾರೊ, ಇಲ್ಲವೊ ಎಂಬುದು ಆಮೇಲಿನ ಮಾತು. ಆದರೆ,    ಭ್ರಷ್ಟಾಚಾರ ವಿರೋಧಿ ಹೋರಾಟದ ಕೂಸು ‘ಆಮ್‌ ಆದ್ಮಿ ಪಾರ್ಟಿ’ ಆರೋಪಗಳಿಂದಲೇ ಗಾವುದ ದೂರ  ಇರಬೇಕಿತ್ತು. ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು.  ಪಾರದರ್ಶಕ ಆಡಳಿತ ನೀಡುವ ಮೂಲಕ ರಾಜಕೀಯ ವೈರಿಗಳನ್ನೂ ಮೆಚ್ಚಿಸಬೇಕಿತ್ತು. ಅಂತಹದೊಂದು ಅವಕಾಶ ಕಳೆದುಹೋಯಿತು. ಕಾಂಗ್ರೆಸ್‌ ಹಾಗೂ ಬಿಜೆಪಿಯ ಪರಂಪರಾಗತ ರಾಜಕಾರಣಕ್ಕೆ  ಪರ್ಯಾಯ ರಾಜಕೀಯ ಸಂಸ್ಕೃತಿಯನ್ನು  ಎಎಪಿ ಹುಟ್ಟುಹಾಕಬಹುದು ಎಂದು ಜನ  ಭಾವಿಸಿದ್ದರು. ಕೇಜ್ರಿವಾಲ್‌ ಹಾಗೂ ಅವರ ತಂಡದ ಸದಸ್ಯರನ್ನು ಇಡೀ ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈ ಕಾರಣಕ್ಕೆ ದೆಹಲಿ ಮತದಾರರು ಎಲ್ಲರ ನಿರೀಕ್ಷೆಗಳನ್ನು ಮೀರಿ ಬೆಂಬಲ ಕೊಟ್ಟಿದ್ದರು. ಬಹು ಬೇಗನೆ ಕೇಜ್ರಿವಾಲ್‌ ಜನರ ವಿಶ್ವಾಸ ಕಳೆದುಕೊಂಡರು. ದೆಹಲಿ ಮಹಾನಗರ ಪಾಲಿಕೆ, ಪಂಜಾಬ್‌ ಹಾಗೂ ಗೋವಾ ವಿಧಾನಸಭೆ ಚುನಾವಣೆಗಳೇ ಇದಕ್ಕೆ ಸಾಕ್ಷಿ.

ಎಎಪಿ ಆರಂಭದಿಂದಲೂ ಎಡವುತ್ತಿದೆ. ರಚನಾತ್ಮಕವಾಗಿ ಕೆಲಸ ಮಾಡಬೇಕಾದ ಎಎಪಿ, ಸರ್ವಾಧಿಕಾರ ಹಾಗೂ ಸೇಡಿನ ರಾಜಕಾರಣಕ್ಕೆ ಮುಂದಾಗಿದೆ.  ತಮ್ಮ ರಾಜಕೀಯ ಎದುರಾಳಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ  ಆರೋಪಗಳ ಸುರಿಮಳೆಗರೆಯುತ್ತಿದೆ. ಪಕ್ಷದ ಸಾಕ್ಷಿ ಪ್ರಜ್ಞೆಯಂತಿದ್ದ  ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರನ್ನು ಹೊರ ದಬ್ಬಿದಾಗಲೇ ಬಹುತೇಕರು ಕೇಜ್ರಿವಾಲ್‌ ನಡೆಯನ್ನು ಅನುಮಾನದಿಂದ ನೋಡಿದ್ದರು. ಓಂಬಡ್ಸ್‌ಮನ್‌ ರಾಮದಾಸ್‌ ಅವರನ್ನು ಕಿತ್ತೊಗೆದ ಕ್ರಮವೂ ಸಿಕ್ಕಾಪಟ್ಟೆ ಟೀಕೆಗೊಳಗಾಯಿತು. ಇವೆಲ್ಲವೂ ಅನಪೇಕ್ಷಣಿಯ ಕ್ರಮವಾಗಿತ್ತು. ಕೇಜ್ರಿವಾಲ್‌ ಅವರ ಸರ್ವಾಧಿಕಾರಿ ವರ್ತನೆ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ ಎಂಬುದನ್ನು ರುಜುವಾತುಪಡಿಸಿತು. ಎಎಪಿ ಹುಟ್ಟು ಹಾಗೂ ಬೆಳವಣಿಗೆಯಿಂದ ದಿಗಿಲುಗೊಂಡಿದ್ದ ರಾಷ್ಟ್ರೀಯ ಪಕ್ಷಗಳಿಗೀಗ ನಿರಾಳವಾಗಿರಬಹುದು. ಎಎಪಿ ನಿರ್ನಾಮವಾಗುವುದು ಅವುಗಳಿಗೂ ಬೇಕಾಗಿದೆ. ಅಂಥ ಗಳಿಗೆಗಾಗಿ ಕಾಯುತ್ತಿವೆ. ರಾಜಕೀಯ ಅನುಭವ ಇಲ್ಲದ ಕೇಜ್ರಿವಾಲ್‌ ಜಾರಿದ್ದಾರೆ. ರಾಜಕೀಯ ವಿರೋಧಿಗಳ ವಿರುದ್ಧ  ಆರೋಪಗಳನ್ನೇ ಮಾಡಿಕೊಂಡು ಬಂದ ಕೇಜ್ರಿವಾಲ್ ಈಗ ತಮ್ಮ ವಿರುದ್ಧದ ಟೀಕಾಕಾರರನ್ನು ಆಕ್ಷೇಪಿಸಲಾಗದು. ರಾಜಕೀಯ ಹಾನಿಯಂತೂ ಆಗಿಹೋಗಿದೆ. ಅವರ ಸುತ್ತ ನಿರ್ಮಿತವಾಗಿದ್ದ ಪ್ರಭಾವಳಿ ಕಳಚಿದೆ. ಎಎಪಿ ಮುಖಂಡರು ಒಟ್ಟಿಗೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.  ಕೇಜ್ರಿವಾಲ್‌ ಅವರ ಒಂದು ಕಾಲದ ಆಪ್ತ ಪ್ರಶಾಂತ್‌ ಭೂಷಣ್ ಅವರೂ ಇದೇ ಎಚ್ಚರಿಕೆ  ನೀಡಿದ್ದಾರೆ. ಎಎಪಿಗೆ  ಇದೊಂದು ಎಚ್ಚರಿಕೆ ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT